ಬೆಂಗಳೂರಿನ ಟ್ರಾಫಿಕ್ ನಲ್ಲಿ ವಾಹನ ಸಂಚಾರದ ಸಮಯದಲ್ಲಿ ಹಿರಿಯರು ಹೇಳುತ್ತಿದ್ದ ಮಾತೆಂದರೆ, ʼ ನೀನು ಓಡಿಸುವಾಗ ನಿಯಮಬದ್ಧವಾಗಿದ್ದರೆ ಸಾಲದು- ನಿನ್ನ ಸಮೀಪಕ್ಕೆ ಬರುವ ವಾಹನ ಚಾಲಕರು ಯಾವ ರೀತಿ ತಪ್ಪುಗಳೆಸಗುವರು ಎಂಬುದನ್ನೂ ಸಹ ಊಹಿಸಿದಲ್ಲಿ ಮಾತ್ರ ನೀನು ಯಶಸ್ವಿಯಾಗುತ್ತೀಯʼ ಎಂಬುದಾಗಿದೆ. ಇಂತಹ ಪಾಲಿಸಿಯನ್ನು ಈಗ ದೈನಂದಿನ ಜೀವನದಲ್ಲೂ ಅಳವಡಿಸಿಕೊಳ್ಳಲೇಬೇಕಾದ ಪರಿಸ್ಥಿತಿಯನ್ನು ಕೋವಿಡ್ ಜಾರಿಗೊಳಿಸಿದಂತಾಗಿದೆ. ಕೋವಿಡ್ ಸೋಂಕಿತರು, ಅವರು ಯಾರೇ ಆಗಿರಲಿ ಅಂದರೆ, ಸ್ನೇಹಿತರಾಗಲಿ, ಬಂಧುಗಳಾಗಲಿ, ಅಪರಿಚಿತರಾಗಲಿ ಎಲ್ಲರನ್ನೂ ಸಂಪರ್ಕದಿಂದ ದೂರವಿಡುವ ಹವ್ಯಾಸ ಮುನ್ನೆಚ್ಚರಿಕೆಯಾಗಿ ಜಾರಿಯಾಗಿದೆ.
ಈಗಿನ ಸಮಯದಲ್ಲಿ ಈ ವಿಚಾರ ಎಲ್ಲಾ ವಲಯಗಳಿಗೂ ಅನ್ವಯವಾಗುವಂತಿದ್ದು, ಆಯಾ ವಲಯದ ಸಾಕ್ಷರತೆಯನ್ನು ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ. ಆರೋಗ್ಯ ಸಂಬಂಧಿತ ವಿಚಾರದಲ್ಲಿ ಸ್ವಾಸ್ಥ ಸಾಕ್ಷರತೆ, ವಿತ್ತೀಯ ವಿಚಾರದಲ್ಲಿ ಆರ್ಥಿಕ ಸಾಕ್ಷರತೆಯಂತಹ ಸ್ಪೆಷಲೈಸೇಷನ್ ಹೊಂದಿರಲೇ ಬೇಕಾಗಿರುವುದು ಅನಿವಾರ್ಯವೆಂಬಂತಾಗಿದೆ.
ಹೂಡಿಕೆ ಲಾಭದಾಯಕವಾಗಲು ಸಮಯ ನೀಡಬೇಕು
ಯಾವುದೇ ಒಂದು ಪ್ರಯತ್ನ ಯಶಸ್ವಿಯಾಗಲು, ಅದಕ್ಕೆ ಬೇಕಾದಷ್ಟು ಸಮಯಾವಕಾಶ ನೀಡಲೇ ಬೇಕು. ಆಹಾರ ಸೇವಿಸಿದ ನಂತರ ಅದು ಪಚನವಾಗಿ ರಕ್ತಗತವಾಗಲೂ ಸಹ ಸಮಯಾವಕಾಶ ಬೇಕಾಗುತ್ತದೆ. ಅದೇ ರೀತಿ ವಿತ್ತೀಯ ಪೇಟೆಗಳಲ್ಲಿಯ ಚಟುವಟಿಕೆಗಳಲ್ಲೂ ಸಹ ಒಂದು ಹೂಡಿಕೆ ಲಾಭದಾಯಕವಾಗಲು ಬೇಕಾದ ಸಮಯಾವಕಾಶ ನೀಡಲೇಬೇಕಾಗುತ್ತದೆ. ಈಗಿನ ದಿನಗಳಲ್ಲಿ ವಿತ್ತೀಯ ಪೇಟೆಯ ಚಟುವಟಿಕೆಯಲ್ಲಿರುವವರಿಗೆ ಪದ್ದತಿಯ ಮೇಲೆ ನಂಬಿಕೆಯೇ ಇಲ್ಲದಂತಾಗಿ, ದೊರೆತ ಅವಕಾಶಗಳನ್ನು ತ್ವರಿತವಾಗಿ ಕೈಗೆಟುಕಿಸಿಕೊಳ್ಳುವ ಪ್ರಯತ್ನಗಳೇ ಹೆಚ್ಚಾಗಿವೆ. ಹಾಗಾಗಿ ಹೆಚ್ಚಿನ ಮಟ್ಟದ ಅಸ್ಥಿರತೆಯನ್ನುಂಟುಮಾಡುತ್ತಿದೆ.
ಯಾವುದೇ ಒಂದು ವ್ಯವಹಾರಿಕ ಚಟುವಟಿಕೆ ಯಶಸ್ಸು ಕಾಣಲು ಪ್ರಮುಖವಾಗಿ ಆವಶ್ಯವಿರುವುದು ಗ್ರಾಹಕರು ಮತ್ತು ಅವರ ಸಂಖ್ಯೆ. ಷೇರುಪೇಟೆಯ ದೃಷ್ಟಿಯಿಂದ ನೋಡಿದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದರೂ, ನಮ್ಮ ದೇಶದ ಜನಸಂಖ್ಯೆಗೆ ಹೋಲಿಸಿದಲ್ಲಿ ಅತಿ ಕಡಿಮೆ. ಆದರೂ ಷೇರುಪೇಟೆಯ ಬಗ್ಗೆ ಹೆಚ್ಚಿನವರಿಗೆ ಆಸಕ್ತಿ ಮೂಡುತ್ತಿದೆ. ಷೇರುಪೇಟೆ ಚಟುವಟಿಕೆಗೆ, ಕಳೆದ ಜುಲೈ ತಿಂಗಳಲ್ಲಿ 5.15 ಕೋಟಿ ಜನರು ನೋಂದಾಯಿಸಿಕೊಂಡಿದ್ದು ಆ ಸಂಖ್ಯೆ ಈಗ ಅಂದರೆ ಅಕ್ಟೋಬರ್ ಮಧ್ಯೆ ಈ ಸಂಖ್ಯೆಯು 5.56 ಕೋಟಿಗೆ ಏರಿಕೆ ಯಾಗಿದೆ. ಅಂದರೆ ಮೂರು ತಿಂಗಳಲ್ಲಿ ಸುಮಾರು 40 ಲಕ್ಷ ಹೊಸ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದಾರೆ.
ಷೇರುಪೇಟೆಯ ಸೂಚ್ಯಂಕಗಳು ಉತ್ತುಂಗದಲ್ಲಿದ್ದು ಅನೇಕ ಪ್ರಮುಖ ಕಂಪನಿಗಳ ಷೇರಿನಗಳು ಗಗನಕ್ಕೇರಿವೆ. ಆದರೂ ಹೆಚ್ಚಿನವರಿಗೆ ಗರಿಷ್ಠದಲ್ಲಿರುವ ಷೇರುಗಳ ಹಿಂದೆ ಸಾಗುವುದು ವಾಡಿಕೆಯಾಗಿದೆ. ಷೇರುಪೇಟೆಯಲ್ಲಿ ಈಗಿನ ದಿನಗಳಲ್ಲಿ, ಲಾಭ ಗಳಿಸಲು ಯಾವುದೇ ನಿಖರವಾದ ನಿಯಮಾವಳಿ ಇಲ್ಲ. ಆದರೆ ಯಾವುದೇ ಸಮಯ ನಿರ್ಬಂಧವಿಲ್ಲದ Value pick – profit book ಪದ್ಧತಿಯೊಂದೇ ಸದಾ ಹಸಿರಾದ ಸಮೀಕರಣವಾಗಿದೆ.
ಷೇರುಪೇಟೆಯ ಬಗ್ಗೆ ಕೆಲವು ಕಲ್ಪನೆಗಳು:
- ಸೆನ್ಸೆಕ್ಸ್ ಏರಿಕೆ ಕಂಡಾಗ ಹೂಡಿಕೆದಾರರ ಲಾಭವೆಂದು, ಇಳಿಕೆ ಕಂಡಾಗ ಹೂಡಿಕೆದಾರರ ಹಾನಿ ಎಂದು ಬಿಂಬಿಸುವುದು ಕೇವಲ ಕಾಲ್ಪನಿಕ. ಮಾರ್ಕೆಟ್ ಕ್ಯಾಪಿಟಲೈಸೇಷನ್ ಬಗ್ಗೆ ಹೂಡಿಕೆದಾರರು ಹೆಚ್ಚು ಚಿಂತಿಸ ಬೇಕಿಲ್ಲ.
- ಐ ಪಿ ಒ ಗಳಲ್ಲಿ ಹೂಡಿಕೆ ಸದಾ ಲಾಭಕರ ಎಂಬುದು ಸರಿಯಲ್ಲ ಎಂಬುದನ್ನು ಈತ್ತೀಚಿನ ಯುಟಿಐ ಎ ಎಂಸಿ, ಏಂಜಲ್ ಬ್ರೋಕಿಂಗ್, ಗಳಲ್ಲಿ ಉಂಟಾದ ಹಾನಿ ತೋರಿಸಿದೆ. ಐಪಿಒ ಗಳಲ್ಲಿ ಹೆಚ್ಚು ಲಾಭ ಗಳಿಸುತ್ತಿರುವುದು ಕೆಲವು ಆಂಕರ್ ಇನ್ವೆಸ್ಟರ್ ಸಂಸ್ಥೆಗಳು ಮಾತ್ರ. ಐಸಿಐಸಿಐ ಪ್ರುಡೆನ್ಶಿಯಲ್ಸ್, ಗೋಲ್ಡ್ ಮನ್ ಸಾಕ್ಸ್ ನಂತಹ ಸಂಸ್ಥೆಗಳು ಆಂಕರ್ ಇನ್ವೆಸ್ಟರ್ಸ್ ಗಳಂತಹ ಸಂಸ್ಥೆಗಳು ಇತ್ತೀಚೆಗೆ ಬಂದ ಕೆಂಕಾನ್ ಸೆಷಾಲಿಟಿ ಕೆಮಿಕಲ್ಸ್, ಹ್ಯಾಪಿಯೆಸ್ಟ್ ಮೈಂಡ್ಸ್, ಯುಟಿಐ ಎಎಂಸಿಯಂತಹ ಐಪಿಒಗಳಲ್ಲಿ ಆಂಕರ್ ಇನ್ವೆಸ್ಟರ್ಸ್ ಆಗಿ ಭಾಗವಹಿಸಿದ್ದು ಈ ಹೂಡಿಕೆಗೆ ಕೇವಲ 30 ದಿನಗಳ ಲಾಕ್ ಇನ್ ನಿಯಮವಿದೆ. ʼ ಗ್ರೇʼ ಮಾರ್ಕೆಟ್ ಎಂಬ ಕಾನೂನು ಬಾಹಿರ ವ್ಯವಸ್ಥೆಯ ದರಗಳ ಕಾರಣ ಹೂಡಿಕೆದಾರರನ್ನು ಸೆಳೆಯಲಾಗುವ ಪ್ರಯತ್ನಕ್ಕೆ ಬಲಿಯಾಗದೆ ದೂರವಿರುವುದು ಕ್ಷೇಮ. ಕೆಂಕಾನ್ ಕಂಪನಿಯು ಈ ತಿಂಗಳ 1 ರಂದು ಲೀಸ್ಟಿಂಗ್ ಆಗಿ ಅಂದು ರೂ.743 ರ ಸಮೀಪದಿಂದ 16 ರಂದು ಶುಕ್ರವಾರ ಈ ಷೇರು ರೂ.398 ರವರೆಗೂ ಕುಸಿದಿದ್ದು, ಲೀಸ್ಟಿಂಗ್ ನಂತರ ಖರೀದಿಸಿದವರ ಹೂಡಿಕೆ ಕರಗಿತು, ಮಾರಾಟಮಾಡಿಕೊಂಡವರು ಸುಲಭವಾಗಿ ಲಾಭಗಳಿಸಿಕೊಂಡವು. ಇದೇ ರೀತಿ ಲೀಸ್ಟಿಂಗ್ ಆದ ಕಂಪನಿಗಳು ಆರಂಭಿಕ ಶೂರತ್ವ ಪ್ರದರ್ಶಿಸಿವೆ.
- ಪ್ರಮುಖ ಕಂಪನಿ ಷೇರಿನ ಬೆಲೆ ಇಳಿಕೆಯಾದಾಗ Value pickಗೆ ಅವಕಾಶವೆಂಬುದನ್ನು ನೆನಪಿನಲ್ಲಿಡಬೇಕು. ಆದರೆ ಖರೀದಿ ಮಾತ್ರ ಹಂತ ಹಂತವಾಗಿರಬೇಕು. ಒಮ್ಮೆಲೆ lumpsum / wholesale ಆಗಿ ಹೂಡಿಕೆಯ ನಿರ್ಧಾರ ಅಪಾಯಕರವೂ ಆಗಬಹುದು.
- ಪ್ರತಿಯೊಂದು ಭಾರಿ ಏರಿಕೆಯನ್ನು profit book ಗೆ ಉಪಯೋಗಿಸಿಕೊಂಡಲ್ಲಿ ಬಂಡವಾಳ ಸುರಕ್ಷತೆಯೊಂದಿಗೆ ಲಾಭ ಗಳಿಕೆಯ ಕಾರ್ಯವೂ ಆಗಬಹುದು. ಇದೇ ಷೇರಿನ ಬೆಲೆ ಕಡಿಮೆಯಾದಾಗ ಮರುಖರೀದಿಗೆ ಅವಕಾಶವಾಗುವುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಳೆದ ಕೆಲವು ದಿನಗಳಿಂದ ಕಂಪನಿಗಳಾದ ಟಾಟಾ ಸ್ಟೀಲ್, ಗ್ಲೆನ್ ಮಾರ್ಕ್ ಫಾರ್ಮ, ಯು ಪಿ ಎಲ್, ಎಸ್ ಬಿ ಐ, ಕಮ್ಮಿನ್ಸ್, ಶಿಲ್ಪಾ ಮೆಡಿಕೇರ್, ಎಲ್ ಐ ಸಿ ಹೌಸಿಂಗ್, ಬಜಾಜ್ ಫೈನಾನ್ಸ್, ಹೆಚ್ ಸಿ ಎಲ್ ಟೆಕ್ನಾಲಜೀಸ್ ಮುಂತಾದವುಗಳ ಏರಿಳಿತಗಳಾಗಿವೆ.
- ಕಂಪನಿಗಳು ಘೋಷಿಸಿದ ಕಾರ್ಪೊರೇಟ್ ಫಲಗಳಿಗನುಣವಾಗಿ ಷೇರಿನ ದರಗಳು ಏರಿಕೆ ಕಂಡಾಗ ಅಂತಹ ಕಂಪನಿಗಳನ್ನುಖರೀದಿಸುವಾಗ ಅತಿ ಹೆಚ್ಚಿನ ಎಚ್ಚರ ಅಗತ್ಯ. ಲಾಭಾಂಶ ವಿತರಣೆ ನಂತರ ಈ ಕಂಪನಿಗಳು ಭಾರಿ ಕುಸಿತ ಕಾಣುತ್ತಿರುವುದು ಇತ್ತೀಚಿನ ಟ್ರೆಂಡ್ ಆಗಿದೆ. ಇದಕ್ಕೆ ಉದಾಹರಣೆಯಾಗಿ ಬಾಲ್ಮರ್ ಲೌರಿ, ಬಾಲ್ಮರ್ ಲೌರಿ ಇನ್ವೆಸ್ಟ್ ಮೆಂಟ್ಸ್, ಐಟಿಸಿ, ಕ್ಲಾರಿಯಂಟ್, ಪಿಟಿಸಿ ಇಂಡಿಯಾ, ಟಿ ಎನ್ ಪಿ ಎಲ್, ಟಾಟಾ ಕೆಮಿಕಲ್ಸ್ ನಂತಹ ಕಂಪನಿಗಳು ಪ್ರದರ್ಶಿಸಿದ ಏರಿಳಿತಗಳಾಗಿವೆ.
- ಯಾವುದೇ ವಿಶ್ಲೇಷಣೆಗಳನ್ನು ಅಳವಡಿಸಿಕೊಳ್ಳುವ ಮುನ್ನ ಚಿಂತಿಸಿ ನಿರ್ಧರಿಸುವುದು ಸುರಕ್ಷಿತ. ಹೂಡಿಕೆ ಮಾಡಿದ ಹಣಕ್ಕೆ ತಕ್ಷಣದ ಪ್ರತಿಫಲ ನಿರೀಕ್ಷಿಸುವುದು ಸರಿಯಲ್ಲ, ಆದರೆ ಲಾಭದ ಅವಕಾಶ ದೊರೆತರೆ ಮಾತ್ರ ಉಪಯೋಸಿಕೊಳ್ಳುವುದು ಮಾತ್ರ ಬಿಡಬಾರದು.
ನೆನಪಿರಲಿ: ಷೇರುಪೇಟೆಯು ಈಗಿನ ದಿನಗಳಲ್ಲಿ ಆರಂಭದಲ್ಲಿ ಹೂಡಿಕೆಯಾಗಿದ್ದರೂ, ನಂತರದಲ್ಲಿ ಅದು ವ್ಯವಹಾರದಂತೆ ಸದಾ ನಿಗಾವಹಿಸಿ ದೊರೆತಂತ ಅವಕಾಶಗಳನ್ನು ಕೈಗೆಟುಕಿಸಿಕೊಳ್ಳುವುದು ಅತ್ಯವಶ್ಯ. ಆಗಲೇ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಬಹುದ.
ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
👍
very good article
ಉಪಯುಕ್ತ ಲೇಖನಕ್ಕಾಗಿ ಧನ್ಯವಾದಗಳು