18.6 C
Karnataka
Friday, November 22, 2024

    ಬದುಕಿನಿಂದ ಆಸೆ ತೆಗೆದರೆ ಅಲ್ಲಿ ಬದುಕು ಇರುತ್ತಾ

    Must read

    ಆಸೆ ಅನ್ನೋದು ಯಾವಾಗ ನನ್ನಲ್ಲಿ ಮೊದಲ ಬಾರಿ ಸೇರಿಕೊಂಡಿರಬಹುದು ಅಂತ ಮೆಲುಕು ಹಾಕ ತೊಡಗಿದೆ. ನಿರ್ದಿಷ್ಟ ಸಮಯ,ಘಟನೆ ಕಾಣಲಿಲ್ಲ. ಬಹುಶಃ ನನ್ನ ಬುದ್ದಿ ಜೊತೆಯಲ್ಲೇ ಇತ್ತೇನೋ ಅಂತ ಅನುಮಾನ. ನೆನಪಿನ ಆಚೆ ದಡದಿಂದಲೂ ನನ್ನಲ್ಲಿದ್ದಿರಬೇಕು,ಹುಟ್ಟಿದ ಕ್ಷಣದಿಂದ ಅಮ್ಮನನ್ನು ಬಿಟ್ಟಿರಲಾರದ ಆಸೆಯಿಂದಲೂ ಅಥವಾ ಅದಕ್ಕೂ ಮುಂಚೆ ಹುಟ್ಟುವ ಆಸೆಯೂ ನನ್ನಲ್ಲಿತ್ತೇನೋ? ಆಳಕ್ಕೆ ಇಣುಕಿದರೆ ಎಟುಕಲಾರದ ಭಾವನೆ,ಕಾಣದ ಅಗಾಢತೆ ಬಂದು, ಮೇಲಕ್ಕೆ ನೋಡುವ ಪ್ರಯತ್ನ ಮಾಡಿದೆ. ಮೇಲಕ್ಕೆ ನೋಡಿದಂತೆಲ್ಲ ಆದ ಇದರ ವಿರಾಟ ದರ್ಶನವನ್ನು ಎಲ್ಲಿಂದ ಶುರುಮಾಡಲಿ?!

    ಅಮ್ಮನ ಮಡಿಲು,ಅಪ್ಪನ ತೊಡೆ,ಎದೆ ಅವಚಿಕೊಳ್ಳಬೇಕು ಅನ್ನುವ ಬಯಕೆ ನನ್ನ ಮೊದಲ ನೆನಪಲ್ಲಿ ಉಳಿದ ಆಸೆ ಆಗಿದೆ. ಅದರ ಮುಂಚಿನ ಆಸೆಗಳು ಎನಿದ್ದವೋ ನನಗೆ ಗೊತ್ತಿಲ್ಲ. ಅಲ್ಲಿಂದ ಬೆಳೆದಂತೆಲ್ಲಾ ಸಮಯಕ್ಕೆ, ಪರಿಸ್ಥಿತಿಗೆ,ಸುತ್ತ ಇರುತ್ತಿದ್ದ ಜನಗಳ,ವಸ್ತುಗಳ ಆಧಾರದ ಮೇಲೆ ಈ ಆಸೆ ಅನ್ನೋದು ರೂಪಾಂತರ ಹೊಂದಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದಕ್ಕೆ ನಿರ್ದಿಷ್ಟ ಸ್ಪಷ್ಟತೆ ಇಲ್ಲದಿದ್ದರೂ,ತನ್ನ ಇರುವಿಕೆಯನ್ನು ನನ್ನಲ್ಲಿ ಸ್ಥಾಪಿಸಿಕೊಂಡೇ,ಪ್ರತಿ ಹಂತದಲ್ಲಿ ತನ್ನ ಇರುವಿಕೆಯನ್ನು ಬೇರೆ ಬೇರೆ ರೂಪಗಳಲ್ಲಿ ಪ್ರದರ್ಶಿಸುತ್ತಾ ನನ್ನ ಜೊತೆಯಲ್ಲಿ ಇದೆ. ಇದರ ನಿಜವಾದ ಗುಣ,ರೂಪ ಯಾವುದು ಹೇಗಿದೆ ಅಂತ ನನಗಿನ್ನೂ ತಿಳಿದಿಲ್ಲ. ಕ್ಷಣವೂ ಬಿಟ್ಟಿರದದ್ದು ಇದೊಂದೇ ಅಂತ ಹೇಳುವ ಮಟ್ಟಿಗೆ ನನ್ನ,ಇದರ ಸಂಬಂಧ ಇದ್ದರೂ, ಇದರ ನಿಜ ಸ್ವರೂಪ ನನಗೆ ಮನವರಿಕೆಯಾಗದೇ ಇರೋದು, ನನಗೇ ಆಶ್ಚರ್ಯ ತರಿಸಿದೆ. ಹಾಗಾಗಿ 55ರ ಈ ಹರೆಯದಲ್ಲಿ ಇದನ್ನ ನನ್ನಿಂದ ಪ್ರತ್ಯೇಕಿಸಿ ಅವಲೋಕಿಸುವ ಮನಸ್ಸಾಯ್ತು.

    ಆಸೆ ಸರ್ವಾಂತರ್ಯಾಮಿಯಾ?

    ನನ್ನನ್ನು ಪ್ರತ್ಯೇಕಿಸಿ, ಅವಲೋಕಿಸುವ ಮನಸ್ಸು ನಿನಗೆ ಬಂತಲ್ಲಾ, ಅದೂ ನನ್ನಿಂದನೇ ಅಂತ ಆಸೆ ಹೇಳಿ, ನಕ್ಕ ಅನುಭವ ಆಯ್ತು. ಒಮ್ಮೆ ಬೆಚ್ಚಿಬಿದ್ದೆ. ಆಸೆ ಸರ್ವಾಂತರ್ಯಾಮಿಯಾ? ಭಗವಂತನ ರೂಪವಾ? ಇಡೀ ಸೃಷ್ಟಿಯ ಪ್ರೇರಕ ಶಕ್ತಿಯಾ? ಇದಿಲ್ಲದ ಸೃಷ್ಟಿಯ ಯಾವ ವ್ಯಾಪಾರವೂ ಸಾಧ್ಯವಿಲ್ಲವಾ? ಗೊತ್ತಿಲ್ಲ. ದೊಡ್ಡ ದೊಡ್ಡ ತತ್ವಜ್ಞಾನಿಗಳು,ದಾರ್ಶನಿಕರು ಮಾತ್ರ ಇದಕ್ಕೆ ಹಲವಾರು ರೂಪ ಕೊಟ್ಟು ,ಒಂದು ರೀತಿಯ ಅಸ್ಪೃಶ್ಯತೆಯನ್ನು ಇದರ ಜೊತೆ ಪಾಲಿಸಿಕೊಂಡು ಬಂದಿದ್ದಾರೆ.

    ಹೊರಹಾಕದಿದ್ದರೂ, ಹಾಕಲು ಆಗದಿದ್ದರೂ ಇದರ ನಿಗ್ರಹ ತುಂಬಾ ಅವಶ್ಯಕ ಅನ್ನುವ ಸಂದೇಶವನ್ನು ಬಹಳ ಕಡೆ ನೋಡಿದ ಮೇಲೆ, ನನ್ನಲ್ಲೇ ಇದ್ದ ಇದರ ಕಡೆ ನೋಡಿದೆ. ಇದು ಅಮಾಯಕವಾಗಿ ನನ್ನನ್ನೇ ನೋಡಿ ನಕ್ಕು ಬಿಡುವುದಾ?

    ಆಸೆ ಆಸೆಯೇ

    ಆಸೆ,ಮಹದಾಸೆ,ದುರಾಸೆ ಹೀಗೆ ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆದರೂ ಆಸೆ ಆಸೆಯೇ. ಹೆಣ್ಣು,ಹೊನ್ನು,ಮಣ್ಣುಗಳಲ್ಲಿ ಪಾಮರರಾದ ನಾವುಗಳು ಇದರ ಹುಟ್ಟು ಕಂಡುಕೊಂಡರೂ, ಜ್ಞಾನಿಗಳು ಪರಮಾತ್ಮನನ್ನು ಕಾಣಬೇಕು ಎನ್ನುವುದರಲ್ಲಿ ಈ ಆಸೆಯನ್ನು ಕಂಡುಕೊಂಡಿದ್ದಾರೆ. ಯಾವುದೋ ಒಂದು ರೂಪದಲ್ಲಿ ಎಲ್ಲರನ್ನೂ ಆವರಿಸಿರುವ ಈ ಆಸೆ, ಅದೇಗೆ ಯಾರಿಗೇ ಆದರೂ ಬೇಡವಾಗಬೇಕು? ಯಾಕೆ ಎಲ್ಲರಿಗೂ ಇದನ್ನು ಕಂಡರೆ ಒಂದು ರೀತಿಯ ಮುಜುಗರ?

    ಹೌದು ನನ್ನಲ್ಲಿ ಆಸೆ ಇದೆ ಅಂತ ಹೇಳೋಕ್ಕೆ ಎಷ್ಟು ಸಜ್ಜನರು ನಮ್ಮಲ್ಲಿ ತಯಾರಿದ್ದಾರೆ? ಆಸೆ ನಮಗೆ ಮೈಲಿಗೆ ಆದದ್ದು ಯಾವಾಗ ಮತ್ತು ಯಾಕೆ? ನನಗೆ ಅಂತಹ ಆಸೆಗಳು ಇಲ್ಲ ಅನ್ನುವ ಲೋಕಾರೂಢಿ ವಾಕ್ಯಕ್ಕೆ ನಿಜವಾಗಿಯೂ ಅರ್ಥ ಇದೆಯಾ? ಕ್ಷಣವೂ ಬಿಟ್ಟಿರದ ಈ ಆಸೆ ನನ್ನಲ್ಲಿ ಇಲ್ಲ ಅಂತ ಹೇಳಲು ನನಗೆ ಕಷ್ಟ ಆಗ್ತಿದೆ. ಯಾಕೋ ಗೊತ್ತಿಲ್ಲ,ನನಗೆ ತಿಳಿಯದೆಯೇ ನನಗೆ ಇದರ ಮೇಲೆ ಇತ್ತೀಚೆಗೆ ತುಂಬಾ ಪ್ರೀತಿ ಉಂಟಾಗಿದೆ. ಇದರ ಯಾವ ರೂಪದ ಮೇಲೆ ಪ್ರೀತಿ ಅಂತ ಹೇಳೋದು ಕಷ್ಟ, ಪ್ರೀತಿ ಅಂತೂ ಇದೆ.

    ಮಹದಾಸೆ,ದುರಾಸೆ ಇದರ ಪರಮೋಚ್ಚ ತುದಿಗಳಾಗಿವೆ. ಇವು ಆಸೆಯಷ್ಟು ಸಾಮಾನ್ಯವಾಗಿ ಎಲ್ಲರನ್ನೂ ಆವರಿಸದೇ, ಕೆಲವರಿಗೆ ಸೀಮಿತ ಅಂತ ತಿಳಿದು, ಅವುಗಳನ್ನು ಆಸೆಯ ವ್ಯಾಪ್ತಿಯಿಂದ ಈ ಲೇಖನದಲ್ಲಿ ದೂರ ಇಡುತ್ತಿದ್ದೇನೆ.

    ಕಾಮ,ಕ್ರೋಧ,ಮದ,ಲೋಭ,ಮೋಹ,ಮತ್ಸರ….ಅರಿಷಡ್ವರ್ಗಗಳು ಅಂತ ಕರೆಯಿಸಿಕೊಂಡಿರುವ ಈ ಆರು ಗುಣಗಳ ಅಮ್ಮ ಈ ಆಸೆಯೇ ಅಂತ ಅನ್ನಿಸಿದರೂ, ಆಸೆಯನ್ನ ಈ ಸಾಲಿನಲ್ಲಿ ಹೆಸರಿಸಿಲ್ಲ ಅನ್ನೋದು ನನಗೆ ಏನೋ ಖುಷಿ,ಸಮಾಧಾನ. ಯಾಕೋ ಗೊತ್ತಿಲ್ಲ. ಆಸೆ ಇಲ್ಲದೆ ಪ್ರಕೃತಿ ಇರಬಲ್ಲದೇ? ಆಸೆಯ ದುಂಬಿ ಬರದೇ ಹೂವು ಅರಳ ಬಲ್ಲದೇ? ದುಂಬಿಯನ್ನಾಕರ್ಷಿಸುವ ಹೂವಿನ ಪರಿಮಳವನ್ನು ಹೂವಿನ ಆಸೆ ಅಂತ ತುಚ್ಚಿಕರಿಸಲೇ? ಹು ಹೂ… ಸಾಧ್ಯವೂ ಇಲ್ಲ,ಸಿಂಧುವೂ ಅಲ್ಲ. ಆಸೆಯಿಲ್ಲದ ಪ್ರಕೃತಿ,ಪ್ರಪಂಚವನ್ನು ನನಗೆ ಊಹಿಸಿಕೊಳ್ಳಲೂ ಆಗುತ್ತಿಲ್ಲ.

    ಆಸೆಯೇ ಸೃಷ್ಟಿಯನ್ನು ಜೀವಂತವಾಗಿ ಇಟ್ಟಿದೆ

    ಆಸೆ ಪ್ರತಿ ಜೀವರಾಶಿಯಲ್ಲಿ ಇರಲೇ ಬೇಕಾದ ಅನಿವಾರ್ಯ ಅಂಶ ಅಂತ ಅನ್ನಿಸುತ್ತಿಲ್ಲವಾ? ನನಗಂತೂ ಈ ಆಸೆಯೇ ಸೃಷ್ಟಿಯನ್ನು ಜೀವಂತವಾಗಿ ಇಟ್ಟಿದೆ ಅನ್ಸುತ್ತೆ. ಅಷ್ಟೇ ಅಲ್ಲ, ಆಸೆ ಚಿರನೂತನ! ನಿನ್ನೆಯ ಆಸೆ,ನಾಳೆಯ ಆಸೆಯ ಮುಂದೆ ಬಾಲಿಶವಾಗಿ ಕಂಡಿದೆ ನನಗೆ. ಜಾರುವ ಕ್ಷಣಕ್ಕನುಸಾರವಾಗಿ ಮಾಯವಾಗಿ,ಹುಟ್ಟುವ ಮರುಕ್ಷಣಕ್ಕೆ ಹೊಸತನ್ನು ಹೊದ್ದು ಬರುವ ಈ ಆಸೆ ನನ್ನಲ್ಲಿ ಒಂದು ರೀತಿಯ ಅವರ್ಣನೀಯ ಪ್ರಜ್ಞೆಯನ್ನು ಹುಟ್ಟು ಹಾಕಿ,ನನಗರಿವಿಲ್ಲದೆಯೇ ನನ್ನಲ್ಲಿ ನನ್ನತನದ ಜೀವಂತಿಕೆಯನ್ನು ತುಂಬುತ್ತಿದೆ.

    ಇಂತಹ ಆಸೆಯನ್ನು ನಿಗ್ರಹಿಸಬೇಕು ಅಂತ ಜ್ಞಾನಿಗಳಾದರೂ ಯಾಕೆ ಹೇಳಿದರು? ಇದನ್ನು ನಿಗ್ರಹಿಸಿದಷ್ಟೂ ಕೆರಳುವುದನ್ನು ನಾನು ಕಂಡುಕೊಂಡಿದ್ದೇನೆ. ಇದನ್ನು ಇದರ ಪಾಡಿಗೆ ಇರಲು ಬಿಟ್ಟಾಗ ಅಷ್ಟಾಗಿ ಕೆರಳಿಲ್ಲ. ಇದು ನನಗಾದ ಅನುಭವ. ಯಾವುದನ್ನೇ ಆಗಲಿ ನಿಗ್ರಹಿಸುವುದು ಎಷ್ಟು ಸರಿ? ನಿಗ್ರಹದಿಂದ ಆಗದೇ ಇರೋದನ್ನ ಪ್ರೀತಿಯಿಂದ ಮಾಡಬಹುದು ಅಂತಾರಲ್ಲ, ಅಂತಹ ಪ್ರೀತಿ ಈ ಆಸೆ ಕಡೆಗೂ ತೋರಬಹುದಲ್ಲ? ಇದರೆಡೆಗೆ ತೋರುವ ಪ್ರೀತಿ ಅಂದ್ರೆ ಜಾಸ್ತಿ ಆಯ್ತೇನೋ,ಯಾಕಂದ್ರೆ, ಇದು ಇದೆ ಅಂತ ಹೇಳೋದೇ ನಮಗೆ ಮುಜುಗರ!

    ಆಸೆ ಕೆಟ್ಟದ್ದು, ಇದು ಬಿಸಿಲ ಕುದುರೆ, ಆಸೆಯ ಬದುಕು ಅಂದರೆ ತಳ ಒಡೆದ ದೋಣಿಯಲ್ಲಿನ ಪಯಣ….ಒಂದಾ ಎರಡಾ .ಆಸೆಯ ಬದುಕು ಅಂತಾರಲ್ಲಾ, ಅವರಿಗೆ ಒಂದು ಪ್ರಶ್ನೆ. ಬದುಕಿನಿಂದ ಆಸೆ ತೆಗೆದು ನೋಡಿ ಅಲ್ಲಿ ಬದುಕು ಇರುತ್ತಾ ಅಂತ? ಹೀಗೆ ಅನಿವಾರ್ಯ ಆದದ್ದನ್ನ ಯಾವುದೋ ಹುಸಿ ಪ್ರತಿಷ್ಠೆಗೆ ನನ್ನಲ್ಲಿಲ್ಲ ಅಂತ ಹೇಳೋದು ಮನುಷ್ಯನಿಗೆ ಮಾತ್ರ ಸಾಧ್ಯ ಏನೋ. ಪ್ರಕೃತಿಯ ಯಾವ ಜೀವಿಗೂ ಇರದ ಒಂದು ರೀತಿಯ ಹುಸಿ ಪ್ರತಿಷ್ಠೆ ಮನುಷ್ಯನಿಗೆ ತಾನು ತೊಟ್ಟ ಉಡುಗೆಯೊಂದಿಗೇ ಬಂದಂತಾಗಿದೆ,ಇದ್ದದ್ದನ್ನು ಮುಚ್ಚಿಟ್ಟು ಇಲ್ಲ ಅಂತ ಹೇಳೋದು! ಸರ್ವ ಸಂಗ ಪರಿತ್ಯಾಗಿ ಅಂತ ಕರೆಸಿಕೊಂಡವರು ನಿಜವಾಗಿಯೂ ಆಸೆಯಿಂದ ಮುಕ್ತರಾದವರಾ? ಹಾಗೆ ಆಗಬೇಕು, ಕರೆಯಿಸಿಕೊಳ್ಳಬೇಕು ಅನ್ನೋದು ಒಂದು ಆಸೆಯಲ್ಲವಾ? ಯಾಕೋ ಈ ರೀತಿಯ ಯೋಚನೆಗಳು ನನ್ನೊಳಗಿರುವ ಆಸೆಯೆಡೆಗೆ ಒಂದು ರೀತಿಯ ಮೆದುಧೋರಣೆ ಉಂಟುಮಾಡಿ,ಅದರತ್ತ ಕರುಣೆಯ ನೋಟ ಬೀರುವ ಹಾಗೆ ಮಾಡುತ್ತಿದೆ. ಅದು ಮಾತ್ರ ಎಂದಿನಂತೆ ಅಮಾಯಕತೆಯಿಂದ ನನ್ನತ್ತ ನೋಡುತ್ತಿದೆ,ಇನ್ನೂ ಎಷ್ಟೊತ್ತು ನನ್ನನ್ನು ನಿನ್ನಿಂದ ಪ್ರತ್ಯೇಕಿಸಿ ಇಡುತ್ತಿಯಾ ಅಂತ.

    ನಾನು ಆಸೆಯನ್ನು ನಿಗ್ರಹ ಮಾಡಲಾರೆ. ನಿಗ್ರಹ ಮಾಡಿ, ನನ್ನಂತೆಯೇ ಅದರ ಜೀವಂತಿಕೆಯನ್ನು ನಶಿಸಲಾರೆ. ನನ್ನೊಡನೆ ಅದನ್ನು ಸ್ವಚ್ಛಂದವಾಗಿ ಇರಲು ಅನುವು ಮಾಡಿಕೊಟ್ಟು, ನನ್ನ ಶಾಂತಿಗೆ,ನೆಮ್ಮದಿಗೆ ಅಡ್ಡ ಬರಬೇಡ ಅಂತ ಪ್ರೀತಿಯಿಂದ ಹೇಳಬಲ್ಲೆ. ನನ್ನ ಆಸೆ ನನ್ನ ಮಾತು ಕೇಳುತ್ತದೆ ಅನ್ನುವ ಆತ್ಮ ವಿಶ್ವಾಸ ನನ್ನಲ್ಲಿದೆ. ಈ ವಿಶ್ವಾಸ ಇಲ್ಲದಾದ್ರೆ ಮಾತ್ರ ನಾನು ನಿಗ್ರಹದಂತ ಅಮಾನುಷ ಪ್ರಯತ್ನಕ್ಕೆ ಕೈ ಹಾಕಬೇಕಾಗುತ್ತದೆ. ಕಚ್ಚುವುದು ನಾಯಿಯ ಮೂಲಗುಣ ವಾದರೂ, ಎಲ್ಲರ ಮನೆಯ ನಾಯಿಗಳು ಕಚ್ಚುವುದಿಲ್ಲ ಅಲ್ವಾ? ನೋಡಿ ಇಂತಹ ಆತ್ಮವಿಶ್ವಾಸದ ಮಾತುಕೇಳಿ ಇಷ್ಟೊತ್ತು ಅಮಾಯಕನಂತೆ ಕೂತಿದ್ದ ನನ್ನ ಆಸೆ ಹೇಗೆ ಗರಿಕೆದರಿ, ಮೈಝಾಡಿಸಿಕೊಂಡು,ಪ್ರೀತಿಯ ನಗೆ ಬಿರುತ್ತಾ ನನ್ನೆಡೆಗೆ ಬರುತ್ತಿದೆ. ನಾನೂ ಅಷ್ಟೇ ಅಪ್ಯಾಯತೆಯಿಂದ ಇದನ್ನು ಅಪ್ಪಿಕೊಳ್ಳುತ್ತಿದ್ದೇನೆ,ಯಾರು ಏನೇ ಅಂದರೂ, ನನಗೂ ನನ್ನ ಆಸೆಗೂ ನಾಚಿಕೆಯೇ ಇಲ್ಲ ಅಂದರೂ ನಮಗೆ ಬೇಸರ ಇಲ್ಲ. ದ್ವೇಷ,ಅಸೂಯೆ ಅಂತಹುಗಳೇ ನನ್ನಲ್ಲಿರಬೇಕಾದ್ರೆ,ಪಾಪ ಈ ಆಸೆಯನ್ನು ಹೊರದಬ್ಬಿ ನಾನು ಸಾಧಿಸಬೇಕಿರುವುದಾದ್ರು ಏನನ್ನು?

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    9 COMMENTS

    1. ಒಳ್ಳೆಯ ಲೇಖನ ತುಂಬಾ ವಿಮರ್ಶೆಯಿಂದ ಕೂಡಿದೆ ಆಸೆ ಪ್ರತಿಯೊಬ್ಬರಿಗೆ ಇರಬೇಕು ಒಳ್ಳೆಯ ಕೆಲಸ ಮಾಡಲು ಒಳ್ಳೆಯ ಗುರಿ ತಲುಪಲು, ಒಳ್ಳೆಯ ವಿಚಾರಗಳಿಗೆ ಆಸೆ ಇರಬೇಕು
      ಆದ್ರೆ ದುರಾಸೆಯಿಂದ ಕೂಡಿದ್ದರೆ ಅದರಿಂದ ಆಗುವ ಅನಾಹುತಕ್ಕೆ ನಾವೇ ಕಾರಣರಾಗುತ್ತೇವೆ

    2. *ಆಸೆಯ* ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ.

      ಕನ್ನಡ ನಾಡಿನ ಒಬ್ಬ ಪ್ರಬುದ್ಧ ಲೇಖಕರಾಗಿ ತಾವು ರೂಪುಗೊಳ್ಳುತಿರುವುದು ತುಂಬಾ ಸಂತಸ ಹಾಗೂ ಹೆಮ್ಮೆಯ ಸಂಗತಿ. Very proud of you sir.

      ಕನ್ನಡ ಮತ್ತು ಇಂಗ್ಲಿಷ್ ನ ಒಂದಿಷ್ಟು ಒಳ್ಳೆಯ ಸಾಹಿತ್ಯವನ್ನು ಓದಿರುವ ಸೌಭಾಗ್ಯ ನನ್ನದು.
      ಹಾಗಾಗಿ I can feel you are really writing very passionately & enjoying it too on almost all subjects.

      .

    3. Dear Sir
      Good sir. It is evident that ” AS DESIRES INCREASES SORROWS ALSO INCREASES “. so better to limit DESIRES.
      Thank you for meaningful article

    4. Wonderful article, excellently expressed, really very nice, please keep it up.👌👍😊🙏
      I wish good luck to all your future endeavours.🙏🙏🙏

    5. ಆಸೆಯ ಸ್ವರೂಪ, ವೈವಿಧ್ಯತೆ, ನಿಗ್ರಹದ ಚಿಂತನೆಗೆ ಅಚ್ಚುಕಟ್ಟಾದ ಅಕ್ಷರ ರೂಪ ನೀಡಿದ್ದೀಯ

    6. Valuable diamond is with and amid us , unfortunately we have not recognized it,,,,,Hatsoff and saluting my dear friend and analytic writer….. expecting /hoping the best outcomes in coming days.

    7. Valuable diamond is with and amid us , unfortunately we have not recognized it,,,,,Hatsoff and saluting my dear friend and analytic wr
      iter….. expecting /hoping the best outcomes in coming days.

    8. ಲೇಖನ ನದ ಶೇರ್ಷಿಕೆ ಯಲ್ಲೇ ಉತ್ತರ ಇದೆ. ಆಸೆ ಇಲ್ಲದೆ ಬದುಕೇ ಇಲ್ಲ. ಮನುಷ್ಯನಿಗೆ ಯಾವುದಾದರೊಂದು ಅಸೆ ಇರಲೇ ಬೇಕು. ಇಲ್ಲದೆ ಹೋದ್ರೆ ಅವನ ಬದುಕಿಗೆ ಅರ್ಥನೇ ಇರುವುದಿಲ್ಲ ಅಸೆ ಇರಬೇಕು ಆದ್ರೆ ಅದು ದುರಾಸೆ ಆಗಬಾರದು. Bm ವಿಷಯ ಮಂಡನೆ ತುಂಬಾ ಸೊಗಸಾಗಿದೆ. ಜ್ಞಾನಿಗಳೆಲ್ಲ ಅಸೆ ಇಂದ ಅಂದರೇ ಅರಿಷಡ್ವಗ ದಿಂದ ನಾವು ದೂರ ಇರಬೇಕು. ಅಸೆನೆ ದುಃಖಕ್ಕೆ ಮೂಲ ಕಾರಣ ಅಂತೆಲ್ಲ ಬೋಧನೆ ಮಾಡಿದಾರೆ ನಿಜ. ಆದ್ರೆ ಅಸೆ ಇಲ್ಲದ ಜೀವನ ನೀರಸ ಜೀವನ. ಧನ್ಯವಾದಗಳು. BM.

    9. Ur “ase illada badukunte “is very analytical &a topic for thought provoking in any individual excellent article Sreedhar

    LEAVE A REPLY

    Please enter your comment!
    Please enter your name here

    Latest article

    error: Content is protected !!