21.2 C
Karnataka
Sunday, September 22, 2024

    ಸಹಿಗಿರುವಷ್ಟೇ ಬೆಲೆ ಪೆನ್ನಿಗಿದೆ

    Must read

    ” ಪೆನ್ನು ” …. ಕನ್ನಡದಲ್ಲಿ ಮುದ್ದಾಗಿ ಲೇಖನಿಯೆಂದು ಕರೆಯಲ್ಪಡುವ ಪಠ್ಯಸಾಮಗ್ರಿ .ಬಾಲ್ಯದಲ್ಲಿ ನಾವುಗಳು ವಿದ್ಯಾಭ್ಯಾಸ ಶುರು ಮಾಡಿದ್ದು ಸ್ಲೇಟು ಬಳಪದಲ್ಲಾದ್ದರಿಂದ ನಮ್ಮ ಕೈಗೆ ಪೆನ್ನು ಸಿಕ್ಕಿದ್ದು ಸ್ವಲ್ಪ ತಡವಾಗಿಯೇ . ಅದಕ್ಕೇ ನಮಗೆ ಪೆನ್ನೆಂದರೆ ಅದೇನೋ ವಿಶೇಷ ಒಲವು .

    ಆಗ ಇದ್ದಿದ್ದು ಎರಡೇ ಪೆನ್ನು. ಒಂದು ಇಂಕ್ ಪೆನ್ನು. ಇನ್ನೊಂದು ಬಾಲ್ ಪೆನ್ನು. ಅದನ್ನ ನಾವು ಟೂಬ್ ಪೆನ್ನು ಅಂತ ಕರೀತಿದ್ವಿ . ಸ್ವಲ್ಪ ದಿನಗಳ ಅಂತರದಲ್ಲಿ ನಮ್ಮ ಕಣ್ಣಿಗೆ ಬಿದ್ದಿದ್ದು ಮತ್ತು ತೀರಾ ಕುತೂಹಲದ ಜೊತೆಗೆ ಆಶ್ಚರ್ಯ ತರಿಸಿದ ಪೆನ್ನಂದ್ರೆ ಡುಮ್ಮನೆಯ ಒಂದೇ ಪೆನ್ನಿನಲ್ಲಿ ನಾಲ್ಕು ಬಣ್ಣದ ನೀಲಿ ಕೆಂಪು ಕಪ್ಪು ಮತ್ತು ಹಸಿರು ರೀಫಿಲ್ ಗಳಿದ್ದ ಪೆನ್ನು. ಇದರ ಮೇಲ್ಬಾಗದಲ್ಲಿ ಅಷ್ಟೇ ಬಣ್ಣದ ಟಿಕ್ ಟಿಕ್ ಎನ್ನುವ ತಂತ್ರಜ್ಞಾನ ಒಂದನ್ನು ಒತ್ತಿದರೆ ಮತ್ತೊಂದು ಜಾಗ ಮಾಡಿಕೊಡುತ್ತಿತ್ತು . ಇದನ್ನು ಕೊಂಡು ಬರೆದಿದ್ದಕ್ಕಿಂತಾ ತೆರೆದು ರಿಪೇರಿ ಮಾಡಿದ್ದೇ ಹೆಚ್ಚು .

    ಆಗಲೇ ಮೇಡ್ ಇನ್ ಚೀನಾದ ಹೀರೋ ಪೆನ್ನು ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು . ಮೆರೂನ್ ಕಲರಿನ ಬಾಡಿ ಚಿನ್ನದ ಬಣ್ಣದ ಕ್ಯಾಪು . ಅದಕ್ಕೆ ಇಂಕ್ ತುಂಬಿಸೋದೇ ಒಂದು ಕಲೆಯಾಗಿತ್ತು ಪಿಚಕಾರಿಯ ತರಹದ ಒಳವಿನ್ಯಾಸ ಅದರಲ್ಲಿರುತ್ತಿತ್ತು . ಹೀರೋ ಪೆನ್ನು ಪೈಲಟ್ ಪೆನ್ನು ಮುಂತಾದ ದುಬಾರಿ ಪೆನ್ನು ಹೊಂದಿರುವವರು ಮನೆಗಳಲ್ಲಿಯೇ ಬ್ರಿಲ್ ಇಂಕ್ ಬಾಟಲ್ಗಳನ್ನು ಇಟ್ಟಿರುತ್ತಿದ್ದರು .
    ಆಗೆಲ್ಲಾ ಬುಕ್ ಸ್ಟೋರ್ ಗಳಲ್ಲಿ ಪೆನ್ನಿಗೆ ಲೂಸ್ ಇಂಕ್ ಹಾಕೋವ್ರು . ನಿಬ್ಬು ರೀಫಿಲ್ ಹೀಗೇ ಪೆನ್ನಿನ ಬಿಡಿ ಭಾಗಗಳು ಸಿಗುತ್ತಿತ್ತು .

    ನಾವುಗಳಂತೂ ಪೆನ್ನುಗಳನ್ನು ಹಲವು ಫನ್ನುಗಳಿಗೆ ಒಡ್ಡುತ್ತಿದ್ದೆವು . ಸರಿಯಾಗಿ ಬರೆಯದಿದ್ದರೆ ರೀಫಿಲ್ ತೆಗೆದು ಎರಡೂ ಕೈಗಳಿಂದ ಅದನ್ನು ಉಜ್ಜಿ ಬಿಸಿ ಮಾಡುವುದು . ದೀಪದ ಬೆಂಕಿಯಿಂದ ಶಾಖ ಕೊಟ್ಟು ಬರೆಯುವಂತೆ ಮಾಡುವುದು . ಇಂಕ್ ಪೆನ್‌ ಆದ್ರೆ ಅದರ ಮುಳ್ಳಿಗೆ ಬ್ಲೇಡಿಂದ ಕುಯ್ದು ಇಂಕ್ ಸರಾಗವಾಗಿ ಹರಿಯುವಂತೆ ಮಾಡುವುದು , ನಿಬ್ಬನ್ನೇ ನಾವು ಮುಳ್ಳು ಎಂದು ಕರೆಯುತ್ತಿದ್ದೆವು .

    ಇನ್ನು ಕ್ಲಾಸಿನಲ್ಲಿ ಬಾಲ್ ಪೆನ್ನಿನ ಒಳಗಡೆ ಇರುವ ಸ್ಪ್ರಿಂಗನ್ನು ಅದೆಷ್ಟು ಬಾರಿ ಬೀಳಿಸಿಕೊಂಡು ಹುಡುಕಿದ್ದೇವೋ .ಹೀಗಿದ್ದಾಗ ಒಮ್ಮೆ ಅದೆಲ್ಲಿಂದ ಬಂತೋ ನೋಡಿ ರೆನಾಲ್ಡ್ಸ್ ಎಂಬ ವಿದೇಶಿ ದೈತ್ಯ ಪೆನ್ನುಕಂಪನಿ ಎಲ್ಲಾ ಪೆನ್ನುಗಳನ್ನು ನಿವಾಳಿಸಿ ಮೂಲೆಗೆ ನೂಕಿಬಿಡ್ತು .

    ಪೆನ್ನು ಒಂದು ವಿಧವಾದ ಗೌರವವಾದರೆ . ನೀನ್ ಯಾವ್ ಸೀಮೆ ರೈಟ್ರು ಗುರೂ ಒಂದ್ ಪೆನ್ನೂ ಇಟ್ಟಿಲ್ಲ . ಸ್ಟೂಡೆಂಟ್ ಆಗಿ ಒಂದು ಪೆನ್ನೂ ನೆಟ್ಟಿಗೆ ಇಟ್ಟಿಲ್ಲ ಅಂದ್ರೆ ಅದೇನ್ ಓದಿ ದಬ್ಬಾಕ್ತಿಯೋ ?ಹೆಸರಿಗೆ ಡಾಕ್ಟ್ರಂತೆ ಒಂದು ಪೆನ್ನು ಇಟ್ಟಿಲ್ಲ ….ಹೀಗೆ ಅಗೌರವವೂ ಹೌದು .

    ಪೆನ್ನನ್ನ ಎಲ್ಲಾರು ಜೇಬಲ್ಲಿ ಬ್ಯಾಗಲ್ಲಿ ಇಟ್ಕೊಂಡ್ರೆ ಈ ಕಂಡಕ್ಟರ್ ಗಳು ಮಾತ್ರಾನೇ ಕಿವಿಯಲ್ಲಿ ಇಟ್ಕೋತಾರೆ ‌.ಹೋಲಿಕೆ ಅಂತ ಬಂದಾಗ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪೆನ್ನನ್ನ ದೇವರಿಗೆ ಹೋಲಿಸಿದರೆ, ಪತ್ರಕರ್ತರು ಖಡ್ಗಕ್ಕೆ ಹೋಲಿಸ್ತಾರೆ .

    ಆಗೆಲ್ಲಾ ನ್ಯಾಯಾಧೀಶರು ತೀರ್ಪು ಬರೆಯಲು, ವೈದ್ಯರು ಔಷಧಿ ಬರೆಯಲು , ಇನ್ಸ್‌ಪೆಕ್ಟರ್ ದಂಡ ವಿಧಿಸಲು , ಕಂಡಕ್ಟರ್ ಚಿಲ್ಲರೆ ಬರೆಯಲು , ಉಳ್ಳವರು ಚೆಕ್ ಬರೆಯಲು , ಬರಹಗಾರರು ಕತೆ ಕಾದಂಬರಿ ಕವಿತೆ ಸಾಹಿತ್ಯ ಬರೆಯಲು ಉಪಯೋಗಿಸುತ್ತಿದ್ದರೆ . ಇನ್ನು ಕೆಲವು ಕಡೆ ಪತ್ರಗಳಿಗೆ , ಪ್ರೇಮಪತ್ರಗಳಿಗೆ , ಲಗ್ನಪತ್ರಿಕೆಗಳಿಗೆ , ರಿಜಿಸ್ಟರ್ ಮ್ಯಾರೇಜ್ ಗಳಿಗೆ ಪೆನ್ನಿನ ಜರೂರತ್ತಿತ್ತು.
    ಈಗೀಗ ಟೈಪಿಂಗು , ವಾಟ್ಸಪ್ಪು , ಮೆಸೇಂಜರ್, ಟ್ವಿಟರ್ ಗಳಿಂದಾಗಿ ಪೆನ್ನು ತನ್ನ ಮುಂಚಿನ ಚಾಪು ಕಳೆದುಕೊಳ್ಳುತ್ತಿದೆ .

    ಯಾವುದೇನೇ ಅದರೂ ದೇಶ ವಿದೇಶಗಳ ನಡುವಿನ ಒಡಂಬಡಿಕೆಗಳಿಗೆ ಒಪ್ಪಂದಗಳಿಗೆ ಹಿರಿಯರ ಹಸ್ತಾಕ್ಷರಗಳು ಜರುಗುವುದು ಇದೇ ಪೆನ್ನಿನಿಂದಲೆ.

    ” ಸಹಿಗಿರುವಷ್ಟೇ ಬೆಲೆ ಪೆನ್ನಿಗಿದೆ ” ಎಂಬುಂದಂತು ಬರವಣಿಗೆಯಷ್ಟೇ ಸತ್ಯ.

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    6 COMMENTS

    1. ಒಂದು ವಿಷಯ ಅಥವಾ ವಸ್ತುವನ್ನು ಗುರಿಯಾಗಿರಿಸಿಕೊಂಡು, ಓದುಗರನ್ನು ಹೇಗೆಲ್ಲಾ ಆಳವಾದ ವಿಚಾರಧಾರೆಯ ಮುನ್ನೆಲೆಗೆ ಕೊಂಡೊಯ್ಯಬಹುದು ಎಂಬುದನ್ನು ಅವರ ಲೇಖನದಿಂದಲೇ ಅರಿಯಬಹುದು. ಒಂದು ಉತ್ತಮ ಲೇಖನ. ಧನ್ಯವಾದಗಳು ಮಾಸ್ತಿ ಸರ್.🙏

    2. ನಿಮ್ಮ ಒಂದೊಂದು ಲೇಖನವನ್ನು ಓದಿದಾಗಲೂ ಮುಂದಿನ ಲೇಖನ ಯಾವ ವಿಷಯದ್ದಾಗಿರಬಹುದು ಎಂಬ ಕುತೂಹಲ ನನಗೆ.

    3. ಪೆನ್ನಿನ ಬಗ್ಗೆ ಲೇಖನ ಬಹಳ ಸುಂದರವಾಗಿ ಮೂಡಿಬಂದಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!