18.6 C
Karnataka
Friday, November 22, 2024

    ಮೃದುವಾದ ಮನಸ್ಸಿನ ಹಿಂದೆ ಬಂಡೆಯಂತಹ ದೃಢತೆ

    Must read

    ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮಾಡಿದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವಿಂದು. 1904, ಅಕ್ಟೋಬರ್ 2 ರಂದು ಉತ್ತರ ಪ್ರದೇಶದ ವಾರಣಾಸಿಯಿಂದ ಏಳು ಮೈಲಿ ದೂರದಲ್ಲಿರುವ ಮೊಘಲ್ಸರೈ ಎಂಬ ಸಣ್ಣ ಊರಿನಲ್ಲಿ ಜನಿಸಿದರು. ಅವರ ತಂದೆ ಶಾಲಾ ಶಿಕ್ಷಕರಾಗಿದ್ದು, ಲಾಲ್ ಬಹದ್ದೂರ್ ಶಾಸ್ತ್ರಿ ಕೇವಲ ಒಂದೂವರೆ ವರ್ಷದವರಿದ್ದಾಗ ಅವರ ತಂದೆ ವಿಧಿವಶರಾದರು. ಅವರ ತಾಯಿ ತನ್ನ ಮೂವರು ಮಕ್ಕಳನ್ನು ತಂದೆಯ ಮನೆಗೆ ಕರೆದೊಯ್ದು ಅಲ್ಲಿಯೇ ನೆಲೆಸಿ ಮಕ್ಕಳನ್ನು ಸಾಕಿ ಸಲಹಿದರು.

    ಪ್ರಾಥಮಿಕ ಶಿಕ್ಷಣ ಸಣ್ಣ ಊರಿನಲ್ಲಿ, ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಹಾಗಾಗಿ ಪ್ರೌಢಶಾಲಾ ಶಿಕ್ಷಣಕ್ಕಾಗಿ ಅವರನ್ನು ವಾರಣಾಸಿಯಲ್ಲಿ ಚಿಕ್ಕಪ್ಪನೊಂದಿಗೆ ವಾಸಿಸಲು ಕಳುಹಿಸಲ್ಪಟ್ಟರು. ಬೇಸಿಗೆಯ ಸುಡು ಬಿಸಿಲಿನಲ್ಲಿ ಕಾಲಿಗೆ ಚಪ್ಪಲಿಯೂ ಇಲ್ಲದೆ ಶಾಲೆಗೆ ನಡೆದು ಹೋಗುತ್ತಿದ್ದರಂತೆ.

    ಬೆಳೆದಂತೆ, ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಸ್ವಾತಂತ್ರ್ಯ ಹಾಗೂ ದೇಶದ ಹೋರಾಟದ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಹುಟ್ಟುತ್ತಾ ಹೋಯಿತು.  ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ್ದಕ್ಕಾಗಿ ಮಹಾತ್ಮ ಗಾಂಧಿಯವರು ಭಾರತೀಯ ರಾಜಕುಮಾರರನ್ನು ಖಂಡಿಸಿದ್ದು ಇವರ ಮೇಲೆ ಬಹಳ ಪ್ರಭಾವವನ್ನು ಬೀರಿತು.  ಲಾಲ್ ಬಹದ್ದೂರ್ ಶಾಸ್ತ್ರಿ ಆ ಸಮಯದಲ್ಲಿ ಕೇವಲ ಹನ್ನೊಂದು ವರ್ಷದವರಾಗಿದ್ದರು, ಆದರೆ ಆಗಲೇ ಅವರು ಮಾನಸಿಕವಾಗಿ ದೇಶಕ್ಕಾಗಿ ಹೋರಾಡಲು ಸಿದ್ಧತೆ ನಡೆಸಿದ್ದರು.

    ಗಾಂಧೀಜಿ ತಮ್ಮ ದೇಶವಾಸಿಗಳನ್ನು ಅಸಹಕಾರ ಚಳವಳಿಯಲ್ಲಿ ಸೇರಲು ಕರೆ ನೀಡಿದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಹದಿನಾರು ವರ್ಷ. ಮಹಾತ್ಮರ ಕರೆಗೆ ಓಗೊಟ್ಟ ಅವರು ತಮ್ಮ ಅಧ್ಯಯನವನ್ನು ತ್ಯಜಿಸಲು ಒಮ್ಮೆಲೇ ನಿರ್ಧರಿಸಿದರು. ಈ ನಿರ್ಧಾರವು ತಾಯಿಯ ಹೃದಯವನ್ನು ಛಿದ್ರಗೊಳಿಸಿತು. ಕುಟುಂಬವು ಅವರನ್ನು ತಡೆಯಲು ಸಾಧ್ಯವಾಗಲಿಲ್ಲ.  ಒಮ್ಮೆ ಮನಸ್ಸು ಮಾಡಿದ ನಂತರ ಅವರು ಎಂದಿಗೂ ಬದಲಾಯಿವುದಿಲ್ಲ ಎಂಬುದು ಕುಟುಂಬದ ಎಲ್ಲರಿಗೂ ತಿಳಿದಿತ್ತು, ಅವರ ಮೃದುವಾದ ಮನಸ್ಸಿನ ಹಿಂದೆ ಬಂಡೆಯಂತಹ ಧೃಢತೆ ಇತ್ತು.

    ಲಾಲ್ ಬಹದ್ದೂರ್ ಶಾಸ್ತ್ರಿ ವಾರಣಾಸಿಯ ಕಾಶಿ ವಿದ್ಯಾ ಪೀಠಕ್ಕೆ ಸೇರಿದರು. ಇದು ಬ್ರಿಟಿಷ್ ಆಡಳಿತವನ್ನು ಧಿಕ್ಕರಿಸಿ ಸ್ಥಾಪಿಸಲಾದ ಅನೇಕ ರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿದೆ. ಅಲ್ಲಿ ಅವರು ದೇಶದ ಶ್ರೇಷ್ಠ ಬುದ್ಧಿಜೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. ‘ಶಾಸ್ತ್ರಿ’ ಎನ್ನುವುದು ಅವರಿಗೆ ವಿದ್ಯಾ ಪೀಠದಲ್ಲಿ ನೀಡಿದ ಬ್ಯಾಚುಲರ್ ಡಿಗ್ರಿ ಅವಾರ್ಡ್, ಆದರೆ ಜನರ ಮನಸ್ಸಿನಲ್ಲಿ ಅದು ಅವರ ಹೆಸರಿನ ಭಾಗವೇ ಆಗಿ ಸೇರಿದೆ.

    1927 ರಲ್ಲಿ ಅವರು ವಿವಾಹವಾದರು. ಅವರ ಪತ್ನಿ ಲಲಿತಾದೇವಿ, ಮಿರ್ಜಾಪುರದವರು. ವಿವಾಹವು ಸಾಂಪ್ರದಾಯಿಕವಾಗಿತ್ತು .ಒಂದು ನೂಲುವ ಚಕ್ರ ಮತ್ತು ಕೆಲವು ಗಜಗಳಷ್ಟು ಹ್ಯಾಂಡ್‌ಸ್ಪನ್ ಬಟ್ಟೆಯನ್ನು ಮಾತ್ರ ಅವರು ವರದಕ್ಷಿಣೆಯಾಗಿ ಸ್ವೀಕರಿಸಿದರು. 

    ಲಾಲ್ ಬಹದ್ದೂರ್ ಶಾಸ್ತ್ರಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರು ಅನೇಕ ಬ್ರಿಟಿಷ್ ವಿರೋಧಿ ಪ್ರಚಾರಗಳನ್ನು ನಡೆಸಿದರು ಮತ್ತು ಸುಮಾರು ವರ್ಷಗಳನ್ನು ಜೈಲುಗಳಲ್ಲಿ ಕಳೆದರು. ಈ ಹೋರಾಟಗಳಲ್ಲಿ ಭಾಗವಹಿಸಿದ್ದರಿಂದ ಎಲ್ಲರೂ ಅವರನ್ನು ಗುರುತಿಸಿವಂತಾಯಿತು.

    ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಸೌಮ್ಯ ಮತ್ತು ನಿರ್ಭಯ ನಾಯಕ ಎಂದು ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಎಲ್ಲರೂ ಗುರುತಿಸಿದ್ದರು. ಕಾಂಗ್ರೆಸ್ ಸರ್ಕಾರ ರಚನೆಯಾದಾಗ, ಈ ಲಿಟ್ಲ್ ಮ್ಯಾನ್ ಆಫ್ ಡೈನಮೋ ಅವರನ್ನು ದೇಶದ ಆಡಳಿತದಲ್ಲಿ ರಚನಾತ್ಮಕ ಪಾತ್ರವಹಿಸಲು ಕರೆ ನೀಡಲಾಯಿತು. ಅವರು ತಮ್ಮ ತವರು ರಾಜ್ಯವಾದ ಉತ್ತರ ಪ್ರದೇಶದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು ಮತ್ತು ಗೃಹ ಸಚಿವರ ಸ್ಥಾನಕ್ಕೂ ಏರಿದರು. ಅವರ ಕಠಿಣ ಪರಿಶ್ರಮ ಮತ್ತು ದಕ್ಷತೆಯ ಕೆಲಸದಿಂದ 1951 ರಲ್ಲಿ ನವದೆಹಲಿಗೆ ತೆರಳಿ ಕೇಂದ್ರ ಸಚಿವ ಸಂಪುಟದಲ್ಲಿ ಹಲವಾರು ಖಾತೆಗಳನ್ನು ನಿಭಾಯಿಸಿದರು. ರೈಲ್ವೆ ಸಚಿವ, ಸಾರಿಗೆ ಮತ್ತು ಸಂವಹನ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಗೃಹ ಸಚಿವ, ಹೀಗೆ. ರೈಲ್ವೆ ಮಂತ್ರಿಗಳಾಗಿದ್ದಾಗ ಒಮ್ಮೆ ಒಂದು ರೈಲು ಅಪಘಾತ ನಡೆಯುತ್ತದೆ ಆಗ ಆ ಅಪಘಾತಕ್ಕೆ ತಾನೇ ಕಾರಣ ಎಂದು ಭಾವಿಸಿ ಅವರು ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.  ಈ ನಡೆಯನ್ನು ಇಡೀ ಸಂಸತ್ತು ಮತ್ತು ದೇಶವು ಬಹಳವಾಗಿ ಪ್ರಶಂಶಿಸಿತು. ಅಂದಿನ ಪ್ರಧಾನಿ ನೆಹರೂ ಅವರು  ಈ ಘಟನೆ ಕುರಿತು ಸಂಸತ್ತಿನಲ್ಲಿ ಮಾತನಾಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ಶ್ಲಾಘಿಸುತ್ತ ರಾಜೀನಾಮೆಯನ್ನು ಅಂಗೀಕರಿಸುತ್ತಿದ್ದೇನೆ, ಏಕೆಂದರೆ ಇದರಿಂದ ಮುಂದೆ ಇಂತಹ ಸಂದರ್ಭ ಬಂದಲ್ಲಿ ನಮಗೆ ಒಂದು ಮಾದರಿ ಯಾಗಿ ನಿಂತಿರುತ್ತದೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಯಾವುದೇ ರೀತಿಯಲ್ಲೂ ಈ ಅಪಘಾತಕ್ಕೆ ಜವಾಬ್ದಾರರಲ್ಲ ಎಂದು ತಿಳಿಸಿದರು. ರೈಲ್ವೆ ಅಪಘಾತದ ಬಗ್ಗೆ ಸುದೀರ್ಘ ಚರ್ಚೆ ನಡೆದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಹೇಳುತ್ತಾರೆ “ಬಹುಶಃ ನಾನು ಗಾತ್ರದಲ್ಲಿ ಚಿಕ್ಕವನಾಗಿರುವುದರಿಂದ ಮತ್ತು ನಾನು ಸೌಮ್ಯ ಸ್ವಭಾವದವನಾದ್ದರಿಂದ ನಾನು ತುಂಬಾ ದೃಢವಾಗಿರಲು ಸಾಧ್ಯವಿಲ್ಲ ಎಂದು ಜನರು ನಂಬುತ್ತಿದ್ದಾರೆ.  ದೈಹಿಕವಾಗಿ ದೃಢವಾಗಿಲ್ಲದಿದ್ದರೂ, ನಾನು ಆಂತರಿಕವಾಗಿ ದುರ್ಬಲನಲ್ಲ” ಎಂದು.

    ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲವನ್ನು ದೇಶ ಸೇವೆಗೆ ಸಮರ್ಪಿಸಿದರು. ಈ ಅವಧಿಯಲ್ಲಿ ಅವರು ಬಹಳ ಸಾಮರ್ಥ್ಯದ ವ್ಯಕ್ತಿ ಎಂದು ಪ್ರಸಿದ್ಧರಾದರು.  ನೆಹರೂ ನಂತರ ನಮ್ಮ ದೇಶದ ಪ್ರಧಾನ ಮಂತ್ರಿಯೂ ಆದರು .
    ದೇಶವನ್ನು ಪ್ರಗತಿಯತ್ತ ಕೊಂಡೊಯ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಮಹಾತ್ಮ ಗಾಂಧಿಯವರ ರಾಜಕೀಯ ಬೋಧನೆಗಳಿಂದ ಆಳವಾಗಿ ಪ್ರಭಾವಿತರಾದವರು. “ಕಠಿಣ ಪರಿಶ್ರಮವು ಪ್ರಾರ್ಥನೆಗೆ ಸಮಾನವಾಗಿದೆ” ಎಂದು ಅವರು ಹೇಳುತ್ತಿದ್ದರು.

    ಇಂತಹ ಸೌಮ್ಯ, ಸರಳ, ದೃಢ ವ್ಯಕ್ತಿಯನ್ನು ನಾವು ತಾಷ್ಕೆಂಟ್ ಒಪ್ಪಂದದ ಮರುದಿನವೇ ಕಳೆದುಕೊಂಡೆವು. ಅವರ ಮರಣ ಇನ್ನೂ ಭಾರತೀಯರಿಗೆ ನಿಗೂಢ.

    ಭಾರತಿ
    ಭಾರತಿhttps://kannadapress.com/
    ಬೆಂಗಳೂರು ನಿವಾಸಿ. ಹೋಂ ಮೇಕರ್ . ಕುಕ್ಕಿಂಗ್ ಮತ್ತು ಬರವಣಿಗೆಯಲ್ಲಿ ಆಸಕ್ತಿ
    spot_img

    More articles

    1 COMMENT

    1. ಮಹಾನ್ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹುಟ್ಟು ಹಬ್ಬದ ದಿನ ಬರೆದ ಲೇಖನ ಚೆನ್ನಾಗಿದೆ. ಚೊಕ್ಕವಾಗಿ, ಸಮಗ್ರ ಮಾಹಿತಿ ನೀಡಿದ್ದಾರೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!