26.2 C
Karnataka
Thursday, November 21, 2024

    ಹಸಿವು ನೀಗಿಸಿ ಹರುಷ ಕೊಡುವ ಸಂಚಿಗೊಂದು

    Must read

    ಹಸಿದ ಹೊಟ್ಟೆಗಳನ್ನು ತುಂಬಿಸುವ ಯೋಜನೆಯೊಂದು ಬೆಂಗಳೂರಿನಲ್ಲಿ ಸದ್ದಿಲ್ಲದೆ ಆರಂಭವಾಗುತ್ತಿದೆ. ಒಂದು ಹೊತ್ತಿನ ಕೂಳಿಗೂ ಒದ್ದಾಡುವ ಅನೇಕ ನಿರ್ಗತಿಕರ ಹೊಟ್ಟೆ ತುಂಬಿಸುವ ಕಾಯಕವೊಂದಕ್ಕೆ ನಾಳೆ ಚಾಲನೆ ಸಿಗಲಿದೆ.

    ಈ ಯೋಜನೆಗೆ ಪ್ರೇರಣೆಯಾಗಿದ್ದು ಖ್ಯಾತ ಚಿಂತಕ ಗುರುರಾಜ ಕರಜಗಿ ಅವರ ಒಂದು ಉಪನ್ಯಾಸ. ಈ ಉಪನ್ಯಾಸದಲ್ಲಿ ಅವರು ಪಾಶ್ಚಿಮಾತ್ಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ಒನ್ ಫಾರ್ ದಿ  ವಾಲ್ ಎಂಬ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದರು. ಈ ಉಪನ್ಯಾಸ ವಾಟ್ಸಾಪ್ ಲ್ಲಿ ಹರಿದಾಡುತ್ತಾ ಬನಶಂಕರಿಯ ಗುರುರಾಜ ಭಟ್ ಅವರನ್ನು ಸೇರಿತು.

    ಅರುಣ ಅಡಿಗ.

    ಗುರುರಾಜರದು ಇನ್ನೊಬ್ಬರಿಗೆ ತುಡಿಯುವ ಜೀವ. ಈ ವಾಟ್ಸಪ್ ಅವರನ್ನು ಸೇರಿದಾಗ ಅವರು ಬನಶಂಕರಿ ಕೊರೋನಾ ವಾರಿಯರ್ಸ್ ಎಂಬ ತಂಡ ಕಟ್ಟಿಕೊಂಡು ನಿರ್ಗತಿಕರಿಗೆ ಫುಡ್ ಪ್ಯಾಕೆಟ್ ಗಳನ್ನು ವಿತರಿಸುವ ಯೋಜನೆ ಹಾಕಿಕೊಂಡು ಕಾರ್ಯೋನ್ಮುಖರಾಗಿದ್ದರು. ಕರಜಗಿ ಅವರ ಮಾತು ಇವರಿಗೆ ಎಂಥ ಪ್ರೇರಣೆ ನೀಡಿತು ಎಂದರೆ ಒನ್ ಫಾರ್ ದಿ  ವಾಲ್ ಕಲ್ಪನೆಯನ್ನು ದೇಶೀಯವಾಗಿ ನಮ್ಮ ಬೆಂಗಳೂರಿನಲ್ಲೂ ಅಳವಡಿಸಬೇಕೆಂಬ ಚಿಂತನೆ ಮೂಡಿತು. ತಡ ಮಾಡದ ಅವರು ಇದನ್ನು ತಮ್ಮ ಸಹೋದರ ಸಂಬಂಧಿ ವಿದ್ಯಾರ್ಥಿ ಭವನದ ಮಾಲೀಕ ಅರುಣ ಅಡಿಗ  ಅವರೊಂದಿಗೆ ಪ್ರಸ್ತಾಪಿಸಿದರು. ಅರುಣ ಅಡಿಗ ಅವರದು  ಹೊಸ ಚಿಂತನೆಗಳಿಗೆ ಸದಾ ತೆರದುಕೊಳ್ಳುವ ಮನಸ್ಸು. ಅವರೂ ಕೂಡ ತಡ ಮಾಡದೆ ಸೂಪರ್ ಆಗಿದೆ ಐಡಿಯಾ.ಜಾರಿ ಮಾಡೋಣ ಎಂದೇ ಬಿಟ್ಟರು.

    ಈ ಐಡಿಯಾ ಸರಳ. ನೀವು ಒಂದು ಹೋಟೆಲ್ಲಿಗೆ ಹೋಗುತ್ತೀರಿ. ಅಲ್ಲಿ ತಿಂಡಿ ತಿನಿಸಿಗೆ ಆರ್ಡರ್ ಮಾಡುತ್ತೀರಿ. ನಿಮ್ಮ ಆರ್ಡರ್ ಜೊತೆ ಹಸಿದವರಿಗೆಂದು  ಮತ್ತೊಂದು ಆರ್ಡರ್  ಮಾಡುವುದು . ಈ ಆರ್ಡರ್ ಒಂದು ಟೋಕನ್ ರೂಪದಲ್ಲಿರುತ್ತದೆ. ಈ ಟೋಕನ್ ಅನ್ನು ನೀವು ಗಲ್ಲಾ ಪೆಟ್ಟಿಗೆ ಬಳಿ ಇರುವ ಸಂಚಿ (ಡಬ್ಬಿ)ಯಲ್ಲಿ ಹಾಕುವುದು. ನಿಮ್ಮಂಥ ದೊಡ್ಡ ಮನಸ್ಸಿನ ಹಲವರು ಮಾಡಿದ ಆರ್ಡರ್ ಗಳು ಟೋಕನ್ ರೂಪದಲ್ಲಿ ಈ ಸಂಚಿಯಲ್ಲಿ ಶೇಖರಣೆಯಾಗುತ್ತದೆ. ಹಸಿದವರು ಯಾವುದೇ ಸಂಕೋಚವಿಲ್ಲದೆ ಸಂಚಿಯಿಂದ ಒಂದು ಟೋಕನ್ ಪಡೆದು ಆಹಾರ ಸೇವಿಸಬಹುದು. ದಿನಗೂಲಿ ಕಾರ್ಮಿಕರು, ಬಡ ವಿದ್ಯಾರ್ಥಿಗಳು,ನಿರ್ಗತಿಕರು ಇದನ್ನು ಕೇಳಿ ಪಡೆಯಬಹುದು.

    ಯೋಜನೆಯೇನೋ ಚೆನ್ನಾಗಿದೆ. ಆದರೆ  ಒಂದೇ ಹೋಟೆಲಿನಲ್ಲಿ ಮಾತ್ರ ಈ ಜಾರಿಗೆ ಬಂದರೆ ಒಂದು ಭಾಗದ ಜನರಿಗೆ ಮಾತ್ರ ತಲುಪುತ್ತದೆ. ಮತ್ತು ಅದರ ಸಂಖ್ಯೆ ಸೀಮಿತವಾಗಿರುತ್ತದೆ. ಹಾಗೆಂದೇ ಅದನ್ನು ಬೆಂಗಳೂರು ಪೂರ್ತಿ ವಿಸ್ತರಿಸುವ ಪ್ಲಾನ್ ಶುರುವಾಯಿತು.

    ಮೊದಲ ಪ್ಲಾನಿಂಗ್ ಮೀಟಿಂಗ್ ಸಭೆ ನಡೆದದ್ದು ವಿದ್ಯಾರ್ಥಿ ಭವನದಲ್ಲೇ. ಈ ವೇಳೆಗೆ ಬನಶಂಕರಿ ಕೊರೋನಾ ವಾರಿಯರ್ಸ್ ತಂಡದ ಹರ್ಷ  ಮತ್ತು ರೋಟರಿ ಸೌತ್ ಪರೇಡ್ ನ ಆನಂದ  ಎಂಬ ಇಬ್ಬರು ಉತ್ಸಾಹಿ ತರುಣರು ಅರುಣ ಮತ್ತು ಗುರುರಾಜರ ಜೊತೆ ಸೇರಿದರು. ಹಸಿದ ಹೊಟ್ಟೆಗಳನ್ನು ತುಂಬಿಸುವ ಕನಸು ನನಸಾಗುವ ಯೋಜನೆ ಸಿದ್ಧವಾಯಿತು.

    ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸದಸ್ಯರೂ ಆಗಿರುವ  ಅರುಣ ಅಡಿಗರು ತಮ್ಮ ತಂಡದ ಕನಸನ್ನು ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಹಂಚಿಕೊಂಡರು. ಒಳ್ಳೆಯ ಕೆಲಸ ಮಾಡುತ್ತೇವೆ ಎಂದಾಗ ಬೇಡ  ಎನ್ನುವವರು ಯಾರು. ಅಧ್ಯಕ್ಷ ಪಿಸಿ ರಾವ್ ಪೂರ್ಣ ಬೆಂಬಲದೊಂದಿಗೆ ಕೈ ಜೋಡಿಸಿದರು.

    ಯೋಜನೆಯಂತೂ ಚೆನ್ನಾಗಿದೆ. ಹಸಿದವರಿಗೆ ಅನ್ನ ನೀಡುವ ಈ ಯೋಜನೆಗೆ ಇನ್ಫಾಸ್ಟ್ರಕ್ಚರ್ ಖರ್ಚೇನು ಬೀಳುವುದಿಲ್ಲ. ಇರುವ ಸೌಲಭ್ಯದಲ್ಲೇ  ಆರಂಭಿಸಬಹುದು ಎಂದು ಹೇಳುತ್ತಾರೆ ಅರುಣ ಅಡಿಗ. ಯೋಜನೆಯಲ್ಲಿ ಶೇಕಡ 20 ರಷ್ಟು ಅಪಾತ್ರ ದಾನ ಆದರೂ ಆಗಬಹುದು.  ಕೆಲಸ ಮಾಡದ ಸೋಮಾರಿಗಳು ದುರುಪಯೋಗ ಪಡಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನೊಂದಿಗೆ ಅರ್ಹರಿಗೆ ಮಾತ್ರ ಸೇರುವಂಥ ಪಕ್ಕಾ ಪ್ಲಾನ್ ಮಾಡಹುದು ಎಂದು ಅವರು ಕನ್ನಡಪ್ರೆಸ್ .ಕಾಮ್ ಗೆ ತಿಳಿಸಿದರು.

    ಹಲವರಿಗೆ ಹಸಿದವರಿಗೆ ಊಟ ಕೊಡುವ ಮನಸ್ಸು ಇರುತ್ತದೆ. ಆದರೆ ದಾರಿ ಇರವುದಿಲ್ಲ. ಇದಕ್ಕಾಗಿ ಅವರು ಎಲ್ಲಿಗೋ ಹುಡುಕಿಕೊಂಡು ಹೋಗಬೇಕಿಲ್ಲ. ಸಮೀಪದ ಹೋಟೆಲ್ಲಿಗೆ ಹೋಗಿ ಹಸಿದವರಿಗೆ ಅನ್ನ ನೀಡುವ ಯೋಜನೆಯಲ್ಲಿ ಕೈ ಜೋಡಿಸಬಹುದು ಎಂದು ಅಡಿಗರು ಹೇಳುತ್ತಾರೆ.

    ಈ ಬಗ್ಗೆ ಪೋಸ್ಟರ್ ಗಳನ್ನು  ಸಿದ್ಧಪಡಿಸಲಾಗಿದೆ. ನಾಳೆ  ಗಾಂಧಿಜಯಂತಿಯಂದು ಮಧ್ಯಾಹ್ನ 12 ಕ್ಕೆ ಕರ್ನಾಟಕ  ಚಿತ್ರ ಕಲಾ ಪರಿಷತ್ ನಲ್ಲಿ ನಡೆಯುವ ಸಮಾರಂಭದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುವುದು.

    ಬೆಂಗಳೂರಿನಲ್ಲಿ ಯೋಜನೆ ಯಶಸ್ಸು ಕಂಡ ನಂತರ ರಾಜ್ಯದ್ಯಂತ ವಿಸ್ತರಿಸುವ ಆಲೋಚನೆಯನ್ನು ಈ ತಂಡ ಹಾಕಿಕೊಂಡಿದೆ.

    ಒಂದು ಒಳ್ಳೆಯ ಉಪನ್ಯಾಸ ಒಂದು ಉತ್ತಮ ಕೆಲಸಕ್ಕೆ  ಹೇಗೆ ಪ್ರೇರಣೆ ನೀಡಬಲ್ಲದು ಎಂಬುದಕ್ಕೆ ಈ ಯೋಜನೆ ಉದಾಹರಣೆಯಾಗಿ ನಿಲ್ಲುತ್ತದೆ.

    ನೀವು ಹೇಗೆ ಭಾಗವಹಿಸಬಹದು

    1 ಹತ್ತಿರದ ಸಂಚಿಗೊಂದು ಯೋಜನೆ ಜಾರಿಯಲ್ಲಿರುವ ಹೋಟೆಲ್ಲಿಗೆ ಹೋಗಿ ನಿಮ್ಮ ಊಟ/ತಿಂಡಿಯ ಜೊತೆ ಸಂಚಿಗೊಂದು ಹೆಸರಿನಲ್ಲಿ ಮತ್ತೊಂದು ಊಟ/ ತಿಂಡಿ ಖರೀದಿಸುವುದು.

    2 ಸಂಚಿಗೊಂದು ಹೆಸರಿನ ಟೋಕನ್ ಅನ್ನು ಪಡೆದು ಅದಕ್ಕಾಗಿ ಮೀಸಲಿರಿಸಿರುವ ಡಬ್ಬಿಯಲ್ಲಿ ಹಾಕುವುದು.

    3 ಹಣ ಕೊಟ್ಟು ಊಟ ತಿಂಡಿ ಪಡೆಯಲಾಗದ ವ್ಯಕ್ತಿ ಸಂಕೋಚವಿಲ್ಲದೆ  ಸಂಚಿಯಿಂದ ಒಂದು ಎಂದು ಕೇಳಿ ಊಟ ಪಡೆಯುವುದು.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    5 COMMENTS

    1. ನಾನು ಒಂದು ವಿಡಿಯೋ ದಲ್ಲಿ ಈ concept ನೋಡಿದ್ದೆ. ತುಂಬಾ ಖುಷಿ ಎನ್ನಿಸಿತು. ಈಗ ನಮ್ಮಲ್ಲಿಯೂ ಬಂದಿರುವುದು ಕೇಳಿ ಇನ್ನೂ ಹೆಚ್ಚಿನ ಖುಷಿಯಾಗುತ್ತಿದೆ. ಹೋಟೆಲ್ ಗೆ ಹೋದಲ್ಲಿ ಖಂಡಿತ ಸಂಚಿಗೊಂದು ಕೂಪನ್ ತೆಗೆದುಕೊಳ್ಳುವೆ.ಈ ಯೋಜನೆಗೆ ಜಯಸಿಗಲಿ ಎಂದು ಹಾರೈಸುವೆ.

    2. ಉಪಯುಕ್ತ ಯೋಜನೆಯ ಲೇಖನ
      ಚೆನ್ನಾಗಿ ಮೂಡಿ ಬಂದಿದೆ

    LEAVE A REPLY

    Please enter your comment!
    Please enter your name here

    Latest article

    error: Content is protected !!