ಈ ವರ್ಷದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಅಂದಿನಿಂದ ಕೋವಿಡ್ ತಡೆಯಲು ಹತ್ತು ಹಲವಾರು ವಿಧಾನಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ನಡೆಯಿತು. ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಮ್ಮ ಜೀವದ ಹಂಗು ತೊರೆದು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ.
ಸಂತೇಬೆನ್ನೂರಿನ ಪೊಲೀಸ್ ಠಾಣೆ ಆರಂಭದಿಂದಲೂ ವಿನೂತನವಾಗಿ ಕೋವಿಡ್ ನಿಯಂತ್ರಣ ಅಭಿಯಾನ ನಡೆಸಿದರು. ಆರಂಭದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ಧರ್ಮದ ಧರ್ಮಗುರುಗಳನ್ನು ಆಹ್ವಾನಿಸಲಾಯಿತು. ಅವರ ಮೂಲಕ ಕೊರೊನಾ ತಡೆಗೆ ಮಾರ್ಗಸೂಚಿಗಳನ್ನು ಮನದಟ್ಟು ಮಾಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥ ನಡೆಸಿ ಮನೆ-ಮನೆಗೆ ಕರಪತ್ರ ಹಂಚಲಾಯಿತು. ಡಿವೈಎಸ್ಪಿ ಪ್ರಶಾಂತ್ ಮನೋಳಿ, ಇನ್ಸ್ ಪೆಕ್ಟರ್ ಆರ್.ಆರ್.ಪಾಟೀಲ್, ಪಿಎಸ್ ಐ ಶಿವರುದ್ರಪ್ಪ ನೇತೃತ್ವ ವಹಿಸಿದ್ದರು.
ಆನಂತರ ಲಾಕ್ ಡೌನ್ ನಲ್ಲಿ ಹೊರ ರಾಜ್ಯಗಳಿಂದ ಬಂದ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡರು. ಸೀಲ್ ಡೌನ್ ಗಳ ಮೂಲಕ ನಿಯಂತ್ರಣಕ್ಕೆ ಶ್ರಮಿಸಿದರು.
ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಸರಳ ವ್ಯಂಗ್ಯ ಚಿತ್ರಗಳ ಮೂಲಕ ಸಂತೇಬೆನ್ನೂರು ಪೊಲೀಸ್ ಠಾಣೆ ಕೋವಿಡ್-19 ತಡೆಗೆ ವಿನೂತನ ಪ್ರಯತ್ನ ನಡೆಸಿದೆ.
ಈಗಾಗಲೇ ಕೋವಿಡ್ ತಡೆಗೆ ವಿಶ್ವದಾದ್ಯಂತ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಅನೇಕ ಬಗೆಯ ಔಷಧಗಳಿಂದ ಸೋಂಕಿತರನ್ನು ಉಪಚರಿಸಲಾಗುತ್ತಿದೆ. ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಹಲವು ವಿಧಾನಗಳು ಪ್ರಚಾರ ಪಡೆದಿವೆ. ಇದೆಲ್ಲಾ ಪ್ರಯತ್ನಗಳ ಹೊರತಾಗಿಯೂ ವೈರಾಣುಗಳ ಹರಡುವಿಕೆ ನಿಯಂತ್ರಣ ತರಲು ಸಾಧ್ಯವಾಗುತ್ತಿಲ್ಲ.
ರೋಗ ತಡೆಯಲು ಪ್ರಮುಖ ಅಸ್ತ್ರಗಳೇ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಆಗಾಗ್ಗೆ ಸೋಪು ಹಾಗೂ ಸ್ಯಾನಿಟೈಸರ್ ಬಳಕೆಯಿಂದ ಕೈ ತೊಳೆಯುವುದು. ಇವು ಸರಳ, ಖರ್ಚಿಲ್ಲದ ವಿಧಾನಗಳಿಂದ ವೈರಾಣುಗಳ ಹರಡುವಿಕೆ ತಡೆಯಲು ಅನುಸರಿಸಬೇಕಾದ ವಿಧಾನಗಳು. ಎಷ್ಟೆಲ್ಲಾ ಪ್ರಚಾರದ ನಡುವೆಯೂ ಜನರ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ಗ್ರಾಮಗಳಲ್ಲಿಯೂ ಕೋವಿಡ್ ಸೋಂಕು ತಾಂಡವವಾಡಲು ನಮ್ಮ ಅಸುರಕ್ಷತೆ ಕಾರಣ.
ಈ ಹಿನ್ನೆಲೆಯಲ್ಲಿ ‘ನನ್ನ ಮಾಸ್ಕ ನನ್ನ ಲಸಿಕೆ’, ಸ್ವಚ್ಛ ಕೈಗಳು ಸುರಕ್ಷಿತ ಕೈಗಳು, ವ್ಯಕ್ತಿಗತ ಅಂತರವೇ ರೋಗ ನಿರೋಧಕ ಶಕ್ತಿ, ಬುದ್ಧಿವಂತರಾಗಿ, ಸ್ವಚ್ಛವಾಗಿರಿ ಎಂಬ ಘೋಷ ವಾಕ್ಯಗಳ ಕಾರ್ಟೂನ್ ಗಳ ಮೂಲಕ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಅಡಿಯಲ್ಲಿ ಸಾಮಾಜಿಕ ಜಾಲ ತಾಣಗಳ ಮೂಲಕ ಜನಾಂದೋಲನ ನಡೆಸಲಾಗಿದೆ.
ಸಂತೇಬೆನ್ನೂರಿನ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ಪಡೆ ಶುಕ್ರವಾರ ಪಿಎಸ್ ಐ ಶಿವರುದ್ರಪ್ಪ ಮೇಟಿ ನೇತೃತ್ವದಲ್ಲಿ ಕೋವಿಡ್ ತಡೆಯ ಮುಂದುವರಿದ ಭಾಗವಾಗಿ ಗ್ರಾಮದ ಪ್ರಮುಖ ವಾಣಿಜ್ಯ ತಾಣಗಳಿಗೆ ಭೇಟಿ ನೀಡಿ ಅಂತರಕ್ಕಾಗಿ ಚೌಕಗಳನ್ನು ಹಾಕಿದರು. ಮಾಸ್ಕ್ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಕರಪತ್ರದ ಮೂಲಕ ಜಾಗೃತಿ ಮೂಡಿಸಿದರು.
ಅಕ್ಟೋಬರ್ 3ನೇ ವಾರದಲ್ಲಿ ಸ್ವಲ್ಪ ಇಳಿಮುಖ ಕಂಡ ಸೋಂಕು ಧೃಡ ಪ್ರಕರಣಗಳ ಹಿನ್ನೆಲೆಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಮತ್ತೊಮ್ಮೆ ಅಂತರ ಕಾಯ್ದುಕೊಳ್ಳುವ ಪಟ್ಟಿಗಳನ್ನು ಹಾಕುವ ಮೂಲಕ ಮುಂದುವರಿದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೋವಿಡ್ ನಿಯಂತ್ರಣಕ್ಕೆ ಅಂತರ, ಮಾಸ್ಕ ಧರಿಸುವುದು ಹಾಗೂ ಸ್ವಚ್ಛತೆಯೇ ಸರಳ ಉಪಾಯ. ಮೈಮರೆತು ಉದಾಸೀನ ಮಾಡುವ ಜನರಲ್ಲಿ ಜಾಗೃತಿಯ ಮೂಲಕ ಇವುಗಳ ಅನುಸರಣೆ ಉತ್ತೇಜಿಸುವುದು. ಆ ಮೂಲಕ ಕೊರೊನ ಮುಕ್ತ ಸಮಾಜ ನಿರ್ಮಿಸಲು ಪ್ರಯತ್ನ ನಡೆದಿದೆ ಎನ್ನುತ್ತಾರೆ ಪಿಎಸ್ ಐ ಶಿವರುದ್ರಪ್ಪ ಮೇಟಿ.
It’s nice good job sir
Good Work. It is worthy of emulation by others. Thanks to Mr Veeresh prasad for the well written article.