20.3 C
Karnataka
Sunday, November 24, 2024

    ಆರ್.ಆರ್.ನಗರ, ಶಿರಾಗಳಲ್ಲಿ ಸಂಪ್ರದಾಯ ಬದಲಾಗುವುದೇ?

    Must read


    ಅಶೋಕ ಹೆಗಡೆ
    ಸಾಮಾನ್ಯವಾಗಿ ನಿಧನ ಹೊರತುಪಡಿಸಿ ಬೇರೆ ಕಾರಣಗಳಿಂದ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ನಡೆದರೆ ಆಡಳತ ಪಕ್ಷವೇ ಜಯ ಗಳಿಸುವುದು ವಾಡಿಕೆ. ಏಕೆಂದರೆ ಪ್ರಭುತ್ವದ
    ಜತೆಗಿದ್ದರೆ ಒಂದಷ್ಟಾದರೂ ಅಭಿವೃದ್ಧಿ ಕೆಲಸಗಳು ಆಗಬಹದು ಎನ್ನುವುದು ಜನರ ಲೆಕ್ಕಾಚಾರ. ಹೀಗಾಗಿ ಆ ಕ್ಷೇತ್ರದಲ್ಲಿ ಸಂಘಟನೆ ಇಲ್ಲದಿದ್ದರೂ ಆಡಳಿತ ಪಕ್ಷವೇ ಗೆಲವು ಸಾಧಿಸಿರುವ ಉದಾಹರಣೆಗಳು ಬೇಕಾದಷ್ಟಿವೆ. ಹಾಗೆಯೇ ಹಾಲಿ ಶಾಸಕರ ಸಾವಿನಿಂದ ತೆರವಾಗುವ
    ಕ್ಷೇತ್ರಗಳಲ್ಲಿ ಅವರ ಕುಟುಂಬ ಸದಸ್ಯರೇ ಅನುಕಂಪದ ಅಲೆಯಲ್ಲಿ ಗೆಲ್ಲುವುದು ಬಹುತೇಕ
    ನಿಶ್ಚಿತ.

    ಈ ಎರಡೂ ಕಾರಣಗಳಿಂದ ನಡೆಯುವ ಉಪ ಚುನಾವಣೆಯಲ್ಲಿ ಭಾರಿ ಅಂತರದಿoದ ಗೆದ್ದ
    ವ್ಯಕ್ತಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಿದರ್ಶನಗಳೂ ಇವೆ.
    ಆದರೆ, ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಈ
    ಮಾತು ಅಪವಾದವಾದರೂ ಅಚ್ಚರಿ ಇಲ್ಲ.
    ಮೊದಲಿಗೆ ರಾಜರಾಜೇಶ್ವರಿ ಕ್ಷೇತ್ರವನ್ನೇ ನೋಡೋಣ. ಕಾಂಗ್ರೆಸ್‌ನಿಂದ ಮುನಿರತ್ನ ಅವರು
    ಬಿಜೆಪಿಗೆ ಪಕ್ಷಾಂತರ ಮಾಡಿರುವುದರಿಂದ ಉಪ ಚುನಾವಣೆ ನಡೆಯುತ್ತಿದೆ. ಸಂಭವನೀಯ
    ಅಭ್ಯರ್ಥಿಗಳ ಪಟ್ಟಿಯಲ್ಲಿ ಮುನಿರತ್ನ ಮತ್ತು ಕಳೆದ ಬಾರಿ ಅವರ ಎದುರು ಸೋತಿದ್ದ ತುಳಸಿ
    ಮುನಿರಾಜು ಗೌಡ ಅವರ ಹೆಸರನ್ನು ಬಿಜೆಪಿ ವರಿಷ್ಠರಿಗೆ ರವಾನಿಸಿದ್ದರೂ ಇಲ್ಲಿ
    ಮುನಿರತ್ನ ಅವರೇ ಅಭ್ಯರ್ಥಿಯಾಗುವುದು ಖಚಿತ. “ಸಂಭವನೀಯ ಅಭ್ಯರ್ಥಿ ಪಟ್ಟಿಯಲ್ಲಿ
    ನಿಮ್ಮ ಹೆಸರನ್ನೂ ಕಳಿಸಿದ್ದೆವು, ಹೈಕಮಾಂಡ್ ಮುನಿರತ್ನ ಅವರಿಗೆ ಟಿಕೆಟ್ ನೀಡಿತು,”
    ಎಂದು ಮುನಿರಾಜು ಅವರನ್ನು ಸಮಾಧಾನಪಡಿಸುವುದು ಬಿಜೆಪಿ ತಂತ್ರಗಾರಿಕೆ.


    ಆದರೆ, ತುಳಸಿ ಮುನಿರಾಜು ಸುಮ್ಮನಿರುವುದಾಗಲೀ ಅಥವಾ ಮುನಿರತ್ನ ಗೆಲುವಿಗಾಗಿ ಕೆಲಸ ಮಾಡುವುದಾಗಲೀ ಸಾಧ್ಯವೇ ಇಲ್ಲ. ಮುನಿರತ್ನ ವಿರುದ್ಧ ಕೋರ್ಟ್ನಲ್ಲಿ ಸಲ್ಲಿಸಿದ್ದ
    ಅರ್ಜಿ ವಾಪಸ್ ಪಡೆದುಕೊಳ್ಳುವಂತೆ ಮಾಡಲು ಪಕ್ಷದ ನಾಯಕರನ್ನೇ ಸಾಕಷ್ಟು ಸತಾಯಿಸಿದವರು
    ತುಳಸಿ. ಈಗ ಮುನಿರತ್ನ ವಿಜಯಕ್ಕಾಗಿ ಕೆಲಸ ಮಾಡು ಎಂದರೆ ಸಾಧ್ಯವೆ?

    ಕಾಂಗ್ರೆಸ್ ಐಎಎಸ್ ಅಧಿಕಾರಿಯಾಗಿದ್ದ ದಿ.ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರನ್ನು
    ಕಣಕ್ಕೆ ಇಳಿಸಬಹುದು. ಕುಸುಮಾ ಅವರ ತಂದೆ ಹನುಮಂತರಾಯಪ್ಪ ಕ್ಷೇತ್ರದಲ್ಲಿ ಒಂದಷ್ಟು
    ಹಿಡಿತ ಇಟ್ಟುಕೊಂಡಿದ್ದಾರಾದರೂ ಅದು ಗೆಲವಿಗೆ ಸಾಕಾಗದು. ಮುನಿರತ್ನ ಎದುರು ಕುಸುಮಾ
    ದುರ್ಬಲ ಅಭ್ಯರ್ಥಿ ಎನ್ನುವುದು ನಿರ್ವಿವಾದ. ಯಾವುದೋ `ಬಾಹ್ಯ ಶಕ್ತಿ’ಯನ್ನು
    ನಂಬಿಕೊಂಡೇ ಕಾಂಗ್ರೆಸ್ ಕುಸುಮಾ ಅವರಿಗೆ ಟಿಕೆಟ್ ನೀಡಲಿದೆ ಎನ್ನುವುದೂ ನಿಜ. ಆ
    `ಬಾಹ್ಯ ಶಕ್ತಿ’ ತುಳಸಿ ಮುನಿರಾಜು ಗೌಡ ಅವರೇ ಆಗಿರಬಾರದು ಏಕೆ? ಈ ಸೂಕ್ಷ್ಮ
    ಅರಿತಿರುವ ಬಿಜೆಪಿ ಜೆಡಿಎಸ್ ಜತೆ `ಒಳ ಒಪ್ಪಂದ’ ಮಾಡಿಕೊಂಡಿರುವುದೂ ನಿಜವೇ. ಈ
    `ಬಾಹ್ಯ ಶಕ್ತಿ’ ಮತ್ತು ‘ಒಳ ಒಪ್ಪಂದ’ದ ತಂತ್ರಗಾರಿಕೆಯಲ್ಲಿ ಯಾರು ಗೆಲ್ಲುತ್ತಾರೆ
    ಎನ್ನುವುದುಯ ಕುತೂಹಲ ಮೂಡಿಸಿದೆ.
    ಶಿರಾದಲ್ಲಿ ಪಕ್ಷಾಂತರ ಪರ್ವ: ಜೆಡಿಎಸ್ ಶಾಸಕ ಬಿ,.ಸತ್ಯನಾರಾಯಣ ನಿಧನದಿಂದ
    ತೆರವಾಗಿರುವ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
    ಜೆಡಿಎಸ್ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೇ ಟಿಕೆಟ್ ನೀಡುವ
    ಇರಾದೆಯಲ್ಲಿದೆ. ಅನುಕಂಪದ ಲಾಭ ಪಡೆಯಲು ಪ್ರಯತ್ನಿಸುವುದು ಜೆಡಿಎಸ್‌ನ ತತ್ವವೇ
    ಆಗಿದೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿಗಳಳ್ಲಿನ ಪಕ್ಷಾಂತರ `ಪರ್ವ’ತವು ಅನುಕಂಪದ
    ಅಲೆಯನ್ನು ಮೆಟ್ಟಿನಿಲ್ಲುವ ಸಾಧ್ಯತೆಗಳು ಗೋಚರಚಾಗಿವೆ.

    ಮಾಜಿ ಸಂಸದ ಮೂಡಲಗಿರಿಯಪ್ಪ ಅವರ ಪುತ್ರ ಡಾ.ರಾಜೇಶ್ ಗೌಡ ಅವರು ಜೆಡಿಎಸ್‌ನಿಂದ
    ಬಿಜೆಪಿಗೆ ಸೇರಿದ್ದಾರೆ. ಇದೇ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಲ್ಕೆರೆ ರವಿಕುಮಾರ್ ಸಹ ಕಾಂಗ್ರೆಸ್ ಸೇರಿ ಮೂಡಿಸಿದ್ದಾರೆ. ಕಾಂಗ್ರೆಸ್ ಈಗಾಗಲೇ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ಘೋಷಿಸಿಯಾಗಿದೆ. ಅಲ್ಲಿಗೆ ರಾಜೇಶ್ ಗೌಡ, ಅಮ್ಮಾಜಮ್ಮ, ಟಿಬಿಜೆ ನಡುವೆ ಸ್ಪರ್ಧೆ ನಡೆಯುವುದು ಭಾಗಶಃ ನಿರ್ಧಾರವಾದಂತಾಗಿದೆ. ಅದರ
    ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಪಂಚಾಯಿತಿ ಮಟ್ಟದಲ್ಲಂತೂ ಮೂರೂ ಪಕ್ಷಗಳ ನಡುವೆ ಪಕ್ಷಾಂತರಗಳು ಬಿರುಸುಗೊಂಡಿವೆ.
    ಶಿರಾ ಬಿಜೆಪಿಯ ಅಖಾಡವೇ ಅಲ್ಲ. ಅದು ಕಾಂಗ್ರೆಸ್, ಜೆಡಿಎಸ್‌ನ ಮೈದಾನ. ಆದರೂ ಅಲ್ಲಿ
    ಗೆಲ್ಲುವ ಛಾತಿಯನ್ನು ಇಟ್ಟುಕೊಂಡು ಬಿಜೆಪಿ ಕಣಕ್ಕೆ ಇಳಿದಿದೆ. ಕೊನೆ ಕ್ಷಣದಲ್ಲಿ ಈ
    ಕ್ಷೇತ್ರದಲ್ಲಿಯೂ “ಒಳ ಒಪ್ಪಂದ’ಗಳ ಭರಾಟೆ ಜೋರಾಗಬಹುದು. ಆರ್ಥಿಕವಾಗಿ ಮತ್ತು
    ರಾಜಕೀಯವಾಗಿ ಯಾರು ಬಲಾಢ್ಯರೋ ಅವರು ಗೆಲ್ಲುತ್ತಾರೆ.

    ಪರಿಷತ್ ಪೈಪೋಟಿ: ಇದರ ಜತೆಗೆ. ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೂ ಚುನಾವಣೆ
    ಘೋಷಣೆಯಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ
    ಪದವೀಧರ ಕ್ಷೇತ್ರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
    ವಿಧಾನ ಪರಿಷತ್ ಚುನಾವಣೆ ವಿಧಾನಸಭೆ ಚುನಾವಣೆಯಂತಲ್ಲ. ಇಲ್ಲಿ ವರ್ಷಕ್ಕೂ ಮೊದಲೇ
    ಅಭ್ಯರ್ಥಿಗಳು ಯಾರು ಎನ್ನುವುದು ನಿಗದಿಯಾಗಿರುತ್ತದೆ. ಅವರು ಮತದಾರರ ಜತೆ
    ಸಂಪರ್ಕದಲ್ಲಿರುತ್ತಾರೆ. ಚುನಾವಣೆಗೂ ಬಹಳ ಮೊದಲೇ ಆಮಿಷಗಳ ಭರಾಟೆ ಶುರುವಾಗಿರುತ್ತದೆ.
    ನಿಜವಾದ ಸ್ಪರ್ಧೆ ಇರುವುದು ಹೀಗೆ ಆಮಿಷ ಒಡ್ಡುವುದರಲ್ಲಿಯೇ ವಿನಾ ಮತದಾನದಲ್ಲಿ
    ಅಲ್ಲವೇ ಅಲ್ಲ. ಮೂರು ಅವಧಿಗೆ ಜೆಡಿಎಸ್‌ನಿಂದ ಪರಿಷತ್ ಸದಸ್ಯರಾಗಿದ್ದ ಬೆಂಗಳೂರು
    ಶಿಕ್ಷಕರ ಕ್ಷೇತ್ರದ ಪುಟ್ಟಣ್ಣ ಈಗ ಬಿಜೆಪಿಯಿಂದ ಸ್ಪರ್ಧಿಸಿರುವುದು ಬಿಜೆಪಿಗೆ
    ಅನುಕೂಲವಾಗಲಿದೆ. ಗೆದ್ದರೆ ಈ ಹಿಂದೆ ಇದ್ದ ಉಪ ಸಭಾಪತಿ ಸ್ಥಾನ ಪುಟ್ಟಣ್ಣ ಅವರಿಗೆ
    ಗ್ಯಾರಂಟಿ.

    spot_img

    More articles

    1 COMMENT

    1. ಮುನಿರತ್ನ ಗೆಲ್ಲುವುದು ಗ್ಯಾರಂಟಿ, ಡಿ ಕೆ ರವಿ ಪತ್ನಿ ಗೆ ಅನುಕಂಪದ ಮತ ಸಿಗುವ ಸಾಧ್ಯತೆ ಕಡಿಮೆ, ಯಾಕೆಂದರೆ ಜನರ ನೆನಪಿನ ಶಕ್ತಿ ತುಂಬಾ ಕ್ಷೀಣ.

    LEAVE A REPLY

    Please enter your comment!
    Please enter your name here

    Latest article

    error: Content is protected !!