26.3 C
Karnataka
Saturday, November 23, 2024

    ಹೊನ್ನಿಗಿರುವಷ್ಟು ಬೆಲೆ ಪಿನ್ನಿಗಿತ್ತು

    Must read

    ಬಾಲ್ಯದಲ್ಲಿ ಎಲ್ಲಿಗೆ ಹೋಗ್ಬೇಕಂದ್ರೂ ಬರಿಗಾಲಿನಲ್ಲೇ ಹೋಗುತ್ತಿದ್ದೆವು. ಆಗ ಟಾರು ರಸ್ತೆಗಳೂ ಕಡಿಮೆಯೇ ಕಲ್ಲು ಮುಳ್ಳಿನ ಕಾಲುದಾರಿಗಳಲ್ಲೇ ನಮ್ಮ ಸಂಚಾರ ಆಟ ಪಾಟ ಎಲ್ಲವೂ ಆಗಿತ್ತು .

    ವಾರದಲ್ಲಿ ಎರಡು ಬಾರಿಯಾದರೂ ಮುಳ್ಳು ಚುಚ್ಚಿಸಿಕೊಂಡು ಕುಂಟುತ್ತಿದ್ದೆವು . ಕಾಲಿಗೆ ಚುಚ್ಚಿದ್ದ ಆ ಮುಳ್ಳನ್ನು ಹುಡುಕುವ ಮೊದಲು ನಾವು ಹುಡುಕುತ್ತಿದ್ದುದ್ದೇ ‘ಪಿನ್ನನ್ನು’ .

    ಮೊದಲಿಗೆ ನಾವೇ ಪಿನ್ನಿನ ಮೂಲಕ ಮುಳ್ಳನ್ನು ತೆಗೆಯಲು ಪ್ರಯತ್ನ ಪಟ್ಟು ಸಾಧ್ಯವಾಗದಿದ್ದಾಗ ಹಿರಿಯರ ಕೈಗೆ ನಮ್ಮ ಕಾಲನ್ನು ಒಪ್ಪಿಸುತ್ತಿದ್ದೆವು .
    ಅವರು ಒಂದಷ್ಟು ಬೈದು ಮುಳ್ಳನ್ನು ತೆಗೆದ ನಂತರ ನಮಗೆ ಜೋಪಾನವಾಗಿರು ಅನ್ನುವುದಕ್ಕಿಂತಾ ಹೆಚ್ಚಾಗಿ ಪಿನ್ನನ್ನು ಜೋಪಾನವಾಗಿಡುವಂತೆ ಹೇಳುತ್ತಿದ್ದರು .
    ಹೊನ್ನಿಗಿರುವಷ್ಟು ಬೆಲೆ ಪಿನ್ನಿಗಿತ್ತು.ಹಾಗಂತ ಬೆಲೆಯಲ್ಲಲ್ಲ ಆವಶ್ಯಕತೆಯಲ್ಲಿ .

    ಪಿನ್ನಿನ ಬಗ್ಗೆ ಪಿನ್ ಟು ಪಿನ್ ಆಗಿ ಬರೆಯಲು ಕಾರಣ ಪಿನ್ನಿನ ಜೊತೆ ನಮಗಿರುವ ದಶಕಗಳಷ್ಟು ಹಳೆಯದಾದ ಸ್ನೇಹ ಸಂಬಂಧ.

    ನಮ್ಮ ಹವಾಯಿ ಚಪ್ಪಲಿಯು ಕಿತ್ತುಬಂದಾಗ ಇದನ್ನು ಪಟ್ಟಿಗೂ ಚಪ್ಪಲಿಗೂ ನಡುವೆ ಸಿಕ್ಕಿಸಿ ನಡೆಯುವಂತೆ ಮಾಡುತ್ತಿತ್ತು .ಪ್ರತೀ ಬಾರಿ ಅಂಗಿಗೆ ಗುಂಡಿ ಇಲ್ಲವಾದಾಗ ಇದನ್ನು ಬಳಸಿದ್ದೇವೆ .
    ಚಡ್ಡೀ ಹುಕ್ಸ್ ಕಿತ್ತೋದಾಗ ಚಡ್ಡೀನ ಸೊಂಟದಲ್ಲಿ ನಿಲ್ಲುವಂತೆ ಮಾಡಿ ನಮ್ಮ ಮರ್ಯಾದೆ ಕಾಪಾಡಿದ್ದು ಇದೇ ಪಿನ್ನು .

    ಪ್ಯಾಂಟಿನ ಜಿಪ್ಪಾಗಲಿ ಬ್ಯಾಗಿನ ಜಿಪ್ಪಾಗಲೀ ಹರಿದು ಕೆಲಸ ಮಾಡದಿದ್ದಾಗ ಕೆಲಸಕ್ಕೆ ಬರುತ್ತಿದ್ದುದ್ದು ಇದೇ ಪಿನ್ನು .
    ಮದ್ರಾಸ್ ಐ ಎಂಬ ಕಣ್ಣಿನ ಸೋಂಕಾದಾಗ ಆ ನಾಲ್ಕಾಣೆಯ ಟ್ಯೂಬನ್ನು ತೆರೆಯಲು ಆವಶ್ಯಕವಾಗ್ತಿದ್ದಿದ್ದು ಈ ಪಿನ್ನು .

    ಮನೆಮಂದಿಯೆಲ್ಲಾ ಉಪಯೋಗಿಸುತ್ತಿದ್ದ ಬಾಚಣಿಗೆಯ ಹಲ್ಲುಗಳ ನಡುವಿನ ಕೊಳೆಯನ್ನು ತೆಗೆಯಲೂ ಇದೇ ಬೇಕಾಗಿತ್ತು .

    ಗಾತ್ರದಲ್ಲಿ ಸಣ್ಣದೇ ಆದರೂ ಇದರ ಪಾತ್ರ ಮಾತ್ರ ದೊಡ್ಡದು .ಆಪದ್ಭಾಂಧವನಾಗಿ , ಅಮ್ಮನ ಅಸಿಸ್ಟೆಂಟ್ ಆಗಿ , ಟೈಲರ್ರಾಗಿ , ಡಾಕ್ಟರ್ ಆಗಿ , ಕ್ಲೀನರ್ ಆಗಿ , ರಕ್ಷಕನಾಗಿ …. ನಮ್ಮ ಬಾಲ್ಯವನ್ನು ಕಾಪಾಡಿ ದಾಟಿಸಿದ ಕೆಳಮಧ್ಯಮವರ್ಗದ ಬಹುಪಯೋಗಿ “ಆಯುಧ” ಈ ಪಿನ್ನು .

    ಆವತ್ತಿನಿಂದ ಇವತ್ತಿಗೂ ಮಹಿಳೆಯರ ನಂಬಿಕೆಯನ್ನು ಬಲವಾಗಿ ಹಿಡಿದಿಟ್ಟಿಕೊಂಡಿದೆ ಅಂದ್ರೆ ಸುಳ್ಳಲ್ಲ .

    ಜಗತ್ತಿನ ಸಣ್ಣ ದೊಡ್ಡ ಫ್ಯಾಷನ್ ಷೋಗಳಲ್ಲಿ ಲಲನೆಯರ ಮಾರ್ಜಾಲ ನಡಿಗೆಯ ಬೆನ್ನಿಗೆ ಈ ಪಿನ್ನಿದೆ .

    ಇದರ ಇನ್ನೊಂದು ವಿಶೇಷವೇನೆಂದರೆ ಮನೆಯ ಎಲ್ಲೋ ಯಾವುದೋ ಒಂದು ಮೂಲೆಯಲ್ಲಿ ಇದ್ದಂತೆ ಭಾಸವಾಗುತ್ತಿದ್ದರೂ ಇದು ಇರುತ್ತಿದ್ದದ್ದೇ ಅಮ್ಮನ ಕತ್ತಲ್ಲಿ. ನಮ್ಮನ್ನ ಸೇಫ್ಟಿಯಾಗಿ ನೋಡಿಕೊಳ್ಳುವ ಅಮ್ಮ ಸೇಫ್ಟಿಯಾಗಿ ಅದನ್ನು ಇಟ್ಟಿರುತ್ತಿದ್ದಳು .

    ಜಗತ್ತಿನಲ್ಲಿ ಈ ಸೇಫ್ಟಿ ಪಿನ್ನನ್ನು ಯಾರು ಕಂಡುಹಿಡಿದ್ನೋ ಏನೋ ಆ ಪುಣ್ಯಾತ್ಮನಿಗೆ ಅನಂತಾನಂತ ಧನ್ಯವಾದಗಳು.

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    5 COMMENTS

    1. ಅಬ್ಬಾ ಒಂದು ಸಣ್ಣ ಪಿನ್ ಎಷ್ಟು ಅಮೂಲ್ಯ ವಸ್ತುವಾಗುತ್ತದೆ ಅಲ್ಲವಾ. ದಿನದ 24 ಗಂಟೆ ಸೀರೆ ಉಡುವ ನನಗೆ ಸದಾ ಎರಡು ಪಿನ್ ಬೇಕೇ ಬೇಕು. ಅಲ್ಲದೇ ಹಾಕಿದ ಹೊಲಿಗೆ ಬಿಡಿಸಲೂ ಇದೇ ಪಿನ್ . ಮಾಸ್ತಿ ಯಾವಾಗಲೂ ಸೂಪರ್

    2. Mr.Masti is rare writer with photographic memory of our childhood. Tha usefulness of every day life a saftey pin has been well written especially about its usage from removing thorn to put string inside the shorts to repair the Hawaii slippers. At the end he had thanked the inventor of the small devise it is Mechanic and independent inventor Walter Hunt secured a place in American history when he invented the useful, everyday device known as safety pin 1849. Ms.Kirana art work is amazing

    3. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂಒಂದು ಸಣ್ಣ ಪಿನ್ ಎಷ್ಟೆಷ್ಟು ಕೆಲಸ ಗಳಿಗೆ ಉಪಯೋಗವಾಗುತ್ತದೆ ಎನ್ನುವುದನ್ನು ಲೇಖಕರು ಬಹಳ ಚೆನ್ನಾಗಿ ವಿವರಿಸಿದ್ದಾಚಿತ್ರವು ಸಮಯೋಚಿತವಾಗಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!