ಐಪಿಒ ಗಳಲ್ಲಿ ಹೂಡಿಕೆ ಮಾಡಿ, ಆ ಷೇರುಗಳು ಅಲಾಟ್ ಆದಲ್ಲಿ ಲಾಭ ಗಳಿಕೆ ಖಂಡಿತಾ ಇರುತ್ತದೆ ಎಂಬ ಭಾವನೆ ಜಾಗತೀಕರಣಕ್ಕೂ ಮೊದಲಿನಿಂದಲೂ ಬಂದಿದೆ. ಈಗಲೂ ಅನೇಕ ಹೂಡಿಕೆದಾರರು, ವಿಶೇಷವಾಗಿ ಸಣ್ಣ ಹೂಡಿಕೆದಾರರು ಷೇರುಗಳು ಅಲಾಟ್ ಆದ ಮೇಲೆ ಎಂತಹ ಲಾಭ ಬಂದರೂ ಸರಿ ಮಾರಾಟ ಮಾಡಬೇಕೆಂಬ ಚಿಂತನೆಯನ್ನೇ ಬೆಳೆಸಿಕೊಳ್ಳದೆ, ಹಿಂದೆ ಆ ಕಂಪನಿಯಲ್ಲಿ ಹೀಗೆ ಬೆಳೆದಿದೆ, ಇನ್ಫೋಸಿಸ್, ವಿಪ್ರೋ, ಹೆಚ್ ಡಿ ಎಫ್ ಸಿ ಯಲ್ಲಿ ಹೂಡಿಕೆ ಮಾಡಿದವರಿಗೆ ಕೋಟಿಗಟ್ಟಲೆ ಲಾಭ ಆಗಿದೆ, ಈಗ ಅಲಾಟ್ ಆಗಿರುವ ಕಂಪನಿಯೂ ಸಹ ಮುಂದೆ ಬೆಳೆಯಲು ಅವಕಾಶವಿದೆ, ಮುಂತಾದ ಚಿಂತನೆಗಳಿಂದ, ಭಾವನಾತ್ಮಕತೆಯ ಕಾರಣ ಅತಿ ಹೆಚ್ಚು ಲಾಭ ತಂದುಕೊಟ್ಟಾಗಲೂ ಅದರ ಉಪಯೋಗ ಪಡೆದುಕೊಳ್ಳುವ ಗೋಜಿಗೆ ಹೋಗಲಾರರು.
ಈ ಚಿಂತನೆಯು ದೀರ್ಘಕಾಲೀನ ಹೂಡಿಕೆಗೆ ಪುಷ್ಠಿ ಕೊಡುತ್ತದಾದರೂ, ವಾಸ್ತವಿಕತೆಯನ್ನರಿತು ನಿರ್ಧರಿಸಿದಲ್ಲಿ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪಮಟ್ಟಿನ ಸುರಕ್ಷಿತತೆಯನ್ನು ಕಾಣಬಹುದು. ಈ ಪ್ರವೃತ್ತಿಯು ಅಕ್ಷರಶ: ಸರಿ, ಇತರೆ ಸಂಗತಿಗಳು ಬದಲಾಗದಿದ್ದರೆ. ಆದರೆ ಈಗ ಎಲ್ಲವೂ ವೇಗವಾದ ಬದಲಾವಣೆಗಳನ್ನು ಕಾಣುತ್ತಿವೆ. ಮೊಟ್ಟಮೊದಲು ಎಲ್ಲವೂ ತಾಂತ್ರಿಕತೆಗೊಳಪಟ್ಟಿವೆ.
ಈ ಹಿಂದೆ ಕೆಲವು ಪದ್ಧತಿಗಳ ವಿವರ ಇಂತಿದೆ:
- ಐಪಿಒ ಮೂಲಕ ಸಂಪನ್ಮೂಲ ಸಂಗ್ರಹಣೆಗೆ ಮೊದಲು ಆಗಿನ ಕಂಟ್ರೋಲರ್ ಆಫ್ ಕ್ಯಾಪಿಟಲ್ ಇಶ್ಯೂಸ್ ರವರ ಪೂರ್ವಾನುಮತಿ ಪಡೆಯಬೇಕಿತ್ತು. ಈಗ ಅಂತಹ ಪೂರ್ವಾನುಮತಿಯನ್ನು ಪೇಟೆಯ ನಿಯಂತ್ರಕ ʼಸೆಬಿʼ ಯಿಂದ ಪಡೆಯಬೇಕಿದೆ.
- ಕಂಟ್ರೋಲರ್ ಆಫ್ ಕ್ಯಾಪಿಟಲ್ ಇಶ್ಯೂಸ್ ಸಂಸ್ಥೆ ಎಂತಹ ಸಬಲ, ಬಲಿಷ್ಠ ಕಂಪನಿಯಾದರೂ ಅದು ಕೇವಲ ಅತ್ಯಲ್ಪ ಪ್ರೀಮಿಯಂ ಗೊತ್ತುಮಾಡುತ್ತಿತ್ತು. ಆಗಿನ ಸಮಯದಲ್ಲಿ ಪ್ರಮುಖ ಕಂಪನಿಗಳಾದ ಕಾಲ್ಗೇಟ್ ಪಾಲ್ಮೋಲಿವ್, ಬ್ರಿಟಾನ್ನಿಯಾ, ಹಾರ್ಲಿಕ್ಸ್, ಕ್ಯಾಡ್ಬರೀಸ್, ಈಸ್ಟ್ ಇಂಡಿಯಾ ಹೋಟೆಲ್ಸ್, ಟೀ ಎಸ್ಟೇಟ್ಸ್ ನಂತಹ ಸಾಧನೆಯಾಧಾರಿತ ಕಂಪನಿಗಳ ವಿತರಣಾ ಬೆಲೆ ಪೇಟೆಯ ಬೆಲೆಗಿಂತ ಅತ್ಯಲ್ಪವಾಗಿತ್ತು. ಕೇವಲ ರೂ.10 ರಿಂದ 30, 40 ರೂಪಾಯಿಗಳ ಪ್ರೀಮಿಯಂ ನಿಗದಿಪಡಿಸಲಾಗುತ್ತಿತ್ತು.
- ಅಲಾಟ್ಮೆಂಟ್ ನ್ನು ಸ್ಟಾಕ್ ಎಕ್ಸ್ ಚೇಂಜ್ ಗಳ ಸಹಯೋಗದೊಂದಿಗೆ ನಿರ್ಧರಿಸುವುದಲ್ಲದೆ, ಅಲಾಟ್ಮೆಂಟ್ ಪಟ್ಟಿ ಅಂತಿಮಗೊಳಿಸಲು ವಾರಗಟ್ಟಲೆ ಸಮಯ ಹಿಡಿಯುತ್ತಿತ್ತು. ಕಾರಣ ವಿತರಣೆಯು ಈಗಿನಂತೆ ಕೇವಲ ಮೂರು ದಿನಗಳಿಗೆ ಸೀಮಿತವಾಗಿರದೆ ಬಹುದಿನಗಳವರೆಗೂ ತೆರೆದಿರುತ್ತಿತ್ತು. ಐಪಿಒ ಫಾರಂಗಳನ್ನು ಷೇರು ಬ್ರೋಕರ್ ರವರಿಂದ ಪಡೆದು, ಭರ್ತಿಮಾಡಿ, ಚೆಕ್ ನೊಂದಿಗೆ ನಿಗದಿತ ಬ್ಯಾಂಕ್ ಗೆ ತಲುಪಿಸಬೇಕಿತ್ತು. ನಂತರ ದೇಶದ ಎಲ್ಲಾ ಬ್ಯಾಂಕ್ ಗಳು ಸಂಗ್ರಹಿಸಿದ ಈ ಫಾರಂಗಳು, ಬ್ಯಾಂಕರ್ಸ್ ಟು ದಿ ಇಶ್ಯು ನ ಕೇಂದ್ರ ಕಚೇರಿಯಲ್ಲಿ ವಿಂಗಡಣೆ ಮಾಡಿ ಅಲಾಟ್ಮೆಂಟ್ ಕಮಿಟಿ ಫೈನಲ್ ಮಾಡುತ್ತಿತ್ತು. ಈ ಎಲ್ಲಾ ಕಾರ್ಯಗಳು ಭೌತಿಕವಾಗಿ ನಡೆಯುತ್ತಿದ್ದ ಕಾರಣ ಹೆಚ್ಚಿನ ಸಮಯ ಬೇಕಾಗಿರುತ್ತಿತ್ತು. ಕನಿಷ್ಠ ಎರಡು ತಿಂಗಳಾದರೂ ಐಪಿಒ ಷೇರು ಲಿಸ್ಟಿಂಗ್ ಗೆ ಸಮಯ ಬೇಕಾಗುತ್ತಿತ್ತು. ಅಲಾಟ್ಮೆಂಟ್ ಆಗದಿದ್ದರೆ ರೀಫಂಡ್ ಆರ್ಡರ್ ಬರುವುದೂ ಸಹ ಹಲವಾರು ಬಾರಿ ವಿಳಂಬವಾಗುತ್ತಿತ್ತ್ತು
- ಷೇರುಪೇಟೆ ಲೀಸ್ಟಿಂಗ್ ಆದ ನಂತರ ಬ್ರೋಕರ್ ಮೂಲಕ ಖರೀದಿಸಿದ ಮೇಲೆ ಖರೀದಿಸಿದ ಷೇರು ಸರ್ಟಿಫಿಕೇಟ್ ಮತ್ತು ಅದರ ವರ್ಗಾವಣೆ ಫಾರಂ ಖರೀದಿದಾರರ ಕೈ ಸೇರಲು ಕೆಲವೊಮ್ಮೆ ತಿಂಗಳುಗಳ ಸಮಯವೇ ಹಿಡಿಯುತ್ತಿತ್ತು. ನಂತರ ಅದನ್ನು ಸಂಬಂಧಿತ ಏಜೆಂಟರಿಗೆ ವರ್ಗಾವಣೆಗೆ, ಸೂಕ್ತವಾದ ಷೇರು ಟ್ರಾನ್ಸ್ ಫರ್ ಸ್ಟಾಂಪ್ ಲಗತ್ತಿಸಿ ಕಳುಹಿಸಿದಾಗ, ಷೇರು ಟ್ರಾನ್ಸ್ ಫರ್ ಏಜೆಂಟರು ಎಲ್ಲವನ್ನೂ ಚೆಕ್ ಲಿಸ್ಟ್ ನೊಂದಿಗೆ ಹೊಂದಿಸಿ ಎಲ್ಲವೂ ಸರಿ ಇದ್ದರೆ ವರ್ಗಾವಣೆಯನ್ನು, ಆಯಾ ಕಂಪನಿಯ ಬೋರ್ಡ್ ಅನುಮತಿಯೊಂದಿಗೆ, ಮಾಡಿ ಖರೀದಿದಾರರಿಗೆ ಕಳುಹಿಸಲಾಗುತ್ತಿತ್ತು. ಬಹಳಷ್ಟು ಸಂದರ್ಭಗಳಲ್ಲಿ ವರ್ಗಾವಣೆಗೆ ಕಳುಹಿಸಿದ ಷೇರುಗಳು ಆಂಗೀಕಾರವಾಗದೆ, ಬ್ಯಾಡ್ ಡೆಲಿವರಿಯಾಗಿ ಹಿಂದಿರುಗಿಸಲಾಗುತ್ತಿತ್ತು.
ಬ್ಯಾಡ್ ಡೆಲಿವರಿಗಳಿಗೆ ಪ್ರಮುಖ ಕಾರಣಗಳು
- ಕಂಪನಿಯ ದಾಖಲೆಯಲ್ಲಿರುವ ಮತ್ತು ಟ್ರಾನ್ಸ್ ಫರ್ ಫಾರಂನಲ್ಲಿರುವ ಷೇರುದಾರರ ಸಹಿ ಹೊಂದಾಣಿಕೆಯಾಗದಿರುವುದು.
- ನಿಖರವಾದ ಷೇರು ಟ್ರಾನ್ಸ್ ಫರ್ ಸ್ಟಾಂಪ್ ಲಗತ್ತಿಸದೆ ಇರುವುದು.
- ಅಪೂರ್ಣವಾಗಿ ಭರ್ತಿಯಾದ ಫಾರಂ
- ಷೇರು ಟ್ರಾನ್ಸ್ ಫರ್ ಫಾರಂ ಔಟ್ ಡೇಟೆಡ್ ಆಗಿರುವುದು
- ಒಂದು ವೇಳೆ ಷೇರುಗಳು ಪಾರ್ಟ್ಲಿ ಪೇಡ್ ಆಗಿದ್ದಲ್ಲಿ ಅಥವಾ ಕಾಲ್ ಮನಿ ಪೂರ್ಣವಾಗಿ ಪಾವತಿಯಾಗಿರುವುದಕ್ಕೆ ಕಾಲ್ ರಸೀದಿ ಲಗತ್ತಿಸದೆ ಇರುವುದು.
ಮುಂತಾದ ಅನೇಕ ಕಾರಣಗಳಿಂದ ಷೇರುಗಳು ವರ್ಗಾವಣೆಯಾಗದೆ ಹಿಂದಿರುಗುತ್ತಿದ್ದವು.
ಈ ಎಲ್ಲಾ ಕಾರ್ಯಪ್ರಕ್ರಿಯೆಗಳು ಮುಗಿಯಲು ಹಲವು ತಿಂಗಳುಗಳೆ ಹಿಡಿಯುತ್ತಿದ್ದವು. ಹಾಗಾಗಿ ದೀರ್ಘಕಾಲೀನ ಹೂಡಿಕೆಗೆ ಮಹತ್ವವಿತ್ತು. ಪ್ರತಿಯೊಂದು ಶ್ರಮಕ್ಕೂ ಗೌರವಯುತ ಬೆಲೆಯಿತ್ತು.
ಪ್ರಸ್ತುತ ಪದ್ಧತಿ:
ಆದರೆ ಈಗ ಎಲ್ಲವೂ ಮಿಂಚಿನ ವೇಗದಲ್ಲಿ ಸಾಗುತ್ತಿವೆ. ಎಲ್ಲವೂ ತಾಂತ್ರಿಕತೆ ಅಳವಡಿಕೆಯ ಕಾರಣ ಅರ್ಜಿಯ ಹಣವನ್ನೂ ಸಹ ಪಡೆಯದೆ, ಕೇವಲ ಅಷ್ಠು ಹಣವನ್ನು ಅರ್ಜಿದಾರರ ಬ್ಯಾಂಕ್ ಖಾತೆಯಲ್ಲಿಯೇ ಬ್ಲಾಕ್ ಮಾಡುವ ಮೂಲಕ ಸರಳಗೊಳಿಸಲಾಗಿದೆ. ಅಲ್ಲದೆ ಷೇರುಗಳ ಅಲಾಟ್ಮೆಂಟ್, ಲಿಸ್ಟಿಂಗ್ ಪ್ರಕ್ರಿಯೆಗಳು ತ್ವರಿತವಾಗಿ ಸಾಗುವುವು. ಲಿಸ್ಟಿಂಗ್ ಆದ ನಂತರ ಷೇರು ಖರೀದಿಸಿದಲ್ಲಿ, ಖರೀದಿಸಿದ ಷೇರಿಗೆ ಪೂರ್ಣವಾಗಿ ಹಣ ಪಾವತಿಯಾಗಿದ್ದಲ್ಲಿ ನೇರವಾಗಿ ಡಿಮ್ಯಾಟ್ ಖಾತೆಗೆ ಬರುವುವು ಮತ್ತು ಷೇರು ಮಾರಾಟ ಮಾಡಿದವರ ಹಣವು ಕೇವಲ ಎರಡೇ ದಿನಗಳಲ್ಲಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗುವುದು. ಇದೆಲ್ಲಾ ಪ್ರಕ್ರಿಯೆಗಳು ಮಿಂಚಿನಂತೆ ನಡೆದು ಕೇವಲ ಎರಡೇ ದಿನಗಳಲ್ಲಿ ಪೂರ್ಣವಾಗುವುದರಿಂದ ಷೇರುಪೇಟೆಯಲ್ಲಿ ವಹಿವಾಟು ಅತಿ ಸುಲಭ. ಆದರೆ ಇಂತಹ ವಾತಾವರಣದಲ್ಲಿ ಪೇಟೆಯ ಚಟುವಟಿಕೆಗಳ ಹಿಂದಿನ ಉದ್ದೇಶವನ್ನರಿತು, ಮನಸ್ಸಿನ ಚಿಂತನೆಗಳನ್ನು ಚುರುಕುಗೊಳಿಸಿ, ಸಂದರ್ಭಕ್ಕನುಗುಣವಾಗಿ ನಿರ್ಧರಿಸುವುದು ಅನಿವಾರ್ಯ.
ಇನ್ನು ಐಪಿಒ ಗಳು ಇತ್ತೀಚೆಗೆ ಅತಿ ಹೆಚ್ಚಿನ ಬೆಲೆಗಳಲ್ಲಿ ಪೇಟೆ ಪ್ರವೇಶಿಸುತ್ತಿವೆ. ಕೆಲವು ಕಂಪನಿಗಳನ್ನು ಹೊರತುಪಡಿಸಿ, ಆರಂಭದಲ್ಲಿ ಅತಿ ಹೆಚ್ಚಿನ ಬೆಲೆಯಲ್ಲಿ ವಹಿವಾಟಾಗಿ ನಂತರ ಮಂದಗತಿಯಲ್ಲಿರುತ್ತವೆ. ಉತ್ತಮ ಕಂಪನಿಗಳು ಕಡಿಮೆ ಬೆಲೆಯಲ್ಲಿ ಐಪಿಒ ಮೂಲಕ ಪ್ರವೇಶಿಸುವ ಸಂದರ್ಭಗಳು ಅತಿ ವಿರಳವಾಗಿವೆ.
ಮಾರುತಿ ಸುಜುಕಿ, ಕೆನರಾ ಬ್ಯಾಂಕ್ ಗಳು ವಿತರಿಸಿದ ರೀತಿ ಮುಂದುವರೆಯದೆ, ಜೆಟ್ ಏರ್ ವೇಸ್, ನ್ಯೂ ಇಂಡಿಯಾ ಅಶುರನ್ಸ್, ಜನರಲ್ ಇನ್ ಶೂರನ್ಸ್, ಹೆಚ್ ಎ ಎಲ್ ಕಂಪನಿಗಳು ವಿತರಿಸಿದ ಬೆಲೆಗಳ ರೀತಿಯು ಸಾಮಾನ್ಯ ಹೂಡಿಕೆದಾರರ ಹಿತದಿಂದಂತೂ ಅಲ್ಲ. ಕೆಲವೇ ಕಂಪನಿಗಳನ್ನು ಹೊರತುಪಡಿಸಿದರೆ, ವಿತರಣೆ ಬೆಲೆ ಮತ್ತು ಇಂದಿನ ಷೇರಿನ ದರಗಳಿಗೂ ಭಾರಿ ಇಳಿಕೆಯಲ್ಲಿರುವುದು ಮುಂಬರುವ ಐಪಿಒ ಗಳಲ್ಲಿ ಭಾಗವಹಿಸುವ ಮುನ್ನ ತಿಳಿದುಕೊಂಡಲ್ಲಿ ಉಪಯುಕ್ತವಾಗಬಹುದು.
ವಿಸ್ಮಯಕಾರಿ:
ಅಕ್ಟೋಬರ್ 1ರಂದು ಲಿಸ್ಟಿಂಗ್ ಆದ ಕೆಂಕಾನ್ ಸ್ಪೆಷಾಲಿಟಿ ಕೆಮಿಕಲ್ಸ್ ಲಿಮಿಟೆಡ್ ಕಂಪನಿಯ ಐಪಿಒ ವಿತರಣೆ ಬೆಲೆ ರೂ.340, ಆದರೆ ಲಿಸ್ಟಿಂಗ್ ಬೆಲೆ ರೂ.741 ರಲ್ಲಿ ಆರಂಭವಾಗಿ ನಂತರ ಇಳಿಕೆಯಿಂದ ರೂ.584 ರ ಸಮೀಪದ ಕೆಳಗಿನ ಸರ್ಕ್ಯುಟ್ ತಲುಪಿತು. ಸೋಜಿಗವೆಂದರೆ ರೂ.340 ರಿಂದ ಏರಿಕೆ ಕಾಣಲು ಇಲ್ಲದ ಸರ್ಕ್ಯುಟ್ ಇಳಿಕೆಗೆ ಮಾತ್ರ ಅಳವಡಿಸಲಾಗಿರುವುದು ವಿಸ್ಮಯಕಾರಿ ಅಂಶವಾಗಿದೆ.
ಒಟ್ಟಿನಲ್ಲಿ ಐಪಿಒ ಗಳಿಗೆ ಅಪ್ಲೈ ಮಾಡುವ ಮುನ್ನ ವಿವಿಧ ಅಯಾಮಗಳನ್ನು ಪರಿಶೀಲಿಸಿ ಸ್ವತಂತ್ರವಾದ ನಿರ್ಧಾರ ತೆಗೆದುಕೊಂಡಲ್ಲಿ ಮಾತ್ರ ಲಾಭದಾಯಕ ಹೂಡಿಕೆಯಾಗಬಹುದು. ಅಲಾಟ್ ಆದ ಷೇರುಗಳ ಮೇಲೆ ಕೇವಲ ಭಾವನಾತ್ಮಕತೆಯ ಭಾಂದವ್ಯ ಹೊಂದದೆ ಪರಿಸ್ಥಿತಿಯಾಧರಿಸಿ ನಿರ್ಧರಿಸಬೇಕು. ನಡೆಸಿದ ಎಲ್ಲಾ ಚಟುವಟಿಕೆಗೂ ಸರಿಯಾದ ಅಕೌಂಟ್ ಇಟ್ಟು ನಿರ್ವಹಿಸಿದರೆ ನೆಮ್ಮದಿಯೂ ನಿಮ್ಮದಾಗುವುದು.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.