ಕೊರೊನಾ ವೈರಸ್‍ನ ಹಾವಳಿ ಹೇಳತೀರದು. ಇದರ ದುಷ್ಪರಿಣಾಮಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ವಿಶ್ವದಾದ್ಯಂತ ಕಾಣುತ್ತಿದ್ದೇವೆ ಹಾಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ಆರ್ಥಿಕ ವ್ಯವಸ್ಥೆಯಲ್ಲಿನ ಹಿಂಜರಿತಗಳು, ಉದ್ಯೋಗ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಏರುಪೇರುಗಳು, ಷೇರು ಮಾರುಕಟ್ಟೆಯಲ್ಲಿನ ಕುಸಿತ ಹೀಗೆ ಹಲವಾರು ಪರಿಣಾಮಗಳು ಎದ್ದು ಕಾಣುತ್ತಿವೆ. ಲಕ್ಷಾಂತರ ಜನ ಉದ್ಯೋಗವನ್ನು ಕಳೆದುಕೊಂಡಿರುವ ಉದಾಹರಣೆ ಕೂಡ ಇದೆ.
ಇವುಗಳೆಲ್ಲದರ ನಡುವೆ ಕೊರೊನಾದಿಂದ ಕೆಲವೊಂದು ಹೊಸ ದಾರಿಗಳನ್ನು ಸಹ ನಾವುಗಳು ಕಂಡುಕೊಂಡಿದ್ದೇವೆ. ಅವುಗಳಲ್ಲಿ ಬಹಳ ಮುಖ್ಯವಾಗಿ ಮನೆಯಿಂದಲೇ ಕೆಲಸ ( work from home ) ಮತ್ತುಆನ್‍ಲೈನ್ ಶಿಕ್ಷಣ.ಮನೆಯಿಂದಲೇ ಕೆಲಸ ಪದ್ದತಿಯಿಂದಾಗುವ ಅನುಕೂಲಗಳನ್ನು, ಮುಖ್ಯವಾಗಿ ಆರ್ಥಿಕ ಉಳಿಕೆ, ಪರಿಶೀಲಿಸಿ ಮುಂದಿನ ದಿನಗಳಲ್ಲಿ work from home ಪದ್ದತಿಯನ್ನು ಶಾಶ್ವತವಾಗಿ ಅಳವಡಿಸಲು ಬಹುರಾಷ್ಟ್ರೀಯ ಕಂಪನಿಗಳು ಚಿಂತನೆ ನಡೆಸಿವೆ.
ಪ್ರಸ್ತುತ ನಾವುಗಳುಅನುಭವಿಸುತ್ತಿರುವ ಕಠಿಣ ಮತ್ತು ಅನಿಶ್ಚಿತ ಸಮಯದಲ್ಲಿ ಆನ್‍ಲೈನ್ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಂಡಿದ್ದೇವೆ. ಈ ಪದ್ದತಿಯ ಬಗ್ಗೆ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಆನ್‍ಲೈನ್ ಶಿಕ್ಷಣ ಪದ್ದತಿಯ ಅನುಕೂಲಗಳ ರುಚಿಯನ್ನು ಕೆಲವರು ಸವಿದಿದ್ದಾರೆ. ಸಾಂಪ್ರದಾಯಿಕ ಕ್ಲಾಸ್ ರೂಮ್ ಶಿಕ್ಷಣದಿಂದ ಹೊರಬರುವುದು ನಮಗೆ ಕಷ್ಟಕರವಾದಂತಹ ಸಂಗತಿ. ಆದರೂ ಆನ್‍ಲೈನ್ ಶಿಕ್ಷಣದ ಮಹತ್ವವನ್ನು ಅರಿಯಲು ಪ್ರಯತ್ನಿಸೋಣ.
ಕಳೆದ ಒಂದು ದಶಕದಿಂದ ಆನ್‍ಲೈನ್ ಕಲಿಕೆ ಹೆಚ್ಚು ಹೆಚ್ಚು ಪ್ರವೇಶಾವಕಾಶಗಳನ್ನು ಹೊಂದಿದೆ. ಹಿಂದಿನ ದಿನಗಳಲ್ಲಿ ಸಾಂಪ್ರದಾಯಿಕ ಆನ್ ಕ್ಯಾಂಪಸ್ ಶಿಕ್ಷಣ ಮಾತ್ರವೇ ಕಲಿಕೆಯ ದಾರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರಿಗೆ ಹೈಸ್ಪೀಡ್ ಅಂತರ್ಜಾಲ ಸಂಪರ್ಕಗಳು ದೊರೆತಿರುವುದರಿಂದ, ಆನ್‍ಲೈನ್ ಶಿಕ್ಷಣ ಜನಪ್ರಿಯವಾಗುತ್ತಿದೆ ಮತ್ತು ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ನೀಡುವ ಪರ್ಯಾಯ ವ್ಯವಸ್ಥೆಯಾಗಿ ಬೆಳೆಯುತ್ತಿದೆ. ಸ್ನಾತಕೋತ್ತರ ಶಿಕ್ಷಣಕ್ಕೆ ಉತ್ತೇಜನ ನೀಡುವ ಪರಿಣಾಮಕಾರಿ ವಿಧಾನವಾಗಿದೆ.
ಭಾರತದಲ್ಲಿ ಆನ್‍ಲೈನ್ ಶಿಕ್ಷಣ 2021 ಕ್ಕೆ ಸಂಬಂಧಿಸಿದಂತೆ ಕೆಪಿಎಂಜಿ ಮತ್ತು ಗೂಗಲ್ ಕಂಪನಿಯವರು ನೀಡಿರುವ ವರದಿ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಆನ್‍ಲೈನ್ ಶಿಕ್ಷಣ ಎಂಟು ಪಟ್ಟು ಬೆಳೆಯುವ ನಿರೀಕ್ಷೆಯನ್ನು ಹೊಂದಿದೆ. ಆನ್‍ಲೈನ್ ಶಿಕ್ಷಣದ ಪ್ರಯೋಜನವನ್ನು ಪಡೆಯುವವರ ಸಂಖೈ 2021 ರ ವೇಳೆಗೆ 9.5 ಮಿಲಿಯನ್ ಮುಟ್ಟುವ ಅಂದಾಜು ಮಾಡಲಾಗಿದೆ ( 2016 ರಲ್ಲಿ ಕೇವಲ 1.6 ಮಿಲಿಯನ್ಇತ್ತು ). ವಿಶೇಷವಾಗಿ ಸ್ನಾತಕೋತ್ತರ ಪದವಿಗಳಾದ ಎಂಬಿಎ ಮತ್ತು ಎಂಸಿಎ ಕೋರ್ಸುಗಳಿಗೆ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉದ್ಯೋಗದಲ್ಲಿರುವವರು ಪ್ರವೇಶವನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ, ಪದವಿ ಮತ್ತು ಪದವಿಪೂರ್ವ ಶಿಕ್ಷಣಗಳಲ್ಲಿಯೂ ಸಹ ಜನಪ್ರಿಯವಾಗುವ ಲಕ್ಷಣಗಳು ಕಾಣುತ್ತಿವೆ.
ಆನ್‍ಲೈನ್ ಶಿಕ್ಷಣದ ಅನುಕೂಲಗಳು
ಆನ್‍ಲೈನ್ ಶಿಕ್ಷಣದ ನವನೀಯತೆ ( Flexibility ) ಎಲ್ಲರನ್ನೂ ಆಕರ್ಷಿಸಿದೆ. ಆನ್‍ಲೈನ್ ಶಿಕ್ಷಣದ ಮೂಲಕ, ಎಲ್ಲಿಂದಲಾದರೂ , ಯಾವಾಗ ಬೇಕಾದರೂ ಶಿಕ್ಷಣವನ್ನು ಪಡೆಯಬಹುದು. ಲ್ಯಾಪ್‍ಟಾಪ್ ಅಥವಾ ಸ್ಮಾರ್ಟ್ ಪೋನ್ ಜೊತೆಗೆ ಅಂತರ್ಜಾಲದ ವ್ಯವಸ್ಥೆಯಿದ್ದರೆ ಸಾಕು. ತರಗತಿಗಳಲ್ಲಿನ ಹಾಜರಾತಿ ತಲೆನೋವು ಇರುವುದಿಲ್ಲ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ಅನುಸರಿಸಬಹುದು. ವಿಶೇಷವಾಗಿ ಉದ್ಯೋಗಿಗಳಿಗೆ, ಕೆಲಸವನ್ನು ಬಿಟ್ಟು ಕೊಡದೆ, ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯವಾಗುತ್ತದೆ. ವಾರಾಂತ್ಯಗಳಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಕಲಿಯುವ ಅವಕಾಶ ದೊರೆಯುತ್ತದೆ. ಸಮಯ ನಿರ್ವಹಣೆ ಹಾಗೂ ಉದ್ಯೋಗ – ಶಿಕ್ಷಣ ಇವುಗಳ ಸಮತೋಲನವನ್ನು ಕಾಪಾಡುವ ಕೌಶಲ್ಯವನ್ನು ಕಲಿಸುತ್ತದೆ.
ಕಲಿಯುವ ವೇಗ ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ವ್ಯತ್ಯಾಸವಾಗುತ್ತದೆ. ಪ್ರತಿಯೊಬ್ಬರೂ ಒಂದೇ ವೇಗದಲ್ಲಿ ಕಲಿಯಲು ಸಾಧ್ಯವಿಲ್ಲ. ತರಗತಿಯ ಕೊಠಡಿಯಲ್ಲಿ ಎಲ್ಲರಿಗೂ ಒಟ್ಟಿಗೆ ಪಾಠಮಾಡುವಾಗ, ಅನೇಕ ವಿದ್ಯಾರ್ಥಿಗಳಿಗೆ ಪಾಠಗಳನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸ ಬೇಕಾಗುತ್ತದೆ. ಹಲವು ಭಾರಿ ಇದು ಸಹ ಸಾಧ್ಯವಾಗದ ಪರಿಸ್ಥಿತಿಯಿರುತ್ತದೆ. ಇಂತಹ ಸಂದರ್ಭಗಳಲ್ಲಿ ಆನ್‍ಲೈನ್ ಶಿಕ್ಷಣ ಪರಿಹಾರ ನೀಡುತ್ತದೆ. ಈ ಪದ್ದತಿಯಲ್ಲಿ ಅಧ್ಯಯನಕ್ಕೆ ಸಂಬಂಧಪಟ್ಟ ಲೇಖನಗಳನ್ನು, ಪಠ್ಯಗಳನ್ನು ಮೊದಲೇ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ವಂತ ಸಮಯದಲ್ಲಿ ಮತ್ತು ವೇಗದಲ್ಲಿ ಕಲಿಯಬಹುದು. ಆನ್‍ಲೈನ್ ಚಾಟ್ ಮೂಲಕ ತಮ್ಮ ಸಂದೇಹಗಳಿಗೆ ಸ್ಪಷ್ಟೀಕರಣಗಳನ್ನು ಪಡೆಯಬಹುದು.
ಆನ್‍ಲೈನ್ ಶಿಕ್ಷಣದ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಕೋರ್ಸ್‍ಗಳ ವ್ಯಾಪಕ ಆಯ್ಕೆ ಸಾಧ್ಯವಾಗುತ್ತದೆ. ಜೊತೆಗೆ ಮನೆಯಲ್ಲಿ ಕುಳಿತು, ಪ್ರಪಂಚದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿಗಳನ್ನು ನಾವು ಗಳಿಸಬಹುದು. ಉದಾಹರಣೆಗೆ ಹೇಳುವುದಾದರೆ, ಸಂಗೀತ, ಕಲೆಯಿಂದ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಕಯಂತ್ರಶಾಸ್ತ್ರದ ವಿಷಯಗಳವರೆವಿಗೂ ಪದವಿಗಳನ್ನು ಪಡೆಯಬಹುದು. ಕೌಶಲ್ಯಾಧಾರಿತ ಶಿಕ್ಷಣವನ್ನು ಪಡೆಯಲು ಬಹಳ ಅನುಕೂಲವಾಗಿದೆ.
ಕ್ಯಾಂಪಸ್ ಶಿಕ್ಷಣಕ್ಕಿಂತ ಕಡಿಮೆ ವೆಚ್ಚ
ಆನ್‍ಲೈನ್ ಶಿಕ್ಷಣದಲ್ಲಿ ಹಣ ಮತ್ತು ಸಮಯ ಎರಡನ್ನು ಉಳಿಸಬಹುದು. ಕ್ಯಾಂಪಸ್ ಶಿಕ್ಷಣಕ್ಕಿಂತ, ಆನ್‍ಲೈನ್ ಶಿಕ್ಷಣವು ಹೆಚ್ಚು ಉಳಿತಾಯದಾಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್ ಶಿಕ್ಷಣದ ವೆಚ್ಚ ವೇಗವಾಗಿ ಏರುತ್ತಲೆ ಇದೆ. ಕ್ಯಾಂಪಸ್ ಶಿಕ್ಷಣದ ನಿರ್ವಹಣಾ ವೆಚ್ಚವು ಜಾಸ್ತಿಯಾಗಿರುವುದರಿಂದ, ಶಿಕ್ಷಣ ಸಂಸ್ಥೆಗಳು ಹೆಚ್ಚು ಶುಲ್ಕವನ್ನು ವಸೂಲಿಮಾಡುತ್ತಿವೆ. ಆದರೆ ಆನ್‍ಲೈನ್ ಶಿಕ್ಷಣದ ನಿರ್ವಹಣಾ ವೆಚ್ಚವು ಕಡಿಮೆಯಿರುವುದರಿಂದ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದು. ಕ್ಯಾಂಪಸ್ ಶಿಕ್ಷಣ ಪದ್ದತಿಯಲ್ಲಿ ಕಾಣುವ ಸ್ಥಾಪನೆ ಶುಲ್ಕಗಳು, ವಸತಿ ಖರ್ಚುಗಳು, ಕ್ರೀಡಾ ಮತ್ತು ಸಾಂಸ್ಕೃತಿಕ ವೆಚ್ಚಗಳು, ಸಾರಿಗೆ ವೆಚ್ಚಗಳು ಇವು ಯಾವುವು ಇರುವುದಿಲ್ಲ. ಸ್ವಾಭಾವಿಕವಾಗಿ ಆನ್‍ಲೈನ್ ಶಿಕ್ಷಣದ ಶುಲ್ಕ ಗಣನೀಯವಾಗಿ ಕಡಿಮೆಯಿರುತ್ತದೆ.
ಆನ್‍ಲೈನ್ ಶಿಕ್ಷಣದ ಮೂಲಕ ಗ್ರಾಹಕೀಯಗೊಳಿಸಿದ ಕಲಿಕೆ ( customised online learning ) ಸಾಧ್ಯ. ಸಾಧಾರಣವಾಗಿ, ಆನ್‍ಲೈನ್ ಶಿಕ್ಷಣದ ತರಗತಿಗಳಲ್ಲಿ ಕಡಿಮೆ ಸಂಖ್ಯೆ ವಿದ್ಯಾರ್ಥಿಗಳಿರುತ್ತಾರೆ. ಹಲವಾರು ಸಂದರ್ಭಗಳಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರವೇ ಗುರುಗಳ ಜೊತೆಗೆ ಸಂವಹನವನ್ನು ನಡೆಸುತ್ತಾನೆ. ಇದರಿಂದ ಶಿಕ್ಷಕರ ಜೊತೆಯಲ್ಲಿ ಪರಿಣಾಮಕಾರಿಯಾಗಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. ಜೊತೆಗೆ, ಆನ್‍ಲೈನ್ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಅಧ್ಯಯನ ಲೇಖನಗಳು, ವಿಡಿಯೋಗಳು, ಭಾಷಣಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರುವುದರಿಂದ, ವಿದ್ಯಾರ್ಥಿಯ ಅವನ/ಳ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳ ಬಹುದು.
ಸಹಪಾಠಿಗಳ ಜೊತೆಗೆ ಸಾಮಾಜಿಕ ಸಂಪರ್ಕವನ್ನು ಸಹ ಬೆಳೆಸಬಹುದು. ಡಿಜಿಟಲ್ ಸಹಪಾಠಿಗಳೊಂದಿಗೆ ಗ್ರೂಪ್ ವೀಡಿಯೋ ಚಾಟ್‍ಗಳನ್ನು ಆಯೋಜಿಸಬಹುದು, ವಿಚಾರ ವಿನಿಮಯಗಳನ್ನು ಮಾಡಿಕೊಳ್ಳಬಹುದು.
ಆಡಳಿತ ಮಂಡಳಿಯವರ ದೃಷ್ಟಿಯಿಂದಲೂ ಸಹ ಆನ್‍ಲೈನ್ ಶಿಕ್ಷಣ ಹೆಚ್ಚು ವೆಚ್ಚದಾಯಕ. ಕಡಿಮೆ ವೆಚ್ಚದಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಬಹುದು. ಸರ್ಕಾರದ ದೃಷ್ಟಿಯಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುವಂತೆ ಮಾಡುವುದಕ್ಕೆ ದಾರಿ ದೀಪ. GER ( ಸರಾಸರಿ ದಾಖಲಾತಿ ಅನುಪಾತ ) ಹೆಚ್ಚಿಸಲು ಉತ್ತಮವಾದಂತಹ ಮಾರ್ಗ.
ಅನಾನುಕೂಲಗಳು
ಆನ್‍ಲೈನ್ ಶಿಕ್ಷಣದಲ್ಲಿ ಕೆಲವು ಅನಾನುಕೂಲಗಳಿವೆ. ಉದಾಹರಣೆಗೆ ಆನ್‍ಲೈನ್ ಶಿಕ್ಷಣದಲ್ಲಿ ನವನೀಯತೆಯಿರುವುದರಿಂದ, ಪದವಿಯನ್ನು ಗಳಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಅವಕಾಶಗಳಿವೆ. ಪ್ರಾಧ್ಯಾಪಕರ ಮತ್ತು ಸಮಾನ ಮನಸ್ಕರ ನಡುವೆ ಮುಖಾಮುಖಿ ಸಂವಹನ ನಡೆಸುವ ಅವಕಾಶವಿರುವುದಿಲ್ಲ. ಇದರಿಂದ ಪೂರ್ಣ ಮಟ್ಟದ ಕಲಿಕೆ ಕುಂಠಿತವಾಗಬಹುದು. ಸಾಂಪ್ರದಾಯಿಕ ಆನ್ ಕ್ಯಾಂಪಸ್ ಶಿಕ್ಷಣದ ಜೀವನ ಶೈಲಿ, ಶಿಕ್ಷಣದ ಸಂಸ್ಥೆಗಳ ಕಲಿಕಾ ವಾತಾವರಣ, ಸಹ ಪಾಠಿಗಳ ಜೊತೆಯಲ್ಲಿ ಕಳೆಯಬಹುದಾದ ಆನಂದದ ಕ್ಷಣಗಳು ಆನ್‍ಲೈನ್ ಶಿಕ್ಷಣದಲ್ಲಿ ಲಭ್ಯವಿರುವುದಿಲ್ಲ.
ಆನ್‍ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚು ಸಮಯ ಮೀಸಲಿಡಬೇಕಾಗಿರುತ್ತದೆ. ಏಕೆಂದರೆ, ವಿದ್ಯಾರ್ಥಿಗಳು, ಪದವಿಯಲ್ಲಿ ಕಲಿಯುವ ವಿಷಯಗಳ ಬಗ್ಗೆ ಪ್ರಭುತ್ವವನ್ನು ಹೊಂದಿದ್ದಾರೆ ಎಂಬುವುದನ್ನು ದೂರದಿಂದಲೇ ಸಾಬೀತು ಪಡಿಸಬೇಕು. ಆನ್‍ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸ್ವತಂತ್ರ ಅಧ್ಯಯನವನ್ನು ಮಾಡಿರುವುದರಿಂದ, ಮಾನ್ಯತೆಯನ್ನು ಪಡೆದ ಮತ್ತು ಶ್ರೇಷ್ಠ ಮಟ್ಟದ ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳು ಹೆಚ್ಚು ಕಾಲ ಅಧ್ಯಯನದಲ್ಲಿ ತೊಡಗುವಂತೆ ನಿರ್ದೇಶನ ನೀಡಬಹುದು.ಪುಟ್ಟ ಮಕ್ಕಳ ಮನೋ ವಿಕಾಸಕ್ಕೆ ಈ ವ್ಯವಸ್ಥೆ ಅಷ್ಟೊಂದು ಅನುಕೂಲಕರವಲ್ಲ.
ಆನ್‍ಲೈನ್ ಶಿಕ್ಷಣದ ಅನುಕೂಲಗಳನ್ನು ಮತ್ತು ಅನಾನುಕೂಲಗಳನ್ನು ತುಲನೆ ಮಾಡಿ, ವೈಯಕ್ತಿಕ ಗುರಿಗಳ ಮತ್ತು ಆರ್ಥಿಕ ಬಲದ ಆಧಾರದ ಮೇಲೆ ಆಯ್ಕೆಯನ್ನು ಮಾಡಬಹುದು. ಮುಂದಿನ ದಿನಗಳಲ್ಲಿ ಆನ್‍ಲೈನ್ ಶಿಕ್ಷಣ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.2019 ರಲ್ಲಿ, ಸಂತ ಕ್ಲಾರಾ ವಿಶ್ವ ವಿದ್ಯಾಲಯವು ಆನ್‍ಲೈನ್ ಶಿಕ್ಷಣದ ಪರಿಣಾಮದ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಶೇಖಡಾ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಆನ್‍ಲೈನ್ ಶಿಕ್ಷಣದ ಜೊತೆಗೆ, ಕ್ಯಾಂಪಸ್‍ನಲ್ಲಿ ಕಲಿಕೆಯನ್ನು ಅನುಭವಿಸ ಬಯಸುವ ವಿದ್ಯಾರ್ಥಿಗಳು ಹೈಬ್ರಿಡ್ ( ಮಿಶ್ರಣ ) ಕೋರ್ಸುಗಳಿಗೆ ಸೇರಬಹುದು. ಮುಂದಿನ ದಿನಗಳಲ್ಲಿ ಆನ್‍ಲೈನ್ ಶಿಕ್ಷಣ, ಶಿಕ್ಷಣದ ಪದ್ದತಿಯನ್ನೇ ಬದಲಾಯಿಸಿದರೆ ಅಚ್ಚರಿಪಡುವ ಅಗತ್ಯವಿಲ್ಲ.
Sir can you please write a about ಸಾಮಾಜಿಕ ಅಂತರ ಪ್ರಬಂಧ it’s very necessary for our board exam
ಸರ್ ತುಂಬಾ ಒಳ್ಳೆಯ ಸುದ್ದಿಯ ಬಗ್ಗೆ ಮಾಹಿತಿ ನೀಡಿದ್ದೀರಾ ನಿಮಗೆ ಧ್ಯವಾದಗಳು