ಸಿನಿಮಾ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲ. ಭಾಷೆ ಯಾವುದೇ ಇದ್ದರೂ ಚಲಿಸುವ ಚಿತ್ರಗಳಿಂದಲೇ ಎಲ್ಲರನ್ನು ಸೆಳೆಯಬಲ್ಲ ತಾಕತ್ತು ಈ ಮಾಧ್ಯಮದ್ದು. ಹೊಸ ಪೀಳಿಗೆಯ ತಂತ್ರಜ್ಞರು ಪೈಪೋಟಿಗೆ ಬಿದ್ದು ಸಿನಿಮಾ ಮಾಡುತ್ತಿದ್ದರೆ ಹಳೆಯ ಸಿನಿಮಾ ನೆನಪುಗಳು ಮಾತ್ರ ಎಂದಿಗೂ ತಮ್ಮ ಸ್ಥಾನ ಬಿಟ್ಟುಕೊಡವು. ಹೀಗೆ ಅಂದಿನ ನೂರಾರು ಸಿನಿಮಾಗಳು ತಮ್ಮದೇ ವೈಶಿಷ್ಠ್ಯತೆಯೊಂದಿಗೆ ಕಾಡುತ್ತವೆ.
ಹೊಸಬರ ಪೈಪೋಟಿ, ಅಬ್ಬರದ ಮಧ್ಯೆ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸಿನಿಮಾಸಕ್ತರು ಎಂದಿಗೂ ಇದ್ದಾರೆ. ಅಂಥ ಸಿನಿರಸಿಕರಿಗೆ ಹಾಗೂ ಹೊಸಬರು ಕೂಡ ಕುತೂಹಲದಿಂದ ನೋಡುವಂಥ ಆರ್ಕೈವ್ ಪೋರ್ಟಲ್ ರೂಪಿಸಲು ಸಜ್ಜಾಗಿದ್ದಾರೆ ಸಿನಿಮಾ ಪತ್ರಕರ್ತ ಶಶಿಧರ ಚಿತ್ರದುರ್ಗ. ಸುಮಾರು ಹದಿಮೂರು ವರ್ಷಗಳ ಕಾಲ ಅವರು ಮುಖ್ಯವಾಹಿನಿಯ ದಿನಪತ್ರಿಕೆಗಳು, ವೆಬ್ ಪೋರ್ಟಲ್‌ನಲ್ಲಿ ಕೆಲಸ ಮಾಡಿದ್ದಾರೆ. ನಾಸ್ಟಾಲ್ಜಿಯಾ ಫೀಲ್ ಕೊಡುವ ಸಿನಿಮಾ ಪಸ್ತುಕಗಳನ್ನು ಪ್ರಕಟಿಸಿರುವ ಶಶಿಧರ್ ಇದೀಗ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ರೂಪಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳೂ ಸೇರಿದಂತೆ ಇತರೆ ಹಲವರಿಂದ ಸಂಗ್ರಹಿಸಿದ ರೆಟ್ರೋ ಫೊಟೋ, ಮಾಹಿತಿ, ಲೇಖನಗಳು ಪೋರ್ಟಲ್‌ನಲ್ಲಿರುತ್ತವೆ. ನಾಸ್ಟಾಲ್ಜಿಯಾ ವೀಡಿಯೋ ಕಂಟೆಂಟ್ ಜೊತೆಗೆ ಪ್ರಸ್ತುತ ಸಿನಿಮಾ ಬಗ್ಗೆಯೂ ಒಂದು ಸೆಂಗ್ಮೆಂಟ್ ಇರುತ್ತದೆ. ಹಿಂದಿ, ದಕ್ಷಿಣದ ಇತರೆ ಚಿತ್ರರಂಗಗಳು ಹಾಗೂ ಕಿರುತೆರೆ ಹಿನ್ನೋಟವನ್ನೂ ದಾಖಲಿಸುವುದು ಅವರ ಇರಾದೆ. ಒಟ್ಟಾರೆ ಇದೊಂದು ಇನ್ಫೋಟೈನ್‌ಮೆಂಟ್ ಪೋರ್ಟಲ್ ಎನ್ನುತ್ತಾರವರು.
ಬಹುಭಾಷಾ ನಟ ಕಿಶೋರ್ ‘ಚಿತ್ರಪಥ’ ಶೀರ್ಷಿಕೆ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. “ಈಗ ಸಮಾಜದಲ್ಲಿ ಬರೀ ನೆಗೆಟಿವಿಟಿಯೇ ಕಾಣಿಸುತ್ತಿದೆ. ನಮ್ಮ ಸುತ್ತಮುತ್ತಲಿನ ಘಟನೆಗಳೇ ನಮ್ಮನ್ನು ನೆಗೆಟಿವಿಟಿಗೆ ದೂಡುತ್ತಿವೆ. ಸಿನಿಮಾರಂಗ ಕೂಡ ಹಾಗೇ ಆಗಿದೆ. ಸಿನಿಪ್ರೇಮಿಗಳಲ್ಲಿ ಸಕಾರಾತ್ಮಕವಾಗಿ ಯೋಚಿಸುವಲ್ಲಿ ಇಂತಹ ಪೋರ್ಟಲ್‌ಗಳು ಅನುವಾಗಲಿ” ಎನ್ನುವುದು ಕಿಶೋರ್ ಮಾತು. ಸದ್ಯ ಪೋರ್ಟಲ್‌ಗೆ ಸಂಬಂಧಿಸಿದ ಕೆಲಸಗಳು ನಡೆದಿದ್ದು ನವೆಂಬರ್ 1, ರಾಜ್ಯೋತ್ಸವದಂದು ಪೋರ್ಟಲ್ ಲಾಂಚ್ ಆಗಲಿದೆ.
ಚಿತ್ರ: ‘ಚಿತ್ರಪಥ’ ಪೋರ್ಟಲ್‌ನ ಶೀರ್ಷಿಕೆ ಅನಾವರಣಗೊಳಿಸಿದ ಕಿಶೋರ್.
ಒಳ್ಳೆಯ ಪ್ರಯತ್ನ. ಯಶಸ್ವಿಯಾಗಲಿ. ಸುಧಾ ವಾರ ಪತ್ರಿಕೆಯ ಕೊನೆಯ ಪುಟದಲ್ಲಿ ಭವಾನಿ ಲಕ್ಷ್ಮಿನಾರಾಯಣರು ಸೆರೆಹಿಡಿದ ಚಿತ್ರಗಳನ್ನು ನೋಡುತ್ತಿದ್ದ ನೆನಪು ಇನ್ನೂ ಹಸಿರಾಗಿದೆ.
ಶುಭಾಶಯಗಳು. ಕನ್ನಡ ಚಿತ್ರ ರಂಗ. ಅದರ ಒಳ ಹೊರಗಿನ ಬಗ್ಗೆ ಪ್ರೇಕ್ಷಕ ರಿಗೆ ಒಳ್ಳೆ ಮಾಹಿತಿ ಸಿಗಲಿ. ಅದರಲ್ಲೂ ಹಳೆ ಚಿತ್ರಗಳ ಸೊಗಸನ್ನು ಮತ್ತೆ ಸವಿಯುವಂತೆ ಆಗಲಿ. ನಿಮ್ಮ ಪ್ರಯತ್ನದಲ್ಲಿ ಯಶಸ್ಸು ದೊರಕಲಿ.