21.4 C
Karnataka
Thursday, November 21, 2024

    ಮಧ್ಯಮ ವರ್ಗದ ಕುಟುಂಬಗಳಿಗೆ ಶ್ರೀಮಂತಿಕೆ ಅಂದರೇಕೆ ಭಯ

    Must read

    ಆಗಿನ ಕಥೆಗಳು ಶುರು ಆಗುತ್ತಿದ್ದುದೇ ಒಂದೂರಲ್ಲಿ ಒಬ್ಬ ರಾಜ ಇದ್ದ ಅಂತ ಅಥವಾ ಒಬ್ಬ ಶ್ರೀಮಂತ ಇದ್ದ ಅಂತ. ನಂತರ ಒಬ್ಬ ಬಡವನಾದ್ರೂ ಇರ್ತಿದ್ದ ಇಲ್ಲ ಒಬ್ಬ ಕಳ್ಳನಾದ್ರೂ ಇರ್ತಿದ್ದ ಆ ಕಥೆಗಳಲ್ಲಿ. ನನಗೆ ಆಗ ಇವರೆಲ್ಲ ಈಗಲೂ ಇದ್ದಾರಾ,ಇದ್ದರೆ ಎಲ್ಲಿದ್ದಾರೆ,ನಾನು ನೋಡಬಹುದಾ ಎನ್ನುವಂತಹ ಕುತೂಹಲಗಳು.

    ಈಗ ರಾಜರುಗಳು ಇಲ್ಲ.ಉಳಿದವರು ಇದ್ದಾರೆ ಅಂತ ಅಪ್ಪ ಹೇಳಿದರೆ, ಮತ್ತೆ ಸಂಡೂರು ರಾಜ,ಮೈಸೂರು ಮಹಾರಾಜ ಅಂತ ನೀನೇ ಹೇಳ್ತಿದ್ದೀಯ ಅಂತ ಕೇಳುವ ನನ್ನ ಪ್ರಶ್ನೆಗೆ, ಹೆಸರುಗಳು ಹಾಗೇ ಉಳಿದುಕೊಂಡು ಬಂದಿವೆ,ಅವರ ರಾಜ್ಯಗಳು ಇಲ್ಲ ಈಗ ಅಂತಿದ್ದರು. ಅರ್ಥವಾಗುತ್ತಿರಲಿಲ್ಲ. ಮತ್ತೆ ಯಾವಾಗಲೋ ಇವರು ಯುದ್ಧ ಮಾಡಿ ರಾಜ್ಯ ಪಡೆದುಕೊಳ್ಳಬಹುದಲ್ಲ, ಯಾಕೆ ಸುಮ್ಮನಿದ್ದಾರೆ ಅಂತ ಹಠಾತ್ತನೆ ಕೇಳಿದಾಗ, ಅಪ್ಪ ಸರ್ಕಾರ,ಚುನಾವಣೆ, ಪ್ರಜಾಪ್ರಭುತ್ವ ಏನೇನೋ ಹೇಳ್ತಿದ್ದರು, ಅದೂ ಅರ್ಥವಾಗ್ತಿರಲಿಲ್ಲ. ತುಂಬಾ ದಿನಗಳವರೆಗೆ ರಾಜ್ಯ ಸರ್ಕಾರ,ಕೇಂದ್ರ ಸರ್ಕಾರ, ಅವುಗಳ ಚುನಾವಣೆ, ಮೇಲ್ಮನೆ,ಕೆಳಮನೆ ಗಳು ಗೊಂದಲದ ಗೂಡಾಗಿದ್ದವು ನನಗೆ. ಪ್ರಜೆಯೇ ಪ್ರಭು ಈಗ ಅಂತ ಹೇಳ್ತಿದ್ದ ಅಪ್ಪನ ಅರ್ಥವಾಗದ  ಮಾತು, ಬೆಳೆದಂತೆಲ್ಲ ಓದಿದ ಅದ್ವೈತದ ಅಹಂ ಬ್ರಹ್ಮಾಸ್ಮಿ ಅಥವಾ ನಾನೇ ಬ್ರಹ್ಮ ಎನ್ನುವ ಮಾತು ಅರ್ಥವಾಗದಂತಹ ಗೊಂದಲಕ್ಕೆ ನನ್ನನ್ನು ಬಹಳ ಕಾಲದವರೆಗೆ ದೂಡಿದ್ದವು.

    ಅಂಕ ಪಡೆದರೆ ಜೀವನ

    ಚೆನ್ನಾಗಿ ಓದು. ಈಗಿನ ವ್ಯವಸ್ಥೆಯಲ್ಲಿ ಹೆಚ್ಚಿನ ಅಂಕ ಪಡೆದು ಪಾಸಾಗಲೇ ಬೇಕು ಒಳ್ಳೆಯ ಜೀವನ ರೂಪಿಸಿಕೊಳ್ಳಲು ಅಂತ ಹೇಳ್ತಿದ್ದದ್ದೂ ನನಗೆ ಗೊಂದಲದ ಗೂಡೇ ಆಗ. ಅಪ್ಪನ ಪರಿಭಾಷೆಯಲ್ಲಿ ಓದಿ ಯಾವುದಾದ್ರು ಸರ್ಕಾರಿ ನೌಕರಿ ಹಿಡಿದರೆ,ಜೀವನ ರೂಪಿಸಿಕೊಂಡಂತೆ. ಜೀವನ ಅಂದ್ರೆ ಓದೋದು,ನೌಕರಿ ಹಿಡಿದು ಗಳಿಸೋದು, ಮದುವೆ ಆಗಿ ಮಕ್ಕಳನ್ನು ಮಾಡೋದು. ಇದು ಅಪ್ಪನಿಂದ ನನಗೆ ಸಿಕ್ಕ ಜೀವನದ ಬಗೆಗಿನ ಕಲ್ಪನೆ.

    ಯಾಕೆ ಅಪ್ಪ ಗಾಂಧಿ,ಬೋಸ್ ತರಹ ಆಗು ಅಂತ ಹೇಳ್ತಿಲ್ಲ. ಯಾಕೆ ನೀನೂ ಪ್ರಭು ಆಗಬಹುದು ಈ ವ್ಯವಸ್ಥೆಯಲ್ಲಿ ಅಂತ ಹೇಳಲಿಲ್ಲ ಆಗ? ಅದು ನಮ್ಮಂಥವರಿಗಲ್ಲ ಎನ್ನುವಂಥ ಮಡಿವಂತಿಕೆಯನ್ನು ಆಗಿನ ಎಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ಪಾಲಿಸಿಕೊಂಡು ಬಂದಿದ್ದರು,ಅಪ್ಪನೂ ಹಾಗೆಯೇ ಪಾಲಿಸಿದರೇನೋ ಅಂತ ಈಗ ನನಗೆ ಅನ್ನಿಸ್ತಿದೆ.

    ಹಾಗಿದ್ದರೆ, ಗುರಿ ಆಕಾಶದೆತ್ತರಕ್ಕೆ ಇರಬೇಕು ಅಂತ ಯಾಕೆ ಹೇಳಿಕೊಟ್ಟರು?! Sky is limit ಅಂತ ಇದ್ದ ಇಂಗ್ಲಿಷ್ ಗಾದೆಯನ್ನು ಒಪ್ಪದೇ Beyond sky should be your limit  ಅಂತ ನನಗೆ ಹೇಳಿದರೇಕೆ?! ಹೀಗೆ ಹೇಳುತ್ತಾ ಬೆಳೆಸಿ,ಬೆಳೆದಂತೆಲ್ಲ ನನ್ನನ್ನು ನಿರ್ದಿಷ್ಟ ಚೌಕಟ್ಟಿನೊಳಗೆ ಬಂಧಿಸುವ ಸಲಹೆ ಕೊಡುತ್ತಿದ್ದರಲ್ಲಾ ಏಕೆ?!

    ಅರಿವಿನ ನನ್ನ ಜೀವನವನ್ನು ರೂಪಿಸಿಕೊಳ್ಳಲು ನಾನೇ ನಿರ್ಧರಿಸಿದಾಗ ಅಪ್ಪ ತೀರಾ ಅಸಹಾಯಕರಂತೆ ನನಗೆ ಕಂಡುಬಂದಿದ್ದರು. ಉನ್ನತ ವ್ಯಾಸಂಗ ನನಗಿಷ್ಟ ಇಲ್ಲ ಅಂದಾಗ, ಸರ್ಕಾರಿ ಅಥವಾ ಯಾವುದೇ ನೌಕರಿ ನನಗೆ ಒಗ್ಗಲ್ಲ ಅಂತ ಹೇಳಿದಾಗ ಅರಿಯದ ಮೌನಕ್ಕೆ ಶರಣಾಗಿದ್ದರು. ಹೊರಹಾಕದ ಅಸಮ್ಮತಿ ತುಂಬಾ ದಿನ ಅವರಲ್ಲಿ ಮಡು ಗಟ್ಟಿತ್ತು. ಯಾಕೆ ಹೀಗೆ? ನನ್ನ ಪ್ರತಿ ನಡಿಗೆಯನ್ನು ರೂಪಿಸಿ,ನನ್ನಲ್ಲಿ ಪ್ರತಿಯೊಂದನ್ನು ತುಂಬಿದವರೂ ಅವರೇ. ಅದೇಕೆ ಅವರೆಣಿಸಿದ ಜೀವನದಿಂದ ಬೇರೆ ತೆರನಾದ ಜೀವನ ನಾನು ರೂಪಿಸಿಕೊಳ್ಳಲು ಹೊರಟಾಗ ಬೇಡ ಅಂದರು? ಕ್ಷಾತ್ರದವರು ಅವರ ರಾಜ್ಯ ಅವರೇ ಕಟ್ಟಿಕೊಳ್ಳಬೇಕು,ಯಾರೋ ಕಟ್ಟಿದ ಸಾಮ್ರಾಜ್ಯ ನನ್ನದು ಅನ್ನಬಾರದು ಅಂತ ಶಸ್ತ್ರಾಭ್ಯಾಸ ಮಾಡಿಸಿ, ಯುದ್ಧಕ್ಕೆ ಹೊರಟಾಗ ಅಧೈರ್ಯರಾದದ್ದು ಯಾಕೆ?! ಅಪ್ಪನಿಗೇ ನನ್ನ ಮೇಲೆ ವಿಶ್ವಾಸ ಇರದಿದ್ದ ಮೇಲೆ ಯಾರಿಗೆ ತಾನೇ ಇರಲು ಸಾಧ್ಯ?  ಅವರ ಅಸಮ್ಮತಿ ನನ್ನ ಆತ್ಮಸ್ಥೈರ್ಯ ಕುಗ್ಗಿಸಬಹುದು ಎಂದೇಕೆ ಯೋಚಿಸಲಿಲ್ಲ?

    ಇದೆಲ್ಲದರ ಮಧ್ಯೆ ನಾನು ನನ್ನದೇ ಆದ ಜೀವನ ರೂಪಿಸಿಕೊಂಡೆ,ಅವರು ಹಾಕಿಕೊಟ್ಟಿದ್ದ ಪಂಕ್ತಿಯಲ್ಲಿಯೇ. ಸಂತೋಷಿಸಿದರು ನನ್ನ ಬದುಕನ್ನು ಕಂಡು. ಸರ್ಕಾರಕ್ಕೆ ನಾನು ತೋರಿಸುತ್ತಿದ್ದ ಹಣಕಾಸು ಲೆಕ್ಕದಲ್ಲಿ ಚಿಕ್ಕ ಪುಟ್ಟ ತಪ್ಪಿರುತ್ತಿತ್ತೇನೋ, ಅಪ್ಪನಿಗೆ ಮಾತ್ರ ನನ್ನ ಎಲ್ಲ ಹಣಕಾಸಿನ ವ್ಯವಹಾರ ತಿಳಿಸಿ, ಅವರ ಸಮಾಧಾನದ  ಒಪ್ಪಿಗೆಯನ್ನು ಪಡೆಯುತ್ತಿದ್ದೆ.

    ಯಾಕೋ ಅಪ್ಪನಿಗೆ ಹಣ, ಅದೂ ನಿರೀಕ್ಷೆಗೆ ಮೀರಿದ ಹಣ ಎಂದರೆ ಭಯ ಇತ್ತು. ಅದನ್ನರಿತೇ ಅವರಿಗೆ ಪ್ರತಿಯೊಂದನ್ನೂ ಎಳೆ ಎಳೆಯಾಗಿ ವಿವರಿಸುತ್ತಿದ್ದೆ. ಕೊನೆಯತನಕ ಒಂದು ರೂಪಾಯಿಯನ್ನೂ ನನ್ನಿಂದ ಕೇಳಲಿಲ್ಲ ಅವರು. ದೊಡ್ಡ ಮಗನಾಗಿದ್ದರೂ ಮನೆಯ ಯಾವ ಆರ್ಥಿಕ ಜವಾಬ್ದಾರಿಯನ್ನೂ ನನ್ನ ಮೇಲೆ ಹೇರಲಿಲ್ಲ. ನೀನು,ನಿನ್ನ ಸಂಸಾರ ಚೆನ್ನಾಗಿರಲಿ,ದುಡಿಯುವ ಮಾರ್ಗದಲ್ಲಿ ದಾರಿ ತಪ್ಪಬೇಡ ಅಂತಷ್ಟೇ ಹೇಳಿದ್ದರು. ಅವರೆಣಿಸಿದ ನನ್ನ ಸನಿಹ ಅವರಿಗೆ ಸಿಗಲಿಲ್ಲ ಅನ್ನಿಸಿದಾಗ ನನ್ನ ಹೆಂಡತಿ ಹತ್ತಿರ ಇನ್ನೆಷ್ಟು ದುಡಿಯಬೇಕು ನೀವೆಲ್ಲ ಅಂತ ಸಿಟ್ಟು ಮಾಡಿಕೊಂಡದ್ದೂ ಇದೆ. ನಾನು,ನನ್ನ ಹೆಂಡತಿ ಆ ಮಾತಿಗೆ ನಕ್ಕಿದ್ದೇವೆ.
    ಮೇಲೆ ಹೇಳಿದ ಎಲ್ಲ ವಿಷಯಗಳು ಮಧ್ಯಮ ವರ್ಗದ ನಮ್ಮ ಕುಟುಂಬಗಳಲ್ಲಿ ಸಾಮಾನ್ಯ. ಏಕೆ ನಮಗೆ ಹಣ,ಶ್ರೀಮಂತಿಕೆ ಅಂದರೆ ಭಯ?ಅಥವಾ ಹಣ ಗಳಿಸುತ್ತಾರೆ ಅಂದ್ರೆ, ಅದು ಅಡ್ಡ ದಾರಿಯಿಂದ ಮಾತ್ರ ಸಾಧ್ಯ ಎನ್ನುವ ನಿಲುವು?!  ಹಣವಂತರನ್ನು ಒಂದು ಥರಾ ಕಾಣುವ ನಮ್ಮ ಮಾನಸಿಕ ವ್ಯವಸ್ಥೆ ಇದಕ್ಕೆ ಕಾರಣವಾ? ಅಥವಾ ಹಣ ಬಂದು ಬಿಟ್ಟರೆ ಮನುಷ್ಯ ಬದಲಾಗಿ ಬಿಡುತ್ತಾನೆ ಅನ್ನುವ ಸಂಕುಚಿತ ಮನೋಭಾವನೆಯಾ?

    ಒಮ್ಮೆ ಬಂದ ಹಣ, ಕಳೆದುಕೊಂಡರೆ, ಅದರಿಂದಾಗುವ ನೋವು, ಮನಸ್ಸಿನ ಖಿನ್ನತೆ ನೋಡಿರುವ ನಮ್ಮ ಹಿರಿಯರು, ಇದು ಬೇಡವೇ ಬೇಡ ಅಂತ ದೂರ ಮಾಡಿಬಿಟ್ಟರಾ?ಅರ್ಥವಾಗದ ಪ್ರಶ್ನೆಗಳು ಇವು.

    ಶ್ರೀಮಂತಿಕೆ,ಶ್ರೀಮಂತ  ಅಂದರೇನು?

    ನನ್ನ ಈಗಿನ ಪ್ರೆಶ್ನೆ ಏನಂದ್ರೆ, ಶ್ರೀಮಂತಿಕೆ,ಶ್ರೀಮಂತ  ಅಂದರೇನು? ಅನ್ನುವುದು! ಶ್ರೀಮಂತಿಕೆಯ ನಿಜವಾದ ಮಾಪನ ಹಣ ಒಂದೇನಾ? ಹಾಗಾದ್ರೆ ಎಷ್ಟು ಹಣ ಇರುವವರು ಶ್ರೀಮಂತರು? ಒಂದೊಮ್ಮೆ ಲಕ್ಷಾಧೀಶ್ವರರು, ಕೋಟ್ಯಧಿಪತಿಗಳು ಅಂತೆಲ್ಲಾ ಕರೆಸಿಕೊಂಡವರು ಇಂದು ಶ್ರೀಮಂತರಾ? ಲಕ್ಷ, ಕೋಟಿಗೆ ಇಂದು ನಿಜವಾಗಿಯೂ ಬೆಲೆ ಇದೆಯಾ? ಇದ್ದರೂ  ಎಷ್ಟು ಜನ ಇವರಲ್ಲಿ  ನೆಮ್ಮದಿಯ ನಿದ್ರೆ ಮಾಡುತ್ತಿದ್ದಾರೆ? ಶ್ರೀಮಂತ ಅಪ್ಪನ ಮಕ್ಕಳು ನಮ್ಮೆದುರಲ್ಲೇ ಭಿಕಾರಿಗಳಾಗಿದ್ದಾರಲ್ಲ, ಇವರನ್ನ ಶ್ರೀಮಂತನ ಮಕ್ಕಳು ಅನ್ನಬೇಕಾ?
    ಅದಕ್ಕೇ ಏನೋ ನಮ್ಮ ಹಿರಿಯರು ಹೃದಯ ಶ್ರೀಮಂತಿಕೆ ಅನ್ನುವ ಮತ್ತೊಂದು ಪದವನ್ನೂ ನಮ್ಮ ಕಿವಿಗಳಿಗೆ ಹಾಕಿದ್ದಾರೆ. ಈ ಶ್ರೀಮಂತಿಕೆ ಇರುವವನು ಎಂದಿಗೂ ಬಡವನೇ ಅಲ್ಲವಂತೆ! ಹೋಗಲಿ ಈ ಹೃದಯ ಶ್ರೀಮಂತಿಕೆ ಯನ್ನಾದರೂ ಹೊಂದಲು ನಮ್ಮ ಅಪ್ಪ,ಅಮ್ಮಗಳು ಸಮ್ಮತಿಸುತ್ತಾರಾ? ಹೃದಯ ಶ್ರೀಮಂತನನ್ನು ಮನೆಗೆ ಮಾರಿ ಪರರಿಗೆ ಉಪಕಾರಿ ಅಂತ ಜರೆದದ್ದನ್ನು ನೋಡಿದ್ದೇನೆ. ಯಾಕೆ ಹೀಗೆ? ಇದು ಮಧ್ಯಮ ವರ್ಗಗಳ ಸಮಸ್ಯೆಯೋ ಅಥವಾ ಎಲ್ಲರದ್ದಾ? ನಾವು ಮಕ್ಕಳಿಗೆ ಆದರ್ಶಗಳನ್ನು ಹೇಳುತ್ತೇವೆ, ನಿಜವಾಗಿಯೂ ಮಾಡಲು ಬಿಡುತ್ತೇವಾ? ಅದನ್ನು ಬೇರೆ ಯಾರೋ ಮಾಡುತ್ತಾರೆ,ನಾವಲ್ಲ,ನಮ್ಮ ಮಕ್ಕಳಲ್ಲ ಅನ್ನುವ ಧೋರಣೆ ಎಷ್ಟು ಸರಿ? ಯಾರಾದ್ರೂ ನಾವುಗಳು ಮಕ್ಕಳಿಗೆ ಸುಭಾಷ್ ಚಂದ್ರ ಬೋಸ್ ಆಗು, ಭಗತ್ ಸಿಂಗ್ ಆಗು ಅಂತ ಹೇಳೊಲ್ಲ ಯಾಕೆ?

    ಓದಿ,ನೌಕರಿ ಹಿಡಿದು,ಮದುವೆ ಮಾಡಿಕೊಂಡು,ಮಕ್ಕಳನ್ನು ಮಾಡು, ಅದು ಒಂದೋ,ಎರಡೋ ಸಾಕು ಎನ್ನುವಂತಹ ಸ್ವಾರ್ಥ ಸಲಹೆ ಕೊಡುವುದು ಎಷ್ಟು ಸರಿ? ಯಾರಿಗೂ ಸಹಾಯ ಮಾಡದಿದ್ದರೂ  ತೊಂದರೆ ಕೊಡದೆ, ಬದುಕಿ ಬಿಟ್ಟರೆ ಅದೇ ಮಹಾ ಸಾಧನೆ ಅಂತ ಹೇಳೋದನ್ನ ಹೇಗೆ ಅರ್ಥೈಸಬೇಕು?  ನಮಗೆ ನಾವೇ ಇಂತಹ ಚೌಕಟ್ಟು ಹಾಕಿ, ನಮ್ಮ ಮಕ್ಕಳನ್ನು ಈಗಿನ  ಸ್ಪರ್ಧಾ ಜಗತ್ತಿಗೆ ಬಿಡುವುದು ಎಷ್ಟು ಸಮಂಜಸ? ಎಲ್ಲರಿಗೂ ಓದಿದಾಕ್ಷಣ ಸುರಕ್ಷತೆಯ ಬದುಕು ಸಾಧ್ಯವಾ? 50,60 ವರ್ಷಗಳ ಹಿಂದೆ ಅದು ಸಾಧ್ಯ ಇತ್ತೇನೋ. ಇಂದಂತೂ ಅದು ಅಸಾಧ್ಯ. ಎಲ್ಲರೂ ಓದುವವರೇ, ಎಲ್ಲರೂ 100 ಕ್ಕೆ 100 ಅಂಕ ತರುವವರೇ.

    ಅಂಕ ಪಡೆಯುವುದೊಂದೇ ಶಿಕ್ಷಣವಲ್ಲ

    ಹಣ ಒಂದೇ ಶ್ರೀಮಂತಿಕೆಯ ಮಾಪನವಲ್ಲ ಅನ್ನುವುದರ ಜೊತೆಗೆ ಅಂಕ ಪಡೆಯುವುದೊಂದೇ ಶಿಕ್ಷಣವಲ್ಲ ಅಂತ ಯಾವಾಗ ನಾವು ತಿಳಿಯುವುದು?  ಸರ್ಕಾರಿ ನೌಕರರು ಅಂತ ಇರುವುದು ಈ ದೇಶದ ಜನಸಂಖ್ಯೆಯ ಪ್ರತಿಶತ 2 ರಷ್ಟು ಮಾತ್ರ. ಇನ್ನೂ 98 ಜನ ಹೇಗೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಅಂತ ನಮ್ಮ ಮಕ್ಕಳಿಗೆ ಹೇಳುತ್ತೇವಾ, ಹೇಳಿದ್ದೇವಾ? ಮಕ್ಕಳು 100 ಕ್ಕೆ 2 ಅಂಕ ಕಡಿಮೆ ತಂದರೂ ಅವರ ಜೀವನ ಹಾಳಾಯ್ತೇನೋ ಅಂತ ಯೋಚಿಸುವ ನಮ್ಮ ಮನಃಸ್ಥಿತಿ ಬದಲಾಗೋದು ಯಾವಾಗ? 21 ವರ್ಷದ ವರೆಗೆ ಅಂಕ ಗಳಿಸುವ ಯಂತ್ರಗಳನ್ನಾಗಿ ತಯಾರು ಮಾಡುವ ನಾವು ಅವರ ನಿಜವಾದ ಸಾಮರ್ಥ್ಯ ಅಳೆಯುವ ಪ್ರಯತ್ನ ಮಾಡಿದ್ದೇವಾ? ಎಡವಿ ಬೀಳ್ತಾನೆ ಅಂತ ನಡೆಯನ್ನು ಕಲಿಸದೆ ಹಾಗೇ ಬಿಟ್ಟಿದ್ದೇವಾ? ಈಗೇಕೆ ಭಯ? ಬರೀ ಗೆಲುವಿನ ಬಗ್ಗೆ ಹೇಳಿ,ಸೋಲು ಎಂದರೆ ಜೀವನದ ಅಂತ್ಯ ಅನ್ನುವ ಭಾವನೆ ಅವರಲ್ಲಿ ಮಾರಕವಲ್ಲವೇ? ಅವರು ಸ್ವತಂತ್ರವಾಗಿ ಹಾರಲು ನಾವೆಷ್ಟು ಸಹಾಯಕರಾಗಿದ್ದೇವೆ? ಈಗಲೂ ನಾವು ಇಂಥಹ ಸುರಕ್ಷತೆ ಎನ್ನುವ ಚಿಪ್ಪಿನಿಂದ ಹೊರಬರದಿದ್ದರೆ,ನಮ್ಮ ಮಕ್ಕಳು ನಮ್ಮ ಮುಂದೆಯೇ ಕೆಲಸಕ್ಕೆ ಬಾರದವರಾಗುವುದು ದೂರ ಇಲ್ಲ. ಅವರಿಗೆ ಸೋಲನ್ನು ಅಪ್ಪಿಕೊಂಡು ಪ್ರೀತಿಸುವುದನ್ನು ಕಲಿಸಿದರೆ, ಗೆಲುವು ತಾನಾಗಿಯೇ ಬರುವುದರ ಕುರಿತು ಹೇಳೋಣ. ನಮ್ಮ ಹಿರಿಯರ ಇಂಥಹ ಭಯದಿಂದಲೇ ನಮ್ಮವರ್ಯಾರೂ ವಾಸ್ಕೊಡಿಗಾಮ ಆಗಲೀ, ಕೊಲಂಬಸ್ ಆಗಲೀ ಆಗಿಲ್ಲ.

    ಇದು ನಮಗೆ ಥರವಲ್ಲ, ನಮ್ಮ ಅಪ್ಪ ಹಾಗೆ ಇದ್ದ,ನಾನೂ ಹೀಗೆ,ಹಾಗಾಗಿ ನೀವುಗಳೂ ಹೀಗೇ ಇರಬೇಕು ಅಂತ ಮಕ್ಕಳಿಗೆ ಹೇಳೋದನ್ನ ನಿಲ್ಲಿಸೋಣ. ಜೀವನ ರೂಪಿಸಿಕೊಳ್ಳಲು ಮಕ್ಕಳು ಶ್ರಮ ಪಡುತ್ತಾರೆ ಅಂತಾದರೆ,ಖುಷಿ ಪಡುವ ಸಂಭ್ರಮ ನಮ್ಮದಾಗಬೇಕು. ಸೋತಾಗ ನಗುಮುಖದಿಂದ ನಾವು ಸ್ವಾಗತಿಸಬೇಕು ಯಾಕಂದ್ರೆ ಗೆದ್ದಾಗ ಸಂಭ್ರಮಿಸಲು ಅವನಿಗೆ ಬಹಳಷ್ಟು ಜನ ಇರ್ತಾರೆ. ಸೋಲಿನ ಮಹತ್ವ ನಮ್ಮ ಮಕ್ಕಳಿಗೆ ತುಂಬಾ ಅಗತ್ಯ. ಅದನ್ನು ನಾವು ಹೇಳೋಣ ಅವರಿಗೆ. ಗೆಲ್ಲಲೇ ಬೇಕು ಎನ್ನುವ ಹೊರೆಯನ್ನು ಅವರಿಗೆ ಹೊರಿಸೋದು ಬೇಡ. ಸೋತ ಹೊರೆಯನ್ನ ಹಂಚಿಕೊಳ್ಳಲು ಅವರಿಗೆ ಯಾರಂದ್ರೆ ಯಾರೂ ಇರಲ್ಲ. ನಾವು ಇರೋಣ. ಗೆಲುವಿನ ಸಂಭ್ರಮ ಅವರು ಹೇಗಾದ್ರೂ ಆಚರಿಸಿಕೊಳ್ಳಲಿ, ಅದರ ಗೊಡವೆ ನಮಗೆ ಬೇಡ ಅಂತ ಅವರಿಗೆ ಹೇಳೋಣ. ಸೋಲಲು ತಯಾರಾದವನು ಯಾವತ್ತಿಗೂ ಜಯಶಾಲಿಯೇ ಅನ್ನೋದನ್ನ ನಾವೂ ಮರೆಯೋದು ಬೇಡ.

    Photo by Adeolu Eletu on Unsplash

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    16 COMMENTS

    1. ಸೋಲಿನ ರುಚಿಯನ್ನು ಬಲ್ಲವರಾರು ಜೀವನದಲ್ಲಿ ಸೋಲರು .👌

    2. ನಿಜಕ್ಕೂ ಇದು ಸತ್ಯ. ಮಿಡ್ಲ್ ಕ್ಲಾಸ್ ಫ್ಯಾಮಿಲಿ ಈ ದುಡ್ಡಿಗೆ ಹೆದರುವ ಮಾತು ಇದೆ. ನೀವು ಹೇಳಿರುವ ನಿಮ್ಮ ಮನಸಿನ ಮಾತು. ತುಂಬಾ ಸಮಂಜಸ ವಾಗಿದೆ. ದುಡ್ಡು ಒಂದು ಮಾಯೆ ಇದು ಯಾವಾಗ ಏನು ಬೇಕಾದರೂ ಮಾಡುತ್ತೆ ಮಾನವೀಯತೆ. ಮಧುರ ಸಂಬಂಧ ಕೂಡ ಈ ಹಣದ ಕಾರಣ ಹಾಳುಮಾಡ ಬಹುದು. ನಿಮ್ಮ ಬರವಣಿಗೆಯ ನಿರೂಪಣೆ ಶೈಲಿ ಮನೋಜ್ಞ.. ಮನಸಿನ ಮಾತುಗಳು ಅಕ್ಷರರೂಪವಾಗಿ ಬಂದಿದೆ. ಧನ್ಯವಾದಗಳು. BM.

    3. ಶ್ರೀಮಂತಿಕೆಗೆ ನಿರ್ದಿಷ್ಟ ವ್ಯಾಖ್ಯಾನ ಸಾಧ್ಯ ವಿಲ್ಲ. ನನ್ನ ಅನಿಸಿಕೆ.ಏನೇ ಹೇಳಿದರೂ ಇಂದು ಹಣದ ಶ್ರೀಮಂತಿಕೆಯೇ ಪ್ರಧಾನ. ಹೃದಯ ಶ್ರೀಮಂತಕೆ ಸಮಾಧಾನಕ್ಕಷ್ಟೆ ಹೇಳುವವರಿದ್ದಾರೆ. ಮಧ್ಯಮ ವರ್ಗ ಶ್ರೀಮಂತಿಕೆ ಬಯಸಯವರಾದರೂ ಅತಿ ಸಂಗ್ರಹದ ಬಗ್ಗೆ ಆಸಕ್ತಿ ಇಲ್ಲ. ತೃಪ್ತಿಕರ ಜೀವನದ ಬಯಕೆ ಹೆಚ್ಚು. ಮೌಲ್ಯ ಹಾಗೂ ಶ್ರೀಮಂತಿಕೆಯ ಸಂಕೇತ ಮಧ್ಯಮ ವರ್ಗದ ಹರ್ಷ.
      ಅನುಭಾವದ ತೋಳಲಾಟ ನಿನ್ನದೆ ಶೈಲಿಯಲ್ಲಿ ದಾಖಲಿಸಿದ್ದೀಯ.

    4. 👌 parents have to support and partipate both in success and failures of our children. Well said.

    5. ಮಧ್ಯಮ ವರ್ಗದ ಜನಕೆ ಹಣ ಶೇಖರಣೆ, ಬಂಗಲೆಯ ಬದುಕು ಇದರ ಬಗ್ಗೆ ಆಸಕ್ತಿ ಇರೋದು ಕಡಿಮೆ. ಅವರು ಬದುಕಿನಲ್ಲಿ ತನ್ನ ಹಿರಿಯರಿಗಿಂತ ನೆಮ್ಮದಿಯಾಗಿದ್ದೇವೆ. ಮಕ್ಕಳಿಗೆ ಸಾಲ ಉಳಿಸಿ ಹೋಗದಿದ್ದರೆ ಸಾಕು ಅನ್ನುವ ಭಾವನೆ ಇರುತ್ತದೆ. ಉದಾಹರಣೆಗೆ.. ನನ್ನವರಿಗೆ ಹಣ ಗಳಿಸುವ ದಾರಿ ಇತ್ತು, ನಮ್ಮ ಮನೆದೇ ಆಸ್ತಿ ಇದ್ದರೂ ಅದು ಬೇಡಪ್ಪಾ. ನಾಲ್ಕು ಜನರಿಗೆ ಒಳ್ಳೆಯದಾದರೆ ಸಾಕು ಅನ್ನಿಸುತ್ತದೆ. ಅದಕೆ ಅವರಿಗೆ ಹಣದ ಶ್ರೀಮಂತಿಕೆ ಬಗ್ಗೆ ಆಸಕ್ತಿ ಕಡಿಮೆ.

    6. ಇವತ್ತು ಶ್ರೀಮಂತಿಕೆ ಅಂದರೆ ಹಣ, ಕಾರು, ಬಂಗಲೆ ಇದಕಷ್ಟೇ ಸೀಮಿತ. ಒಳ್ಳೆಯವನಾಗಿ ಅವನಲ್ಲಿ ಹಣವಿಲ್ಲ ಅಂದರೆ ಆ ಒಳ್ಳೆಯತನಕ್ಕೆ ಬೆಲೆ ಕಡಿಮೆನೇ

    7. ನಿನ್ನ ಬಾಲ್ಯದ ಅನುಭವಗಳೊಂದಿಗೆ, ವಾಸ್ತವಿಕ ಸ್ಥಿತಿ ಗತಿಗಳನ್ನು ಆಳವಾಗಿ ಅವಲೋಕಿಸಿ ಅತ್ಯುತ್ತಮವಾದ ಲೇಖನವನ್ನು ಪ್ರಚುರಪಡಿಸಿದ್ದೀಯ.
      ಏನೇ ಆದರೂ ಗೆಳೆಯ, ಹಣದ ಶ್ರೀಮಂತಿಕೆಯಿಂದಾಗಲಿ ಅಥವ ಹೃದಯ ಶ್ರೀಮಂತಿಕೆಯಿಂದಾಗಲಿ ಸ್ವಯಂ ನಾವೆಷ್ಟು ನೆಮ್ಮದಿಯಿಂದ ಇದ್ದೇವೆ ಎನ್ನುವುದು ಬಹು ಪ್ರಾಮುಖ್ಯವಾಗಿರುತ್ತದೆ ಅಲ್ಲವೇ.

    8. ಅಪ್ಪನಿಗೆ ಮಗನ ಬಗೆಗಿನ ಮನಸ್ಥಿತಿ,ಮಗ ಅಪ್ಪನಾದಾಗಿನ ಮನಸ್ಥಿತಿ ಚಿತ್ರಣ ತುಂಬಾ ಚನ್ನಾಗಿ ಮೂಡಿಬಂದಿದೆ. ಜೀವನದಲ್ಲಿ ಹಣ ಮುಖ್ಯ ಅಲ್ಲಾ, ಅಂಕಗಳೂ ಮಖ್ಯವಲ್ಲಾ, ಬದುಕನ್ನು ಕಟ್ಟಿಕೊಳ್ಳಲು ಸ್ವತಂತ್ರ ಆಲೋಚನೆ ಚಿಂತನೆ ಮತ್ತು ಬಿದ್ದಾಗ ಸೆಟೆದು ನಿಂತು ಬದುಕು ಕಟ್ಟಿಕೊಳ್ಳಲು ಸಮರ್ಥನನ್ನಾಗಿ ಮಾಡುವುದು ಪೋಷಕ.ಮತ್ತು ಸಮಾಜದ ಅವಶ್ಯಕತೆ ಎಂಬುದು ಲೇಖಕರ ಅಭಿಪ್ರಾಯ.ತುಂಬಾ ಚನ್ನಾಗಿ ಪ್ರಸ್ತುತ ಪಡಿಸಿದ್ದಾರೆ.

    9. ಚಿಂತಕ ಮಂಜುನಾಥ್ ಅವರು ,ತುಂಬಾ ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಿದ್ದಾರೆ,ಇದು ತಣ್ಣಗೆ ಪ್ರತಿಯೊಬ್ಬ ಪೋಷಕರ ಮನದಲ್ಲಿ ಕೊರೆವ ವಿಚಾರವನ್ನು, ವಿವರವಾಗಿ ತಿಳಿಸಿದ್ದಾರೆ.
      ಇವರ ಚಿಂತನೆಯಲ್ಲಿ ಅನೇಕ ವರ್ಷಗಳ ಮಂಥನದ ವಿಚಾರಗಳಿಗೆ ಉತ್ತರವಿದೆ.

      ಇನ್ನು ಹೆಚ್ಚಿನ ಇಂತಹ ವಿಚಾರಗಳು ,ಮಂಜುನಾಥ್ ಅವರಿಂದ ಬರಲಿ.

    10. Super article by Mr.Manjunath Bommagatta where he has explained the concept of becoming richness from so called middle class mentality. Yes we should leve for next generation to have first hand experience of both success and failure after all the two faces of same coin.

    11. ಬಹಳ ಸ್ವಾರಸ್ಯವಾದ ಸತ್ಯ ಚಿಂತನೆ. ನನಗೆ ತುಂಬಾ ಇಷ್ಟವಾಯಿತು

    12. ಮಂಜುನಾಥ್ ನಿಮ್ಮ ಪರಿಕಲ್ಪನೆ ಸಹಜವಾಗಿದೆ. ನಮ್ಮ ತಂದೆ ನಮಗೆ ಅದನ್ನೇ ಹೇಳುತ್ತಿದ್ದರು. ನಾನು ನಿಮಗೆಲ್ಲಾ ಯಾವ ಆಸ್ತಿ ಮಾಡಲು ನನಗೆ ಆಗುವುದಿಲ್ಲ ಶಿಕ್ಷಣವೇ ನಮ್ಮ ಆಸ್ತಿಯಾಗಬೇಕು ಎಂದು. The ability of developing any skill in a nowadays kids can be a limit beyond the sky.
      I have enjoyed the article.

    13. ಉತ್ತಮವಾದ ಲೇಖನ ಬದುಕಿನ ಮೇಲೆ ಪ್ರಭಾವ ಬೀರುವ ಮೂಲಕ ತಮ್ಮ ಸ್ವಂತ ಅನುಭವ ದ ಮೂಲಕ ಬರೆದಂತಿದೆ ಇಂದಿನ ಯುವಕರಲ್ಲಿ ಕಣ್ಣು ತೆರೆಸುವಂತಿದೆ .

    LEAVE A REPLY

    Please enter your comment!
    Please enter your name here

    Latest article

    error: Content is protected !!