21.4 C
Karnataka
Thursday, November 21, 2024

    ಮುಕ್ತಿಯೇ ಪರಮಗುರಿ ಎಂದಾದ ಮೇಲೆ ಅದನ್ನು ಸಾಧಿಸುವ ಮಧ್ಯೆ ಏಕಿಷ್ಟು ಗೊಂದಲ

    Must read

    ಎಲ್ಲ ಬಂಧನಗಳ ಕಿತ್ತೊಗಿವಿಕೆಯೇ ಮುಕ್ತಿ! ಸ್ವತಂತ್ರತೆಯ ಪರಮಾವಧಿಯೇ ಮುಕ್ತಿ!ಇದು ಹೀಗಿರಬೇಕು,ಅದು ಹೀಗಿರಬೇಕು ಅನ್ನುವ ವಿಧಿ,ವಿಧಾನಗಳ ಇಲ್ಲವಾಗುವಿಕೆಯೇ ಮುಕ್ತಿ! ಅದು ಯಾವುದೇ ತರಹದ ಜಂಜಡಗಳ ಸಂಕೋಲೆಗಳಿಲ್ಲದ ಆನಂದದ ಮಹಾಸಾಗರ! ಕೊಚ್ಛೆ,ಕೊಳಕು,ತೀರ್ಥ ಎಲ್ಲವೂ ಸೇರಿ ಹರಿದು ಸಾಗರ ಸೇರುವ ನೈಸರ್ಗಿಕ ನಿಯಮದಂತೆ,ಜೀವವು ಸಂಸಾರದ ಜಂಜಡಗಳಲ್ಲಿ ಬೆರೆತು,ಈಸಿ,ಜೈಸಿ, ಸೇರಬೇಕಾದ ಮಹಾದಾನಂದದ ಸಾಗರ!

    ಕತ್ತಲು, ಬೆಳಕುಗಳಿಲ್ಲದ, ಸುಖ ದುಃಖಗಳ ಕಲ್ಪನೆಯಿಲ್ಲದ, ಮೇಲು,ಕೀಳು,ಒಳ್ಳೆಯದು,ಕೆಟ್ಟದ್ದು ಅನ್ನುವ ಭ್ರಮಾ,ಬ್ರಾಂತಿ ಇಲ್ಲದ ಪರಂಧಾಮ! ಎಲ್ಲ ಜೀವರಾಶಿಯ ತಾಣವೂ ಅದಾಗಿದ್ದು, ಉಗಮವೂ ಒಂದು ಕಾಲಕ್ಕೆ ಅಲ್ಲಿಂದಲೇ ಮೊದಲ್ಗೊಂಡು, ಅದು ಬೇಸರವಾಗಿ ಪ್ರಾಪಂಚಿಕ ಜೀವನವನ್ನು ಜೀವವು ತಾನೇ ಆಯ್ಕೆಮಾಡಿಕೊಂಡು, ಇಲ್ಲಿಯ ಸಂಕೋಲೆಗಳಲ್ಲಿ ಸಿಕ್ಕಿಹಾಕಿಕೊಂಡು,ಬಿಡುಗಡೆಯ ಮಾರ್ಗವನ್ನು ಕಂಡುಕೊಂಡು ಮತ್ತೆ ಆ ಮಹಾದಾನಂದದ ಕಡೆಗೆ ಪಯಣಿಸುವುದೇ ಜೀವನ!

    ಅಪ್ಪ, ಒಂದು ನನ್ನ ಬಾಲ್ಯದ ಮಧ್ಯಾಹ್ನದ ದಿನ ಜೀವನ,ಮುಕ್ತಿಯ ಬಗ್ಗೆ ಹೀಗೆ ಹೇಳುತ್ತಿದ್ದನ್ನು ತದೇಕ ಚಿತ್ತದಿಂದ ಕೇಳುತ್ತಿದ್ದ ನನಗೆ ಸಾವಿರ ಸಾವಿರ ಹೆಡೆಗಳ ಸರ್ಪ ನನ್ನೆದುರು ಒಮ್ಮೆಲೇ ಪ್ರತ್ಯಕ್ಷವಾದ ಅನುಭವ! ಇದು ಬಾಲ,ಇದು ತಲೆ ಅಂತ ಹೇಳಿದರೂ ಅರ್ಥವಾಗದ ಸ್ಥಿತಿ!

    ಸಂದರ್ಭ ನೆನಪಿಸಿಕೊಂಡು ಹೇಳುವುದಾದರೆ,ಅದು ಮಹಾಭಾರತದ ಅರಣ್ಯಕಾಂಡದ ಪ್ರಸಂಗ. ಸಿಕ್ಕ,ಸಿಕ್ಕ ಮುನಿಗಳನ್ನು,ಸಾಧು,ಸಂತರನ್ನು ಧರ್ಮರಾಯ ಕರೆದು,ಸತ್ಕರಿಸಿ, ಧರ್ಮ,ಜೀವನ, ಮುಕ್ತಿಗಳ ಬಗ್ಗೆ ಕೇಳುತ್ತಿರುತ್ತಾನೆ. ಭೀಮ ಮತ್ತೊಂದು ಕಡೆ ಸೇಡಿನ ಬೆಂಕಿಯಿಂದ ಬೇಯುತ್ತಿರುತ್ತಾನೆ.ತದ್ವಿರುದ್ಧ ತುಮುಲಗಳನ್ನು ವ್ಯಾಸನು ಒಂದೇ ವೇದಿಕೆಯಲ್ಲಿ ಓದುಗರಿಗೆ ಪರಿಚಯಿಸುವ ಪರಿಗೆ ಅಪ್ಪ ತನ್ನ ಮೆಚ್ಚುಗೆ ಸೂಸುತ್ತಿದ್ದರೆ,ನನಗೆ ಬೇರೆಯದೇ ಕಲ್ಪನೆ ನನ್ನ ಚಿಕ್ಕ ಮೆದುಳಲ್ಲಿ ಅಚ್ಚೊತ್ತಿತ್ತು.

    ಎಲ್ಲ ಬಂಧನಗಳನ್ನ ಬಿಡಿಸಿಕೊಂಡು ಪಡೆಯುವ ಮುಕ್ತಿಗೆ ಧರ್ಮ,ಆಚರಣೆಗಳ ಕಟ್ಟಲೆ/ಸಂಕೋಲೆಗಳು ಏಕೆ ಎನ್ನುವ ಪ್ರೆಶ್ನೆ ಆಗಲೇ ಕಾಡಲು ಆರಂಭಿಸಿತ್ತು. ಮೃಗತ್ವದಿಂದ ಮಾನವತ್ವ ಅಂದ್ರೆ ಸಂಕೋಲೆಗಳ ಚಕ್ರವ್ಯೂಹವಾ? ಮೃಗತ್ವ ನೈಸರ್ಗಿಕವಾದದ್ದಾದರೆ,ಮಾನವತ್ವ ನಾವು ಅವಿರ್ಭವಿಸುವುದಾ? ಸ್ವಾಭಾವಿಕವಾದದ್ದನ್ನು ನಿಯಂತ್ರಿಸಿ,ನಿಗ್ರಹಿಸಿ ನಮ್ಮದಲ್ಲ ಅನ್ನುವಂತಾದನ್ನ ಪಡೆಯುವುದು ಎಷ್ಟು ಸರಿ? ಮಾನವತ್ವವೇ ಮನುಷ್ಯನ ಹುಟ್ಟು ಗುಣವಾದರೆ, ದೈವತ್ವಕ್ಕೆ ಪ್ರಯತ್ನಿಸುವುದು ಸರಿಯಾ ಅದೂ ಎಲ್ಲ ಸ್ವಾಭಾವಿಕತೆಗಳನ್ನು ಸಂಕೋಲೆಗಳಿಂದ ಬಂಧಿಸಿ?

    ಪರಮಾತ್ಮನ ಅಂಶವಾದ ಜೀವಿಗಳು,ಮುಕ್ತಿ ಎನ್ನುವ ಪರಂಧಾಮದ ಮೂಲ ನಿವಾಸಿಗಳೇ ಆಗಿದ್ದು, ಪಂಚೇಂದ್ರಿಯಗಳೆಂಬ ಮೂಲ ವೈರಿಗಳೊಡನೆ ಹೋರಾಡುತ್ತಾ,ಅವುಗಳನ್ನು ನಿಗ್ರಹಿಸಿ ಮತ್ತೆ ಆ ಪರಂಧಾಮದ ಕಡೆ ತಲುಪುವ ರೀತಿ ನನಗೆ ವಿಚಿತ್ರ ಕುತೂಹಲ ಕೆರಳಿಸುತ್ತಿತ್ತು. ಆ ಪರಂಧಾಮದ ಮಾರ್ಗಗಳು ಸಾಕಷ್ಟಿದ್ದು, ಪ್ರಪಂಚಾದ್ಯಂತ ಜೀವಿಗಳು ತಮ್ಮದೇ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ತೊಡಗಿದ್ದರೆ,ಮತ್ತೆ ಕೆಲವರು ಹಾಗೆ ತಲೆಕೆಡಿಸಿಕೊಳ್ಳದೆ, ಒಬ್ಬರು ಕಂಡುಕೊಂಡ ಮಾರ್ಗದಲ್ಲಿ ತಮ್ಮ ನಂಬಿಕೆ ಇರಿಸಿ,ಅದರಂತೆ ಅನುಸರಿಸುವುದು,ಆ ಮಾರ್ಗದರ್ಶಕರನ್ನೇ ತಮ್ಮ ಸರ್ವಸ್ವ ಅಂತ ತಿಳಿದು,ಅವರು ಹೇಳಿದ ಹಾಗೆ ನಡೆಯುವುದು ಅನಾದಿಕಾಲದಿಂದಲೂ ನಡೆದು ಬಂದಿದೆ. ಎಲ್ಲ ಮಾರ್ಗದರ್ಶಕರೂ ಒಂದಿಲ್ಲೊಂದು ಆಚರಣೆ,ಕಟ್ಟಳೆ ಹಾಕಿರುವುದು ನನ್ನ ವಿಚಿತ್ರ ಕುತೂಹಲಕ್ಕೆ ಕಾರಣವಾದದ್ದು.

    ಜೀವಶಾಸ್ತ್ರದ ನೈಸರ್ಗಿಕ ನಿಯಮದಂತೆ ಜೀವಿಗಳ ಪ್ರತಿಯೊಂದು ಜೀವಕೋಶ ತಮ್ಮದೇ ಆದ ಕೆಲಸಗಳಿಗಾಗಿ ವಿಕಸತೆ ಹೊಂದಿದೆ. ಬೇಕಾಗುವುದನ್ನು ಮಾತ್ರ ವಿಕಸನಗೊಳಿಸುವಲ್ಲಿ ನಿರತವಾದ ಈ ಕ್ರಿಯೆಯಲ್ಲಿ, ಬೇಡವಾದ್ದು ವಿಕಸನ ಹೇಗಾಯ್ತು,ಏಕಾಯ್ತು? ಮತ್ತು ಬೇಡವಾದ ಈ ವಿಕಸತೆಯನ್ನು ನಿಯಂತ್ರಿಸುವುದೇ ಮುಕ್ತಿಯ ಮಾರ್ಗ ಹೇಗಾಯ್ತು?! ಮುಂದೆ ಜೀವವಿಜ್ಞಾನವನ್ನು ಕಲಿಯುವಾಗ ಇಂತಹ ಯೋಚನೆಗಳು ನನ್ನಲ್ಲಿ ಸುಪ್ತವಾಗಿದ್ದ ಮುಕ್ತಿ,ಮುಕ್ತಿಯಹಾದಿಯ ವಿಷಯಗಳನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದ್ದವು.

    ನಿನ್ನ ನೀನು ಮರೆತರೇನು ಸುಖವಿದೆ….. ಮತ್ತು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ…. ಅಂದ ಸಾಹಿತಿಗಳ ವಾಕ್ಯಗಳು ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದವು. ಸೃಷ್ಠಿಯ ಪ್ರತಿಯೊಂದು ಜೀವಿಯೂ ತನ್ನದೇ ಆದ ಸ್ವಂತಿಕೆ ಹೊಂದಿದೆ. ಸೃಷ್ಟಿಗೆ ನಕಲು ಮಾಡಲು ಆಗಿಲ್ಲ. ಹಾಗಿದ್ದಾಗ ನಾವೇಕೆ ಮತ್ತೊಬ್ಬರ ನಕಲಾಗಬೇಕು ಎಂಬಂತಹ ಪ್ರಾಜ್ಞರ ಮಾತುಗಳು ನನಗೆ ಹಿಡಿಸಿದ್ದವು. ಸ್ವಂತಿಕೆಯನ್ನು ತಮ್ಮ ಎಳೆ ದಿನಗಳಿಂದಲೇ ಕಳೆದುಕೊಂಡು, ನಕಲು ಮಾಡುವುದೇ ಗುರಿ ಅಂತ ತಿಳಿದ ಈಗಿನ ಜನಾಂಗ ಯೌವ್ವನಾವಸ್ಥೆಯಲ್ಲೇ ದಿಕ್ಕುತಪ್ಪಿ, ಮಾನಸಿಕ ರೋಗಿಗಳಾಗುತ್ತಿರುವುದು ನನಗೆ ಸ್ವಂತಿಕೆಯ ಪ್ರೆಜ್ಞೆಯನ್ನು ಮನವರಿಕೆ ಮಾಡಿಸಿತ್ತು.

    ಅಷ್ಟೇ ಅಲ್ಲ ಯಾವುದೇ ಇಂತಹ ಕಟ್ಟು ಕಟ್ಟಳೆಗಳಿಲ್ಲದೆ, ವಿಕಸಿತ ಜೀವಿಗಳ ಕೆಲಸವನ್ನಷ್ಟೇ ಮಾಡಿಕೊಂಡ ಪ್ರಾಣಿಗಳು ಇರುವಷ್ಟು ಸುಖದಿಂದ ಮನುಷ್ಯ ಇಲ್ಲ ಅಂದಮೇಲೆ, ನಾವು ಮುಕ್ತಿಯ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲವಾಗಿಸಿಕೊಂಡು ಬಿಟ್ಟೆವಾ?! ಸ್ವನಿಯಂತ್ರಣ ನಿಸರ್ಗದ ವಿರುದ್ಧವಾಗಿಬಿಟ್ಟಿತಾ? ಇತ್ತ ನೈಸರ್ಗಿಕವಾಗಿ ಬದುಕದೆ, ಅತ್ತ ಮುಕ್ತಿಗಾಗಿ ನಿಯಂತ್ರಣಗಳನ್ನೂ ಪಾಲಿಸದೆ, ಸ್ವಂತಿಕೆ ಕಳೆದುಕೊಂಡವರಾಗಿ ಕಳೆದು ಹೋಗುತ್ತಿದ್ದೇವಾ? ಇಂದಿಗೂ ಪ್ರಾಣಿಗಳು,ಹಲವಾರು ನೈಸರ್ಗಿಕ ಮಡಿಲಲ್ಲೇ ಇರುವ ಬುಡಕಟ್ಟು ಜನಾಂಗದವರು ಇರುವಷ್ಟು ಸಂತೋಷವಾಗಿ ನಾವಿಲ್ಲದಿರುವುದು, ನಾವು ಸವೆಸುತ್ತಿರುವ ದಾರಿಯಲ್ಲಿ ಏನೋ ಎಡವಟ್ಟು ಇದೆ ಅಂತ ಅನ್ನಿಸುತ್ತಿಲ್ಲವಾ?

    ಪ್ರಾಣಿಗಳಲ್ಲಿ,ಅನಾಗರಿಕರಲ್ಲಿ ಇರದಿದ್ದ ಆತ್ಮಹತ್ಯೆ ಮುಕ್ತಿಮಾರ್ಗದಲ್ಲಿ ನಡೆಯುವ ಅಥವಾ ನಡೆಯುತ್ತಿರುವ ನಮ್ಮಲ್ಲಿ ಏಕೆ ಬಂತು? ಆತ್ಮಹತ್ಯೆ ಒಂದು ಉದಾಹರಣೆ ಅಷ್ಟೇ. ತಾನೂ ಬದುಕದೇ, ಸುತ್ತ ಇರುವವರನ್ನೂ ಬದುಕಲು ಬಿಡದಷ್ಟು ಕ್ರೂರಿಯಾಗಿ ಮನುಷ್ಯ ವಿಜ್ಞಾನಿ,ಜ್ಞಾನಿ,ಪೂಜ್ಯ ಅಂತ ಏನೇನೋ ಹೆಸರುಗಳಿಂದ ಕರೆಯಿಸಿಕೊಂಡು ಮೈತುಂಬಾ ಬಟ್ಟೆ,ಚಿನ್ನ ಹಾಕಿಕೊಂಡು ಗಾಳಿಯಲ್ಲಿ ಹಾರಾಡುತ್ತಿದ್ದಾನೆ,ನೀರಲ್ಲಿ ತೇಲಾಡುತ್ತಿದ್ದಾನೆ, ಗ್ರಹಗಳ ಮೇಲೆಲ್ಲ ತನ್ನ ವಸಾಹತು ಸ್ಥಾಪಿಸಿ, ದೇವರನ್ನು ಕಾಣುವ ತವಕದಲ್ಲಿದ್ದಾನೆ!

    ಮನುಷ್ಯ,ಮನುಷ್ಯನಿಗೆ ಇಂದು ಹೆದರುವಷ್ಟು ವಿಕಾಸದ ದಾರಿಯುದ್ದಕ್ಕೂ ಎಲ್ಲೂ ಹೆದರಿಲ್ಲ. ಕ್ರೂರ ಮೃಗಗಳೊಂದಿಗೆ ಬದುಕುವಾಗಲೂ. ಮುಂದುವರೆದ ನಾವು ಯೋಚಿಸದ,ಮಾಡದ ಕೆಲಸಗಳೇ ಇಲ್ಲ. ನಮ್ಮ ಹಸಿವಿನ ಅಗತ್ಯಗಳಿಗೆ ಒಂದು ಕಾಲದಲ್ಲಿ ಪ್ರಾಣಿಗಳನ್ನು ಬೇಟೆ ಆಡಿ ತಿನ್ನುತ್ತಿದ್ದ ನಾವು ಇಂದು ಮತ್ತೊಬ್ಬ ಮನುಷ್ಯನನ್ನು ಬೇಟೆ ಆಡಿ, ನಾವು ಬದುಕುವ ಮಟ್ಟಕ್ಕೆ ಬಂದಿದ್ದೇವೆ! ಪ್ರತಿಯೊಬ್ಬರೂ ಇಂದು ಯಾವುದೋ ಒಂದು ಧರ್ಮದ ಅನುಯಾಯಿಗಳು, ವಿಜ್ಞಾನ ಓದಿಕೊಂಡ ಪ್ರಖಾಂಡರು, ಪ್ರಪಂಚದ,ಸೃಷ್ಟಿಯ,ಜೀವನದ ಎಲ್ಲ ವಿದ್ಯೆಗಳನ್ನೂ ಬಲ್ಲವರು. ಕೆಲವರಂತೂ ಮುಕ್ತಿಗೆ ಇನ್ನೇನು ಹತ್ತಿರ ಇರುವವರು.

    ಪ್ರತಿಯೊಬ್ಬರೂ ಮುಕ್ತಿಯನ್ನರಸಿ, ಅವರವರ ದಾರಿ, ಮಾರ್ಗದರ್ಶಕರ ದಾರಿಗಳಲ್ಲಿ ನಡೆಯುವವರೇ. ಯಾರೊಬ್ಬರೂ ಮತ್ತೊಬ್ಬರ ಕೆಡಕನ್ನು ಕನಸಲ್ಲಿಯೂ ಊಹಿಸಿಕೊಳ್ಳದವರು. ಏನೇ ಸ್ವಲ್ಪ ಕೆಟ್ಟದ್ದು ಉಸಿರಾಡುತ್ತಿದೆ ಅಂತ ಅನ್ನಿಸಿದರೂ ಕಠೋರ ಆಚರಣೆಗಳೊಂದಿಗೆ ನಿಗ್ರಹಿಸಿಕೊಂಡು ದೇವರ ಪ್ರೀತಿಗೆ ಪಾತ್ರರಾಗಿ, ತಮ್ಮ ಸ್ಥಾನಗಳನ್ನು ಮುಕ್ತಿಯ ಪರಂಧಾಮದಲ್ಲಿ ಕಾಯ್ದಿರಿಸಿಕೊಳ್ಳಲು ಮಗ್ನರಾಗಿರುವವರು.ಆದರೂ ಈ ಭೂಮಿ ದಿನದಿನವೂ ನರಕದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಗೊಳಿಸುತ್ತಿರುವುದು ಏಕೆ?

    Photo by Simon Migaj on Unsplash

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    7 COMMENTS

    1. ಸ್ವಾಭಾವಿಕ ಮಾನವ ಸ್ವಭಾವ, ಮುಕ್ತಿ ಪಡೆಯುವ ಸಾಹಸ. ಅರಿಷಡ್ವರ್ಗಗಳನ್ನು ನಿಗ್ರಹಿಸಲು ಅಂತರ್ಯುದ್ಧದ ಅನುಭವ. ಮುಕ್ತಿಯ ಪರಿಕಲ್ಪನೆ ಇಲ್ಲದ ಇಂದಿನ ಪೀಳಿಗೆಗೆ ಮಾಡಿದ್ದೆ ಸರಿ ಎಂಬ ನಿಲುವು. ಅವಾಂತರಗಳಿಗರ ಆಹ್ವಾನ.
      ಎಲ್ಲಾ ಒಳಗೊಂಡ ಚಿಂತನೆಗೆ ಹಚ್ಚುವ ಸಮರ್ಥ ಲೇಖನ ಮಂಜುನಾಥ್.

    2. Nice article Manju. As usual your thoughts flow so seamlessly in Kannada

    3. ಮುಕ್ತಿ ಬಗ್ಗೆ ತುಂಬಾ ವಿವರವಾಗಿ ಹೇಳಿದೀರಾ ಮನುಷ್ಯ ಮೂಲತ ಅಸೆ ಹೊಂದಿದವ. ಹುಟ್ಟಿನಿಂದ ಸಾಯುವವರೆಗೂ ಒಂದಲ್ಲ ಒಂದು ಅಸೆ ಗೇ ಅದನ್ನು ಹೊಂದುವ ತನಕ ಹೋರಾಟ ನಡೆಸುತ್ತಾ ದೇವರು ಭಕ್ತಿ ಎನ್ನುವ ಕಡೆಗೆ ಗಮನ ಕೊಡದೆ ಲೌಕಿಕ ಆಸೆಗೆ ಗಮನ ನೀಡಿ. ಜೀವನದ ಮುಖ್ಯ ವಿಷಯಯದ ಬಗ್ಗೆ ನೀರಾಸಕ್ತಿ ಹೊಂದಿ. ಅರ್ಥ ವಿಲ್ಲದ ಜೀವನ ಸಾಗಿಸುತ ಬರುತ್ತಿದ್ದಾನೆ. Bm ಮೋಕ್ಷದ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಎಲ್ಲರು ಅರ್ಥ ಮಾಡಿಕೊಳ್ಳುವ ಹಾಗೆ ವಿವರಣೆ ನೀಡಿ ಮೋಕ್ಷ ಎನ್ನುವುದು ಈ ಪೃಥ್ವಿಯಲ್ಲಿ ಜನಿಸಿದ ಎಲ್ಲ ಮನುಷರಿಗೂ ಪ್ರಾಣಿಗಳಿಗೂ ಬಾಳ ಮುಖ್ಯ ಆದ್ರೆ ಈ ಮೋಕ್ಷದ ದಾರಿ ತುಂಬಾ ಕಠಿಣ ಆದ್ರೂ ಕೂಡ ಅದನ್ನು ಸಾದಿಸಿದ ಮಹಾ ಪುಣ್ಯವಂತರು ಜನಿಸಿದ ಈ ನಮ್ಮ ಭೂಮಿ ಧರ್ಮ ಅರ್ಥ ಮೋಕ್ಷಕ್ಕೆ ಹೆಸರು ಗಳಿಸಿದ ತಪೋಭೂಮಿ. ಇಂತ ದೇಶದಲ್ಲಿ ಜನುಮ ತಳೆದ ನಾವೆಲ್ಲರೂ ನಿಜವಾಗಿ ಅದೃಷ್ಟವಂತರು. ಧನ್ಯವಾದಗಳು. BM. ನಿಜವಾಗ್ಲೂ ನಿಮ್ಮ ಲೇಖನ ಅದ್ಭುತ. 🙏🙏

    4. ಅಬ್ಬಬ್ಬಾ, ಅರ್ಥೈಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ ಗೆಳೆಯ, ಲೇಖನವು ಅಗಾಧ ಜ್ಞಾನ ಭಂಡಾರದಿಂದ ಹೆಕ್ಕಿ ತೆಗೆದಂತಿದೆ. ಮತ್ತೆ ಮತ್ತೆ ಓದಿ ಅರ್ಥೈಸಿಕೊಳ್ಳಬೇಕಿದೆ.ನಿನ್ನ ಅನುಭವ ಮತ್ತು ನಿನ್ನಲ್ಲಿರುವ ವಿಶೇಷ ಜ್ಞಾನದ ಆಳದಿಂದ ಬರವಣಿಗೆಯು ಅತ್ಯುತ್ತಮವಾಗಿ ಮೂಡಿಬಂದಿದೆ.
      ಅಭಿನಂದನೆಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!