ಲಾಕ್‌ಡೌನ್ ಅವಧಿಯಲ್ಲಿ ಅತಿ ಹೆಚ್ಚು ಜನ ನೋಡಿದ್ದು ಸಿನಿಮಾ ವೆಬ್ ಸಿರೀಸ್ ಜತೆಗೆ ಮಹಾಭಾರತ ಮತ್ತು ರಾಧಾಕೃಷ್ಣ ಸೀರಿಯಲ್. ಅದರಲ್ಲೂ ಮಹಾಭಾರತ ನೋಡದವರು ಯಾರು ಇಲ್ಲ ಈ ಒಂದೇ ಸೀರಿಯಲ್‌ನಿಂದಾಗಿ ಸ್ಟಾರ್ ಸುವರ್ಣ ವಾಹಿನಿಗೆ ರೇಟಿಂಗ್ ಸಿಕ್ಕಿದೆ.
ಒಂದು ಕಾಲದಲ್ಲಿ ಸ್ಟಾರ್ ಸುವರ್ಣ ವಾಹಿನಿ ನಂ 1 ಸ್ಥಾನದಲ್ಲಿತ್ತು. ಆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಅಮೃತ ವರ್ಷಿಣಿ, ಲಕುಮಿ, ಪ್ಯಾಟೆ ಹುಡ್ಗೀರ ಹಳ್ಳಿ ಲೈಫು ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳಿಂದ ಟಿಆರ್‌ಪಿ ರೇಸ್‌ನಲ್ಲಿ ಸಾಕಷ್ಟು ಮುಂದಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಅದೇನಾಯ್ತೋ ಏನೋ ಚಾನೆಲ್ ಹಂತ ಹಂತವಾಗಿ ಕುಸಿಯುತ್ತಾ ಬಂತು. ಸಾಕಷ್ಟು ಒಳ್ಳೊಳ್ಳೆ ಕಾರ್ಯಕ್ರಮಗಳು ಮೂಡಿ ಬಂದರು ಯಾರ ಗಮನಕ್ಕೂ ಅದು ಬರಲೇ ಇಲ್ಲ.
ಮಹಾಭಾರತ ಆ್ಯಕ್ಸಿಜನ್
ಇಂತಹ ಸಮಯದಲ್ಲಿ ಸಾಯಿಪ್ರಸಾದ್ ಎಂಬ ಬಿಸ್ನೆಸ್ ಹೆಡ್ ಚಾನೆಲ್ ಸೇರಿಕೊಂಡು ಸ್ಟಾರ್ ಸುವರ್ಣಗೆ ಒಂದು ವಿಭಿನ್ನ ರೂಪ ಕೊಡುವತ್ತ ಗಮನ ಹರಿಸಿದರು. ಹೊಸ ಹೊಸ ಧಾರಾವಾಹಿಗಳು, ರಿಯಾಲಿಟಿ ಶೋಗಳನ್ನು ಆರಂಭಿಸಿದರು. ಆದರೂ ರೇಟಿಂಗ್ ಅವರು ಅಂದುಕೊಂಡಷ್ಟು ಬರಲಿಲ್ಲ. ಛಲ ಬಿಡದ ತ್ರಿವಿಕ್ರಮನಂತೆ ಇನ್ನೂ ಒಂದಷ್ಟು ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಲೇ ಚಾನೆಲ್ ಅನ್ನು ಮೂರನೇ ಸ್ಥಾನದಿಂದ ಎರಡನೇ ಸ್ಥಾನದತ್ತ ತಂದರು. ಅಷ್ಟೊತ್ತಿಗೆ ಲಾಕ್‌ಡೌನ್ ಆಯಿತು. ಇನ್ನೇನು ಮಾಡಲಾಗುವುದಿಲ್ಲ ಎನ್ನುವ ಹೊತ್ತಿಗೆ, ‘ಮಹಾಭಾರತ’, ‘ರಾಧಾಕೃಷ್ಣ’ ಸೀರಿಯಲ್‌ಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿರ ಪ್ರಸಾರ ಮಾಡುವ ನಿರ್ಧಾರ ಮಾಡಲಾಯಿತು. ಇದೊಂದು ನಿರ್ಧಾರ ಚಾನೆಲ್‌ನ ದಿಕ್ಕನ್ನೆ ಬದಲಿಸಿದೆ ಎಂದರೆ ತಪ್ಪಾಗುವುದಿಲ್ಲ.
ಕರ್ನಾಟಕದ ಪ್ರತಿ ಮನೆ ಮನೆಯಲ್ಲಿಯೂ ಮಹಾಭಾರತ, ರಾಧಾಕೃಷ್ಣ ಸೀರಿಯಲ್ ಅನ್ನು ಜನ ನೋಡಲು ಆರಂಭಿಸಿದರು. ಎಷ್ಟರ ಮಟ್ಟಿಗೆ ಎಂದರೆ ಆ ಸಮಯದ ಹೊತ್ತಿಗೆ ಎಲ್ಲರು ಟಿವಿ ಮುಂದೆ ಕುಳಿತಿರುವಷ್ಟರ ಮಟ್ಟಿಗೆ.
ಒಂದು ವೇಳೆ ರಾತ್ರಿ ಹೊತ್ತು ನೋಡಲಾಗದವರು ಹಾಟ್‌ಸ್ಟಾರ್‌ನಲ್ಲಿ, ಬೆಳಗ್ಗೆ ಹೊತ್ತು ನೋಡುತ್ತಿದ್ದಾರೆ. ಈ ಎರಡು ಸೀರಿಯಲ್‌ಗಳ ಯಶಸ್ಸಿನಿಂದಾಗಿ ಸಾಕಷ್ಟು ಹಿಂದಿ,ತೆಲುಗು ಸೀರಿಯಲ್‌ಗಳನ್ನು ಡಬ್ಬಿಂಗ್ ಮಾಡಲಾಯಿತು. ಆದರೆ ಇವುಗಳಿಗೆ ಸಿಕ್ಕ ಯಶಸ್ಸು ಬೇರೆ ಯಾವುದೇ ಸೀರಿಯಲ್‌ಗೂ ಅಷ್ಟಾಗಿ ಸಿಕ್ಕಿಲ್ಲ.
ಗುಣಮಟ್ಟ ಮುಖ್ಯ
ಈ ಸೀರಿಯಲ್‌ಗಳ ಯಶಸ್ಸಿನ ಹಿಂದೆ ಪಾತ್ರಗಳಿಗೆ ಡಬ್ಬಿಂಗ್ ಮಾಡಿರುವ ಧ್ವನಿ ಕಲಾವಿದರ ಶ್ರಮವೂ ಇದೆ. ಪ್ರತಿಯೊಂದು ಪಾತ್ರಗಳನ್ನು ಅನುಭವಿಸಿ ಡಬ್ಬಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ತಪ್ಪದೇ ನೋಡುತ್ತೇನೆ ಎಂದು ಹೇಳುತ್ತಾರೆ ದಾವಣಗೆರೆಯ ಪ್ರಜ್ವಲ್ ಬುರ್ಲಿ.
ಗುಣ ಮಟ್ಟದ ಸರಕನ್ನು ಕೊಟ್ಟಾಗ ಜನ ಅದನ್ನು ಸ್ವೀಕರಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಅಭಿಪ್ರಾಯ ಪಡುತ್ತಾರೆ ಬನವಾಸಿ ಬಳಗದ ಅಧ್ಯಕ್ಷ ಆನಂದ್ ಗುರು. ಅದು ಡಬ್ಬಿಂಗ್ ಆಗಿರಲಿ ಅಥವಾ ಇಲ್ಲೇ ತಯಾರಾದ ಧಾರಾವಾಹಿಯೆ ಆಗಿರಲಿ ಗುಣಮಟ್ಟ ಮುಖ್ಯ. ಎಲ್ಲವೂ ತನ್ನ ಭಾಷೆಯಲ್ಲಿ ಸಿಕ್ಕಾಗ ಕನ್ನಡಿಗರು ಇಷ್ಟಪಡುತ್ತಾರೆ. ಮಹಾನಾಯಕ ಧಾರಾವಾಹಿಯ ಯಶಸ್ಸಿಗೂ ಇದೇ ಕಾರಣ ಎಂದು ಅವರು ಹೇಳುತ್ತಾರೆ.
.