21.4 C
Karnataka
Thursday, November 21, 2024

    ಯಂತ್ರಗಳಿಲ್ಲದೆ ಬದುಕಿಲ್ಲ

    Must read

    ಮಮತಾ ಕುಲಕರ್ಣಿ

    ಹಿಂದೊಂದು ಕಾಲವಿತ್ತು, ಬಾವಿಯಿಂದ ನೀರು ಸೇದಿ ನೀರು ತರುವುದು, ಒಲೆ ಊದಿ ಅಡುಗೆ ಮಾಡುವುದು, ಕೈಗಳಿಂದ ಬಟ್ಟೆ ಒಗೆದು ಪಾತ್ರೆ ತೊಳೆಯುವುದು ಹೀಗೆ ..

    ಆದರೆ ಕಾಲ ಬದಲಾಗುತ್ತಿದೆ. ಆಧುನಿಕತೆ ಎಲ್ಲರನ್ನು ಆವರಿಸುತ್ತಿದೆ. ಮಷೀನ್ ಗಳು ಮನೆ ಮನೆಯ ಒಂದೊಂದು ಮೂಲೆಯನ್ನು ಆಕ್ರಮಿಸಿವೆ. ಹೀಗೊಂದು ಮಾತು ಇತ್ತು, ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅಂತ. ಆದರೆ ಈಗ ಹಾಗಲ್ಲ. ಸಾಲ ಮಾಡಿಯಾದರೂ ಫ್ರಿಡ್ಜ್ ವಾಷಿಂಗ್ ಮಷಿನ್ ಖರೀದಿ ಮಾಡಲೇಬೇಕು. ಮನುಷ್ಯ ಅಷ್ಟು ಕಾರ್ಯೋನ್ಮುಖನಾಗುತಿದ್ದಾನೊ ಅಥವಾ ಆಲಸಿ ಆಗುತ್ತಿದ್ದಾನೊ ಎಂಬ ಗೊಂದಲವಿದ್ದರೂ ಮಶೀನ್ ಗಳು ಮನುಷ್ಯನನ್ನ ಆಕ್ರಮಿಸಿವೆ ಅನ್ನೊದಂತು ನಿಜ.

    ಬಟ್ಟೆ ಒಗೆಯಲು ವಾಷಿಂಗ್ ಮಷಿನ್, ಅನ್ನ ಮಾಡಲು ರೈಸ್ ಕುಕ್ಕರ್, ನೀರು ಕಾಯಿಸಲು ಗೀಜರ್,ಕೆಟಲ್, ಜಗತ್ತನ್ನೇ ತನ್ನೊಡಲ ತುಂಬಿಸಿಕೊಂಡಿರುವ ಮೊಬೈಲ್. ಹಾಗೆ, ಪಾತ್ರೆ ತೊಳೆಯಲು ಡಿಶ್ ವಾಶರ್, ಚಪಾತಿ ಮಾಡಲು ರೋಟಿ ಮೇಕರ್, ಕಸ ಗುಡಿಸಲು ವ್ಯಾಕ್ಯೂಮ್ ಕ್ಲೀನರ್ , ತಲೆ ಕೂದಲು ಒಣಗಿಸಲು ಹೇರ್ ಡ್ರೈಯರ್, ಹೇರ್ ಕಟ್ ಮಾಡೋಕು ಮಷೀನ್. ಬಗೆ ಬಗೆಯ ವಾಹನಗಳು, ಫ್ಯಾನ್ ಗಳು,ಎಸಿ ,ಅಬ್ಬಬ್ಬಾ ಇದನ್ನೆಲ್ಲಾ ನೋಡ್ತಿದ್ರೆ ವೈಜ್ಞಾನಿಕವಾಗಿ ಎಷ್ಟು ಮುಂದುವರೆದಿದ್ದೇವೆ ಅನ್ನೋದು ಒಂದು ಕಡೆಯಾದರೆ ಇನ್ನೊಂದು ಕಡೆ ಇವುಗಳ ಬಳಕೆ ಆವಶ್ಯಕತೆ ಇದ್ದಲ್ಲಿ ಮಾತ್ರ ಬಳಸುವುದು ಒಳಿತು ಅನ್ನೊದು ಈಗಿನ ಕಾಲದಲ್ಲಂತು ಮೆದುಳಿನಲ್ಲಿ ಸದಾ ಜಾಗ್ರತವಾಗಿರಬೇಕು.

    ದಿನನಿತ್ಯದ ಚಟುವಟಿಕೆಗಳನ್ನು ಮಷೀನುಗಳ ಸಹಾಯವಿಲ್ಲದೆ ಮಾಡುವುದರಿಂದ ದೇಹಕ್ಕೆ ಒಳ್ಳೆಯ ವ್ಯಾಯಾಮವಿದ್ದಂತೆ. ನಮ್ಮ ದೇಹದ ಕ್ಯಾಲೋರಿ ಕರಗಿಸೋಕೆ ಈ ಕೆಲಸಗಳು ತುಂಬಾ ಸಹಕಾರಿಯಾಗುತ್ತವೆ. ನಾವು ಎಷ್ಟು ಆಹಾರ ತಿನ್ನುತ್ತೇವೆ ಅನ್ನೊದಕ್ಕಿಂತ ಹೇಗೆ ಅದನ್ನು ಕರಗಿಸುತ್ತೇವೆ ಅನ್ನೋದು ಮುಖ್ಯ. ಎಷ್ಟು ನಾವು ಮಷೀನ್ ಮೇಲೆ ಅನವಶ್ಯಕವಾಗಿ ಅವಲಂಬಿತವಾಗಿರುತ್ತೇವೆಯೊ, ಅಷ್ಟು ಅವು ನಮ್ಮ ದೇಹವನ್ನು ದುರ್ಬಲಗೊಳಿಸುತ್ತಾ ಹೋಗುತ್ತವೆ. ಮಶಿನ್ ಸಹಾಯದಿಂದ ಕೆಲಸ ಮಾಡೋದು , ಮತ್ತದೇ ಮಶಿನ್ ಸಹಾಯದಿಂದ ಜಿಮ್ ಗಳಲ್ಲಿ ಕೊಬ್ಬು ಕರಗಿಸಲು ಕಸರತ್ತು ಮಾಡೋದು. ಈಗಿನ ಮಕ್ಕಳು ಕೂಡ ರಿಮೋಟ್ ಕಾರ್, ಬ್ಯಾಟರಿ ಚಾಲಿತ ವಾಹನಗಳು ಬೇಕು ಆಟ ಆಡೋಕೆ. ಏಕೆಂದರೆ ಅವರು ಕೂಡ ಶ್ರಮ ಪಡೋದು ಬೇಡ ಅನ್ನೊ ಮನಸ್ಥಿತಿಗೆ ಹೋಗುತ್ತಿದ್ದಾರೆ. ದೈಹಿಕ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಮೊಬೈಲ್ನಲ್ಲಿ ಮೂಲೆಯಲ್ಲಿ ಕೂತ್ಕೊಂಡು ಆಟ ಆಡಿದರೆ ಕೊಬ್ಬು ಶೇಖರಣೆ ಆಗದೆ ಬೆಳವಣಿಗೆಯಾಗುವುದು, ಇಮ್ಯೂನಿಟಿ ವೃದ್ಧಿಸುವುದು ಅಸಾಧ್ಯದ ಮಾತು.

    ಹಾಗೆ ವಾಹನಗಳ ಬಳಕೆ ಕೂಡ ಇವುಗಳಲ್ಲಿ ಒಂದು. ಎಷ್ಟು ಸಾಧ್ಯವೋ ಅಷ್ಟು ಕಾಲ್ನಡಿಗೆ ರೂಢಿಸಿಕೊಳ್ಳಬೇಕು. ಕಾಲುಗಳ ಸ್ನಾಯುಗಳು ಬಲಗೊಳಿಸಿಕೊಳ್ಳಲು ಇದೊಂದು ಮಾರ್ಗ. ಸ್ವಲ್ಪ ಬೆವರು ಬಂದರೂ ಫ್ಯಾನ್ ಚಾಲನೆ ಶುರುವಾಗುತ್ತದೆ, ಅಷ್ಟು ಸಹನಾಶಕ್ತಿ ಮನುಷ್ಯನಿಂದ ದೂರವಾಗುತ್ತಿದೆ.

    ಮಶಿನ್ ಗಳು ಎಷ್ಟೇ ಇರಲಿ, ಅವುಗಳ ಅನಿವಾರ್ಯತೆ ಇದ್ದಲ್ಲಿ ಹಿತಕರವಾದ ಮಿತವಾದ ಬಳಕೆ ತುಂಬಾನೇ ಮುಖ್ಯ. ಅದರಿಂದ ನಮ್ಮ ಆರೋಗ್ಯ ಸದೃಢವಾಗುವುದರ ಜೊತೆಗೆ, ಮಾನಸಿಕವಾಗಿ ದೈಹಿಕವಾಗಿ ಮನುಷ್ಯ ಗಟ್ಟಿಯಾಗುತ್ತಾನೆ. ಒಂದು ಬಟನ್ ಒತ್ತಿ ಕೆಲಸ ಮಾಡಿ ಮುಗಿಸೊ ಮಶೀನ್ ಗಳು, ನಮ್ಮ ದೇಹದ ಮೂಳೆಗಳನ್ನು ಗಟ್ಟಿಗೊಳಿಸಲು ಅಷ್ಟೇ ವೇಗವಾಗಿ ಸಹಕರಿಸುತ್ತವೆಯೆ? ಕೆಲಸವು ಆಯಿತು ವ್ಯಾಯಾಮವು ಆಯ್ತು ಅಂತ ಇರೋದೇ ಒಳ್ಳೆಯದು. ಮಷೀನುಗಳ ದರ್ಬಾರ್ ಕಡಿಮೆಯಾಗಲಿ, ಕ್ರಿಯಾತ್ಮಕ ಬೆಳವಣಿಗೆ ವೃದ್ಧಿಸಲಿ. ಇದರಿಂದ ಆರೋಗ್ಯಕರವಾಗಿ ಇರುವಿಕೆ, ವಿದ್ಯುತ್ ಉಳಿತಾಯ, ಮಾಲಿನ್ಯ ತಡೆಗಟ್ಟುವಿಕೆ, ಇತ್ಯಾದಿ ಬೆಳವಣಿಗೆ ಸಾಗಲಿ. 

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    Photo by Andrea Piacquadio from Pexels

    spot_img

    More articles

    1 COMMENT

    1. ನಿಜವಾದ ಮಾತು ಹೇಳಿದಿರಿ ಮಮತಾ . ಶ್ರಮವಿಲ್ಲದ ಜೀವನ ನಡೆಸುತ್ತಿದ್ದೇವೆ. ಸಹನೆಯಂತೂ ಇಲ್ಲವೇ ಇಲ್ಲ .ಯಂತ್ರಗಳ ಜೊತೆ ನಾವೂ ಯಾಂತ್ರಿಕರಾಗಿದ್ದೇವೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!