ದಸರಾ ಎನ್ನುವ ಶಬ್ದವೇ ರೋಮಾಂಚನ. ನೆನಪುಗಳನ್ನು ದಂಡಿಯಾಗಿ ಹೊತ್ತು ತರುವ ನಾವೆ. ಮರೆಯದ ಬಾಲ್ಯಕ್ಕೆ ತನ್ನದೇ ಮೆರುಗನ್ನು ನೀಡಿದೆ. ಬಾಲ್ಯದ ನನ್ನೂರ ದಸರಾದ ನೆನಪನ್ನು ನಿಮ್ಮೊಡನೆ ಹಂಚಿ ಸವಿಯುವ ಮನಸ್ಸಾಯ್ತು.
ದಸರಾ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಅರ್ಧ ವಾರ್ಷಿಕ ರಜೆಯ ಕಚಕುಳಿ. ಅರ್ಧ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ,ಆಕ್ಟೊಬರ್ 2 ರ ಗಾಂಧಿ ಜಯಂತಿ ಮಾಡಿ ರಜೆ ಘೋಷಿಸುತ್ತಿದ್ದ ಶಾಲೆಗಳು ಮತ್ತೆ ತೆರೆಯುತ್ತಿದುದೇ ನವಂಬರ್ 1 ರ ರಾಜ್ಯೋತ್ಸವಕ್ಕೆ. ಬಯಲು ಸೀಮೆಯ ನನ್ನೂರು ಆಶ್ವಿಜ ಮಾಸದ ಈ ವೇಳೆಯಲ್ಲಿ ತುಂಬಿದ ಕೆರೆಯಿಂದ, ನವಿರು ಹಸಿರಿನ ಹೊಲ ಗದ್ದೆಗಳಿಂದ,ಹಿತವಾದ ಹವಾಮಾನದಲ್ಲಿ ನಲಿಯುತ್ತಿತ್ತು. ಉತ್ತರಾ ಮಳೆಯಿಂದ ಕೆರೆಕುಂಟೆಗಳು ತುಂಬಿ ಹರಿಯುತ್ತಿದ್ದರೆ, ಆಗ ತಾನೇ ಪ್ರವೇಶವಾಗುತ್ತಿದ್ದ ಚಿತ್ತಾ ಮಳೆ ನನಗೇನಾದ್ರು ಕೆಲಸ ಇದೆಯಾ ಎಂಬಂತೆ ಆಗೊಮ್ಮೆ,ಈಗೊಮ್ಮೆ ಇಣುಕಿ ಹಾಕುತ್ತಾ,ಕೆಲವೊಮ್ಮೆ ಸಿಟ್ಟು ಮಾಡಿಕೊಂಡು ಭೋರ್ಗರೆದು ಮನೆಯ ಮಣ್ಣಿನ ಮಾಡುಗಳನ್ನು,ಊರಿನ ರಸ್ತೆ, ಓಣಿಗಳನ್ನೆಲ್ಲ ರಚ್ಚ ರಚ್ಚ ಕೆಸರು ಮಾಡಿ ಮುಗುಳ್ನಗುತ್ತಿತ್ತು. ಚಿತ್ತಾ ಮಳೆ ಮುನಿಸುಕೊಂಡಿದ್ದರೆ, ಆಗಲೇ ತುಂಬಿರುತ್ತಿದ್ದ ಕೆರೆಯ ಮೇಲಿಂದ ಹಾಗೆಯೇ ಸುಯ್ಯೆಂದು ಗಾಳಿ ಬಂದರೆ, ಇಡೀ ಊರಿಗೆ ಊರೇ ಹವಾನಿಯಂತ್ರಣದಲ್ಲಿದೆಯೇನೋ ಎನ್ನುವಂತಹ ತಣ್ಣನೆಯ ಗಾಳಿ ಆವರಿಸುತ್ತಿತ್ತು. ಕ್ಷೀಣಿಸುತ್ತಿದ್ದ ಮಳೆ,ಮೆಲ್ಲನೆ ಇಣುಕುತ್ತಿದ್ದ ಚಳಿಗೆ ದಾರಿ ಬಿಡುತ್ತಿದ್ದ ಸಮಯದಲ್ಲಿ ಮೆಲ್ಲನೆ ದಸರಾ ಹಬ್ಬದ ಸಂಭ್ರಮ ನನ್ನೂರನ್ನುಆವರಿಸುತ್ತಿತ್ತು.
ಮನೆಯವರಿಗೆಲ್ಲ ಹೊಸಬಟ್ಟೆ ಬರುವುದರೊಂದಿಗೆ ಹಬ್ಬದ ಕಳೆ ಕಟ್ಟುತ್ತಿತ್ತು. ಮಕ್ಕಳೇ ಸಂಪತ್ತು ಅಂತ ನಂಬಿದ್ದ ಕಾಲ ಅದು. ಒಂದು ಕುಟುಂಬದ ಮನೆಗಳಲ್ಲಿ ಕನಿಷ್ಠ ನಾಲ್ಕೈದು ಗಂಡು ಮಕ್ಕಳು, ಮೂರ್ನಾಲ್ಕು ಹೆಣ್ಣು ಮಕ್ಕಳು. ಬಟ್ಟೆ ನೋಡಿಯೇ ಯಾರ ಮನೆಯ ಹುಡುಗಿ, ಯಾರ ಮನೆಯ ಹುಡುಗ ಅಂತ ವರ್ಷ ಇಡೀ ಗುರುತಿಸುತ್ತಿದ್ದ ಕಾಲ ಅದು. ನನ್ನ ಮನೆಯಲ್ಲಿ ನಾವು ಐದು ಜನ ಗಂಡು ಹುಡುಗರು. ಎಲ್ಲರಿಗೂ ಒಂದೇ ತೆರನಾದ ಅಂಗಿ,ನಿಕ್ಕರ್. ಮಕ್ಕಳಲ್ಲಿ ಭೇದ ಭಾವ ಕೂಡದು.
ನಮ್ಮೂರ ನಾರಾಯಣ ಶೆಟ್ರ ಅಂಗಡಿ ಅಂದ್ರೆ ಎಲ್ಲಾ ಸಾಮಾನು ಸಿಗುವಂಥ ಅಂಗಡಿ. ಮೊಳೆ,ಬೋಲ್ಟ್,ನಟ್, ಜ್ವರ ಕೆಮ್ಮು ನೆಗಡಿಯ ಗುಳಿಗೆಗಳು, ಪೆನ್ನಿನ ನಿಬ್ಬು,ಇಂಕು, ಪುಸ್ತಕಗಳು. ದೀಪಗಳ ಸೀಮೆ ಎಣ್ಣೆ, ಅಡುಗೆಯ ಒಳ್ಳೆಣ್ಣೆಯಿಂದ ಎಲ್ಲ ಅಡುಗೆ ಸಾಮಾನು. ಇಂತಹದು ಇಲ್ಲ ಅನ್ನುವ ಮಾತೇ ಇಲ್ಲ,ಬಟ್ಟೆಯ ಜವಳಿ ಅಂಗಡಿಯೂ ಸೇರಿ. ಊರಲ್ಲಿ ಯಾರಾದ್ರೂ ಬಿದ್ದು ಗಾಯ ಮಾಡಿಕೊಂಡರೂ ಟೀಂಚರ್ ಹಚ್ಚಿ ಅಂತ ಓಡುತ್ತಿದ್ದುದೇ ಅಲ್ಲಿಗೆ. ಅದು ಮಾತ್ರ ಉಚಿತ. ಹಾಗಾಗಿ ನಾರಾಯಣ ಶೆಟ್ಟರ ಅಂಗಡಿಗೆ ಭೇಟಿ ನೀಡದೇ ನಮ್ಮೂರಲ್ಲಿ ಯಾರೂ ದಿನಕಳೆಯಲು ಸಾಧ್ಯ ಇಲ್ಲ ಅನ್ನುವಷ್ಟು ನಂಟು. ಬಜಾರಾದ ಬಸವಣ್ಣ ಗುಡಿಯ ಹಿಂದೆ ದೊಡ್ಡದಾದ ಅವರ ಸಾಮಾನುಗಳನ್ನು ಇಡಲು ಮಾಡಿದಂತಹ ಮನೆ. ನನಗಂತೂ ಅದರ ಒಳಹೋಗಿ,ಮಬ್ಬುಗತ್ತಲಲ್ಲಿ ವಿಧ,ವಿಧ ಸಾಮಾನಿನ ವಾಸನೆ ಹೀರುತ್ತಾ, ದೊಡ್ಡ ದೊಡ್ಡ ಚೀಲಗಳಲ್ಲಿ ಇರುತ್ತಿದ್ದ ಸರಂಜಾಮು ನೋಡೋದೇ ವಿಸ್ಮಯ.
ಅಪ್ಪನ ಗೆಳೆಯರಾಗಿದ್ದ ಕೃಷ್ಟಣ್ಣ ಶೆಟ್ಟಿ ಯವರ ಅಂಗಡಿಯಲ್ಲಿ ನಮ್ಮ ದಿನನಿತ್ಯದ ವ್ಯವಹಾರ.ತಿಂಗಳಿನ ಆಹಾರದ ಪಟ್ಟಿ ಹಿಡಿದು ರಾತ್ರಿ ಊಟದ ನಂತರ ಹೋದರೆ, ಬರುತ್ತಿದ್ದುದೇ ಮಧ್ಯರಾತ್ರಿಗೆ. ಆ ಅಂಗಡಿಯಲ್ಲಿ ಮಂಡಕ್ಕಿಯ ಚೀಲ ಯಾವಾಗಲೂ ಬಾಯಿ ತೆರೆದುಕೊಂಡೇ ಇರುತ್ತಿತ್ತು. ಆ ಚೀಲಕ್ಕೆ ಕೈ ಹಾಕಿ ಮಂಡಕ್ಕಿ ತಿನ್ನದವರೇ ಇಲ್ಲ ನಮ್ಮೂರಲ್ಲಿ. ಅದೇನೋ ಯಾರಿಗೂ ಬೇಡ ಅನ್ನುತ್ತಿರಲಿಲ್ಲ ಅವರು. ನಾನು ದೊಡ್ಡಪ್ಪ,ದೊಡ್ಡಮ್ಮಅಂತಲೇ ಕರೆದದ್ದು ಆ ದಂಪತಿಗಳನ್ನು. ಬಟ್ಟೆ ವ್ಯಾಪಾರ ಆಗ ಅಲ್ಲಿರದಿದ್ದ ಕಾರಣ ದಸರಾ ಬಟ್ಟೆಯ ಖರೀದಿ ನಾರಾಯಣ ಶೆಟ್ರ ಅಂಗಡಿಯಲ್ಲಿ. ಅಪರೂಪಕ್ಕೆ ಹೋಗುತ್ತಿದ್ದ ಅಪ್ಪನನ್ನು ಕೃಶ ದೇಹದ ಹಿರಿ ಜೀವ ನಾರಾಯಣ ಶೆಟ್ರು ಬಲು ಆಪ್ಯಾಯಮಾನವಾಗಿ ಮಾತಾಡಿಸುತ್ತ ಎಲ್ಲ ವಿಷಯಗಳ ವಿನಿಮಯವೂ ಆಗಿಬಿಡುತ್ತಿತ್ತು. ನನಗೋ ಹೊಸ ಬಟ್ಟೆ ನೋಡುವ ಆತುರ. ಕೊನೆಗೂ ನಾರಾಯಣ ಶೆಟ್ಟರು ಅಂಗಡಿಯ ಗಲ್ಲದಿಂದ ಜವಳಿ ಬೀರುಗಳ ಮುಂದೆ ಬಂದು ಕುಳಿತಾಗ ನನಗೆ ಕುತೂಹಲದ ಸಮಾಧಾನ. ಅಪ್ಪನಿಗೆ ನಾರಾಯಣ ಶೆಟ್ಟರೇ ಆಗಬೇಕು ವ್ಯವಹಾರಕ್ಕೆ. ಮಗ ಹನುಮಂತ ಶೆಟ್ಟಿ ಸರಿ ಬರುತ್ತಿರಲಿಲ್ಲ. ಆಗಿನ ವ್ಯವಹಾರಗಳೇ ಹಾಗಿರುತ್ತಿದ್ದವು.
ಇದು ಟೆರಿಕಾಟ್ ಅಂತ. ಬಹಳ ಬೆಲೆಯದ್ದು,5 ರೂಪಾಯಿಗೆ ಗಜ (ಮೀಟರ್). ಇದನ್ನು ತೆಗೆದುಕೊ ಅಂತ ನಾರಾಯಣ ಶೆಟ್ರು ಹೇಳಿದರು ಅಂದ್ರೆ ಆಯ್ತು ಅನ್ನುತ್ತಿದ್ದರು ಅಪ್ಪ. ಅಂಗಿಗೆ ಟೆರಿಕಾಟ್, ನಿಕ್ಕರ್ರಿಗೆ ದಾವಣಗೆರೆ ಕಾಟನ್ ಮಿಲ್ಲಿನ ಬಟ್ಟೆ. ಎಷ್ಟು ಬೇಕಾಗುತ್ತೆ ಅಂತ ಅವರೇ ಲೆಕ್ಕ ಹಾಕಿ, ಕಾಲು ಇಂಚು ಅಗಲದ , ಮೀಟರ್ ಉದ್ದದ ತೆಳುವಾದ ಕಬ್ಬಿಣದ,ಗಜದ ಕಟ್ಟಿಗೆ ಅಂತ ಕರೆಯಲ್ಪಡುತ್ತಿದ್ದ ಕೋಲಿನಿಂದ ಬಟ್ಟೆ ಅಳೆಯುವುದೇ ನೋಡಲು ಚೆನ್ನ. ಅಳೆದ ನಂತರ ಕತ್ತರಿಯಿಂದ ಕತ್ತರಿಸುವುದಂತೂ ಇನ್ನೂ ಚೆನ್ನ. ಹಿರಿಯರಿಗೆ ಅಂತ ಹೇಳಿ ಅಪ್ಪ ಹಾಕುತ್ತಿದ್ದ ಕಚ್ಛೆ ಪಂಚೆ, ಅಮ್ಮನ ಸೀರೆ ತೆಗೆದುಕೊಂಡು ಸಣ್ಣ ಹಗ್ಗದ ಹುರಿಯಿಂದ ಕಟ್ಟಿದ ಬಟ್ಟೆಯ ಗಂಟನ್ನು ಒಂದು ಕಡೆ ಇಟ್ಟು, ಒಂದು ಸಣ್ಣ ಕಾಗದದಲ್ಲಿ ಎಷ್ಟಾಯ್ತು ಅಂತ ಬರೆಯುತ್ತಿದ್ದರು. ಆಗ ತಾನೇ ದಶಮಾಂಶದ ಗುಣಾಕಾರ,ಕೂಡುವಿಕೆ ಕಲಿತಿದ್ದ ನನ್ನತ್ತ ಕಾಗದ ಹಿಡಿದು, ಅಪ್ಪ ನೋಡು ನಾರಾಯಣ ಶೆಟ್ಟರ ಲೆಕ್ಕ ಸರಿಯಾಗಿದೆಯಾ ಅಂತ ಹೇಳುತ್ತಿದ್ದರು. ನಾನು ಲೆಕ್ಕ ಮಾಡುವುದರಲ್ಲಿ ಮಗ್ನ. ಕುತೂಹಲಿಗಳಾಗಿ ನಾರಾಯಣ ಶೆಟ್ರು ನನ್ನ ಕಡೆ ನೋಡುತ್ತಿದ್ದ ನೋಟವನ್ನು ಬೆರಳುಗಳ ಗೆರೆಗಳೊಂದಿಗೆ ಲೆಕ್ಕ ನೋಡುವುದರ ಜೊತೆ ನಾನು ಗಮನಿಸುತ್ತಿದ್ದೆ. ಅವರು ಬರೆದಿದ್ದ ಕೆಲವಾರು ಸಂಖ್ಯೆಗಳು ನನಗೆ ತಿಳಿಯುತ್ತಿರಲಿಲ್ಲ. ಅಪ್ಪನನ್ನು ಕೇಳುತ್ತಿದ್ದೆ. ನಕ್ಕ ಶೆಟ್ಟರು ನಿಮ್ಮ ಹಾಗೆ ಶಾಲೆಯಲ್ಲಿ ಕುಳಿತು ಕಲೀಲಿಲ್ಲಪ್ಪ, ಮರಳಿನ ಮೇಲೆ ಬರೆದು ಕಲಿತಿದ್ದೆ ಅಂತ ಬಾಯ್ತುಂಬ ನಕ್ಕು ನನಗೊಂದು ಆಗಿನ ಮೂರು ಪೈಸೆ ಆಕಾರದ ಬೆಳ್ಳನೆಯ ಚಪ್ಪಡಿ ಶುಂಠಿ ಪೆಪ್ಪರಮೆಂಟ್ ಕೊಡುತ್ತಿದ್ದರು. ಹುಲಿಕುಂಟೆಪ್ಪ, ನಿನ್ನ ಮಗ ಭಾಳ ಜಾಣ ಅದಾನೋ ಅಂದಾಗ ಅಪ್ಪ ತಲೆಮೇಲೆ ಕೈ ಸವರುತ್ತಿದ್ದರು. ನನಗೆ ಎಲ್ಲರೂ ಸೇರಿ ಕಿರೀಟ ಇಡುತ್ತಿದ್ದಾರೆ ಏನೋ ಅನ್ನುವಂತಹ ಸಂಭ್ರಮ.
ರಾತ್ರಿಯಲ್ಲ ನಿದ್ದೆ ಇಲ್ಲದ ಸಡಗರ. ಬೆಳಿಗ್ಗೆಯೇ ತಂಬಿಗೆ ಹಿಡಿದು ಬಹಿರ್ದಶೆಗೆ ಹೊರಟ ದರ್ಜಿ ಬಂಡ್ರೆಪ್ಪನ ಬೆನ್ನು ಬಿದ್ದು, ಹಬ್ಬದ ಬಟ್ಟೆ ತಂದಿದ್ದೇವೆ. ಹೊಲೆದು ಕೊಡಲು ಅಳತೆ ತೊಗೋಬೇಕಂತೆ. ಮನೆಗೆ ಬರಲು ಅಪ್ಪ ಹೇಳಿದ್ದಾರೆ ಅಂತ ಹೇಳಿ ಉತ್ತರಕ್ಕೆ ಕಾಯ್ತಿದ್ದ ಕುತೂಹಲದ ಕ್ಷಣಗಳನ್ನು ಮರೆಯಲು ಆಗ್ತಿಲ್ಲ. ಒಂಬತ್ತು ಗಂಟೆಗೆ ಬರ್ತೀನಿ ಅಂತ ಹೇಳು ಅಂದಿದ್ದೇ ತಡ, ಮನೆಗೆ ಓಡಿ ಬಂದು ಎಲ್ಲರಿಗೂ ಎಬ್ಬಿಸಿ ಹೇಳೋದೇ.
ಬೆಳೆಯೋ ಹುಡುಗ್ರೋ ಬಂಡ್ರೆಪ್ಪ, ದುಬಾರಿ ಬಟ್ಟೆ. ಸ್ವಲ್ಪ ಡೀಲ (ಸಡಿಲ) ಇಟ್ಟು ಹೊಲಿ ಅಂತ ಅಪ್ಪ ಹೇಳಿದರೆ,ಮತ್ತೂ ಸಡಿಲ ಹೋಲಿತಿದ್ದ ಬಂಡ್ರೆಪ್ಪ, ನೀರಲ್ಲಿ ಹಾಕಿದಾಗ ಚಿಕ್ಕಾದಾಗುತ್ತೆ ಅನ್ನುವ ಕಾರಣ. ಒಟ್ಟಾರೆ ದೊಗಳ ಬಗಳ ಅಂಗಿ,ನಿಕ್ಕರ್ರೇ ನಮ್ಮ ಬಾಲ್ಯದ ತುಂಬಾ. ಸೊಂಟದ ಉಡುದಾರದ ಸಹಾಯ ಇರದ ನಿಕ್ಕರ್ರೇ ಹಾಕಲಿಲ್ಲ ನಾವು. ಅಂಗಿಯಂತೂ ಕೇಳಲೇ ಬೇಡಿ. ತಮ್ಮಂದಿರದ್ದು ಹಾಕಿದರೆ ಸರಿಹೋಗಬಹುದು ಅಂತ ತೆಗೆದರೆ, ಅಮ್ಮ ಅದು ಹೇಗೆ ಗುರುತು ಮಾಡಿದ್ದಳೋ, ಏ ಅದು ನಿಂದಲ್ಲ ಅಂತ ಹೇಳಿಬಿಡುತ್ತಿದ್ದಳು. ಹೇಳಿದ ಸಮಯಕ್ಕೆ ಯಾವತ್ತೂ ಹೊಲಿದು ಕೊಡದ ಬಂಡ್ರೆಪ್ಪನ ಮನೆಗೆ ಆಯ್ತಾ,ಆಯ್ತಾ ಅಂತ ಅಲೆದದ್ದೇ ಅಲೆದದ್ದು. ಹಬ್ಬದ ಬಟ್ಟೆಗಳ ರಾಶಿಯಲ್ಲಿ ಎಲ್ಲಿ ಬೇರೆಯವರಿಗೆ ನಮ್ಮ ಬಟ್ಟೆ ಕೊಟ್ಟು ಬಿಡುತ್ತಾನೋ ಅನ್ನುವ ಆತಂಕದಲ್ಲಿ ಹೋದಾಗೊಮ್ಮೆ ಬಟ್ಟೆ ಹುಡುಕೋದು ಆ ಬಟ್ಟೆಗಳ ರಾಶಿಯಲ್ಲಿ. ಕತ್ತರಿಸಿನಿ, ಹೊಲಿದು ಆಗಿದೆ, ಗುಂಡಿ,ಕಾಜಾ ಹಚ್ಚಿಲ್ಲ ಅನ್ನುವ ಕಾರಣ ಕೇಳಿ,ಕೇಳಿ ಬೇಸರದಿಂದ ಬರೋದು. ಕೊನೆಗೆ ಅಪ್ಪನನ್ನು ದುಂಬಾಲು ಬಿದ್ದು ಕರೆದುಕೊಂಡು ಹೋಗೋದು,ನಾಳೆ ಕೋಟ್ಬಿಡ್ತೀನಿ ಸಾ, ನೀವು ಬರಬ್ಯಾಡ್ರಿ ಅಂತಿದ್ದ ಬಿಟ್ಟರೆ,ಕೊಡ್ತಿರಲಿಲ್ಲ. ನಾಳೆ ಹಬ್ಬಕ್ಕೆ ಹಾಕ್ಕೋಬೇಕು,ಕೊಡ್ಲಿಲ್ಲ ಅಂದ್ರೆ ನಿನ್ನ ಕಡೆನೆ ಇಟ್ಕೋ ಅಂತ ಅಪ್ಪ ಹೇಳ್ಯಾ ರ ನೋಡು ಅಂದ್ರೆ, ರಾತ್ರಿ ಬಂದು ತೊಗೊಂಡು ಹೋಗು ಅಂತಿದ್ದ. ಅಷ್ಟರಲ್ಲಾಗಲೇ ಸಿಕ್ಕ,ಸಿಕ್ಕ ಗೆಳೆಯರನ್ನ ಬಂಡ್ರೆಪ್ಪನ ಮನೆಗೇ ಕರ್ಕೊಂಡು ಹೋಗಿ,ನಮ್ಮ ಅಂಗಿ,ನಿಕ್ಕರ್ ಬಟ್ಟೆ ತೋರಿಸಿದ್ದು ಆಗಿರ್ತಿತ್ತು.
ನಮ್ಮೂರಲ್ಲಿ ಒಂದು ವಿಶೇಷ ಪದ್ದತಿ ಇದೆ. ಅದು ದೇವರು ಊರೊಳಗೆ ಬರೋದು! ಹಿಂದೆ,ಮುಂದೆ ಇಬ್ಬರು ಹೊತ್ತ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನಿಟ್ಟು, ತಪ್ಪಡಿ, ಜಾಗಟೆ, ಶಂಖು ನಾದಗಳೊಂದಿಗೆ ಊರಿಂದ ಒಂದು ಮೈಲಿಯಷ್ಟು ದೂರದಲ್ಲಿರುವ ದೇವಸ್ಥಾನದಿಂದ ಊರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ರೀತಿ ಮಾಡೋದು. ಅದಕ್ಕೆ ಹುಲಿಕುಂಟೆರಾಯ ಇವತ್ತು ಊರಕ ಬರ್ತಾನೆ ಅಂತಲೇ ಅನ್ನೋದು. ಉಗಾದಿ,ರಾಮನವಮಿ,ದಸರಾ,ನಮ್ಮೂರ ರಥೋತ್ಸವದ ಹಿಂದಿನ ದಿನ ಹೀಗೆ ಮುಂತಾದ ಹಬ್ಬಗಳಿಗೆ ದೇವಸ್ಥಾನದ ಉಸ್ತುವಾರಿಕೆಯಿಂದ ಕರೆದು ತಂದರೆ, ಬೇಡಿಕೆ ಅಥವಾ ಸೇವೆಯ ರೂಪವಾಗಿ ಭಕ್ತರು ತಮ್ಮ ಇಷ್ಟಾರ್ಥಗಳು ಕೈಗೂಡಿದಾಗ ಅದಕ್ಕೆ ತಗಲುವ ವೆಚ್ಚ ಭರಿಸಿ ದೇವರನ್ನು ಊರಲ್ಲಿ ಕರೆತರುವುದು ರೂಢಿ.
ಇಡೀ ಊರು ಸಂಭ್ರಮಿಸುವ ಸಡಗರ ಅದು. ಮನೆಗಳ ಮುಂದೆ ಪಲ್ಲಕ್ಕಿ ಹೋಗುವಾಗ ಆಯಾಯ ಮನೆಗಳಿಂದ ಹಣ್ಣು,ಕಾಯಿ ಕೊಟ್ಟು ದೇವರಿಗೆ ಅಲ್ಲೇ ಮಂಗಳಾರತಿ ಮಾಡೋದು, ಹಾಗೆ ನಿಂತ ಪಲ್ಲಕ್ಕಿಯ ಕೆಳಗಡೆಯಿಂದ ಆ ಕಡೆ,ಈ ಕಡೆ ಮಕ್ಕಳು,ಹೊಸದಾಗಿ ಮದುವೆಯಾದ ಜೋಡಿಗಳು, ಆಗ ತಾನೇ ಹುಟ್ಟಿ,ತವರುಗಳಿಂದ ನಮ್ಮೂರಿಗೆ ಬಂದ ತಾಯಿ,ಮಗು ತೂರೋದು ನಡೆದು ಬಂದ ಪದ್ದತಿ.
ನಮ್ಮ ಮನೆಯಲ್ಲಿ ನವಮಿಯಂದು ಆಯುಧ ಪೂಜೆಯ ಜೊತೆ ಹಿರಿಯರನ್ನು ಇಟ್ಟು ಪೂಜಿಸುವುದು ದಸರಾದ ವಿಶೇಷ. ಎರಡು ತಂಬಿಗೆಗಳಲ್ಲಿ ಕೆರೆ ನೀರನ್ನು ತಂದು, ಮೇಲೆ ವೀಳೆದೆಲೆಯಲ್ಲಿ ತೆಂಗಿನಕಾಯಿ ಇಟ್ಟು, ಒಂದಕ್ಕೆ ಪೇಟ,ಪಂಚೆ,ಮತ್ತೊಂದಕ್ಕೆ ಸೀರೆ,ಓಲೆ, ಅಮ್ಮನ ಮಾಂಗಲ್ಯ ಹಾಕಿ ಸಿಂಗರಿಸಿ ಇವರು ಅಜ್ಜ,ಅಜ್ಜಿ ಅಂತ ಅಪ್ಪ ಹೇಳುತ್ತಿದ್ದರು. ಅಮ್ಮ ಅವತ್ತು ಅರಿಶಿನದ ಚಿಕ್ಕ ತುಂಡನ್ನು ದಾರದಲ್ಲಿ ಕಟ್ಟಿಕೊಂಡು ಮಾಂಗಲ್ಯದ ಬದಲಿಗೆ ಕುತ್ತಿಗೆಯಲ್ಲಿ ಧರಿಸಿ ಪೂಜಿಸುತ್ತಿದ್ದರು. ನಾನು ತದೇಕ ಚಿತ್ತದಿಂದ ಅದನ್ನು ನೋಡುತ್ತಿದ್ದೆ. ಜೊತೆಯಲ್ಲಿ ರಾಮಾಯಣ, ಮಹಾಭಾರತ,ಭಗವದ್ಗೀತೆ, ಹರಿಶ್ಚಂದ್ರ ಕಾವ್ಯ ಮುಂತಾದ ಪುಸ್ತಕಗಳೂ ಪೂಜೆ ಗೊಳ್ಳುತ್ತಿದ್ದವು. ಅಪ್ಪನ ಜೊತೆಯಲ್ಲೇ ಸ್ನಾನ ಮಾಡಿ, ಅವರು ಮಾಡುವ ಪೂಜೆಗೆ ಸಾಕ್ಷಿಯಂತೆ, ಮೈಯೆಲ್ಲ ಗಂಧ ಹಚ್ಚಿಕೊಂಡು ಒಂದು ಮಣೆಯ ಮೇಲೆ ಕೂತಿರುತ್ತಿದ್ದೆ. ಇಡೀ ದೇವರ ಮನೆ ದೀಪ,ಧೂಪಗಳಿಂದ ವಿಶೇಷವಾದ ಸುವಾಸನೆಯಲ್ಲಿ ತುಂಬಿರುತ್ತಿತ್ತು. ಅಪ್ಪನ ಮಂತ್ರಗಳೊಂದಿಗಿನ ಪೂಜೆ ಮುಗಿಯುವಷ್ಟರಲ್ಲಿ ಅಮ್ಮ ಅಡುಗೆ ಮನೆಯಿಂದ ಹೋಳಿಗೆಯ ನೈವೇದ್ಯ ಸಿದ್ಧಮಾಡಿ ತರುತ್ತಿದ್ದರು. ಮಂಗಳಾರತಿಯೊಂದಿಗೆ ಪೂಜೆ ಮುಗಿಯುತ್ತಿತ್ತು. ಹೊರಗಡೆ ಒಬ್ಬ ದಾಸಯ್ಯ ಗರುಡಗಂಬ ಹಿಡಿದು ಶಂಖ ಊದುತ್ತಿದ್ದ. ಅಮ್ಮ ಅವನ ಕಾಲಿಗೆ, ಗರುಡಗಂಬಕ್ಕೆ ನೀರು ಹಾಕಿ ಒಳಬರಲು ಹೇಳುತ್ತಿದ್ದರು. ಅವನ ಶಂಖ ನಾದಕ್ಕೆ ಇಡೀ ಮನೆಯೇ ಘರ್ಜಿಸಿದಂತಹ ಅನುಭವ ನನಗೆ. ರಂಗೋಲಿ ಹಾಕಿ, ಅಕ್ಕಿಯ ಮೇಲೆ ದಾಸಯ್ಯನ ಗರುಡಗಂಬ ನಿಲ್ಲುತ್ತಿತ್ತು. ಅದಕ್ಕೆ ಪೂಜೆ,ನೈವೇದ್ಯೆ. ಅವನು ತಂದಿರುತ್ತಿದ್ದ ತಾಮ್ರದ ಬೋಗುಣಿ ತುಂಬಾ ಮಾಡಿದ್ದ ಅಡುಗೆಯ ಎಲ್ಲವನ್ನೂ ಅಮ್ಮ ಹಾಕಿ,ಕೆಳಗೆ ಬೀಳಿಸುತ್ತಿದ್ದಳು. ಇದು ಯಾವಾಗಲೂ ತುಂಬಿ ಹರಿಯಬೇಕು, ನೋಡಿಕೊಳ್ಳಿ ಅಂತ ನಮಗೆ ಹೇಳುತ್ತಿದ್ದಳು. ವಿಚಿತ್ರ,ವಿಸ್ಮಯದಿಂದ ,ತನ್ಮಯನಾಗಿ ನಾನು ಎಲ್ಲವನ್ನು ನೋಡುತ್ತಿದ್ದೆ. ಊಟ ಮಾಡಿ ಹೋಗು ದಾಸಯ್ಯ ಅಂತ ಅಂದ್ರೆ, ಇಲ್ಲಮ್ಮ, ಇನ್ನೂ ತುಂಬಾ ಮನೆಗಳಿಗೆ ಹೋಗೋದಿದೆ ಅಂತ ತುಂಬಿದ ಬೋಗುಣಿ,ಒಡೆದ ಕಾಯಿ ತೆಗೆದುಕೊಂಡು ಜಾಗಟಿ ಹೊಡೆಯುತ್ತ,ಶಂಖ ಊದಿ ಕೊಂಡು ಮನೆಯ ಪಡಸಾಲೆಯಿಂದ ಹೊರಹೋಗುತ್ತಿದ್ದರೆ, ಮನೆಯ ಎಲ್ಲರೂ ಅವನ ಹಿಂದೆ ಹೋಗಿ,ಬಿಳ್ಕೊಟ್ಟು ಬಂದರೆ ಊಟಕ್ಕೆ ತಯಾರು.
ಕನ್ನಡ ಪಂಡಿತ್ ಪರೀಕ್ಷೆಗೆಂದು ಅಪ್ಪ 1968 ರಲ್ಲಿ ಮೈಸೂರಿಗೆ ಹೋಗಿದ್ದರಂತೆ. ಆಗ ಸುತ್ತೂರು ಸ್ವಾಮಿ ಮಠದಲ್ಲಿ ಇದ್ದರಂತೆ,ವಸತಿ ಮತ್ತು ಊಟಕ್ಕೆ. ಹಾಗಾಗಿ ಮೈಸೂರ ಅರಮನೆ,ಒಡೆಯರು,ಮೈಸೂರ ದಸರಾ ಅಂದ್ರೆ ಅವರಿಗೆ ಅಭಿಮಾನ. ಊಟದ ನಂತರ ಇವೆಲ್ಲವುಗಳ ಜೊತೆ ವಿಜಯನಗರ ಅರಸರ ದಸರಾ, ಮುಂದೆ ಕನ್ನಡ ನಾಡಿನ ನಾಡ ಹಬ್ಬ ಆದುದರ ಬಗ್ಗೆಯೂ ಹೇಳುತ್ತಿದ್ದರು. ಮಹಾನವಮಿ ದಿಬ್ಬ ಅಂತ ಈಗಲೂ ಇರುವ ಹಂಪಿಯಲ್ಲಿನ ಜಾಗ ಅಂದಿನ ದಸರಾ ಸಂಭ್ರಮದ ತಾಣವಾಗಿ,ವಿದೇಶಿ ಪ್ರವಾಸಿಗರನ್ನು ಸೆಳೆದಿದ್ದನ್ನು ಹೇಳುತ್ತಿದ್ದರು. ಆ ವಿಜಯನಗರದ ಸಿಂಹಾಸನವೇ ಪೆನುಕೊಂಡದ ಮಾರ್ಗವಾಗಿ ಮೈಸೂರು ಅರಮನೆ ಸೇರಿದ ಇತಿಹಾಸವನ್ನು ಹೇಳ್ತಾ, ಮೈಸೂರ ಅರಸರು ವಿಜಯನಗರದ ದಸರಾ ವೈಭವವನ್ನು ಮುಂದುವರೆಸಿದ್ದು, ಈಗಲೂ ಅದನ್ನು ನೋಡಲು ವಿದೇಶಿಯರು ಬರುತ್ತಿರುವುದನ್ನು ಕೇಳಲು ತುಂಬಾ ರೋಮಾಂಚನವಾಗುತ್ತಿತ್ತು. ದಶಮಿಯಂದು ಆಗುವ ಬನ್ನಿ ವಿನಿಮಯದ ವಿಷಯ ಬಂದಾಗ, ಪಾಂಡವರು ತಮ್ಮ ಶಸ್ತ್ರಗಳನ್ನು ಆ ಮರದಲ್ಲಿ ಇಟ್ಟು, ವನವಾಸಕ್ಕೆ ಹೋಗಿದ್ದರಂತೆ ಅಂತ ಹೇಳ್ತಿದ್ದರು.
ನಮ್ಮಲ್ಲಿ ಸಾಮೂಹಿಕವಾಗಿ ನವರಾತ್ರಿ ಅಥವಾ ಶರನ್ನವರಾತ್ರಿ ಆಚರಿಸಿಲ್ಲ. ನವಮಿಯ ಆಯುಧಪೂಜೆ ಮತ್ತು ದಶಮಿಯ ಬನ್ನಿ ವಿನಿಮಯ ನನ್ನೂರಲ್ಲಿ ಜೋರು. ದಶಮಿಯ ಸಾಯಂಕಾಲ ಊರ ಹಿರಿಯರೊಂದಿಗೆ ತಪ್ಪಡಿ ಯ ಸದ್ದಿನೊಂದಿಗೆ ಊರ ಹೊರಗಿನ ಹುಲಿಕುಂಟೆರಾಯನ ಗುಡಿಗೆ ಹೋಗೋದು. ಅಲ್ಲೇ ಇರುವ ಬನ್ನಿ ಮಂಟಪಕ್ಕೆ ಆ ದಿನ ವಿಶೇಷ ಪೂಜೆ,ನಮ್ಮೂರ ವಿಶ್ವಕರ್ಮ ಮನೆಯವರಿಂದ. ಊರ ಪ್ರತಿಯೊಬ್ಬರೂ ಬನ್ನಿಗಿಡಕ್ಕೆ ಪೂಜೆ ಮಾಡಿ, ಅದರ ಎಲೆಯನ್ನು ಅಲ್ಲಿರುವ ಎಲ್ಲ ಹಿರಿಯರಿಗೂ ಕಿರಿಯರಿಗೂ ವಿನಿಮಯ ಮಾಡಿಕೊಂಡು, ಬನ್ನಿ ತೊಗೊಂಡು ಬಂಗಾರದ ಹಾಗೆ ಇರೋಣ ಅಂತ ಹಾರೈಸಿಕೊಂಡು ಸಂಭ್ರಮಿಸುವುದು ನೋಡಲು ಬಲು ಮುದವಾಗಿರುತ್ತದೆ. ವರ್ಷದಲ್ಲಿ ಯಾರೊಡನೆ ಜಗಳ ಆಡಿದ್ದರೆ, ಅವರನ್ನು ಹುಡುಕಿ,ಹುಡುಕಿ ಬನ್ನಿ ಕೊಡೋದು ನೆನೆಸಿಕೊಂಡರೇನೇ ಖುಷಿ ಆಗ್ತಿದೆ. ಊರಲ್ಲಿಯ ಎಲ್ಲರ ಮನೆಗೂ ಭೇಟಿ, ಬನ್ನಿ ವಿನಿಮಯ. ಊರ ಪ್ರತಿಯೊಬ್ಬ ಹಿರಿಯರ ಕಾಲಿಗೆ ಬೀಳೋದೇ.
ಅಪ್ಪ ಪೆಪ್ಪರಮೆಂಟ್ ತಂದುಕೊಂಡು ನಮ್ಮ ಮನೆಯ ಹಾಲ್ ನಲ್ಲಿ ಕುರ್ಚಿ ಮೇಲೆ ಕೂತುಕೊಳ್ಳುತ್ತಿದ್ದರು. ಊರ ತುಂಬಾ ಅವರ ಶಿಷ್ಯರೇ. ಸುಮಾರು ಐವತ್ತು ವರ್ಷ ನಮ್ಮೂರಲ್ಲಿ ಅಕ್ಷರ ಕೃಷಿ ಅವರದ್ದು. ಎಷ್ಟೋ ಮನೆಗಳ ಅಪ್ಪ,ಮಗ,ಮೊಮ್ಮಗ ಅಪ್ಪನ ಶಿಷ್ಯರೇ…ಅವರೆಲ್ಲರೂ ಬಂದು ಅಪ್ಪನಿಗೆ ಬನ್ನಿ ವಿನಿಮಯ ಮಾಡಿ ನಮಸ್ಕಾರ ಮಾಡಿದರೆ, ಅಪ್ಪ ಎಲ್ಲರ ಬಾಯಿಗೆ ಒಂದೊಂದು ಪೆಪ್ಪರಮೆಂಟ್ ತಾವೇ ಇಡುತ್ತಿದ್ದರು. ಅಲ್ಲಿ ಆದ ನಂತರ ಪಡಸಾಲೆಯಲ್ಲಿರುತ್ತಿದ್ದ ಅಮ್ಮನಿಗೂ ಬನ್ನಿ. ಅಮ್ಮನನ್ನು ಎಲ್ಲರೂ ಅಕ್ಕ ಅಂತಾನೇ ಕರೀತ್ತಿದ್ದದ್ದು. ಶಿಷ್ಯರು ಇಂದು ಕುಟುಂಬ ಸಮೇತ ಬಂದು ಅಪ್ಪ ಅಮ್ಮನಿಗೆ ಬನ್ನಿ ಕೊಡೋದು ನನಗೆ ಮರೆಯಲಾರದ ನೆನಪು.
ಅಮ್ಮ 2019 ರ ಡಿಸೆಂಬರ್ 17ಕ್ಕೆ, ಅಪ್ಪ 25ಕ್ಕೆ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ. ಹಬ್ಬ ಇಲ್ಲ. ಅವರಿರದ ಹಬ್ಬವನ್ನು, ನನ್ನೂರ ಮನೆಯನ್ನು ಕಲ್ಪಿಸಿಕೊಳ್ಳಲೂ ಆಗ್ತಿಲ್ಲ. ನಾವೆಷ್ಟೇ ದುಡಿದರೂ,ಸಂಪಾದಿಸಿದರೂ ಅವರ ಸಂಪಾದನೆ ಮುಂದೆ ಶೂನ್ಯ. ಕಾಲಾಯ ತಸ್ಮೈನ್ನಮಹಃ…..
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಬನ್ನಿ ತಗಂಡು ಬಂಗಾರದ ಹಂಗ ಇರಾನಾ…
ನಿಜವಾಗಲೂ ಅದ್ಭುತ ಲೇಖನ ಕಣ್ಣ ಮುಂದೆ ಆ ನೆನಪು ಬರುತ್ತಿದೆ ದಸರಾ ಹಬ್ಬಕ್ಕೆ ಪ್ರತಿ ವರ್ಷ ನಾನು ವಿದ್ಯೆ ಕಲ್ಸಿದ ಎಲ್ಲಾ ಗುರುಗಳ ಮನೆಗೆ ಹೋಗುವಂತೆ ನಿಮ್ಮ ಮನೆಗೆ ಬಂದು ನನಗೆ ಶಿಕ್ಷಣ ಕಳಿಸಿದ ಗುರುಗಳಾದ ಹುಲಿಕುಂಟೆಪ್ಪ ಮಾಸ್ಟರ್ ಮತ್ತು ಶಾಂತಮ್ಮ ಅಕ್ಕ ಬನ್ನಿ ಕೊಟ್ಟು ಅವರ ಆದರದ ಪ್ರೀತಿ ವಾತ್ಸಲ್ಯಕ್ಕೆ ಚಿರ ಋಣಿ ಆಗುತ್ತಿದೆ ಆ ದಿನಗಳ ನೆನಪು ಮಾತ್ರ
Another fantastic ನೆನಪುಗಳು.
hats off to your encyclopedic memory.
You describe in detail all the finer details of you celebrating Dussehra.
Loved your reminiscences.
👏👏👌👌👍
ತುಂಬಾ ಸೊಗಸಾಗಿ ಬರೆದ್ದಿದಿರಿ.
ನಿಮ್ಮ ಊರು, ಬಾಲ್ಯ, ದಸರಾ ಹಬ್ಬ, ಸಂಬಂಧಗಳನ್ನು ಎಳೆ ಎಳೆಯಾಗಿ ಬಿಡಿಸಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ. 👌👍🙏
ನಿಜವಾಗ್ಲೂ, ನಿಮ್ಮ ಬರವಣಿಗೆ ಮೋಹಕವಾಗಿ ಮೂಡಿ ಬರುತ್ತಿದೆ.
ಏಕೋ, ಒಲವೇ ಜೀವನ ಸಾಕ್ಷಾತ್ಕಾರ ……
ಹಾಡಿನ ನೆನಪಾಗುತ್ತಿದೆ. 👏
Hatsoff to your brilliant memory once again.
ನಿಮ್ಮೆಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
🙏🙏🌹🌸👍👍🌿☘️
ಬಾಲ್ಯದ ದಸರಾ ಹಬ್ಬದ ಬಗ್ಗೆ ಬಹಳ ಸೊಗಸಾಗಿ ಬರೆದಿದ್ದೀರಿ.ಅಂದಿನ ಅಂದರೆ ನಿಮ್ಮ ಸಮಕಾಲೀನ ಅಥವಾ ಅದಕ್ಕೂ ಮೊದಲಿನ ಎಲ್ಲಾ ಮಕ್ಕಳೂ ಆಚರಿಸಿ ಅನುಭವಿಸಿದಂತ ಹಬ್ಬದ ಸವಿಯನ್ನು ಈ ಕಾಲಕ್ಕೆ ನೆನಪಿಸಿದ್ದೀರಿ.ಆ ಹಬ್ಬದ ದಿನಗಳು ನೀವು ಬರೆದಂತೆಯೇ ಮರೆಯಲಾರದ ಸಂಭ್ರಮದ ದಿನಗಳಾಗಿದ್ದವು.ಅಂದಿನ ಹಬ್ಬದ ಸಡಗರದ ದಿನಗಳೇ ಬೇರೆ.ಅದು ದಸರಾ ಇರಲಿ,ಊ ರ ಜಾತ್ರೆಯೇ ಇರಲಿ ಅಥವಾ ಉಗಾದಿಯೇ ಇರಲಿ. ಅಂಥ ದಿನಗಳನ್ನು ಅನುಭ ಇಸಿದ ನಾವು ನೀವೇ ಧನ್ಯರು.ನಿಮ್ಮ ಜ್ಞಾಪಕ ಶಕ್ತಿಗೆ,ನಿರೂಪಣಾ ಶೈಲಿಗೆ ನಮೋ ನಮಃ.ಇದೇ ಸಂದರ್ಭವಾಗಿ ತಮಗೂ ತಮ್ಮ ಕುಟುಂಬದವರೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.
Bm ನಿಮ್ಮ ಲೇಖನ ನನ್ನನ್ನ ನನ್ನ ಬಾಲ್ಯದ ದಿನಗಳತ್ತ ಕರೆದುಕೊಂಡು ಹೋಯಿತು. ಆಗ ದೀಪಾವಳಿ. ದಸರಾ ಮತ್ತು ಯುಗಾದಿ ಹಬ್ಬಕ್ಕೆ ಮಾತ್ರ ಹೊಸ ಬಟ್ಟೆ ಸಿಗುತಿತ್ತು. ನಮ್ಮ ಹಳ್ಲಿಲಿ ನೆಲಕ್ಕಿ ಅನ್ನ ಹಬ್ಬಗಳಲ್ಲಿ ಮತ್ತು ಯಾರಾದರೂ ನೆಂಟರು ಮನೆಗೆ ಬಂದಾಗ ಮಾತ್ರ. ನವಣೆ ಅಕ್ಕಿ ಅನ್ನ ತಿನ್ನುತಿದ್ದ ನಮಗೆ ಹಬ್ಬ ಅಂದ್ರೆ ಏನೋ ಖುಷಿ. ನಿಮ್ಮ ನಿರೂಪಣೆ ಅದ್ಭುತ. ಪ್ರತಿಯೊಂದು ಘಟನೆಗಳು ಕೂಡ ಚಾಚೂ ತಪ್ಪದೆ ಎಳೆ ಎಳೆ ಯಾಗಿ ಬರೆದಿದಿರಾ. ನಿಮ್ಮ ನೆನಪಿನ ಶಕ್ತಿಗೊಂದು 🙏. ಅಪ್ಪಾಜಿ ಮತ್ತು ಅಮ್ಮ ಯಾವಾಗಲೂ ನಿಮ್ಮ ಜೊತೆಯಲ್ಲೇ ಇದ್ದಾರೆ. ಅವರ ಆಶೀರ್ವಾದ ಸದಾ ನಿಮ್ಮ ಮೇಲೆ ಇದೆ. ಧನ್ಯವಾದಗಳು 🙏🙏
V v nice narration ,we moved with your narration and recollect ed our child hood days ,supper.
HAPPY DASARA
Very very beautiful article sir I Also same type of situation seen in mychild hood life in my grandfather village.
ಮಂಜು. ಎಷ್ಟೊಂದು ನವಿನೆನೆಪುಗಳ ಕಣಜ! ತುಂಬಾ ಇಷ್ಟವಾಯ್ತು ಈ ಲೇಖನ, ಮಂಜು.
ನೆನಪಿನ ಬುಟ್ಟಿ ಈಗಿನ oxygen. ಅದರಲ್ಲೂ ವಿಶೇಷವಾಗಿ ನಿನ್ನ ನೆನಪಿನ ಶಕ್ತಿ ಅಗಾಧವಾದದ್ದು. ನಮಗೆ ಬನ್ನಿ ವಿನಿಮಯದ ಜೊತೆಗೆ ದಕ್ಷಿಣ ಸಿಗುತ್ತಿತ್ತು. ಅದನ್ನು ಎಣಿಸಿಟ್ಟುಕೊಳ್ಳುವುದೇ ಒಂದು ಸಂಭ್ರಮ. ಕೊಟ್ಟೂರಿನಲ್ಲಿ ಆಗ KARATAKA TAILOR most updated modern tailor of that time. ಆಗಿನ bell-bottoms ಊರಿನ ಕಸವನ್ನೆಲ್ಲಾ ಗುಡಿಸುತ್ತಿತ್ತು. ಆ ಬಟ್ಟೆ ರಕ್ಷಿಸಲು ಕೆಳಬದಿಯ ತಳಕ್ಕೊಂದು metal chain ಹೊಲಿಯುತಿದ್ದರು. ಆಗ ಹಬ್ಬದ ಸಮಯದಲ್ಲಿ ಅದೊಂದು Fashion parade ಆಗಿರುತ್ತಿತ್ತು.
ಇನ್ನು ಮಾರ್ನಾಮಿ ಸಂಭ್ರಮ. ಗುರುಗಳು ಒಂದು ಪಿಯಾನೋ ಡಬ್ಬಿ ಹಿಡಿದು ಆ ವರ್ಷದ ತಂಡಕ್ಕೆ ಒಂದು ತಿಂಗಳಿಂದ ರಾಮಾಯಣದ ವಿವಿಧ ಪ್ರಸಂಗಗಳ ಹಾಡುಗಳ ತಾಲೀಮು. ಅದರಲ್ಲಿ ನನಗೊಂದು ಪಾತ್ರ. ಸಿದ್ಧತೆ ಮುಗಿದ ಮೇಲೆ ನವಮಿಯಲ್ಲಿ ಮನೆ ಮನೆಗೆ ಹೋಗಿ ಹಾಡುವುದು, ಹಾಗೂ ಮನೆಯವರು ಕೂಡುತ್ತಿದ್ದ ಸಿಹಿತಿಂಡಿಗಳನ್ನು ಸವಿಯುತ್ತಿದ್ದೆವು. ಮತ್ತು ದಕ್ಷಿಣ ಗುರುಗಳ ಜೇಬು ಸೇರುತ್ತಿತ್ತು. ಆ ಎಲ್ಲಾ ಸಂಭ್ರಮಗಳು ಇನ್ನೂ ಹಸಿರಾಗಿವೆ. Thanks for stimulating my memory layers. ನಿನ್ನ ಲೇಖನ ಅಧರಲ್ಲಿರುವ ಶಬ್ದ ಭಂಡಾರ ಅಧ್ಭುತವಾಗಿದೆ. ಈ. ನಿನ್ನ ಸಾಹಿತ್ಯ ಕೃಷಿ ಹೀಗೇ ಮುಂದುವರಿಯಲಿ.
Very informative article.
ಸವಿನೆನಪುಗಳ ಗಣಿಯಂತಿದೆ
ಲೇಖನ ಸೊಗಸಾಗಿ ಮೂಡಿ ಬಂದಿದೆ
ಅದ್ಭುತವಾಗಿದೆ ಗೆಳೆಯ, ನಿನ್ನ ಅಗಾಧ ನೆನಪಿನ ಶಕ್ತಿಗೆ ನನ್ನದೊಂದು ಸಲ್ಯೂಟ್…
ಬಾಲ್ಯದ ದಸರಾ ಅನುಭವವನ್ನು ಅಂತರಾಳದ ಪದಗಳಿಂದ ಪ್ರಚುರಪಡಿಸಿದ ನಿನಗೆ ನೀನೇ ಸಾಟಿ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ