ನಿದ್ದೆಯನ್ನು ನಾವುಗಳು ವಿಶ್ರಾಂತಿ ಅನ್ನಬೇಕಾ ಇಲ್ಲ ಚಟುವಟಿಕೆ ಅನ್ನಬೇಕಾ ಅನ್ನೋದೇ ಗೊತ್ತಾಗುತ್ತಿಲ್ಲ . ನಿದ್ದೆಯನ್ನು ವಿವಿಧ ಹೆಸರುಗಳಲ್ಲಿ ಕರೆಯುತ್ತೇವೆ . ಯಾವುದರ ಪರಿವೆಯೂ ಇಲ್ಲದೇ ಸುತ್ತಲಿನ ಗೊಡವೆಯೂ ಇಲ್ಲದೇ ಮಾಡುವ ನಿದ್ದೆಯನ್ನು ಸವಿ ನಿದ್ದೆಯೆಂದು , ಮುಂಜಾವಿನ ನಸುಕಿನ ನಿದ್ದೆಯನ್ನು ಸಕ್ಕರೆ ನಿದ್ದೆಯೆಂದು , ಅರೆಕ್ಷಣ ತೂಕಡಿಸುವುದನ್ನು ಕೋಳಿನಿದ್ದೆಯೆಂದು ,ಗದ್ಧಲವೆಬ್ಬಿಸಿ ಎಬ್ಬಿಸಿದರೂ ಏಳದೇ ಮಾಡುವ ನಿದ್ದೆಗೆ ಗಾಢ ನಿದ್ದೆಯೆಂದು ಕರೆಯುತ್ತಾರೆ .
ನಾವುಗಳು ಶ್ರದ್ಧೆಯಿಂದ ಮಾಡೋದು ಇದೊಂದುನ್ನೇ ಅನ್ಸುತ್ತೆ . ಸಮಾಜ ಮನುಷ್ಯನನ್ನು ಅಳೆಯೋದು ಅವನು ಮಾಡಿರೋ ಆಸ್ತಿಯಿಂದ , ಇರೋ ಅಂತಸ್ತಿಂದ ,ಹಾಕಿರೋ ಒಡವೆಯಿಂದ , ಓಡಾಡೋ ಕಾರಿನಿಂದಾದರೂ ಅವನ ನೆಮ್ಮದೀನ ಅಳೆಯೋದು ಮಾತ್ರ ಅವನು ಮಾಡೋ ನಿದ್ದೆಯಿಂದಾನೆ .
ನಿದ್ದೆ ಅನ್ನೋದು ಒಂದು ರೀತಿಯ ಸುಖ ಮತ್ತೊಂದು ರೀತಿಯ ಆರೋಗ್ಯ . ಹೆಚ್ಚು ಮಾಡಿದರೂ ಆಲಸ್ಯ ಕಡಿಮೆ ಮಾಡಿದರೂ ಆಲಸ್ಯ . ನಿದ್ದೆಗೆಟ್ಟರೆ ಅಂದಿನ ನಮ್ಮಕೆಲಸ ಕೆಟ್ಟಂತೆಯ.
ರಾತ್ರಿ ಏನ್ ನಿದ್ದೆ ಗೊತ್ತಾ ? ಟೀವಿ ನೋಡ್ಕೊಂಡ್ ಹಂಗೇ ಮಲಗ್ಬಿಟ್ಟಿದೀನಿ . ಊಟ ಮಾಡಿ ಕೂತೆ ನೋಡು ಕಣ್ಣು ಎಳ್ಕೊಂಡ್ ಹೋಗ್ತಾಇತ್ತು . ಕಣ್ ಮುಚ್ಚಿ ಕಣ್ ತೆಗೆಯೋದ್ರೊಳಗಡೆ ಬೆಳಗಾಗೋಗಿದೆ . ರಾತ್ರಿ ಸಕ್ಕತ್ತಾಗಿ ಮಳೆ ಸುರಿದಿದೆ…. ಗೊತ್ತೇ ಆಗಿಲ್ಲ . ಈ ಮಾತುಗಳೆಲ್ಲಾ ಕಣ್ತುಂಬ ನಿದ್ದೆ ಮಾಡುವವರ ಮಾತುಗಳು.
ಅದೇ …. ರಾತ್ರಿ ನಿದ್ದೇನೆ ಬರ್ಲಿಲ್ಲಾ .ನಿನ್ನೆ ರಾತ್ರಿ ಮಲಗ್ದಾಗ ಮೂರು ಗಂಟೆ . ಹಾಸಿಗೇಲಿ ಒದ್ದಾಡಿ ಒದ್ದಾಡಿ ನಿದ್ದೇನೆ ಬರ್ಲಿಲ್ಲ . ಒಂದೊತ್ತಲ್ಲಿ ಎದ್ದೆ ನೀರು ಕುಡಿದೆ. ಟಾಯ್ಲೆಟ್ಟಿಗೆ ಹೋಗಿ ಬಂದೆ ಏನ್ ಮಾಡಿದ್ರು ನಿದ್ದೆ ಬರ್ಲಿಲ್ಲ. ಥೂ ನಾಯಿ ಪಾಡು . ರಾತ್ರಿ ಎಲ್ಲಾ ನಿದ್ದೆ ಬರದೆ ಒಳ್ಳೇ ಗೂಬೆ ಥರ ಎದ್ದಿದ್ದೆ …… ಇವೆಲ್ಲಾ ನಿದ್ದೆ ಬರದವರ ಪಾಡು .
ಅಷ್ಟಿಲ್ಲದೇ ಹೇಳ್ತಾರ ‘ಹಣ ಇದ್ರೆ ಹಾಸಿಗೇನ ಕೊಂಡ್ಕೋಬಹುದು ನಿದ್ದೇನಲ್ಲ ಅಂತಾ’ .
ನಿದ್ದೇನ ಯಾರೂ ಶಾಪ ಅಂತ ಹೇಳಿದ ಇತಿಹಾಸಾನೇ ಇಲ್ಲ ನಿಜವಾಗ್ಲೂ ನಿದ್ದೆ ಒಂದು ವರ .
ಒಂದು ನಿಮಿಷಾನು ಸುಮ್ಮನಿರದ ಮನುಷ್ಯನನ್ನು ಸೋಲು ಗೆಲುವು , ಹಣ ಅಂತಸ್ತು , ದ್ವೇಷ ಅಸೂಯೆ , ಪ್ರೀತಿ ಪ್ರೇಮ , ಸ್ನೇಹ ಸಂಬಂಧ, ಸಾಲ ಸೋಲ , ಬದುಕು ಬವಣೆ , ಕಷ್ಟ ಕಾರ್ಪಣ್ಯ , ಜಾತಿ ಧರ್ಮ ಇವೆಲ್ಲವುಗಳಿಂದಾನು ದೂರ ಇರಿಸಿ ಗಂಟೆಗಳಗಟ್ಟಲೇ ಒಂದು ಕಡೆ ಮಲಗುಸುತ್ತೆ ಅಂದ್ರೆ ಅದು ನಿದ್ದೆಗೆ ಇರೋ ತಾಕತ್ತು .
ಚಾಪೆ ಹಾಸಿಗೆ ದಿಂಬು ಬೆಡ್ ಷೀಟು ಇವು ನಿದ್ದೆಯ ಪಟಾಲಂ ಗೆಳೆಯರು. ಆಕಳಿಕೆ ಗೊರಕೆ ಕನಸು ಇವು ನಿದ್ದೆಯ ಸಂಬಂಧಿಕರು . ನಿದ್ದೆಯಂತಾ ನಿದ್ದೇಗು ಒಬ್ಬ ಶತ್ರುವಿದ್ದಾನೆ ಅವನೇ ಅಲಾರಂ .
ಅಮ್ಮನ ಒಡಲಲ್ಲಿ , ಮಡಿಲಲ್ಲಿ , ತೋಳಲ್ಲಿ , ಸೀರೆ ಜೋಳಿಗೆಯಲ್ಲಿ ಹೀಗೆ ಸಣ್ಣ ವಯಸ್ಸಿಂದಾ ನಮ್ಮ ಜೊತೇಗೆ ಇರೋ ನಿದ್ದೆಗೂ ನಮ್ಮಷ್ಟೇ ವಯಸ್ಸಾಗಿದೆ.
ಅದೆಷ್ಟೋ ಜನ ಹಿರಿಯರ ಬಾಯಲ್ಲಿ ಇವತ್ತಿಗೂ ಬರೋ ಮಾತು ಏನು ಅಂದ್ರೆ ಈ ಆಸ್ಪತ್ರೆ ಕಾಯಿಲೆ ಕಸಾಲೆ ಆಕ್ಸಿಡೆಂಟು ಹಿಂಗೆಲ್ಲಾ ನರಳಿ ಸಾಯೋದಕ್ಕಿಂತ ರಾತ್ರಿ ಊಟ ಮಾಡಿ ಮಲಗದವ್ರು ಬೆಳಿಗ್ಗೆ ಏಳಬಾರದು ಅಂತ .
ಅದೇ ಬದುಕಿನ ಕೊನೆಯ ನಿದ್ದೆ ” ಚಿರನಿದ್ರೆ “.
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಎಷ್ಟೋ ಸಾಧಾರಣ ವಿಷಯಗಳನ್ನು ನಾವು ಗಮನಿಸಿರುವುದೇ ಇಲ್ಲ… ಅದನ್ನೇ ವಿಶಿಷ್ಟ ವಿಶೇಷ ಲೇಖನವನ್ನಾಗಿಸಿ ಗಮನ ಸೆಳೆಯುವಂತೆ ಮಾಡುತ್ತದೆ. ಮಾಸ್ತಿಯವರ ಬರಹ
ಧನ್ಯವಾದಗಳು
ನಿಜ. ನಿದ್ದೆ ಬಾರದೇ ಇದ್ದರೆ ಏನೇನೋ ಯೋಚನೆ. ಸುಖವಿದೆ ಎಂದಾಕ್ಷಣ ನಿದ್ದೆ ಬರುತ್ತದೆ ಅನ್ನೋದು ಸುಳ್ಳು. ಚಾಪೆಯ ಮೇಲೆ ಎಷ್ಟೋ ದಿನ ಸೊಗಸಾದ ನಿದ್ದೆ ಮಾಡಿದೆ ದಿನಗಳಿವೆ. ಎಲ್ಲರೂ ಬಯಸೋದೇ ರಾತ್ರಿ ಮಲಗಿದಾಗ ಚಿರನಿದ್ರೆಗೆ ಜಾರಿದರೆ ಸಾಕು
ಹಣ ಇದ್ದರೆ ನಿದ್ರೆ ಕೊಳ್ಳಲು ಆಗುವುದಿಲ್ಲ. ಹಣ ಹೆಚ್ಚಿದ್ದರೂ ನಿದ್ರೆ ಬರವುದೇ ಇಲ್ಲಾ !ಹೌದು ನಿದ್ದೆಯ ಬಗ್ಗೆಯೇ ಒಂದು phd ಮಾಡುವಷ್ಟು ವಿಷಯ ಇದೆ. ನಿದ್ದೆಗೆಡು ಬುದ್ದಿ ಗೇಡು ಎಂಬುದನ್ನು ನಾವೆಲ್ಲರೂ ಕೇಳಿದ್ದೇವೆ ಮತ್ತು ಅನುಭವಿಸಿದ್ದೇವೆ. ಅಂತೆಯೇ ನಿದ್ದೆ -ಮುದ್ದೆ -ಲದ್ದಿ ಈ ಮೂರು ಸರಿಯಾಗಿದ್ದರೆ ಮನುಜ ಅರೋಗ್ಯ ವಂತ ನಾಗಿರುತ್ತಾನೆ. ನಿದ್ದೆ ಮನುಜ ನಿಗೆ ನಿಜಕ್ಕೂ ವರ. ದಿನದ ದಣಿವನ್ನು ತಣಿಸಿ ಮನುಜನಲ್ಲಿ ನವ ಉತ್ಸಾಹ ವನ್ನು ನೀಡುವ ದಿವ್ಯ ಔಷಧಿ. ಆದರೆ ನಿದ್ರೆ ಮಾಡುವ ಸಮಯದಲ್ಲಿ ನಿದ್ರೆ ಮಾಡಿದರೆ ಚೆನ್ನ. ಇನ್ನು ಕೆಲವರಿಗೆ ನಿದ್ರೆ ಬರುವುದಿಲ್ಲ ಅವರೆಲ್ಲರೂ ಔಷಧಿಗೆ ಮೊರೆ ಹೋಗುವರು. ಇನ್ನು ಕೆಲವರಿಗೆ ಪುಸ್ತಕ ಓದುವಾಗಲೂ, ಇನ್ನೂ ಕೆಲವರಿಗೆ ಪುರಾಣ ಕೇಳುವಾಗಲೂ ನಿದ್ರೆ ಬರವುದುಂಟು. ಚಿಂತೆ ಇಲ್ಲದ ವ್ಯಕ್ತಿಗೆ ಸಂತೆಯಲ್ಲೂ ನಿದ್ದೆ ಬರುತ್ತದೆ. ಆ… ನನಗೂ ನಿದ್ದೆ ಬರುತ್ತಿದೆ.
“ನಿದ್ದೆ “ಈ ಎರಡು ಅಕ್ಷರದ ಮೇಲೆ ಬಹು ರೋಚಕ ಲೇಖನ ಬರೆದವರಿಗೆ ಹಾರ್ಧಿಕ ಅಭಿನಂದನೆಗಳು 🙏🙏
👍
ನಿದ್ದೆ ಬಹಳ ಸಾಧಾರಣ ವಿಷಯ. ಅದನ್ನು ಇಷ್ಟು ಗಂಭೀರವಾಗಿ ಪರಿಗಣಿಸಿ, ಲಘುವಾಗಿ, ಬರೆದಿರುವ ಮಾಸ್ತಿ ಯವರಿಗೆ ಅಭಿನಂದನೆಗಳು