26.2 C
Karnataka
Thursday, November 21, 2024

    ವಿಚಿತ್ರ ನೋಟದ ಜೀವಿಯೊಂದರ ಮರೆಮಾಚುವಿಕೆಯ ರಹಸ್ಯ

    Must read

    ಸಾಮಾಜಿಕ ಮಾಧ್ಯಮದಲ್ಲಿ  ವೈರಲ್ ಆಗಿದ್ದ ವಿಚಿತ್ರ ನೋಟದ  ಪ್ರಾಣಿಯೊಂದರ ರಹಸ್ಯದ ಜಾಡು ಹಿಡಿದು ಹೊರಟಾಗ  ಅದು ಕೊರೊನಾವೈರಸ್ ಗೆ  ಕಾಕತಾಳೀಯವಾದದ್ದು ಹೇಗೆ….?

    ತ್ತೀಚಿಗೆ, ವಿಚಿತ್ರ  ನೋಟದ ಒಂದು ಪ್ರಾಣಿಯು ವೈರಲ್ ಆಗಿ   ಅನೇಕ ಜನರ ಮೊಬೈಲ್, ಲ್ಯಾಪ್ಟಾಪ್ನಲ್ಲಿ    ಹರಿದಾಡುತಿತ್ತು.   ಯಾರೋ ತಮ್ಮ  ಮನೆಯ ಮಾವಿನ ಮರದ ಎಲೆಯೊಂದರಲ್ಲಿ   ಕುಳಿತಿದ್ದ  ಆ  ಪ್ರಾಣಿಯನ್ನು    ಶೂಟಿಂಗ್ ಮಾಡಿ  ತಮ್ಮ  ಬಂಧುಮಿತ್ರರಿಗೆ ವಾಟ್ಸಾಪ್ ಮಾಡಿದ  ವಿಡಿಯೋ ಜನರ  ಕುತೂಹಲ ಕೆರಳಿಸಿ ವೈರಲ್ ಆಗಿತ್ತು.   ಅಷ್ಟಕ್ಕೆ  ನಿಲ್ಲದೇ  ಆ ಜೀವಿಯ ಬಗ್ಗೆ ಕೆಲವು   ಊಹಾಪೋಹಗಳು ಕೂಡ ಟ್ರಾಲ್ ಆಯಿತು. “ಅದು ಕಚ್ಚಿದರೆ ನಾಲ್ಕು ಗಂಟೆಯೊಳಗೆ ವಿಪರೀತ ಬೆವರು ಬಂದು ಸಾಯುತ್ತಾರೆ”. ಹಾಗೆ ಹೀಗೆ, ಅಂತ.   ಆ ಪ್ರಾಣಿಯ ಬಗ್ಗೆ  ವಿಚಾರಿಸಿ  ನನಗೂ  ಕೆಲವೊಂದು ಕಾಲ್,   ಮೆಸೇಜ್ ಗಳು   ಬಂದವು.  

    ವಿಭಿನ್ನ ನೋಟದ    ಆ  ಪ್ರಾಣಿಯನ್ನು ನೀವು ನೋಡಿರದಿದ್ದರೆ   ಇಲ್ಲಿರುವ ಛಾಯಾಚಿತ್ರದ  ಮೇಲೆ ಒಮ್ಮೆ ಕಣ್ಣು  ಹಾಯಿಸಿ.  

    ಒಂದಿಷ್ಟು   ಎಲೆಗಳು ಬಿಟ್ಟರೆ ಬೇರೆ ಏನಾದರೂ ಕಾಣಿಸಿತೇ?  ಕಾಣಿಸದಿದ್ದರೆ,  ಇನ್ನೊಮ್ಮೆ  ಸೂಕ್ಮವಾಗಿ ಗಮನಿಸಿ.    ಎಲೆಯೊಂದರ  ಮೇಲೆ   ಮರೆಮಾಚಿದ ಹಸಿರು ಬಣ್ಣದ  ‘ವಸ್ತು’ ಒಂದು   ಕಾಣುವುದಿಲ್ಲವೇ? ಕಾಣದಿದ್ದರೆ ಈ ಕೆಳಗಿನ ಯೂ ಟ್ಯೂಬ್ ವಿಡಿಯೋ ನೋಡಿ.  

    ಈ ಮೊದಲು ಈ  ತರಹದ ಪ್ರಾಣಿಯನ್ನು ನೋಡಿರದಿದ್ದರೆ, ಇದನ್ನು  ನೋಡಿ  ‘ಹೀಗೂ ಉಂಟೇ’..!!!? ಎಂದು ನೀವು ಆಶ್ಚರ್ಯಚಕಿತರಾಗಿರಬಹುದು.       ಹೌದು,  ನಿಸರ್ಗದಲ್ಲಿ ಹೀಗೂ ಉಂಟು,  ಇನ್ನು  ಹೇಗೇಗೋ    ಉಂಟು…!

    ಒಂದು ಕಂಬಳಿಹುಳು

    ಪ್ರಸ್ತುತ  ನಾವು ನೋಡುತ್ತಿರುವ    ಈ ಪ್ರಾಣಿ  ಬೇರೆ ಯಾವುದೂ ಅಲ್ಲ,  ಒಂದು ಕಂಬಳಿಹುಳು.   ಚಳಿಗೆ ಹೊದೆಯಲು,  ಹಾಸಲು ಬಳಸುವ     ಕಂಬಳಿಯಲ್ಲಿ ಇರುವಂತೆ  ಮೈತುಂಬ  ನುಣ್ಣಗೆ ಚೂಪಾದ  ರೋಮಗಳಂತಹ ರಚನೆ     ಇರುವ ಕಂಬಳಿಹುಳುಗಳನ್ನು ನೋಡಿದ್ದೇವೆ.  ಅವುಗಳು ರೂಪಾಂತರಗೊಂಡು ಚಿಟ್ಟೆ,  ಪತಂಗ ಆಗುವುದರ ಬಗ್ಗೆಯೂ ಕೇಳಿದ್ದೇವೆ.   ಇದು ಯಾವ ಸೀಮೆಯ ಕಂಬಳಿಹುಳು,  ಇದು ಯಾಕೆ ಹೀಗೆ ಇದೆ..!? 

    ಮೊದಲು ಇದರ ವಿಳಾಸವನ್ನು ಪತ್ತೆ ಹಚ್ಚಿ  ನಂತರ ಇದರ ವಿಚಿತ್ರ ನೋಟದ ಹಿನ್ನೆಲೆಯ ಜಾಡು ಹಿಡಿಯೋಣ.  

    ಇದು ಬ್ಯಾರನ್ (Baron) ಎಂದು ಕರೆಯಲ್ಪಡುವ  ಮಧ್ಯಮ ಗಾತ್ರದ ನಿಮ್ಫಾಲಿಡ್ ಚಿಟ್ಟೆಯ   ಬೆಳವಣಿಗೆ  ಹಂತದಲ್ಲಿರುವ ಕಂಬಳಿಹುಳು (ಲಾರ್ವ). ಕೀಟ  (Insecta) ವರ್ಗದ ಲೆಪಿಡೋಪ್ಟೆರಾ (Lepidoptera) ಗಣ,  ನಿಮ್ಫಾಲಿಡೆ (Nymphalidae)  ಕುಟುಂಬಕ್ಕೆ  ಸೇರಿರುವ ಇದರ  ವೈಜ್ಞಾನಿಕ ಹೆಸರು  ಯುಥಾಲಿಯಾ ಅಕಾಂಥಿಯಾ (Euthalia aconthea).  ಇದು ಶ್ರೀಲಂಕಾ, ಭಾರತ ಮತ್ತು ಆಗ್ನೇಯ ಏಷ್ಯಾದ   ಸ್ಥಳೀಯ ಪ್ರಭೇದವಾಗಿದೆ.  ಪೀಟರ್ ಕ್ರಾಮರ್ 1779 ರಲ್ಲೇ  ಇದರ ಅಸ್ತಿತ್ವವನ್ನು ಪತ್ತೆಹಚ್ಚಿದ್ದರು.

    ಹೆಚ್ಚಿನ ಕಂಬಳಿಹುಳುಗಳಂತೆ ಸಸ್ಯಹಾರಿ ಆಗಿರುವ ಇದು ಕೂಡ ಎಲೆಗಳನ್ನು ತಿಂದು  ಬದುಕುತ್ತವೆ. ಒಂದೊಂದು ಬಗೆಯ ಕಂಬಳಿಹುಳುಗಳಿಗೆ ಅವುಗಳಿಗೆ ಇಷ್ಟವಾದ ಆಹಾರದ ಆಯ್ಕೆ ಇದ್ದೇ  ಇದೆ.  ನಮ್ಮೆದುರು ಇರುವ ಹಸಿರು ವರ್ಣದ ಈ ಕಂಬಳಿಹುಳುವಿಗೆ ಮಾವಿನ ಮತ್ತು  ಗೇರು ಮರದ  ಎಲೆಗಳು ಇಷ್ಟದ ಆಹಾರ. ಹಾಗಾಗಿ ಅಲ್ಲೇ ವಾಸವಾಗಿರುತ್ತವೆ. ಅಂದರೆ, ಈ ಕಂಬಳಿ ಹುಳುವಿನ ಅಮ್ಮ ಎಲೆಗಳ ಅಡಿಭಾಗದಲ್ಲಿ  ಮೊಟ್ಟೆಗಳನಿಟ್ಟು  ಹೋಗುತ್ತವೆ.  ಮೊಟ್ಟೆಗಳಿಂದ   ಹೊರಬರುವ ಲಾರ್ವಗಳು (ಕಂಬಳಿಹುಳುಗಳು) ನಿಧಾನಕ್ಕೆ  ಎಲೆಯ ಮೇಲ್ಭಾಗಕ್ಕೆ  ಬಂದು ತಿನ್ನಲು ಪ್ರಾರಂಭಿಸುತ್ತದೆ.  

    ಇದರ ವಿಚಿತ್ರ  ದೇಹ ರಚನೆಯ ಹಿಂದಿರುವ  ರಹಸ್ಯ  ಮರೆಮಾಚುವಿಕೆ ಮತ್ತು ರಕ್ಷಣೆ. ಆಹಾರಕ್ಕಾಗಿ  ಒಂದು ಪ್ರಾಣಿಯನ್ನು ಬೇಟೆಯಾಡಿ   ಇನ್ನೊಂದು  ಪ್ರಾಣಿಯು ಬದುಕುವುದು ನಿಸರ್ಗದ ನಿಯಮ.  ಅಂತೆಯೇ,  ಈ ಕಂಬಳಿಹುಳುಗಳನ್ನು ಬೇಟೆಯಾಡಲು ಹಕ್ಕಿಗಳು ಇದ್ದೆ ಇವೆ.  ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಮರೆಮಾಚಿಕೊಳ್ಳಲೇ ಬೇಕು.  ಮರೆಮಾಚುವುದು ಅಂದರೆ ಅಡಗಿಕೊಳ್ಳುವುದಲ್ಲ. ಅಡಗಿಕೊಂಡರೂ ಎಷ್ಟು ಹೊತ್ತು ಅಡಗಿಕೊಂಡಿರಬಹುದು? ಆಹಾರಕ್ಕಾಗಿ ಹೊರಗೆ ಬರಲೇಬೇಕು.  ಅದಕ್ಕಾಗಿ, ಕಬಳಿಸಲು ಬರುವ  ಇತರ ಪ್ರಾಣಿಗಳಿಗೆ ತಮ್ಮ  ಇರುವಿಕೆಯನ್ನು ಗೊತ್ತಾಗದಂತೆ ಮಾಡಿದರೆ, ಬದುಕುಳಿಯಬಹುದು.   ಕೆಲವು ಪ್ರಾಣಿ ಪ್ರಭೇದಗಳು   ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ವಿಕಾಸಪಥದಲ್ಲಿ ಕಂಡುಕೊಂಡ ಹೊಂದಾಣಿಕೆಯ  ವಿಧಾನವೇ  ಮರೆಮಾಚುವಿಕೆ.  ಅಂತಹುದೇ ಒಂದು ಮರೆಮಾಚುವಿಕೆ  ನಾವು ನೋಡುತ್ತಿರು ಈ  ವಿಚಿತ್ರ ನೋಟದ ಕಂಬಳಿಹುಳು. 

    ಸುಲಭದಲ್ಲಿ  ಗುರುತಿಸಲು ಸಾಧ್ಯವಿಲ್ಲ 

    ಮೈಗಂಟಿಕೊಂಡಿರುವ ಹಸಿರು ಬಣ್ಣದ ಸೂಜಿಯಂತಹ ಬಿರುಗೂದಲು ಹೊಂದಿರುವ   ಈ ಕಂಬಳಿಹುಳು  ಎಲೆಯ ಮೇಲೆ  ಇದ್ದರೆ  ಯಾವ ಪ್ರಾಣಿಯು ಸುಲಭದಲ್ಲಿ  ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ,  ದೇಹದ ಹಸಿರು ಬಣ್ಣವು ಎಲೆಯ ಬಣ್ಣದೊಂದಿಗೆ ಸಂಪೂರ್ಣವಾಗಿ ಸಂಯೋಜನೆಗೊಂಡಿದೆ. ಕೇವಲ ಬಣ್ಣ ಮಾತ್ರವಲ್ಲ  ಎಲೆಗಳಲ್ಲಿರುವ ಮಧ್ಯನಾಳ  (ಮಿಡ್ ರಿಬ್ ) ಮತ್ತು  ಸಣ್ಣ ನಾಳಗಳ (Veins) ಹೋಲುವ ರಚನೆಯನ್ನೂ  ಹೊಂದಿರುವುದರಿಂದ ಇದು  ಎಲೆಯ  ಮೇಲೆ ವಿಶ್ರಾಂತಿ  ಸ್ಥಿತಿಯಲ್ಲಿದ್ದರೆ ಗುರುತಿಸಲು ಸಾಧ್ಯವೇ ಇಲ್ಲ.    ಆ ಮೂಲಕ ತಮ್ಮ ಇರುವಿಕೆ ಇದ್ದರೂ   ಇಲ್ಲದಂತೆ ಮರೆಮಾಚಿಕೊಂಡು  ತಮ್ಮನ್ನು  ಆಹಾರವಾಗಿ ಕಬಳಿಸಲು ಬರುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳುತ್ತದೆ.   ದೇಹದ  ಮುಂಭಾಗವು  ಹಸಿರು ಬಣ್ಣದ ಬಿರುಗೂದಲುಗಳ ಜಾಲರಿಯಲ್ಲಿ ಮುಚ್ಚಲ್ಪಟ್ಟಿದ್ದರೂ  ಅಡಿಭಾಗದಲ್ಲಿ ಹಳದಿ ಮಿಶ್ರಿತ ಬಿಳಿ ಬಣ್ಣ  ಹೊಂದಿದೆ. 

    ಯುಥಾಲಿಯಾ ಅಕಾಂಥಿಯಾ ಕಂಬಳಿಹುಳುವನ್ನು ನೋಡಿ ಆಶ್ಚರ್ಯಗೊಂಡಿರುವ ನಾವು  ಇದರ ಮೊಟ್ಟೆಯನ್ನು ನೋಡಿದರೆ ಇನ್ನೂ ವಿಸ್ಮಯ  ಮೂಡಿಸುತ್ತದೆ. ಇದರ ಮೊಟ್ಟೆಯು  ಕೊರೊನಾವೈರಸ್ ರಚನೆಗೆ ಹೋಲುತ್ತದೆ.!  ಎಲ್ಲಿಯ ಕೊರೊನಾವೈರಸ್? ಎಲ್ಲಿಯ ಯುಥಾಲಿಯಾ ಅಕಾಂಥಿಯಾ ಚಿಟ್ಟೆಯ ಮೊಟ್ಟೆ?; ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ, 1.5-1.8 ಮಿಲಿ ಮೀಟರ್ ಗಾತ್ರದ ಅಪ್ಸರೆ ಚಿಟ್ಟೆಯ ಮೊಟ್ಟೆ  ಮತ್ತು  120–140 ನ್ಯಾನೊಮೀಟರ್ ಗಾತ್ರದ ಕೊರೊನಾವೈರಸ್ ಹೊರನೋಟ ಸುಮಾರಿಗೆ  ಒಂದೇ  ತೆರನಾಗಿರುವುದು ವಿಸ್ಮಯ ಮೂಡಿಸುವಂತ್ತದ್ದು.  ‘ಇಲ್ಲಿ ಕೊರೊನಾ ಇದೆ ಹತ್ತಿರ ಬರಬೇಡಿ’ ಎಂದು ಮನುಷ್ಯರಿಗೆ ಬೆದರಿಸಲು    ತಾಯಿ ಚಿಟ್ಟೆಯು    ಈ ತರಹದ   ಮೊಟ್ಟೆಗಳನ್ನು  ಇಡುತ್ತದೆ”  ಅಂತ ಯಾರಾದರೂ ಹೇಳಿದರೆ ಕೋವಿಡ್-19 ಮಹಾಮಾರಿಯ  ಈ ಸಂದರ್ಭದಲ್ಲಿ ಒಪ್ಪಬೇಕಾಗಬಹುದು….!!!.  


    https://upload.wikimedia.org/wikipedia/commons/2/28/Euthalia_aconthea_egg_sec.jpg

    ಅಂದ ಹಾಗೆ,  ಹಬ್ಬ ಹರಿದಿನ ಮದುವೆ ಮುಂಜಿಗಳಿಗೆ  ತಳಿರು-ತೋರಣ ಕಟ್ಟಲು, ಶಾಸ್ತ್ರಕ್ಕೆ ಉಪಯೋಗಿಸಲು   ಮಾವಿನ ಮರದ ಎಲೆಗಳನ್ನು ಕೊಯ್ಯುವಾಗ,  ಮನೆಗೆ ತಂದಾಗ ಜಾಗೃತೆ ವಹಿಸಿ.  ಮರೆಮಾಚಿರುವ   ಯುಥಾಲಿಯಾ ಅಕಾಂಥಿಯಾ ಕಂಬಳಿಹುಳು ಇರಬಹುದು. ಅದನ್ನು  ಸ್ಪರ್ಶಿಸಿದರೆ   ಕೆಲವು  ಗಂಟೆಗಳವರೆಗೆ ತೀವ್ರ ಕಿರಿಕಿರಿ, ತುರಿಕೆ  ಉಂಟಾಗುತ್ತದೆ !

    ಡಾ. ಪ್ರಶಾಂತ ನಾಯ್ಕ
    ಡಾ. ಪ್ರಶಾಂತ ನಾಯ್ಕ
    ಅನೇಕರಾಷ್ಟ್ರೀಯಸಮ್ಮೇಳನ, ಕಾರ್ಯಗಾರ, ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಸಹ-ಸಂಯೋಜಕರಾಗಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಮಾಡಿರುತ್ತಾರೆ. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    spot_img

    More articles

    10 COMMENTS

    1. ಉತ್ತಮ ಬರಹ ಸರ್
      ಮಾಹಿತಿಗಾಗಿ ಧನ್ಯವಾದಗಳು

      • ನಿಜವಾಗಿಯೂ ಅತ್ಯುತ್ತಮ ವಾದ ಮಾಹಿತಿ… ಮಾತ್ರವಲ್ಲದೆ ನಿಸರ್ಗ ದಲ್ಲಿ ಇಂತಹ ಜೀವಿಗಳು ಕಾಣ ಸಿಗುವುದು ವಿರಳ ಮತ್ತು ಸಿಕ್ಕಿದರು ಅದರ ಹಿನ್ನೆಲೆ ಹುಡುಕುವುದು ಕಷ್ಟ. ನೀವು ಇಲ್ಲಿ ಬಹಳ ಸೊಗಸಾಗಿ.. ಅರ್ಥ ಗರ್ಭಿತ ವಾಗಿ.. ಸ್ಪಷ್ಟ ಕನ್ನಡದಲ್ಲಿ.. ಮಾಹಿತಿಯನ್ನು ತಿಳಿಯಪಡಿಸಿದಕ್ಕೆ ಅಭಿನಂದನೆಗಳು…. ಪ್ರೊ. ಪ್ರಶಾಂತ್ ನಾಯ್ಕ್ ಸರ್..

    2. ಉತ್ತಮ ಲೇಖನ. ಮಾಹಿತಿ ಭರಿತ ಮತ್ತು ಆಸಕ್ತಿದಾಯಕ.

    LEAVE A REPLY

    Please enter your comment!
    Please enter your name here

    Latest article

    error: Content is protected !!