ನೂತನ
ದಿನನಿತ್ಯ ಸಾಮಾನು ಒದಗಿಸುವ ಗ್ರಂದಿಗೆ ಅಂಗಡಿಯ ವೃತ್ತಿಯಲ್ಲಿ ಗಾಂಧೀಜಿಯವರ ಹಿರೀಕರು ಇದ್ದಿದ್ದರಿಂದ ಅವರ ಮನೆತನದ ಹೆಸರು ‘ ಗಾಂಧಿ’ ಆಯಿತಂತೆ! ಇಂಥ ವ್ಯಾಪಾರಿ ಮನೋಧರ್ಮದ ಗುಜರಾತಿ ಉಚ್ಛ ಮನೆತನದಲ್ಲಿ ಜನಿಸಿದ, ಬೆಳೆದ ಗಾಂಧೀಜಿ, ತುಂಡು ಪಂಚೆಯುಟ್ಟು ತನ್ನ ಸರ್ವಸ್ವವನ್ನೂ ಜನರಿಗೆ ಧಾರೆ ಎರೆದು ಕೊನೆಗೆ ತನ್ನನ್ನೂ ನಾಡಿಗೆ ಸಮರ್ಪಿಸಿಕೊಂಡ ಹಾದಿ ಮಾತ್ರ ಅನನ್ಯವಾದುದು.
ಗಾಂಧಿ ಯುಗ ಭಾರತದಲ್ಲಿ ಆರಂಭವಾಗುವ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ಒಂದು ಗಾಂಧಿ ಯುಗ 1883ರ ಹೊತ್ತಿಗೆ ಆರಂಭವಾಗಿತ್ತು. ಅಲ್ಲಿನ ಬಿಳಿಯರು ವಲಸೆಗಾರರ ಮೇಲೆ ನಡೆಸುತ್ತಿದ್ದ ದೌರ್ಜನ್ಯಗಳ , ಹೇರುತ್ತಿದ್ದ ಕಠಿಣ ಕಾನೂನುಗಳ ವಿರುದ್ಧ ಅವರು ಪ್ರತಿಭಟಿಸಿದರು. ಆ ಸಂದರ್ಭದಲ್ಲಿ ಅವರು ಅನುಭವಿಸಿದ ಅವಮಾನ, ಅವಹೇಳನ ಅಪಾರ. ಅವರನ್ನು ಚಲಿಸುವ ರೈಲಿನಿಂದ ಕೆಳಕ್ಕೆ ನೂಕಲಾಯಿತು. ರೈಲಿನಲ್ಲಿ ತಾವು ಕೊಂಡ ಟಿಕೀಟಿನ ಜಾಗದಲ್ಲಿ ಬಿಳಿಯರಲ್ಲದ ಕಾರಣ, ಬಿಳಿಯ ರೊಂದಿಗೆ ಕುಳಿತು ಪ್ರಯಾಣಿಸುವ ಯೋಗ್ಯತೆ ಇಲ್ಲವೆಂಬ ಕಾರಣದಿಂದ ಸಾಮಾನು ಸಮೇತ ಅವರನ್ನು ಹೊರ ನೂಕಿದಾಗ ಅವರು ಅವಮಾನವನ್ನು ನುಂಗಿ ಸುಮ್ಮನಾಗಲಿಲ್ಲ. ಅದನ್ನು ಪ್ರತಿಭಟಸಿ ಅದನ್ನೊಂದು ಜನಾಂದೋಲನವಾಗಿ ಪರಿವರ್ತಿಸಿದರು. ಅವರ ಈ ನಡೆ ಅಲ್ಲಿನ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಏಕೆಂದರೆ ಅವರ ಪ್ರತಿಭಟನೆ ನ್ಯಾಯಯುತವಾಗಿತ್ತು ಹಾಗೂ ಶಾಂತಿಯುತವಾಗಿತ್ತು. ಅವರು ಸೆರೆಮನೆ ವಾಸಕ್ಕೆ ಅಂಜುತ್ತಿರಲಿಲ್ಲ. ಇಂಥ ವಿರೋಧವನ್ನು ಅದುವರೆಗೂ ಜಗತ್ತು ಕಂಡಿರಲಿಲ್ಲ. ಇದರೊಂದಿಗೆ ಗಾಂಧೀಜಿ ಅಲ್ಲಿನ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಅನುಸರಿಸಿದ ಇನ್ನೊಂದು ತಂತ್ರ ‘ ಸತ್ಯಾಗ್ರಹ.’
ಗಾಂಧೀಜಿಯವರ ಈ ಅಸ್ತ್ರ ಜಗತ್ತಿಗೇ ಹೊಸದು. ಇದನ್ನು ಅವರು ಬಹಳ ಶಕ್ತಿಯುತವಾಗಿ ಅಲ್ಲಿನ ಸರ್ಕಾರದ ವಿರುದ್ಧ ಬಳಸಿದರು. ಆಗ ದಕ್ಷಿಣ ಆಫ್ರಿಕಾದಲ್ಲಿ ಇದ್ದ ಭಾರತೀಯರು ಹಾಗೂ ಭಾರತೀಯೇತರರೂ ಅವರ ಬೆಂಬಲಕ್ಕೆ ನಿಂತರು. ಆದರೂ ಅಲ್ಲಿಯ ಕೆಲವು ಪಠಾಣ ನಾಯಕರು ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ಗಾಂಧೀಜಿಯವರಿಗೆ ಇದು ನೋವುಂಟು ಮಾಡುತ್ತಿರಲಿಲ್ಲ. ಅವರದು ‘ ವಿಶ್ವ ಭ್ರಾತೃತ್ವ ‘ ದೃಷ್ಟಿ ಕೋನ. ನೋಯಿಸಿದವರನ್ನೂ ಗೆಲ್ಲುವ ಅವರ ಸಾಮರ್ಥ್ಯ ಮಾತ್ರ ಯಾರಿಗೂ ನಿಲುಕದ್ದು.
1914ರ ಹೊತ್ತಿಗೆ ಅವರು ದಕ್ಷಿಣ ಆಫ್ರಿಕಾವನ್ನು ಬಿಟ್ಟು ಭಾರತಕ್ಕೆ ಹಿಂದಿರುಗುವಾಗ ಅಲ್ಲಿನ ಕಾರ್ಮಿಕರ ಬಹುತೇಕ ಸಮಸ್ಯೆಗಳನ್ನು ಅವರು ಪರಿಹರಿಸಿದ್ದರು.
ಮೋಹನದಾಸ್ ಕರಮಚಂದ ಗಾಂಧಿ- ಮಹಾತ್ಮ ಗಾಂಧಿಯಾದ ಕಥೆ ಯಾವ ‘ ಫೇರಿ ಟೇಲ್’ ಗೂ ಕಡಿಮೆಯಿಲ್ಲ. ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಇರಬಹುದಾದ ಎಲ್ಲ ದುರ್ಗುಣಗಳು, ದುರ್ನಡತೆ ಗಳು, ದೌರ್ಬಲ್ಯಗಳು ಅವರಲ್ಲಿ ಚಿಕ್ಕಂದಿನಿಂದ ಇದ್ದವು. ಬಹು ಪ್ರಖ್ಯಾತವಾಗಿರುವ ಶಾಲೆಯಲ್ಲಿ ಅವರು ಸುಳ್ಳು ಹೇಳಲು ನಿರಾಕರಿಸಿದ ಕತೆ ಒಂದು ನಿದರ್ಶನ ಮಾತ್ರ. ಆನಂತರ ಅವರಲ್ಲಿ ಸಾಕಷ್ಟು ಮೋಹ, ವ್ಯಾಮೋಹ ಸೇರಿಕೊಂಡಿತ್ತು ಎಂದು ಅವರೇ ಹೇಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾದಾಗ ಹೆಂಡತಿಯ ಸಾಮಿಪ್ಯಕ್ಕಾಗಿ ಹಾತೊರೆಯುತ್ತಿದ್ದು ಅವರು ಸಿಕ್ಕಾಗ ಅವರ ಮೇಲೆ ಮುಗಿ ಬೀಳುತ್ತಿದ್ದುದಕ್ಕಾಗಿ ಆನಂತರ ಪಶ್ಚಾತ್ತಾಪ ಪಟ್ಟಿದ್ದಾರೆ. ಇಂಗ್ಲೀಷರಂತೆ ಉಡುಪು ಧರಿಸಿ ಮೆರೆದಿದ್ದಾರೆ. ಧೂಮಪಾನ, ಮದ್ಯಪಾನ ಮಾಡಿದ್ದಾರೆ. ರೀತಿಯಾಗಿ ಯೌವನದ ಮೋಡಿಗೆ ಅವರು ಮರುಳಾಗಿದ್ದು ಸುಳ್ಳಲ್ಲ.
ಆದರೆ ಇವೆಲ್ಲ ಕಮ್ಮಾರನ ಕುಲುಮೆಯಲ್ಲಿ ಕಾದ ಕಬ್ಬಿಣದಂತೆ ಅವರ ಬದುಕನ್ನು ‘ ಗಾಂಧೀಜಿ’ ಯಾಗಿ ರೂಪಿಸುವಲ್ಲಿ ಮೆಟ್ಟಿಲುಗಳಾಗಿವೆ. ಒಂದು ಹಂತದ ನಂತರ ಈ ಎಲ್ಲ ಲೋಲುಪತೆಗಳು ಅವರನ್ನು ವಿರಕ್ತಿಯೆಡೆಗೆ ಸಾಗಿಸುತ್ತವೆ. ಆ ವಿರಕ್ತಿಯಾದರೂ ಎಂತಹದು! ಈ ಸಂತನ ಆಧ್ಯಾತ್ಮ ಸಾಗಿದ್ದು ಸಮಾಜದ ಕಡೆಗೆ. ಸಾಮಾನ್ಯರ ಕಡೆಗೆ. ಅದು ಮನೆ – ಮಾರು ಎಂಬ ಗಡಿ ದಾಟಿ ಸಮುದಾಯ ಸೇರಿ, ರಾಷ್ಟ್ರ , ವಿಶ್ವ ವ್ಯಾಪಿಯಾಯಿತು. ಇಂಥ ಸಂತನನ್ನು ವಿಶ್ವ ಆ ಮೊದಲು ಕಂಡಿರಲಿಲ್ಲ. ನಂತರ ಕಾಣಲೂ ಇಲ್ಲ.
ಇವರ ಸಾಮಾಜಿಕ ಆಧ್ಯಾತ್ಮವನ್ನು ಒಂದು ಹಂತದವರೆಗೆ ಬಸವಣ್ಣನವರಲ್ಲಿ, ಒಂದು ಹಂತದವರೆಗೆ ಅಂಬೇಡ್ಕರರಲ್ಲಿ ಹಾಗೂ ಒಂದು ಹಂತದವರೆಗೆ ಸ್ವಾಮಿ ವಿವೇಕಾನಂದರಲ್ಲಿ ಕಂಡಿದ್ದೇವೆ. ಅವರದು ಅಹಿಂಸೆಯ ಮಾರ್ಗ. ಇದನ್ನು ನಾವು ಬುದ್ಧನಲ್ಲಿ, ಏಸುವಿನಲ್ಲಿ ಕಂಡಿದ್ದೇವೆ. ಆದರೆ ಗಾಂಧೀಜಿಯವರು ಈ ಎಲ್ಲರನ್ನೂ ಏಕತೃವಾಗಿ ಎರಕ ಹೊಯ್ದ ಅಚ್ಚು!!ರಸ್ಕಿನ್ನರ ‘ Unto This Last’ ಪುಸ್ತಕ ಅವರು ಮೇಲೆ ಬಹಳ ಪ್ರಭಾವ ಬೀರಿತ್ತು. ರಾಜಾಜಿಯವರು ಅವರ ರಾಜಕೀಯ ಮಾರ್ಗದರ್ಶಕರು ಹಾಗೂ ಗುರುಗಳು. ಈ ಇಬ್ಬರು ಗುರುಗಳನ್ನೂ ಮೀರಿ ಅವರು ಬೆಳೆದು ವಿಶ್ವ ಗುರುವೇ ಆದದ್ದು ಸೋಜಿಗದ ಸತ್ಯ.
ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅಲ್ಲಿನ ಕಾರ್ಮಿಕರ ಪರ ವಕೀಲರಾಗಿ ವಕಾಲತ್ತನ್ನು ಮಾಡುತ್ತಿದ್ದರು. ಆಗ ಅವರು ಕಂಡುಕೊಂಡಿದ್ದು ‘ ಸ್ವರಾಜ್ಯ’ ದ ಕಲ್ಪನೆ. ಅವರ ಕಲ್ಪನೆಯ ಸ್ವರಾಜ್ಯ ಭೌಗೋಳಿಕವಾಗಿ ಅಲ್ಲ. ಅದೊಂದು ಜೀವನ ವಿಧಾನ. ದುಡಿದು ಉಣ್ಣುವ, ತನ್ನ ಅಗತ್ಯಗಳನ್ನು ಸ್ವಯಂ ಪೂರೈಸಿಕೊಳ್ಳುವ ನೆಲಮೂಲದ ಬದುಕಿನ ಮಾರ್ಗ. ಇದನ್ನು ಅವರು ಪ್ರಾಯೋಗಿಕವಾಗಿ ದಕ್ಷಿಣ ಆಫ್ರಿಕಾದಲ್ಲೆ ಅನುಸರಿಸಿದರು. ಅಲ್ಲಿ ಇದ್ದ ಸುಮಾರು 30 ವರ್ಷಗಳ ಕಾಲ ಅವರು ಸ್ವಾವಲಂಬನೆಯ ಬದುಕನ್ನು ಬಾಳಿದ್ದಲ್ಲದೆ ಬೇರೆಯವರೂ ಅನುಸರಿಸುವಂತೆ ಮಾಡಿದರು. ಅವರ ಬದುಕು ಸಮುದಾಯದ ಬದುಕಾಗಿತ್ತು.
ಪಾಳುಬಿದ್ದ ಜಮೀನನ್ನು ಖರೀದಿಸಿ ಅದನ್ನು ತನ್ನ ಜೊತೆಗಾರ ಬಂಧು- ಮಿತ್ರರೊಂದಿಗೆ ಸ್ವಚ್ಛಗೊಳಿಸಿ, ವಾಸ ಯೋಗ್ಯವಾಗಿ ಮಾಡಿ , ಸುತ್ತಲೂ ಐದು ಕಿ.ಮೀ. ದೂರದ ಒಳಗೆ ಸಿಗುವ ಪರಿಕರಗಳಿಂದಲೇ ಅಲ್ಲಿ ಮನೆ, ಮತ್ತಿತರ ಅವಶ್ಯಕತೆಗಳನ್ನು ಪೂರೈಸಿಕೊಂಡರು. ಆಹಾರಕ್ಕೆ ಬೇಕಾದ ಹೈನು, ತರಕಾರಿಗಳನ್ನು ತಾವೇ ಬೆಳೆದರು. ಅದು ಸರಳ ಜೀವನ ವಿಧಾನ. ಇಂದಿನ ಕೂಡಿಡುವ ಜಾಗತೀಕರಣದ ಆರ್ಥಿಕತೆಯಲ್ಲ. ಅವರ ಬೇಡಿಕೆಗಳು ಅಲ್ಪವಾಗಿದ್ದು, ತಾವೇ ಪೂರೈಸಿಕೊಳ್ಳಬಲ್ಲವಾಗಿದ್ದವು. ಇದನ್ನು ಅವರು ಭಾರತದಲ್ಲೂ ಮುಂದುವರೆಸಿದರು. ಹಾಗಾಗಿಯೇ ಅವರು ಇಲ್ಲಿ ಆಶ್ರಮ ವಾಸಿಗಳಾಗಿದ್ದದ್ದು. ಅವು ಸಮುದಾಯ ಜೀವನಕ್ಕೆ ಪೂರಕವಾಗಿದ್ದವು. ಕೊನೆಯವರೆಗೂ ಅವರು ಅದನ್ನೇ ಅನುಸರಿಸಿದರು. ಮಾತ್ರವಲ್ಲದೇ ತಮ್ಮ ಪತ್ನಿ ಕಸ್ತೂರಬಾ ಅವರ ಕಾಲಾನಂತರ 1944ರಲ್ಲಿ ಜೈಲಿನಿಂದಲೇ ಆರಂಭಿಸಿದ ಕಸ್ತೂರ ಬಾ ಆಶ್ರಮಗಳು ಇಂದಿಗೂ ಭಾರತದಾದ್ಯಂತ ಇವೆ. ಭಾರತದಲ್ಲಿ 12 ಸ್ಥಳಗಳಲ್ಲಿ ಈ ಆಶ್ರಮಗಳಿವೆ. ಕರ್ನಾಟಕದಲ್ಲಿ ಅರಸೀಕೆರೆಯಲ್ಲಿ ಈ ಆಶ್ರಮ ಇದೆ. ಇಲ್ಲಿ ಅಳವಡಿಸಿರುವ ದಿನಚರಿ ಗಾಂಧೀಜಿಯವರ ದಿನಚರಿಯಂತೆ ಪ್ರಾರ್ಥನೆ, ಪರಿಶ್ರಮ, ಅಭ್ಯಾಸ, ಧ್ಯಾನ, ಪಠಾಣ ಮೊದಲಾದವುಗಳನ್ನು ಹೊಂದಿದೆ. ಈಗಲೂ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡಲಾಗಿದೆ. ಆಶ್ರಮಗಳು ದಾನದಿಂದ ಹಾಗೂ ಆಶ್ರಮ ವಾಸಿಗಳ ಪರಿಶ್ರಮದಿಂದ ನಡೆಯುತ್ತವೆ.
ಈ ಆಶ್ರಮಗಳಲ್ಲಿ ಯಾವ ಹುದ್ದೆಗಳೂ ಇಲ್ಲ. ಇದರ ಉಸ್ತುವಾರಿ ನೋಡಿಕೊಳ್ಳುವವರನ್ನು ಪ್ರತಿನಿಧಿ ಎಂದು ಕರೆಯಲಾಗುತ್ತದೆ. ಇದು ಗಾಂಧೀಜಿಯವರೇ ಕೊಟ್ಟ ಹೆಸರು. ಆದರೆ ಇವುಗಳ ಬಗ್ಗೆ ನಮ್ಮ ದೇಶದಲ್ಲಿ ತಿಳಿದಿರುವವರು ಬಹಳ ಕಡಿಮೆ!
ಗಾಂಧೀಜಿಯವರು ಭಾರತದಲ್ಲಿ ಸುಮಾರು 1915ರ ಹೊತ್ತಿಗೆ ತಮ್ಮ ಹೆಜ್ಜೆಗಳನ್ನು ಮೂಡಿಸಿದವರು. ಇದು ‘ ಗಾಂಧೀ ಯುಗ’ ವೆಂದೇ ಇತಿಹಾಸದಲ್ಲಿ ದಾಖಲಾಗಿದೆ. ಆಗ ಗಾಂಧಿ ಒಬ್ಬರೇ ಇರಲಿಲ್ಲ. ಆದರೆ ಅವರ ವಿಚಾರ ಧಾರೆಗಳು ಭಾರತ ರಾಷ್ಟ್ರಕ್ಕೆ ಬೇಕಾಗಿದ್ದವು ಅಥವಾ ಬೇಕಾಗುವಂಥವಾಗಿದ್ದವು. ಅವು ಜನಪರವಾಗಿದ್ದರಿಂದಲೇ ರಾಷ್ಟ್ರಪರವೂ ಆಗಿದ್ದವು ಎಂಬುದರ ಅರಿವು ಸಾಮಾನ್ಯ ಜನರಿಗಿತ್ತು. ಆಳುವ ವರ್ಗಗಳದ್ದು ಸದಾ ಜಾಣ ಕುರುಡು ಹಾಗೂ ಜಾಣ ಕಿವುಡು. ಭಾರತದಲ್ಲಿ ಗಾಂಧೀಜಿಯವರ ಬಗ್ಗೆ ಆದದ್ದೂ ಅದೇ. ಅವರು ಅಧಿಕಾರದಿಂದ ದೂರ ಉಳಿದದ್ದನ್ನು ಆಳುವ ನಾಯಕರು ತಮ್ಮ ತಮ್ಮ ನೆಲೆಗಳಲ್ಲಿ ವಿಚಾರ ಮಾಡಿರಲಿಕ್ಕೆ ಸಾಕು. ಜೊತೆಗೆ ಗಾಂಧೀಜಿಯವರ ವಿಚಾರ ಧಾರೆಗಳು ಅಧಿಕಾರಶಾಹಿಗೆ ಹೊಂದುವಂಥವುಗಳಲ್ಲವೇ ಅಲ್ಲ. ಅವು ದುಡಿವ ವರ್ಗದ, ಕಾರ್ಮಿಕ ವರ್ಗದ, ಬಡವರ ಪರವಾದಂಥವು. ಅವರು ಸಮ ಸಮಾಜದಲ್ಲಿ ನಂಬಿಕೆ ಇಟ್ಟವರು. ಸರಳ ಜೀವನವನ್ನು ಪಾಲಿಸಿಕೊಂಡು ಬಂದವರು. ಆದರೆ ಅಧಿಕಾರವೆಂದರೆ ಆಳುವ ವರ್ಗ. ಅದಕ್ಕೆ ಕುರ್ಚಿಯ ಮೋಹ. ಹಾಗಾಗಿ ಅದು ತತ್ವರಹಿತ; ಸಿರಿವಂತರ, ಬಲಾಢ್ಯರ ಪರ. ಸ್ವಾತಂತ್ರ್ಯಾ ನಂತರ ಭಾರತದ ಕಟ್ಟೋಣ ನಡೆದಿದ್ದು ವಿಶೇಷವಾಗಿ ಈ ಸಿರಿವಂತರಿಗಾಗಿ. ಕೈಗಾರಿಕೀಕರಣ, ವಾಣಿಜ್ಯೀಕರಣ ಗಳೆಲ್ಲ ಬೆಳೆಸಿದ್ದು ಹಣವಂತ ವರ್ಗವನ್ನು ಹಾಗೂ ಅದರ ಅಧೀನದಲ್ಲಿ ದುಡಿವ ವರ್ಗವನ್ನು. ಇದು ಗಾಂಧೀಜಿಯ, ರಸ್ಕಿನ್ನರ, ಬಸವಣ್ಣನ, ಅಂಬೇಡ್ಕರರ ವಿಚಾರಧಾರೆಗಳಿಗೆ ವಿಪರೀತವಾದದ್ದು. ಹಾಗಾಗಿಯೇ ಇವರು ಕಾಲಾಂತರದಲ್ಲಿ ಮರೆಗೆ ಸರಿಸಲ್ಪಟ್ಟರು.
ಆದರೆ, ಇಂದು ಜಗತ್ತೇ ಅಶಾಂತಿ, ಅರಾಜಕತೆ, ಭಯೋತ್ಪಾದನೆ, ಬಡತನ, ಯುದ್ಧಭೀತಿಯಿಂದ ತಲ್ಲಣಿಸುತ್ತಿರುವಾಗ ಇವರೆಲ್ಲ ಮುನ್ನೆಲೆಗೆ ಬರುತ್ತಿದ್ದಾರೆ. ಅದರಲ್ಲೂ ಗಾಂಧೀಜಿ ಇಂದು ವಿಶ್ವಕ್ಕೇ ಬೇಕಾದವರಾಗಿದ್ದಾರೆ. ಗ್ರಾಹಕ ಕೇಂದ್ರಿತ ಅಮೇರಿಕಾದ ಟ್ರಂಪ್, ವಿಶ್ವವನ್ನೇ ವಸಾಹತಾಗಿ ಆಳಿದ ಇಂಗ್ಲೆಂಡ್ ಗಾಂಧೀ ಮಂತ್ರವನ್ನು, ಬಸವಣ್ಣನವರನ್ನು ಜಪಿಸುತ್ತಿವೆ. ಅಂದರೆ ಭಾರತ ಸುಮ್ಮನಿರಲಾದೀತೆ?
2000 ದಿಂದ ಈಚೆಗೆ ‘ ಗಾಂಧಿ ಮರುಯುಗ’ ವಿಶ್ವದಲ್ಲಿ ಆರಂಭವಾಯಿತು ಎಂದು ಹೇಳಬಹುದು. ಇಂದಿನ ಕೊರೋನಾಘಾತ ವಿಶ್ವದಲ್ಲಿ ಮತ್ತೆ ಗಾಂಧೀಜಿಯನ್ನು ಸ್ಥಾಪಿಸುವ ಅನಿವಾರ್ಯತೆಯನ್ನು ತಂದಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಆದ ಕಾರ್ಮಿಕರ ಗುಳೆ , ವಲಸೆಯಿಂದ ಆದ ಅನಾಹುತಗಳನ್ನು ಗಾಂಧೀಜಿ 1890ರ ಹೊತ್ತಿಗೇ ದಕ್ಷಿಣ ಆಫ್ರಿಕಾದಲ್ಲಿ ಮನಗಂಡು ಆಗಲೇ ಎಚ್ಚರಿಸಿದ್ದರು. ಗಾಂಧೀಜಿ, ಬಸವಣ್ಣನವರದು ಬಹುತೇಕ ಒಂದೇ ಮಾರ್ಗ. ಅದು ಕಾಯಕದಿಂದ ಕೈಲಾಸ ಕಾಣುವ ಮಾರ್ಗ. ದುಡಿವ ಕೈಗಳಿಗೆ ಬಲ ತುಂಬುವ ಮಾರ್ಗ. ಗಾಂಧೀಜಿಯವರನ್ನು ರಾಜಕೀಯವಾಗಿ ಮಾತ್ರ ನೋಡುವುದನ್ನು ನಿಲ್ಲಿಸಬೇಕು. ಇಂದಿನ ಎಲ್ಲಾ ಕ್ಷೇತ್ರಗಳಲ್ಲೂ ಅವರ ಅನ್ವಯ ಅಗತ್ಯವಾಗಿದೆ.
ಉದಾಹರಣೆಗೆ ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಅನ್ವಯಿಸಿ ನೋಡಿದರೆ ಪ್ರಶಸ್ತಿಗಳಿಗಾಗಿ ನಡೆಯುವ ಲಾಬಿ, ಲಜ್ಜೆಗೆಟ್ಟು ಓಲೈಸುವ , ಗುಂಪುಗಾರಿಕೆ ಮಾಡುವ ಸಾಹಿತಿಗಳು, ಲೇಖಕರು ಗಾಂಧೀಜಿಯವರ ಆದರ್ಶಗಳನ್ನು ಒಳಗೊಳ್ಳಬೇಕಿದೆ. ಇದು ಎಲ್ಲ ಕಲೆಗಳಿಗೂ, ಮಾಧ್ಯಮಗಳಿಗೂ ಅನ್ವಯಿಸುತ್ತದೆ.
ಹಾಗೆ ನೋಡಿದರೆ ಗಾಂಧೀ ತತ್ವಗಳ ಬಗೆಗಿನ ನಮ್ಮ ಅರಿವು ಏನೂ ಇಲ್ಲ ಎಂತಲೇ ಹೇಳಬಹುದು. ಅವರನ್ನು ಅರಿಯುವುದಿರಲಿ ಅವರ ಮಾರ್ಗದ ಒಂದು ಪ್ರತಿಶತವನ್ನಾದರೂ ಪಾಲಿಸುವಂತಾದರೆ ಇಂದು ದೇಶದಲ್ಲಿ ಎದುರಾಗಿರುವ ಅನೇಕಾನೇಕ ಸಾಮಾಜಿಕ, ಆರ್ಥಿಕ, ಧಾರ್ಮಿಕ, ನೈತಿಕ ಸಮಸ್ಯೆಗಳು ತಕ್ಕ ಮಟ್ಟಿಗೆ ಪರಿಹಾರ ಕಂಡಾವು. ಆ ಒಂದು ಪ್ರತಿಶತವನ್ನು ಸಾಧಿಸಲು ಗಾಂಧೀಜಿಯವರ ಬಗ್ಗೆ, ಬಸವಣ್ಣನವರ, ವಿವೇಕಾನಂದರ, ಅಂಬೇಡ್ಕರರ ಬಗ್ಗೆ ಹೆಚ್ಚು ಹೆಚ್ಚು ಓದಬೇಕು. ಓದಿನ ನಂತರ ಅರಿತು ಒಳಗಿಳಿಸಿಕೊಳ್ಳಬೇಕು. ಆನಂತರ ಆ ಹಾದಿಯಲ್ಲಿ ಕ್ರಮಿಸಬೇಕು. ಜಾಗತೀಕರಣದ ಹೊಡೆತಕ್ಕೆ ನಡು ಮುರಿದುಕೊಂಡಿರುವ ಭಾರತಕ್ಕೆ ಇದೇನು ಅಷ್ಟು ಸುಲಭದ ಮಾರ್ಗವಲ್ಲ. ಆದರೂ ಪ್ರಯತ್ನವನ್ನು ಇಂದಿನಿಂದಲೇ ಆರಂಭಿಸಬಹುದಲ್ಲವೆ?