ಬಳಕೂರು ವಿ ಎಸ್ ನಾಯಕ
ನಾವು ಪ್ರತಿನಿತ್ಯ ಉಪಯೋಗಿಸುವ ತೆಂಗಿನ ಚಿಪ್ಪನ್ನು ಸಾಮಾನ್ಯವಾಗಿ ಒಲೆಗೆ ಉರುವಲಾಗಿ ಬಳಸುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ಕಲಾವಿದ ನಿರುಪಯುಕ್ತ ವಸ್ತುಗಳಾದ ಕರಟ ಮತ್ತು ಮರದ ಬೇರಿನಲ್ಲಿ ತಮ್ಮ ಕೈಚಳಕದ ಮೂಲಕ ಕಲಾಕೃತಿಗಳನ್ನು ರಚಿಸಿ ಎಲ್ಲರ ಆಕರ್ಷಣೆಯ ಬಿಂದುವಾಗಿದ್ದಾರೆ.
ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನ ಶಿವಮೂರ್ತಿ ಭಟ್ಟರು. ಪ್ರಗತಿ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ. ಇವರಿಗೆ ಕಲಾಸಕ್ತಿ ಮೂಡಿದ್ದು ಇವರ ತಂದೆಯವರಿಂದ. ಅವರೂ ಕೂಡ ಕಲಾವಿದರು. ಅವರು ಮಾಡಿದ ಮರದ ಕಲಾಕೃತಿಗಳಿಗೆ ಮನಸೋತ ಇವರು ತಾವೂ ಕೂಡ ಇಂತಹ ವಿಭಿನ್ನ ಕಲಾಕೃತಿಗಳನ್ನು ರಚಿಸುವುದರ ಮೂಲಕ ಎಲ್ಲರೂ ಒಂದು ಕ್ಷಣ ಹುಬ್ಬೇರಿಸುವಂತೆ ಮಾಡಿದ್ದಾರೆ.
ಯಾವುದೇ ಒಂದು ಮರವನ್ನು ಕಿತ್ತಾಗ ಅಥವಾ ಅದು ಗಾಳಿ ಮಳೆಗೆ ಬಿದ್ದಾಗ ಅದರ ಬೇರು ಸಾಮಾನ್ಯವಾಗಿ ಯಾವುದಕ್ಕೂ ಬಳಕೆ ಯಾಗುವುದಿಲ್ಲ. ಆದರೆ ಅದರಲ್ಲಿಯೇ ಕಲೆ ಅರಳಿಸಬಹುದು ಎಂದು ಅರಿತ ಶಿವಮೂರ್ತಿ ಭಟ್ಟರು ಮರಗಳ ಬೇರು ಮತ್ತು ಕರಟದಲ್ಲಿ ಬಹಳ ತಾಳ್ಮೆಯಿಂದ ಪರಿಸರದ ವಿಭಿನ್ನ ವಿಷಯಗಳನ್ನು ತೆಗೆದುಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಕೂಡ ಈ ಕಲಾಕೃತಿಗಳ ಮೂಲ ಗುರುತಿಸುವುದು ಕಷ್ಟ. ಅಷ್ಟು ಸೊಗಸಾದ ರಚನೆ.
ಇವರಲ್ಲಿ ಹಕ್ಕಿಗಳ ಗೂಡು, ಮಾನವ, ಪಕ್ಷಿಗಳ, ಪ್ರಾಣಿಗಳ, ಹಾವು, ಆದಿಮಾನವ, ನಮ್ಮ ಹಳ್ಳಿಯ ಸಂಸ್ಕೃತಿ, ವೇಷಭೂಷಣಗಳು, ಕುದುರೆ, ಕಪ್ಪೆ, ದೇವರುಗಳನ್ನು ಹೋಲುವ ಮರದ ಬೇರಿನ ಕಲಾಕೃತಿಗಳ ಸಂಗ್ರಹವಿದೆ. ಇವರು ಬರೀ ಕೆತ್ತನೆ ಒಂದೇ ಅಲ್ಲದೆ ಅನ್ಯ ಮಾಧ್ಯಮದ ಮೂಲಕ ಕಲಾಕೃತಿಗಳನ್ನು ರಚಿಸಿದ್ದಾರೆ. ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ತೆಂಗಿನ ಚಿಪ್ಪು ಮತ್ತು ಮರದ ಬೇರುಗಳ ಕಲಾಕೃತಿಗಳು ಇವರ ಬಳಿಯಿದೆ. ಹವ್ಯಾಸ ಬೆಳೆಸಿಕೊಂಡ ಶಿವಮೂರ್ತಿ ಭಟ್ಟರವರು ಕಸದಿಂದ ರಸ ಎಂಬ ಕಲ್ಪನೆಯ ಮೂಲಕ ನಿರುಪಯೋಗಿ ವಸ್ತುಗಳಲ್ಲಿ ಕೂಡ ವಿಭಿನ್ನ ಆಕರ್ಷಕ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆಯಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಇಂತಹ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಲ್ಲಿಯ ಆಸಕ್ತರಿಗೆ ಈ ಕಲೆಯನ್ನು ತರಬೇತಿ ಮೂಲಕ ಹೇಳಿಕೊಡುವ ಆಸಕ್ತಿ ಅವರಲ್ಲಿದೆ. ಆಸಕ್ತಿ, ಗುರಿ ಹೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಯಾವುದೂ ಕೂಡ ಆಗಲ್ಲ ಎಂದು ಕುಳಿತರೆ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ಶಿವಮೂರ್ತಿ ಭಟ್ಟರವರ ಅಭಿಪ್ರಾಯ. ಇಂತಹ ಅದ್ಭುತ ಕಲಾ ಪ್ರಕಾರವನ್ನು ರಚಿಸುವ ಇವರಿಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ. ಇವರ ಈ ಅದ್ಭುತ ಕಲಾ ಸೇವೆಗೆ ನಮ್ಮೆಲ್ಲರ ಹೃದಯಪೂರ್ವಕ ನಮನಗಳು. ಇನ್ನಷ್ಟು ವಿಭಿನ್ನ ಕಲಾ ಸೇವೆ ಇವರದ್ದಾಗಲಿ ಎಂಬ ಹಾರೈಕೆ ನಮ್ಮದು.
ವಿ. ಎಸ್ . ನಾಯಕ
ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸಕರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.
ಕಲಾವಿದನ ಕೈ ಚಳಕ
ಕಲಾ ಕುಶಲತೆ ಅದ್ಭುತ
ಚೆಂದದ ಪರಿಚಯ ಲೇಖನ
ಕಲಾಕೃತಿಗಳು ಬಹಳ ಸುಂದರವಾಗಿವೆ..
ಕಲಾಕೃತಿ ರಚನಾ ಕೈಚಳಕ ಅದ್ಬುತ
ಅಧ್ಬುತ ಕೈ ಚಳಕ. ಉತ್ತಮ ಲೇಖನ.
ಕಲಾವಿದನ ಅದ್ಭುತ ಕೈಚಳಕ. ಸವಿವರವಾದ ಲೇಖನ.