ಕೊರೊನಾ ಸೋಂಕು ನಮ್ಮ ದೇಶದಲ್ಲಿನ್ನೂ ತಾಂಡವವಾಡುತ್ತಿದೆ.ಈ ಸ್ಥಿತಿಯಲ್ಲಿ ಮನುಷ್ಯರು ಸೀಮಿತವಾಗಿ ಮಾಡಬಹುದಾದ್ದು ‘ಆಯ್ಕೆ ‘ ಮಾತ್ರ. ಸೀಮಿತ ಆಯ್ಕೆಯೂ ಇಲ್ಲದೆ ಹೊಟ್ಟೆ ಪಾಡಿಗಾಗಿ ಪರದಾಡುತ್ತಿರುವ ಮಿಲಿಯನ್ ಗಟ್ಟಲೆ ಜನರೂ ಇದ್ದಾರೆ ಎನ್ನುವುದನ್ನು ಮರೆಯಲು ಸಾಧ್ಯವಿಲ್ಲವಾದರೂ ಆಯ್ಕೆ ಇರುವವರ ನಡುವೆಯಾವುದು ಸರಿ ಅಥವಾ ತಪ್ಪು, ಯಾವುದು ಸಮಂಜಸ ಅಥವಾ ಅತಿರೇಖ ಎನ್ನುವುದರ ಬಗ್ಗೆ ಗೊಂದಲವೂ ಇದೆ.ಈ ಗೊಂದಲಗಳು ಮನುಷ್ಯರ ನಡುವೆ, ಸಾಮಾಜಿಕ ವ್ಯವಸ್ಥೆಗಳ ನಡುವೆ, ದೇಶ-ವಿದೇಶಗಳಲ್ಲಿ ಕಂಡುಬಂದಿದೆ.
ವಿಶ್ವವಿದ್ಯಾನಿಲಯಗಳಿಗೆ ಸೇರಿ ಜೀವನದ ಹೊಸ ಅಧ್ಯಾಯವನ್ನು ಶುರುಮಾಡಬೇಕಿದ್ದ ಮಿಲಿಯನ್ ಗಟ್ಟಲೆ ವಿದ್ಯಾರ್ಥಿಗಳು ಈ ಕೊರೋನ ಗೊಂದಲದ ನಡುವೆ ಸಿಲುಕಿಕೊಂಡಿದ್ದಾರೆ.ಆಯಾ ದೇಶಗಳು ತಮಗೆ ಸೂಕ್ತ ಎನ್ನುವ ಆಯ್ಕೆಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಒಂದು ಅಕಾಡೆಮಿಕ್ ವರ್ಷವನ್ನು ಉಳಿಸುವ ಪ್ರಯತ್ನದಲ್ಲಿದ್ದಾರೆ.
ದೇಶದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲದಿದ್ದರೂ ಭಾರತ ತನ್ನ ಆರ್ಥಿಕತೆಯನ್ನು ಸಂಭಾಳಿಸಲು ಬಹುತೇಕ ಎಲ್ಲ ವಹಿವಾಟುಗಳನ್ನು ಶುರುಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅದರಂತೆ ಅಕ್ಟೋಬರ್ ಒಂದರಿಂದ ಅನ್ ಲಾಕ್ 5.0 ಭಾರತದಲ್ಲಿ ಜಾರಿಗೆ ಬಂದಿದೆ.
ಇದರ ಪ್ರಕಾರ ಮಲ್ಟಿಪ್ಲೆಕ್ಸ್ ಗಳು ಮತ್ತು ಸಿನಿಮಾ ಮಂದಿರಗಳು ಶೇಕಡಾ 50 ಕಾರ್ಯನಿರತವಾಗಬಹುದಿದೆ. ಕ್ರೀಡಾಪಟುಗಳಿಗಾಗಿ ಈಜು ಕೊಳಗಳನ್ನು ಕೂಡ ತೆರೆಯಲಾಗುತ್ತಿದೆ. ಮನರಂಜನಾ ಉದ್ಯಾನವನಗಳನ್ನು ತೆರೆಯಲಾಗುತ್ತಿದೆ. ಇದಕ್ಕೆ ತಕ್ಕನಾದ SOP (Standard operating procedures) ಗಳನ್ನು ನೀಡಲಾಗುತ್ತಿದೆ. ಅಕ್ಟೋಬರ್ 15 ರಿಂದ ಶ್ರೇಣೀಕೃತವಾಗಿ ಶಾಲೆ-ಕಾಲೇಜುಗಳನ್ನು ತೆರೆಯಲು ಅನುಮತಿ ಸಿಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಗಣನೆಯಲ್ಲಿ ಇಡುವುದಿಲ್ಲ ಎನ್ನಲಾಗಿದೆ. ಶಿಕ್ಷಣವನ್ನು ಆನ್ ಲೈನ್ ಮಾದರಿಯಲ್ಲೇ ಮುಂದುವರೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ಭಾರತ ಅಡಕತ್ತರಿಯಲ್ಲಿ ಸಿಲುಕಿದೆ. ಇಂದಿಗೂ ಸುಮಾರು ೭೦-೮೦ ಸಾವಿರ ಹೊಸ ಪ್ರಕರಣಗಳು ನಮ್ಮ ದೇಶದಲ್ಲಿ ಪತ್ತೆಯಾಗುತ್ತಿವೆ. ಇನ್ನು ವಿದ್ಯಾರ್ಥಿಗಳು ಹೊರಬಂದರೆ ಥಟ್ಟನೆ ಈ ಸಂಖ್ಯೆ ದುಪ್ಪಟ್ಟಾಗಬಲ್ಲದು.ಇತ್ತ ಆನ್ ಲೈನ್ ಶಿಕ್ಷಣ ಭಾರತದ ಬಹುತೇಕ ವಿದ್ಯಾರ್ಥಿಗಳಿಗೆ ನಿಲುಕಬಲ್ಲ ವಿಚಾರವೂ ಅಲ್ಲ ವಿಧಾನವೂ ಅಲ್ಲವಾಗಿದೆ. ’ಗೆಲ್ಲಲು ಸಾಧ್ಯವಿಲ್ಲ’ ಎನ್ನುವ ಸ್ಥಿತಿಯಿದು.
ಕಾಲೇಜುಗಳನ್ನು ಕೋವಿಡ್ ನಡುವೆಯೂ ಏಕೆ ಶುರುಮಾಡಲಾಗುತ್ತಿದೆ?
ಮಿಕ್ಕೆಲ್ಲ ಉದ್ಯಮಗಳಂತೆ ಶಿಕ್ಷಣ ಮತ್ತು ವಿದ್ಯಾರ್ಥಿಗಳು ಸಮಾಜದ ಅವಿಭಾಜ್ಯ ಭಾಗಗಳು. ವಿದ್ಯಾ ರ್ಥಿಗಳ ವಯಸ್ಸು ಮತ್ತು ಸಂಭಾವ್ಯತೆ ಅಥವಾ ಒಳಸತ್ವದ ಕಾರಣ ಇತರೆ ಕೆಲವು ವರ್ಗಗಳಿಗಿಂತ ಹೆಚ್ಚಾಗಿ ಅವರ ಭವಿಷ್ಯವನ್ನು ಕಾಪಾಡುವುದು ಅತ್ಯಂತ ಮಹತ್ವವಾದ ವಿಚಾರವಾಗುತ್ತದೆ.
ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳ ವಿಶ್ವವಿದ್ಯಾನಿಲಯಗಳು ಸೆಪ್ಟೆಂಬರ್ ನಲ್ಲಿ ಶುರುವಾದರೆ ಭಾರತದಲ್ಲಿ ಅಕ್ಟೋಬರಿನಲ್ಲಿ ದಾಖಲಾತಿ ಪ್ರಕ್ರಿಯೆ ನಡೆದು ನಂತರ ನವೆಂಬರಿನಿಂದ ತರಗತಿಗಳು ಶುರುವಾಗುತ್ತವೆ. ಇದೇ ಕಾರಣ ಭಾರತಕ್ಕೆ ಬೇರೆಡೆ ಏನಾಗುತ್ತಿದೆ ಎಂದು ವಾಸ್ತವದಲ್ಲಿ ತಿಳಿಯಲು ಒಂದು ಸುವರ್ಣಾವಕಾಶ ದೊರೆತಿದೆ.
ವಿಶ್ವ ವಿದ್ಯಾನಿಲಯಗಳು ಸಾಮಾನ್ಯವಾಗಿ ಕೆಲವು ದೊಡ್ಡ ಸ್ಥಳಗಳಲ್ಲಿರುತ್ತವೆ. ಅಲ್ಲಿಗೆ ವಿದ್ಯಾರ್ಥಿಗಳು ಇತರೆ ಹಲವು ನಗರ, ಗ್ರಾಮ , ಹಳ್ಳಿಗಳಿಂದ ಬಂದು ದಾಖಲಾಗುತ್ತಾರೆ. ಬೇರೆ ಊರು, ರಾಜ್ಯ ಮತ್ತು ದೇಶಗಳ ವಿದ್ಯಾರ್ಥಿಗಳಾಗಿಯೂ ಅವರು ದಾಖಲಾಗಿರಬಹುದು.ಅದರ ಜೊತೆಯಲ್ಲೇ ವಿದ್ಯಾರ್ಥಿಗಳು ಆಯಾ ದೇಶದ ಆರ್ಥಿಕ ವ್ಯವಹಾರಗಳಿಗೆ ಮೌಲ್ಯಯುತ ಕಾಣಿಕೆಯನ್ನು ಸಲ್ಲಿಸುವ ಗ್ರಾಹಕರೂ ಹೌದು. ಉದಾಹರಣೆಗೆ ಅವರ ಪ್ರಯಾಣ, ಬಾಡಿಗೆ ಹಿಡಿಯುವ ಮನೆಗಳು, ಊಟ ತಿಂಡಿ ಮಾಡುವ ಸ್ಥಳಗಳು, ಸಾಮಾನು-ಸಾಮಗ್ರಿಗಳನ್ನು ಕೊಳ್ಳುವ ಅಂಗಡಿಗಳು, ಶುಲ್ಕವನ್ನು ಪಡೆಯುವ ವಿಶ್ವ ವಿದ್ಯಾಲಯಗಳು, ಸಿನಿಮಾ, ಆಟೋಟ-ಸಂಗೀತ-ನಾಟಕ ಇತ್ಯಾದಿ ಹಲವು ಚಟುವಟಿಕೆಗಳು ಈ ಹೊಸ ವಿದ್ಯಾರ್ಥಿಗಳ ವಾರ್ಷಿಕ ವಲಸೆಯನ್ನೇ ನಂಬಿ ಬದಕುವ ಚಟುವಟಿಕೆಗಳಾಗಿವೆ.
ಕೊರೊನಾ ಕಾರಣ ಉನ್ನತ ಶಾಲಾ-ಕಾಲೇಜಿನ ತರಗತಿಗಳು, ಪರೀಕ್ಷೆಗಳು, ಫಲಿತಾಂಶ ಎಲ್ಲವೂ ಈ ವರ್ಷ ಅಯೋಮಯವಾಗಿದ್ದರೂ, ಇಡೀ ಒಂದು ವರ್ಷವನ್ನು ವಿಧ್ಯಾಭ್ಯಾಸದ ವಿಚಾರದಲ್ಲಿ ಇಲ್ಲವಾಗಿಸಲು ಸಾಧ್ಯವಿಲ್ಲ. ಇದನ್ನು ಯಾವ ದೇಶವೂ ಒಪ್ಪುವುದಿಲ್ಲ. ಏಕೆಂದರೆ ಈ ವರ್ಷದ ವಿದ್ಯಾರ್ಥಿಗಳು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟರೆ 2021 ಕೂಡ ಮತ್ತೆ ಬಿಕ್ಕಟ್ಟಿನ ವರ್ಷವಾಗುತ್ತದೆ.ತರಗತಿಗಳ ಪ್ರಮಾಣ, ಬೋಧಿಸುವವರ ಮೇಲಿನ ಒತ್ತಡ, ಫಲಿತಾಂಶದ ನಂತರದ ಪೈಪೋಟಿ , ಮಿಲಿಯನ್ ಗಟ್ಟಲೆ ವಿದ್ಯಾರ್ಥಿಗಳ ಭವಿಷ್ಯತ್ತು ಹೀಗೆ ಎಲ್ಲವೂ ಹಾಳಾಗಬಲ್ಲವು.
ಹಾಗೆಂದು ಕೊರೊನಾ ಸೋಂಕು ಇನ್ನೂ ದಟ್ಟವಾಗಿದ್ದಾಗಲೇ ತರಗತಿಗಳನ್ನು ಎಂದಿನಂತೆ ನಡೆಸಲು ಸಾಧ್ಯವಿಲ್ಲ. ಹಲವು ಸಾವಿರ ವಿದ್ಯಾರ್ಥಿಗಳ ಪಾದಗಳನ್ನು ಕ್ಯಾಂಪಸ್ಸಿನ ಆವರಣವನ್ನು ತುಳಿಯಲು ಬಿಟ್ಟರೆ ಆದರ ಜೊತೆ ಜೊತೆಗೆ ಕೊರೊನಾ ಸೋಂಕು ಕೂಡ ನಲಿ ನಲಿಯುತ್ತ ಕಾಲಿಡುತ್ತದೆ.
ನಾನಾ ಸ್ಥಳಗಳಿಂದ ಬರುವ ಎಳೆಯ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಕೆಲವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಸೋಂಕು ಇರಬಹುದು. ಅವರಲ್ಲಿ ಇರಬಹುದಾದ ಸೋಂಕು ಹಲವು ರೀತಿಯಲ್ಲಿ ಇಡೀ ಊರಿಗೆ ಹರಡಬಲ್ಲದು. ಕಾಲೇಜುಗಳಲ್ಲಿ ಬೋಧಿಸುವ , ಆಡಳಿತದ ವಿಭಾಗದ ಜನರಲ್ಲಿ ಕೊರೊನಾ ಕಾಣಿಸಿಕೊಂಡರೆ ಮತ್ತೆ ಇಡೀ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ.
ಇವೆಲ್ಲ ಗೊತ್ತಿದ್ದೂ ಕಾಲೇಜು ವರ್ಷವನ್ನು ಶುರುಮಾಡದೆ ವಿಧಿಯಿಲ್ಲ. ಏನೇ ಆದರೂ ವಿಶ್ವ ವಿದ್ಯಾಲಯಗಳನ್ನು ನಡೆಸಲೇ ಬೇಕೆಂದಾಗ ಸರಕಾರಗಳಿಗೆ ದೊರೆತಿರುವ ಪರ್ಯಾಯ ಆಯ್ಕೆಯೆಂದರೆ ಆನ್ ಲೈನ್ ಪಾಠಗಳು. ಆದರೆ ಪ್ರತಿಯೊಂದು ಅಧ್ಯಯನದ ವಿಷಯಗಳನ್ನು ಕೇವಲ ಆನ್ ಲೈನ್ ತರಗತಿಗಳಾಗಿ ನಡೆಸಲು ಸಾಧ್ಯವಿಲ್ಲ.ಕೆಲವು ವಿಚಾರಗಳನ್ನು ’ಪ್ರಾಕ್ಟಿಕಲ್ ’ ರೂಪದಲ್ಲೇ ನಡೆಸಬೇಕಾಗುತ್ತದೆ. ಜೊತೆಗೆ ಬರೇ ಆನ್ ಲೈನ್ ತರಗತಿಗಳಾಗಿಬಿಟ್ಟರೆ ವಿದ್ಯಾರ್ಥಿ ವಲಸೆಯ ಮೂಲಕ ನಡೆವ ಎಲ್ಲ ಆರ್ಥಿಕ ಚಟುವಟಿಕೆಗಳೂ ನಿಂತುಹೋಗುತ್ತವೆ.
ಯುಕೆ ವಿಶ್ವವಿದ್ಯಾನಿಲಯಗಳ ಉದಾಹರಣೆ
ಇದರ ಅಗಾಧತೆಯನ್ನು ಅಳೆಯಲು ಕರ್ನಾಟಕಕ್ಕಿಂತ ಸ್ವಲ್ಪವೇ ದೊಡ್ದದಿರುವ ಯುನೈಟೆದ್ ಕಿಂಗ್ಡಮ್ ನ ವಿಶ್ವವಿದ್ಯಾನಿಲಯಗಳ ಉದಾಹರಣೆಯನ್ನು ನೋಡೋಣ.
ಓಪನ್ ಯೂನಿವರ್ಸಿಟಿಗಳೂ ಸೇರಿದಂತೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಒಟ್ಟು 169 ವಿಶ್ವ ವಿದ್ಯಾನಿಲಯಗಳಿವೆ. ಅವುಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಅಗಾಧವಾದ್ದು. ಈ ವಿಶ್ವವಿದ್ಯಾನಿಲಯಗಳಿಗೆ 2018–19 ರ ಸಾಲಿನಲ್ಲಿ ಒಟ್ಟು 2.38 ಮಿಲಿಯನ್ ವಿದ್ಯಾರ್ಥಿಗಳು ಓದಲು ಸೇರಿದ್ದರು. ಇವರು ದೇಶದ ಶೈಕ್ಷಣಿಕ ವ್ಯವಸ್ಥೆ ಮುಂದುವರೆಯಲು ಅಗತ್ಯವಾಗಿ ಬೇಕಾದ ಜೀವರಸದಂತವರು.ಶಿಕ್ಷಣದ ಅಗತ್ಯ ವಿದ್ಯಾರ್ಥಿಗಳ ಎಷ್ಟಿದೆಯೋ, ಶೈಕ್ಷಣಿಕ ವ್ಯವಸ್ಥೆಯ ಉಳಿವಿಗೆ ಈ ವಿದ್ಯಾರ್ಥಿಗಳ ಅಗತ್ಯವೂ ಅಷ್ಟೇ ಇದೆ ಅಥವಾ ಇನ್ನೂ ಹೆಚ್ಚಿದೆ ಎಂದರೂ ತೊಂದರೆಯಿಲ್ಲ.
ಈ ಕಾರಣ ಯೂರೋಪ್ ಮತ್ತು ಇಂಗ್ಲೆಂಡ್ ದೇಶಗಳು ನಿಗದಿತ ಸಮಯಕ್ಕೆ ಸರಿಯಾಗಿ ವಿಶ್ವವಿದ್ಯಾನಿಲಯಗಳನ್ನು ಶುರುಮಾಡಿಯೇ ಬಿಟ್ಟರು. ಜೊತೆಗೆ ಇಲ್ಲಿ ಮೊದಲ ಕೊರೊನಾ ಅಲೆ ತಣ್ಣಗಾಗಿತ್ತು. ಲಾಕ್ ಡೌನ್ ತೆರವಾಗಿ ಬದುಕು ’ಸಹಜ’ ಎನ್ನುವತ್ತ ತೆರಳುತ್ತಿತ್ತು.ಜನರು ಕೆಲಸಗಳಿಗೆ ಮರಳುತ್ತಿದ್ದರು. ಪ್ರಾಥಮಿಕ ಶಾಲೆಗಳು ಎಂದಿನಂತೆ ಸೆಪ್ಟಂಬರಿನಲ್ಲಿ ಶುರುವಾಗಿದ್ದವು.ಆದ್ದರಿಂದ ವಿಶ್ವವಿದ್ಯಾನಿಲಯಗಳು ಹೊಸ ವಿದ್ಯಾರ್ಥಿಗಳಿಗೆ ಬಾಗಿಲು ತೆರೆಯಲು ಸಿದ್ದವಾದವು.ಯೂರೋಪಿನ ಬಹತೇಕ ವಿಶ್ವ ವಿದ್ಯಾನಿಲಯಗಳು ಮತ್ತು ಇಂಗ್ಲೆಂಡಿನ 17 ವಿಶ್ವ ವಿದ್ಯಾನಿಲಯಗಳು ಕೊರೊನಾ ಪರೀಕ್ಷೆಯ ನಂತರವೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದಾರೆ.
ಆದರೆ ಸೆಪ್ಟಂಬರಿನ ನಡುವಿನಿಂದ ವಿಶ್ವವಿದ್ಯಾಲಯಗಳು ಶುರುವಾದ ಮೊದಲ ಒಂದೆರಡು ವಾರದಲ್ಲೇ ಯುನೈಟೆಡ್ ಕಿಂಗ್ಡಮ್ ನ ಸುಮಾರು ನಲವತ್ತು ವಿಶ್ವವಿದ್ಯಾನಿಲಯಗಳು ತಮ್ಮ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆಯಾಗಿರುವುದನ್ನು ವರದಿ ಮಾಡಿದವು.
ಅಕ್ಟೋಬರ್ ಎರಡರಂದು ನ್ಯೂಕ್ಯಾಸಲ್ ನಗರದ ನಾರ್ತ್ ಅಂಬ್ರಿಯ ವಿಶ್ವ ವಿದ್ಯಾನಿಲಯವೊಂದರಲ್ಲೇ 770 ಜನ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಇದೆ ಎನ್ನುವುದು ಪತ್ತೆಯಾಯಿತು.ಆಶ್ಚರ್ಯವೆಂದರೆ ಇವರಲ್ಲಿ 78 ಜನರನ್ನು ಬಿಟ್ಟರೆ ಇನ್ಯಾರಲ್ಲೂ ಯಾವುದೇ ರೋಗಲಕ್ಷಣಗಳಿರಲಿಲ್ಲ!
ಶುರುವಾದ ಮೊದಲ ವಾರದಲ್ಲಿ ಮ್ಯಾಂಚೆಸ್ಟರ್ ನಗರದ ಯೂನಿವರ್ಸಿಟಿಯಲ್ಲಿ 127 ವಿದ್ಯಾರ್ಥಿಗಳಲ್ಲಿ ಕೋವಿಡ್ ಕಾಣಿಸಿಕೊಂಡಿತು. ಈ ಕಾರಣ ಅವರೊಡನೆ ಒಡನಾಡಿದ್ದ 1700 ವಿದ್ಯಾರ್ಥಿಗಳು ತಮ್ಮನ್ನು ತಾವು ಕ್ವಾರಂಟೈನ್ ನಲ್ಲಿ ಇಟ್ಟುಕೊಳ್ಳಬೇಕಾಯಿತು.ಇದಕ್ಕಿಂತಲೂ ಒಂದು ವಾರ ಮುಂಚೆಯೇ ಕಾಲೇಜು ಶುರುವಾದ ಸ್ಕಾಟ್ಲ್ಯಾಂಡಿನ ಗ್ಲಾಸ್ಗೋ ಯೂನಿವರ್ಸಿಟಿಯಲ್ಲಿ 172 ವಿದ್ಯಾರ್ಥಿಗಳಿಗೆ ಕೊರೊನಾ ಕಾಣಿಸಿಕೊಂಡಿತು.ಹಲವಾರು ನೂರು ಜನ ವಿದ್ಯಾರ್ಥಿಗಳು ಅವರ ಸಂಪರ್ಕಕ್ಕೆ ಬಂದಿದ್ದ ಕಾರಣ ತಾವಿದ್ದ ವಿದ್ಯಾರ್ಥಿ ಗೃಹದಲ್ಲೇ ಕ್ವಾರಂಟೈನ್ ಗೆ ಒಳಗಾದರು.
ವಿದ್ಯಾರ್ಥಿಗಳು ಫ್ರೆಶರ್ಸ್ ಪಾರ್ಟಿ ಮಾಡಿಕೊಂಡ ಸಮಯದಲ್ಲಿ ಮತ್ತು ವಿದ್ಯಾರ್ಥಿ ಗೃಹಗಳಲ್ಲಿ ಈ ಸೋಂಕು ಯಾರಿಂದಲೋ ಹರಡಲು ಶುರುವಾಗಿರಬೇಕೆಂದು ಶಂಕಿಸಲಾಯ್ತು.ಜೊತೆ ಜೊತೆಗೇ ವಿಶ್ವ ವಿದ್ಯಾಲಯಗಳನ್ನು ತೆರೆವ ನಿರ್ಧಾರ ಮಾಡಿದ ಸರ್ಕಾರದ ನಿಲುವು ಸರಿಯೇ? ನಾನಾ ಊರುಗಳಿಂದ ಬಂದ ವಿದ್ಯಾರ್ಥಿಗಳ ಹಣ, ಶ್ರಮದ ಜೊತೆಗೆ ಇದೀಗ ವಿದ್ಯಾರ್ಥಿಗಳ ಗೃಹ ಬಂಧನದ ಹೊಣೆ ಸರಕಾರದ್ದೇ ಎನ್ನುವ ವಿವಾದಗಳು ಹುಟ್ಟಿಕೊಂಡವು.
ತಾವಿರುವ ಕಟ್ಟಡಗಳನ್ನು ಬಿಡಲು ಅನುಮತಿಯಿರದ ವಿದ್ಯಾರ್ಥಿಗಳಿಗೆ ಅವರ ಪೋಷಕರು, ಹಿತೈಷಿ ಗಳು ಆಹಾರವನ್ನು ತಂದು ನೀಡುತ್ತಿದ್ದಾರೆ.ಅವರಿಗೆ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿ ಹೋಗಲು ಮೊದಲು ಅನುಮತಿ ನೀಡದಿದ್ದರೂ ಇದೀಗ “ ಹೋಗಬಹುದು.ಆದರೆ ನಿಮ್ಮಿಂದ ನಿಮ್ಮ ಮನೆಯ ಹಿರಿಯರಿಗೂ ಹರಡುವುದನ್ನು ತಡೆಗಟ್ಟಲು ಸಾಧ್ಯವಾದಷ್ಟೂ ಇದ್ದಲ್ಲೇ ಇದ್ದರೆ ಒಳ್ಳೆಯದು “ ಎಂಬ ಕಿವಿಮಾತನ್ನು ಹೇಳಲಾಗಿದೆ. ಆದರೆ ವಿದ್ಯಾರ್ಥಿಗಳು ಇಡೀ ಸೆಪ್ಟಂಬರ್ ತಿಂಗಳಿನ ವಿದ್ಯಾರ್ಥಿ ಗೃಹಗಳ ಬಾಡಿಗೆಯನ್ನು ಹಿಂತಿರುಗಿಸಿ ಎಂದು ಪಟ್ಟು ಹಿಡಿದಿದ್ದಾರೆ.ಕಾಲೇಜಿನ ತರಗತಿಗಳು ಆನ್ ಲೈನ್ ಮಾಡುವುದಾದರೆ ನಾವೇಕೆ ವಾರ್ಷಿಕ ಕಾಲೇಜು ವೇತನವನ್ನು ಪೂರ್ತಿಯಾಗಿ ಕಟ್ಟಬೇಕು? ಎಂದು ವಾದಿಸುತ್ತಿದ್ದಾರೆ. ವಿಶ್ವ ವಿದ್ಯಾನಿಲಯಗಳ ಶುಲ್ಕದಲ್ಲಿ ರಿಬೇಟ್ ನೀಡಿ ’-ಎನ್ನುವ ಹೊಸ ಹೋರಾಟವನ್ನು ಆರಂಭಿಸಿದ್ದಾರೆ. ಈ ನಡುವೆ ಆಡಳಿತ ವರ್ಗದವರು, ಜನ ನಾಯಕರು ಅಡಕತ್ತರಿಗೆ ಸಿಲುಕಿದಂತಹ ಸ್ಥಿತಿಯನ್ನು ತಲುಪಿದ್ದಾರೆ.
ಭಾರತದಲ್ಲಿ ಇನ್ನೂ ಮೊದಲ ಅಲೆ ಇರುವಾಗಲೇ ಶೈಕ್ಷಣಿಕ ವರ್ಷ ಶುರುವಾಗಲಿದೆ. ಆದರೆ ಭವಿಷ್ಯ?
ಇನ್ನೊಂದು ತಿಂಗಳಲ್ಲಿ ಭಾರತದ ಮೊದಲ ಕೊರೊನಾ ಅಲೆ ಮುಗಿದಿರುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. ನವೆಂಬರ್ ಒಂದರಿಂದ ಆರಂಭವಾಗಬೇಕಿರುವ ವಿಶ್ವ ವಿದ್ಯಾನಿಲಯಗಳು ಹಾಗಾದರೆ ಯಾವ ಮಾರ್ಗವನ್ನು ಅನುಸರಿಸಬೇಕು? ಮೇಲಿನ ಉದಾಹರಣೆಗಳಿಂದ ಕಲಿಯುವುದೇನಾದರೂ ಇದೆಯೇ?
ಕಳೆದ ವರ್ಷ ಕರ್ನಾಟಕದ 659 ಸರ್ಕಾರೀ ಕಾಲೇಜುಗಳಲ್ಲಿ 4,0139 ವಿದ್ಯಾರ್ಥಿಗಳು ಪ್ರವೇಶ ಪಡೆದರೆ 2876 ಖಾಸಗೀ ಕಾಲೇಜುಗಳಲ್ಲಿ 10,68,243 ವಿದ್ಯಾರ್ಥಿಗಳು ಪ್ರವೇಶ ಪಡೆದರು. ಇದಾದ ನಂತರವೂ ಹಲವು ಶಾಲಾ ಕಾಲೇಜುಗಳನ್ನು ತೆರೆಯಲು ಸರ್ಕಾರ ಅನುಮತಿಯನ್ನು ನೀಡಿದೆ.
ಪ್ರತಿ ಲಕ್ಷ ಜನರಿಗೆ ಸುಮಾರು 51 ಕಾಲೇಜುಗಳನ್ನು ಹೊಂದಿರುವ ನಮ್ಮ ಕರ್ನಾಟಕ ಇಡೀ ದೇಶದಲ್ಲೇ ಅತಿಸಾಂದ್ರತೆಯ ಕಾಲೇಜುಗಳನ್ನು ಹೊಂದಿರುವ ರಾಜ್ಯವಾಗಿದೆ.ಆದರೆ ದಾಖಲಾತಿಯ ವಿಚಾರಕ್ಕೆ ಬಂದಾಗ ನಮ್ಮ ರಾಜ್ಯಕ್ಕೆ 5 ನೇ ಸ್ಥಾನ ದೊರೆಯುತ್ತದೆ.ಉದಾಹರಣೆಗೆ 2017-18 ರಲ್ಲಿ ಕಾಲೇಜುಗಳಿಗೆ ದಾಖಲಾದವರ ಒಟ್ಟು ಸಂಖ್ಯೆ 14.6 ಲಕ್ಷ ಮಾತ್ರ..
ಈ ವರ್ಷ ಕೊರೊನಾದ ಕಾರಣ ಅಪಾರ ನಷ್ಟ ಅನುಭವಿಸಿರುವ ಸಾವಿರಾರು ಕುಟುಂಬಗಳು ಮಕ್ಕಳನ್ನು ವಿಶ್ವ ವಿದ್ಯಾನಿಲಯಗಳಿಗೆ ಸೇರಿಸಲಾರರು. ಖರ್ಚು ವೆಚ್ಚಗಳನ್ನು ಭರಿಸಲಾರರು. ಸರ್ಕಾರೀ ಮತ್ತು ಖಾಸಗಿ ಎರಡೂ ವಲಯಗಳು ಈ ವರ್ಷ ಅತಿ ಕಡಿಮೆ ದಾಖಲಾತಿಯನ್ನು ನೋಡುವ ಮುನ್ಸೂಚನೆಯಿದೆ. ಹಾಗಿರುವಾಗ ಆನ್ ಲೈನ್ ತರಗತಿಗಳ ವಿಚಾರ ಇನ್ನೂ ಹಲವರನ್ನು ಹಿಮ್ಮೆಟ್ಟಿಸಬಲ್ಲದು.
ಈಗಾಗಲೇ ಭಾರತದಲ್ಲಿ ಆನ್ ಲೈನ್ ತರಗತಿಗಳಿಗೆ ಆದ್ಯತೆ ದೊರಕಿದೆ. ಆದರೆ ಖಾಸಗೀ ಶಾಲಾ ಕಾಲೇಜುಗಳು ಒಂದು ರೀತಿಯ ನೀತಿಯನ್ನನುಸರಿಸಿದರೆ ಸರ್ಕಾರೀ ಶಾಲಾ ಕಾಲೇಜುಗಳು ಇನ್ನೂ ಆನ್ ಲೈನ್ ತರಗತಿ ನಡೆಸಲು ಹೆಣಗುತ್ತಿದ್ದಾರೆ. ಚಂದನ ಚಾನಲ್ ನ ಮೂಲಕವೂ ತರಗತಿಗಳು ನಡೆಯುತ್ತಿವೆ. ಆದರೆ ನಮ್ಮ ಶೈಕ್ಷಣಿಕ ಚಿತ್ರ ಏಕರೂಪದಲ್ಲಿದೆಯೇ?
ಆನ್ ಲೈನ್ ಎಂದ ಕೂಡಲೇ ಫೋನ್ ಗಳು, ಕಂಪ್ಯೂಟರ್ ಗಳ ಅಗತ್ಯ ಬೀಳುತ್ತದೆ. ಅಂತರ್ಜಾಲ ವ್ಯವಸ್ಥೆಯಿರಬೇಕಾಗುತ್ತದೆ. ಅಂತರ್ಜಾಲ ವ್ಯವಸ್ಥೆಯ ನೆಟ್ವರ್ಕ್ ಅಥವಾ ಸಂಪರ್ಕ ಜಾಲ ಬೇಕಾಗುತ್ತದೆ.ಅದಕ್ಕೆ ವೇಗವಿರಬೇಕಾಗುತ್ತದೆ. ಎಲ್ಲ ಇದ್ದರೂ ಫೋನು, ಕಂಪ್ಯೂಟರ್ ಚಾರ್ಜು ಮಾಡಲು ವಿದ್ಯುತ್ ಇರಬೇಕಾಗುತ್ತದೆ.ಇದ್ದರೂ ಅದಕ್ಕೆ ವೋಲ್ಟೇಜ್ ಬೇಕಾಗುತ್ತದೆ.
ದೂರದ ಯಾವುದೋ ಹಳ್ಳಿಯ ಮಕ್ಕಳಿಗೆ ಈ ಎಲ್ಲ ಸವಲತ್ತುಗಳಿವೆಯೇ? ಇಲ್ಲದಿದ್ದರೆ ಇಡೀ ಶೈಕ್ಷಣಿಕ ವರ್ಷ ಬರೀ ಶ್ರೀಮಂತರ ಪಾಲಾಗುತ್ತದೆ. ಕೊರೊನಾ ಕಾಟವಿದ್ದರೂ ಛಲ ಹಿಡಿದು ಓದಬೇಕೆನ್ನುವ ಮಕ್ಕಳಿಗೆ ಬಡತನ ಮತ್ತು ಈ ಸರ್ಕಾರೀ ನೀತಿಗಳು ಮುಳುವಾಗುತ್ತಿವೆ. ಸಣ್ಣ ಪುಟ್ಟ ವಿಚಾರಗಳಿಗೂ ಸಿಡಿದೆದ್ದು ನ್ಯಾಯಕೇಳಬಲ್ಲ ಮುಂದುವರೆದ ದೇಶಗಳ ವಿಚಾರವೇ ಬೇರೆ. ಆದರೆ ನೆಟ್ವರ್ಕ್ ಗಾಗಿ ಯಾವುದೋ ಗುಡ್ಡಹತ್ತಿ ಕೈನಲ್ಲಿ ಫೋನಿಡಿದು ಮಳೆ, ಗಾಳಿಗಳನ್ನು ಮೆಟ್ಟಿ ಕೂರಬೇಕಾಗಿರುವ ನಮ್ಮ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠದ ಹೆಸರಲ್ಲಿ ಅನ್ಯಾಯವಾಗುವ ಸಾಧ್ಯತೆಗಳೇ ಹೆಚ್ಚಿವೆ.
ಹೇಗೋ ಕಷ್ಟಪಟ್ಟು ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸುತ್ತಿರುವ ಬಡ ತಂದೆ ತಾಯಿಗಳು ಆನ್ ಲೈನ್ ತರಗತಿಗಾಗಿ ಮೊಬೈಲ್, ಡೇಟಾ, ಇಂಟರ್ನೆಟ್, ಲ್ಯಾಪ್ ಟಾಪ್ ಕೊಡಿಸಲು ಸಾಧ್ಯವೇ? ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆಯ ಚಿತ್ರಣವನ್ನು ಸರ್ಕಾರ ನಮ್ಮ ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವೇ? ಇದು ಒಬ್ಬಿಬ್ಬ ವಿದ್ಯಾರ್ಥಿಯ ಪ್ರಶ್ನೆಯೇ?
ತೀರಾ ಬಡತನದ ಕುಟುಂಬಗಳು ಮಕ್ಕಳಿಗೆ ಹೇಗೂ ಶಾಲೆ ಇಲ್ಲವೆಂದು ಸಣ್ಣ ಪುಟ್ಟ ಕೆಲಸಕ್ಕೆ ಹಚ್ಚಿದರೆ ಏನು ಗತಿ? ದುಡಿಮೆಯ ರುಚಿಕಂಡ ಮಕ್ಕಳು ಶಾಲಾ ಶಿಕ್ಷಣದಿಂದ ದೂರ ಉಳಿದು ಬಿಟ್ಟರೆ ಅದು ಮತ್ತೊಂದು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ.
ಅದರಲ್ಲೂ ಈ ವರ್ಷ ಕೊರೊನಾ ಕಾರಣ ಎಲ್ಲರೂ ಆರ್ಥಿಕ ನಷ್ಟಗಳನ್ನು ಅನುಭವಿಸಿದ್ದಾರೆ. ಕಷ್ಟ ಪಟ್ಟು ಬೆಳೆ ಬೆಳೆದರೂ ರೈತರಿಗೆ ಬಂಡವಾಳವೂ ಹುಟ್ಟದೆ ಉಪವಾಸವಿರಬೇಕಾದ ಸಮಯದಲ್ಲಿ ಆಧುನಿಕ ಸಂಪರ್ಕ ಜಾಲಗಳ ಮೇಲೆ ಸಾವಿರಾರು ರೂಪಾಯಿ ಹಾಕಲು ಸಾಧ್ಯವೇ? ನಗರದಲ್ಲಿರುವವರ ಕುಟುಂಬಗಳು ಕೂಡ ಕೆಲಸವಿಲ್ಲದೆ, ಆದಾಯವಿಲ್ಲದೆ ತತ್ತರಿಸಿರುವ ಈ ಕಾಲದಲ್ಲಿ ಆನ್ ಲೈನ್ ತರಗತಿಗಳು ಮುಗಿಲ ಮಲ್ಲಿಗೆಯಲ್ಲವೇ?
ನೇರ ಪಾಠ ಹೇಳುತ್ತೇವೆಂದು ಕರೆಸಿ ಆನ್ ಲೈನ್ ಪಾಠ ಹೇಳುವುದು ಅನ್ಯಾಯ ಎಂದು ವಿದ್ಯಾರ್ಥಿ ಒಕ್ಕೂಟಗಳೊಂದಿಗೆ ಸೇರಿ ಹೋರಾಟ ನಡೆಸುತ್ತಿರುವ ಇಂಗ್ಲೆಂಡಿನ ವಿದ್ಯಾರ್ಥಿಗಳಂತೆ ಈ ಆನ್ ಲೈನ್ ಪಾಠಗಳ ಬಗ್ಗೆ ನಮ್ಮ ವಿದ್ಯಾರ್ಥಿಗಳು ಪ್ರಶ್ನೆ ಎತ್ತಲು ಸಾಧ್ಯವಿದೆಯೇ? ಅಥವಾ ವಿದ್ಯಾರ್ಥಿಗಳು ಮೂಕವಾಗಿ ಬಲಿಪಶುಗಳಾಗುತ್ತಿದ್ದಾರೆಯೇ? ಎಂಬುದನ್ನು ಶೈಕ್ಷಣಿಕ ತಜ್ಞರು ತುರ್ತಾಗಿ ಚರ್ಚಿಸಬೇಕಿದೆ.
ಆನ್ ಲೈನ್ ತರಗತಿಗಳ ಗುಣಮಟ್ಟ
ಜೊತೆಗೆ ನಡೆಯುತ್ತಿವೆ ಎನ್ನಲಾಗುತ್ತಿರುವ ಆನ್ ಲೈನ್ ತರಗತಿಗಳ ಗುಣಮಟ್ಟವನ್ನು ಅಳೆಯುವ ಪದ್ಧತಿಗಳನ್ನು ಅಳವಡಿಸಬೇಕಿದೆ.ಏಕೆಂದರೆ ಆನ್ ಲೈನ್ ಪಾಠ ಮಾಡಿ ಅಭ್ಯಾಸವಿರದ ಹಳೆಯ ತಲೆಮಾರಿನ ಬೋಧಕರು ತರಗತಿಯಲ್ಲಿನ ಹೆಸರು ಪಟ್ಟಿಯನ್ನು ಕೂಗುವಂತೆ ಕೂಗಿ ಹಾಜರಾತಿ ಹಾಕಲೇ ಅರ್ಧಗಂಟೆ ಕಳೆಯುತ್ತಿದ್ದಾರೆಂಬ ದೂರುಗಳಿವೆ. ಆನ್ ಲೈನ್ ನಲ್ಲಿ ತರಗತಿ ಮಾಡಿ ಅಭ್ಯಾಸವಿಲ್ಲದವರು ತಾವೇ ಪರದಾಡುವುದಿದೆ. ಝೂಮ್ ಮುಂತಾದ ಉಚಿತ ವೇದಿಕೆಗಳು ಪ್ರತಿ 45 ನಿಮಿಷಕ್ಕೊಮ್ಮೆ ಕತ್ತರಿಸಿದಾಗಲೂ ಮತ್ತೆ ಎಲ್ಲವೂ ಗೊಂದಲಮಯವಾಗುತ್ತಿದೆ. 15 ನಿಮಿಷ ಪಾಠ ಹೇಳಿ ತರಗತಿ ಮುಗಿಯಿತೆಂದು ಕಣ್ಮರೆಯಾಗುವ ಬೋಧಕರಿದ್ದಾರೆ. 15 ನಿಮಿಷದ ಪಾಠಗಳನ್ನು ರೆಕಾರ್ಡ್ ಮಾಡಿ ಯೂ ಟ್ಯೂಬಿನಲ್ಲಿ ನೋಡಿಕೊಳ್ಳಿ ಎಂದು ಕೈ ತೊಳೆದುಕೊಳ್ಳುವ ದಾರಿಯಲ್ಲೂ ಇದು ಸಾಗಿದೆ.ಒಟ್ಟಾರೆ ಪಠ್ಯವನ್ನೇ ಕಡಿಮೆ ಮಾಡುವ, ಉದಾರವಾಗಿ ಅಂಕಕೊಟ್ಟು ಪಾಸ್ ಮಾಡುವ ತಂತ್ರಗಳೂ ಜಾರಿಯಲ್ಲಿವೆ.
ಜ್ಞಾನದ ಮೇಲೆ ಮಾತ್ರ ಒತ್ತು ಕೊಡುವ ಪದವಿಗಳಾದರೆ ಪರವಾಗಿಲ್ಲ. ಆದರೆ ಜೊತೆಗೆ, ಕೈ ಕಸಬನ್ನು ಕಲಿಸುವ ಕೋರ್ಸ್ ಗಳಾದರೆ ಕೆಲಸವನ್ನು ಕಲಿಯದೆ ಈ ಪದವೀಧರರು ಈ ವರ್ಷ ಮತ್ತು ಮುಂದಿನ ವರ್ಷಗಳಲ್ಲಿ ನಷ್ಟವನ್ನು ಅನುಭವಿಸಲಿದ್ದಾರೆ.
ಏನೇ ಆದರೂ ಸಮಾಜದ ಯಾವುದೇ ಇನ್ನಿತರ ವರ್ಗಗಳಂತೆ ಅವಿಭಾಜ್ಯ ಅಂಗಗಳಾಗಿರುವ ವಿದ್ಯಾರ್ಥಿಗಳು ಮಿಲಿಯನ್ ಗಟ್ಟಲೆ ಲೆಕ್ಕದಲ್ಲಿ ರಸ್ತೆಗಿಳಿಯುವುದು ಸಧ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಬೇಡವಾಗಿದೆ.
ಪ್ರತಿ ವಿದ್ಯಾರ್ಥಿಗೆ ಕೋವಿಡ್ ಟೆಸ್ಟ್ ಮಾಡುವುದು, ವಿದ್ಯಾರ್ಥಿಗಳನ್ನು ಸಣ್ಣ, ಸಣ್ಣ ಗುಂಪುಗಳಾಗಿ ವಿಂಗಡಿಸಿ ಪ್ರಾಕ್ಟಿಕಲ್ ಕಸುಬನ್ನು ಹೇಳಿಕೊಡುವುದು, ಶಿಕ್ಷಕರಿಗೆ ಆನ್ ಲೈನ್ ತರಗತಿಗಳ ಬಗ್ಗೆ ತರಬೇತಿ ನೀಡುವುದು, ಮಧ್ಯೆ ಕಡಿದು ಹೋಗದಂತಹ ಅಂತರ್ಜಾಲ ವೇದಿಕೆಗಳನ್ನು ಆಯಾ ಶಿಕ್ಷಣ ಸಂಸ್ಥೆಗಳು ಖರೀದಿಸುವುದು, ಆಧುನಿಕ ಸವಲತ್ತುಗಳಿಲ್ಲದ ಮಕ್ಕಳು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಮ್ಮ ಶಾಲಾ-ಕಾಲೇಜಗಳಲ್ಲೇ ಆನ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗುವಂತಹ ವ್ಯವಸ್ಥೆಗಳನ್ನು ಒದಗಿಸುವುದು,ರೆಕಾರ್ಡ್ ಆದ ಲೈವ್ ಪಾಠಗಳನ್ನು ಅಕಸ್ಮಾತ್ ಆ ದಿನದ ತರಗತಿಗೆ ಹಾಜರಾಗಲು ಸಾದ್ಯವಾಗದ ಮಕ್ಕಳಿಗೆ ದೊರಕುವಂತೆ ಮಾಡುವ ಬದಲಾವಣೆಗಳ ಬಗ್ಗೆ ಮತ್ತು ಅಳವಡಿಸಬಹುದಾದ ಇತರೆ ಹೊಸ ವಿಚಾರಗಳಿಗೆ ಸರ್ಕಾರ ಮತ್ತು ದುಬಾರಿ ಶುಲ್ಕವನ್ನು ಪಡೆವ ಕಾಲೇಜುಗಳು ಗಮನಹರಿಸಲೇ ಬೇಕಿದೆ.
ಪ್ರತಿ ಸುಧಾರಣೆಯೂ ಹಲವು ಸಹಸ್ರ ವಿದ್ಯಾರ್ಥಿಗಳ ಮುಖ್ಯ ಘಟ್ಟವಾದ ಈ ಶೈಕ್ಷಣಿಕ ವರ್ಷಗಳ ಕರಾಳತೆಯನ್ನು ಒಂದಷ್ಟು ಕಡಿಮೆ ಮಾಡಬಲ್ಲವು.ಕೊರೊನಾ ಕಾರಣ ಲೇವಡಿಯಾಗಿ ಬಿಟ್ಟಿರುವ, ಬಿಕ್ಕಟ್ಟಿನಲ್ಲಿ ಬೇಯುತ್ತಿರುವ ಉನ್ನತ ಅಭ್ಯಾಸದ ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ವರ್ಷಗಳ ಗೌರವವನ್ನು ಅಲ್ಪಮಟ್ಟಿಗಾದರೂ ಎತ್ತಿಹಿಡಿಯಬೇಕಿದೆ.
ಕಾರಣವಿಷ್ಟೆ. ಮೊದಲ ಅಲೆ ನೆಲಕಚ್ಚಿದರೂ ಎರಡನೆಯ ಅಲೆಯ ಭಯವೂ ಮತ್ತೆ ಭಾರತವನ್ನು ಮತ್ತಷ್ಟು ಕಾಲ ಕಾಡಬಲ್ಲದು. ಎರಡನೆಯ ಅಲೆಯ ಭಯದಲ್ಲಿ ಮತ್ತೆ ಸುಮಾರು ಅರ್ಧಭಾಗದಷ್ಟು ಲಾಕ್ ಡೌನ್ ಆಗಿರುವ ವೇಲ್ಸ್ ನಂತಹ ಪುಟ್ಟ ದೇಶವನ್ನು ನೋಡಿದರೆ ಇದಿನ್ನೂ ಶುರುವಾಗುತ್ತಿರುವ ಕೋಟಲೆಗಳ ಅಧ್ಯಾಯ ಎನ್ನುವುದನ್ನು ನಾವು ಅರಿಯಬಹುದಾಗಿದೆ.
Photo by Rubén Rodriguez on Unsplash