26.2 C
Karnataka
Thursday, November 21, 2024

    ಡಲ್ಗೋನಾ,ಕ್ಯಾಪಿಚಿನೊ ಎಕ್ಸ್ಪ್ರೆಸ್ಸೊ,ಪ್ರ್ಯಾಪಿಚಿನೊ ಮುಂದೆ ನಮ್ಮ ಫಿಲ್ಟರ್ ಕಾಫಿಯೇ ಸೂಪರ್

    Must read

    ಇಂದು ಅಂತಾರಾಷ್ಟ್ರೀಯ ಕಾಫಿ ದಿನ

    ಅದು 90ರ ದಶಕದ ಒಂದು ಕಥೆ.
    ಮಹಾನಗರದ ಒಂದು ವಠಾರದ ದೃಶ್ಯ. ಬೆಳಗಿನ ಆರಕ್ಕೆಲ್ಲಾ ಕೌಸಲ್ಯ ಸುಪ್ರಜಾ ಆರಂಭವಾಗಿದೆ ಅಲ್ಲಿ. ನೀರು ಸುರಿದು ಬಾಗಿಲ ಜೊತೆಗೆ ಬೀದಿಯನ್ನು ತೊಳೆದು ರಂಗೋಲಿ ಬಿಡಿಸಿದ ಆ ಹೆಣ್ಣುಮಗಳು ರಸ್ತೆಯ ಬಲ ತಿರುವಿನತ್ತ ಮತ್ತೆಮತ್ತೆ ದೃಷ್ಟಿ ಹಾಯಿಸುತ್ತಾಳೆ. ರಂಗೋಲಿ ಮುಗಿಸಿ ಒಳಗೆ ಹೋಗಿ ಎರಡು ನಿಮಿಷದ ನಂತರ ಮತ್ತೆ ಹೊರಬಂದು ಮತ್ತದೇ ತಿರುವಿನತ್ತಾ ನೋಡುತ್ತಾ ..’ಎನ್ನಂಗ…ಎಪ್ಪಉಂ ಈಂಗೆ ತಾಮದಮಾಗಿ ವರಮಾಟಿಂಗ್ಲೇ..?’
    ಅಂದವಳು ಬೇಸತ್ತು ಯಾವುದು ಅಸಹನೆಗೊಳಗಾದವಳಂತೆ ಸಿಡಿಮಿಡಿಯಾಡುತ್ತಾ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾ ಒಳಗೆ ಹೋಗುತ್ತಾಳೆ.

    ಕೈಯಲ್ಲಿ ಪೇಪರ್ ಹಿಡಿದು ಶತಪಥ ತಿರುಗುತ್ತಾ ಮತ್ತೆಮತ್ತೆ ಗೇಟಿನ ಕಡೆಗೆ ನೋಡುತ್ತಿರುವ ಗಂಡನದ್ದೂ ಅದೇ ಪಾಡು. ಆತನೂ ಯಾರಿಗೋ ಕಾಯುತ್ತಿರುವಂತೆ ಕಾಣುತ್ತಿದ್ದ.ಅತ್ತಕಡೆಯಿಂದ ಸೈಕಲ್ ಬೆಲ್ ಕೇಳಿದೊಡನೆ ದಡಬಡ ಹೊರಗೆ ಹೋಗಿ ಕೈಯಲ್ಲಿ ಪಾತ್ರೆ ಹಿಡಿದು ಗೇಟಿನ ಮುಂದೆ ನಿಂತು ಪಾತ್ರೆಗೆ ಹಾಲು ಅಳೆಸಿಕೊಂಡವ ‘ಇಷ್ಟು ತಡ ಯಾಕಾಯ್ತು ತಮ್ಮ’ ಅನ್ನುವ ಮಾಮೂಲು ಪ್ರಶ್ನೆ.

    ಬೆಳಗ್ಗಿನ ಐದಕ್ಕೇ ಬಂದರೂ ಈ ತಮಿಳಿಗರ ಬೀದಿಯ ಕಾಯಂ ಪ್ರಶ್ನೆಗೆ ಹಾಲಿನ ಹುಡುಗ ಯಾವತ್ತೂ ಉತ್ತರಿಸುವುದಿಲ್ಲ.ಸುಮ್ಮನೆ ನಕ್ಕು ಹಾಲು ಅಳೆಸಿ ಹೋಗುತ್ತಿದ್ದ.ಹಾಲಿನ ಪಾತ್ರೆ ಹಿಡಿದ ಒಳಬಂದವನಿಗೆ ಮನೆಯೆಲ್ಲಾ ವ್ಯಾಪಿಸಿರುವ ಕಾಫಿಯ ದಟ್ಟ ಪರಿಮಳವು,ಅಡುಗೆ ಮನೆಯಲ್ಲಿ ಲಯಬದ್ದವಾಗಿ ಫಿಲ್ಟರ್ ಬಡಿಯುತ್ತಿರುವ ಸದ್ದೂ ಕೇಳುತ್ತದೆ.
    ಹಾಲು ಅಡುಗೆ ಮನೆ ತಲುಪಿದೊಡನೆ ಕಾಯಿಸಿ ಈಗಷ್ಟೇ ಹಾಕಿದ್ದ ತಾಜಾ ಡಿಕಾಕ್ಷನ್ ಪುಡಿ ಬೆಲ್ಲ ಸೇರಿಸಿ ಅಗತ್ಯಕ್ಕಿಂತ ಹೆಚ್ಚಿಗೆಯೇ ಬಿಸಿ ಮಾಡಿಕೊಂಡು ಎರಡು ನಿಮಿಷ ಆರಾಮಾವಾಗಿ ಕುಳಿತು ಕಾಫಿಯನ್ನು ಗುಟುಕಿಸಿದ ನಂತರವೇ ಆ ಮನೆಯ ಬೆಳಗ್ಗಿನ ಕಾಯಂ ಶತಪಥ ಕಡಿಮೆಯಾಗುತ್ತಿದ್ದದ್ದು.
    ******
    ಒಂದು ಕಥೆಯ ಆರಂಭದ ಈ ಮೇಲಿನ ಭಾಗವನ್ನು ಆಗ ಓದಿದಾಗ ಆ ಕುಟುಂಬ ಕಾಫಿ ಪ್ರಿಯರದ್ದು ಇರಬಹುದು ಅಂದುಕೊಂಡೆ.ಆದರೆ ತಮಿಳುನಾಡಿಗೆ ತಮಿಳುನಾಡೇ ಕಾಫಿಯ ಪರಮ ಆಸ್ವಾದಕರು ಅಂತ ತಿಳಿದಾಗ ಅಚ್ಚರಿಯೆನಿಸಿತು. ತಾಯ್ನಾಡಿನಲ್ಲಿ ಮಾತ್ರವಲ್ಲದೆ ತಾವು ನೆಲೆನಿಂತ ಯಾವುದೇ ಪ್ರದೇಶದಲ್ಲಿ ಕೂಡ ತಮಿಳಿಗರು ತಮ್ಮ ಪರಂಪರಾಗತ ಫಿಲ್ಟರ್ ಕಾಫಿ ದಿನಚರಿಯನ್ನು ಬದಲಾಯಿಸಿಕೊಳ್ಳದೆ ಹಾಸಿಗೆ ಬಿಟ್ಟೆದ್ದ ಹತ್ತೇ ನಿಮಿಷದಲ್ಲಿ ತಾಜಾ ಫಿಲ್ಟರ್ ಕಾಫಿ ಅವರ ಹೊಟ್ಟೆ ಸೇರಲೇಬೇಕು ಎನ್ನುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು.

    ತಮಿಳುನಾಡು ಪ್ರಥಮ

    ಕರ್ನಾಟಕ ,ತಮಿಳುನಾಡು ,ಕೇರಳ ನಮ್ಮ ದೇಶದ ಪ್ರಮುಖ ಕಾಫಿ ಬೆಳೆಯುವ ರಾಜ್ಯಗಳು.
    ಆದರೆ ಕಾಫಿ ಸೇವನೆಯಲ್ಲಿ ತಮಿಳುನಾಡು ಪ್ರಥಮದಲ್ಲಿ ನಿಲ್ಲುತ್ತದೆ. ಭಾರತದ ಆಂತರಿಕ ಮಾರುಕಟ್ಟೆಯಲ್ಲಿ ಸುಮಾರು ಒಂದು ಲಕ್ಷ ಟನ್ ಕಾಫಿ ಬಳಕೆಯಾಗುತ್ತದೆಯಾದರೆ ಇದರ ಅರ್ಧದಷ್ಟನ್ನು ತಮಿಳುನಾಡು ಒಂದೇ ಬಳಸುತ್ತದೆ. ಸುಮಾರು ಐವತ್ತು ಸಾವಿರ ಟನ್ ಕಾಫಿಯನ್ನು ತಮಿಳುನಾಡು ಸರಾಸರಿ ವಾರ್ಷಿಕವಾಗಿ ಬಳಸುತ್ತಾರೆ.

    ಅವರ ಕಾಫಿಯ ಮೇಕಿಂಗ್ ನಲ್ಲೂ ಒಂದು ವಿಶೇಷತೆ ಇದ್ದುಅದು ಅವರ ಕಾಫಿಯ ಬಳಕೆಯನ್ನು ಗುರುತರವಾಗಿ ಹೆಚ್ಚಿಸಿದೆ.
    ತಮಿಳುನಾಡಿನಷ್ಟು ವಿಶೇಷವಾದ ಫಿಲ್ಟರ್ ಕಾಫಿ ದೇಶದ ಮತ್ತಾವುದೇ ಕಾಫಿ ಜಿಲ್ಲೆಗಳಲ್ಲಿ ಸಿಗುವುದಿಲ್ಲ ಎನ್ನುವ ಮಾತು ಕೂಡ ಉತ್ಪ್ರೇಕ್ಷೆಯದಲ್ಲ.

    ಕಾಫಿ ಕಂಟೇನರ್

    ಈ ಫಿಲ್ಟರ್ ಕಾಫಿಗೆ ಬೇಕಾಗುವ ಫಿಲ್ಟರ್ ಕೂಡ ಶತಮಾನದ ಹಿಂದೆಯೇ ತಮಿಳಿರೇ ತಯಾರಿಸಿದ್ದು.ತಮಿಳುನಾಡಿನ ಸೇಲಂ‌ ಕಾಫಿ ಫಿಲ್ಟರ್ ತಯಾರಿಕೆಯಲ್ಲಿ ಈಗಲೂ ಅಗ್ರಸ್ಥಾನದಲ್ಲಿದೆ. ಮೊದಲೆಲ್ಲಾ ಹಿತ್ತಾಳೆ ತಾಮ್ರದ ಫಿಲ್ಟರ್ ಗಳು ದೊರಕುತ್ತಿದ್ದವು.ಈಗ ಅವುಗಳನ್ನು ಪ್ರೆಸೆಂಟೆಷನ್ ಪರ್ಪಸ್ಸಗಾಗಿ ಬಳಸಲಾಗ್ತಿದೆ.

    ಫಿಲ್ಟರ್ ಕಾಫಿಗೆ ಬೇಕಾಗುವ ಕಾಫಿಪುಡಿಯನ್ನು ಸಹ ಅಲ್ಲಿ ವಿಶೇಷ ಗಮನ ವಹಿಸಿ ತಯಾರಿಸಲಾಗ್ತದೆ. ಬೆಳೆಗಾರರಿಂದ ಸಂಗ್ರಹಿಸಿದ ಕಾಫಿಯನ್ನು ಎ,ಬಿ ಮತ್ತು ಪಿ ಬ್ರಿ ಯಾಗಿ ಗ್ರೇಡಿಂಗ್ ಮಾಡಿ ಹದವಾಗಿ ಹುರಿದು ಪುಡಿ ಮಾಡಲಾಗ್ತದೆ.
    ಬಹುತೇಕ ತಮಿಳಿಗರು ಕಾಫಿ ಪುಡಿಯನ್ನು ಮನೆಯಲ್ಲೇ ತಯಾರಿಸಿಕೊಳ್ಳುತ್ತಾರೆ.
    ಹಾಗು ಚಿಕೋರಿ ರಹಿತ ಕಾಫಿಯನ್ನು ಇಷ್ಟಪಡುತ್ತಾರೆ.

    ಇದೇ ಕಾರಣದಿಂದಾಗಿ ಒಂದು ಕಪ್ ಕಾಫಿ ಮಾಡಲು ಬೇಕಾಗುವ ಕಾಫಿಪುಡಿ ಪ್ರಮಾಣ ಅಲ್ಲಿ ಹೆಚ್ಚಿರುತ್ತದೆ. ತಮಿಳಿಗರ ಈ ಕಾಫಿ ಸಂಸ್ಕೃತಿ ಎಲ್ಲಾ ಕಾಫಿ ಬೆಳೆಯುವ ರಾಜ್ಯಗಳಲ್ಲೂ ಬಳಕೆಗೆ ಬಂದರೆ ಬಹುಶಃ ನಾವು ನಮ್ಮ ಕಾಫಿಗಾಗಿ ವಿದೇಶಿ ಮಾರುಕಟ್ಟೆಯನ್ನು ಆಶ್ರಯಿಸುವ ಪ್ರಸಂಗವೇ ಬರುವುದಿಲ್ಲ. ಜೊತೆಗೆ ತಮಿಳಿಗರಲ್ಲಿ ಒಂದು ವಿಶೇಷ ಸ್ವಭಾವ ಇದೆ. ಪ್ರಪಂಚದ ಯಾವುದೇ ಭಾಗಗಳಲ್ಲಿ ಅವರು ನೆಲೆ ಕಂಡುಕೊಂಡಿದ್ದರೂ ತಮ್ಮ ಕಾಫಿ ಕಲ್ಚರ್ ಅನ್ನು ಮಾತ್ರ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ.
    ನೀರಿನಷ್ಟೇ ಕಾಫಿಯೂ ದೇಹಕ್ಕೆ ಅನಿವಾರ್ಯ ಎನ್ನುವ ಹಾಗೆ ಅವರು ಒಗ್ಗಿಹೋಗಿದ್ದಾರೆ .

    ಕಾಫಿ ಸಂಸ್ಕೃತಿಯನ್ನು ಅಷ್ಟಾಗಿ ರೂಢಿಸಿಕೊಳ್ಳದ ಕರ್ನಾಟಕ

    ಆದರೆ ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಕರ್ನಾಟಕ ಮಾತ್ರ ಕಾಫಿ ಸಂಸ್ಕೃತಿಯನ್ನು ಅಷ್ಟಾಗಿ ರೂಢಿಸಿಕೊಂಡಿಲ್ಲ.ಕೊಡಗು ಚಿಕ್ಕಮಗಳೂರು ಹಾಸನದ ಕೆಲವು ಭಾಗಗಳಲ್ಲಿ ಬಿಟ್ಟರೆ ಕಾಫಿ ಇಲ್ಲಿ ಅಷ್ಟೇನು ಬಳಕೆಯಲ್ಲಿ ಇಲ್ಲ.
    ಇತ್ತೀಚಿನ ದಿನಗಳಲ್ಲಿ ‘ನಾನು ಕಾಫಿ‌ ಕುಡಿಯುವುದಿಲ್ಲ’ ಎನ್ನುವುದು ಒಂದು ಸ್ಟೈಲ್ ಸ್ಟೇಟ್ಮೆಂಟ್ ಕೂಡ ಆಗಿರುವುದು ವಿಪರ್ಯಾಸ.

    ಕಾಫಿ ತಾಳ್ಮೆಯನ್ನು ಬಯಸುವ ಬೆಳೆ.
    ಬೀಜದ ಆಯ್ಕೆಯಿಂದ ಆರಂಭವಾಗಿ ಕೊಯ್ಲು ಮತ್ತು ಕೊಯ್ಲೋತ್ತರ ಪ್ರಕ್ರಿಯೆಗಳವರೆಗೂ ದೀರ್ಘ ತಾಳ್ಮೆಯನ್ನು ಕಾಫಿ ಕೇಳುತ್ತದೆ. ಬೆಳೆಗಾರರು ಅದೆಲ್ಲವನ್ನು ಅಳವಡಿಸಿಕೊಂಡಿದ್ದಾರೆ ಕೂಡ.
    ಆದರೆ ಹೀಗೆ ವರ್ಷಾನುಕಾಲ ಶ್ರಮಪಟ್ಟು ಬೆಳೆದ ಕಾಫಿಗೆ ಮಾರುಕಟ್ಟೆ ಮಾಡುವ ತಂತ್ರ ಮಾತ್ರ ನಮ್ಮ ಬೆಳೆಗಾರರು ಮಾಡುತ್ತಿಲ್ಲ ಎನ್ನುವುದು ಇಲ್ಲಿಯ ಕಾಫಿ ಪರಿಣಿತರ ಖಚಿತ ಅಭಿಪ್ರಾಯ.

    ಹಾಗಿದ್ದರೆ ಕಾಫಿಯ ಆಂತರಿಕ ಬಳಕೆ ಹೆಚ್ಚುವಂತೆ ಏನೆಲ್ಲ ಮಾಡಬಹುದು. ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ತಮಿಳಿಗರ ಫಿಲ್ಟರ್ ಕಾಫಿ ಕುರಿತಾದ ಪ್ಯಾಶನ್ ಇದಕ್ಕೆ ಒಂದು ಉದಾಹರಣೆ.ಬಹಳ ಮುಖ್ಯವಾಗಿ ಕಾಫಿ..ಅದರಲ್ಲೂ ಫಿಲ್ಟರ್ ಕಾಫಿ ಏಕೆ ಮತ್ತು ಹೇಗೆ ಎನ್ನುವುದನ್ನು ಕಾಫಿಯ ಬಳಕೆ ಹೆಚ್ಚಿಸುವ ದೃಷ್ಟಿಯಿಂದ ನಮ್ಮವರು ಪ್ರಚಲಿತ ಪಡಿಸಬೇಕಿದೆ.

    ಒಂದಿಷ್ಟು ಪ್ರಶ್ನೆಗಳು

    ಇನ್ಸ್ಟಂಟ್ ಕಾಫಿ ಕಲ್ಚರ್ ನಮ್ಮ ಸಾಂಪ್ರದಾಯಿಕ ಫಿಲ್ಟರ್ ಕಾಫಿಗೆ ಸೆಡ್ಡು ಹೊಡೆಯುತ್ತಿವೆಯೇ.?
    ಕೆಫಿನ್ ಹಿಟ್ ಗಾಗಿಯೇ ಕಾಫಿ ಸೇವನೆ ಆಗುತ್ತಿರುವಾಗ ಈ ಉತ್ತೇಜಕ ಗುಣ ಯಾವುದರಲ್ಲಿ (ಫಿಲ್ಟರ್ ಅಥವಾ ಇನಸ್ಟಂಟ್) ಹೆಚ್ಚಿದೆ.?
    ಫಿಲ್ಟರ್ ಕಾಫಿ‌ ತಯಾರಿಸುವ ಸರಿಯಾದ ವಿಧಾನ ಹೇಗೆ.?

    ಇನ್ಸ್ಟೆಂಟ್ ಕಾಫಿಯ ಥರೇವಾರಿ ಮಾದರಿಗಳು ಇವತ್ತು ಮಾರುಕಟ್ಟೆಯನ್ನು ಆಳುತ್ತಿವೆ.
    ನೆಸ್ ಕೆಫೆ ,ಬ್ರೂ ,ಡಲ್ಗೋನಾ,ಕ್ಯಾಪಿಚಿನೊ ಎಕ್ಸ್ಪ್ರೆಸ್ಸೊ,ಪ್ರ್ಯಾಪಿಚಿನೊ ಸದ್ಯ ತಿಳಿದಿರುವ ಇನಸ್ಟಂಟ್ ಕಾಫಿಯ ಒಂದಷ್ಟು ಹೆಸರುಗಳು.
    ಕೇವಲ ಕುತೂಹಲಕ್ಕಾಗಿ, ಕಾಫಿ ಕೆಫೆ ಕಲ್ಚರ್ ಅನ್ನು ನೋಡುವುದಕ್ಕಾಗಿ ಇನಸ್ಟಂಟ್ ಕಾಫಿ ಕುಡಿದದ್ದು ಬಿಟ್ಟರೆ ತಾಜಾ ಹಾಲಿಗೆ ಕಾಫಿಯ ಡಿಕಾಕ್ಷನ್ ಬೆರೆಸಿ ಪುಡಿ ಬೆಲ್ಲ ಹಾಕಿ ಸ್ವಲ್ಪ ಹೆಚ್ಚಿಗೆ ಬಿಸಿ ಮಾಡಿಕೊಂಡು ಕುಡಿಯುವುದು ವೈಯುಕ್ತಿಕವಾಗಿ ನನಗೆ ಅಚ್ಚುಮೆಚ್ಚು.

    ಒಳ್ಳೆಯ ಫಿಲ್ಟರ್ ಕಾಫಿ ತಯಾರಿಸುವ ಹಂತ

    ಒಂದು ಒಳ್ಳೆಯ ಫಿಲ್ಟರ್ ಕಾಫಿ ತಯಾರಿಸುವ ಹಂತಗಳನ್ನು ಗಮನಿಸುವುದಾದರೆ.,
    ಸರಿಯಾದ ತೇವಾಂಶಕ್ಕೆ ಒಣಗಿಸಿದ ಬೇಳೆಯನ್ನು ಹಲ್ ಮಾಡಿಸಿ ಕಾಫಿ ಪುಡಿ ಮಾಡುವ ವ್ಯಾಪಾರಿಗಳಲ್ಲಿ ನಮ್ಮ ಆಯ್ಕೆಗನುಗುಣವಾಗಿ ರೋಬಸ್ಟಾ ಮತ್ತು ಅರೇಬಿಕವನ್ನು ಬ್ಲೆಂಡ್ ಮಾಡಲು ಹೇಳಬೇಕು.ಗ್ರಾಹಕರ ಆಯ್ಕೆಗನುಸಾರ ಅವರು ಬೇಳೆಯನ್ನು ಹದವಾಗಿ ಹುರಿದು ಪುಡಿ ಮಾಡಿಕೊಡುತ್ತಾರೆ.ಇದು ಫಿಲ್ಟರ್ ಕಾಫಿಗೆ ಬೇಕಾಗುವ ಬೇಸಿಕ್ ಕಾಫಿ ಪೌಡರ್.
    ಇಲ್ಲಿ ರೋಬಸ್ಟಾ ಮತ್ತು ಅರೇಬಿಕಾ ಅನುಪಾತವನ್ನು ನಾವೇ ಹೇಳಬೇಕು.
    ಶೇಕಡ 100ಅರೇಬಿಕಾ ಅಥವಾ ಶೇಕಡ 100 ರೋಬಸ್ಟಾ ಇಷ್ಟಪಡುವವರೂ ಇದ್ದಾರೆ. ಚಿಕೋರಿ ಬೇಕಿದ್ದರೆ ಅದನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಲು ಸಾಧ್ಯವಿದೆಯೇ ಅದು ಒಗ್ಗುತ್ತದಾ ಗಮನಿಸಿಕೊಳ್ಳಬೇಕು. ಶೇಕಡಾ ಹತ್ತು/ಹದಿನೈದು ಚಿಕೋರಿ ಬೆರೆಸಲು ಹೇಳಬಹುದು.

    ನಂತರ ನಮ್ಮ ಸ್ವಾದದ ಅನುಸಾರ ಪೌಡರನ್ನು ಫಿಲ್ಟರಿನಲ್ಲಿ ಹಾಕಿ ಕುದಿವ ನೀರನ್ನು ಮೇಲಿಂದ ಸುರಿದು ತಕ್ಷಣ ಮುಚ್ಚಳ ಮುಚ್ಚಿದರೆ
    ಒಂದೆರಡು ನಿಮಿಷದ ನಂತರ ಕೆಳಗಿನ ಪಾತ್ರೆಯಲ್ಲಿ ತಾಜಾ ಡಿಕಾಕ್ಷನ್ ಸಂಗ್ರಹವಾಗಿರುತ್ತದೆ. ಅವರವರ ಅಭಿರುಚಿಗೆ ಅನುಸಾರ ಡಿಕಾಕ್ಷನ್ ಹಾಲು ಸಕ್ಕರೆ ಅಥವಾ ಬೆಲ್ಲ ಬೆರೆಸಿ ಕುಡಿಯುತ್ತಾರೆ.ಶುಗರ್ ಲೆಸ್ ಕಾಫಿ‌ ಇಷ್ಟಪಡುವವರೂ ಬಹಳಷ್ಟಿದ್ದಾರೆ.

    ಫಿಲ್ಟರ್ ಕಾಫಿಗೆ ಕಾಫಿ ಬೇಳೆಯನ್ನು ಹುರಿದು ಪುಡಿ ಮಾಡುತ್ತಾರೆ.ಪುಡಿಗೆ ಬೇಳೆ ಕೊಡುವ ಮುನ್ನ ಬಿಳುಚಿಕೊಂಡ,ಕಪ್ಪಗಿನ,ಒಡೆದ(bleeched,Black’s, titbit) ಬೇಳೆಗಳನ್ನು ಆರಿಸಿ ಶುಚಿಗೊಳಿಸಿ ಕೊಡುವುದು ಬಹಳ ಹಿಂದಿನಿಂದಲೂ ಬಂದಿರುವ ಕ್ರಮ. ಇತ್ತೀಚಿನ ದಿನಗಳಲ್ಲಿ ಕಾಫಿ ಮತ್ತು ಚಿಕೋರಿಯನ್ನು ಸೆಪರೇಟಾಗಿ ಇಟ್ಟುಕೊಂಡು ಸ್ವಾದಕ್ಕನುಸಾರ ಬಳಕೆ ಮಾಡುವುದು ಅಭ್ಯಾಸವಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೇಳೆಯನ್ನು ಹದವಾಗಿ ಹುರಿಸಿ ಮಿಕ್ಸಿಯಲ್ಲಿ ಪುಡಿಮಾಡಿ ಬಳಸುವುದೂ ಇದೆ.
    ಗಮನಿಸಬೇಕಾದ ವಿಷಯವೆಂದರೆ ಚಿಕೋರಿ ರಹಿತ ಕಾಫಿ ಗಾಢವಾಗಲು ಒಂದಕ್ಕೆ ಮೂರೂವರೆ ಪಟ್ಟು ಹೆಚ್ಚು ಕಾಫಿ ಪುಡಿಯನ್ನು ಬಳಸಬೇಕಾಗುತ್ತದೆ. ಇದು ರುಚಿಯಲ್ಲೂ ವಿಶೇಷವಾಗಿರುತ್ತದೆ.ಆದರೆ ಚಿಕೋರಿ ಸಹಿತ ಕಾಫಿ ಬಹಳ ಬೇಗ ದಟ್ಟವಾಗುತ್ತದೆ. ಕಡುವಾಗಿರುತ್ತದೆ.

    ಬಹಳ ಹಿಂದೆ ಸೂಪರ್ ಸೈಝ್ ಬೇಳೆಯಿಂದ ತಯಾರಿಸುವ ಕಾಫಿ ಉತ್ತಮ ಅನ್ನಲಾಗ್ತಿತ್ತು.
    ಇದು ಮಾತ್ರವಲ್ಲದೆ ಇಂಡಿಯನ್ ರೋಬಸ್ಟಾ ಪೀ ಬೆರ್ರಿಯನ್ನು ಕಪ್ಪು ಮುತ್ತು/ಬ್ಲ್ಯಾಕ್ ಪರ್ಲ್ ಅಂತ ಗಲ್ಫ್ ಮತ್ತು ಇಟಲಿಯಂತಹ ರಾಷ್ಟ್ರಗಳು ಕರೆಯುತ್ತಿದ್ದವು. ಕಾರಣ ಪೀ ಬೆರ್ರಿ ಉರುಟಾಗಿರುವುದರಿಂದ ಒಂದೇ ಹದದಲ್ಲಿ ಹುರಿಯಬಹುದು.ಹಾಗಾಗಿ ಆ ಊನ ಕಾಫಿಬೇಳೆಯನ್ನು ದಿ ಬೆಸ್ಟ್ ಅನ್ನಲಾಗುತ್ತಿತ್ತು.
    ಆದರೆ ನಂತರದ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಹುರಿಯುವುದನ್ನು ನಿಯಂತ್ರಿಸುವುದರಿಂದ ಆ ವಿಚಾರಗಳೆಲ್ಲವೂ ರೂಲ್ಡ್ ಔಟ್ ಎನಿಸಿಕೊಂಡವು.

    ಇನಸ್ಟಂಟ್ ಕಾಫಿ

    ಇನಸ್ಟಂಟ್ ಕಾಫಿಯ ವಿಚಾರಕ್ಕೆ ಬಂದರೆ ಮೊದಲಿನಿಂದಲೂ ಬೀನ್ ಆಯ್ಕೆಯ ಬಗ್ಗೆ ಅಸಮಾಧಾನ ಇದ್ದೇ ಇದೆ.ಕಾಫಿ ಕ್ಷೇತ್ರದ ಪರಿಣಿತರ ಪ್ರಕಾರ ಇಲ್ಲಿ ಬಳಸುವುದು ಬಹುತೇಕ ಟಿಟ್ ಬಿಟ್ಸ್.ಅಂದರೆ ಕಾಫಿಯ ಸೆಕೆಂಡ್ಸ್ ಎನ್ನಲಾಗುವ ಒಡೆದ ಬೀನ್ ಗಳು.

    ಇಲ್ಲಿ ಕಾಫಿ ಬೇಳೆಯನ್ನು ಡೀಪ್ ಫ್ರೀಝ್ ಮತ್ತು ಡಿ ಹೈಡ್ರೇಟ್ ಮಾಡುವ ಮೂಲಕ ತೇವಾಂಶ ಮುಕ್ತಗೊಳಿಸಿ ಪುಡಿಮಾಡಿ ನಂತರ ಅದನ್ನು ಕ್ರಿಸ್ಟಲ್ ರೂಪಕ್ಕೆ ತರಲಾಗುತ್ತದೆ.
    ಅಗತ್ಯಕ್ಕೆ ಅನುಸಾರ ಕುದಿಯುವ ಹಾಲು ಸಕ್ಕರೆ ಕೆನೆ ಮತ್ತು ಇನ್ಸ್ಟೆಂಟ್ ಕಾಫಿ ಪೌಡರ್ ಅನ್ನು ಬೆರೆಸಿಕೊಳ್ಳುವುದರಿಂದ ಇನಸ್ಟಂಟ್ ಕಾಫಿ ಕುಡಿಯಲು ತಯಾರಾಗುತ್ತದೆ.ಇಲ್ಲಿಯ ಫೈನಲ್ ಪೌಡರ್ ತಯಾರಾಗಬೇಕಿದ್ದರೆ ಬೇಳೆಯನ್ನು ಎರಡೆರಡು ಬಾರಿ ವಿದ್ಯುತ್ ಮೂಲಕ ಹಾಯಿಸಿ ಕ್ರಿಸ್ಟಲ್ ರೂಪಕ್ಕೆ ತರಲಾಗುತ್ತದೆ.

    ‘ಯಾವುದೇ ವಸ್ತು ಅಥವಾ ಆಹಾರ ಪದಾರ್ಥ ಸಹಜವಾಗಿದ್ದಾಗ ಅದರಲ್ಲಿರುವ ಗುಣಕಾರಿ ಅಂಶಗಳು ಹಾಗೆಯೇ ಉಳಿದುಕೊಳ್ಳುತ್ತವೆ.
    ಪ್ರೋಸೆಸ್ ಆಫ್ ಮೇಕಿಂಗ್ ಸಂಕೀರ್ಣವಾದಷ್ಟೂ ಅದರ ಗುಣ ವಿಶೇಷಗಳು ಕ್ಷೀಣಿಸುತ್ತವೆ.’

    ಇನಸ್ಟಂಟ್ ಆದ ಯಾವುದೇ ಆಹಾರ ಪದಾರ್ಥದಲ್ಲಿ ಕೂಡ ಇದೇ ಆಗುತ್ತದೆ.
    ಪ್ರತಿ‌ಬಾರಿ ವಿದ್ಯುತ್ ಹಾಯ್ದಾಗಲೂ ಆ ಆಹಾರದ ಸಹಜ ಸ್ವಾಭಾವಿಕ ಗುಣ ಕುಂದಿ ಕೊನೆಯಲ್ಲಿ ಜಡದಂತಹ ವುಡ್ಡೀ ಪದಾರ್ಥ ತಯಾರಾಗಿ ಬಳಕೆಗೆ ಲಭ್ಯವಾಗುತ್ತದೆ.ಈಗಿನ‌ ಕೃತಕ ಆಹಾರ ಸಂಸ್ಕೃತಿಯಲ್ಲಿ ಯಾವುದೇ ಜಡ ಪದಾರ್ಥಕ್ಕೂ ರುಚಿ ಬರುವ ಹಾಗೆ ಮಾಡುವ ಫುಡ್ ಟೆಕ್ನಾಲಜಿಗಳಿಗೆ‌ ಕೊರತೆಯಿಲ್ಲ.

    ಮತ್ತೆ ಫಿಲ್ಟರ್ ಕಾಫಿಗೇ ಬರೋಣಾ.
    ಕಾಫಿಯನ್ನು ಮುಖ್ಯವಾಗಿ ಬಳಸುವುದು ಬೇವರೇಜ್ ಆಗಿ .ಕಾಫಿಯಲ್ಲಿರುವ ಕೆಫಿನ್ ನರಮಂಡಲವನ್ನು ಉತ್ತೇಜಿಸಿ ಒಂದು ಬಗೆಯ ಆಹ್ಲಾದವನ್ನು ತಾಜಾನುಭೂತಿಯನ್ನು ಕೊಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.ಆದರೆ ಕಾಫಿಯ ಕೆಫಿನ್ ಹಿಟ್ ಯಾವುದರಲ್ಲಿ ಹೆಚ್ಚು. ಫಿಲ್ಟರ್ ಕಾಫಿ ಅಥವಾ ಇನಸ್ಟಂಟ್ ಕಾಫಿ?

    ವೆರೈಟಿ ಆಫ್ ಇನಸ್ಟಂಟ್ ಕಾಫಿ ಮಾರುಕಟ್ಟೆಗೆ ಬರುತ್ತಿರುವುದರ ಹೊರತಾಗಿಯೂ ಕಾಫಿ ಪ್ರಿಯರ ಆಸಕ್ತಿಯನ್ನು ಫಿಲ್ಟರ್ ಕಾಫಿ ಹಾಗೆ ಉಳಿಸಿಕೊಂಡಿದೆ ಎನ್ನುವುದು ಗಮನಾರ್ಹ ವಿಚಾರ. ಇದಕ್ಕೆ ಮುಖ್ಯ ಕಾರಣ ಇದು ಸಾಮಾನ್ಯ ಮನುಷ್ಯನಿಗೂ ಕೈಗೆಟುಕಬಲ್ಲದು. ಅಫರ್ಡೆಬಲ್ ಟು ಕಾಮನ್ ಮ್ಯಾನ್.

    ಇಷ್ಟು ಪ್ರಮುಖ ಕಾರಣ ಇದ್ದಾಗ್ಯೂ ನಮ್ಮ ಆಂತರಿಕ ಮಾರುಕಟ್ಟೆಯಲ್ಲಿ ಫಿಲ್ಟರ್ ಕಾಫಿ ಹೆಚ್ಚು ಬೇಡಿಕೆ ಪಡೆಯುತ್ತಿಲ್ಲ ಯಾಕೆ?

    ಮುಖ್ಯವಾಗಿ ನಮ್ಮಲ್ಲಿ ಟೀ ತಯಾರಿಸುವುದು ಸಮಯ ಮತ್ತು ತಯಾರಿಸುವ ದೃಷ್ಟಿಯಿಂದ ಸುಲಭ ಎನ್ನುವ ಕಲ್ಪನೆ ಇದೆ.
    ಆದರೆ ಫಿಲ್ಟರ್ ಕಾಫಿ ಅಭ್ಯಾಸವಾಗಿದ್ದೇ ಆದಲ್ಲಿ ಕಾಫಿ ತಯಾರಿಸುವುದು ಎಷ್ಟು ಸುಲಭ ಎನ್ನುವುದು ತಿಳಿಯುತ್ತದೆ.

    ಒಂದೂವರೆ ಲೋಟ ನೀರು ಕುದಿಯಲು ಇಟ್ಟು ಫಿಲ್ಟರ್ ಜೋಡಿಸಿ ಕಾಫಿಪುಡಿ ಹಾಕಿ ಹಾಲು ಸಕ್ಕರೆ ತೆಗೆಯುವಷ್ಟರಲ್ಲಿ ನೀರು ಕುದಿಯುತ್ತದೆ. ಫಿಲ್ಟರ್ ಗೆ ಹಾಕಿದ ಪುಡಿಯ ಮೇಲೆ ಕುದಿವ ನೀರು ಸುರಿದು ಮೂರ್ನಾಲ್ಕು ನಿಮಿಷದಲ್ಲಿ ಡಿಕಾಕ್ಷನ್ ಇಳಿಯುತ್ತದೆ. ಚಹಾದ ಹಾಗೆ ಪುಡಿ ತನ್ನ ರಸವನ್ನು ಬಿಡುವವರೆಗೂ ಕುದಿಸುವ ಅಗತ್ಯ ಕಾಫಿಯಲ್ಲಿ ಇಲ್ಲವೇ ಇಲ್ಲ.

    ಸಮಯ ಮತ್ತು ನಿರ್ವಹಣೆಯಲ್ಲಿ ಕಾಫಿ ಈಸ್ ಆಲ್ವೇಸ್ ಬೆಸ್ಟ್. ಅಸಾಂಪ್ರದಾಯಿಕ ಕಾಫಿ ಪ್ರದೇಶಗಳಲ್ಲಿ ಒಳ್ಳೆಯ ಕಾಫಿ ಪುಡಿಯನ್ನು ಒದಗಿಸುವುದಕ್ಕೆ ನಮ್ಮ ಸ್ಥಳೀಯ ಕಾಫಿ ಅಸೋಸಿಯೇಷನ್ಗಳು ಸದಾ ಸಿದ್ದವಾಗಿವೆ.
    ಸದ್ಯ ಚಿರಪರಿಚಿತವಿರುವ ಹಟ್ಟಿ ಕಾಫಿ, ಕೋಥಾಸ್ ಕಾಫಿ,ಲೆವಿಸ್ಟಾ ಕಾಫಿಗಳಂಥ ಬೆರೆಳೆಣಿಕೆಯ ಫಿಲ್ಟರ್ ಕಾಫಿ ಬ್ರ್ಯಾಂಡ್ ಗಳ ಜೊತೆಗೆ
    ಸಾಕಷ್ಟು ಕಾಫಿ ಸಂಘಸಂಸ್ಥೆಗಳು ಫಿಲ್ಟರ್ ಕಾಫಿ ಪೌಡರನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಿವೆ.
    ಮಾರ್ಕೆಟಿಂಗ್ ದೃಷ್ಟಿಯಿಂದ ನೋಡುವಾಗ ಇನ್ನೂ ದೃಢವಾದ ಹೆಜ್ಜೆಯ ಅಗತ್ಯ ಇಲ್ಲಿ ಕಾಣುತ್ತಿದೆ.

    ಫಿಲ್ಟರ್ ಕಾಫಿಯ ಪ್ರಯೋಜನ

    ಇನ್ನು ಫಿಲ್ಟರ್ ಕಾಫಿಯ ಇತರೆ ಪ್ರಯೋಜನಗಳನ್ನು ಗಮನಿಸುವುದಾದರೆ ಕಾಫಿಯ ಸಹಜ ಸ್ವಾಭಾವಿಕ ಉತ್ತೇಜನ ಗುಣದ ಹೊರತಾಗಿ ಇದರ ಹೆಲ್ತ್ ಬೆನಿಫಿಟ್ಸ್ ಅಂಶಗಳು ಫಿಲ್ಟರ್ ಕಾಫಿಯನ್ನು ಸರ್ವ ಮಾನ್ಯವಾಗಿ ಉಳಿಸಿದೆ.

    ಇದು ಮಾತ್ರವಲ್ಲದೇ ಫಿಲ್ಟರ್ ಕಾಫಿಯ ಕೊನೆಯ ಪ್ರಾಡಕ್ಟೂ ಕೂಡ ಉಪಯೋಗಕ್ಕೆ ಬರುತ್ತದೆ.ಇಲ್ಲಿ ಯಾವುದೂ ವ್ಯರ್ಥ ಪದಾರ್ಥವೇ ಇಲ್ಲ.
    ಇದರ ಚರಟಕ್ಕೆ ಮೊಸರು ಅಥವಾ ಕೆನೆ ಬೆರೆಸಿ ಉತ್ತಮವಾದ ಸ್ಕಿನ್ಪ್ಯಾಕ್ ಮಾಡಿಕೊಳ್ಳಬಹುದು.
    ಚರಟವನ್ನು ಕೇಶದ ಆರೈಕೆಗಾಗಿ ಬಳಸಬಹುದು.ಅಕಸ್ಮಾತ್ ಕಾಫಿ ಡಿಕಾಕ್ಷನ್ ಉಳಿದರೆ ಅದರ ಜೊತೆಗೆ ಯಾವುದಾದರೂ ಹಿಟ್ಟು ಬೆರೆಸಿ ಸ್ನಾನಕ್ಕೆ ಬಳಸಬಹುದು.
    ಒಡೆದ ಹಿಮ್ಮಡಿಗೆ ಕಾಫಿ ಅತ್ಯುತ್ತಮ ಮನೆಮದ್ದು.
    ಹಾಗೆಯೇ ತಯಾರಿಸಿದ ಡಿಕಾಕ್ಷನ್ ಅನ್ನು ಹೊರಗಿಟ್ಟರೂ ಎರಡು ದಿನಗಳವರೆಗೆ ಬಳಸಬಹುದು. ಏರ್ಟೈಟ್ ಕಂಟೇನರ್ ಗಳಲ್ಲಿ ಇಟ್ಟು ಫ್ರಿಜ್ಜಿನಲ್ಲಿಟ್ಟರೆ ವಾರದವರೆಗೂ ಬಳಸಬಹುದು. ತಾಜಾತನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗಾಢತೆಯೂ ಉತ್ತೇಜಕ ಗುಣವೂ ಹಾಗೆಯೇ ಉಳಿಯುತ್ತದೆ.
    ಚರಟ ಹೂದೋಟಕ್ಕೆ ಒಳ್ಳೆಯ ಗೊಬ್ಬರ ಆಗಬಲ್ಲದು.

    ಫಿಲ್ಟರ್ ಕಾಫಿ ಕುರಿತು ಇನ್ನೂ ಒಂದು ಮಾತು ಹೇಳಬೇಕಿದೆ ಕೆಲವೊಮ್ಮೆ ಹೊರಗೆ ಹೋಗುವಾಗ ವಿಧಿಯಿಲ್ಲದೆ ಇನಸ್ಟಂಟ್ ಕಾಫಿಗೆ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಇರುತ್ತದೆ.
    ಆದರೆ ಒಂದು ಕಂಟೇನರ್ ನಲ್ಲಿ ತಾಜಾ ಡಿಕಾಕ್ಷನ್ ಅನ್ನು ಹಾಕಿ ಒಯ್ದರೆ ಹೋಟೆಲುಗಳಲ್ಲಿ ಹಾಲು ಪಡೆದು ಅದಕ್ಕೆ ನಮ್ಮ ಗಾಢ ಡಿಕಾಕ್ಷನ್ ಬೆರೆಸಿದರೆ ಮನೆಯ ಫಿಲ್ಟರ್ ಕಾಫಿಯನ್ನು ಹೊರಗೆ ಹೋದಾಗಲೂ ಸವಿಯಬಹುದು.

    ಕಾಪಿಯ ಹೆಲ್ತ್ ಬೆನಿಫಿಟ್ಸ್ ಬಗ್ಗೆ ಹೇಳುವುದಾದರೆ
    ಹಿತಮಿತವಾದ ಕಾಫಿ ಸೇವನೆಯಿಂದ ಅಲ್ಜಿಮರ್ ತೊಂದರೆಯನ್ನು ತಡೆಯಬಹುದು ಎನ್ನಲಾಗುತ್ತಿದೆ.ಹೃದಯಸಂಬಂಧಿ ತೊಂದರೆಗಳಿಗೂ ಕಾಫಿ ಒಳ್ಳೆಯದು.
    ಕಾಫಿಯಲ್ಲಿ ಉತ್ತಮ ಆ್ಯಂಟಿ ಆ್ಯಕ್ಸಿಡೆಂಟ್ಸ್ ಗಳು ಹೇರಳವಾಗಿದೆ.ಇದರಲ್ಲಿರುವ ಫ್ಲೆವಿನಾಯ್ಡ್ಸ್ ದೇಹವನ್ನು ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ.
    ನಮ್ಮ ಕಾಫಿನಾಡಿನ ಮಹಿಳೆಯರು ಹೇಗಿಷ್ಟು ಸುರಸುಂದರಿಯರು ಎನ್ನುವ ಸಾಮಾನ್ಯ ಪ್ರಶ್ನೆಗೆ ‘ಕಾಫಿ’ಅಂತ ಸಹಜವಾಗಿ ಹೇಳಬಹುದು.
    ‘ಕಾಫಿ ಬಾತ್’ ಬಹಳ ಹಿಂದಿನಿಂದಲೂ ಕೆಲವು ಐರೋಪ್ಯ ದೇಶಗಳಲ್ಲಿ ಹಾಗು ಜಪಾನ್ ಮತ್ತು ಸಿಂಗಾಪುರ್ ಗಳಲ್ಲಿ ಅಭ್ಯಾಸದಲ್ಲಿದೆ.
    ಅಂದರೆ ಕಾಫಿ ಡಿಕಾಕ್ಷನ್ ಅನ್ನು ಬಾತ್ ಟಬ್ಬಿನೊಳಗೆ ಹಾಕಿ ಸ್ನಾನ ಮಾಡುವುದು.ಇದರಿಂದ ಚರ್ಮ ರಿಜುವೆನೇಟ್ ಆಗುತ್ತದೆ ಹಾಗು ಚರ್ಮಕ್ಕೆ ಬಿಗಿ ಮತ್ತು ಹೊಳಪು ಬರುತ್ತದೆ ಎನ್ನುವುದು ಸೌಂದರ್ಯ ಕ್ಷೇತ್ರದ ಪರಿಣಿತರ ಖಚಿತ ಅಭಿಪ್ರಾಯ.

    ಕೋರೋನಾ ಸಮಸ್ಯೆಯಲ್ಲಿ ಸಹ ಫಿಲ್ಟರ್ ಕಾಫಿಯನ್ನು ತುಸು ತೆಳುವಾಗಿ ಮಾಡಿಕೊಂಡು ದಿನದಲ್ಲಿ ಐದಾರುಬಾರಿ ಸೇವಿಸುವುದರಿಂದ ಜೀವಕೋಶಗಳ ಉರಿಯೂತದ ಸಮಸ್ಯೆಗೆ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತಿದೆ.
    ಅನಾರೋಗ್ಯದ ಸಮಯದಲ್ಲಿ ಆವರಿಸುವ ಖಿನ್ನತೆಯಿಂದ ದೂರಾಗಲು ಕಾಫಿ ಈಸ್ ಅಲ್ವೇಸ್ ಬೆಸ್ಟ್.

    ಕಾಫಿಯ ಚಿಗುರಿನಿಂದ ತಯಾರಿಸುತ್ತಿದ್ದ ಅಜ್ಜಿ ಕೊಡುತ್ತಿದ್ದ ಮದ್ದು ‘ಸೋಕಿನ ಔಷಧಿ’ ಕುಡಿದೊಡನೆ ದೇಹದ ಆಯಾಸ,ಆಲಸ್ಯಗಳು ದೂರಾಗುತ್ತಿದ್ದದ್ದನ್ನು ಈಗ ಯೋಚಿಸುವಾಗ ಕಾಫಿಯ ಒಂದು ಮುಖದ ಪರಿಚಯವನ್ನು ಮಾತ್ರ ಜಗತ್ತು ಮಾಡಿಕೊಂಡಿದೆ ಎನಿಸುತ್ತದೆ.ಈ ನಿಟ್ಟಿನಲ್ಲಿ ಕೂಡ ಅಗತ್ಯ ಅಧ್ಯಯನ ಆಗಬೇಕಿದೆ.
    ಕಾಫಿಯ ಉಪಯುಕ್ತ ಗುಣಗಳು ಇನ್ನೂ ಬಹಳಷ್ಟಿವೆ. ಆದರೆ ನ್ಯಾಚುರಲ್ ಆದ ಬಳಕೆಯಿಂದ ಮಾತ್ರವೇ ಕಾಫಿಯ ಉಪಯುಕ್ತ ಸ್ವಭಾವಗಳು ದೇಹಕ್ಕೆ ಲಭ್ಯವಾಗುತ್ತವೆ.

    ಕಾಫಿ ಮೆಷಿನ್ ಗಳಲ್ಲಿ ಮಾಡಿದ ಕಾಫಿ ಬೆಸ್ಟ್ ಇರುತ್ತದೆ ಎನ್ನುವ ಭ್ರಮೆ ಸಾಮಾನ್ಯರಲ್ಲಿ ಇದೆ.
    ಆದರೆ ನೂರಿನ್ನೂರು ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುವ ಕಾಫಿ ಫಿಲ್ಟರ್ ನಿಂದ ಉತ್ಕೃಷ್ಟ ಕಾಫಿ ಮಾಡಲು ಸಾಧ್ಯ.
    ಅದೂ ಸಾಧ್ಯವಾಗದೇ ಹೋದಲ್ಲಿ ಮುಚ್ಚಳವಿರುವ ಡಬ್ಬಿಯಲ್ಲಿ ಪುಡಿ ಮತ್ತು ಕುದಿಯುವ ನೀರು ಸುರಿದರೂ ಒಳ್ಳೆಯ ಡಿಕಾಕ್ಷನ್ ತಯಾರಾಗ್ತದೆ.

    ಫಿಲ್ಟರ್ ಕಾಫಿ ನ್ಯಾಚುರಲ್ ಕಾಫಿ

    ಕಾಫಿಯ ಅತಿಬಳಕೆ ಇರುವ ಯುರೋಪಿಯನ್ ರಾಷ್ಟ್ರಗಳಲ್ಲಿ ಕೂಡ ಫಿಲ್ಟರ್ ಕಾಫಿಯನ್ನು ನ್ಯಾಚುರಲ್ ಕಾಫಿ ಅಂತ ಪರಿಗಣಿಸುತ್ತಾರೆ.
    ಆದರೆ ಕ್ಯಾಪಿಚಿನೋ ,ಪ್ರ್ಯಾಪಿಚಿನೋ ,ಲ್ಯಾಟ್ಟೆ ,ಬ್ರೂ, ನೆಸ್ಕೇಫೆ ಗಳಂತಹ ಇನ್ಸ್ಟಂಟ್ ಕಾಫಿಗಳು ತಮ್ಮ ಮಾರ್ಕೆಟಿಂಗ್ ಅನ್ನು ಅತ್ಯುತ್ತಮವಾಗಿ ಮಾಡಿಕೊಳ್ಳುತ್ತಿವೆ.ಜೊತೆಗೆ ಕಾಫಿ ಸೇವನೆಗೆ ಬೇಕಾದ ವಿಶೇಷ ಆ್ಯಂಬಿಯನ್ಸ್ ಅನ್ನು ಈ ಕಂಪನಿಗಳು ಗ್ರಾಹಕರಿಗೆ ಮಾಡಿಕೊಡುತ್ತಿವೆ.

    ಇರಲಿ..

    ಕೆಲವು ವಿಶೇಷ ಕ್ಷಣಗಳಿಗಾಗಿ ಅವುಗಳ ಅನಿವಾರ್ಯತೆಗಳಿರಬಹುದು.
    ಆದರೆ ಫಿಲ್ಟರ್ ಕಾಫಿಗೆ ಕೂಡ ಇಂತಹ ಆಧುನಿಕತೆಯ ಸ್ಪರ್ಶದ ಅಗತ್ಯವಿದೆ.
    ಸಾಂಪ್ರಾದಾಯಿಕ ಪರಿಸರದೊಂದಿಗೆ ಅಧುನಿಕತೆ ಮಿಳಿತವಾದ ವಿಶೇಷ ‘ಫಿಲ್ಟರ್ ಕಾಫಿ ರೆಸ್ಟುರಾ’
    ಗಳಲ್ಲಿ ಕಾಫಿಯನ್ನು ಒದಗಿಸುವುದರಿಂದ ಅಧಿಕ ಗ್ರಾಹಕರನ್ನು ಸೆಳೆಯಲು ಸಾಧ್ಯವಿದೆ.ಅಸಾಂಪ್ರದಾಯಿಕ ಕಾಫಿ ಪ್ರದೇಶಗಳಲ್ಲಿ ಕಾಫಿ ಬಳಕೆ ಹೆಚ್ಚಾಗಬೇಕಾದರೆ ರುಚಿಗೂ ಮಿಗಿಲಾಗಿ ಕಾಫಿ ವಾತವರಣವನ್ನು ಕ್ರಿಯೇಟ್ ಮಾಡುವುದು ಮೊದಲ ಹೆಜ್ಜೆ.

    ಬೇಸರದ ಸಂಗತಿಯೆಂದರೆ
    ಫಿಲ್ಟರ್ ಕಾಫಿಗಾಗಿ ಮಾರ್ಕೆಟಿನಲ್ಲಿ ದೊರೆಯುವ ಕಾಫಿಪುಡಿ ಗಳು ಅಗತ್ಯಕ್ಕೂ ಮೀರಿ ಚಿಕೋರಿ ಭರಿತವಾಗಿದ್ದು ಆ ಪುಡಿಯಿಂದ ಕಾಫಿಯ ಬಳಕೆ ಹೆಚ್ಚುತ್ತದೆ ಎಂದುಕೊಳ್ಳುವುದು ಭ್ರಮೆಯಷ್ಟೆ.
    ಕಾಲಕಾಲಕ್ಕೆ ಕಾಫಿಮಂಡಳಿ ಮತ್ತು ಕಾಫಿ ಅಸೋಸಿಯೇಷನ್ ಗಳು ಇದರ ಕುರಿತು ಅಗತ್ಯ ಕಾಯ್ದೆ ಕಾನೂನುಗಳನ್ನು ರೂಪಿಸುವ ಮೂಲಕ ಉತ್ತಮ ಕಾಫಿಯನ್ನು ಗ್ರಾಹಕರಿಗೆ ಒದಗಿಸುವ ಕೆಲಸವನ್ನು ಮಾಡಬೇಕಿದೆ.

    ಸದ್ಯ ಫಿಲ್ಟರ್ ಕಾಫಿಗೆ ಬೇಕಾಗುವ ಕಾಫಿ ಪುಡಿಯನ್ನು ಬೇರೆಬೇರೆ ಬ್ಲೆಂಡ್ ಗಳಲ್ಲಿ ಪುಡಿ ಮಾಡಿಸಿ ಮಾರ್ಕೆಟಿಂಗ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಆಗಬೇಕಿದೆ.

    ಫಿಲ್ಟರ್ ಕಾಫಿಯ ವಿಶೇಷತೆಗಳನ್ನು ಮತ್ತು ಫಿಲ್ಟರ್ ಕಾಫಿ ಮಾಡುವುದನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಚಾರ ಮಾಡಿದರೆ ಕಾಫಿಯ ಬೇಡಿಕೆ ಗಣನೀಯವಾಗಿ ಹೆಚ್ಚುತ್ತದೆ .

    ಅಸಾಂಪ್ರದಾಯಿಕ ಕಾಫಿ ಪ್ರದೇಶಗಳಲ್ಲಿ ಸಮಯ ಮತ್ತು ಮಾಡುವ ವಿಧಾನಗಳ ಸಲುವಾಗಿ ಇನಸ್ಟಂಟ್ ಕಾಫಿ ಹೆಚ್ಚು ಬಳಕೆಯಲ್ಲಿದೆ.
    ಆದರೆ..
    ಈಗ ಮಾರ್ಕೆಟಿನಲ್ಲಿ ಸಿಗುತ್ತಿರುವ ಕಾಫಿ ಡಿಕಾಕ್ಷನ್ ಸ್ಯಾಷೆಟ್ ಗಳು ಇದಕ್ಕಿಂತಲೂ ಕನ್ಸ್ಯೂಮರ್ ಫ್ರೆಂಡ್ಲಿ ಆಗಿವೆ. ಮಾರುಕಟ್ಟೆಗೆ ಕಾಫಿಯನ್ನು ತರುವಷ್ಟೇ ಸಮರ್ಥವಾಗಿ ಪ್ರಚಾರದ ಅಗತ್ಯವೂ ಇದೆ.

    ಅದೆಷ್ಟೇ ಇನಸ್ಟಂಟ್ ಕಾಫಿ ಮಾರುಕಟ್ಟೆಗೆ ಬರಲಿ.
    ನಮ್ಮ ಫಿಲ್ಟರ್ ಕಾಫಿಗೆ ಸರಿಗಟ್ಟುವ ರುಚಿ ಗಾಢತೆ ತಾಜಾತನ ಅವುಗಳಿಂದ ಸಾಧ್ಯವಿಲ್ಲ.

    ಒಂದೆರಡು ದಶಕಗಳ ಹಿಂದೆ ಹೋದರೆ ಬಹುತೇಕರ ಮನೆಯಲ್ಲಿ ಕಾಫಿ ಗ್ರೈಂಡರ್ ಇರುತ್ತಿತ್ತು.ಕಾಫಿ ಹುರಿಯುವ ಅರೆಯುವ ಪರಿಮಳ ಇಡೀ ಊರನ್ನೇ ಹರಡಿಕೊಳ್ಳುತ್ತಿತ್ತು.
    ಮನೆಯಲ್ಲೇ ತಯಾರಿಸಿದ ಆ ಕಾಫಿಪುಡಿ ಬಳಸಿ ಮಾಡುತ್ತಿದ್ದ ಕಾಫಿಯ ಸ್ವಾದ ಕ್ಕೆ ಸರಿಸಾಟಿ ಯಾವುದೂ ಇಲ್ಲವೆನ್ನುವ ಮಾತು ಆಗಾಗ ನಮ್ಮಲ್ಲಿ ಕೇಳಿಬರುತ್ತದೆ.ಅದಕ್ಕೆ ಕಾರಣವೂ ಸರಳವಾಗಿದೆ. ಅಲ್ಲಿನ ಪ್ರೋಸೆಸ್ ಆಫ್ ಕಾಫಿ ಮೇಕಿಂಗ್ ಬಹಳ ನ್ಯಾಚುರಲ್ ಆಗಿತ್ತು.
    ಇದರಿಂದಾಗಿ ಕಾಫಿಯ ಸ್ವಾಭಾವಿಕ ಗುಣಗಳು ಹಾಗೆಯೇ ಉಳಿಯುತ್ತಿದ್ದವು. ಮುಂದಿನ ದಿನಗಳಲ್ಲಿ ಫಿಲ್ಟರ್ ಕಾಫಿಯೂ ಹಾಗೇ ಎನಿಸಿಕೊಳ್ಳುತ್ತದೆ.

    ಫಿಲ್ಟರ್ ಕಾಫಿ ಮಾಡುವುದನ್ನು ಕಲಿಯುವುದೂ ಕೂಡ ಖುಷಿಯ ವಿಚಾರ. ಇದು ತಿಳಿದದ್ದು ಅಸಾಂಪ್ರದಾಯಿಕ ಕಾಫಿ ಪ್ರದೇಶಗಳಲ್ಲಿ ಕಾಫಿ ಮೇಕಿಂಗ್ ಅನ್ನು ನಾವು ತಿಳಿಸಿಕೊಟ್ಟಾಗ.
    ಹೇಗೆ ಉತ್ತರಭಾರತದ ರಸಮಲೈ ಅನ್ನು ನಾವು ತಯಾರಿಸಿದಾಗ ಸಂಭ್ರಮಿಸ್ತಿವೋ ಹಾಗೆ ಕಡುವಾದ,ರುಚಿಯಾದ ಕಾಫಿಯನ್ನು ತಾವೇ ತಯಾರಿಸಿಕೊಂಡಿದ್ದನ್ನು ಹೇಳುವಾಗ ಅವರು ಸಂಭ್ರಮಿಸುವುದೇ ಚಂದ.

    ಕಾಫಿ ಸಂಸ್ಕೃತಿಯೂ ಹಾಗೆ.
    ಮುಗಿಯದ ಆಹ್ಲಾದದ ಅನುಭವ.
    ನಮ್ಮ ಬಾಲ್ಯದಲ್ಲಿ ಶಾಲೆಯಿಂದ ಬರುವಾಗ ಗೇಟಿನ‌ವರೆಗೂ ಹರಡಿರುತ್ತಿದ್ದ ಕಾಪಿಯ ಪರಿಮಳ,ಮುಂಜಾವಿಗೇ ತಟ್ಟಿ ಎಬ್ಬಿಸುತ್ತಿದ್ದ ಕಾಫಿಯ ಘಮಘಮ.ಇದೆಲ್ಲವೂ ಮಾತಿಗೆ ನಿಲುಕದ ವಿಷಯಗಳು. ಇಂತಹ ರಸಭರಿತ ಕಾಫಿಯ ಅಸ್ವಾದನೆಯನ್ನು ಮುಂದಿನ ಪೀಳಿಗೆಯೂ ಪಡೆಯಬೇಕಲ್ಲವೇ?

    ಅದರ ಸಲುವಾಗಿಯಾದರೂ
    ಇಂತಹದೊಂದು ಅದ್ವಿತೀಯ ಪೇಯವನ್ನು ನಾವು ಜನಪ್ರಿಯ ಗೊಳಿಸಬೇಕಿದೆ.
    ಇದಕ್ಕೆ ಕಾಫಿಮಂಡಳಿಯೂ ಬೆಳೆಗಾರರ ಜೊತೆಗೆ ಕೈ ಜೋಡಿಸಬೇಕು. ಕೇವಲ ಸಹಾಯಧನಕ್ಕೊ,ಪ್ರಕೃತಿ ವಿಕೋಪ ಪರಿಹಾರಕ್ಕೊ ಮಾತ್ರ ಕಾಫಿ ಮಂಡಳಿ ಸೀಮಿತವಾಗದೆ ಕಾಫಿ ಸಂಸ್ಕೃತಿಯನ್ನು ಪ್ರಮೋಟ್ ಮಾಡುವ ಮೂಲಕ ಆಂತರಿಕ ಮಾರುಕಟ್ಟೆ ಹೆಚ್ಚಿಸುವ ಗುರುತರ ಜವಬ್ದಾರಿ ಕಾಫಿ ಮಂಡಳಿಯ ಮೇಲಿದೆ.

    ಇನ್ನೂ ನಮ್ಮ ಪ್ರಮುಖ ಕಾಫಿ ಬೆಳೆಯುವ ತಾಲೂಕು ಸಕಲೇಶಪುರದಲ್ಲಿ ಸಂಪೂರ್ಣ ಮಹಿಳೆಯರೇ ನಡೆಸುವ “ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್‌ ” ಇದ್ದು ಇವರು ಕೂಡ ರಾಜ್ಯ ‌ಮತ್ತು ದೇಶದ ಹಲವೆಡೆ ಕಾಫಿ ಸ್ಟಾಲ್ ಗಳನ್ನು ಹಾಕುವ ಮೂಲಕ ಕಾಫಿಯನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
    ಇವರ ಕಾರ್ಯವೈಖರಿ ಕೂಡ ಇನ್ನೂ ವೇಗವನ್ನು ಪರಿಣಿತಿಯನ್ನೂ ಪಡೆಯಬೇಕಿದೆ.
    ಅಸಾಂಪ್ರದಾಯಿಕ ಕಾಫಿ‌ ಪ್ರದೇಶಗಳಿಗೆ ತೆರಳಿ ಕಾಫಿಯನ್ನು ಪರಿಚಯಿಸುವ ಇವರ ಕಾರ್ಯಕ್ಕೆ ಕಾಫಿ ಮಂಡಳಿಯ ಪ್ರೋತ್ಸಾಹವೂ ದೊರಕಬೇಕಿದೆ.

    ಇಂದು ಅಕ್ಟೋಬರ್ ಒಂದು. ಅಂತಾರಾಷ್ಟ್ರೀಯ ಕಾಫಿ ದಿನ. ಕಾಫಿ ಬೆಳೆಗಾರ ಸಮುದಾಯ ಈ ದಿನವನ್ನು ಬಹಳ ಸಂಭ್ರಮದಿಂದ ಅಚರಿಸುತ್ತಾರೆ.
    ಸಮುದಾಯದ ಸಂಪ್ರದಾಯಗಳು, ಆಚರಣೆಗಳು,ಕಾಫಿ ವೈಶಿಷ್ಟ್ಯ ಬಿಂಬಿಸುವ ಕಾರ್ಯಕ್ರಮಗಳ ಜೊತೆಗೆ ಕಾಫಿ ಕ್ಷೇತ್ರದ ಪ್ರಸ್ತುತ ಸಮಸ್ಯೆಗಳನ್ನು ವ್ಯವಸ್ಥೆಗೆ ಮುಟ್ಟಿಸುವ ಕಾರ್ಯ ಆ ದಿನದ ಮುಖ್ಯ ಉದ್ದೇಶವಾಗಿರುತ್ತದೆ.
    ಸ್ಥಳೀಯ ಕಾಫಿ ಸಂಘಟನೆಗಳ ಜೊತೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳು ಜಂಟಿಯಾಗಿ ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಯೋಜನೆ ಮಾಡುತ್ತಾರೆ.

    ಇವೆಲ್ಲಕ್ಕಿಂತ ಮುಖ್ಯವಾಗಿ ಅಂದು ನಮ್ಮ ಕಾಫಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಚಿತವಾಗಿ ಕಾಫಿ ವಿತರಿಸುವ ಮೂಲಕ ನಮ್ಮ ಫಿಲ್ಟರ್ ಕಾಫಿಯನ್ನು ಪ್ರಮೋಟ್ ಮಾಡುವ ಕಾರ್ಯವನ್ನು ಮಾಡಲಾಗ್ತಿದೆ.
    ಕಾಫಿನಾಡಿನ ಈ ಆತಿಥ್ಯಕ್ಕೆ ಸಾರ್ವಜನಿಕರ ಸ್ಪಂದನೆ ಕೂಡ ಅತ್ಯುತ್ತಮವಾಗಿದೆ.

    ನಮ್ಮ ಕಾಫಿನಾಡಿನ ಜಿಲ್ಲೆಗಳ ಮೂಲಕ ಅತ್ಯುತ್ತಮ ಕಾಫಿಯನ್ನು ಗ್ರಾಹಕರಿಗೆ ಒದಗಿಸುವ ಕೆಲಸವಾದರೆ ಫಿಲ್ಟರ್ ಕಾಫಿಯ ಬಳಕೆಯೂ,ಫಿಲ್ಟರ್ ಕಾಫಿಯ ಕುರಿತು ಆಸಕ್ತಿಯೂ ಖಂಡಿತವಾಗಿ ಹೆಚ್ಚುವುದರಲ್ಲಿ ಸಂದೇಹವಿಲ್ಲ.

    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.
    spot_img

    More articles

    1 COMMENT

    1. ಕಾಫಿ ಬಗ್ಗೆ ತುಂಬ ಚಂದ ಬರೆದಿದ್ದಾರೆ.
      ಘಮಘಮಿಸುವ ಬರಹ

    LEAVE A REPLY

    Please enter your comment!
    Please enter your name here

    Latest article

    error: Content is protected !!