ವಿಶ್ವದಾದ್ಯಂತ ಇಂದು ದಿಢೀರ್ ಕೊರೊನಾ ವೈರಸ್ ಲಸಿಕೆ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿಯೋ ಸುದ್ದಿ. ಆದರೆ ಸಂಪೂರ್ಣ ಅನುಮೋದನೆ ಪಡೆದ ಲಸಿಕೆ ಬಿಡುಗಡೆಯಾಗಲು ಇನ್ನೂ ಸ್ವಲ್ಪ ದಿನ ಕಾಯಲೇಬೇಕು.
ಲಂಡನ್ ನ ಪ್ರಮುಖ ಆಸ್ಪತ್ರೆಯು ಮುಂದಿನ ತಿಂಗಳು ಕೊರೊನಾ ವೈರಸ್ ಲಸಿಕೆಯ ಮೊದಲ ಬ್ಯಾಚ್ ಅನ್ನು ಸ್ವೀಕರಿಸಲು ಸಜ್ಜಾಗಿದೆ. ಅಲ್ಲಿನ “ಸನ್” ಪತ್ರಿಕೆ, ನ್ಯಾಷನಲ್ ಹೆಲ್ತ್ ಸರ್ವೀಸ್ ಈ ಲಸಿಕೆಯನ್ನು ನವೆಂಬರ್ 2ರಿಂದ ನೀಡಲು ಪ್ರಾರಂಭಿಸಲಿದೆ ಎಂದು ವರದಿ ಮಾಡಿದೆ. ಆದರೆ ಅದು ಅಂತಿಮ ಪ್ರಯೋಗಾತ್ಮಕ ಹಂತಕ್ಕಾಗಿ ಆಸ್ಪತ್ರೆ ಸಿಬ್ಬಂದಿಗೆ ಮಾತ್ರ ನೀಡಲಾಗುತ್ತದೆ. ಸಾರ್ವಜನಿಕರಿಗೆ ಅಲ್ಲ ಎಂದು ಲಂಡನ್ ನ ವೈದ್ಯಕೀಯ ಮೂಲಗಳು ಕನ್ನಡಪ್ರೆಸ್.ಕಾಮ್ ಗೆ ತಿಳಿಸಿವೆ.
ಆದರೂ ಇದು ಇಡೀ ವಿಶ್ವಕ್ಕೆ ಬಾಧಿಸುತ್ತಿರುವ ಕೊರೊನಾ ವೈರಸ್ ವಿರುದ್ಧ ಮಾನವರ ಹೋರಾಟದ ಯಶಸ್ಸಿನ ಕುರಿತು ಭರವಸೆ ಮೂಡಿಸುತ್ತಿರುವ ಸುದ್ದಿಯಾಗಿದೆ. ಲಸಿಕೆ ನಿಜಕ್ಕೂ ಪೂರ್ಣ ರೀತಿಯಲ್ಲಿ ಸಜ್ಜಾಗಿದೆಯೇ ಎನ್ನುವುದರ ಕುರಿತು ಸ್ಪಷ್ಟತೆ ಇಲ್ಲ. ಆದಾಗ್ಯೂ ಈ ಕುರಿತು ಬಹಳ ಚರ್ಚೆ ನಡೆಯುತ್ತಿದೆ ಮತ್ತು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.
ಈ ಲಸಿಕೆಯನ್ನು ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ಯೂನಿವರ್ಸಿಟಿ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಲಸಿಕೆ ಯುವಜನರು ಹಾಗೂ ವೃದ್ಧರಲ್ಲಿಯೂ ಸದೃಢವಾದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿವೆ ಎಂದು ಹೇಳಲಾಗಿದೆ. ಭಾರತದಲ್ಲಿ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಮೂರನೇ ಹಂತ ತಲುಪಿವೆ. ಇಲ್ಲಿಯವರೆಗಿನ ಪರೀಕ್ಷೆಗಳಲ್ಲಿ ಅಡ್ಡ ಪರಿಣಾಮಗಳು ಕಡಿಮೆ ಕಾಣಿಸಿದ್ದು ಇದು ಕೋವಿಡ್-19ಕ್ಕೆ ರಾಮಬಾಣವಾಗಲಿದೆ ಎಂಬ ವಿಶ್ವಾಸ ಎಲ್ಲರಲ್ಲೂ ತಂದಿದೆ.
ಜಾಗತಿಕ ಲಸಿಕೆ ಕಂಡುಹಿಡಿಯುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಆಸ್ಟ್ರಾಜೆನೆಕಾ ಈ ಔಷಧವು ವೃದ್ಧರಲ್ಲಿಯೂ ಅಡ್ಡ ಪರಿಣಾಮಗಳನ್ನು ಕಡಿಮೆ ತೋರಿಸಿದೆ ಎಂದು ಹೇಳಿದೆ.
ಇದೇ ಸಂದರ್ಭದಲ್ಲಿ ಯು.ಎಸ್.ನ ಔಷಧ ತಯಾರಿಕಾ ಸಂಸ್ಥೆ ಪಿಫೈಜರ್, ಜರ್ಮನಿಯ ಔಷಧ ಕಂಪನಿ ಬಯೋಎನ್ ಟೆಕ್ ನೊಂದಿಗೆ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಇದು ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಗಳಿಗೆ 42,113 ಸ್ವಯಂಸೇವಕರನ್ನು ನೋಂದಣಿ ಮಾಡಿಕೊಂಡಿದೆ. ಈ ಸಂಸ್ಥೆ ಕೂಡಾ ನವೆಂಬರ್ ಅಂತ್ಯಕ್ಕೆ ಅಧಿಕೃತ ಮಾನ್ಯತೆಯನ್ನು ಕೋರಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಈ ವರ್ಷಾಂತ್ಯಕ್ಕೆ ಲಸಿಕೆ ದೊರೆಯುವ ನಿರೀಕ್ಷೆ ಇದೆ.
ಆದರೆ ಕೊರೊನಾ ವೈರಸ್ ಮಾತ್ರ ಈ ಯಾವುದಕ್ಕೂ ಹಿಂಜರಿಯದೆ ತನ್ನ ಬೇಟೆ ವಿಸ್ತರಿಸುತ್ತಿದೆ. ಭಾರತದಲ್ಲಿ 36,470 ಪ್ರಕರಣಗಳು ವರದಿಯಾಗಿದ್ದು 488 ಮರಣಗಳು ಹಾಗೂ ಒಟ್ಟು ಪ್ರಕರಣಗಳ ಸಂಖ್ಯೆ 79,46,429ಕ್ಕೆ ಏರಿಸಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳು 6,25,857 ಆಗಿವೆ.
ಕೆಲ ಜನಪ್ರಿಯ ರಾಜ್ಯ ಸರ್ಕಾರಗಳು ಕೂಸು ಹುಟ್ಟುವ ಮುನ್ನವೇ ಉಚಿತ ಲಸಿಕೆಯ ಕುಲಾವಿ ನೀಡುತ್ತಿವೆ.
ಮೊದಲಿಗೆ ಅಭಿನಂದನೆಗಳು ಯಾಕೆಂದ್ರೆ ಈ ಸುದ್ಧಿ ಗಾಳಿಮಾತು ಎಂಬ ಸುದ್ದಿಯ ದಿನವೇ ನೀವು ಇದರ ಬಗ್ಗೆ ತುಂಬಾ ವಿಸ್ತಾರವಾಗಿ ವಿವರಿಸದ್ದಕ್ಕೆ..👍
ಧನ್ಯವಾದಗಳು
ಈ ಸುದ್ದಿ ವಿವರ ಸಹಿತ
ಪ್ರಕಟಿಸಿದ್ದಕ್ಕೆ
👍👍
ಕೊರೊನಾ ಲಸಿಕೆ ಬಗ್ಗೆ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು.