2020 ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಹಲವಾರು ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರದ ಆದೇಶಗಳಿಗೆ ನಿರೀಕ್ಷಿಸಿ ಕಾದು ಕುಳಿತುಕೊಳ್ಳುವ ಬದಲು, ಪ್ರಸ್ತುತ ವ್ಯವಸ್ಥೆಯಲ್ಲಿಯೇ ಹಲವಾರು ಹಂತಗಳಲ್ಲಿ ಹೇಗೆ ಅನುಷ್ಠಾನಗೊಳಿಸಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ಅವಲೋಕಿಸಲಾಗಿದೆ.
ನನ್ನ ಗುರುಗಳ ಸ್ಥಾನದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನ್ಯಾಕ್ ವಿಶ್ರಾಂತ ನಿರ್ದೇಶಕರಾದಂತ ಡಾ. ಎಚ್. ಎ. ರಂಗನಾಥ್ ಅವರು ಸೆಪ್ಟಂಬರ್ 19 ರಂದು ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ ವೆಬಿನಾರ್‍ನಲ್ಲಿ ನೀಡಿದ ಉದ್ಘಾಟನಾ ಭಾಷಣಕ್ಕೆ ಹಾಜರಾಗಿ, ಈ ಲೇಖನದ ಕೆಲವು ಅಂಶಗಳ ಬಗ್ಗೆ ಅವರ ಜೊತೆಯಲ್ಲಿ ವಿಚಾರ ವಿನಿಮಯ ಮಾಡಿಕೊಂಡಿದ್ದೇನೆ. ಪ್ರಸ್ತುತ ವ್ಯವಸ್ಥೆಯಲ್ಲೇ ನೂತನ ಶಿಕ್ಷಣ ನೀತಿಯನ್ನು ಹೇಗೆ ಜಾರಿಗೆ ತರಬಹುದು ಎಂಬುದನ್ನು ವಿವರಿಸಲಾಗಿದೆ.
ಸಂಯೋಜಿತ ಕಾಲೇಜುಗಳ ಮಟ್ಟದಲ್ಲಿ
ರಾಷ್ಟೀಯ ಶಿಕ್ಷಣ ನೀತಿಯ ಪ್ರಕಾರ ಬೋಧನಾ ಕ್ರಮದಲ್ಲಿ ವಿದ್ಯಾರ್ಥಿ ಕೇಂದ್ರ ಬಿಂದು ಇರುವ ( Student centric ) ಪದ್ಧತಿಯನ್ನು ಅಳವಡಿಸಿ ಸೃಜನಾತ್ಮಕ, ವಿಮರ್ಶಾತ್ಮಕ ಚಿಂತನೆ ಹಾಗೂ ಪರಿಕಲ್ಪನಾ ತಿಳಿವಳಿಕೆಗೆ ಒತ್ತು ನೀಡಲಾಗಿದೆ. ಈ ಶಿಪಾರಸ್ಸುಗಳನ್ನು ಪ್ರಸ್ತುತ ವ್ಯವಸ್ಥೆಯಲ್ಲಿಯೇ ಯಾವುದೇ ಹಣಕಾಸಿನ ಅವಶ್ಯಕತೆಯಿಲ್ಲದೇ, ಅಧ್ಯಾಪಕರ ಸೃಜನಶೀಲತೆಯ ಬೆಂಬಲದಿಂದ ಜಾರಿಗೊಳಿಸಬಹುದು.
ಬೋಧನೆ, ಕಲಿಕೆ ಮತ್ತು ಆಂತರಿಕ ಮೌಲ್ಯಮಾಪನದಲ್ಲಿ ತಂತ್ರಜ್ಞಾನವನ್ನು ಈಗಾಗಲೇ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಬಹುದಾಗಿದೆ. ಸರ್ಕಾರಗಳ ಸೂಚನೆಗೆ ಕಾಯ ಬೇಕಿಲ್ಲ.
ಜೀವನ ಕೌಶಲ್ಯಗಳು / ಸಾಮಾಜಿಕ ಕೌಶಲ್ಯಗಳು / ಔದ್ಯೋಗಿಕ ಕೌಶಲ್ಯಗಳು / ವಿಷಯಗಳಿಗೆ ಸಂಬಂಧಿಸಿದ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅವಶ್ಯಕತೆಯಿರುವ ವಿಷಯಗಳನ್ನು ಕುರಿತಂತೆ ಸರ್ಟಿಫಿಕೇಟ್ ಕೋರ್ಸುಗಳ ಮೂಲಕ ಶಿಕ್ಷಣ ನೀಡಬಹುದು. ಹಲವಾರು ವಿದ್ಯಾಸಂಸ್ಥೆಗಳಲ್ಲಿ ಈ ಪದ್ಧತಿಯು ಈಗಾಗಲೇ ಚಾಲ್ತಿಯಲ್ಲಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಸಂಶೋಧನಾ ಚಟುವಟಿಕೆಗಳಿಗೆ ಒತ್ತು ನೀಡಬೇಕೆಂದು ಶಿಪಾರಸ್ಸು ಮಾಡಲಾಗಿದೆ. ಆಡಳಿತ ಮಂಡಳಿಗಳ ಸಹಕಾರದಿಂದ , ವಿದ್ಯಾಸಂಸ್ಥೆಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಧ‍್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬಹುದು.
ಶಿಕ್ಷಕರ ಸಮಗ್ರ ಮತ್ತು ನಿರಂತರ ವೃತ್ತಿಪರ ಅಬಿವೃದ್ಧಿಗೆ ( Comprehensive and Continuous Professional Development ) ಒತ್ತು ನೀಡಲಾಗಿದೆ. ಪುನಃಶ್ಚೇತನ ಕೋರ್ಸುಗಳಿಗೆ ಹಾಜರಾಗುವುದು, ಸಮ್ಮೇಳನಗಳಲ್ಲಿ ಭಾಗವಹಿಸುವುದು, ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಉತ್ತೇಜನ ನೀಡುವುದು ಇತ್ಯಾದಿ, ಇವುಗಳ ಮೂಲಕ ಶಿಕ್ಷಕರ ಗುಣಮಟ್ಟದಲ್ಲಿ ಅಪಾರವಾದ ಅಭಿವೃದ್ಧಿಯನ್ನು ಕಾಣಬಹುದು.
ಇನ್ನುಇನ್ಕುಬೇಷನ್ ಕೇಂದ್ರಗಳು, ಉದ್ಯಮ ಅಕಾಡಮಿಯ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ, ವಿದ್ಯಾರ್ಥಿಗಳಲ್ಲಿ ಉದ್ಯೋಗಶೀಲತೆಯನ್ನು( Entrepreneurship ) ಅಭಿವೃದ್ಧಿ ಪಡಿಸಬಹುದು.
ಸ್ವಾಯತ್ತ ಮಹಾವಿದ್ಯಾಲಯಗಳ ಮಟ್ಟದಲ್ಲಿ
ಪ್ರತಿಯೊಂದು ವಿಶ್ವವಿದ್ಯಾಲಯವು 2035 ರ ವೇಳೆಗೆ ಬಹು ಶಿಸ್ತೀಯ ಕಾಲೇಜಾಗಿ ಬೆಳೆಯಲು ಸೂಚಿಸಲಾಗಿದೆ. ಪ್ರಸ್ತುತ ಒಂದೇ ವಿಷಯದಲ್ಲಿ ಶಿಕ್ಷಣ ನೀಡುತ್ತಿರುವ ಮಹಾವಿದ್ಯಾಲಯಗಳು, ಬಹುಶಿಸ್ತೀಯ ಮಹಾ ವಿದ್ಯಾಲಯಗಳಾಗಿ ಬೆಳೆಯಲು ಉತ್ತೇಜನ ನೀಡಿದರೆ ಮುಂದಿನ ವರ್ಷಗಳಲ್ಲಿಯೇ ಗುರಿಯನ್ನು ಸಾಧಿಸಬಹುದು.
ಪಠ್ಯಕ್ರಮವನ್ನು ವಿದ್ಯಾರ್ಥಿ ಕೇಂದ್ರಬಿಂದು ಪದ್ಧತಿಗೆ ಅನುಗುಣವಾಗಿ ಪುನರ್‍ರಚಿಸಿ, ವಿದ್ಯಾರ್ಥಿಗಳ ಕಲಿಕಾ ಅನುಭವವನ್ನು ಹೆಚ್ಚಿಸಬಹುದು. ಇದು ತಕ್ಷಣದಿಂದಲೇ ಸಾಧ್ಯ.
ಕಂಠಪಾಠ ಕಲಿಕೆಗೆ ( rote learning ) ತಿಲಾಂಜಲಿ ನೀಡಿ, ಸೃಜನಶೀಲತೆ, ಹೊಸತನ್ನು ಕಂಡುಹಿಡಿಯುವಿಕೆ ಮತ್ತು ಪರಿಕಲ್ಪನಾ ತಿಳಿವಳಿಕೆಗಳನ್ನು ಉತ್ತೇಜಿಸುವಂತೆ, ಪಠ್ಯಕ್ರಮ ಮತ್ತು ಬೋಧನಾ – ಕಲಿಕೆ ಕಾರ್ಯ ವಿಧಾನವನ್ನು ಮಾರ್ಪಾಟು ಮಾಡಬಹುದು.
ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ವಿಷಯಗಳನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ, ಸಂಪೂರ್ಣ ಸ್ವಾತಂತ್ರ್ಯ ನೀಡಿ ಅಂತರ ಶಿಸ್ತೀಯ ( interdisciplinary ) ಪದ್ಧತಿಯನ್ನು ಜಾರಿಗೊಳಿಸ ಬಹುದು. ಕಲೆ, ವಿಜ್ಞಾನ. ವಾಣಿಜ್ಯ, ಸಮಾಜ ವಿಜ್ಞಾನದ ವಿಷಯಗಳು, ಮಾನವೀಯ ಶಾಸ್ತ್ರಕ್ಕೆ ಸಂಬಂಧ ಪಟ್ಟ ವಿಷಯಗಳು ಇವುಗಳ ನಡುವೆ ಈಗಿರುವ ಅಡ್ಡಗೋಡೆಗಳನ್ನು ತೆಗೆದುಹಾಕಿ, ಅಂತರಶಿಸ್ತೀಯ ಶಿಕ್ಷಣಕ್ಕೆ ಉತ್ತೇಜನ ನೀಡಬಹುದಾಗಿದೆ.ಮುಕ್ತ ಕಲೆ ಶಿಕ್ಷಣಕ್ಕೆ (Liberal Arts Education) ಉತ್ತೇಜನ ನೀಡಬಹುದು.
ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿಷಯಗಳ ಕಾಂಬಿನೇಷನ್ ಆರಿಸಿಕೊಳ್ಳುವಾಗ ಔದ್ಯೋಗಿಕ ವಿಷಯಗಳನ್ನು ಸೇರಿಸುವುದರ ಮೂಲಕ, ಔದ್ಯೋಗಿಕ ಶಿಕ್ಷಣವನ್ನು ಮುಖ್ಯವಾಹಿನಿ ಶಿಕ್ಷಣದಲ್ಲಿ ವಿಲೀನಗೊಳಿಸಬಹುದು.
ಸಾಮಾಜಿಕ ಎಂಗೇಜ್‍ಮೆಂಟ್( Community Engagement ), ಪರಿಸರ ವಿಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣಗಳನ್ನು ಕ್ರೆಡಿಟ್ ಆಧಾರಿತ ಕೋರ್ಸುಗಳಾಗಿ ಮತ್ತು ಯೋಜನೆಗಳಾಗಿ ಪರಿಚಯಿಸಬಹುದು.ಇಂಟರ್ನ್‍ಶಿಪ್ ಅನ್ನು ಪಠ್ಯಕ್ರಮದ ಒಂದು ಭಾಗವಾಗಿ ಮಾಡಬಹುದು.
ವಿದ್ಯಾಸಂಸ್ಥೆಗಳಲ್ಲಿ, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಬಹುದು.
ಸಂಶೋಧನೆ ಮೂಲಕ ಸ್ನಾತಕೋತ್ತರ ಪದವಿಗಳನ್ನು ನೀಡುವ ಪದ್ಧತಿಯನ್ನು ಪರಿಚಯಿಸಬಹುದು.
ಇವುಗಳ ಜೊತೆಗೆ, ಸಂಯೋಜಿತ ಕಾಲೇಜುಗಳ ಮಟ್ಟದಲ್ಲಿ ಉಲ್ಲೇಖಿಸಿರುವ ಹಲವಾರು ಯೋಜನೆಗಳನ್ನು, ಉದಾಹರಣೆಗೆ ತಂತ್ರಜ್ಞಾನ ಅಳವಡಿಕೆ, ಸರ್ಟಿಫಿಕೇಟ್ ಕೋರ್ಸುಗಳನ್ನು ಪ್ರಾರಂಭಿಸುವುದು, ಶಿಕ್ಷಕರ ಸಮಗ್ರ ಮತ್ತು ನಿರಂತರ ವೃತ್ತಿ ಪರ ಅಭಿವೃದ್ದಿ, ಇನ್ಕುಬೇಷನ್ ಕೇಂದ್ರಗಳ ಸ್ಥಾಪನೆ, ತಕ್ಷಣದಿಂದಲೇ ಕಾರ್ಯಗತಕ್ಕೆ ತರಬಹುದು.
ವಿಶ್ವವಿದ್ಯಾಲಯಗಳ ಮಟ್ಟದಲ್ಲಿ
ವಿವಿಧ ಬಗೆಯ ನಿರ್ಗಮನ ಆಯ್ಕೆ ಅವಕಾಶಗಳೊಳಗೊಂಡಂತೆ (multiple exit options) ನಾಲ್ಕು ವರ್ಷಗಳ ಅವಧಿಯ ಪದವಿ ಕೋರ್ಸುಗಳನ್ನು ಪ್ರಾರಂಭಿಸಲು ಅಗತ್ಯವಾದ ಕ್ರಮಗಳನ್ನು ಪ್ರಾರಂಭಿಸಬಹುದು.
ಮೊದಲ ಹಂತದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಉನ್ನತಿ ವಿದ್ಯಾ ಸಂಸ್ಥೆಗಳಲ್ಲಿ ( Institutions of eminence ) ಪ್ರಾರಂಭಿಸಿ, ನಂತರ ಉಳಿದ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಪ್ರಾರಂಭಿಸಬಹುದು.
ಅಕಾಡೆಮಿಕ್ ಬ್ಯಾಂಕ್ ಕ್ರೆಡಿಟ್ ವ್ಯವಸ್ಥೆಯನ್ನು ಪ್ರಾರಂಭಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಐದು ವರ್ಷದ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಬಹುದು.
ನಾಲ್ಕು ವರ್ಷದ ಬಿ. ಎಡ್ ಕೋರ್ಸುಗಳನ್ನು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಬಹುಶಿಸ್ತೀಯ ಕಾಲೇಜುಗಳಲ್ಲಿ ಪ್ರಾರಂಭಿಸಬಹುದು. ಈಗಿರುವ ಬಿ. ಎಡ್ ಕಾಲೇಜುಗಳನ್ನು ಬಹುಶಿಸ್ತೀಯ ಕಾಲೇಜುಗಳಾಗಿ ಪರಿವರ್ತನೆಯಾಗಲು ಉತ್ತೇಜನ ನೀಡಬಹುದು, ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಆನ್‍ಲೈನ್ ಮತ್ತು ಮುಕ್ತ ದೂರದ ಕಲಿಕೆ ( open distance learning ) ಪದ್ಧತಿಯಲ್ಲಿ ಕೋರ್ಸುಗಳನ್ನು ಪ್ರಾರಂಭಿಸಬಹುದು.
ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿಷಯಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕೆಪೆಟೇರಿಯಾ ಪದ್ಧತಿಯನ್ನು ಅಳವಡಿಸಬಹುದು. ಇದರಿಂದ ಅಂತರಶಿಸ್ತೀಯ ( interdisciplinary ) ಶಿಕ್ಷಣಕ್ಕೆ ಉತ್ತೇಜನ ನೀಡಿದಂತಾಗುತ್ತದೆ.
ಮುಕ್ತ ಕಲೆ ಶಿಕ್ಷಣಕ್ಕೆ (Liberal Arts Education ) ಹೆಚ್ಚು ಒತ್ತು ಮತ್ತು ಉತ್ತೇಜನ ನೀಡಬಹುದು.
ಇಂಟರ್ನ್ ಶಿಪ್‍ನ್ನು ಪಠ್ಯಕ್ರಮದ ಒಂದು ಭಾಗವಾಗಿ ಮಾಡಬಹುದು. ಮೊದಲ ಹಂತದಲ್ಲಿ ಔದ್ಯೋಗಿಕ ಕೋರ್ಸುಗಳಲ್ಲಿ ಕಡ್ಡಾಯಗೊಳಿಸಬಹುದು.
ಕಂಠಪಾಠ ಕಲಿಕೆಗೆ ತಿಲಾಂಜಲಿ ನೀಡಿ, ಸೃಜನಶೀಲತೆ ಹಾಗೂ ಪರಿಕಲ್ಪನಾ ತಿಳುವಳಿಕೆಗೆಒತ್ತು ನೀಡಿ, ಪಠ್ಯಕ್ರಮ, ಕಲಿಕಾ ಪದ್ದತಿ ಮತ್ತು ಮೌಲ್ಯಮಾಪನದ ಕ್ರಮಗಳನ್ನು ಪುನರ್‍ರಚಿಸಿ,ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು ಸಹ ಸೂಕ್ತವಾಗಿ ಬದಲಾಯಿಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬಹುದು.
ತರಗತಿಗಳಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನುಪಾತವನ್ನು ಹೆಚ್ಚು ಅನುಕೂಲಕರ ಸ್ಥಿತಿಯಲ್ಲಿರುವಂತೆ ನಿರ್ಬಂಧಿಸಬಹುದು. ಉದಾಹರಣೆಗೆ, ಪದವಿ ತರಗತಿಗಳಲ್ಲಿ 60 : 1 ಸ್ನಾತಕೋತ್ತರ ತರಗತಿಗಳಲ್ಲಿ 40 : 1 ಅನುಪಾತವನ್ನು ಅಳವಡಿಸಬಹುದು. ಇದರಿಂದ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ನಡುವೆ ಅರ್ಥಪೂರ್ಣ ಸಂವಹನಕ್ಕೆ ಅವಕಾಶ ಸಿಗುತ್ತದೆ.
ಹೆಚ್ಚಿನ ಸಂಖೈಯಲ್ಲಿ ಅರ್ಹತೆಯಿರುವ ಕಾಲೇಜುಗಳಿಗೆ ಸ್ವಾಯತ್ತತೆ ನೀಡಬಹುದು.
ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಮತ್ತು ಉತ್ತೇಜನ ನೀಡಬಹುದು. ಹಲವಾರು ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಬಹುದು.
ಪ್ರತಿಷ್ಠಿತ ವಿದೇಶಿ ವಿಶ‍್ವವಿದ್ಯಾಲಯಗಳ ಜೊತೆ ಅವಳಿ ಕೋರ್ಸುಗಳನ್ನು ( twinning programmes ) ಪ್ರಾರಂಭಿಸಬಹುದು.
ರಾಜ್ಯ ಸರ್ಕಾರದ ಮಟ್ಟದಲ್ಲಿ
ಪ್ರಸ್ತುತದಲ್ಲಿ ಏಕಶಿಸ್ತೀಯ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾಲಯಗಳು ಹಾಗೂ ವಿದ್ಯಾಸಂಸ್ಥೆಗಳು ಬಹು ಶಿಸ್ತೀಯ ಶಿಕ್ಷಣ ಸಂಸ್ಥೆಗಳಾಗಿ ಬದಲಾಗಲು ಅವಶ್ಯಕತೆಗೆ ಅನುಗುಣವಾಗಿ ಬೆಂಬಲ, ಸಹಕಾರ, ಅನುಮತಿ ಮತ್ತು ಉತ್ತೇಜನ ನೀಡಬಹುದು.
ತರಗತಿಗಳಲ್ಲಿ, ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಸಂಖ್ಯಾ ಅನುಪಾತವನ್ನು ಹೆಚ್ಚು ಅನುಕೂಲಕರ ಸ್ಥಿತಿಯಲ್ಲಿರುವಂತೆ ಆದೇಶ ನೀಡಬಹುದು.
ವಿಶ್ವವಿದ್ಯಾಲಯಗಳಲ್ಲಿ ಮತ್ತು ವಿದ್ಯಾ ಸಂಸ್ಥೆಗಳಲ್ಲಿ ನಾಲ್ಕು ವರ್ಷದ ಪದವಿ ಕೋರ್ಸು ಹಾಗೂ ನಾಲ್ಕು ವರ್ಷದ ಬಿ.ಎಡ್ ಕೋರ್ಸುಗಳನ್ನು ಪ್ರಾರಂಭಿಸಲು ಅತ್ಯಾವಶ್ಯಕವಾದ ಕ್ರಮಗಳನ್ನು ಕೂಡಲೆ ತೆಗದುಕೊಳ್ಳಬಹುದು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಣಾಮಕಾರಿ ಆಡಳಿತ ವ್ಯವಸ್ಥೆ ಹಾಗೂ ನಾಯಕತ್ವವನ್ನು ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು.
ವಿಶ್ವ ವಿದ್ಯಾಲಯಗಳಿಗೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆ ನೀಡುವುದು, ವಿನೂತನ ಪಠ್ಯಕ್ರಮ ಮತ್ತು ಕೋರ್ಸುಗಳನ್ನು ಪರಿಚಯಿಸಲು ಉತ್ತೇಜನ ಹಾಗೂ ಅನುಮತಿಯನ್ನು ನೀಡುವುದು.
ಪ್ರಸ್ತುತದಲ್ಲಿರುವ ಏಕ ಶಿಸ್ತೀಯ ಕಾಲೇಜುಗಳನ್ನು ವಿಲೀನಗೊಳಿಸಿ, ಬಹುಶಿಸ್ತೀಯ ಕಾಲೇಜುಗಳಾಗಿ ಪರಿವರ್ತನೆ ಮಾಡಬಹುದು. ಉದಾಹರಣೆಗೆ ಬೆಂಗಳೂರಿನ ಮಹಾರಾಣಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜುಗಳನ್ನು ವಿಲೀನಗೊಳಿಸಿ, ಬಹುಶಿಸ್ತೀಯ ಕಾಲೇಜಾಗಿ ಪರಿವರ್ತಿಸಬಹುದು.
ಸೂಕ್ತವಾದಂತ ಮಾನದಂಡವನ್ನು ನಿರ್ಧರಿಸಿ, ಅದರ ಆಧಾರದ ಮೇಲೆ ರಾಜ್ಯದ ವಿಶ್ವವಿದ್ಯಾಲಯಗಳನ್ನು ಜಾಗತಿಕ ಮಟ್ಟದಲ್ಲಿ ಸಂಶೋಧನೆಗೆ ಒತ್ತು ನೀಡುವ ಹಾಗೂ ಉತ್ತಮ ಮಟ್ಟದ ಬೋಧನೆಯನ್ನು ಮಾಡುವ ವಿಶ್ವವಿದ್ಯಾಲಯಗಳು( Research Intensive Universities ) ಹಾಗೂ ಎರಡನೆಯದಾಗಿ, ಬೋಧನೆಗೆ ಒತ್ತು ಕೊಟ್ಟು ಗಮನಾರ್ಹ ಸಂಶೋಧನೆಯನ್ನು ನಡೆಸುವ ವಿಶ್ವ ವಿದ್ಯಾಲಯಗಳು( Teaching Intensive Universities ) ಎಂಬುವುದಾಗಿ ವಿಂಗಡಿಸಬಹುದು.
ಕೇಂದ್ರ ಸರ್ಕಾರದ ಮಟ್ಟದಲ್ಲಿ
ಉಳಿದಂತೆ, ಇನ್ನೂ ಕೆಲವು ಶಿಪಾರಸ್ಸುಗಳ ಅನುಷ್ಠಾನ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಜಾರಿಗೊಳಿಸ ಬೇಕಾಗಿದೆ.
ನಿಯಂತ್ರಣ ಸಂಸ್ಥೆಗಳ ಸ್ಥಾಪನೆ ( Setting up of Regulatory bodies ).
ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಸ್ಥಾಪನೆ.
ಅಧ್ಯಾಪಕರಿಗೆ ಕಾರ್ಯ ಕ್ಷಮತೆ ಆಧಾರಿತ ಪ್ರೋತ್ಸಾಹಗಳು, ಬಡ್ತಿಗಳು ಹಾಗೂ ಪ್ರಯೋಜನಗಳನ್ನು ನೀಡುವ ಬಗ್ಗೆ ನಿಯಮಗಳ ರಚನೆ.
ಪಿಎಚ್.ಡಿ ಪದವಿಯ ಬಗ್ಗೆ ನಿಯಮಗಳನ್ನು ರೂಪಿಸುವುದು.
ದೇಶದಲ್ಲಿ ಉನ್ನತ ಶಿಕ್ಷಣವನ್ನು ಅಂತರ ರಾಷ್ಟ್ರೀಕರಣಗೊಳಿಸುವುದು.
ವಿದೇಶಿ ವಿಶ್ವವಿದ್ಯಾಲಯಗಳಿಗೆ ನಮ್ಮ ದೇಶದಲ್ಲಿ ಕ್ಯಾಂಪಸ್‍ಗಳನ್ನು ಸ್ಥಾಪಿಸಲು ಅನುಮತಿ ನೀಡುವುದು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಶಿಪಾರಸ್ಸುಗಳನ್ನು ಆರ್ಥಿಕ ಮತ್ತು ಆರ್ಥಿಕೇತರ ಎಂಬುವುದಾಗಿ ವಿಂಗಡಿಸಿ, ಆರ್ಥಿಕೇತರ ಶಿಪಾರಸ್ಸುಗಳನ್ನು ಕೂಡಲೇ ಅನುಷ್ಠಾನಕ್ಕೆ ತರಲು ಪ್ರಯತ್ನಗಳನ್ನು ನಡೆಸಬಹುದು. ಈ ಲೇಖನದಲ್ಲಿ ಆರ್ಥಿಕ ಹೊಣೆಯಿಲ್ಲದೇ, ಆರ್ಥಿಕೇತರ ಶಿಪಾರಸ್ಸುಗಳನ್ನು ಹೆಚ್ಚಾಗಿ ಪಟ್ಟಿ ಮಾಡಲಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಪ್ರಪಂಚದ ಬೇರೆ ದೇಶಗಳಿಗೆ ಮಾದರಿಯಾಗಿ, ನಮ್ಮ ದೇಶದ ಶಿಕ್ಷಣದ ಘನತೆ ಹೆಚ್ಚಾಗಲೆಂದು ಆಶಿಸೋಣ.
Namaste Dr.Shreekanta sir…. A valid alternate arrangement in stead of waiting the nod from Education Minister. Thanks sir