21.2 C
Karnataka
Sunday, September 22, 2024

    ಕಲಿಕೆ ಆನ್ ಲೈನ್, ಬದುಕು ಆಫ್ ಲೈನ್

    Must read

    ಇಂದಿನಿಂದ ಹಲವು ರಾಜ್ಯಗಳಲ್ಲಿ ಶಾಲಾ, ಕಾಲೇಜು ಭಾಗಶಃ ಪುನರಾರಂಭಗೊಳ್ಳುತ್ತಿವೆ. ಆದರೆ ಸದ್ಯಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಸೀಮಿತ ಸಂವಹನಕ್ಕೆ ಅವಕಾಶವಿರುವುದರಿಂದ ಸದ್ಯಕ್ಕೆ ಆನ್ ಲೈನ್ ಕಲಿಕೆಗೆ ಒತ್ತು ಕಡಿಮೆಯಾಗಿಲ್ಲ. ಕರ್ನಾಟಕದಲ್ಲಿ ಕೆಲ ವಿಶ್ವವಿದ್ಯಾಲಯಗಳು ಪದವಿ ಪರೀಕ್ಷೆಗಳನ್ನು ನಡೆಸುತ್ತಿವೆ. ಕೆಲವು ಸಂಸ್ಥೆಗಳು ಆನ್ ಲೈನ್ ಮೂಲಕವೇ ಪರೀಕ್ಷೆ ನಡೆಸಿವೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಆನ್ ಲೈನ್ ಬೋಧನೆ, ಕಲಿಕೆಯೇ ಮಂತ್ರವಾಗಿದೆ.

    ತಂತ್ರಜ್ಞಾನ ಗೊತ್ತಿದ್ದವರು, ಗೊತ್ತಿಲ್ಲದವರು, ಡೇಟಾ ಪ್ಯಾಕ್ ಬಳಸುತ್ತಿದ್ದವರು ಇಲ್ಲದವರು ಸಾರಾಸಗಟು ಆನ್ ಲೈನ್ ಆಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಶಕ್ತ್ಯಾನುಸಾರ ಮಕ್ಕಳಿಗೆ ಆನ್ ಲೈನ್ ಕಲಿಕೆಗೆ ಸೂಕ್ತ ಸೌಲಭ್ಯ ಒದಗಿಸಲೇಬೇಕಾದ ಅನಿವಾರ್ಯತೆ ಹೊಂದಿದ್ದಾರೆ.ಆರಂಭದಲ್ಲಿ ಒಲ್ಲೆ ಎನ್ನುತ್ತಿದ್ದವರು ಈಗ ಅನಿವಾರ್ಯವಾಗಿ ಆನ್ ಲೈನ್ ಶಿಕ್ಷಣವನ್ನು ಒಪ್ಪಿಕೊಳ್ಳಬೇಕಾಗಿದೆ.

    ಹೊಸ ಸಮಸ್ಯೆ- ಸಾಧ್ಯತೆ

    ಆನ್ಲೈನ್ ಬೋಧನೆ ಹಾಗೂ ಕಲಿಕೆ ಹೊಸ ಸಮಸ್ಯೆಗಳನ್ನು, ಸಾಧ್ಯತೆಗಳನ್ನೂ ಸೃಷ್ಟಿಸುತ್ತಿದೆ. ತರಗತಿಗೆ ಸಿದ್ಧವಾಗದೇ ಹೋದರೂ ಪರವಾಗಿಲ್ಲ, ಏನೋ ತಿಳಿದಿದ್ದನ್ನು ಅಥವಾ ಸಬ್ಜೆಕ್ಟ್ ಗೆ ಸಂಬಂಧಿಸದೇ ಇದ್ದಿದ್ದನ್ನು ಹೇಳಿ ಕಾಲಯಾಪನೆ ಮಾಡುತ್ತಿದ್ದ ಮೇಷ್ಟರುಗಳಿಗೆ ಈಗ ಆನ್ಲೈನ್ ನಲ್ಲಿ ವಿಷಯವಷ್ಟನ್ನೇ ಹೇಳಬೇಕಾದ ಅನಿವಾರ್ಯತೆ ಇದೆ. ಅಂಥವರಿಗೆ ಜೂಮ್ ಮೀಟಿಂಗ್ ವರದಾನವಾಗಿದೆ. ಇವರು ಉಭಯ ಕುಶಲೋಪರಿ ಹೇಳಿ ಸಬ್ಜೆಕ್ಟ್ ಪ್ರಾರಂಭಿಸುವ ವೇಳೆಗೆ ಜೂಮ್ ಕಟ್ ಆಗುತ್ತದೆ. ಅಷ್ಟೇ ಅಲ್ಲ, ಮಧ್ಯದಲ್ಲಿ ಹೋಸ್ಟ್ ಇಂಟರ್ನೆಟ್ ಡೌನ್ ಆಗಿದ್ದರಿಂದ ಆಗಾಗ್ಗೆ ಕಟ್ ಆಗಿ ಮತ್ತೆ ಚೇತರಿಸಿಕೊಳ್ಳುವಷ್ಟರಲ್ಲಿ ಜೂಮ್ ಸೆಷನ್ ಕೊನೆಯಾಗಿರುತ್ತದೆ. ಬಹುತೇಕರು ಜೂಮ್ ಉಚಿತ ವರ್ಷನ್ ಮಾತ್ರ ಬಳಸುತ್ತಿರುವುದರಿಂದ ಜೂಮ್ ತರಗತಿಗಳು ಅಷ್ಟೇನೂ ಯಶಸ್ವಿಯಾಗಿಲ್ಲ. ಕೆಲವರು ನಡೆಯುತ್ತಿದ್ದ ತರಗತಿಗಳನ್ನು ತುಂಡರಿಸಿ ಮತ್ತೆ ಆರಂಭಿಸುತ್ತಾರೆ.

    ಆನ್ಲೈನ್ ರಹಸ್ಯಗಳು

    ಆನ್ಲೈನ್ ಬಿಚ್ಚಿಡುತ್ತಿರುವ ರಹಸ್ಯಗಳು ಒಂದೆರಡಲ್ಲ. ಆನ್ಲೈನ್ ತರಗತಿ ನಡೆಯುವಾಗ ಮಗುವಿಗೆ ಸ್ಪೀಕರ್ ಅನ್ ಮ್ಯೂಟ್ ಮಾಡಲು ಮೇಷ್ಟರು ಸೂಚಿಸಿದರು. ಅಷ್ಟೇ, ಆ ಮಗುವಿನ ತಂದೆ ತಾಯಿ ನಡೆಸುತ್ತಿದ್ದ ಮಾರಾಮಾರಿ ಜಗಳ ಆನ್ಲೈನ್ ತರಗತಿಯಲ್ಲಿದ್ದವರಿಗೆಲ್ಲಾ ಗೊತ್ತಾಯಿತು!

    ಆನ್ಲೈನ್ ನಲ್ಲಿ ಕಲಿಯುವುದು ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಆದರೂ ಮಕ್ಕಳು ಮನೆಯ ಸುರಕ್ಷಿತ ವಾತಾವರಣದಲ್ಲಿರುತ್ತಾರೆ ಎನ್ನುವುದು ಕೆಲವು ಪೋಷಕರ ಸಂತಸವಾದರೆ ಮಕ್ಕಳ ಕಾಟ ತಡೆಯಲಾರೆವು ಎನ್ನುವುದು ಕೆಲವು ಪೋಷಕರ ಸಂಕಟ.

    ನೇಯ್ಗೆ ಕೆಲಸದ ನಡುವೆಯೂ ಪ್ರತಿನಿತ್ಯ ಮಕ್ಕಳನ್ನು ಸ್ವತಃ ತರಗತಿಗೆ ಬಿಟ್ಟು ಕರೆದುಕೊಂಡು ಬರುತ್ತಿದ್ದ ಡಿ.ಸಿ.ಬಾಬುಗೆ ಈಗ ಮಕ್ಕಳನ್ನು ನಿತ್ಯ ಶಾಲೆಗೆ ಕರೆದೊಯ್ಯುವ ಜವಾಬ್ದಾರಿಯಿಲ್ಲದಿರುವುದು ಸಂತೋಷ ತಂದಿದೆ. ಮಕ್ಕಳು ಕಣ್ಣ ಮುಂದೆ ಇರುತ್ತಾರೆ. ಮನೆಕೆಲಸದಲ್ಲಿ ನೆರವಾಗುತ್ತಾರೆ ಎನ್ನುವುದು ಆತನ ಸಂತೋಷ. ಆದರೆ ಇದು ಒಂದಲ್ಲಾ ಒಂದು ದಿನ ಕೊನೆಗೊಳ್ಳಲೇಬೇಕು ತರಗತಿಯಲ್ಲಿಯೇ ಮಕ್ಕಳು ಕಲಿಯಲು ಸಾಧ್ಯ ಎನ್ನುವುದು ಆತನ ನಂಬಿಕೆ.

    ಮನೆಯಲ್ಲಿಯೇ ಸ್ವಂತ ಕಂಪ್ಯೂಟರ್ ಮೂಲಕ ಡಿಟಿಪಿ ಮುಂತಾದ ಕೆಲಸ ಮಾಡುವ ಶಂಕರಮೂರ್ತಿ ಅವರದು ಮತ್ತೊಂದು ರೀತಿಯ ಸಂಕಟ. ಮನೆಯಲ್ಲಿಯೇ ಮಕ್ಕಳಿರುವುದರಿಂದ ತಮ್ಮ ಪ್ರೊಡಕ್ಟಿವಿಟಿ ಕಡಿಮೆಯಾಗಿದೆ. ಮಕ್ಕಳು ಶಾಲೆಗೆ ಹೋದರೇನೇ ಚೆಂದ. ಮನೆಯಲ್ಲಿ ತನ್ನ ಕೆಲಸ ಅಬಾಧಿತವಾಗಿರುತ್ತದೆ ಎನ್ನುತ್ತಾರೆ. ಮಕ್ಕಳು ಮನೆಯಲ್ಲಿಯೇ ಇರುವುದರಿಂದ ತನ್ನ ಕೆಲಸಕ್ಕೆ ಪ್ರತ್ಯೇಕ ಆಫೀಸ್ ಮಾಡಿಕೊಳ್ಳುವ ಸನ್ನಾಹದಲ್ಲಿದ್ದಾರೆ. ಮಕ್ಕಳ ಗಲಾಟೆಯಿಂದ ತನ್ನ ಕೆಲಸಕ್ಕೆ ತೊಂದರೆಯಾಗಿದೆ ಎನ್ನುವುದು ಅವರ ಅಂಬೋಣ.

    ನೆಟ್ ವರ್ಕ್ ಸಮಸ್ಯೆ

    ಮಂಡ್ಯದ ಉಪನ್ಯಾಸಕ ಡಾ.ರಘು ಅವರದು ವಿಭಿನ್ನ ಅನುಭವ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ನೆಟ್ ವರ್ಕ್ ಸಮಸ್ಯೆ ಎನ್ನುತ್ತಾರೆ. ಆದ್ದರಿಂದ ನೇರ ಆನ್ ಲೈನ್ ತರಗತಿ ನಡೆಸುವುದಕ್ಕಿಂತಲೂ ತರಗತಿಗಳನ್ನು ಚಿತ್ರೀಕರಿಸಿ ಅದನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡುತ್ತಾರೆ. ಅದರ ಲಿಂಕ್ ವಿದ್ಯಾರ್ಥಿಗಳಿಗೆ ಕಳುಹಿಸುತ್ತಾರೆ. ಅದನ್ನು ವಿದ್ಯಾರ್ಥಿಗಳು ವೀಕ್ಷಿಸಿ ಕಲಿಯುತ್ತಾರೆ.

    ಆದರೆ ಕ್ಲಾಸ್ ರೂಮ್ ಡೈನಮಿಕ್ಸ್ ಆನ್ಲೈನ್ ತರಗತಿಯಲ್ಲಿ ಇರುವುದಿಲ್ಲ ಎನ್ನುವುದು ಅವರ ಅನುಭವ. ಈ ವಿಡಿಯೋಗಳನ್ನು ವೀಕ್ಷಿಸಿದವರು ಟೆಸ್ಟ್ ಹಾಗೂ ಅಸೈನ್ ಮೆಂಟ್ ಚೆನ್ನಾಗಿ ಮಾಡುತ್ತಾರೆ, ಇಲ್ಲದಿದ್ದವರು ಅಷ್ಟು ಚೆನ್ನಾಗಿ ಕಲಿಯುವುದಿಲ್ಲ. ಆದರೂ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಸಮರ್ಥವಾಗಿ ಅಳೆಯುವುದು ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲದೆ ಮಕ್ಕಳು ತಮ್ಮ ಪೋಷಕರಲ್ಲಿ ಹಂಚಿಕೊಳ್ಳಲಾಗದ ವಿಷಯಗಳು ಮಿತ್ರರಲ್ಲಿ ಹಂಚಿಕೊಳ್ಳಲು ಸಾಧ್ಯ. ಬಹಳಷ್ಟು ಮಿತ್ರರ ಒಡನಾಟ ಮಕ್ಕಳಲ್ಲಿ ಆತ್ಮವಿಶ್ವಾಸ, ಭರವಸೆ, ಭದ್ರತೆಯ ಭಾವನೆ ಮೂಡಿಸುತ್ತದೆ. ಆನ್ ಲೈನ್ ಶಿಕ್ಷಣದಲ್ಲಿ ಅದು ಸಾಧ್ಯವಿಲ್ಲ.

    ತರಗತಿಯ ವಾತಾವರಣ ಪಾಠ ಕಲಿಸುವುದೇ ಅಲ್ಲದೆ ಬದುಕಿನ ಪಾಠಗಳನ್ನೂ ಕಲಿಸುತ್ತದೆ. ಅಧ್ಯಾಪಕರು ಬರೀ ಅಕ್ಷರ ಕಲಿಸುವುದಷ್ಟೇ ಅಲ್ಲ, ಮಕ್ಕಳ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತಾರೆ. ಆದ್ದರಿಂದ ಯಾಂತ್ರಿಕ ಆನ್ ಲೈನ್ ಕಲಿಕೆ ಒಂದು ಯಶಸ್ವಿ ಸಾಧನವಾಗಿ ಬಳಸುವುದು ಸದ್ಯದ ಪರಿಸ್ಥಿತಿಯಲ್ಲಂತೂ ಸಾಧ್ಯವಿಲ್ಲ ಎನ್ನುತ್ತಾರೆ.

    ಬೆಂಗಳೂರಿನ ಉಪನ್ಯಾಸಕ ಡಾ. ಪುರುಷೋತ್ತಮ ಅವರು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಸಾಧಾರಣ ಫೋನ್ ಕರೆಯಲ್ಲಿ ಬೇಕಾದ ಸೂಚನೆಗಳನ್ನು ನೀಡಿ, ತರಗತಿಗಳನ್ನು ನಡೆಸುತ್ತಾರೆ, ಹಲವು ವಿದ್ಯಾರ್ಥಿಗಳಿಗೆ ಕಾನ್ಫರೆನ್ಸ್ ಕಾಲ್ ಮಾಡಿ ಮಾಹಿತಿ ನೀಡುತ್ತಾತೆ. ಹೆಚ್ಚು ಮಂದಿ ವಿದ್ಯಾರ್ಥಿಗಳಿರುವಾಗ ಜೂಮ್ ಮೀಟಿಂಗ್ ಅಗತ್ಯವಾಗುತ್ತದೆ. ಬಹುತೇಕ ವಿದ್ಯಾರ್ಥಿಗಳು ನೆಟ್ ವರ್ಕ್ ಸಮಸ್ಯೆ ಎದುರಿಸುವುದರಿಂದ ತರಗತಿಯಷ್ಟು ಪರಿಣಾಮಕಾರಿ ಬೋಧನೆ ಆನ್ಲೈನ್ ನಲ್ಲಿ ಅಸಾಧ್ಯ ಎನ್ನುತ್ತಾರೆ.

    ಕೋವಿಡ್-19 ಸಾಂಕ್ರಾಮಿಕದ ನಂತರ ಖಾಸಗಿ ಸಂಸ್ಥೆಗಳಂತೆ, ಸರ್ಕಾರಗಳು ಕೂಡಾ ಬೋಧಕ ಸಿಬ್ಬಂದಿಯನ್ನು ಕಡಿಮೆ ಮಾಡಿ ಹೆಚ್ಚು ಆನ್ಲೈನ್ ತರಗತಿಗಳಿಗೆ ಆದ್ಯತೆ ನೀಡಬಹುದು ಎಂದುಕೊಂಡಿದ್ದವು. ಆದರೆ ನಮ್ಮ ಮೂಲಭೂತ ಸೌಕರ್ಯ, ನೆಟ್ ವರ್ಕ್, ಡೇಟಾ ಬಳಕೆಯ ಮಿತಿಯಿಂದ ಸದ್ಯಕ್ಕೆ ಆಫ್ ಲೈನ್ ತರಗತಿಯೇ ಅತ್ಯಂತ ಪರಿಣಾಮಕಾರಿ ಎನ್ನುವುದನ್ನು ಸಾಬೀತುಪಡಿಸಿವೆ ಎನ್ನುತ್ತಾರೆ.

    ನಾವು ಆನ್ ಲೈನ್ ತರಗತಿಯ ವ್ಯವಸ್ಥೆಗೆ ಬಹಳ ದೂರವಿದ್ದೇವೆ. ಅಲ್ಲದೆ ಆನ್ ಲೈನ್ ತರಗತಿಯು ಅಷ್ಟು ಪರಿಣಾಮಕಾರಿ ಬೋಧನೆಯಲ್ಲ ಎನ್ನುವುದು ನಮ್ಮ ಅನುಭವ. ತರಗತಿಯ ಬೋಧನೆಯಲ್ಲಿರುವ ಪರಿಣಾಮಕಾರಿ ಸಂವಹನ ಆನ್ ಲೈನ್ ನಲ್ಲಿ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಬೋಧಕ ಸಿಬ್ಬಂದಿ ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ.

    ಉಚಿತ ಜೂಮ್ ವರ್ಷನ್ ಬಳಸುವವರಿಗೆ ತರಗತಿಯ ರೆಕಾರ್ಡಿಂಗ್ ಸಾಧ್ಯವಿಲ್ಲ. ಇದರಿಂದ ಕೆಲವರು ಅದರ ಚಂದಾದಾರಿಕೆ ಪಡೆದಿದ್ದಾರೆ. ಕೆಲವರು ಭದ್ರತೆಯ ಕಾರಣಗಳಿಗೆ ಜೂಮ್ ಬಳಸದೆ ಇತರೆ ತಂತ್ರಜ್ಞಾನಗಳ ಮೊರೆ ಹೋಗಿದ್ದಾರೆ.

    ವಿ. ಎಲ್. ಪ್ರಕಾಶ್
    ವಿ. ಎಲ್. ಪ್ರಕಾಶ್
    ವಿ.ಎಲ್.ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೇ ಬರಹದ ವ್ಯವಸಾಯ. ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಣೆ. ಪ್ರಸ್ತುತ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕ.
    spot_img

    More articles

    5 COMMENTS

    1. ಈಗಿನ ವಾತಾವರಣಕ್ಕೇ ನಿಮ್ಮ ಲೇಖನ ಕನ್ನಡಿ ಯಂತಿದೆ. ಆನ್ಲೈನ್ ಪಾಠದಲ್ಲಿ ಇರುವ ಕುಂದು ಕೊರತೆಗಳನ್ನು ಸಮಂಜವಾಗಿ ಹೇಳಿದೀರಾ. ಮಕ್ಕಳಿಗೆ ಈ ಪದ್ಧತಿ ಹೇಳಿಮಾಡಿಸಿದಲ್ಲ ನಾನು ಕೂಡ ಒಬ್ಬ ಕಾಲೇಜು ಉಪನ್ಯಾಸ ಕಿ ಯಾಗಿ ಅನುಭವ ದಿಂದ ಹೇಳುತ್ತಿದ್ದೇನೆ ಇದರಲ್ಲಿ ತುಂಬಾ ಕಿರಿ ಕಿರಿ ಇದೆ. ಒಟ್ಟಿನಲ್ಲಿ ಈ ಮಹಾ ಮಾರಿ ಕೋವಿಡ್ 19ಬೇಗ ತೊಲಗಿ ಮತ್ತೆ ನಮ್ಮ ಶೈಕ್ಷಣಿಕ ಪದ್ಧತಿ ಮೊದಲಿನಂತೆ ಆಗಲಿ. ಎಂದು ಅಂತ ದೇವರಲ್ಲಿ ಪ್ರಾಥನೆ ಮಾಡೋಣ. ಅಭಿನಂದನೆಗಳು ಸರ್.

    2. ಸದ್ಯದ ಪರಿಸ್ಥಿತಿ
      ಪದಗಳಲ್ಲಿ
      ಚಿತ್ರಿಸಿದಂತೆ ಬರಹ.
      ಅಭಿನಂದನೆಗಳು ‌

    3. ಕಲಿಕೆ online ಬದುಕು offline ಎಂಬುದು ನನ್ನ ಪಾಲಿಗೆ ಸುಳ್ಳಾಗಿದೆ. Online ನ ಮೂಲಕ ನನ್ನ ಕಲಿಕೆ ನಿಜಕ್ಕೂ ಹೆಚ್ಚಾಗಿದೆ. ಬದುಕಿನಲ್ಲಿ ಭರವಸೆ ನೀಡಿದೆ. ನನ್ನ ಜ್ಞಾನ ಹೆಚ್ಚಿಸಿಕೊಳ್ಳಲು ಬೆಂಗಳೂರು, ಚೆನ್ನೈ, ಹೈದ್ರಾಬಾದ್, ದೆಹಲಿ ಎಂದು ಪ್ರವಾಸ ಮಾಡಬೇಕಿತ್ತು. ವಿಪರೀತ ಹಣ ಖರ್ಚಾಗುತ್ತಿತ್ತು. ಮತ್ತು ಸಮಯದ ಅಭಾವವೂ ಉಂಟಾಗುತ್ತಿತ್ತು. ಕೇವಲ 30ನಿಮಿಷ ಉಪನ್ಯಾಸ ನೀಡಲು ದೊರದ ಊರಿಗೆ ಪ್ರಯಾಣ ಮಾಡಬೇಕಿತ್ತು. ಅಲ್ಲಿಯ ಸಮಾರಂಭ 10ಗಂಟೆಗೆ ಇದ್ದರೆ ಜನ ಸೇರುತ್ತಿದ್ದುದು 11 ಗಂಟೆ ಆಗುತಿತ್ತು. Online ಸಭೆ -ಸಮಾರಂಭ ಗಳು ಈಗ ಶಿಸ್ತು ಬದ್ದವಾಗಿ, ಸಮಯಕ್ಕೆ ಸರಿಯಾಗಿ ನಡೆಯುತ್ತಿವೆ. ಇದರಿಂದ ನನಗೆ ಹಣ ಮತ್ತು ಸಮಯದ ಉಳಿತಾಯ ಆಗುತ್ತಿದೆ.

    4. ಪ್ರಸ್ತುತ ಸಮಯದ ಕುರಿತು ಬರೆದ ಲೇಖನ ಖುಷಿ ಕೊಟ್ಟಿತು. ಲೇಖನ ಬರೆದವರಿಗೂ ಅದನ್ನು ಪ್ರಕಟಿಸಿದ ಕನ್ನಡ ಪ್ರೆಸ್ ಡಾಟ್ ಕಾಂ ಗೂ ಧನ್ಯವಾದಗಳು 🙏🙏🙏

    LEAVE A REPLY

    Please enter your comment!
    Please enter your name here

    Latest article

    error: Content is protected !!