26.3 C
Karnataka
Saturday, November 23, 2024

    ಮಂಡಲ ಚಿತ್ರಕಲೆಯಲ್ಲಿ ಪರಿಣಿತೆ ಗಾಯತ್ರಿ ನಾಯಕ್

    Must read

    ಬಳಕೂರ. ವಿ.ಎಸ್.ನಾಯಕ

    ಮಂಡಲ ಚಿತ್ರಕಲೆ ಒಂದು ವಿಭಿನ್ನ ಪ್ರಕಾರ. ಅಲ್ಲಲ್ಲಿ ಕಾಣುವ ಚುಕ್ಕೆಗಳು, ಇವುಗಳ ಮಧ್ಯೆ ವ್ರತ್ತಾಕಾರದ ಆಕೃತಿ. ಕಲಾವಿದನ ಕೈಚಳಕದಿಂದ ಮೂಡಿಬರುವಂತಹ ಈ ಅದ್ಭುತ ಕಲಾಪ್ರಕಾರವನ್ನು
    ಕಲಾಸಕ್ತರು ಒಮ್ಮೆಲೇ ನೋಡಿದರೆ ಚಕಿತರಾಗುವುದು ನಿಶ್ಚಿತ. ವಿಭಿನ್ನ ಪ್ರಕಾರದ ಕಲೆಯಾದ ಈ ಮಂಡಲಕಲೆಯಲ್ಲಿ ಪರಿಣಿತರಾದವರು, ಮಂಗಳೂರಿನ ಊರ್ವ ನಿವಾಸಿ, ಗಾಯತ್ರಿ ನಾಯಕ್.

    ಎಂಜಿನಿಯರಿಂಗ್ ಪದವೀಧರೆಯಾಗಿದ್ದರೂ ಇವರನ್ನು ಸೆಳೆದದ್ದು ಮಂಡಲಕಲೆ. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಇವರು ನಂತರದ ದಿನಗಳಲ್ಲಿ ಮಂಡಲ ಕಲೆಯ ಕಡೆ ಆಕರ್ಷಿತರಾದರು. ಮಂಡಲ ಚಿತ್ರಗಳನ್ನು ಸಾಮಾನ್ಯವಾಗಿ ಹೋಮ, ಯಾಗ-ಯಜ್ಞಗಳ ಆಚರಣೆಯ ಸಂದರ್ಭದಲ್ಲಿ ದೇವತೆಗಳನ್ನು ಆಹ್ವಾನ ಮಾಡಲು ಪುರೋಹಿತರು ಬಿಡಿಸುವುದು ವಾಡಿಕೆ.ಅದೇ ಸಿದ್ಧಾಂತ ಆಧರಿಸಿ ಈ ಚಿತ್ರಕಲೆ ಬಂದಿರುವುದು ವಿಶೇಷ. ನಾನಾ ಶಾಂತಿ, ಪೂಜೆ, ಹೋಮ-ಹವನಗಳಲ್ಲಿ ಈ ಮಂಡಲಗಳನ್ನು ದೇವರ ಪ್ರತಿಷ್ಠಾಪನೆಗೆ ಬಿಡಿಸುವುದು ಪ್ರಾರಂಭಿಕ ಹಂತ. ಈ ಸಂದರ್ಭಗಳಲ್ಲಿ ಕೆಲ ಬಣ್ಣಗಳನ್ನು ಸಾಂಕೇತಿವಾಗಿ ಬಳಸಿ ಮಂಡಲಗಳನ್ನು ಬಿಡಿಸುವುದು, ಅದಕ್ಕೆ ತಕ್ಕಂತೆ ವಿವಿಧ ಬಣ್ಣಗಳನ್ನು ಉಪಯೋಗಿಸಿ ಪೂಜೆ ಮಾಡುವುದು ಪದ್ಧತಿ.
    ಹಿಂದಿನ ದಿನಗಳಲ್ಲಿ ಇಂತಹ ಪೂಜೆಗೆ ಇಂತಹುದೇ ಆಕಾರ, ಬಣ್ಣ, ಇತ್ಯಾದಿ ಅರ್ಥದಲ್ಲಿ ಚಿತ್ರ ರಚಿಸುತ್ತಿದ್ದರು.

    ಮಂಡಲ ಚಿತ್ರಕಲೆಯಲ್ಲಿ ಬಣ್ಣಗಳ ಬಳಕೆ ಹೇಗೆ?

    ಮಂಡಲ ಕಲೆಯಲ್ಲಿ ನಮ್ಮ ಮನಸ್ಸಿಗೆ ಬಂದಂತೆ ಬಣ್ಣಗಳನ್ನು ಬಳಿಯಬಾರದು. ಧಾರ್ಮಿಕ ಆಚರಣೆಗಳಿಗಾಗಿ ಮಂಡಲಗಳನ್ನು ಬಿಡಿಸಬೇಕಾದಲ್ಲಿ ಸಂದರ್ಭಾನುಸಾರ ನಿಯಮಗಳನ್ನು ಅನುಸರಿಸಬೇಕಾಗಿ ಬರುತ್ತದೆ. ಉದಾಹರಣೆಗೆ ಹೇಳುವುದಾದರೆ, ಶ್ರೀಯಂತ್ರಕ್ಕೆ ತನ್ನದೇ ಆದಂತಹ ಆಕೃತಿ, ಬಣ್ಣ ಹಾಗೆ ಬುದ್ಧನ ಕಲಾಕೃತಿಗಾಗುವಾಗ ಒಂದೇ ರೀತಿಯ ಬಣ್ಣಗಳ ಸಂಯೋಜನೆಯಲ್ಲಿ ಬಿಡಿಸಬೇಕಾಗುವುದು.

    ಸಾಮಾನ್ಯವಾಗಿ ಧಾರ್ಮಿಕ ಆಚರಣೆಗಳಲ್ಲಿ ಬಿಡಿಸುವ ಓಂ ಮಂಡಲ ಹಾಗೂ ಏಳು ಚಕ್ರಮಂಡಲದಂತಹ ರಚನೆಗಳನ್ನು ಬಿಡಿಸುವಾಗ ಬಳಸಲಾಗುವ ಒಂದೊಂದು ಬಣ್ಣಕ್ಕೂ ತನ್ನದೇ ಆದಂತಹ ವಿಶಿಷ್ಟ ಕಲ್ಪನೆ ಹಾಗೂ ಅರ್ಥವಿರುತ್ತದೆ. ತದಂತೆ ಒಂದು ನಿರ್ದಿಷ್ಟ ಪದ್ದತಿಯನ್ನು ಆಧಾರವಾಗಿಟ್ಟುಕೊಂಡು ಶಾಸ್ತ್ರೀಯವಾಗಿ ರಚಿಸುವ ಬದ್ಧತೆಯೂ ಇರುತ್ತದೆ. ಆದರೆ ಧಾರ್ಮಿಕವಲ್ಲದ ಮಂಡಲಗಳನ್ನು ಬಿಡಿಸುವಾಗ ನಮ್ಮದೇ ಆದಂತಹ ಕ್ರಿಯಾತ್ಮಕ ಶೈಲಿಯಲ್ಲಿ, ವೀಕ್ಷಿಸುವವನ ಕಣ್ಣರಳಿಸುವಂತಾಗಲು, ವಿಭಿನ್ನ
    ರೀತಿಯಲ್ಲಿ ಸುಂದರವಾಗಿ ಬಿಡಿಸಬಹುದು. ಉದಾಹರಣೆಗಾಗಿ, ವಿವಿಧ ಬಣ್ಣಗಳ ಹೂವಿನ ಆಕೃತಿಯಲ್ಲಿ ಮಂಡಲಗಳನ್ನು ಬಿಡಿಸುವಾಗ ಆಯಾಯ ಹೂವಿನ ಸಂಯೋಜಿತ ಬಣ್ಣಗಳನ್ನೇ ಬಳಸಲಾಗುತ್ತದೆ. ಈ ಸ್ಲೈಡ್ ಶೋ ನೋಡಿ.

    ಸಾಂಪ್ರದಾಯಿಕ ಮಂಡಲಗಳಲ್ಲಿ ಬಣ್ಣಗಳ ಬಳಕೆ

    ಶ್ರೀಮತಿ ಗಾಯತ್ರಿಯವರು ಸಾಂಪ್ರದಾಯಿಕ ಮಂಡಲಗಳನ್ನು ಬಿಡಿಸುವುದರಲ್ಲಿ ಎತ್ತಿದಕೈ. ಇವರು ವಿಶೇಷವಾಗಿ ಕಲ್ಲು, ಕ್ಯಾನವಾಸ್ ಹಾಗೂ ಸೀಡಿಗಳ ಮೇಲೆ ಬಿಡಿಸಿರುವಂತಹ ಮಂಡಲಗಳನ್ನು ನೋಡುವುದೇ ಕಣ್ಣಿಗೆ ಒಂದು ಆನಂದ. ಕಪ್ಪು ಬಣ್ಣದಲ್ಲಿ ಮಂಡಲಗಳನ್ನು ವಿಭಿನ್ನ ರೀತಿಯಲ್ಲಿ ಬಿಡಿಸುವ ಇವರ ನಿಪುಣತೆ ಈ ಕಲೆಯ ಕ್ಷೇತ್ರದಲ್ಲಿ ಇವರಿಗೆ ಒಂದು ವಿಶಿಷ್ಟ ಸ್ಥಾನಮಾನ ದೊರಕಿಸಿಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು.

    ಮಂಡಲಕಲೆ ಧ್ಯಾನದಲ್ಲಿ ಬಳಕೆ

    ಮಂಡಲಕಲೆ ಒಂದು ಸೂಕ್ಷ್ಮ ಕಲೆ ಎಂದೇ ಹೇಳಬಹುದು. ಚಿತ್ರಕಾರನು ಏಕಾಗ್ರ ಚಿತ್ತತೆಯಿಂದ ಮಂಡಲಗಳನ್ನು ಬಿಡಿಸುವ ಅಗತ್ಯತೆಯು ಪ್ರಮುಖಗಿರುವಾಗ, ಗಾಯಯತ್ರಿಯವರು ಹೇಳುವಂತೆ, ಇದೊಂದು ರೀತಿಯಲ್ಲಿ ಧ್ಯಾನಾಭ್ಯಾಸವೇ ಸರಿ.

    ಚುಕ್ಕೆಗಳ ಬಳಕೆ

    ಮಂಡಲಕಲೆಯನ್ನು “ಚುಕ್ಕೆ ಚಿತ್ರ “(Dot Painting) ಎಂದು ಕರೆಯುತ್ತಾರೆ. ಚಿಕ್ಕ ಚಿಕ್ಕ ಚುಕ್ಕಿಗಳನ್ನು ಪೋಣಿಸಿ ಒಂದು ಕಲಾಕೃತಿಯ ರೂಪವನ್ನು ಕೊಡುವಲ್ಲಿ ಸಾಮಾನ್ಯವಾಗಿ 7-8 ಗಂಟೆ ತಗಲುವುದೂ ಇದೆ. ಒಂದು ಸುಂದರವಾದ ಮಂಡಲವನ್ನು ಸಣ್ಣ ಚುಕ್ಕೆಗಳನ್ನು ಪೋಣಿಸಿ ಬಿಡಿಸಲು ಹೆಚ್ಚಿನ ಸಮಯ ಹಾಗೂ ದೊಡ್ಡ ಚುಕ್ಕೆಗಳನ್ನು ಪೋಣಿಸಿ ಕಡಿಮೆ ಸಮಯ ತಗಲುತ್ತದೆ.

    ಹೀಗೆ ವಿಭಿನ್ನ ಮತ್ತು ವಿಶಿಷ್ಟ ರೀತಿಯ ಮಂಡಲ ಕಲಾಕೃತಿಗಳನ್ನು ಬಿಡಿಸಿ ನಾಡಿನ ವಿವಿದೆಡೆ ಕಲಾಪ್ರದರ್ಶನಗಳನ್ನು ನಡೆಸಿಕೊಟ್ಟಿರುವ ಗಾಯತ್ರಿಯವರು ತನ್ಮೂಲಕ ಅಪಾರ ಜನಪ್ರಿಯತೆ
    ಸಂಪಾದಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಆಸಕ್ತರಿಗೆ ಸಂತೋಷದಿಂದ ಕಲಿಸುವ ಇವರು, ಈ ಕಲೆಯನ್ನು ಪೋಷಿಸಿ, ಜನಪ್ರಿಯಗೊಳಿಸುವುದು, ತನ್ಮೂಲಕ ಈ ಪ್ರಾಚೀನ ಕಲೆಯನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಿಡುವುದು ತನ್ನ ಪರಮ ಗುರಿ ಎಂದು ಹೇಳುತ್ತಾರೆ.

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.


    spot_img

    More articles

    6 COMMENTS

    1. ಗಾಯತ್ರಿನಾಯಕ್ ಅವರ ಕಲೆ ನಿಜಕ್ಕೂ ಶ್ಲಾಘನೀಯ. ಒಂದಕ್ಕಿಂತ ಒಂದು ನಯನ ಮನೋಹರವಾಗಿವೆ.

    2. ಅದ್ಭುತ ವಾದ ಕಲೆ..ಭಗವಂತನ ಕೃಪೆ ಗಾಯಿತ್ರಿ ರವರಿಗೆ ಸದಾಕಾಲ ಇರಲಿ…

    3. ಗಾಯತ್ರಿಯವರ ಈ ಸಾಂಪ್ರದಾಯಿಕ ಮಂಡಲ ಕಲೆಯು
      ವಿಶಿಷ್ಟವಾದ ಚಿತ್ರಕಲೆಯಾಗಿದೆ, ಇದು ಇನ್ನೂ ಎತ್ತರಕ್ಕೆ ಬೆಳೆದು, ನಾಡಿನೆಲ್ಲೆಡೆ ಹರಡಲಿ ಎಂದು ಹಾರೈಸುತ್ತೇವೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!