ಇಂದಿನ ಕ್ಯಾಂಪಸ್ ಪ್ರೆಸ್ ಅಂಕಣದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು ಇಲ್ಲಿನ ದ್ವಿತೀಯ ಬಿಎ ಪತ್ರಿಕೋದ್ಯಮ ವಿಭಾಗದ ಪ್ರಮೀಳಾ ಗ್ರಾಮೀಣ ಭಾಗದಲ್ಲಿ ಆನ್ ಲೈನ್ ಶಿಕ್ಷಣ ನೀಡುವಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಗುಡ್ಡ, ಕಾಡು -ಮೇಡುಗಳ ನಡುವೆ, ನಿಸರ್ಗದ ಮಡಿಲಲ್ಲಿರುವ ಜಾಗವೇ ಹಳ್ಳಿ. ಆಧುನೀಕತೆಯ ಗಾಳಿ ಸೋಂಕದೇ ಇರುವುದು ಹಳ್ಳಿಗರ ನೆಮ್ಮದಿಯನ್ನು ಉಳಿಸಿದೆಯಾದರೂ ಇದೇ ಮುಂದೆ ತಮ್ಮ ಅಭಿವೃದ್ಧಿಗೆ ಕುತ್ತಾಗಬಹುದು ಎಂಬ ಆತಂಕ ಇವರಲ್ಲಿದೆ. ಅದರಲ್ಲೂ ಕೋವಿಡ್‌ನಿಂದಾಗಿ ಶಿಕ್ಷಣವೂ ಆನ್‌ಲೈನ್ ಆಗಿರುವುದು ಇವರ ಚಿಂತೆ ಹೆಚ್ಚಿಸಿದೆ.
ಹಳ್ಳಿಗಳೇ ನಮ್ಮ ದೇಶದ ಆತ್ಮ ಎಂಬ ಮಾತಿದೆ. ಎಲ್ಲಾ ಸರ್ಕಾರಗಳೂ ಹಳ್ಳಿಗಳ, ಕೃಷಿಕರ ಅಭಿವೃದ್ಧಿಯೇ ನಮ್ಮ ಆದ್ಯತೆ ಎಂದು ಹೇಳಿದ್ದೂ ಆಯಿತು. ಆದರೆ ‘ಗ್ಲೋಬಲ್ ವಿಲೇಜ್ʼ ಪರಿಕಲ್ಪನೆ ಹಳತಾದರೂ ಹಳ್ಳಿಗರ ಪರಿಸ್ಥಿತಿ ಬದಲಾಗಿಲ್ಲ. ತಾವು ಹಸಿದರೂ ಊರಿಗೆಲ್ಲಾ ಊಟ ಬಡಿಸುವ ಮುಗ್ಧ ಮನಸ್ಸಿನ ಹಳ್ಳಿಗರಿಗೆ ಆಧುನಿಕ ಸೌಲಭ್ಯಗಳು ದೊರೆಯುತ್ತಿಲ್ಲ. ತಾವಂತೂ ಓದಲಾಗಲಿಲ್ಲ, ತಮ್ಮ ಮಕ್ಕಳಾದರೂ ಓದಲಿ ಎಂದು ಅವರನ್ನು ಪೇಟೆಯ ಖಾಸಗಿ ಶಾಲೆಗೆ ಸೇರಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಬದಲಾಗಿ ಆಧುನಿಕ ಮನಃಸ್ಥಿತಿ, ಹಳ್ಳಿಯ ಪರಿಸ್ಥಿತಿ ಒಟ್ಟಾಗಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ!
ಆಗಲೇ ಬಂತು ನೋಡಿ ಕೊವಿಡ್-19! ಶಿಕ್ಷಣವನ್ನೂ ಸೇರಿ ಎಲ್ಲವನ್ನೂ ಆನ್‌ಲೈನ್ ಮಾಡಿದ ಕೊವಿಡ್ ಹಳ್ಳಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮೊದಲೇ ಸಾಲ-ಸೋಲ ಮಾಡಿ ಮಕ್ಕಳನ್ನು ಓದಿಸುತ್ತಿದ್ದ ಜನರಿಗೆ ಈಗ ಮಕ್ಕಳಿಗೆ ಮೊಬೈಲ್ ಪೋನ್, ಲ್ಯಾಪ್‌ಟಾಪ್ ಕೊಡಿಸುವ ಚಿಂತೆ. ವಸ್ತುಸ್ಥಿತಿಯೆಂದರೆ ಎಷ್ಟೋ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಸರಿಯಾಗಿರುವುದಿಲ್ಲ. ಇನ್ನು ಮೊಬೈಲ್ ಟವರ್ ಇಲ್ಲವೇ ಇಲ್ಲ. ಇದ್ದರೂ ನೆಟ್‌ವರ್ಕ್ ಸರಿಯಾಗಿಲ್ಲ. ಇವರಿಗೆಲ್ಲಿಯ ಆನ್‌ಲೈನ್ ಶಿಕ್ಷಣ?!
ಸಾಲ ಮಾಡಿ ಮಕ್ಕಳ ಶುಲ್ಕ ಕಟ್ಟಿ, ಅವರ ಸಮವಸ್ತ್ರ, ಪುಸ್ತಕ, ಬ್ಯಾಗ್, ಕೊಡಿಸುವ, ಎಲ್ಲರಂತೆ ನನ್ನ ಮಗು ಶಿಕ್ಷಣ ಪಡೆಯಲಿ ಎಂದು ಬಯಸುವ ಹೆತ್ತವರ ಪ್ರಶ್ನೆಗಳಿಗೆ ಏನನ್ನುತ್ತದೆ ನಮ್ಮ ಆಡಳಿತ? ಇರುವ ಅರ್ಧ ಎಕರೆ ತೋಟ, ಹೊಲಗಳನ್ನು ನಂಬಿ ಬದುಕುವ ಹಳ್ಳಿ ಜನಕ್ಕೆ ಮಳೆ ಬಂದರೆ ಬಿತ್ತಿದ ಬೆಳೆ ಕೈ ಸೇರುತ್ತದೆ. ಇಲ್ಲವಾದರೆ ಕೈ ತಪ್ಪಿ ಹೋಗುತ್ತದೆ. ಹಾಗಾಗಿ ಸ್ವಂತ ಹೊಲ, ಗದ್ದೆಗಳಿಗೆ ಖರ್ಚು ಮಾಡಲು ಸಾಧ್ಯವಾಗದ ಹಳ್ಳಿ ಮಂದಿಗೆ ಇನ್ನೂ ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ ಹೇಗೆ ಕೊಡಿಸಲು ಸಾಧ್ಯ?
ಹಲವು ಹಳ್ಳಿಗಳಿಗೆ ಇನ್ನೂ ಸೀಮೆಎಣ್ಣೆ ದೀಪ ಅಥವಾ ಮೊಂಬತ್ತಿಗಳೇ ಆಧಾರ. ಇದಕ್ಕೆ ಪರಿಹಾರವಾಗಿ ಸರ್ಕಾರ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಅಳವಡಿಸಲು ಸೂಚಿಸಿದೆ ಎಂಬುದೇನೋ ಸತ್ಯ. ಆದರೆ ವಿದ್ಯುತ್ ಸಂಪರ್ಕ ಇರುವ ಹಳ್ಳಿಗಳಲ್ಲೇ ಮರದ ಕೊಂಬೆ ತಗುಲಿಯೋ ಅಥವಾ ಮಳೆಯಿಂದಾಗಿ ಕಂಬ ಮುರಿದು ವಾರ-ತಿಂಗಳುಗಟ್ಟಲೆ ವಿದ್ಯುತ್ ಇಲ್ಲದಂತಾಗುವುದು ಹೊಸ ಸಂಗತಿಯಲ್ಲ. ಇಷ್ಟಾಗಿಯೂ, ಸಾಲ ಮಾಡಿಯಾದರೂ ಮೊಬೈಲ್, ಲ್ಯಾಪ್‌ಟಾಪ್ ಕೊಡಿಸೋಣಾ ಎಂದಿಟ್ಟುಕೊಳ್ಳೋಣ. ಮಾಡಿದ ಸಾಲ ತೀರಿಸಲು ಅವರು ಮತ್ತೊಂದು ಸಾಲ ಮಾಡಬೇಕಾಗಿದೆ ಎಂಬುದು ದುರಂತ ಸತ್ಯ.
ಹಳ್ಳಿಯ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಆಲಿಸಲು ಸಾಧ್ಯವಾಗುತ್ತಿಲ್ಲ ಅಥವಾ ತುಂಬಾ ಕಷ್ಟವಾಗುತ್ತದೆ. ಅಷ್ಟಿಷ್ಟು ಚಾರ್ಜ್ ಮಾಡಿದ ಮೊಬೈಲ್ ಒಂದು ಕ್ಲಾಸ್ ಆಗುವಷ್ಟರಲ್ಲಿ ಆಫ್ ಆಗಿರುತ್ತದೆ. ಈ ಸಮಸ್ಯೆಯಿಂದ ಮಗು ಆ ದಿನದ ಪಾಠ ಕೇಳಲು ಸಾಧ್ಯವಾಗದ್ದಿದ್ದಾಗ ಕಲಿಕೆಯಲಿ ಹಿಂದುಳಿಯುವ ಸಾಧ್ಯತೆ ಇದೆ. ಹಾಗಾಗಿ ಆನ್ಲೈನ್ ಕ್ಲಾಸ್ಸಲ್ಲಿ ತರಗತಿ ನಡೆಸಿದರೂ ಆಫ್ ಲೈನ್ ಕ್ಲಾಸ್ ನಡೆಸಬೇಕು. ನೆಟ್ವರ್ಕಿಗಾಗಿ ಗುಡ್ಡ, ಕಾಡು ಅಲೆಯುವಾಗ ಪಾಠ ಮುಗಿದುಹೋಗಿರುತ್ತದೆ.
ಇದನು ಓದಿದಾಗ ನನ್ನ ಊರಿನ ಮಕ್ಕಳು ಈಗ ಪರದಾಡುತ್ತಿರುವ ಪರಿಸ್ಥಿತಿ ನೆನಪಾಯಿತು. ದಟ್ಟ ಕಾಡಿನ ಮಧ್ಯೆ ಮನೆ. ಇಡೀ ದಿನ ಜೋರಾದ ಮಳೆ ಕರೆಂಟ್ ಇಲ್ಲ. ಗುಡ್ಡದ ಮೇಲೆ ಮಳೆ ಗಾಳಿಯ ಜೊತೆ ಈ ಆನ್ ಲೈನ್ ಪಾಠ.
ಹೌದು ಈ ವರ್ಷ ಮಕ್ಕಳ ಪಾಲಿಗೆ ಒಂದು ದುಸ್ವಪ್ನವಾಗಿರಲಿದೆ