ಸಂತೆಬೆನ್ನೂರು ಫೈಜ್ನಟ್ರಾಜ್
ಕನ್ನಡವೆನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು-
ಕುವೆಂಪು ಅವರ ಈ ಮಾತು ನಮ್ಮೂರ, ನನ್ನಂತಹ ಎಷ್ಟೋ ಹುಡುಗರಿಗೆ ವರಪ್ರಸಾದ. ಕನ್ನಡ ಬರಿದೇ ಭಾಷೆ ಎಂದರೆ ಕ್ಲೀಷೆಯಾದೀತು. ಬಂಧನ,ಭಾವ,ಬೆಸುಗೆ,ಜೀವಧ್ವನಿ,ಸಂಚಲನ,ಶಕ್ತಿ,ಸ್ಪೂರ್ತಿ,ನೆರಳು,ಹೃದಯದೊಳಗಣ ಅಪಧಮನಿ,ಅಭಿಧಮನಿಯೂ ಹೌದು!
ಕನ್ನಡ ಭಾಷೆ ನಮ್ಮ ಮನೆಯಲ್ಲಿ ನಾ ಹುಟ್ಟುವ ಮುಂಚೆಯೇ ಮನೆಯ ಅಂಗಳ,ಹಿತ್ತಲು,ಮನೆ- ಮನಗಳಲ್ಲಿ ಮೈದಾಳಿತ್ತು.ನನ್ನಾಗಮನದ ನಂತರ ನನ್ನ ಕಿರು ಬೆರಳ ಹಿಡಿದು ನಡೆಸಿದ್ದು ಮನೆಯ ಕನ್ನಡವಾದರೂ ಓಡುವಂತೆ ಮಾಡಿದ್ದು ನಮ್ಮೂರ ಶ್ರೀವೆಂಕಟೇಶ್ವರ ಟಾಕೀಸು!
ನೆಲ,ಬೆಂಚು,ಛೇರ್ ಗಳೆಂಬ ಹಣಭೇದ ನೀತಿಯೊಂದಿಗೆ ವಿಭಾಗೀಕರಿಸಿದ ಆಸನಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿತ್ತು. ಪಿಯುಸಿ ದಾಟಿದರೂ ನೆಲ ಬಿಟ್ಟು ಕಡೆಗೆ ಬೆಂಚಿಗೂ ಬಡ್ತಿ ಪಡೆಯಲಿಲ್ಲ! ಹಣದ ಅಭಾವ ಸೇರಿದಂತೆ ಇಡೀ ಮೈಯನ್ನೇ ಆ ನೆಲಕರ್ಪಿಸಿ ಸಿನಿಮಾ ನೋಡೋ ಮಜನೇ ಬೇರೆ!
ನೆಲನಲ್ಲದೇ ಕಡೆಗೆ
ಬೇರೆ ನೆಲೆಯ
ಸೆಲೆಯಾದರೂ
ಎಲ್ಲುಂಟು ಸಂತೆಪ್ರಿಯ-
ಎಂಬ ವಚನದಂತೆ ಅಂಗಾತವಾಗಿ ಮಣ್ಣ ರಾಶಿ ದಿಂಬಾಗಿಸಿ ಮನೆಯಿಂದೊಯ್ದ ಟವಲೆಂಬ ರತ್ನಗಂಬಳಿಯ ಮೇಲೆ ಪವಡಿಸಿ ಕೈಗೆಟುಕೋ ಪರದೆ ಮೇಲೆ ಕಾಣೋ ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಹದ್ದಿನ ಕಣ್ಣು, ಗರುಡರೇಖೆ, ಗಂಡಭೇರುಂಡ, ಸನಾದಿ ಅಪ್ಪಣ್ಣ, ಶ್ರೀಕೃಷ್ಣದೇವರಾಯ, ಹೊಸನೀರು, ಬೆಂಕಿ ಬಿರುಗಾಳಿ, ಜೀವನ ಚಕ್ರ, ಗೀತಾ, ಆಕ್ಸಿಡೆಂಟ್, ಬಝಾರ್ ಭೀಮ, ಸಹೋದರರ ಸವಾಲ್, ಗೋವಾದಲ್ಲಿ ಸಿಐಡಿ ೯೯೯, ಚಂದನದಗೊಂಬೆ….ಅಬ್ಬಾ ಅದೆಷ್ಟು ಚಿತ್ರ ರತ್ನಗಳನ್ನು ಕಣ್ತುಂಬಿಕೊಂಡೆನೋ ನಾನರಿಯೆ!
ಸಿನಿಮಾಕ್ಕೆ ಟಿಕೇಟಿದ್ದರೂ ನಾವ್ ಮಾತ್ರ ಎಂದೂ ಟಿಕೇಟು ಕೊಂಡವರಲ್ಲ; ದುಡ್ ಕೊಟ್ಟೇ ಹೋದವರು! ನೆಲಕ್ಕೆ ತಿಕೀಟು ಒಂದುವರೆ ರೂಪಾಯಿ,ಬೆಂಚು ಎರೆಡು ರೂ, ಛೇರ್ ಮೂರ್ ರುಪಾಯಿ!
ಆ ನೆಲಕ್ ಕೊಡೋ ಅಷ್ಟು ದುಡ್ಡಿಲ್ಲ, ಮನೆಯ ರಾಗಿ ಕದ್ದು ಅಂಗಡಿಗೆ ಮಾರಿದ್ರೆ ಬರೋ ರೊಕ್ಕ ಎಂಭತ್ತು ಪೈಸೆ. ಅದನ್ನೇ ಹಿಡಿದು ನೆಲದ ಪ್ರವೇಶ ದ್ವಾರಕ್ಕೆ ಹೋದರೆ ‘ಚನ್ನಮ್ಮ’ ( ಈಗಿನ ಟಾಕೀಸು ಮಾಲೀಕ ಪ್ರಕಾಶಣ್ಣರ ಮಾತೃಶ್ರೀ!) ಬಗಲಲ್ ಚರ್ಮದ ಹಳೇಚೀಲ ಹಿಡಿದು ತಿಕೀಟು ತಂದವರ ಕಳಿಸಿ ಇಲ್ಲದವರನ್ನು ವಾಪಸ್ ಕಳುಹಿಸುತ್ತಿದ್ದರು! ಟಾಕೀಸು ಮಾಲಕಿ ಚನ್ನಮ್ಮನವರನ್ನು ಬಳಿ ಕಾಡಿ, ಬೇಡಿ, ಗೋಗರೆದು ಮೊದಲ ಫೈಟ್ ಅಥವಾ ಹೀರೋನ ಮೊದಲ ಇಂಟ್ರಡಕ್ಷನ್ ಹಾಡು ಆದಮೇಲೆ ಒಳನುಗ್ಗುತ್ತಿದ್ದೆವು.
ಹಾಗೆ ಹೋಗಿ ಹೋಗಿ ರಾಜ್‌ಕುಮಾರ್, ವಿಷ್ಣುವರ್ಧನ್,ಶಂಕರ್ ನಾಗ್, ಅನಂತ್ ನಾಗ್, ಅಂಬರೀಷ್, ವಜ್ರಮುನಿ, ಸು.ಕೃ.ಅರಸ್, ಅಶ್ವಥ್,ಬಾಲಕೃಷ್ಣ, ನರಸಿಂಹರಾಜು, ಆರತಿ, ಭಾರತಿ, ಮಂಜುಳಾ, ಸತ್ಯಭಾಮ, ಶಾಂತಮ್ಮ, ಕೆ.ವಿಜಯ, ಪದ್ಮಪ್ರಿಯ, ಕೆ.ಡಿ ನಾಗಪ್ಪ, ಸುದರ್ಶನ್…ಮುಂತಾದ ಭಾವಬಂಧುಗಳನ್ನ ನಮ್ಮ ಮನೆಯವರೇನೋ, ನಮ್ಮ ಬೀದಿಯ ಅಣ್ಣ ತಮ್ಮಂದಿರೇನೋ ಎಂಬಂತೆ ಪರಿಚಯ ಮಾಡಿಕೊಂಡು ಪಕ್ಕದಲ್ಲೇಯೇ ಹಾವು ಹರಿದರೂ ಗಮನಿಸದೇ ಪರದೆ ನೋಡಿ ಆನಂದ ಪಡುತ್ತಿದ್ದೆವು.
ನಮ್ಮ ಊರೇ ಸಂತೆಬೆನ್ನೂರು. ಸಂತೆಗೆ ಹೆಸರಾದ ಊರು. ಪ್ರತೀ ಗುರುವಾರ ಸಂತೆ. ಸಂತೆದಿನ ಸಿನಿಮಾ ಬದಲಾಗಲೇಬೇಕು. ಸುತ್ತಾ ಹದಿನೆಂಟು ಹಳ್ಳಿಗೆ ನಮ್ಮೂರ ಸಂತೆಯೇ ಆಧಾರ. ಅ ಗುರುವಾರದ ಬೆಳ್ ಬೆಳಿಗ್ಗೆ ನಮ್ಮೂರ ಹಳೆಯ ಬಸ್ಟ್ಯಾಂಡಿನಲ್ಲಿ ಎಡಬಲಕ್ಕಿರೋ ದೊಡ್ಡ ದೊಡ್ಡ ಬೇವಿನನ ಮರಗಳ ಕೊಂಬೆಗಳಿಗೆ ಸಿನಿಮಾ ವಾಲ್ ಪೋಸ್ಟ್ ಹಚ್ಚುತ್ತಿದ್ದರು. ಎದ್ದವನೇ ನಾನು ಹಲ್ಲೂ ಉಜ್ಜದೇ ಬರಿಗೈಯ ಮೋಟಾರು ಸ್ಟಾಟ್ ಮಾಡಿ ಹೊಂಟರೆ ಆ ಬೇವಿನ ಮರದ ಹತ್ತಿರವೇ ನಿಲ್ತಾ ಇದ್ದದ್ದು; ಅದೂ ಅರ‍್ಧ ಕಿ.ಮೀ ನಮ್ಮ ಮನೆಗೆ! ಆ ವಾಲ್ ಪೋಸ್ಟಿಳೀಸಿ ಹಳೆಯ ಹಾಳೆಯ ಮೇಲೆ ಹೊಗೆ ಅನ್ನದ ಗಂಜಿ ಅಥವಾ ಮೈದಾಹಿಟ್ಟಿನ ಗಂಜಿ ಹಾಕಿ ಕಟ್ ಪೀಸ್ ಹಚ್ಚುತ್ತಿದ್ದರೆ ನೋಡಲು ನನ್ನಂಥಾ ಹುಡುಗರ ದಂಡು ಅಲ್ಲಿ ವೃತ್ತಾಕಾರದಿ ಕೂಡಿರ್ತಿತ್ತು!
ಒಂದು ಪೀಸ್ ಹಚ್ಚಿದರೆ ಒಂದೇ ಅಕ್ಷರ ಕಾಣೋದು. ಅದರ ಆಧಾರದ ಮೇಲೆ ಸಿನಿಮಾ ಹೆಸರ ಗೆಸ್ಸಿಂಗ್ ಆರಂಭ ನಮ್ ನಮ್ಮೋಳಗೇ ಚಾಲು!ಇಡೀ ಪೋಸ್ಟರ್ ಅಂಟಿಸಿ ಅದಕ್ಕೆ ನೀಲಿ ಕಲಿಸಿದ ಬಣ್ಣದಿಂದ ದಿನ ಮೂರು ಆಟ, ಸಮಯ, ಟಾಕೀಸಿನ ಹೆಸರು ಬರೆಯುವಷ್ಟರಲ್ಲಿ ನಾ ಮತ್ತೆ ನನ್ನ ಬರಿಗೈ ಮೋಟಾರು ಬೈಕ್ ಚಾಲು ಮಾಡಿ ಇಡೀ ನಮ್ಮ ಹಟ್ಟಿಗೆ ಇವತ್ತು ಇಂಥಾ ಸಿನಿಮಾ ಹಾಕಿದ್ದಾರಪ್ಪೋ ಅಂತ ಕೂಗಿ ಹೇಳಿ ನಂತರ ಹಲ್ಲು, ಮುಖ, ಬೆಲ್ಲದ ಚಹಾ ಆಂತ ಹೋಗ್ತಾ ಇದ್ದದ್ದು!
ಜಗತ್ಪ್ರಳಯ ಆದ್ರೂ ನಮ್ಮ ಮೊದಲ ಶೋ ತಪ್ಪುತ್ತಿರಲಿಲ್ಲ. ಹಾಗೆ ನೋಡಿದ ಸಿನಿಮಾಗಳು ಬೇರೆಯವರಿಗೆ ಅದೇನು ಕಲಿಸಿತೋ ನನಗಂತೂ ಕನ್ನಡ ಕಲಿಸಿತು!
ಕನ್ನಡ? ಸಿನಿಮಾದಿಂದ? ಮೂಗು ಅರಳಿಸಬೇಡಿ ಹೌದು, ನಮ್ಮ ವೆಂಕಟೇಶ್ವರ ಟಾಕೀಸಿನಲ್ಲಿ ಬಂದ ಯಾವ ಸಿನಿಮಾ ಬಿಡದೇ ನೋಡಿ,ಅದರಲ್ಲೂ ಡಾ.ರಾಜ್ ಅವರ ಪ್ರತೀ ಸಿನಿಮಾದಲ್ಲೂ ಅವರ ಅಭಿನಯ,ಆಂಗ್ಲ ಪದ ಬಳಕೆ ಇಲ್ಲದ ವಾಕ್ಯಗಳು, ಸ್ಪಷ್ಟ ಉಚ್ಚಾರ, ದನಿಯ ಏರಿಳಿತ, ನಿರರ್ಗಳ ವಾಗ್ಝರಿ, ಉತ್ತಮ ವಾಕ್ಪಟುತ್ವ ….ಇವೆಲ್ಲವೂ ನನಗೆ ಕನ್ನಡ ಕಲಿತರೆ ಹೀಗೆ ಕಲಿಯಬೇಕು ಅಂತನ್ನಿಸಿ ಸಿನಿಮಾ ಗೀಳಿಗೆ ಬಿದ್ದೆ!
ಮನೆ ಭಾಷೆ ಉರ್ದುವಾದರೂ ಅಣ್ಣಂದಿರು, ಅಕ್ಕ ಎಲ್ಲ ಕಲಿತದ್ದು ಕನ್ನಡ ಶಾಲೆ, ಕನ್ನಡ ಮಾಧ್ಯಮ. ಆದರೂ ಈಗಾಗಲೇ ‘ಸಾಬರಗನ್ನಡ’ ಅಂತ ಭಾಷೆ ಬಳಕೆ ಅಸ್ತಿತ್ವದಲ್ಲಿತ್ತು. ಅಂದರೆ ‘ಸ’ ಕಾರದ ಪದಗಳಿಗೆ ‘ಇ’ ಕಾರ ಸೇರಿಸಿ ಇಸ್ಕೂಲು, ಸೈಂಕಲ್, ಇಸ್ಟೈಲ್, ಇಸ್ಕ್ರೂ ಡೈವರ್…ಮತ್ತು ತಗಂಡಿ, ಬಂದಿ, ಹೋಗ್ಬಿಟ್ಟಿ..ಗಳ ಪದಗಳು ನನ್ನನ್ನು ಅವಮಾನದ ಕೂಪಕ್ಕೆ ನೂಕಿದ್ದವು! ಆ ಕೂಪದಿಂದ ಸ್ವಲ್ಪ ಮಟ್ಟಿಗೆ ಎತ್ತಿದ ಮಹನೀಯ ಡಾ.ರಾಜ್ ಕುಮಾರ್! ಜೊತೆಗೆ ನಮ್ಮೂರ ಟಾಕೀಸು!
ಕನ್ನಡ ಕನ್ನಡಿಗರ ಅಸ್ಮಿತೆ, ಕರ್ನಾಟಕ ವಾಸಿಗಳ ಜೀವನಾಡಿ, ಇಲ್ಲಿನ ನೆಲ- ಜಲ- ಆಹಾರ ಸೇವಿಸುವ ಸಕಲರ ಜೀವದ್ಭಾಷೆ. ಅದನ್ನು ಯಾರೂ ಮರೆಯಬಾರದು. ನನ್ನ ತಿಲ ಮಾತ್ರದ ಕನ್ನಡ ಕಲಿಕೆಗೆ ನಮ್ಮ ಸಿನಿಮಾಗಳು ಕಾರಣ ಎಂದಿದ್ದೇನೆ, ಇದು ಒಂದು ಕಾಲದ ಅಭಿಪ್ರಾಯ, ಅಂದಿನ ಭಾಷೆ ಸಂಸ್ಕಾರದ ಚಲನಚಿತ್ರಗಳಾದ್ದರಿಂದ ಮಾತ್ರ. ಇದೇ ಮಾತನ್ನು ಇಂದಿನ ಬಹುಪಾಲು ಸಿನಿಮಾಗಳಿಗೆ ಅನ್ವಯವಾಗುವುದೇ ಇಲ್ಲ.
ಇಂದಿನ ಮಕ್ಕಳು ಡಾ. ರಾಜ್ ಅವರ ಹತ್ತು ಸಿನಿಮಾಗಳು ಆಕ್ತಿಯಿಂದ ಕೂತು ನೋಡಿದರೆ ಕನ್ನಡ ಸ್ಪಷ್ಟವಾಗಿ ಮಾತಾಡುವುದನ್ನು ಕಲಿಯುವರೇನೋ.. .. ಮತ್ತು ಕೆಲವು ಸಿನಿಮಾ ಮಂದಿ ಅಂದಿನ ಸಿನಿಮಾ, ಅಣ್ಣಾವ್ರ ಸಿನಿಮಾ, ಅಂದಿನ ಸಂಭಾಷಣೆ, ಗೀತರಚನೆ, ಸಂಗೀತ ನೋಡಿದರೆ, ಕೇಳೀದರೆ ಅದೇ ಭಾಷೆ ಪ್ರಯೋಗಕ್ಕೆ, ಕನ್ನಡ ಭಾಷಾ ಶುದ್ಧಿಗೆ ಅಂದಿನ ಸಿನಿಮಾ ಭಾಷೆಯೇ ಪಠ್ಯವಾದೀತೇನೋ….!
ಸಂತೆಬೆನ್ನೂರು ಫೈಜ್ನಟ್ರಾಜ್ ವೃತ್ತಿಯಿಂದ ಶಿಕ್ಷಕ. ಪ್ರವೃತ್ತಿಯಿಂದ ಕವಿ, ಕಥೆಗಾರ , ಸಾಹಿತಿ.
ಖುಷಿ ಆತು.
ಬಿಡುಗಡೆಯಾದ ಹೊಸ ಸಿನೆಮಾ ದಾವಣಗೆರೆಗೆ ಹೋಗಿ ನೋಡೋಕಾಗಲ್ಲಾ ಅಂತಾ ನಿಮ್ಮೂರಿನ (ಸಂತೇಬೆನ್ನೂರಿನ) ವೆಂಕಟೇಶ್ವರ ಟಾಕೀಸಿಗೆ ಬಂದು ನೋಡ್ತಾ ಇದ್ದಿದ್ದು ಇನ್ನೂ ಅಚ್ಚ ಹಸಿರಾಗಿ ಉಳಿದಿದೆ ನಮ್ಮಲ್ಲಿ..
ಅದ್ಭುತವಾದ ಲೋಕಕ್ಕೆ ಕರೆದೋಯ್ದಿರಿ. ನಿಮ್ಮ ಕನ್ನಡ ಪ್ರೇಮಕ್ಕೆ ನಮೋ ನಮಃ. ನಿಮ್ಮಂಥ ಕತೆಗಾರ, ಲೇಖಕ, ಕವಿಯನ್ನು ಪಡೆದ ಕನ್ನಡಿಗರು ಎಷ್ಟು ಧನ್ಯರೋ ನಿಮ್ಮಂಥ ಪ್ರತಿಭಾವಂತ ಸ್ನೇಹಿತರನ್ನು ಪಡೆದ ನಾವೂ ಸಹ ಅಷ್ಟೇ ಧನ್ಯರು….👏👏👏👏🥰🥰🥰 ಇಷ್ಟೊಂದು ಸೃಜನಶೀಲತೆಯ ಶಿಕ್ಷಕರನ್ನು ಪಡೆದ ನಿಮ್ಮ ಅಸಂಖ್ಯಾತ ವಿದ್ಯಾರ್ಥಿ ವೃಂದ ಅದೆಷ್ಟು ಭಾಗ್ಯವಂತರೋ ಎನಿಸುತಿದೆ. ಲೇಖನ ತುಂಬಾ ಆಪ್ತವಾಗಿದೆ ಸರ್…🙏🙏🙏💐💐💐
ನಿಮ್ಮ ಅನುಭವ ಎಲ್ಲಾರ ಅನುಭವ ವಾಗಿದೆ ಆದರೆ ನಿಮ್ಮ ಬರವಣಿಗೆಯ ರೂಪದಲ್ಲಿರುವ ಇಂದಿನ ತಲೆಮಾರಿನ ಅವರನ್ನು ತಲುಪಿದರೆ ನಾಡು ನುಡಿ ಸಾಹಿತ್ಯ ಕಲಿಯುವವರಿಗೆ ಮಾರ್ಗ ವಾಗಲಿದೆ ಅದೇನೇ ಇರಲಿ ನಿಮ್ಮಂತ ಕನ್ನಡದ ಗುರುಗಳನ್ನು ಪಡೆದ ನಮೂರ ಇಂದಿನ ಮಕ್ಕಳೇ ಧನ್ಯ
So simple…..so chaste….so natural that it is simply simple and yet simply inspiring.
So simple….so chaste….so nice that it is simply simple and yet inspiring.
ಬಾಲ್ಯದ ಸಿನಿಮಾ ವೀಕ್ಣಣೆಯ ಜವಾರಿ ಅನುಭವದೊಂದಿಗೆ ಕನ್ನಡ ಕಲಿಕೆಯ ಲೇಖನ ಅದ್ಬುತ ವಾಗಿದೆ
ನೀ ಹೇಳಿದ್ದು ದಿಟ ಐತಿ. ಹುರಿದ ಶೇಂಗಾ ತಿಂದದ್ದು, ಕರೆಂಟು ಹೋದಾಗ ಶಿಳ್ಳೆ ಹಾಕಿ ಜನರೇಟರ್ ಸ್ಟಾರ್ಟ್ ಮಾಡಲು & ರೀಲ್ ಕಟ್ ಮಾಡಿದ ಅಂತ ಕಾಲಿಲ್ಲದ ನಾಗಣ್ಣ ನ ಹೆಸರು ಕೂಗಿದ್ದೂ ಅವೆಲ್ಲ ಈಗ ನಡೆದಂತೆ ನೆನಪಿನಂಗಳದಲ್ಲಿ ಸಿಹಿಯಾಗಿ ಇತಿಹಾಸ ಸೇರಿವೆ ಅಲ್ವಾ ಫೈಜಣ್ಣ?
ಆಪ್ತ ಬರಹ ಗುರುಜಿ
ಧನ್ಯವಾದಗಳು
ಮೊದಲು ನಿಮ್ಮ ಕನ್ನಡಾಭಿಮಾನ ಕ್ಕೆ ಶರಣು. ಸಿನಿಮಾ ಮೂಲಕ ಕನ್ನಡ ಕಲಿತು. ಕಾವ್ಯ. ಕವನ ಬರೆಯುವ ನಿಮಗೆ 🙏. ಸೊಗಸಾಗಿ ನಿಮ್ಮ ಅನುಭವ ಗಳನ್ನು ಹಂಚಿಕೊಂಡಿದೀರಿ. ಧನ್ಯವಾದಗಳು. ಸರ್ 🙏
Abbabbaa en memory ittiyo maharaya, nandu ade kathe aithe. Naanu ninna hinde mundene irthidde aadre gotthagilla aste. Yakandre namma batch bere ninna batch bere alva. Kaddu thappiskondu hogi parsannanige challehannu tinnsiddu helilla.
ನಿಜ .ಹಳೇ ಸಿನಿಮಾ ನೋಡುವಾಗ ಬರೀ ಮನರಂಜನೆ ಮಾತ್ರ ಇರ್ತಾ ಇರಲಿಲ್ಲ ತಿಳಿದುಕೊಂಡು ಕಲಿಯುವಂತದು ಬೇಕಷ್ಟು ಇರುತಿತ್ತು.ಶುದ್ದ ಕನ್ನಡ ಕೇಳಬಹುದಿತ್ತು. ಅದೇ ರೀತಿ ಕಲಿತು ರೂಢಿಸಿಕೊಂಡು ಕನ್ನಡದ ಕವಿಯಾಗಿರುವ ನಿಮಗೆ ವಂದನೆಗಳು.
ಸರ್ ,ಬರಿಗೈ ಮೋಟಾರು ಬೈಕ್ ಚಾಲು ಮಾಡಿ ಇಡೀ ಹಟ್ಟಿಗೆ ಸುದ್ದಿ ಮುಟ್ಟಿಸುತ್ತಿದ್ದ ವಿಷಯ ಕೇಳಿ ಮನೋಲ್ಲಾಸವಾಯ್ತು. ನಿಮ್ಮ ಲೇಖನದಲ್ಲಿನ ಒಂದೊಂದು ಪದಗಳಲ್ಲಿ ರಕ್ತಗತವಾದ ಕನ್ನಡ ಪ್ರೀತಿಯು ಎದ್ದು ಕಾಣುತ್ತದೆ
ನಿಮ್ಮಂಥ ಕೂಸನ್ಬು ಹೆತ್ತ ಕನ್ನಡಮ್ಮ ಧನ್ಯ. ಬರಹದ ಪ್ರತಿ ಪದವೂ ಮಾನ್ಯ. ಕನ್ನಡವನ್ನು ನಿಮ್ಮಂಥ ಕನ್ನಡ ಪ್ರೇಮದ ಮೇಷ್ಟ್ರುಗಳು ಕಲಿಸಿದರೆ ನನ್ನ ತಾಯ್ನುಡಿ ಇನ್ನೂ ಬಹುಕಾಲ ಉಳಿದೀತು ಎಂಬ ತುಂಬು ಭರವಸೆ ನಂಗೆ.