ಮಾಸ್ತಿ
” ಅನ್ನ ” …… ಇದೊಂದು ಶಬ್ಧ ಕಿವಿಗೆ ಬಿದ್ರೆ ಅದೇನೋ ಒಂದು ಸಂತೃಪ್ತಿ . ಅನ್ನ ಆಹಾರಕ್ಕೂ ಮಿಗಿಲಾದ ಅನುಬಂಧ .ಅಮ್ಮ ಇಲ್ಲದ ಮನೇನ, ಅನ್ನ ಇಲ್ಲದ ಅಡುಗೆ ಮನೇನ ಊಹಿಸಿಕೊಳ್ಳಲೂ ಅಸಾಧ್ಯ . ಹಸಿವು ಅನ್ನೋ ಪ್ರಶ್ನೆಗೆ ಸಮರ್ಪಕವಾದ ಉತ್ತರವೇ ಅನ್ನ .
ಅನ್ನಂ ಪರಬ್ರಹ್ಮಂ ಅಂತ ಅನ್ನವನ್ನ ಸಾಕ್ಷಾತ್ ಭಗವಂತನಿಗೇ ಹೋಲಿಸ್ತಾರೆ . ಅನ್ನದಾತ ಅಂತ ಬೆಳೆಯೋ ರೈತನ್ನ ಕರೀತಾರೆ . ಅನ್ನಪೂರ್ಣ ಅಂತ ಬಡಿಸೋ ಅಮ್ಮನ್ನ ಹೆಸರಿಸುತ್ತಾರೆ . ಅನ್ನದಾನವನ್ನ ಶ್ರೇಷ್ಠದಾನಗಳಲ್ಲೊಂದಾಗಿ ಪರಿಗಣಿಸ್ತಾರೆ .ಅನ್ನವನ್ನ ಋಣ ಅಂತಾರೆ . ಅನ್ನದ ಬೆಲೆ ತಿಳ್ಕೋ ಅಂತಾರೆ .
ಅನ್ನವಿಲ್ಲದ ಯಾವ ಭೋಜನವೂ ಊಟ ಅನ್ನಿಸಿಕೊಳ್ಳಲ್ಲ , ಅನ್ನವಿಲ್ಲದ ಯಾವ ಕಾರ್ಯವೂ ಕಾರ್ಯಕ್ರಮವೆನಿಸಿಕೊಳ್ಳುವುದಿಲ್ಲ .
” ತಿನ್ನೋ ಅನ್ನದ ಮೇಲೆ ಆಣೆ ಇಟ್ಟು ಹೇಳು ನೋಡೋಣ ” . “ಅನ್ನ ತಿನ್ನೋ ಮಾತು ಆಡಯ್ಯ ” , ” ಹೊಟ್ಟೆಗೆ ಅನ್ನ ತಿಂತಿಯೋ ಇಲ್ಲ ಮಣ್ ತಿಂತಿಯೋ ” . ಹೀಗೆ ಜಗಳಗಂಟರ ಬಾಯಲ್ಲೂ ಅನ್ನದ ವಿಷಯ ಪ್ರಸ್ತಾಪವಾಗುತ್ತದೆ .
ಒಂದೇ ಮಾತಲ್ಲಿ ಹೇಳಬೇಕೆಂದರೆ ” ತಟ್ಟೆಯೆನ್ನುವ ದೇವಸ್ಥಾನದಲ್ಲಿ ಕಾಣುವ ದೇವರೇ ಅನ್ನ ” .
ಅಮ್ಮ ಮಗುವನ್ನ ಕಂಕುಳಲ್ಲಿ ಎತ್ತಿಕೊಂಡು ಒಂದು ಪುಟ್ಟ ಬಟ್ಟಲಿನಲ್ಲಿ ಅನ್ನ ತಿಳಿಸಾರನ್ನು ಚೆನ್ನಾಗಿ ಹಿಸುಕಿ ಮುದ್ದೆ ಮಾಡಿ ತಿನ್ನಿಸುವುದರೊಂದಿಗೆ ಶುರುವಾಗುತ್ತೆ ಅನ್ನದ ಜೊತೆ ನಮ್ಮ ಪ್ರಯಾಣ .
ಸಂಜೆಯಾದರೆ ಮನೆಯಿಂದ ಫೋನ್ ಬರುತ್ತೆ , ಎಷ್ಟೊತ್ತಿಗೋ ಬರ್ತಿಯಾ ಅನ್ನಕ್ಕಿಡ್ಬೇಕು ಅಂತ . ಹೇಳದೇ ಮನೆಗೆ ಹೋದರೆ , ಐದು ನಿಮಿಷ ಅನ್ನಕ್ಕಿಟ್ಬಿಡ್ತೀನಿ ಇರು ಅಂತಾರೆ . ತಟ್ಟೇಲಿ ಅನ್ನ ಬಿಟ್ರೆ ಇದ್ಯಾವಾಗಿಂದ ಕಲ್ತೆ ತಟ್ಟೇಲಿ ಅನ್ನ ಬಿಡೋದು ? ಅಂತಾರೆ .
ಮನೇಲಿ ಅಪ್ಪ ಬೈದಾಗ ನಾ ಊಟ ಮಾಡಲ್ಲ ಅಂತ ಮುನಿಸಿಕೊಂಡಾಗ , ಅಮ್ಮ ಬಂದು ಬಿಸ್ಬಿಸಿ ಅನ್ನ ಮಾಡಿದೀನಿ ಒಂದು ತುತ್ತು ತಿನ್ನು ಬಾರೊ ಅಂತ ಗೋಗರೀತಾರೆ , ನಾ ಬರಲ್ಲ ಅಂತ ಹಠವಿಡಿದಾಗ , ದೊಡ್ಡವರು ಕೋಪದಲ್ಲಿ ಒಂದೆರೆಡು ಮಾತು ಅಂತಾರೆ ಅಷ್ಟಕ್ಕೆ ಅನ್ನದ ಮೇಲೆ ಕೋಪ ಮಾಡ್ಕೋತಾರ ? ಎದ್ಬಾ ಊಟ ಮಾಡು ಅಂತ ಹೇಳ್ತಾರೆ .
ನೋಡಿ ಬೇರೆ ಎಲ್ಲವನ್ನೂ ಚಮಚ ಸೌಟು ಜಾಲರ ಅದೂ ಇದೂ ಅಂತೆಲ್ಲಾ ಕರೀತಾರೆ ಅದ್ರೆ ಅನ್ನ ಬಡಿಸೋದನ್ನ ಮಾತ್ರ ಅನ್ನದ ಕೈ ಅಂತಾರೆ . ಅಪರೂಪಕ್ಕೆ ಒಂದು ಹೊತ್ತು ಅಮ್ಮ ಮನೆಯಲ್ಲಿ ಇರದೇ ಹೋದ್ರೂ ಅನ್ನ ಮಾಡಿಟ್ಟು ಹೋಗಿರ್ತಾಳೆ .
ಅನ್ನ ಸಾರು ತಿಂದು ಅಸಿಡಿಟಿ ಆಗಿದೆ ಅಂತ ಯಾರ್ ಬಾಯಲ್ಲೂ ಕೇಳಿದ ಇತಿಹಾಸಾನೇ ಇಲ್ಲ .ಜ್ವರ ಬಂದಾಗ ಬಿಸಿ ಅನ್ನ ಮೆಣಸಿನ ಸಾರು , ರಸಂ ತಿನ್ನಿ , ಮಜ್ಜಿಗೆ ಅನ್ನ ತಿನ್ನಿ ಅಂದವರೇ ಹೆಚ್ಚು .ಪ್ರಪಂಚ ಸುತ್ಕೊಂಡು ವಾಪಸ್ ಮನೆಗೆ ಹೋಗಿ ತಟ್ಟೆ ಮುಂದೆ ಕೂತು ಅನ್ನ ನೋಡಿದ್ ತಕ್ಷಣ ಅದೇ ಪ್ರಪಂಚ ಅನ್ನಿಸಿಬಿಡುತ್ತೆ .
ಅನ್ನ ಮಾಡೋದು ಅನ್ನ ಉಂಡಷ್ಟೇ ಸುಲಭ ಅದ್ರೆ ಆ ಪುಟ್ಟ ವಿಧಾನವನ್ನ ಸರಿಯಾಗಿ ಪಾಲಿಸಬೇಕು ಅಷ್ಟೇ . ಎಷ್ಟು ಗ್ಲಾಸ್ ಅಕ್ಕೀಗೆ ಎಷ್ಟು ಗ್ಲಾಸ್ ನೀರು ಇಡಬೇಕು ? ಕುಕ್ಕರ್ ರಬ್ಬರ್ ಸರಿಯಾಗಿ ಹಾಕಿದೀವಾ ? ವೆಯ್ಟ್ ಇಟ್ವಾ ? ಎಷ್ಟು ವಿಸಿಲ್ ಕೂಗಿಸ್ಬೇಕು ? ಹೀಗೆ .
ಸ್ವಲ್ಪ ನೀರು ಜಾಸ್ತಿ ಅದ್ರೂ ಅನ್ನ ಮುದ್ದೆ ಅಗಿರುತ್ತೆ , ನೀರು ಕಮ್ಮಿ ಅದ್ರೂ ಅನ್ನ ಮುಳ್ಳು ಕಂಡಿಯಂತಾಗಿರುತ್ತದೆ . ಸ್ವಲ್ಪ ಯಾಮಾರಿದ್ರೆ ತಳ ಹಿಡಿದಿರುತ್ತೆ .
ಪ್ರಪಂಚದಲ್ಲಿ ದೊಡ್ಡ ದೊಡ್ಡ ಅಡುಗೆ ಭಟ್ಟರಿಂದ ಅಡುಗೆ ಕೆಟ್ಟಿರೋ ಉದಾಹರಣೆಯಿದೆ ಆದರೆ ಅಮ್ಮನಿಂದ ಅನ್ನ ಕೆಟ್ಟಿರೋ ಉದಾಹರಣೆ ತುಂಬಾ ವಿರಳ .
ಇದಲ್ಲದೇ ನಾವು ಸಣ್ಣವರಿದ್ದಾಗ ಮನೆಗೆ ಬಂದ ನೆಂಟರಿಷ್ಟರ ಮಕ್ಕಳ ಜೊತೆ ಅಮ್ಮ ನಮ್ಮನ್ನೂ ಸುತ್ತ ಕೂರಿಸಿಕೊಂಡು ಒಂದು ತಪಲೆ ಅನ್ನ ಸಾರನ್ನು ಕಲಿಸಿ ಬೆಳದಿಂಗಳ ಬೆಳಕಿನಲ್ಲಿ ಒಬ್ಬೊಬ್ಬರಿಗೇ ಕೈ ತುತ್ತು ಹಾಕುತ್ತಿದ್ದಾಗ ನಾವು ಸ್ಪರ್ಧೆಗೆ ಬಿದ್ದವರಂತೆ ತಿನ್ನುತ್ತಿದ್ದೆವಲ್ಲ ಆ ಘಳಿಗೆ ನಿಜಕ್ಕೂ ಅಮೃತಘಳಿಗೆಯೇ .
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಅನ್ನವೇ ದೇವರು… ಬಹಳ ಸೊಗಸಾಗಿ ವಿವರಿಸಿದ್ದಾರೆ
ಸೊಗಸಾದ ವಿವರಣೆ. ನಮ್ಮ ಉತ್ತರ ಕನ್ನಡದಲ್ಲಿ ವಿಶೇಷದ ದಿನಗಳಲ್ಲಿ ಪರಮಾನ್ನ ಬಡಿಸಲಾ ಅಂತಾ ಕೇಳುತ್ತೇವೆ.ಅದೆಲ್ಲಾ ನಿಮ್ಮ ಲೇಖನ ನೋಡಿ ನೆನಪಾಯಿತು. ವಂದನೆಗಳು
“ಅನ್ನಮ್ ನ ನಿಂದ್ಯಾತ್ “ಎನ್ನುತ್ತದೆ ವೇದ. ರಾತ್ರಿ ಮುನಿಸಿಕೊಂಡು ಊಟ ಬಿಟ್ಟಾಗ, ಅನ್ನದ ಮೇಲೆ ಕೋಪ ಮಾಡಿಕೊಳ್ಳಬೇಡ ಎಂದು ಬುದ್ದಿ ಹೇಳುತ್ತಿದ್ದ ಅಮ್ಮನೇ ನನಗೆ ಅನ್ನ ಮಾಡಲು ಹೇಳಿಕೊಟ್ಟಿದ್ದಳು. ಮೊದಲು ಅಕ್ಕಿಯನ್ನು ನೀರಿನಲ್ಲಿ ತೊಳೆ ನಂತರ ಅದನ್ನು ಪಾತ್ರೆಗೆ ಹಾಕಿ 4 ಬೆರಳುಗಳು ಮುಳುಗುವಷ್ಟು ನೀರು ಹಾಕಿ ಒಲೆ ಮೇಲೆ ಇಡು ಎಂದು ಹೇಳಿಕೊಟ್ಟಿದ್ದರು. ಮಾಸ್ತಿ ಯವರ ಬರಹ ಹಳೆ ನೆನುಪುಗಳನ್ನು ಮೆಲಕುಹಾಕುವಂತೆ ಮಾಡಿತು. ಧನ್ಯವಾದಗಳು 🙏🙏
ಒಮ್ಮೆ ಉತ್ತರ ಭಾರತ ಪ್ರವಾಸದಲ್ಲಿ ಇದ್ದಾಗ ಅಡಿಗೆ ಭಟ್ಟ ನ ಮೇಲೆ ಮುನಿಸಿಕೊಂಡು ಊಟ ಬಿಟ್ಟಿದ್ದೆ ರಾತ್ರಿ ಊಟ ಮಾಡಿದರಾಯಿತು ಎಂದು ಕೊಂಡಿದ್ದೆ. ಆದರೆ ಸ್ವಲ್ಪ ದೂರ ಪ್ರಯಾಣ ಮಾಡಿದ ಮೇಲೆ ಟ್ರಾಫಿಕ್ ಜಾಮ್ ಆಗಿ 24ಗಂಟೆ ಒಂದೇ ಜಾಗದಲ್ಲಿ ಇರಬೇಕಾಯಿತು. ಅಡಿಗೆ ಸಾಮಾನು ಮುಂದಿನ ಊರಲ್ಲಿ ತೆಗೆದುಕೊಳ್ಳಬೇಕಿತ್ತು. ಹಾಗಾಗಿ ರಾತ್ರಿಯೂ ಊಟ ಇಲ್ಲದಂತೆ ಆಯಿತು. ಆಗ ಅನ್ನದ ಬೆಲೆ ಗೊತ್ತಾಯಿತು. ಆಗ ಅದೆಷ್ಟು ಬಾರಿ ಅನ್ನವನು ತಿರಿಸ್ಕರಿಸಬಾರ್ದು ಅಂದು ಕೊಂಡೆನೋ ಆ ದೇವರೇ ಬಲ್ಲ.
ಅನ್ನದ ಮಹಿಮೆಯನ್ನು ಬಹು ಸುಂದರವಾಗಿ ಬರೆದಿರುವಿರಿ. ನಿಮ್ಮ ಲೇಖನಿಯಿಂದ ಇನ್ನಷ್ಟು ಬರಹಗಳು ಬರಲಿ 🙏🙏