ಓವರ್ ಹೆಡ್ ಕೇಬಲ್ ಪಾಲಿಸಿ ಸಿದ್ಧಪಡಿಸುವವರೆಗೆ ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ಓವರ್ ಹೆಡ್ (OFC) ಕೇಬಲ್ ಗಳನ್ನು ತೆರವುಗೊಳಿಸದಂತೆ ಉಪಮುಖ್ಯಮಂತ್ರಿ ಡಾ. ಸಿ ಎನ್. ಅಶ್ವತ್ಧನಾರಾಯಣ ಸೂಚಿಸಿದ್ದಾರೆ.ಈ ಬಗ್ಗೆ ಮುಖ್ಯಕಾರ್ಯದರ್ಶಿಗಳಿಗೆ ಅವರು ಬರೆದ ಪತ್ರ ಕನ್ನಡಪ್ರೆಸ್.ಕಾಮ್ ಗೆ ಲಭ್ಯವಾಗಿದೆ.
ಮಹಾನಗರಪಾಲಿಕೆ ಈ ಕುರಿತು ಈಚೆಗೆ ಹೊರಡಿಸಿರುವ ಸುತ್ತೋಲೆ ತಮ್ಮ ಗಮನಕ್ಕೆ ಬಂದಿದ್ದೂ ಅದರಂತೆ ಕೇಬಲ್ ತೆರವುಗೊಳಿಸಿದರೆ ಆಗುವ ತೊಂದರೆಗಳನ್ನು ಗಮನಿಸಿ ತಾವು ಈ ಸೂಚನೆ ನೀಡುತ್ತಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟದ ಕಾರಣದಿಂದ ತರಗತಿಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಅನೇಕ ಐಟಿ ಕಂಪೆನಿಗಳ ಕೆಲಸ ಆನ್ ಲೈನ್ (WORK FROM HOME) ನಲ್ಲೇ ನಡೆಯುತ್ತಿದೆ. ಹೀಗಾಗಿ ಕೇಬಲ್ ತೆರವು ಗೊಳಿಸಿದರೆ ಸಮಸ್ಯೆ ಆಗಬಹುದು ಎಂದು ಅವರು ಹೇಳಿದ್ದಾರೆ.
ವಿಶೇಷವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಓವರ್ ಹೆಡ್ ಕೇಬಲ್ (OFC) ಪಾಲಿಸಿ ಸಿದ್ಧ ಆಗುವವರೆಗೂ ಅವುಗಳನ್ನು ತೆರವು ಗೊಳಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲು ಅವರು ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.