ಯೆಸ್‌ಬ್ಯಾಂಕ್ ತನ್ನ ಸೆಪ್ಟೆಂಬರ್ ತ್ರೈಮಾಸಿಕ ಅಂತ್ಯದ ಫಲಿತಾಂಶ ಪ್ರಕಟಿಸಿದ್ದು ಮೇಲ್ನೋಟಕ್ಕೆ ಉತ್ತಮವಾಗಿದ್ದು, ಬಹಳಷ್ಟು ಸಾಮಾನ್ಯರನ್ನು ಆಕರ್ಷಿಸಿ, ಈ ಬ್ಯಾಂಕ್‌ನ ಷೇರು ಖರೀದಿಸುವಂತೆ ಪ್ರೇರೇಪಿಸಿರಲೂಬಹುದು. ಕೇವಲ ಒಂದಂಶವನ್ನಾಧರಿಸಿಕೊಂಡು ಹೂಡಿಕೆಯನ್ನು ನಿರ್ಧರಿಸುವುದು ಅಪಾಯಕರ.
ಒಂದು ಸಮಯದಲ್ಲಿ ಈ ಬ್ಯಾಂಕ್ ಷೇರಿನ ಬೆಲೆ ಎರಡು ವರ್ಷಗಳ ಹಿಂದಷ್ಟೆ ರೂ.395 ರ ಸಮೀಪವಿದ್ದು, 2018 ರಲ್ಲಿ ಬ್ಯಾಂಕ್‌ನ ಪ್ರವರ್ತಕರು ತಮ್ಮ ಪಾಲಿನ ಷೇರುಗಳನ್ನು ತನ್ನ ಮಕ್ಕಳಿಗೆ, ನಂತರ ಅವರ ಮಕ್ಕಳಿಗೆ ಪಾರಂಪರಿಕವಾಗಿ, ವಾರಸುದಾರರಿಗೆ ಬಳುವಳಿಯಾಗಿ, ವಜ್ರಗಳಂತೆ ಮುಂದುವರೆಸಿಕೊಂಡು ಹೋಗುತ್ತೇವೆ ಎಂದಿದ್ದರು. ಆದರೆ ಮುಂದಿನ ಎರಡೇ ವರ್ಷಗಳ ಅವಧಿಯಲ್ಲಿ ಷೇರಿನ ಬೆಲೆ ರೂ.5.5 ಕ್ಕೆ ಕುಸಿಯಿತಲ್ಲದೆ, ಎರಡು ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್2018 ಲ್ಲಿ ಶೇ.20 ರಷ್ಟರ ಭಾಗಿತ್ವವನ್ನು ಹೊಂದಿದ್ದ ಪ್ರವರ್ತಕರು, ಸೆಪ್ಟೆಂಬರ್ 2020 ರಲ್ಲಿ ಪ್ರವರ್ತಕರೇ ಇಲ್ಲದ ಪರಿಸ್ಥಿತಿಗೆ ತಲುಪಿದೆ. ಅಲ್ಲದೆ ಈ ವರ್ಷ ಮಾರ್ಚ್‌ನಲ್ಲಿ ಉಂಟಾದ ಪ್ರವರ್ತಕರ ಗೊಂದಲದ ಕಾರಣದಿಂದಾಗಿ ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗಳೊಂದಿಗೆ ಇತರೆ ಬ್ಯಾಂಕ್‌ಗಳು ಸೇರಿ ಈ ಬ್ಯಾಂಕ್‌ನ್ನು ಪುನಶ್ಚೇತನಗೊಳಿಸುವ ಸಲುವಾಗಿ ಬಂಡವಾಳವನ್ನು ಒದಗಿಸಿವೆ.
ಅನೇಕ ಮೊದಲುಗಳು
ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಫಲಿತಾಂಶದ ನಂತರ ಬ್ಯಾಂಕ್ ನ ಎಂ ಡಿ ಮತ್ತು ಸಿ ಇ ಒ ರವರು, ಬ್ಯಾಂಕ್ ಸಹಜತೆಯತ್ತ ಮರಳಿದ್ದು ಇನ್ನು ಬಲಿಷ್ಟವಾಗಬೇಕಿದೆ ಎಂದಿದ್ದಾರೆ. ಈ ಒಂದು ಅಭಿಪ್ರಾಯಕ್ಕೆ ಸ್ಪಂದಿಸುವ ಮುನ್ನ ಕೆಲವು ಅಂಶಗಳನ್ನು ನೆನಪಿನಲ್ಲಿಡಬೇಕು. ಯೆಸ್ ಬ್ಯಾಂಕ್ ತನ್ನ ಹೆಸರಿಗೆ ಅನೇಕ ಮೊದಲುಗಳನ್ನು ಲಗತ್ತಿಸಿಕೊಂಡಿದೆ.
ಮೊದಲನೆಯ ಅಂಶ ಎಂದರೆ ಈ ವರ್ಷ ಮಾರ್ಚ್ ನಲ್ಲಿ ಬ್ಯಾಂಕ್ ಗೊಂದಲದಲ್ಲಿದ್ದಾಗ ನಿಯಂತ್ರಕರು ಹಲವಾರು ಕ್ರಮಗಳನ್ನು ಕೈಗೊಂಡರು. ಅವುಗಳಲ್ಲಿ ತಾತ್ಕಾಲಿಕ ನಿಯಂತ್ರಿತ ಹಣ ಹಿಂಪಡೆಯುವಿಕೆಯೊಂದಿಗೆ, ಪ್ರತಿಯೊಬ್ಬ ಹೂಡಿಕೆದಾರರ ಶೇ.75 ರಷ್ಟನ್ನು ಮೂರು ವರ್ಷಗಳ ವರೆಗೂ ನಿಶ್ಚಲತೆ ವಿಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ಪ್ರತಿ ಷೇರಿಗೆ ರೂ.12 ರಂತೆ ಪುನ: ಷೇರು ವಿತರಿಸಿ ಬಂಡವಾಳ ಹೆಚ್ಚಿಸಿಕೊಂಡಿದೆ. ಇದಕ್ಕೂ ಮುನ್ನ ವಿಧಿಸಿದ್ದ 3 ವರ್ಷಗಳ ನಿಶ್ಚಲತೆಯನ್ನು ತೆರವುಗೊಳಿಸಿದ್ದಲ್ಲಿ ಉತ್ತಮವಾಗಿತ್ತು. ವಿಚಿತ್ರವೆಂದರೆ 12 ರೂಪಾಯಿಗಳಿಗೆ ಕೊಂಡವರ ಷೇರು ಚಲಾವಣೆಯಲ್ಲಿದೆ, ಅಧಿಕ ಬೆಲೆಯಲ್ಲಿ ಕೊಂಡವರ ಷೇರುಗಳು ಲಾಕ್ ಆಗಿ ನಿಶ್ಚಲವಾಗಿದೆ.
ಎರಡನೇ ಅಂಶವೆಂದರೆ ಆರ್ ಬಿ ಐ ತನ್ನ ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್ 1949 ರ ಸೆಕ್ಷನ್ 45 ರಂತೆ ಅಧಿಕಾರ ಚಲಾಯಿಸಿ, ಈ ಬ್ಯಾಂಕ್ ದುರ್ಬಲವಾಗಿದ್ದು, ಮುಂದುವರೆಯಲು ಸಾಧ್ಯವಿಲ್ಲವಾದ ಕಾರಣ ಬ್ಯಾಂಕ್ ಸಂಗ್ರಹಿಸಿದ್ದ ರೂ.8,415 ಕೋಟಿ ಮೌಲ್ಯದ AT 1 ಬಾಂಡ್ ಗಳನ್ನು ಸಂಪೂರ್ಣವಾಗಿ write off ಮಾಡಿದೆ. ಈ ಕ್ರಮದಿಂದ ವಿತ್ತೀಯ ಸಂಸ್ಥೆಗಳು, ಮ್ಯೂಚುಯಲ್ ಫಂಡ್ ಗಳ ಹೂಡಿಕೆಯಲ್ಲದೆ ಬಹಳಷ್ಟು ಸಣ್ಣ ಹೂಡಿಕೆದಾರರ ಹೂಡಿಕೆಯು ಸಂಪೂರ್ಣವಾಗಿ ಶೂನ್ಯಗೊಳಿಸಿ, ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಅಲ್ಲಾಡಿಸಿದೆ. ಇದನ್ನು ಪ್ರಶ್ನಿಸಿ ವಿತ್ತೀಯ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಲು ಹತ್ತಿವೆ. ಇಲ್ಲಿ ಪ್ರಯತ್ನಿಸಬೇಕಾದ ಅಂಶವೆಂದರೆ ಬ್ಯಾಂಕ್ ಈಗ ಸಹಜತೆಯತ್ತ ಬರುತ್ತಿದೆ ಎಂದಾದರೆ write off ಮಾಡಿದ ಬಾಂಡ್ ಗಳನ್ನು, ಕೊನೆಪಕ್ಷ, ವೈಯಕ್ತಿಕ ಹೂಡಿಕೆದಾರರ ಬಾಂಡ್ ಹಣವನ್ನು ಹಿಂದಿರುಗಿಸುವ ಯೋಚನೆ ಮಾಡುವುದು ಸೂಕ್ತವೆನಿಸುತ್ತದೆ. ಕೇವಲ ಒಂದೆರಡು ಪರ್ಸೆಂಟ್ ಹೆಚ್ಚಿನ ಬಡ್ಡಿ ನೀಡುವ ಆಶ್ವಾಸನೆ ನೀಡಿ ಸಂಗ್ರಹಿಸಿದ ಹಣವನ್ನು ಬಡ್ಡಿ ನೀಡದಿದ್ದರೂ ಅಸಲು ಹಣವನ್ನಾದರೂ ಹಿಂದಿರುಗಿಸುವ ಪ್ರಯತ್ನದಿಂದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆ ಮರಳಿ ಬರಬಹುದು.
ಹಿಂದಿನ ಘಟನೆಗಳು
ಜಾಗತೀಕರಣದ ನಂತರದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್ ಪದ್ಧತಿಯಲ್ಲೂ ಹಲವಾರು ಬದಲಾವಣೆಗಳು ಬಂದಿದ್ದುಂಟು. ಆದರೂ 2002 ರಲ್ಲಿ ಖಾಸಗಿ ಬ್ಯಾಂಕ್ ಆದ ನೆಡುಂಗಡಿ ಬ್ಯಾಂಕ್ ದುರ್ಬಲಗೊಂಡಾಗ ಅದನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ವಿಲೀನಗೊಳಿಸಿ ಡಿಪಾಜಿಟರ್ ಹಿತ ಕಾಪಾಡಲಾಯಿತು.
2004 ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ದುರ್ಬಲಗೊಂಡಾಗ ಅದನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ ವಿಲೀನಗೊಳಿಸಿ ಠೇವಣಿದಾರರ ಹಿತ ಕಾಪಾಡಲಾಯಿತು.
2006 ರಲ್ಲಿ ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ವಿಫಲಗೊಂಡಾಗ ಅದನ್ನು ಐಡಿಬಿಐ ಬ್ಯಾಂಕ್ ನಲ್ಲಿ ವಿಲೀನಗೊಳಿಸಿ ಠೇವಣಿದಾರರ ಹಿತ ರಕ್ಷಿಸಲಾಯಿತು.
ಆದರೆ ಈ ಪ್ರಕರಣದಲ್ಲಿ ಷೇರುಗಳ ಚಲಾವಣೆಗೆ ತಡೆಯೊಡ್ಡಿ ಷೇರುಪೇಟೆಯ ಪ್ರಮುಖ ಆಕರ್ಷಣೆ ಅಂಶವಾದ ದಿಢೀರ್ ನಗದೀಕರಣ ಸೌಲಭ್ಯ (creating ready liquidity )ಕ್ಕೆ ಚ್ಯುತಿಯುಂಟಾದಂತಿದೆ ಜೊತೆಗೆ ಠೇವಣಿಯಂತೆ AT 1 ಬಾಂಡ್ ಹೂಡಿಕೆಯ ಮೌಲ್ಯವನ್ನು ಶೂನ್ಯಗೊಳಿಸಿದ್ದು ಸಾಂಪ್ರದಾಯಿಕ ಚಿಂತನೆಗಳಾದ ಸುರಕ್ಷತೆ, ಸುಭದ್ರತೆಗಳಿಗೆ ಧಕ್ಕೆಯಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಈ ಬ್ಯಾಂಕಿಂಗ್ ಷೇರಿನಲ್ಲಿ ಹೂಡಿಕೆ ಮಾಡುವ ಮುನ್ನ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮುಂದಡಿ ಇಡುವುದು ಸೂಕ್ತ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.