18.6 C
Karnataka
Friday, November 22, 2024

    ‘ಆನಂದ್, ಎನ್ನಾಚಿಮ್ಮಾ ಸ್ಕೋರೂ’

    Must read

    ಕೆಲವೇ ನಿಮಿಷಗಳ ಹಿಂದೆ ಪರಿಚಯಾದವರನ್ನೂ ಕೂಡ ಆತ್ಮೀಯವಾಗಿ ಆವರಿಸುತ್ತಿದ್ದ ಎಸ್ ಪಿ ಬಿ ಅವರೊಂದಿಗಿನ ಒಡನಾಟವನ್ನು ಬನವಾಸಿ ಬಳಗದ ಆನಂದ್ ಗುರು ಇಲ್ಲಿ ನೆನಪಿಸಿಕೊಂಡಿದ್ದಾರೆ.

    1994ರಲ್ಲಿ ಮೇ ತಿಂಗಳ ಒಂದು ದಿನ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜೊತೆ ಒಂದಿಡೀ ದಿನ ಕಳೆಯುವ ಸೌಭಾಗ್ಯ ನನ್ನದಾಗಿತ್ತು.ಕಂಠೀರವ ಸ್ಟುಡಿಯೋ ಒಳಗಡೆ ಇರುವ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಂಸಲೇಖರ ಸಂಗೀತ ನಿರ್ದೇಶನದಲ್ಲಿ ಹಲವು ಹಾಡುಗಳ ಧ್ವನಿಮುದ್ರಣ ನಡೆದಿತ್ತು.. ಬಾಲು ಅವರು ಬರುವ ಕಾರ್ಯಕ್ರಮ ತಿಳಿದಿದ್ದ ನಾನೂ ಬೆಳಗ್ಗೆ 9ಕ್ಕೆ ಸ್ಟುಡಿಯೋ ಬಾಗಿಲಲ್ಲಿ ಇದ್ದೆ.ನನಗಿನ್ನೂ ನೆನಪಿದೆ..ಆಗ ಬಾಲು ಅವರ ಕಾಲಿಗೆ ಎಂಥದ್ದೋ ಪೆಟ್ಟಾಗಿ ಪ್ಲಾಸ್ಟರ್ ಹಾಕಿದ್ದರು. ಇಡೀ ಸ್ಟುಡಿಯೋದ ಒಳಗೆ ಇದ್ದದ್ದು ಬೆರಳೆಣಿಕೆಯಷ್ಟು ಜನರು ಮಾತ್ರ.

    ಹಂಸಲೇಖ, ರಾಜೇಶ್ ಕೃಷ್ಣನ್ ಅವರೊಡನೆ ಕೆಲವು ಸ್ಟುಡಿಯೋ ತಂತ್ರಜ್ಞರು ಮಾತ್ರವೇ ಅಲ್ಲಿದ್ದದ್ದು. ಹಾಗಾಗಿ ಬಹಳ ಸಮೀಪದಲ್ಲಿ ಇರುವ ಅವಕಾಶ ನನ್ನದಾಗಿತ್ತು.  ಅಂದು ಇಡೀ ದಿವಸ, ಅಂದರೆ ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ನನ್ನ ನೆಚ್ಚಿನ ಬಾಲು ಅವರ ಬಹಳ ಸಮೀಪದಲ್ಲಿ ಇದ್ದೆ.. ರಸಿಕ ಚಿತ್ರದ ಹಾಡುಗಳನ್ನು ಧ್ವನಿ ಮುದ್ರಿಸಿ ಕೊಂಡಿದ್ದರು. 

    ತನನಂ ತನನಂ ಎನಲು ಮನಸು ನೀನೇ ಕಾರಣ ಎನ್ನುವ ಹಾಡಲ್ಲಿ, ಆಕಾಶ ಭೂಮಿ ಎಲ್ಲಾ ಚಪ್ಪರ ಎನ್ನುವಾಗ ಒಂದೆಡೆ ಟ್ರಾಕ್ ಅಲ್ಲಿರದ ಒಂದು ಪಲುಕನ್ನು ಬಾಲು ಸಾರ್ ಹಾಡಿದಾಗ ನನಗೆ ರೋಮಾಂಚನ ಆಗಿಬಿಟ್ಟಿತ್ತು.
    ವಿರಾಮದ ಸಮಯದಲ್ಲಿ ಅವರು ಮೈಕ್ ಇಲ್ಲದೆ ಹಾಡಿದ್ದನ್ನು ಕೇಳುವ ಭಾಗ್ಯ ನನ್ನದಾಗಿತ್ತು. ನನ್ನ ಜೀವನದಲ್ಲಿ ನನಗಿದ್ದ ಒಂದು ಹುಚ್ಚು ಆಸೆ ಎಂದರೆ ಎಸ್ಪಿ, ಪಿಬಿ ಮತ್ತು ಅಣ್ಣಾವ್ರು ಹಾಡುವುದನ್ನು ನೇರವಾಗಿ ಕೇಳಬೇಕು ಎನ್ನುವುದು. ಅಂದರೆ ಮೈಕ್ ಇಲ್ಲದೆ ಎದುರು ಹಾಡುವುದು.. ಅಣ್ಣಾವ್ರ ಹಾಡು ಕೇಳುವ ಅವಕಾಶ ಆಗಲಿಲ್ಲ ಎಂಬ ನೋವು ಇದ್ದರೂ.. ಉಳಿದಿಬ್ಬರು ಹಾಡುವುದನ್ನು ಕೇಳುವ ಸೌಭಾಗ್ಯ ನನಗೆ ಸಿಕ್ಕಿತ್ತು.

    ನಡುವೆ ಯಾವಾಗಲೋ ವಿರಾಮದಲ್ಲಿ ಸಣ್ಣದೊಂದು ಕೋಣೆಯಲ್ಲಿ ಹಂಸಲೇಖ ಅವರೊಡನೆ ಬಾಲು ಅವರು ಕುಳಿತು ಮಾತಾಡುತ್ತಿದ್ದರು, ಹುಚ್ಚು ಅಭಿಮಾನದ ನಾನು ಕಣ್ಣೆವೆ ಇಲ್ಲದೆ ಅವರನ್ನೇ ನೋಡುತ್ತಾ ಕೈಕಟ್ಟಿ ಮೂಲೆಯೊಂದರಲ್ಲಿ ನಿಂತಿದ್ದೆ. ಆಗವರು ಒಂದು ಹಳೆಯ ಹಾಡಿನ ರಾಗ ಆಲಾಪಿಸಿ, ಈ ಹಾಡು ನನಗೆ ಇಷ್ಟ ಎಂದು ಯಾವುದು ಈ ಹಾಡು ಅಂತಾ ಹಂಸಲೇಖ ಅವರನ್ನು ಕೇಳಿ, ನನ್ನ ಕಡೆಯೂ ಮುಖ ಮಾಡಿದರು. ನಾನು ಆಗ  ಅವರೆದುರು ಸತ್ಯಂ ಮಾಡಿದ್ದ ಬಂಗಾರದ ಗೊಂಬೆಯೇ ಮಾತನಾಡು.. ಎನ್ನುವ ಸೀತಾರಾಮು ಚಿತ್ರದ ಆ ಹಾಡಿನ ಎರಡು ಸಾಲು ಹಾಡಿ, ವಿವರಗಳನ್ನೂ ಬಡಬಡಿಸಿ ನೆನಪು ಮಾಡಿದ್ದೆ.

    ಮಧ್ಯಾನದ ಊಟದ ಹೊತ್ತಲ್ಲಿ ಹೊರಗೆ ಹೂದೋಟದಲ್ಲಿ ನಾಲ್ಕೈದು ಜನರು ನಿಂತಿದ್ದೆವು. ನನ್ನ ಪಕ್ಕದಲ್ಲೇ ನಿಂತಿದ್ದ ಎಸ್ ಪಿ ಬಾಲುರವರು ನನ್ನ ಭುಜದ ಮೇಲೆ ತಮ್ಮ ಮೊಣಕೈಯನ್ನು ಊರಿಕೊಂಡು ಒಂದ್ ಹತ್ತು ನಿಮಿಷ ನಿಂತಿದ್ದರು. ನನ್ನ ಎದೆ ಬಡಿತ ನನಗೇ ಕೇಳುವಷ್ಟು ಜೋರಾಗಿ ಬಿಟ್ಟಿತ್ತು.ಅಂದು ಅದಾವುದೋ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಬಾಲು ಅವರು ನನ್ನನ್ನು ಎಂದಿನಿಂದಲೋ ಪರಿಚಯ ಇರುವಂತೆ. “ಆನಂದ್, ಎನ್ನಾಚಿಮ್ಮಾ ಸ್ಕೋರೂ” ಅಂತಾ ಕೇಳಿದ್ದದ್ದು ಇಂದಿಗೂ ಕಿವಿಯಲ್ಲಿ ರಿಂಗಣಿಸುತ್ತಿದೆ.

    ಇಪ್ಪತ್ತಾರು ವರ್ಷಗಳ ನಂತರವೂ ಅಂದಿನ ಸಾಮೀಪ್ಯದ ನೆನಪು ಹಸಿರಾಗಿದೆ.. ಆಗೆಲ್ಲಾ ನನ್ನ ಬಳಿ ಕ್ಯಾಮರಾ ಇರಲಿಲ್ಲ. ಹಾಗಾಗಿ ಫೋಟೋ ಇಲ್ಲ.ಒಂದು ಆಟೋಗ್ರಾಫ್ ಬರೆದು ಕೊಟ್ಟಿದ್ದರು.. Dear Anand, best wishes balu.. ಅಂತಾ..

    ಬಾಲ್ಯದಿಂದಲೂ ಬಾಲು ಅವರ ಹಾಡುಗಳನ್ನೇ ಕೇಳಿಕೊಂಡು ಬೆಳೆದ ನನ್ನಂತಹ ಸಾಮಾನ್ಯನಿಗೆ ಹೀಗೆ ಬಾಲು ಅವರೊಡನೆ ಒಂದಿಡೀ ದಿವಸ ಕಳೆಯಲು ಸಾಧ್ಯವಾದದ್ದು ನನ್ನ ಯಾವುದೋ ಜನ್ಮದ ಪುಣ್ಯ ಅನ್ನಿಸುತ್ತದೆ. ಇಂದಿಗೂ ಅಂದಿನ ಆ ನನ್ನ ಅನುಭವ ನಿಜಕ್ಕೂ ಕನಸೋ ಭ್ರಮೆಯೋ ನನಸೋ ಎಂದು ಮೈ ಚಿವುಟಿ ನೋಡಿಕೊಳ್ಳುವಂತೆ ಮಾಡುತ್ತದೆ..

    ಆನಂದ್‌ ಜಿ
    ಆನಂದ್‌ ಜಿ
    “ಡಬ್ಬಿಂಗ್ – ಇದು ಕನ್ನಡಿಗರ ಆಯ್ಕೆ ಸ್ವಾತಂತ್ರದ ಹಕ್ಕೊತ್ತಾಯ” ಹಾಗೂ “ಡಬ್ಬಿಂಗ್ – ಇದು ಕನ್ನಡಪರ” ಪುಸ್ತಕಗಳ ಬರಹಗಾರರು. ಕನ್ನಡಕ್ಕೆ ಡಬ್ಬಿಂಗ್ ತರಬೇಕೆನ್ನುವ ಜಾಗೃತಿಯನ್ನು 2006ರಿಂದಲೂ ಮೂಡಿಸುತ್ತಾ ಬಂದಿದ್ದಾರೆ ಮತ್ತು ಡಬ್ಬಿಂಗ್ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡ ಕನ್ನಡಿಗ ಕರ್ನಾಟಕ – ಇವುಗಳ ಕುರಿತು ಹತ್ತಾರು ಪುಸ್ತಕಗಳನ್ನು ಹೊರತಂದಿದ್ದಾರೆ. ಬನವಾಸಿ ಬಳಗ ಕನ್ನಡಪರ ಸಂಸ್ಥೆಯ ಹಾಲಿ ಅಧ್ಯಕ್ಷರು ಮತ್ತು “ನುಡಿ ಸಮಾನತೆ ಮತ್ತು ಹಕ್ಕು ಚಳವಳಿ” ಸಂಸ್ಥೆಯ ಉಪಾಧ್ಯಕ್ಷರು. ನಾಡು ನುಡಿ ಕುರಿತಾದ ಜಾಗೃತಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದಾರೆ..
    spot_img

    More articles

    2 COMMENTS

    1. SPB ಬಗೆಗಿನ ಎರಡೂ ಲೇಖನಗಳು ಬಹಳ ಸ್ವಾರಸ್ಯವಾಗಿವೆ. ಧನ್ಯವಾದಗಳು.

    2. ಆನಂದ. ಜಿ. ನನ್ನ ಹತ್ತಿರದ ಸಂಬಧಿ ಹೌದು. ಈಗ್ಗೆ ಸುಮಾರು ವರ್ಷಗಳ ಹಿಂದೆ ಅವರ ಮನೆಯಲ್ಲಿ ಭೇಟಿಯಾದಾಗ ನಾನು ಬರೆದ ವಂಶ ವೃಕ್ಷದ ನಕಾಶೆ ನೋಡಿ ಖುಷಿ ಪಟ್ಟಿದ್ದ. ಅಂತೆಯೇ ತಾನು ಬರೆದ “ಕಾಫಿ ಆಯ್ತಾ ಗುರು “ಎಂಬ ಪುಸ್ತಕ ನೀಡಿದ್ದು ನೆನಪಿದೆ. ಆತ ಸಾಮಾಜಿಕ ಕ್ಷೆತ್ರ ದಲ್ಲಿ ಬಹಳಷ್ಟು ಕೆಲಸಗಳನ್ನು, ತಾನೇ ಕಟ್ಟಿ ಪೋಷಿಸುತ್ತಿರುವ ಬನವಾಸಿ ಬಳಗದ ಮೂಲಕ ಮಾಡುತ್ತಿರುವನು. ಆತನ ಬರವಣಿಗೆ ಉತ್ತಮವಾಗಿದೆ.
      ಬಹಳ ದಿನಗಳ ನಂತರ ಶ್ರೀ SB. ಬಾಲಸುಬ್ರಹ್ಮಣ್ಯ ರವರ ಕುರಿತು ನೆನಪಿನ ಬುಟ್ಟಿಯನ್ನು ಹಂಚಿಕೊಂಡಿದ್ದು ಖುಷಿ ನೀಡಿತು.

      ಇನ್ನೂ ಮುಂದೆಯೂ ಆನಂದ್ ಜಿ. ಯ ಬರಹಗಳು ಕನ್ನಡಪ್ರೇಸ್ ಡಾಟ್ ಕಾಂ ನಲ್ಲಿ ನೋಡಲು ಇಚ್ಛಿಸುತ್ತೇನೆ. ಶುಭವಾಗಲಿ 🙏

    LEAVE A REPLY

    Please enter your comment!
    Please enter your name here

    Latest article

    error: Content is protected !!