26.2 C
Karnataka
Thursday, November 21, 2024

    ಎಸ್.ಪಿ.ಬಿ ಎಂಬ ಗಾನ ಗಂಧರ್ವ

    Must read

    ಕೆಲವರು ಏರುವ ಎತ್ತರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಹಿಮಾಲಯದೆತ್ತರಕ್ಕೆ, ಇನ್ನಾರು ಅಷ್ಟು ಏರಲು ಸಾಧ್ಯವಿಲ್ಲದ ಸಾಧನೆಯ ಶಿಖರ ಮುಟ್ಟಿ ರಾರಾಜಿಸುತ್ತಾರೆ. ಅಂಥವರಲ್ಲಿ ಒಬ್ಬರು ಇಂದು ಮಧ್ಯಾಹ್ನ 1.04 ಕ್ಕೆ ವಿಧಿವಶರಾದ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಪಿ ಬಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

    ಮಾತೃಭಾಷೆ ತೆಲುಗಾದರೂ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷಿಗರಂತೆಯೇ ಆಯಾ ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಅವರದು. ಅವರನ್ನು ಎಲ್ಲರೂ ತಮ್ಮವರು ಎಂದು ಭಾವಿಸಿರುವಂತೆ ಆಯಾ ಭಾಷೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅವರ ಗೀತೆಗಳು ಹಲವು ತಲೆಮಾರುಗಳಿಗೆ ಪ್ರೀತಿಸಲು, ಬದುಕಿನಲ್ಲಿ ಉತ್ಸಾಹ ತುಂಬಲು, ವೃತ್ತಿಜೀವನದ ಏಕತಾನತೆಯಿಂದ ಮುಕ್ತರಾಗಲು, ಮನಸ್ಸಿನಲ್ಲಿ ಪ್ರಣಯದ ಸೆಳಕುಗಳನ್ನು ಮೂಡಿಸಲು, ಭಕ್ತಿಯಲ್ಲಿ ತಲ್ಲೀನರಾಗಲು ಸಾಥ್ ನೀಡಿವೆ. ಭಕ್ತಿಗೀತೆ, ಭಾವಗೀತೆ, ಪ್ರಣಯಗೀತೆಗಳಿಗೆ ಆಯಾ ಭಾವ ತುಂಬಿ ಹಾಡುತ್ತಿದ್ದ ಬಾಲು ಭಾರತೀಯ ಚಿತ್ರರಂಗ ಕಂಡ ಅಪರೂಪದಲ್ಲಿ ಅಪರೂಪವೆನಿಸುವ ಗಾಯನ ಮಾಣಿಕ್ಯ.

    ತಮ್ಮ ಹಾಡುಗಾರಿಕೆಯೇ ಅಲ್ಲದೆ ತಮ್ಮ ವ್ಯಕ್ತಿತ್ವದಿಂದಲೂ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ವಿಶ್ವದಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದರು. ಸಿನಿಮಾ ಗಾಯಕನಾದರೂ ಶಾಸ್ತ್ರೀಯ ಸಂಗೀತಪ್ರಿಯರ ಮನಸೂರೆಗೈದರು. ಸಿನಿಮಾ ಸಂಗೀತದಂತೆಯೇ ಶ್ರದ್ಧೆಯಿಂದ ಶಾಸ್ತ್ರೀಯ ಸಂಗೀತದ ಹಿನ್ನೆಲೆಯ ಚಿತ್ರಗಳಲ್ಲಿ ಹಾಡಿ ಗೆದ್ದರು. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ನಿವೃತ್ತಿ ಎನ್ನುವುದಿರುತ್ತದೆ. ಒಬ್ಬ ಖ್ಯಾತ ಕ್ರಿಕೆಟ್ ಪಟು ನಿವೃತ್ತನಾದರೆ, ನಟ ನಿವೃತ್ತ ಜೀವನ ಅನುಭವಿಸುತ್ತಿದ್ದರೆ ಅಭಿಮಾನಿಗಳು ಅಪಾರ ಸಂಕಟ ಅನುಭವಿಸುತ್ತಾರೆ. ಅವರ ಪ್ರತಿಭೆಯಿಂದ ಸದಾ ರಂಜಿಸುತ್ತಿರಬೇಕು ಎನ್ನುವುದು ಅಭಿಮಾನಿಗಳ ಹಂಬಲ. ಅದನ್ನು ಎಸ್.ಪಿ.ಬಿ ಯಶಸ್ವಿಯಾಗಿ ಪೂರೈಸಿದರು. 

    ಶಂಕರಾಭರಣಂ ಚಿತ್ರದಲ್ಲಿ ಅವರು “ಶಂಕರಾ” ಎಂಬ ಆಲಾಪ ಹಾಡಿದಾಗ ಇಡೀ ದಕ್ಷಿಣ ಭಾರತವೇ ಮೈ ಮರೆಯಿತು. ಶಾಸ್ತ್ರೀಯ ಸಂಗೀತವೇ ಕಲಿತ ಹಲವು ಗಾಯಕರಿದ್ದರೂ ಎಸ್.ಪಿ.ಬಿ.ಯವರನ್ನೇ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಅವರ ಧ್ವನಿಯಲ್ಲಿದ್ದ ಅಪೂರ್ವ ದೈವಿಕತೆ. ಅವರಿಗೆ ಒಲಿದಿದ್ದ ಗಾಯನ ದೇವತೆ.

    ಹಿಂದಿಯಲ್ಲಿ ದಿಲ್ ದೀವಾನಾ, ಬಿನ್ ಸಜನಾಕೆ ಮಾನೇನಾ… ಎಂದರೆ ಈ ಅಪೂರ್ವ ಗಾಯನಪ್ರತಿಭೆಗೆ ದೇಶವೇ ತಲೆದೂಗಿತು. ದಕ್ಷಿಣ ಭಾರತದಿಂದ ಕೆ.ಬಾಲಚಂದರ್ ಕಮಲ್ ಹಾಸನ್ ನಾಯಕನಾಗಿ ಹಿಂದಿಯಲ್ಲಿ ನಿರ್ದೇಶಿಸಿದ ಸಿನಿಮಾ ”ಏಕ್ ದೂಜೆ ಕೆ ಲಿಯೆ” ಬಾಕ್ಸಾಫೀಸ್ ಕೊಳ್ಳೆ ಹೊಡೆಯಿತು. ಇದಕ್ಕೆ ಎಸ್.ಪಿ.ಬಿ. ಪ್ರೇಮ, ವಿಷಾದ ತುಂಬಿ ಹಾಡಿದ “ತೇರೆ ಮೇರೆ ಬೀಚ್ ಮೆ ಕೈಸಾ ಹೈ ಯೇ ಬಂಧನ್ ಅಂಜಾನಾ….” ಸೂಪರ್ ಹಿಟ್ ಗೀತೆಯೂ ಕಾರಣ ಎಂದರೆ ತಪ್ಪಿಲ್ಲ.

     ಸಲ್ಮಾನ್ ಖಾನ್ ಹಾಗೂ ಎಸ್.ಪಿ.ಬಿ. ಒಳ್ಳೆಯ ಕಾಂಬಿನೇಷನ್. ಮೈನೆ ಪ್ಯಾರ್ ಕಿಯಾ ನಂತರ ಹಲವು ಚಿತ್ರಗಳಲ್ಲಿ ಬಾಲು ಸಲ್ಮಾನ್ ಖಾನ್ ಗೆ ಧ್ವನಿಯಾದರು. ಅವರಿಬ್ಬರ ಸಂಯೋಜನೆಯಲ್ಲಿ ಸೂಪರ್ ಹಿಟ್ ಚಿತ್ರಗಳು ಬಂದವು. ನಂತರ ಶಾರುಖ್ ಖಾನ್ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲೂ ಹಾಡಿದರು. ಅದಕ್ಕೆ ಒಂದು ದಶಕದ ಮುಂಚೆಯೇ ಅವರು ಕಮಲ್ ಹಾಸನ್ ಹಾಗೂ ರಜನೀಕಾಂತ್ ನಟಿಸಿದ ಹಿಂದಿ ಚಿತ್ರಗಳಿಗೆ ಹಾಡುತ್ತಿದ್ದರು. ಆದರೆ ಮೈನೆ ಪ್ಯಾರ್ ಕಿಯಾ ಹಾಡುಗಳ ಯಶಸ್ಸು ಪ್ರಾರಂಭಿಕ ದಿನಗಳಲ್ಲಿ ಅವರನ್ನು ಸಲ್ಮಾನ್ ಖಾನ್ ಅವರೊಂದಿಗೆ ಯಶಸ್ವಿ ಕಾಂಬಿನೇಷನ್ ಆಗಿಸಿತ್ತು. ಇದಕ್ಕೆ ಮುನ್ನ ಧರ್ಮೇಂದ್ರ, ವಿನೋದ್ ಖನ್ನಾ ಹಾಗೂ ಜಿತೇಂದ್ರ ಅವರ ಚಿತ್ರಗಳಿಗೂ ಹಾಡಿದ್ದಾರೆ. ಅವರ ವಿಶೇಷವೆಂದರೆ ಬಹುತೇಕ ಗಾಯಕರು ವಯಸ್ಸಾಗುತ್ತಿದ್ದಂತೆ ನಿವೃತ್ತರಾಗುತ್ತಾರೆ. ಧ್ವನಿಯ ದೃಢತೆ ಮಾಯವಾಗುತ್ತದೆ. ತಮ್ಮನ್ನು ಬಾಧಿಸುವ ಗಂಟಲು ಸಮಸ್ಯೆಯನ್ನು ನಿವಾರಿಸಿಕೊಂಡು ಗಾಯಕರಾಗಿ ಮುಂದುವರಿದರು. 

    ಖ್ಯಾತ ಗಾಯಕನಾಗಿ ಅವರೇ ಸ್ವತಃ ನಟಿಸಿದ ಕನ್ನಡ ಚಿತ್ರದಲ್ಲಿ ಎಸ್.ಪಿ.ಬಿಗೆ ಧ್ವನಿಯಾಗಿದ್ದು ಅಣ್ಣಾವ್ರು. ಒಬ್ಬ ಜನಪ್ರಿಯ ಗಾಯಕನಿಗೆ  ಮತ್ತೊಬ್ಬ ಮೇರು ನಟನ ಧ್ವನಿ ನೀಡಿದ್ದು ಭಾರತೀಯ ಚಿತ್ರರಂಗದಲ್ಲಿಯೇ ವಿನೂತನ ಪ್ರಯೋಗ. ಎಸ್.ಪಿ.ಬಿ ಬರೀ ಗಾಯಕರಷ್ಟೇ ಅಲ್ಲ, ನಟನಾಗಿಯೂ ಯಶಸ್ವಿಯಾಗಿದ್ದಾರೆ. ಮಿಥುನಂ ಚಿತ್ರ ದೂರ ದೇಶದಲ್ಲಿರುವ ಮಕ್ಕಳ ತಂದೆ ತಾಯಂದಿರ ಬಿಕ್ಕಟ್ಟು ಯಶಸ್ವಿಯಾಗಿ ಬಿಚ್ಚಿಡುತ್ತದೆ. ಈ ಚಿತ್ರಕ್ಕೆ ಹಲವು ಪುರಸ್ಕಾರಗಳು ಲಭಿಸಿವೆ. ಅವರು ನಿರ್ಮಾಪಕ, ಸಂಗೀತ ನಿರ್ದೇಶಕರೂ ಹೌದು. ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ತಮ್ಮ 50 ವರ್ಷಗಳಿಗೂ ಮೇಲ್ಪಟ್ಟ ಗಾಯನ ಬದುಕಿನಲ್ಲಿ 40,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಮೂರು ತಲೆಮಾರಿನ ಹೀರೋಗಳಿಗೆ ಧ್ವನಿಯಾಗಿದ್ದಾರೆ. ಅವರು ಅಂಬರೀಷ್, ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಅವರಿಗೆ ಹಾಡಿದರೆ ಸ್ವತಃ ನಟರೇ ಹಾಡಿದಂತಿರುತ್ತಿತ್ತು. ಎನ್.ಟಿ.ರಾಮರಾವ್, ಎಂ.ಜಿ.ರಾಮಚಂದ್ರನ್, ಶೋಭನ್ ಬಾಬು, ಕೃಷ್ಣ, ಕಮಲ್ ಹಾಸನ್, ರಜನೀಕಾಂತ್, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಮುಂತಾದ ಬಹುತೇಕ ಎಲ್ಲ ನಾಯಕರಿಗೂ ಹಾಡುಗಳನ್ನು ಹಾಡಿದ್ದಾರೆ. ಸ್ವತಃ ಅವರೇ ಹಾಡುವಂತೆ ಕೇಳುವುದು ವಿಶೇಷ.

    ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ ಪುರಸ್ಕಾರಗಳಲ್ಲದೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿನ ಸಿನಿಮಾ ಹಾಡುಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಹಲವು ಬಾರಿ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳ ಶ್ರೇಷ್ಠ ಗಾಯಕನಾಗಿ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ಕರ್ನಾಟಕ ಸರ್ಕಾರ “ರಾಜ್ಯೋತ್ಸವ” ಪುರಸ್ಕಾರ ನೀಡಿದರೆ ತಮಿಳು ನಾಡು ಸರ್ಕಾರ “ಕಲೈಮಾಮಣಿ” ಎಂದು ಪುರಸ್ಕರಿಸಿದೆ. ಆಂಧ್ರ ಪ್ರದೇಶ ಸರ್ಕಾರ ಎನ್.ಟಿ.ಆರ್. ರಾಷ್ಟ್ರೀಯ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಇದಲ್ಲದೆ ಮಿಥುನಂ ನಟನೆಗೆ ಆಂಧ್ರ ಪ್ರದೇಶದ ನಂದಿ ಪ್ರಶಸ್ತಿ ಪಡೆದಿದ್ದಾರೆ. ಹಲವು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ಸೈಮಾ ಪ್ರಶಸ್ತಿಗಳಲ್ಲದೆ ಅಸಂಖ್ಯ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.ಎಲ್ಲ ಭಾಷೆಗಳ, ಎಲ್ಲ ವಯೋಮಾನದ, ಎಲ್ಲ ಚಿತ್ರರಂಗಗಳ ಜನರ ಪ್ರೀತಿ ಗಳಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಅದು ಎಸ್.ಪಿ.ಬಿ. ಗಾಯನದಂತೆಯೇ ಅವರಿಗೆ ಮಾತ್ರ ಸಾಧ್ಯವಾಯಿತು.

    ತೆಲುಗಿನ ಪಾಡುತಾ ತೀಯಗಾ, ಕನ್ನಡದ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋಗಳು ಎಸ್.ಪಿ.ಬಿ. ಅವರನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಿದವು. ಹಾಡುಗಾರಿಕೆಯ ಮೇಲೆ ಎಷ್ಟೋ ರಿಯಾಲಿಟಿ ಶೋಗಳು ಬಂದಿದ್ದರೂ ಎಸ್.ಪಿ.ಬಿ. ಅವರನ್ನು ಮೃದುವಾಗಿ ಹಾಡುಗರಿಗೆ ಉತ್ತೇಜನ ನೀಡುತ್ತಾ ಮಾತನಾಡುವುದು ಗಾಯಕರಿಗೆ ಉತ್ಸಾಹ ತುಂಬಿತು. ಈ ಎರಡು ಕಾರ್ಯಕ್ರಮಗಳು ಅಸಂಖ್ಯ ಗಾಯಕರನ್ನು ಹುಟ್ಟು ಹಾಕಿವೆ. ಜನ್ಮಜಾತವಾದ ಪ್ರತಿಭೆಯಿಂದ ಭಾರತೀಯ ಚಿತ್ರರಂಗವನ್ನು ಆಳಿದ, ತಲೆ, ತಲೆಮಾರುಗಳ ಕಾಲ ಚಿರಸ್ಮರಣೀಯವಾಗಿ ಉಳಿಯುವ ಮಹಾನ್ ಪ್ರತಿಭೆ ಎಸ್.ಪಿ.ಬಾಲಸುಬ್ರಹ್ಮಣ್ಯಂ.
    ವಿ. ಎಲ್. ಪ್ರಕಾಶ್
    ವಿ. ಎಲ್. ಪ್ರಕಾಶ್
    ವಿ.ಎಲ್.ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೇ ಬರಹದ ವ್ಯವಸಾಯ. ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಣೆ. ಪ್ರಸ್ತುತ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕ.
    spot_img

    More articles

    4 COMMENTS

    1. ಸ್ತಬ್ಧವಾದ ಗಾನ ಕೋಗಿಲೆಗೆ ನಮ್ಮ ಮೌನ ಶ್ರದ್ಧಾಂಜಲಿ. ಗಾನ ಗಂಧರ್ವ ಅನ್ನುವುದಕ್ಕೆ ಅನ್ವರ್ಥಕರಾಗಿದ್ದರು.

    2. ಮನದಾಳದ ನುಡಿ : ಮರಳಿ ಬನ್ನಿ ‘ಬಾಲೂಜಿ’

    LEAVE A REPLY

    Please enter your comment!
    Please enter your name here

    Latest article

    error: Content is protected !!