25.1 C
Karnataka
Sunday, November 24, 2024

    ಸರಕಾರಿ ಶಾಲೆ ಶಿಕ್ಷಕರ ಮಾದರಿ ಕೆಲಸ

    Must read

    ಸಂತೆಬೆನ್ನೂರು ಫೈಜ್ನಟ್ರಾಜ್

    ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ ಇಲ್ಲೊಂದು ಶಾಲೆ ಅದಕ್ಕೆ ಅಪವಾದ. ಶಿಕ್ಷಕರ ಆಸಕ್ತಿಯ ಫಲವಾಗಿ ಗಮನ ಸೆಳೆಯುತ್ತಿದೆ.

    ದಾವಣಗೆರೆ ಜಿಲ್ಲೆ ಸಂತೇಬೆನ್ನೂರಿನ ಈ ಶಾಲೆಯ ಈಗಿನ ಹೆಸರು ಕರ್ನಾಟಕ ಪಬ್ಲಿಕ್ ಸ್ಕೂಲ್ .ಇದು 1948 ರಲ್ಲಿ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಆರಂಭಗೊಂಡ ಶಾಲೆ. ಒಂದು ಕಾಲದಲ್ಲಿ ಸುತ್ತಲ ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಇದೇ ಶಿಕ್ಷಣ ಕೇಂದ್ರವಾಗಿತ್ತು.

    72 ವರುಷ ದಾಟಿ ಸಾಗುತ್ತಿರುವ ಶಾಲೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ತಳಹದಿಯೊಂದಿಗೆ ಜ್ಞಾನ ದ ಹಸಿವನ್ನು ತಣಿಸುತ್ತಾ ಸಾಗಿದೆ. ಕಾಲ ಬದಲಾದಂತೆ ಮಕ್ಕಳು ಶಿಕ್ಷಕರು ಬದಲಾದಂತೆ ಶಾಲೆಯೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಲದ ಜೊತೆಯಲ್ಲಿ ಹೆಜ್ಜೆ ಹಾಕುತ್ತಾ ಉತ್ತಮ ಫಲಿತಾಂಶ ದ ಜೊತೆಗೆ ತಂತ್ರಜ್ಞಾನ, ಹೊಸ ಕಟ್ಟಡ, ನವೀನ ಶಿಕ್ಷಣ ಮೈಗೂಡಿಸಿಕೊಂಡು ಜಿಲ್ಲೆಯ ಉತ್ತಮ ಶಾಲೆ ಎನ್ನಿಸಿದೆ.

    ಒಂದೇ ಸೂರಿನಡಿ ಶಿಕ್ಷಣ

    ಈ ಎರಡು ಮೂರು ವರ್ಷಗಳಿಂದ ‘ ಒಂದೇ ಸೂರಿನಡಿ ಶಿಕ್ಷಣ’ ಎಂಬ ಸರ್ಕಾರದ ಹೊಸ ಯೋಜನೆಯ ಅನ್ವಯ ಪ್ರಾಯೋಗಿಕವಾಗಿ ಆರಂಭಗೊಂಡ’ ಕರ್ನಾಟಕ ಪಬ್ಲಿಕ್ ಸ್ಕೂಲ್’ ಪಟ್ಟಿಯಲ್ಲಿ ಸಂತೆಬೆನ್ನೂರು ಸರ್ಕಾರಿ ಪ್ರೌಢಶಾಲೆ ಯೂ ಸೇರಿ ನಾವಿನ್ಯತೆಗೆ ಒಗ್ಗಿಕೊಂಡು ಶೈಕ್ಷಣಿಕ ಪ್ರಗತಿ ಮಾಡುತ್ತಿದೆ.

    ಕಾಲನ ಹೊಡೆತಕ್ಕೆ ಸಿಕ್ಕಿ ಎಲ್ಲಾ ಕ್ಷೇತ್ರ ಗಳು ಕೋವಿಡ್,ಕರೋನದ ಅಡಿಯಲ್ಲಿ ನಜ್ಜುಗುಜ್ಜಾಗಿದ್ದು ಜಗಜ್ಜಾಹಿರಾಗಿದ್ದು ಎಲ್ಲರು ಬಲ್ಲರು. ಅದಕ್ಕೆ ಶಾಲೆಗಳೂ ಹೊರತಲ್ಲ.
    ಕಳೆದ ಮಾರ್ಚ್ ನಿಂದ ಮಕ್ಕಳು ಶಾಲೆಯ ಮುಖ ನೋಡಿಲ್ಲ.ಶಿಕ್ಷಕ ವೃಂದ ಬಂದರೂ ಒಳ ಹೋಗದೇ ಹೊರಗಿಂದ ಹೊರಗೇ ಕಾರ್ಯ ಚಟುವಟಿಕೆ ಮಾಡುತ್ತಾ ಬಂದರು.

    ಇದೀಗ ಸ್ವಲ್ಪ ಹೌದೋ ಅಲ್ಲವೋ ಅನ್ನುವಂಥಾ ತಣ್ಣನೆಯ ವಾತಾವರಣ ಮತ್ತು ಮಕ್ಕಳು ಶಾಲೆಗೆ ಮರಳುವ ಆಶಾಕಿರಣ ಕಾಣಿಸುತ್ತಿದೆ.
    ಆ ನಿಟ್ಟಿನಲ್ಲಿ ಈ ಸಂತೆಬೆನ್ನೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಎಲ್ಲಾ ಶಿಕ್ಷಕ, ಶಿಕ್ಷಕಿಯರು ಒಮ್ಮತದಿಂದ ಮುಂಬರುವ ಮಕ್ಕಳ ಆರೋಗ್ಯ ದ ದೃಷ್ಟಿಯಿಂದ ಇಡೀ ಶಾಲೆಯನ್ನು ಅಮೂಲಾಗ್ರ ವಾಗಿ ಶುಚಿಗೊಳಿಸುತ್ತಿದ್ದಾರೆ.

    ತಾರಸಿ,ಗೋಡೆ,ಕೊಠಡಿಗಳು, ಅಂಗಳ,ಹಿತ್ತಲು, ಕಸಕಡ್ಡಿ ಎಲ್ಲಾ ಒಪ್ಪ ಒರಣ ಮಾಡುತ್ತಿದ್ದಾರೆ. ಲಿಂಗ ತಾರತಮ್ಯ ಇಲ್ಲದೇ ಅನ್ನ ಕೊಡುವ ಮಕ್ಕಳಾಗಮನಕ್ಕೆ, ಕರೋನ ಮುಂಜಾಗ್ರತಾ ಕ್ರಮಕ್ಕೆ ಇಡೀ ಶಾಲೆ ಸುಂದರಗೊಳಿಸುತ್ತಿದ್ದಾರೆ.

    ಸ್ವತಃ ಸಲಿಕೆ,ಗುದ್ದಲಿ,ಹಾರೆ ಪುಟ್ಟಿ ಹಿಡಿದು ಒಂದು ಕಡೆಯಿಂದ ಕಸ ತೆಗೆದು ಅಡ್ಡಾದಿಡ್ಡಿ ಬೆಳದ ಕೊಂಬೆರಂಬೆಗಳಿಗೆ ಆಕಾರಕೊಟ್ಟು, ಅಲಂಕಾರಿಕ ಸಸಿ ನೆಟ್ಟು, ಇರುವ ಗಿಡಗಳಿಗೆ ನೀರು ನಿಲ್ಲುವ ವ್ಯವಸ್ಥೆ ಮಾಡಿ ,ಗೊಬ್ಬರ ಹಾಕಿ ಮತ್ತೆ ಹೊಸ ಸಸಿ ನೆಟ್ಟು ಮುಂದಿನ ದಿನಗಳಲ್ಲಿ ಶಾಲೆ ಹಸಿರಿನಿಂದ ನಳನಳಿಸುವ ಆಲೋಚನೆ ಇಲ್ಲಿನ ಸಮಸ್ತ ಗುರು ವೃಂದದವರದು.

    ಸ್ವಂತ ಖರ್ಚಿನಿಂದ ಸುಣ್ಣ ಬಣ್ಣ ಮಾಡಿಸುವ ಆಲೋಚನೆಯೂ ಹೊಂದಿದ್ದು, ಸಧ್ಯ ಇಡೀ ಶಾಲೆಯನ್ನು ಕಸಮುಕ್ತ, ರೋಗಮುಕ್ತ, ಪ್ಲಾಸ್ಟಿಕ್ ಮುಕ್ತ ಮಾಡುವತ್ತ ಇಲ್ಲಿನ ಶಿಕ್ಷಕರು ದಾಪುಗಾಲು ಇಡುತ್ತಿದ್ದಾರೆ.

    ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ತಾನು ಬದಲಾಗಿ,ತನ್ನ ಪರಿಸರ ಬದಲಾಯಿಸಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸಬಲ್ಲ.

    ಸರ್ಕಾರಿ ಶಾಲೆ ಎಂಬ ಉದಾಸೀನ ತೊರೆದು, ಗುಣಾತ್ಮಕ ಶಿಕ್ಷಣ ಇಂದಿನ ದಿನಮಾನಗಳಲ್ಲಿ ಇಂತಹ ಶಾಲೆಗಳೆ ನೀಡುತ್ತಿವೆ ಎಂಬ ಭಾವನೆ ಮೂಡಿಸಿಕೊಂಡು ಸಮಾಜ,ಪೋಷಕರು,ಅಧಿಕಾರಿ ವರ್ಗ ಮುನ್ನಡೆದಾಗ ಸರಕಾರಿ ಶಾಲೆ ಉಳಿದಾವು…ಉಚಿತ ಶಿಕ್ಷಣ ಮತ್ತು ಸರ್ಕಾರದ ಸೌಲಭ್ಯಗಳನ್ನು ಪ್ರತಿ ಪ್ರಜೆ ಪಡೆದು ಗೌರವಯುತವಾಗಿ ಬಾಳಿಯಾನು!

    ಶಾಲೆಗಾಗಿ,ಶಾಲಾ ಮಕ್ಕಳಿಗಾಗಿ ನಾವೆಲ್ಲಾ ಶಿಕ್ಷಕರು ದುಡಿಯುತ್ತಿದ್ದೇವೆ .ಮಕ್ಕಳು ಬರುವ ಸಮಯವಾದ್ದರಿಂದ ಒಂದಿಷ್ಟು ಗುಡಿಯ ಸ್ವಚ್ಛತೆ ಸಾಗುತ್ತಿದೆ. ಜ್ಯೋತಿ ಕುಮಾರ್, ಗಣಿತಶಿಕ್ಷಕ

    ದೊಡ್ಡ ಶಾಲೆ ನಮ್ಮದು. ಮಕ್ಕಳ ಸಂಖ್ಯೇ ದಾವಣಗೆರೆ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನ. ಸರ್ಕಾರಿ ಶಾಲೆ ಎಂಬ ಅಸಡ್ಡೆ ಮಾಡದೇ ಒಗ್ಗಟ್ಟಿನಿಂದ ನಮ್ಮ ಮನೆ ಕೆಲಸ ಎಂಬಂತೆ ಶಾಲೆಯ ಶುದ್ಧತೆ ಮಾಡುತ್ತಿದ್ದೇವೆ. ಜೆ.ಒ ವಿಜಯ್ ಕುಮಾರ್

    ಸಂತೆಬೆನ್ನೂರು ಫೈಜ್ನಟ್ರಾಜ್ ವೃತ್ತಿಯಿಂದ ಇದೇ ಶಾಲೆಯಲ್ಲಿ ಶಿಕ್ಷಕ. ಪ್ರವೃತ್ತಿಯಿಂದ ಕವಿ, ಕಥೆಗಾರ , ಸಾಹಿತಿ.

    spot_img

    More articles

    6 COMMENTS

    1. ಇದಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರೂ ಅಭಿನಂದನಾರ್ಹರು.

    2. ನಮ್ಮೂರ ನಾವು ಓದಿದ ಪ್ರೌಢಶಾಲೆ ನೆನಪುಗಳ ಆಗರ. ಜಿಲ್ಲೆಯ ಅತ್ಯುತ್ತಮ ಶಾಲೆಯನ್ನಾಗಿ ಪರಿವರ್ತಿಸಿದ ಕೀರ್ತಿ ಇಂದಿನ ಶಿಕ್ಷಕರಿಗೆ ಸಲ್ಲುತ್ತದೆ. ಕೋವಿಡ್ ಸಂಕಷ್ಟದ ಲ್ಲಿಯೂ ಶಿಕ್ಷಕರು ಸತತ ಶಾಲಾ ಕಟ್ಟಡ ಹಾಗೂ ಆವರಣ ಸ್ವಚ್ಚತಾ ಕಾರ್ಯ ರಾಜ್ಯಕ್ಕೆ ಮಾದರಿ

    3. ಹಳೆಯ ಸುಮಧುರ ನೆನಪುಗಳನ್ನು ಮೆಲುಕು ಹಾಕುವಂತಹ ಅವಕಾಶ ಕಲ್ಪಿಸುವ ಈ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ

    4. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಕಲಿಸುವ ಮೌಲ್ಯ ಗಳು ಖಾಸಗಿ ಶಾಲೆಯಲ್ಲಿ ಇರಲ್ಲ. ಇಂತಹ ವಾತಾವರಣ ನಿರ್ಮಾಣ ಮಾಡಲು ಶ್ರಮಿಸುತ್ತಿರುವ ಎಲ್ಲ ಶಿಕ್ಷಕರಿಗೆ ವಂದನೆಗಳು

    5. ಪ್ರಾಥಮಿಕ ಶಾಲೆ ನಂತರದ ವಿದ್ಯಾಭ್ಯಾಸ ವನ್ನು SSJVP ಶಾಲೆಯಲ್ಲಿ ಓದಿದ್ದು ಹಚ್ಚ ಹಸಿರಾಗಿದೆ. ಆ ಶಾಲೆಗೆ ಸೇರಿದ ಮೇಲೆ ನಮ್ಗೆಲ್ಲಾ ಒಂದು ರೀತಿಯ ಪ್ರೌಢಿಮೆ ಬಂದಿತ್ತು. ನಮ್ಮ ಊರಿಗೆ ಇರುವ ಶಾಲೆಗಳಲ್ಲಿಯೇ ದೊಡ್ಡದಾದ ಮೈದಾನ ಹೊಂದಿದ್ದ ಶಾಲೆ ಎಂದರೆ ಅದು SSJVP ಶಾಲೆಯ ಆವರಣ. ಅಲ್ಲಿ ಒಂದು ಬನ್ನಿ ಮರ ಇತ್ತು ಪ್ರತಿವರ್ಷ ವಿಜಯದಶಮಿ ಹಬ್ಬಕ್ಕೆ ಬನ್ನಿ ಮುಡಿಯಲು ಸುತ್ತ ಮುತ್ತಲಿನ ಊರಿನ ದೇವರುಗಳು ಅಲ್ಲಿ ಸೇರುತ್ತಿದ್ದುದು ನಮ್ಗೆಲ್ಲಾ ಸಂಭ್ರಮ. ಅಂತೆಯೇ ಆ ಮೈದಾನದಲ್ಲಿ ರಾಜಕೀಯ ಮುಖಂಡರುಗಳ ಭಾಷಣ ಇರುತ್ತಿತ್ತು. ಒಮ್ಮೆ ತರಳ ಬಾಳು ಹುಣ್ಣಿಮ್ಮೆಯ ಕಾರ್ಯಕ್ರಮ ನಡೆದಿತ್ತು. ಆಗಿನ ಕೇಂದ್ರ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಅವರ ಭಾಷಣ ಕ್ಕೆ ಸಾಕ್ಷಿ ಯಾಗಿತ್ತು. ಈ ಎಲ್ಲಾ ನೆನುಪುಗಳನ್ನು ಮರುಕಳಿಸುವಂತೆ ಮಾಡಿರುವಿರಿ. ಸ್ವಚ್ಚ ಭಾರತ ಕಲ್ಪನೆಯ ಸಾಕಾರ ಮಾಡಿದ ಶಿಕ್ಷಕರ ಶ್ರಮ ಅನುಕರಣೀಯ. ವಿದ್ಯಾರ್ಥಿಗಳು ಗುರು ಬೋಧಿಸಿದ್ದನ್ನು ಅನುಸರಿಸುವುದಿಲ್ಲ. ಗುರುಗಳು ಮಾಡಿದ್ದನ್ನು ಅನುಸರಿಸುವರು. ವಿದ್ಯಾರ್ಥಿ ಸಮುದಾಯಕ್ಕೆ ಉತ್ತಮ ಮಾರ್ಗದರ್ಶನ ನೀಡಿದ ತಮ್ಮೆಲ್ಲರಿಗೂ ಹೃತ್ಪೂರ್ವಕ ನಮನಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!