ಆಗ ತಾನೇ ಹಾರಲು ಕಲಿತ ಎಳೆ ರೆಕ್ಕೆಯ ಮರಿ ಸೊಳ್ಳೆಯೊಂದು ಅಮ್ಮನ ಅಪ್ಪಣೆ ಪಡೆದು ಮೊಟ್ಟ ಮೊದಲ ಬಾರಿ ಹಾರಲು ಹೊರಟಿತು . ಸ್ವಚ್ಛದಿಂದ ಹಾರಾಡಿಕೊಂಡು ಮರಳಿ ಅಮ್ಮನ ಹತ್ತಿರ ಬಂದು ಕೂತಿತು . ಅದರ ಖುಷಿ ನೋಡಿದ ಅಮ್ಮ …. ಹೇಗಿತ್ತು ಮಗು ಮೊದಲ ಹಾರಾಟದ ಅನುಭವ ಎಂದು ಕೇಳಿದಳು ?
ಆಗ ಆ ಮರಿಸೊಳ್ಳೆ ಹೇಳಿತು ಅಮ್ಮಾ ನೀವೆಲ್ಲಾ ಯಾಕೆ ಮನುಷ್ಯರನ್ನ ಕೆಟ್ಟವರು ಅಂತ ಹೇಳ್ತೀರ , ಅವರೆಷ್ಟು ಒಳ್ಳೆಯವರು ಗೊತ್ತಾ , ನಾನು ಫಸ್ಟ್ ಟೈಂ ಹಾರ್ತಿರೋದು ನೋಡಿ ಅವರೆಲ್ಲಾ ನನ್ ಹತ್ತಿರ ಬಂದೂ ಬಂದೂ ಚಪ್ಪಾಳೆ ತಟ್ಟಿ ಅಭಿನಂದಿಸ್ತಾ ಇದ್ರು . ಈ ಮಾತನ್ನು ಕೇಳಿ ಅಮ್ಮ ಸೊಳ್ಳೆ ಅವಕ್ಕಾಯಿತು .
ಹೌದು……
ನಮ್ಮ ಮೇಲೆ ಕೂತು ರಕ್ತ ಹೀರುತ್ತಿದ್ದ ಸೊಳ್ಳೆಯನ್ನು ಪಟ್ ಎಂದು ಹೊಡೆದು ಕೊಂದಾಗ ನಮ್ಮೊಳಗೆ ಯಾವುದೇ ರೀತಿಯ ಪಶ್ಚಾತ್ತಾಪವಿರದ ಒಂದು ನಿರುಮ್ಮಳವಾದ ಆನಂದ ಆತ್ಮತೃಪ್ತಿ ಉಂಟಾಗುತ್ತದೆ . ತಪ್ಪಿತಸ್ಥ ಕೀಟಕ್ಕೆ ತಕ್ಕ ಮರಣದಂಡನೆಯ ಶಿಕ್ಷೆ ಕೊಟ್ಟ ಸಂತೋಷ ಲಭಿಸುತ್ತದೆ . ಹೀರಿದ ರಕ್ತವನ್ನು ಅಲ್ಲೇ ಕಕ್ಕಿಸಿ ಅದೇ ರಕ್ತದ ಮಡುವಿನಲ್ಲಿ ಆ ಸೊಳ್ಳೆಯನ್ನು ದಬ್ಬಿದ ಸಮಾಧಾನ ,ನಮ್ಮ ತಂಟೆಗೆ ಬಂದ ಶತ್ರುವೊಬ್ಬನನ್ನು ಹೊಡೆದುರುಳಿಸಿದ ಅನುಭವವಾಗುತ್ತದೆ .
ಅನಾಫಿಲಿಸ್ ಎಂಬ ಜಾತಿಯ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗ ಹರಡುತ್ತದೆ ಎಂದು ಎಂದೋ ಬಾಲ್ಯದಲ್ಲಿ ಓದಿದ ನೆನಪು ಇನ್ನೂ ಮಾಸೇ ಇಲ್ಲ . ಅಂದಿನಿಂದಲೂ ಸೊಳ್ಳೆಗಳು ಅಂದರೆ ಅದು ನಮ್ಮ ಶತ್ರು .
ವಿಪರೀತ ಸೊಳ್ಳೆ ಕಾಟ , ಕಚ್ಚಿದ್ರೆ ಇಂಜೆಕ್ಷನ್ ಕೊಟ್ಟಂಗಾಗುತ್ತೆ , ಕಿವಿ ಹತ್ರ ಬಂದು ಗುಂಯ್ ಅಂತ ಸೌಂಡ್ ಮಾಡುತ್ತೆ ನಿದ್ದೇನ ಬರಲ್ಲ ಇವೆಲ್ಲಾ ನಮ್ಮ ದಿನನಿತ್ಯದ ಮಾತುಗಳೇ ….
ಕರೆಂಟ್ ಹೋದ ಸಮಯದಲ್ಲಿ ಫ್ಯಾನೂ ಇಲ್ಲದೇ ನಿದ್ದೆಯೂ ಸರಿಯಾಗಿ ಬರದೇ ಇದ್ದಾಗ ಸೊಳ್ಳೆಯೊಂದು ಕಿವಿ ಹತ್ರ ಬಂದು ಗುಂಯ್ ಗುಡುವುದು ಇದೆಯಲ್ಲಾ ಅದು ಸೊಳ್ಳೆ ಕಚ್ಚಿ ರಕ್ತ ಹೀರುವುದಕ್ಕಿಂತಲೂ ಹೆಚ್ಚು ನೋವು ಕೊಡುತ್ತದೆ .
ಸೊಳ್ಳೆಗಳ ವಿರುದ್ಧ ನಾವು ಮೊದಲಿನಿಂದಲೂ ಸಮರ ಸಾರುತ್ತಲೇ ಇದ್ದೇವೆ . ನಮ್ಮತ್ರ ಸುಳಿಯದಂತೆ ಸೊಳ್ಳೆ ಪರದೆ , ಕಿಟಕಿಗಳಿಗೆ ಮೆಷ್ಷು . ಅವುಗಳ ಅಂತ್ಯಕ್ಕೆ ಅಂತಲೇ ಸೊಳ್ಳೆ ಬತ್ತಿ , ಮಸ್ಕಿಟೋ ಮ್ಯಾಟು , ಲಿಕ್ವಿಡ್ಡು , ಲೋಷನ್ನು , ಸ್ಪ್ರೇ ಹೀಗೆ ಹತ್ತು ಹಲವು ಸಾಧನಗಳನ್ನು ಉಪಯೋಗಿಸುತ್ತಿದ್ದೇವೆ . ಈಗ ಅದನ್ನು ಬಡಿಯಲು ವಿನೂತನ ಮಾದರಿಯ ಬ್ಯಾಟರಿ ಬ್ಯಾಟು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ .
ಸೊಳ್ಳೇ ಕಾಟಕ್ಕೆ ಮತ್ತದರ ನಿಯಂತ್ರಣಕ್ಕೆ ಎಂತಹುದೇ ಆವಿಷ್ಕಾರಗಳಾಗಿ ಹೊಸ ಹೊಸ ಪ್ರಾಡಕ್ಟ್ ಗಳು ಬಜಾರಿಗೆ ಬಂದಿದ್ದರೂ ನಾವು ಸಣ್ಣವರಿದ್ದಾಗ ತರುತ್ತಿದ್ದ ಸುರುಳಿ ಆಕಾರದ ಹಸಿರು ಬಣ್ಣದ ಕಾಯಿಲ್ ಇದೆಯಲ್ಲ ಅದರ ನೆನಪೇ ಚೆಂದ .ಅಂಗಡಿಯಿಂದ ತಂದ ಆ ಜಂಟಿ ಕಾಯಿಲ್ಲನ್ನು ಹುಷಾರಾಗಿ ವಿಂಗಡಿಸಿ ಒಂದನ್ನು ಎತ್ತಿಟ್ಟು ಮತ್ತೊಂದನ್ನು ಸ್ಟ್ಯಾಂಡಿಗೆ ಸಿಕ್ಕಿಸಿ ಅಂಟಿಸಿ ಮನೆಯ ಒಂದು ಮೂಲೆಯಲ್ಲಿ ಇಡುತ್ತಿದ್ದೆವು . ಬೆಳಿಗ್ಗೆ ಅದರ ಬೂದಿಯೇ ವೃತ್ತಾಕಾರದ ಚೌಕಗಳ ರಂಗೋಲಿಯಂತೆ ಕಾಣುತ್ತಿತ್ತು .ಸ್ಟೀಲ್ ರೇಕಿನ ಆ ಸ್ಟ್ಯಾಂಡಂತೂ ಆಗ ನಮಗೆ ಅತ್ಯಮೂಲ್ಯ ಯಾಕಂದ್ರೆ ಅಂಗಡಿಯಲ್ಲಿ ಕಾಯಿಲ್ ಲೂಸ್ ತಗೊಂಡ್ರೆ ಸ್ಟ್ಯಾಂಡು ಕೊಡುತ್ತಿರಲಿಲ್ಲ ಫುಲ್ ಬಾಕ್ಸ್ ಕೊಂಡರೆ ಮಾತ್ರ ಸ್ಟ್ಯಾಂಡು ಉಚಿತವಾಗಿ ಸಿಗುತ್ತಿತ್ತು .
ಮನುಷ್ಯ ತನ್ನನ್ನು ತಾನು ಹೊಡೆದುಕೊಳ್ಳುವಂತೆ ಮಾಡುವ ಜಗತ್ತಿನ ಏಕೈಕ ಜೀವಿ ಈ ಸೊಳ್ಳೆ .ಆಗಿನಿಂದಲೂ ಹಾಗೇ ಇದೆ ಗಾತ್ರವೂ ಬದಲಾಗಲಿಲ್ಲ , ನೋವೂ ಬದಲಾಗಲಿಲ್ಲ , ಪರಿಣಾಮ ಮಾತ್ರ ಕೊಂಚ ಬದಲಾಗಿದೆ ಅಷ್ಟೇ .
ಏನೇ ಆಗಲಿ ಈ ಕಾಣದ ವೈರಸ್ ಗಳಿಗಿಂತ ಕಚ್ಚುವ ಸೊಳ್ಳೆಗಳೇ ಪರವಾಗಿಲ್ಲ.
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.