21.7 C
Karnataka
Tuesday, December 3, 2024

    ಸದ್ದು ಮಾಡುತ್ತಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಚುನಾವಣೆ ಹಿಂದೆ ಚೀನಾ ತಂತ್ರ

    Must read

    ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಪ್ರಾಂತ್ಯದಲ್ಲಿ ಚುನಾವಣೆಯನ್ನು ನಡೆಸುವುದಾಗಿ ಪಾಕಿಸ್ತಾನ ಘೋಷಿಸಿದೆ. ಇದರ ಹಿಂದೆ ಹತ್ತು ಹಲವು ತಂತ್ರ-ಕುತಂತ್ರಗಳು ಇವೆ.

    ಏನಿದು ಜಿಬಿ ಸಮಸ್ಯೆ ?

    ಭಾರತ ವಿಭಜನೆಯಾದ ಬಳಿಕ ಜಮ್ಮು-ಕಾಶ್ಮೀರದ ಕೆಲವು ಭಾಗವನ್ನು ಪಾಕಿಸ್ತಾನ ಗುಡ್ಡಗಾಡು ಬಂಡುಕೋರರ ದಾಳಿಯ ಹೆಸರಿನಲ್ಲಿ ವಶ ಪಡಿಸಿಕೊಂಡಿತು. ಆಗ ನೆಹರು, ಈ ವಿಷಯವನ್ನು ವಿಶ್ವಸಂಸ್ಥೆಯ ಮುಂದಿಟ್ಟರು. ಅದು ಜನಮತ ಗಣನೆಗೆ ನಿರ್ದೇಶನ ಅಥವಾ ಆದೇಶ ನೀಡಿತು. ಅದನ್ನೇ ಮುಂದಿಟ್ಟುಕೊಂಡು ಪಾಕಿಸ್ತಾನ ಈ ಭಾಗದಲ್ಲಿ ಜನಮತ ಗಣನೆ ನಡೆಯಲಿ ಎಂದು ಪಟ್ಟು ಹಿಡಿಯಿತು. ಅದಕ್ಕಾಗಿಯೇ ಅದಕ್ಕಾಗಿಯೇ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಭಾಗಶಃ ಸ್ವಯಂಮಾಧಿಕಾರವನ್ನಷ್ಟೇ ಘೋಷಿಸಿತು. ವಾಸ್ತವವಾಗಿ ಪಾಕ್ ಮಾತೇ ಅಲ್ಲಿ ನಡೆಯುತ್ತಿದ್ದರೂ ಜಗತ್ತಿನ ದೃಷ್ಟಿಯಲ್ಲಿ ಕಾನೂನಾತ್ಮಕವಾಗಿ ಅದು ಅರ್ಧ ಸ್ವತಂತ್ರ ಭಾಗವಾಗಿ ಪರಿಗಣಿಸಲ್ಪಡುತ್ತಿತ್ತು. ಈಗ ಜಿಬಿಯಲ್ಲಿ ವಿಧಾನಸಭೆ ಚುನಾವಣೆ ನಡೆಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ. ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತ ಪಡಿಸಿಯೂ ಆಗಿದೆ. ಇದು ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದು ಇಂದಿನವರೆಗೆ ಸ್ಪಷ್ಟವಿಲ್ಲ. .

    ಚೀನಾ ಕುಮ್ಮಕ್ಕು

    ಜಿಬಿಯಲ್ಲಿ ಚುನಾವಣೆ ನಡೆಸುವುದು ಕಾನೂನಾತ್ಮಕವಾಗಿ ಅಷ್ಟು ಸುಲಭವಲ್ಲ. ಪಾಕ್ ಸಂವಿಧಾನದ ಅನುಮತಿ ಅದಕ್ಕೆ ಬೇಕಾಗುತ್ತದೆ. ಹೀಗಾಗಿ ಇಮ್ರಾನ್ ಖಾನ್, ಅದನ್ನು ಪಾಕಿಸ್ತಾನದ ಐದನೇ ಪ್ರಾಂತ್ಯ (ರಾಜ್ಯ)ವಾಗಿ ಪರಿಗಣಿಸಲು ಮುಂದಾಗಿದ್ದಾರೆ. ಈ ಮೂಲಕ ಚುನಾವಣೆ ನಡೆಸಲು ಹಾದಿ ಸುಗಮ ಮಾಡಿಕೊಳ್ಳುತ್ತಿದ್ದಾರೆ. ಎಲ್ಲವೂ ಅವರು ಅಂದುಕೊಂಡಂತೆ ನಡೆದರೆ ನವೆಂಬರ್ ಮಧ್ಯಭಾಗದಲ್ಲಿ (ನ. 15) ಅಲ್ಲಿನ ಶಾಸನ ಸಭೆ (ವಿಧಾನಸಭೆ)ಗೆ ಚುನಾವಣೆ ನಡೆಯಲಿದೆ.

    ಇದರ ಹಿಂದೆ ಚೀನಾದ ಕುಮ್ಮಕ್ಕು ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದೆಡೆ ಲಡಾಕ್ ಗಡಿ ಭಾಗದಲ್ಲಿ ಭಾರತದ ಮೇಲೆ ಸೇನಾ ಒತ್ತಡ ಹೇರುತ್ತಿದ್ದರೂ ಅದಕ್ಕೆ ಭಾರತ ಪ್ರತಿತಂತ್ರವನ್ನು ಯಶಸ್ವಿಯಾಗಿ ಹೂಡಿದ್ದರಿಂದ ಚೀನಾ ಸ್ವಲ್ಪ ಮಟ್ಟಿಗೆ ಹಿಂದೆಗೆದಿದೆ. ಆಗ ಇನ್ನೊಂದು ಗಡಿಯಾದ ಕಾಶ್ಮೀರದಲ್ಲಿ ಪಾಕಿಸ್ತಾನದ ಮೂಲಕ ಒತ್ತಡ ಹೇರುವ ತಂತ್ರವನ್ನು ಅದು ಅನುಸರಿಸುತ್ತಿದೆ.

    ಮೂರು ಭಾಗ

    ಆಗಸ್ಟ್ 5ರಂದು ಭಾರತ ಸರಕಾರ ಜಮ್ಮು-ಕಾಶ್ಮೀರವನ್ನು ಮೂರು ಭಾಗಗಳಾಗಿ ವಿಭಜಿಸಿತು. ಮುಖ್ಯವಾಗಿ ಇದರಿಂದ ಕಾಶ್ಮೀರದ ಹೋರಾಟವನ್ನು ಯಶಸ್ವಿಯಾಗಿ ಹತ್ತಿಕ್ಕಲು ಮತ್ತು ಅಲ್ಲಿನ ಜನರ ಮನವೊಲಿಸಲು ಭಾರತಕ್ಕೆ ಸಾಧ್ಯವಾಗುತ್ತದೆ. ಆದರೆ ಇದು ಪಾಕಿಗೆ ಪಥ್ಯವಾಗಲಿಲ್ಲ. ಆಗ ಕಾಶ್ಮೀರ ಸಮಸ್ಯೆ ಎಂಬ ವಿಷಯವೇ ಇರುವುದಿಲ್ಲ ಎಂದು ಪರಿಗಣಿಸಿದ ಪಾಕಿಸ್ತಾನ ಹೊಸ ವಿಷಯವನ್ನು ಹಳೆ ವಿಷಯದ ಜತೆ ಬೆರೆಸಿ ಮುಗ್ಧ ಜನರ ಮನದಲ್ಲಿ ವಿಷವುಣಿಸಲು ಬಳಸಿಕೊಂಡಿತು.

    ಪಾಕ್ ಗೆ ಅಪಥ್ಯ

    ಇಂತಹ ಒಂದು ವಿಷ ಬೀಜವನ್ನು ದಶಕದ ಹಿಂದೆಯೇ ಪಾಕಿಸ್ತಾನ ಹುಟ್ಟು ಹಾಕಿತ್ತು. ಅದುವೆರವಿಗೂ ಆಕ್ರಮಿತ ಕಾಶ್ಮೀರವು ತಮ್ಮ ಪೂರ್ಣ ನಿಯಂತ್ರಣದಲ್ಲಿ ಇಲ್ಲ, ಬದಲಾಗಿ ಅದು ಭಾಗಶಃ ಸ್ವತಂತ್ರ ಹಾಗೂ ಪಾಕಿಸ್ತಾನದೊಂದಿಗೆ ವಿಲೀನಗೊಂಡಿಲ್ಲ ಎಂದೇ ಪಾಕಿಸ್ತಾನ ಹೇಳುತ್ತಿತ್ತು. ಕೇವಲ ಜನಮತ ಗಣನೆ ಮಾತ್ರ ಈ ಭಾಗದಲ್ಲಿ ನಡೆಯುತ್ತಿತ್ತು. ಆದರೆ ಈಗ ಶಾಸನ ಸಭೆಯ ಚುನಾವಣೆಗೆ ಮುಂದಾಗಿದೆ. ಇದರಲ್ಲಿ ಚೀನಾದ ಚಿತಾವಣೆ ಮತ್ತು ಅದರಿಂದಾಗುವ ಲಾಭದ ಲೆಕ್ಕಾಚಾರವೂ ಸಾಕಷ್ಟಿದೆ.

    ಚೀನಾ ವಾದ

    ಪಾಕ್ ಆಕ್ರಮಿತ ಕಾಶ್ಮೀರ ನಡುವೆ ಚೀನಾ-ಪಾಕಿಸ್ತಾನ ಇಕಾನಾಮಿಕ್ ಕಾರಿಡಾರ್ ಹಾದು ಹೋಗುತ್ತದೆ. ಆದರೆ ಎರಡು ದೇಶಗಳ ನಡುವಿನ ವಿವಾದದ ಕೇಂದ್ರ ಬಿಂದುವಾಗಿರುವ ಈ ಪ್ರದೇಶದಲ್ಲಿ ಇಂತಹ ಕಾರಿಡಾರ್ ಹಾದು ಹೋಗಬೇಕಾದರೆ ಅದಕ್ಕೆ ಸ್ವತಂತ್ರ ಮಾನ್ಯತೆ ಬೇಕು ಎಂಬುದು ಚೀನಾದ ವಾದ. 2016ರಲ್ಲೇ ಚೀನಾ ಅಧ್ಯಕ್ಷ ಜಿನ್ ಪಿಂಗ್ ಇದನ್ನು ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದ್ದರು. ಆಗಲೇ ಜಿಬಿ ವಲಯಕ್ಕೆ ಸಾಂವಿಧಾನಿಕ ಸ್ಥಾನಮಾನ ಹೆಚ್ಚಿಸುವ ಪ್ರಸ್ತಾಪ ಮುಂದಿಡಲ್ಪಟ್ಟಿತ್ತು ಎಂದು ಹೇಳಲಾಗುತ್ತಿದೆ. ಭಾರತ-ಪಾಕಿಸ್ತಾನ ನಡುವಿನ ವಿವಾದಿತ ಪ್ರದೇಶದಲ್ಲಿ ಹಾದು ಹೋಗುವ ಈ ಕೋಟ್ಯಂತರ ವೆಚ್ಚದ ಯೋಜನೆಗೆ ಸೂಕ್ತ ಭದ್ರತೆಯಿಲ್ಲದೆ ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಆಗಲೇ ಸ್ಪಷ್ಟಪಡಿಸಿತ್ತು. ಲಕ್ಷಾಂತರ ಕೋಟಿ ರೂ. ಹೂಡಿಕೆ ಮಾಡುತ್ತಿರುವ ಈ ಕಾರಿಡಾರ್ ನಿಂದ ಚೀನಾಕ್ಕೆ ಸಾಕಷ್ಟು ಲಾಭವಿದೆ.

    ಈ ಕಾರಿಡಾರ್ ನಿರ್ಮಾಣದಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳ ಜತೆಗೆ ಚೀನಾದಕ್ಕೆ ಸುಲಭ ಸಂಪರ್ಕ ಸಾಧ್ಯವಿದೆ. ಮುಖ್ಯವಾಗಿ ಗ್ವದಾರ್ ನಂತಹ ಆಯಕಟ್ಟಿನ ಪ್ರದೇಶದಲ್ಲಿ ಸುಸಜ್ಜಿತ ಬಂದರು ನಿರ್ಮಾಣದ ಮೂಲಕ ಅದು ಮಲ್ಲಕ್ಕಾ ಸ್ಟ್ರೇಟ್ ಮೂಲಕದ ಅವಲಂಬನೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹೀಗಾಗಿ ಹಿಂದೂ ಮಹಾಸಾಗರದ ಮೂಲಕ ಸಮುದ್ರ ಪ್ರಯಾಣದ ಹಂಗು ಚೀನಾಕ್ಕೆ ತಪ್ಪುತ್ತದೆ.

    ತನ್ನ ಲಾಭವನ್ನೂ ನೋಡಿಕೊಂಡ ಚೀನಾ

    ಪಾಕಿಸ್ತಾನಕ್ಕೆ ನೆರವು ನೀಡುವ ಉದ್ದೇಶದ ನೆಪದಲ್ಲಿ ತನ್ನ ಲಾಭವನ್ನೂ ನೋಡಿಕೊಂಡು ಇಂತಹ ಕಾರಿಡಾರ್ ನಿರ್ಮಾಣಕ್ಕೆ ಚೀನಾ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಪಾಕ್, ಜಿಬಿಗೆ ಸಾಂವಿಧಾನಿಕ ಸ್ಥಾನ ನೀಡುವಂತೆ ಒತ್ತಡ ಹೇರಿದೆ. ಸದ್ಯದ ಮಟ್ಟಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪ್ರತಿರೋಧವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಒಂದು ವೇಳೆ ತೋರಿಸಿದರೆ ಮತ್ತೆ ಸೇನಾಡಳಿತ, ನ್ಯಾಯಾಲಯದ ವಿಚಾರಣೆ ಹೀಗೆ ಮುಷರ್ರಫ್, ನವಾಜ್ ಶರೀಫ್, ಈ ಹಿಂದೆ ಜುಲ್ಫಿಕರ್ ಅಲಿ ಭುಟ್ಟೋ, ಬೆನಜೀರ್ ಭುಟ್ಟೋ ಸೇರಿದಂತೆ ನಾನಾ ರಾಜಕೀಯ ನಾಯಕರು ಅನುಭವಿಸಿದ ಯಾತನೆಯನ್ನೇ ಎದುರಿಸಬೇಕಾಗುತ್ತದೆ ಎಂಬುದು ಹಗಲಿನಷ್ಟೇ ನಿಚ್ಚಳ.

    ಪಾಕ್ ನಲ್ಲಿ ಚೀನಾ ಹೂಡಿಕೆ

    • ಗ್ವಾದರ್ ಪೂರ್ವ ಕೊಲ್ಲಿ ಎಕ್ಸ್ ಪ್ರೆಸ್ ವೇ – 141 ದಶ ಲಕ್ಷ ಡಾಲರ್
    • ನವ ಗ್ವಾದರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 230 ದಶ ಲಕ್ಷ ಡಾಲರ್
    • ಬ್ರೇಕ್ ವಾಟರ್ ಯೋಜನೆ 123 ದಶ ಲಕ್ಷ ಡಾಲರ್
    • ಪ್ರಮುಖ ಕಾಲುವೆಗಳ ಪುನರ್ ನಿರ್ಮಾಣ 27 ದಶ ಲಕ್ಷ ಡಾಲರ್
    • ಪಾಕ್ –ಚೀನಾ ಫ್ರೆಂಡ್ ಶಿಪ್ ಹಾಸ್ಪಿಟಲ್ಸ್ 100 ದಶ ಲಕ್ಷ ಡಾಲರ್
    • ಕ್ರಾಸ್ ಬಾರ್ಡರ್ ಆಪ್ಟಿಕಲ್ ಫೈಬರ್ ಕೇಬಲ್ 44 ದಶ ಲಕ್ಷ ಡಾಲರ್
    • ಥಕೋಟ್-ಹಾವೇಲಿನ್ ಕಾರಕೋರಂ ಹೆದ್ದಾರಿ ಎರಡನೇ ಹಂತ 1,386 ದಶ ಲಕ್ಷ ಡಾಲರ್
    • ಮುಲ್ತಾನ್-ಮುಖ್ಖುರ್ ವಲಯದಲ್ಲಿ ಪೇಶಾವರ-ಕರಾಚಿ ಮೋಟಾರ್ ವೇ 2,980 ದಶ ಲಕ್ಷ ಡಾಲರ್
    • ಖುಝ್ದಾರ್-ಬಸಿಮಾ ಹೆದ್ದಾರಿ 80 ದಶ ಲಕ್ಷ ಡಾಲರ್
    • ಕರಾಚಿ-ಪೇಶಾವರ ರೈಲ್ವೆ ಮಾರ್ಗ ಪುನರ್ ನಿರ್ಮಾಣಕ್ಕೆ 8,172 ದಶ ಲಕ್ಷ ಡಾಲರ್.

    ಇಷ್ಟೆಲ್ಲಾ ಕೊಟ್ಟ ಚೀನಾಕ್ಕೆ ಪಾಕಿಸ್ತಾನ ಕೃತಜ್ಞತೆ ತೋರಿಸದಿರಲು ಸಾಧ್ಯವೇ .

    ವಾಗೀಶ್ ಕುಮಾರ್ ಜಿ ಎ
    ವಾಗೀಶ್ ಕುಮಾರ್ ಜಿ ಎ
    ಪತ್ರಕರ್ತ, ಸಮಕಾಲೀನ ಸಂಗತಿಗಳ ಬಗ್ಗೆ ಆಸಕ್ತಿ
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!