ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಯಶಸ್ವಿ ದಿಲ್ಲಿ ಯಾತ್ರೆ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಮಹತ್ವ ಪಡೆದಿರುವುದೇಕೆ? ಅವರ ವಿರೋಧಿಗಳಿಗೆ ರವಾನೆಯಾಗಿರುವ ಸಂದೇಶವಾದರೂ ಏನು?
ಅಶೋಕ ಹೆಗಡೆ
ತಮ್ಮ ದಿಲ್ಲಿ ಯಾತ್ರೆ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೊಂಡಿರುವುದು ಅರ್ಥಪೂರ್ಣವಾಗಿದೆ. ಏಕೆಂದರೆ ಅವರ ಉದ್ದೇಶಗಳೆಲ್ಲವೂ ಸಫಲಗೊಂಡಿವೆ. ಮುಖ್ಯವಾಗಿ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ, ಮುಂದಿನ ಎರಡೂವರೆ ವರ್ಷ ತಾವೇ ಮುಖ್ಯಮಂತ್ರಿ ಎಂಬ ಸಂದೇಶವನ್ನು ತಮ್ಮ ವಿರೋಧಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಯಡಿಯೂರಪ್ಪ ಭೇಟಿ ಹಿಂದಿನ ನಿಜವಾದ ಉದ್ದೇಶ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನಗೆ ವರಿಷ್ಠರ ಅನುಮತಿ ಪಡೆಯುವುದಾಗಿತ್ತು. ಅದರಲ್ಲಿಯೂ ತಾವು ಅಧಿಕಾರಕ್ಕೆ ಬರಲು ಕಾರಣರಾದ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಅವರ ಮುಖ್ಯ ಉದ್ದೇಶವಾಗಿತ್ತು. ತಕ್ಷಣದಲ್ಲೋ ಅಥವಾ ಬಿಹಾರ ವಿಧಾನಸಭೆ ಚುನಾವಣೆ ಮುಗಿದ ಬಳಿಕವೋ, ಯಾವಾಗ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾದರೂ ಈ ಇಬ್ಬರಿಗೆ ಸ್ಥಾನವನ್ನು ಖಾತ್ರಿ ಪಡಿಸಿಕೊಂಡು ಬಂದಿದ್ದಾರೆ. ಅಲ್ಲಿಗೆ ಸರಕಾರ ಬರಲು ಕಾರಣರಾದವರಿಗೆ ಕೊಟ್ಟ ಮಾತನ್ನು ಯಡಿಯೂರಪ್ಪ ಉಳಿಸಿಕೊಂಡಂತಾಗಿದೆ.
ಬೇಡವೆಂದರೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಎಚ್.ವಿಶ್ವನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುವ ಮೂಲಕ ವಿಶ್ವನಾಥ್‌ಗೂ ರಾಜಕೀಯ ಪುನರ್‌ಜನ್ಮ ನೀಡಿದ್ದಾರೆ. ವಿಶ್ವನಾಥ್ ಸಂಪುಟ ಸೇರುವ ಸಾಧ್ಯತೆ ಕಡಿಮೆ, ಅದು ಅವರಿಗೂ ಗೊತ್ತಿದೆ.
ದಿಲ್ಲಿ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಯಡಿಯೂರಪ್ಪ ಅವರಿಗೆ ಡಬ್ಬಲ್ ಧಮಾಕಾ ನೀಡಿದೆ. ವರಿಷ್ಠರು ಯಡಿಯೂರಪ್ಪ ಪರವಾಗಿಲ್ಲ ಎಂಬ ಅನುಮಾನಗಳಿಗೆ ಈ ಭೇಟಿ ತೆರೆ ಎಳೆದಿದೆ. ಅದಕ್ಕಿಂತ ಮುಖ್ಯವಾಗಿ ಯಡಿಯೂರಪ್ಪನವರನ್ನು ಅಲುಗಾಡಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಸ್ಥಿತಿ ಏನಾಗುತ್ತದೆ ಎನ್ನುವುದು ಈ ಇಬ್ಬರಿಗೂ, ಜತೆಗೆ ಇನ್ನಿಬ್ಬರಿಗೆ (ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ) ಅವರಿಗೂ ಮನವರಿಕೆಯಾಗಿದೆ.
ಯಡಿಯೂರಪ್ಪನವರಿಗೆ ವಯಸ್ಸಾಯಿತು, ಪರ್ಯಾಯ ನಾಯಕತ್ವ ಬೇಕು ಎನ್ನುವುದು ನಿಜ. ಆದರೆ ಅದು ಈ ಕ್ಷಣವೇ ಆಗಲೇಬೇಕಾದ ಕೆಲಸವೇನೂ ಅಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಕಾಲಾವಕಾಶ ಇದೆ. ಕೊನೆಯ ಒಂದು ವರ್ಷವನ್ನು ಚುನಾವಣೆ ಸಿದ್ಧತೆಗೆಂದು ಮೀಸಲಿಟ್ಟುಕೊಂಡರೂ, ಒಂದೋವರೆ ವರ್ಷ ಯಡಿಯೂರಪ್ಪ ನಿರಾಳವಾಗಿ ಆಡಳಿತ ನಡೆಸಲು ಅನುವು ಮಾಡಿಕೊಡಬೇಕು. ಅದಕ್ಕೆ ಕೇಂದ್ರದಿಂದ ಅಗತ್ಯ ಸಹಕಾರ, ಅನುದಾನದ ನೆರವನ್ನೂ ನೀಡಬೇಕು. ಈ ಸತ್ಯ ವರಿಷ್ಠರಿಗೆ ಈಗ ಮನವರಿಕೆಯಾದಂತಿದೆ.
ವರ್ಷದ ಹಿಂದೆ ಸರಕಾರ ರಚಿಸಿದಾಗ ಯಡಿಯೂರಪ್ಪನವರ ಕುರಿತು ವರಿಷ್ಠರಿಗೆ ತುಸು ಮುನಿಸು ಇದ್ದದ್ದು, ಅಸಹಕಾರ ತೋರಿಸಿದ್ದು ಎಲ್ಲವೂ ನಿಜವೇ. ಕೆಲವರು ಇದೇ ಪರಿಸ್ಥಿತಿಯನ್ನು ಬಳಸಿಕೊಂಡು ‘ಸಂತೋಷ’ಪಟ್ಟಿದ್ದೂ ಉಂಟು. ಎಲ್ಲವನ್ನೂ ಯಡಿಯೂರಪ್ಪ ಮೌನವಾಗಿ ಸಹಿಸಿಕೊಂಡರು. ಅವರಿಗೂ ಚೆನ್ನಾಗಿ ಗೊತ್ತು, ಇದು ತಮ್ಮ ಕೊನೆಯ ಅವಕಾಶ ಎಂದು. ಆ ತಾಳ್ಮೆ ಈಗ ಫಲ ನೀಡಿದೆ. ಯಡಿಯೂರಪ್ಪನವರ ನಿಜವಾದ ತಾಕತ್ತು ಏನೆಂಬುದು ಮೋದಿ ಸೇರಿದಂತೆ ವರಿಷ್ಠರ ಅರಿವಿಗೆ ಬಂದಿದೆ.
ಯಡಿಯೂರಪ್ಪ ದಿಲ್ಲಿ ಭೇಟಿ ಮಹತ್ವ ಪಡೆದಿರುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದು ಸೋಮವಾರದಿಂದ ಆರಂಭವಾಗಿರುವ ವಿಧಾನಮಂಡಲ ಅಧಿವೇಶನ. ಈ ಸಂದರ್ಭದಲ್ಲಿಯೇ ನಾಯಕತ್ವದ ಗೊಂದಲ ನಿವಾರಿಸಿಕೊಂಡಿರುವುದು ಯಡಿಯೂರಪ್ಪ ವಿರೋಧಿ ಬಣಕ್ಕೆ ನುಂಗಲಾರದ ತುತ್ತಾಗಿದೆ. ಏಕೆಂದರೆ ಸಾಮಾನ್ಯವಾಗಿ ವಿಧಾನ ಮಂಡಲ ಅಧಿವೇಶನ ಗಾಳಿ ಮಾತುಗಳನ್ನು ಹರಿಬಿಡಲು ಉತ್ತಮ ವೇದಿಕೆ. ದಿಲ್ಲಿ ಭೇಟಿಯಲ್ಲಿ ಸ್ವಲ್ಪ ಎಡವಟ್ಟಾಗಿದ್ದರೂ, ವಿರೋಧಿಗಳು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು. ಅದೃಷ್ಟದ ಬಲವೊ, ಯಡಿಯೂರಪ್ಪನವರ ಜಾಣ್ಮೆಯೋ, ಅಂತೂ ದಿಲ್ಲಿ ಭೇಟಿ ಬಳಿಕ ಪ್ರಬಲ ಸಂದೇಶವಂತೂ ರವಾನೆಯಾಗಿದೆ.
ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರಿಗೆ ಅತ್ಯಂತ ಮಹತ್ವದ ಅವಧಿ. ರಾಜ್ಯದ ಆರ್ಥಿಕತೆ ಸರಿಯಾಗಿಲ್ಲ. ಬೊಕ್ಕಸ ಬರಿದಾಗಿದೆ. ಮುಖ್ಯಮಂತ್ರಿಯವರ ತಲೆಯಲ್ಲಿ ನೂರಾರು ಕನಸುಗಳಿವೆ. ಕಡೇಪಕ್ಷ ಈ ಅವಧಿಯಲ್ಲಿ ಜನರ ನೆನಪಿನಲ್ಲಿ ಉಳಿಯುವಂತಹ ಏನಾದರೂ ಕೆಲಸ ಮಾಡಬೇಕೆಂಬ ಉಮೇದು ಇದೆ. ಕೇಂದ್ರ ಸರಕಾರ ತುಸುವೇ ಅನುದಾನದ ಸಹಕಾರ ನೀಡಿದರೂ ಅಭಿವೃದ್ಧಿಯ ಹೊಸ ಪರ್ವವನ್ನು ಯಡಿಯೂರಪ್ಪ ಈ ಎರಡೂವರೆ ವರ್ಷಗಳಲ್ಲಿ ಆರಂಭಿಸಬಹುದು.