ಕಳೆದ ಒಂದು ವಾರದಿಂದ ಬೆಂಗಳೂರಿನ ಬ್ರಾಡ್ ಬ್ಯಾಂಡ್ ಬಳಕೆದಾರರು ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಷ್ಟು ದಿನ ಅಡೆ ತಡೆಯಿಲ್ಲದೆ ಹರಿದು ಬರುತ್ತಿದ್ದ ಬ್ರಾಡ್ ಬ್ಯಾಂಡ್ ವೇಗ ಹೊಯ್ದಾಡುತ್ತಿದೆ. ವೇಗವಾಗಿ ಸಾಗಿಬರುತ್ತಿದ್ದ ಕಾರಿನ ಮುಂದೆ ಧುತ್ತನೆ ಹಂಪ್ ಎದುರಾಗಿ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ ಅನುಭವ ಬಳಕೆದಾರರಿಗೆ ಆಗುತ್ತಿದೆ.
ಮೊನ್ನೆ ಅಮೆಜಾನ್ ಪ್ರೈಮ್ ನಲ್ಲಿ ಹೊಸ ಚಿತ್ರ ನಿಶ್ಶಬ್ದಂ ನೋಡುತ್ತಿದ್ದವರು ಟ್ರಾಫಿಕ್ ಜಾಮ್ ಇಲ್ಲದ ಸಿಯಾಟಲ್ ಪಟ್ಟಣದಲ್ಲಿ ನಟ ಮಾಧವನ್ ಓಡಿಸುತ್ತಿದ್ದ ಕಾರು ಬ್ರಾಡ್ ಬ್ಯಾಂಡ್ ನ ಆಮೆ ವೇಗದಿಂದ ನಿಂತಲ್ಲೇ ಗಿರಕಿ ಹೊಡೆದದ್ದನ್ನು ಕಂಡಿದ್ದಾರೆ.ಆನ್ ಲೈನ್ ತರಗತಿಯಲ್ಲಿ ಲೆಕ್ಚರರು ಅಟೆಂಡನ್ಸ್ ಕೂಗುವಾಗ ಇದ್ದ ಬ್ರಾಡ್ ಬ್ಯಾಂಡ್ ವಿದ್ಯಾರ್ಥಿ ಎಸ್ ಮಾಮ್ ಎನ್ನುವ ವೇಳೆಗೆ ಮಾಯವಾಗಿರುತ್ತದೆ.
ಹೆಚ್ಚಿದ ಅವಲಂಬನೆ
ಕೋವಿಡ್ ಕಾರಣದಿಂದಾಗಿ ಬ್ರಾಡ್ ಬ್ಯಾಂಡ್ ಮೇಲಿನ ಅವಲಂಬನೆ ಇನ್ನಿಲ್ಲದಂತೆ ಹೆಚ್ಚಿದೆ. ಆನ್ ಲೈನ್ ತರಗತಿಗಳು, ಆನ್ ಲೈನ್ ಕೆಲಸ, ಆನ್ ಲೈನ್ ಶಾಪಿಂಗ್, ಆನ್ ಲೈನ್ ಬ್ಯಾಕಿಂಗ್, ಜೂಮ್ ಮೀಟಿಂಗ್ ಗಳು, ವೆಬಿನಾರ್ ಗಳು ….ಬೆಂಗಳೂರಿನ ರಸ್ತೆಯಲ್ಲಿ ಕಡಿಮೆಯಾದ ಟ್ರಾಫಿಕ್ ಆನ್ ಲೈನ್ ನಲ್ಲಿ ಜಾಮ್ ಆಗುವಷ್ಟು ಜಾಸ್ತಿ ಆಗಿದೆ.
ಇಂಟರ್ ನೆಟ್ ಬಳಕೆ ಕೋವಿಡ್ ಕಾರಣದಿಂದಾಗಿ ನಗರ ಪ್ರದೇಶಗಳಲ್ಲಿ ಶೇಕಡ 40 ರಿಂದ 50 ರಷ್ಟು ಪ್ರಮಾಣದಲ್ಲಿ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಬೇಡಿಕೆ ಶೇಕಡ 100 ರಷ್ಟು ಹೆಚ್ಚಾಗಿರುವ ಮಾಹಿತಿಯನ್ನು ಮೇ ತಿಂಗಳಲ್ಲಿ ಭಾರತದ ಇ ಗವರೆನ್ಸ್ ಸಂಸ್ಥೆ -CSC – ನೀಡಿತ್ತು. ಶಾಲೆ ಕಾಲೇಜು ಗಳು ಆರಂಭವಾಗುವುದು ತಡವಾಗಿ ಆನ್ ಲೈನ್ ತರಗತಿಗಳು ಶುರುವಾದ ಮೇಲಂತೂ ಈ ಬೇಡಿಕೆ ಮತ್ತಷ್ಟು ಜಿಗಿಯಿತು.
ಸೈಬರ್ ಲೋಕ ಅಸ್ತವ್ಯಸ್ತ
ಏತನ್ಮಧ್ಯೆ ಬೆಂಗಳೂರು ನಗರದಲ್ಲಿ ಹಲವಾರು ಏಜೆನ್ಸಿಗಳು(BESCOM, BWSSB,BBMP) ತಮ್ಮ ತಮ್ಮ ಕೆಲಸಗಳಿಗೆ ರಸ್ತೆಯನ್ನು ಅಗೆಯುತ್ತಿದ್ದಂತೆ ಹಲವಾರು ಕಡೆ ಅಂತರ್ಗತ ಕೇಬಲ್ ಗಳು ತುಂಡರಿಸಿ ಸೈಬರ್ ಲೋಕ ಅಸ್ತವ್ಯಸ್ತವಾಯಿತು. ಇದನ್ನು ಅರಿಯದ ಗ್ರಾಹಕರು ತಮ್ಮ ಸರ್ವೀಸ್ ಪ್ರಾವೈಡರ್ ನ್ನು ಬದಲಿಸಲು ಹೊರಟರು. ಸರ್ವೀಸ್ ಪ್ರಾವೈಡರ್ ಬದಲಾದರು ಸಮಸ್ಯೆ ಬಗೆಹರಿಯದಿದ್ದಾಗ ಸಮಸ್ಯೆ ಬೇರೆ ಎಲ್ಲೋ ಇದೆ ಎಂಬುದು ಅರಿವಾಯಿತು.
ಅಂತರ್ಗತ ಕೇಬಲ್ ದುರಸ್ತಿ ಕಾಣುವುದು ತಡವಾದಾಗ ಕೆಲವು ಸರ್ವೀಸ್ ಪ್ರಾವೈಡರ್ ಗಳು ಓವರ್ ಹೆಡ್ ಕೇಬಲ್ ವ್ಯವಸ್ಥೆಗೆ ತಾತ್ಕಾಲಿಕವಾಗಿ ಶಿಫ್ಟ್ ಆಗಬೇಕಾಯ್ತು. ಆದರೂ ಸಮಸ್ಯೆ ಬಗೆ ಹರಿದಿಲ್ಲ. ಓವರ್ ಹೆಡ್ ಕೇಬಲ್ ಗಳ ಬಗ್ಗೆ ಬಿಬಿಎಂಪಿ ಆಕ್ಷೇಪಣೆ ಎತ್ತಿತು.
ಬ್ರಾಡ್ ಬ್ಯಾಂಡ್ ಇಲ್ಲದೆ ಬದುಕಿಲ್ಲ
ನಮ್ಮ ಕಡೆ ಹದಿನೈದು ದಿನವಾದರು ಬ್ರಾಡ್ ಬ್ಯಾಂಡ್ ದುರಸ್ತಿ ಆಗದೆ ಅಮೆರಿಕಾದಲ್ಲಿರುವ ನಮ್ಮ ಮಕ್ಕಳ ಜೊತೆಗೂ ಮಾತಾಡದಂತೆ ಆಗಿದೆ. ಫೇಸ್ ಬುಕ್ ಸ್ನೇಹಿತೆಯರನ್ನು ಭೇಟಿ ಮಾಡಲು ಆಗುತ್ತಿಲ್ಲ ಎಂದು ವಿದ್ಯಾಮಾನ್ಯನಗರದ ಮೀರಾ ನಾಗರಾಜ್ ಹೇಳುತ್ತಾರೆ.
ಆನ್ ಲೈನ್ ತರಗತಿ ನಡೆಸುತ್ತಿರುವ ರಾಜಾಜಿನಗರದ ಶ್ರೀನಿವಾಸ್ ಬ್ರಾಡ್ ಬ್ಯಾಂಡ್ ಸಂಪರ್ಕಕಕ್ಕೆ ಬೇಸತ್ತು ಮೊಬೈಲ್ ಡೇಟವನ್ನೇ ನಂಬಿಕೊಂಡರೆ ಅದೂ ಕೂಡ ಅಗತ್ಯ ಸಂದರ್ಭದಲ್ಲಿ ಕೈ ಕೊಡುತ್ತಿದೆ.
ವಿದ್ಯುತ್ ನಷ್ಟೆ ಬ್ರಾಡ್ ಬ್ಯಾಂಡ್ ಕೂಡ ಇಂದು ಅನಿವಾರ್ಯ. ಅದರ ದುರಸ್ತಿ ಕೂಡ ಅಷ್ಟೇ ತ್ವರಿತಗತಿಯಲ್ಲಿ ಆಗಬೇಕು ಎಂದು ಅವರು ಹೇಳುತ್ತಾರೆ.
ನಾನಾ ಏಜೆನ್ಸಿಗಳು ವಿವಿಧ ಕೆಲಸಗಳಿಗೆ ರಸ್ತೆ ಅಗೆಯುವ ಕೆಲಸಕ್ಕೆ ಒಂದು ಸಮಯ ಮಿತಿ ನಿಗದಿಯಾಗಬೇಕು.ಸಮನ್ವಯ ಸಾಧ್ಯವಾಗಬೇಕು. ಆಗ ಮಾತ್ರ ಸರಿಯಾದ ಸೇವೆ ಕೊಡಲು ಸಾಧ್ಯ ಎಂದು ಸರ್ವೀಸ್ ಪ್ರಾವೈಡರ್ ಗಳು ಹೇಳುತ್ತಾರೆ.
ಡಿಸಿಎಂ ಪತ್ರ
ಸರಕಾರದ ಟೆಕ್ ಸ್ಯಾವಿ ಉಪಮುಖ್ಯಮಂತ್ರಿ ಅಶ್ವತ್ಧನಾರಾಯಣ ಇದೀಗ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಮುಂದಾಗಿದ್ದು ಓವರ್ ಹೆಡ್ ಕೇಬಲ್ ಕತ್ತರಿಸದಂತೆ ಸೂಚಿಸಿದ್ದಾರೆ.
ಕೋವಿಡ್ ಸಂಕಷ್ಟದ ಕಾರಣದಿಂದ ತರಗತಿಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಅನೇಕ ಐಟಿ ಕಂಪೆನಿಗಳ ಕೆಲಸ ಆನ್ ಲೈನ್ (WORK FROM HOME) ನಲ್ಲೇ ನಡೆಯುತ್ತಿದೆ. ಹೀಗಾಗಿ ಕೇಬಲ್ ತೆರವು ಗೊಳಿಸಿದರೆ ಸಮಸ್ಯೆ ಆಗಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಓವರ್ ಹೆಡ್ ಕೇಬಲ್ (OFC) ಪಾಲಿಸಿ ಸಿದ್ಧ ಆಗುವವರೆಗೂ ಅವುಗಳನ್ನು ತೆರವು ಗೊಳಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲು ಅವರು ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಬಳಕೆದಾರರ ಆಗ್ರಹ
ಸರಕಾರ ಓವರ್ ಹೆಡ್ ಕೇಬಲ್ (OFC) ಪಾಲಿಸಿಯನ್ನು ತ್ವರಿತವಾಗಿ ಜಾರಿಗೆ ತಂದು ಅನಿರ್ಬಂಧಿತ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಐಟಿ ಸಿಟಿಯಲ್ಲೇ ಇಂಟರ್ ನೆಟ್ ಸೇವೆ ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಬೇಕು ಎಂಬುದು ಬಳಕೆದಾರರ ಆಗ್ರಹವಾಗಿದೆ.
Photo by Brett Sayles from Pexels
ತುಂಬಾ ದನ್ಯವಾದ ಗಳು, ನಮ್ಮ ಬ್ರಾಡ್ ಬ್ಯಾಂಡ್ ಬವಣೆ ಯನ್ನು ನಿಮ್ಮ artcle ನಲ್ಲಿ ಬರೆದಿದ್ದಕ್ಕೆ. BSNL ನವರಿಂದಾ ನಮಗೆ ತುಂಬಾ ತೊಂದರೆ ಆಗಿದೆ .Phone ಮಾಡಿದರು ಉತ್ತರಿಸೊಲ್ಲಾ,….!! ಇನ್ನು moblle data ಯಾವಾಗಲೂ poor Network .ಒಟ್ಟಿನಲ್ಲಿ ನಮಗೆ ಸಾಕಾಗಿ ಹೋಗಿದೆ..ಯಾವಾಗ ಸರಿ ಹೊಗತ್ತೊ…..?