26.2 C
Karnataka
Thursday, November 21, 2024

    ವಿಶ್ವ ಆಹಾರ ದಿನ: ಪಾಲಿಫೆಮಸ್ ಲಾರ್ವಾದಿಂದ ಕಲಿಯಬೇಕಾದ ಒಂದು ಪಾಠ

    Must read

    ‘ಅತ್ಯಂತ ಹೊಟ್ಟೆಬಾಕ’ ಎಂದು ಗುರುತಿಸಿಕೊಂಡಿರುವ ಪಾಲಿಫೆಮಸ್ ಪತಂಗದ ಮರಿಗಳು ಎಷ್ಟೇ ಪ್ರಮಾಣದಲ್ಲಿ ತಮ್ಮ ಆಹಾರವನ್ನು ತಿಂದರೂ ಒಂದು ಸಲ ತೃಪ್ತಿ ಆದ ನಂತರ ಅವುಗಳು ಮತ್ತೆ ತಿನ್ನಲು ಹೋಗದು. ಆದರೆ…, ಮಾನವನ ಆಸೆ, ದುರಾಸೆಗೆ ಒಂದು ಮಿತಿ ಇದೆಯೇ..?

    ಹೊಟ್ಟೆಬಾಕರಿಗಾಗಿ ಅಲ್ಲಿ ಇಲ್ಲಿ ಕೆಲವೊಂದು ಸ್ಪರ್ಧೆಗಳನ್ನಿಡುವುದುಂಟು. ಇಡ್ಲಿ ಪ್ರಿಯರಿಗೆ  ಇಡ್ಲಿ ತಿನ್ನುವ ಸ್ಪರ್ಧೆ, ಬಾಳೆಹಣ್ಣು ಪ್ರಿಯರಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, ಐಸ್ಕ್ರೀಂ, ಉಪ್ಪಿಟ್ಟು…, ಹೀಗೆ. ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ತಿಂದು ಬಹುಮಾನ ಗಿಟ್ಟಿಸಿಕೊಳ್ಳುತ್ತಾರೆ. ಒಂದೇ ಸಲಕ್ಕೆ 60-70 ಇಡ್ಲಿ ತಿಂದು ತೇಗುವ, ನೂರಿನ್ನೂರು ಬಾಳೆಹಣ್ಣುಗಳನ್ನು ತಿಂದು ಜೀರ್ಣಿಸಿಕೊಳ್ಳುವ ಛಲಗಾರರೂ ನಮ್ಮಲ್ಲಿ ಇದ್ದಾರೆ…! ಆದರೆ ಇಲ್ಲೊಂದು ಜೀವಿಯ ಹೊಟ್ಟೆಬಾಕತನ ನೋಡಿದರೆ ರಾಶಿ ರಾಶಿ ಇಡ್ಲಿ, ಬಾಳೆಹಣ್ಣು ತಿನ್ನುವ   ಛಲಗಾರರು ಬಿಡಿ, ಬಂಡಿ ಅನ್ನವನ್ನು ತಿನ್ನುತಿದ್ದ  ಭಕಾಸುರರು  ಕೂಡ ತಿಂದ ಅನ್ನವನ್ನು ಕಕ್ಕಬಹುದು..! 

    86,000 ಪಟ್ಟು ಆಹಾರ ತಿನ್ನುತ್ತದೆ

    ಉತ್ತರ ಅಮೇರಿಕಾದಲ್ಲಿರುವ ‘ಪಾಲಿಫೆಮಸ್ (Polyphemus) ಎನ್ನುವ ಒಂದು ಪತಂಗದ ಮರಿಯು ತತ್ತಿಯಿಂದ ಹೊರಬಂದ ಆರಂಭದ 48 ಗಂಟೆಗಳಲ್ಲಿ, ಅಂದರೆ ಬಾಲ್ಯಾವಸ್ಥೆಯಲ್ಲಿ ತನ್ನ ದೇಹ ತೂಕದ 86,000 ಪಟ್ಟು ಆಹಾರವನ್ನು ತಿನ್ನುತ್ತದೆ!! ಮನುಷ್ಯರಿಗೆ ಹೋಲಿಸಿದರೆ ಇದು ಎಷ್ಟಾಗುತ್ತದೆ ಗೊತ್ತೇ..? 3.17 ಕಿಲೋಗ್ರಾಂ ತೂಕವಿರುವ ಒಂದು ಮಗು 273 ಟನ್ನುಗಳಷ್ಟು ಆಹಾರ ತಿನ್ನುವಷ್ಟಕ್ಕೆ ಸಮ! ಈವರೆಗೆ ಗುರುತಿಸಿರುವ ಒಟ್ಟು 1,60,000 ಪತಂಗ (Moth) ಪ್ರಭೇದಗಳಲ್ಲಿ ಅತ್ಯಂತ ದೊಡ್ಡ ಗಾತ್ರದ ಪತಂಗ ಎಂಬ ಹೆಗ್ಗಳಿಕೆಯೂ ಈ ‘ ಪಾಲಿಫೆಮಸ್’ಗೆ ಇದೆ! ರೆಕ್ಕೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಸುಮಾರು 15 ಸೆಂಟಿಮೀಟರ್ ವಿಸ್ತೀರ್ಣದಷ್ಟು ದೊಡ್ಡದಾಗಿ ಬೆಳೆಯುವ ಪಾಲಿಫೆಮಸ್ ಬಾಲ್ಯಾವಸ್ಥೆಯಲ್ಲಿ ಬೇರೆ ಪತಂಗಗಳಿಗಿಂತ ಹೆಚ್ಚು ಆಹಾರ ಬೇಕಾಗಿರುವುದು ಸಹಜವೇ. ಆದರೆ ದೇಹ ಗಾತ್ರಕ್ಕನುಗುಣವಾಗಿ ಇದು ತಿನ್ನುವ ಆಹಾರದ ಪ್ರಮಾಣ ಮಾತ್ರ ಊಹೆಗೂ ಮೀರಿದ್ದು. ಹಾಗಿದ್ದರೆ,  ಪಾಲಿಫೆಮಸ್ ಪತಂಗದ ಮರಿಯು ಅಷ್ಟೊಂದು ಪ್ರಮಾಣದಲ್ಲಿ ಆಹಾರ ತಿನ್ನುವ ಅದರ ಹುಟ್ಟುಗುಣದ ಗುಟ್ಟೇನು? ಬನ್ನಿ ನೋಡೋಣ. 

    ಪಾಲಿಫೆಮಸ್

    ಕೀಟಗಳ ಜೀವನ ಚಕ್ರದಲ್ಲಿ ಮುಖ್ಯವಾಗಿ ‘ಲಾರ್ವ (Larva) ಮತ್ತು ‘ಪ್ಯೂಪ’ (Pupa) ಎಂಬ ಎರಡು ಹಂತಗಳಿವೆ. ಪ್ಯೂಪ ಹಂತದಲ್ಲಿ ಸ್ವತಂತ್ರವಾಗಿ ಹಾರಬಲ್ಲ ಕೀಟವಾಗಿ ರೂಪುಗೊಳ್ಳಲು ಬೇಕಾದ ದೇಹದ ಭಾಗಗಳೆಲ್ಲಾ ಬೆಳವಣಿಗೆಯಾದರೆ, ಲಾರ್ವ ಹಂತದಲ್ಲಿ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತವೆ. ತಯಾರಿಯ ಒಂದು ಮುಖ್ಯ ಅಂಶವೇ ಸಾಕಷ್ಟು ಆಹಾರವನ್ನು ತಿನ್ನುವುದು. ಏಕೆಂದರೆ, ಮುಂದಿನ ‘ಪ್ಯೂಪ’ ಹಂತ ಕೇವಲ ಬೆಳವಣಿಗೆಗೆ ಮೀಸಲಾಗಿರುವುದರಿಂದ ಈ ಸಮಯದಲ್ಲಿ ಏನನ್ನೂ ತಿನ್ನಲಾಗದು. ಪ್ಯೂಪದ ಬೆಳವಣಿಗೆಯ ಕೊನೆಯ ಹಂತದಲ್ಲಿ ಸ್ವತಂತ್ರ ಕೀಟವಾಗಿ ರೂಪುಗೊಂಡು ಹಾರಿಹೋಗುತ್ತದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ರೂಪ ಪರಿವರ್ತನೆಗೊಳ್ಳುವ (Metamorphosis) ಎಲ್ಲಾ ಕೀಟ ಪ್ರಭೇದಗಳಲ್ಲೂ ನಡೆಯುತ್ತದೆ. ‘ಪಾಲಿಫೆಮಸ್’ ಪತಂಗ ಸಂಪೂರ್ಣ ರೂಪಾಂತರಗೊಳ್ಳುವ ಕೀಟಗಳಲ್ಲಿ ಒಂದು. ಆದರೆ, ಈ ಪತಂಗ ಮಾತ್ರ ಲಾರ್ವ ಹಂತದಲ್ಲಿ ಅತಿ ಹೆಚ್ಚು ಆಹಾರವನ್ನು ತಿನ್ನುವ ಸಾಮರ್ಥ್ಯವನ್ನು ಪಡೆದು ಕೀಟಗಳಲ್ಲಿ ಮಾತ್ರವಲ್ಲ, ಪ್ರಾಣಿ ಪ್ರಭೇದಗಳಲ್ಲೇ ಅತ್ಯಂತ ಹೊಟ್ಟೆಬಾಕ ಎಂದು ಗುರುತಿಸಿಕೊಂಡಿದೆ.

    ಅತ್ಯಂತ ಹೊಟ್ಟೆಬಾಕ

    ಪಾಲಿಫೆಮಸ್ ಪತಂಗದ ಮರಿ ಅತ್ಯಂತ ಹೊಟ್ಟೆಬಾಕ ಎಂಬ ಹೆಗ್ಗಳಿಕೆ ಹೊಂದಿರುವುದೇನು ಸರಿ. ಆದರೆ, ಎಲ್ಲಾ ಪ್ರಾಣಿಗಳಿಗಿಂತ ಭೂಮಿಯಲ್ಲಿ ಉತ್ಪನ್ನವಾಗುವ ಆಹಾರ ಮತ್ತು ಸಂಪನ್ಮೂಲಗಳನ್ನು ಅತಿ ಹೆಚ್ಚು ಕಬಳಿಸುತ್ತಿರುವ ಪ್ರಭೇದವೊಂದಿದೆ, ಅದುವೇ ‘ಹೋಮೋ ಸೆಪಿಯನ್ಸ್’ (Homo sapiens). ‘ಹೋಮೋ ಸೇಪಿಯನ್ಸ್’ ಅಂದರೆ ಕೇಳಿರದ ಯಾವುದೋ ಒಂದು ಪ್ರಾಣಿ ಅಲ್ಲ, ಇದು ಮನುಷ್ಯನಿಗೆ ‘ನೀಡಿರುವ’ ವೈಜ್ಞಾನಿಕ ಹೆಸರು.  ಹೋಮೋ ಸೇಪಿಯನ್ಸ್  ಲ್ಯಾಟಿನ್ ಮೂಲದ ಪದಗಳಾಗಿದ್ದು, ಅದರ ಅರ್ಥ ‘Wise man’ ಅರ್ಥಾತ್, ‘ವಿವೇಕವುಳ್ಳ ಮನುಷ್ಯ’

    ಮನುಷ್ಯರ ಆಹಾರದ ಬೇಡಿಕೆ 

    ಜನಸಂಖ್ಯೆ ಏರುತ್ತಿದ್ದಂತೆ ಮನುಷ್ಯರ ಆಹಾರದ ಬೇಡಿಕೆಯೂ ಏರುತ್ತಿದೆ. ಮಾನವನ ಅವಶ್ಯಕತೆಗಳನ್ನು ಪೂರೈಸುವ ಭೂಮಿಯ ಸಂಪನ್ಮೂಲವನ್ನು ಅಳೆಯುವ ಮಾನದಂಡವನ್ನು ‘ಜೀವಪರಿಸರದ ಹೆಜ್ಜೆಗುರುತು’ (Ecological footfrint) ಎನ್ನಲಾಗುತ್ತದೆ. ಆ ಹೆಜ್ಜೆಗುರುತು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ; ಎಷ್ಟೆಂದರೆ, ಭೂಮಿಯ ನವೀಕರಿಸುವ ಸಾಮರ್ಥ್ಯಕ್ಕಿಂತಲೂ ವೇಗದಲ್ಲಿ ಸಂಪನ್ಮೂಲಗಳು ಮಾನವನ ದುರಾಸೆಯಿಂದಾಗಿ ಬರಿದಾಗುತ್ತಿದೆ. ‘ಜಾಗತಿಕ ಹೆಜ್ಜೆಗುರುತಿನ ಜಾಲ’ (Global Footprint Network) 2007 ರಲ್ಲಿ ಪ್ರಕಟಿಸಿದ ಸಂಶೋಧನಾಧರಿತ ವರದಿಯ ಪ್ರಕಾರ ಭೂಗ್ರಹವು ನವೀಕರಿಸಲು ಬೇಕಾದ ಸಮಯಕ್ಕಿಂತ 1.5 ವೇಗದಲ್ಲಿ ಮಾನವನು ಭೂಸಂಪನ್ಮೂಲಗಳನ್ನು ಸ್ವಪ್ರಯೋಜನಕ್ಕಾಗಿ ಬಳಸುತ್ತಿದ್ದಾನೆ. ‘ಅತ್ಯಂತ ಹೊಟ್ಟೆಬಾಕ’ ಎಂದು ಗುರುತಿಸಿಕೊಂಡಿರುವ ಪಾಲಿಫೆಮಸ್ ಪತಂಗದ ಮರಿಗಳು ಎಷ್ಟೇ ಪ್ರಮಾಣದಲ್ಲಿ ತಮ್ಮ ಆಹಾರವನ್ನು ತಿಂದರೂ ಒಂದು ಸಲ ತೃಪ್ತಿ ಆದ ನಂತರ ಅವುಗಳು ಮತ್ತೆ ತಿನ್ನಲು ಹೋಗದು. ಆದರೆ…, ಮಾನವನ ಆಸೆ, ದುರಾಸೆಗೆ ಒಂದು ಮಿತಿ ಇದೆಯೇ..?

    ಒಂದು ಕಡೆ ಮಾನವ ಭೂಸಂಪನ್ಮೂಲಗಳನ್ನು ಮಿತಿಮೀರಿ ಬಳಸುತ್ತಿದ್ದರೆ, ಅಣಕವೆನ್ನುವಂತೆ ಇನ್ನೊಂದು ಕಡೆ ಜಗತ್ತಿನಾದ್ಯಂತ ಶೇಕಡಾ   50 ರಷ್ಟು ಜನರು ಹಸಿವು ಮತ್ತು ಪೌಷ್ಟಿಕಾಂಶಗಳ ಕೊರತೆಯಿಂದ ಸಾಯುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿಯುತ್ತದೆ. 2011ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ‘ಹಸಿವಿನ ಜಾಗತಿಕ ಸ್ಯೂಚಂಕ’ದ ಸಮೀಕ್ಷೆಯ ಪ್ರಕಾರ ಭಾರತವು 15ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರದ ‘ರಾಷ್ಟ್ರೀಯ ನಾಗರಿಕ ಆಹಾರ ಭದ್ರತೆ’ ಯೋಜನೆಯು ನಿಜವಾದ ಫಲಾನುಭವಿಗಳಿಗೆ ತಲುಪುವಂತಾಗಲಿ ಎಂದು ಆಶಿಸೋಣ. 

    ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಘಟಕವು ಪ್ರಕಟಿಸಿರುವ ವರದಿಯ ಪ್ರಕಾರ ಪ್ರಪಂಚದಲ್ಲಿ ಪ್ರತಿ ವರ್ಷ 1.3 ಬಿಲಿಯನ್ ಟನ್ ಆಹಾರವು ಅನಗತ್ಯವಾಗಿ ಪೋಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಪರಿಸರ ಘಟಕವು ಪ್ರತಿವರ್ಷ ಜೂನ್ 5ರಂದು ಜಗತ್ತಿನಾದ್ಯಂತ ಆಚರಿಸುವ ವಿಶ್ವಪರಿಸರ ದಿನಾಚರಣೆ (2013)  ಧ್ಯೇಯವಾಕ್ಯ  ‘ಆಲೋಚಿಸು, ತಿನ್ನು, ಉಳಿಸು”. ಇದರ ಸಂದೇಶ ಇಷ್ಟೇ, ಆಹಾರವನ್ನು ಪೋಲಾಗದಂತೆ ನೋಡಿಕೊಂಡು ಭೂಸಂಪನ್ಮೂಲವನ್ನು ಉಳಿಸೋಣ, ಹಸಿವಿನಲ್ಲಿರುವವರಿಗೆ ನೆರವಾಗೋಣ.

    ವಿಶ್ವ ಆಹಾರ ದಿನ

    ಜಾಗತಿಕ ಹಸಿವನ್ನು ನಿಭಾಯಿಸಲು ಹಾಗೂ   ಪ್ರಪಂಚದಾದ್ಯಂತ ಹಸಿವನ್ನು ನಿರ್ಮೂಲನೆ  ಸದುದ್ದೇಶದಿಂದ  ಪ್ರತಿವರ್ಷ ಅಕ್ಟೋಬರ್ 16 ರಂದು  ‘ವಿಶ್ವ ಆಹಾರ ದಿನ’ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯು 1945 ರಲ್ಲಿ  ಆಹಾರ ಮತ್ತು ಕೃಷಿ ಸಂಘಟನೆಯನ್ನು  (UN-Food and Agricultural Organization)  ಸ್ಥಾಪಿಸಿತು.    ಸ್ಥಾಪನೆಯ  ದಿನಾಂಕದ (ಅಕ್ಟೊಬರ್ 16) ನೆನಪಿಗಾಗಿ  ವಿಶ್ವ ಆಹಾರ ದಿನ ಆಚರಣೆಯನ್ನು ಆಯೋಜಿಸುತ್ತಾ ಬಂದಿದೆ. 

    ಕಾಲಾಮಾನಕ್ಕೆ  ಅನುಗುಣವಾಗಿ ವಿಶ್ವ ಆಹಾರ ದಿನವನ್ನು ಪ್ರತಿ ವರ್ಷ ವಿಭಿನ್ನ ವಿಷಯಗಳೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ  ವಿಶ್ವ ಆಹಾರ ದಿನಾಚರಣೆಯ ಕೇಂದ್ರ ವಿಷಯ   “ಬೆಳೆಯಿರಿ, ಪೋಷಿಸಿ, ಉಳಿಸಿಕೊಳ್ಳಿ. ಜೊತೆಯಾಗಿ. ನಮ್ಮ ಕಾರ್ಯಗಳು ನಮ್ಮ ಭವಿಷ್ಯ”.  

    “ಜಗತ್ತಿನಲ್ಲಿಅನೇಕ  ಜನರು ತುಂಬಾ ಹಸಿವಿನಿಂದಿದ್ದಾರೆ,  ಅವರು ರೊಟ್ಟಿಯ ರೂಪದಲ್ಲಿ  ದೇವರನ್ನು  ಕಾಣುತ್ತಾರೆಯೇ ಹೊರತು  ಬೇರೇನೂ ಆಪೇಕ್ಷಿಸುವುದಿಲ್ಲ”;  ಹಸಿದವರಿಗೆ ಸಹಾಯ ಮಾಡುವುದೇ ದೇವರ ಕೆಲಸ”  – ಮಹಾತ್ಮ ಗಾಂಧಿ  ಅವರು ಅಂದು ಹೇಳಿದ ಮಾತು ಇಂದಿಗೂ ಪ್ರಸ್ತುತ.

    Photo courtesy: https://thelogicalindian.com and Photo by Dan Gold on Unsplash

    ಡಾ. ಪ್ರಶಾಂತ ನಾಯ್ಕ
    ಡಾ. ಪ್ರಶಾಂತ ನಾಯ್ಕ
    ಅನೇಕರಾಷ್ಟ್ರೀಯಸಮ್ಮೇಳನ, ಕಾರ್ಯಗಾರ, ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಸಹ-ಸಂಯೋಜಕರಾಗಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಮಾಡಿರುತ್ತಾರೆ. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    spot_img

    More articles

    11 COMMENTS

    1. ಮನುಷ್ಯನ ದುರಾಸೆ ನೋಡಿದ್ರೆ ಜಿಗುಪ್ಸೆ ಬರುತ್ತೆ. ಪಾಲಿಫೆಮಸ್ ಪತಂಗದ ಆಹಾರವನ್ನು ಇಷ್ಟು ತಿನ್ನಲು ಸಾಧ್ಯನಾ ಎಂಬ ಸಂದೇಹ ಬರುತ್ತೆ. ಆದ್ರೆ ಇಲ್ಲಿ ವಿಚಿತ್ರ ವಾದರೂ. ಇದು ಸತ್ಯ. ಆದ್ರೆ ಅದು ಒಂದು ಸಾರಿ ತಿಂದ ನಂತರ ಮತ್ತೆ ತಿನ್ನಲು ಅಸೆ ಪಡೋಲ್ಲ ಎಂಬಾ ವಿಷಯ ಕೇಳಿ ಆಶ್ಚರ್ಯ ಕೂಡ ಆಗುತ್ತೆ. ಆದ್ರೆ ಈ ಮನುಷ್ಯ ಅಷ್ಟಕ್ಕೇ ತೃಪ್ತಿ ಪಡದೆ. ಬೇರೆಯವರ ಅನ್ನ ವನ್ನು ಕಸಿದು ತಿನ್ನುವಷ್ಟು ಸ್ವಾರ್ಥಿ. ಜಗತ್ತಿನಲ್ಲಿ ಒಂದು ಹೊತ್ತು ಊಟ ಇಲ್ಲದೆ ಹಸಿವಿನಿಂದ ಸಾಯುವ ಮಂದಿಗೆ ಕೊರತೆ ಇಲ್ಲ. ಇನ್ನೊಂದು ಕಡೆ ಮೋಜು ಮಸ್ತಿ ಮಾಡಿ ತಿನ್ನುವ ಪದಾರ್ಥ ವನ್ನು ಕಸದ ಬುಟ್ಟಿಗೆ ಹಾಕುವ ಜನ. ಅ ಕೀಟ ಕ್ಕೇ ಇರುವ ಬುದ್ದಿ ಈ ಮನಷ್ಯ ನಿಗೆ ಇಲ್ಲ. ಎಂತ ವಿಪರ್ಯಾಸ. ಲೇಖನ ಸರಿಯಾದ ರೂಪ ರೇಶೆ ಯಿಂದ ಮೂಡಿ ಬಂದಿದೆ. ಧನ್ಯವಾದಗಳು. ಸರ್ 🙏🙏

    2. ಹೊಟ್ಟೆ ಬಾಕ ಪಾಲೊಫೆಮಸ್ ಪರಿಚಯದೊಂದಿಗೆ ಮಾನವನ ಅತೃಪ್ತಿ, ವಿಶ್ವ ಆಹಾರ ದಿನದ ಸಂದರ್ಭದಲ್ಲಿ ಹಸಿವು ನೀಗಿಸಲು ನೀಡಿದ ಸಲಹೆಯೊಂದಿಗೆ ಅತ್ಯುತ್ತಮ ಲೇಖನ ಸರ್

    3. ಮನುಷ್ಯ ಆಸೆಯೇ ದುಃಖ ಕ್ಕೆ ಮೂಲ ಅಂತ ಹೇಳಿಕೊಂಡೆ ಎಲ್ಲವನ್ನೂ ತಾನಾಗೇ ಬೇಕೆಂಬ ದುರಾಸೆಯಿಂದ ಬದುಕುತ್ತಾನೆ. ಹೊಟ್ಟೆಬಾಕ ಪತಂಗ ಕೂಡ ಸಾಕೆನ್ನುತ್ತದೆ.‌ಆದರೆ .,. ಮಾನವನಿಗೆ ಎಲ್ಲವೂ ತನಗೇ ಬೇಕು . ಅನ್ನುವ ದುರಾಸೆ. ಬುದ್ದಿ ವಿವೇಚನೆ ಇರುವ ಮನುಷ್ಯನಿಗೆ ತೃಪ್ತಿ ಇಲ್ಲ.ಮನುಷ್ಯ ಉಪದೇಶ ಮಾಡುತ್ತಾನೆ ಅಷ್ಟೇ. ವಿಶ್ವ ಆಹಾರ ದಿನಕ್ಕೆ ಸಂದರ್ಭೋಚಿತವಾಗಿ ಲೇಖನ ವಂದನೆಗಳು ಲೇಖಕರಿಗೆ

    4. Very good article.narration skill reached its heights. Interaction of science and social science leads to build the society on humanitarian grounds.to control the self centered nature of science and technology we have to adopt this kind of approach for seeking of good future. Tq and congrats.

    5. narration skill reached its heights. Interaction of science and social science leads to build the society on humanitarian grounds.to control the self centered nature of science and technology we have to adopt this kind of approach for seeking of good future. Tq and congrats.

    6. ಡಾ//ಪ್ರಶಾಂತ್ ರವರೇ ವಿಶ್ವ ಆಹಾರದ ದಿನದಂದು ಹಿಗೂ ಉಂಟೆ ಎಂಬಂತೆ ಪಾಲಿಫೆಮಸ್ ಪತಂಗದ ಮರಿ ತೆಗೆದುಕೊಳ್ಳುವ ಆಹಾರದ ಕುರಿತು ಬರೆದ ಲೇಖನ ತುಂಬಾ ಚೆನ್ನಾಗಿದೆ.

    7. ಗುರುಗಳಾದ ಪ್ರಶಾಂತ ನಾಯ್ಕರವರ ಬರಹಗಳು ತುಂಬಾ ಸರಳವಾಗಿ ಹಾಗು ಸುಂದರವಾಗಿ ಮೂಡಿ ಬರುತ್ತವೆ. ಪ್ರಕ್ರತಿ ಹಾಗು ವಿಜ್ಞಾನಕ್ಕೆ ಕುರಿತಾದ ಸೂಕ್ಷ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಅವರ ಬರಹಗಳು ಯಶಸ್ವಿಯಾಗಿವೆ. ವಿಶ್ವ ಆಹಾರ ದಿನದಂದು ಮೂಡಿಬಂದ ಪಾಲಿಫೆಮಸ್ ಲಾರ್ವಾದ ಕುರಿತಾದ ಈ ಲೇಖನವೂ ಅಂತಹ ಸುಂದರ ಬರಹಗಳಲ್ಲಿ ಒಂದಾಗಿದೆ. ಅಧ್ಬುತವಾಗಿ ಮೂಡಿಬಂದಿದೆ.

    8. ಪಾಲಿಫೆಮಸ್ ಎಂಬ ಲಾರ್ವದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ. ಅದರ ಜೊತೆ ವಿಶ್ವ ಆಹಾರ ದಿನದ ಬಗ್ಗೆ, ಅದರ ಅರ್ಥಪೂರ್ಣ ಆಚರಣೆಯ ಅನಿವಾರ್ಯತೆಯ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!