ಆವಾಗೆಲ್ಲಾ ಸ್ಕೂಲು ಅಂದ್ರೆ ಅದೇನೋ ಹಿಂಸೆ , ಒಂಥರ ಜೈಲಾನುಭವ . ನಿಜವಾಗಲೂ ಮನಸ್ಸಿಗೆ ಖುಷಿ ಕೊಡ್ತಿದ್ದಿದ್ದೇ ಟೀಚರ್ಸ್ ಆಗಾಗ ಹೇಳುತ್ತಿದ್ದ ಕತೆಗಳು .
ನಮ್ಮ ಕ್ಲಾಸ್ ಟೀಚರ್ ಅಚಾನಕ್ಕಾಗಿ ರಜೆ ಹೋದಾಗ , ಪಕ್ಕದ ಕ್ಲಾಸಿನ ಟೀಚರ್ ನಮ್ಮ ಕ್ಲಾಸನ್ನು ಅವರ ಕ್ಲಾಸನ್ನು ಕಂಬೈನ್ಡ್ ಮಾಡಿ ಗಲಾಟೆ ಮಾಡದಂತೆ ಹೇಳಿ ನಮ್ಮನ್ನ ಸುಮ್ಮನಿರಿಸಲು ” ಒಂದೂರಲ್ಲಿ …..” ಅಂತ ಕತೆ ಹೇಳಕ್ಕೆ ಶುರು ಮಾಡ್ತಿದ್ದಂಗೇ ಅದೇನೋ ಖುಷಿ , ಅದೆಂತದ್ದೋ ಆನಂದ ತುಟಿಕ್ ಪಿಟಕ್ ಅನ್ದಂಗೆ ಮೈಮರೆತು ಕೂತ್ಬಿಡ್ತಿದ್ವಿ .
ಇಷ್ಟಕ್ಕೂ ನಮ್ ಟೀಚರ್ ಗಳ ಕತೆ ಶುರು ಆಗ್ತಿದ್ದ ವಾತಾವರಣಾನೇ ತುಂಬಾ ಮಜಾ ಇರ್ತಿತ್ತು . ದಿನದ ಕೊನೇ ಪೀರಿಯಡ್ ನಲ್ಲಿ, ಸ್ಪೋರ್ಟ್ಸ್ ಪಿರಿಯಡ್ಡಲ್ಲಿ, ಮಳೆ ಬರ್ತಿದ್ದಾಗ , ಶನಿವಾರದ ಅರ್ಧ ದಿನಗಳಲ್ಲಿ ಹೀಗೆ …
ಅವರುಗಳ ಪ್ರತೀ ಕತೆಯ ಆರಂಭ ಒಂದೂರಲ್ಲಿ ಒಬ್ಬ ರಾಜ ಇದ್ನಂತೆ , ಒಂದು ಕಾಡಲ್ಲಿ ಒಂದು ಸಿಂಹ ಇತ್ತಂತೆ , ಒಂದು ಹಳ್ಳೀಲಿ ಒಬ್ಬ ರೈತ ಇದ್ನಂತೆ …. ಅಂತಾನೇ ಶುರು ಆಗ್ತಿತ್ತು .ಅವರು ಹೇಳೋ ಕತೆ ನಮ್ಮ ಸಿಲಬಸ್ಸಲ್ಲಿ ಇದ್ದೂ ಅದೇನಾದ್ರೂ ಪರೀಕ್ಷೆಯಲ್ಲಿ ಬಂದ್ಬಿಟ್ರೆ ಅಂತೂ ಮುಗಿದೋಯ್ತು ಆನ್ಸರ್ ಷೀಟಲ್ಲಿ ಹಂಗೇ ಭಟ್ಟೀ ಇಳಿಸ್ಬಿಡ್ತಿದ್ವಿ .
ಇನ್ನು ಮನೆಯ ಹತ್ತಿರ ಸಂಜೆ ಕರೆಂಟ್ ಹೋದಾಗ ಗೆಳೆಯನ ಅಮ್ಮನೋ ಅವರ ಅಜ್ಜಿಯೋ ,ತಾತನೋ ನಮ್ಮನ್ನೆಲ್ಲಾ ಸುತ್ತಲೂ ಕೂರಿಸಿಕೊಂಡು ಹೇಳುತ್ತಿದ್ದ ಕತೆಗಳು ನಮ್ಮನ್ನು ಅಲುಗಾಡಲಿಕ್ಕೂ ಬಿಡುತ್ತಿರಲಿಲ್ಲ ಅಷ್ಟು ತನ್ಮಯತೆಯಿಂದ ಕೇಳುತ್ತಿದ್ದೆವು .
ನೆಂಟರ ಮನೆಗೆ ಹೋದಾಗ ಅವರ ಮನೆಯ ಮಕ್ಕಳೊಂದಿಗೆ ತಡರಾತ್ರಿಯಾದರೂ ನಿದ್ದೆ ಮಾಡದೇ ಸುಮ್ಮನೆ ಹಾಲಿನಲ್ಲಿ ವಟಗುಡುತ್ತಿದ್ದಾಗ ಅವರಮ್ಮ ಹೇಳುತ್ತಿದ್ದ ಕತೆಯನ್ನು ಕೇಳಿಸಿಕೊಂಡು ಅವರ ಮನೆಯ ಮೇಲ್ಚಾವಣಿಯನ್ನು ನೋಡಿಕೊಂಡೇ ಮಲಗಿಬಿಡುತ್ತಿದ್ದೆವು . ಬೆಳಿಗ್ಗೆ ಎದ್ದು ಪುನಃ ಆ ಕತೆಯ ಬಗ್ಗೆ ವಿಚಾರಿಸುತ್ತಿದ್ದೆವು .
ಅರ್ಧದಷ್ಟು ನೀರಿದ್ದ ಹೂಜಿಗೆ ಕಲ್ಲುಗಳನ್ನಾಕಿ ಮೇಲೆ ಬಂದ ನೀರನ್ನು ಕುಡಿಯುವ ಜಾಣ ಕಾಗೆ ಕತೆ . ಅರಣ್ಯದಲ್ಲಿ ರಾಮನಿಗಾಗಿ ವರ್ಷಾನುಗಟ್ಟಲೇ ಕಾದ ಶಬರಿ ಕತೆ . ಮಾತಿಗೆ ತಪ್ಪದ ಪುಣ್ಯಕೋಟಿ ಗೋವಿನ ಕತೆ . ಕುರಿಗಾಹಿಯೊಬ್ಬ ಪ್ರತಿದಿನ ತೋಳ ಬಂತು ತೋಳ ಎಂದು ಸುಳ್ಳೇ ಅರಚುತ್ತಿರುತ್ತಾನೆ ಒಮ್ಮೆ ನಿಜವಾಗಿಯೂ ತೋಳ ಬಂದುಬಿಡುತ್ತದೆ ಆಗವನು ಕೂಗಿದಾಗ ಯಾರೂ ಅವನ ಮಾತನ್ನು ನಂಬುವುದಿಲ್ಲ ಎಂಬುವವನ ಕತೆ . ತನ್ನ ಕೋಳಿಯಿಂದಲೇ ಬೆಳಗಾಗುತ್ತಿದೆಯೆಂದು ಭ್ರಮೆಯಲ್ಲಿದ್ದ ಜಂಭದ ಅಜ್ಜಿಯೊಂದು ಕೊನೆಗೆ ಅದನ್ನು ಕಾಡಿನಲ್ಲಿ ಬಿಟ್ಟು ಬಂದು ಪಶ್ಚಾತ್ತಾಪ ಪಡುವ ಕತೆ . ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ಹೆಚ್ಚು ಚಿನ್ನದ ಮೊಟ್ಟೆಗಳಿಗಾಗಿ ಒಮ್ಮೇಲೆ ಕೊಂದ ಆಸೆಬುರುಕನ ಕತೆ . ಹಾಲಿನ ವ್ಯಾಪಾರಿಯ ಹಣದ ಚೀಲವನ್ನು ಎತ್ತೊಯ್ದ ಕೋತಿಯು ಮರದ ಮೇಲಿಂದ ಒಂದು ನಾಣ್ಯವನ್ನು ನದಿಗೆ ಒಂದು ನಾಣ್ಯವನ್ನು ದಡಕ್ಕೆ ಎಸೆದು ಹಾಲಿಂದು ಹಾಲಿಗೆ ನೀರಿಂದು ನೀರಿಗೆ ಎಂದು ಹೇಳುವ ಕತೆ . ನರಿ ಮತ್ತು ಹುಳಿದ್ರಾಕ್ಷಿ ಕತೆ . ಏನ್ ಬೇಕಾದ್ರೂ ಮಾಡ್ತಿದ್ದ ಅಂತ ತಿಳಿಸಕ್ಕೆ ಆಂಜನೇಯ ಸಂಜೀವಿನಿ ಪರ್ವತವ ಹೊತ್ತುತಂದ ಕತೆ . ಶ್ರೀ ಕೃಷ್ಣ ಮತ್ತು ಆತನ ಬಡವ ಗೆಳೆಯ ಕುಚೇಲನ ಕತೆ . ದಶರಥನ ಶಬ್ಧವೇಧಿ ವಿದ್ಯೆಯ ಪರಿಪಾಟಿಲಿನಿಂದ ಶ್ರವಣಕುಮಾರನನ್ನು ಕೊಂದ ಕತೆ . ಈಶ್ವರನೇ ಗಣಪನ ಕತ್ತು ತುಂಡರಿಸುವ ಕತೆ . ಭಕ್ತ ಕುಂಬಾರ ಭಕ್ತಿ ಪರವಶನಾಗಿ ಮಗನನ್ನೇ ಮಣ್ಣಿನಲ್ಲಿ ತುಳಿಯುವ ಕತೆ . ದ್ರೋಣಾಚಾರ್ಯರು ತನ್ನ ಶಿಷ್ಯನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ಪಡೆಯುವ ಕತೆ ….ಹೀಗೆ ಒಂದಾ ಎರಡಾ ನೂರಾರು ಕತೆಗಳು.
ಇದಲ್ಲದೇ ಚಂದಮಾಮ ಬಾಲಮಿತ್ರದ ಕತೆಗಳು .
ಸಾಲದೆಂಬಂತೆ ಪಾಶ್ಚಿಮಾತ್ಯರ ಹೀಮ್ಯಾನು , ಸ್ಪೈಡರ್ ಮ್ಯಾನು , ಸೂಪರ್ಮ್ಯಾನ್ಗಳ ಕತೆಗಳು ಅವರುಗಳ ವಿಶೇಷ ಪೋಷಾಕು … ಅಲ್ಲಾವುದ್ದೀನನ ಅದ್ಭುತ ದೀಪ .ತೇಲುವ ಜಮ್ಖಾನ ಹೀಗೇ ಸಾಲು ಸಾಲು ಅರೇಬಿಯನ್ ಕತೆಗಳು .ಕೇಳಿದ್ದು ಕೊಡುವ ಅಕ್ಷಯ ಪಾತ್ರೆ , ಸೇವಿಸಿದರೆ ಸಾವೇ ಬರದ ಅಮೃತದ ಕತೆ .
ಉಫ್ ……. ರಾಜ , ರಾಣಿ , ಮಂತ್ರಿ, ಸೇನಾಧಿಪತಿ, ಕೃಷ್ಣದೇವರಾಯ , ರಾಮ , ಕೃಷ್ಣ , ತೆನಾಲಿ ರಾಮಕೃಷ್ಣ , ಅಕ್ಬರ್, ಬೀರ್ಬಲ್ ಇವರೆಲ್ಲಾ ಪಾತ್ರಧಾರಿಗಳಾಗಿ …. ಹುಲಿ , ಸಿಂಹ , ಆನೆ , ಆಮೆ , ಕರಡಿ , ನರಿ , ಕುರಿ , ಮೊಸಳೆ ಇವೆಲ್ಲಾ ಪಾತ್ರಗಳಾಗಿ ….ಮೊದಲಿನಿಂದಲೂ ನಮಗೆ ನಂಬಿಸಿ ನಮ್ಮ ತಲೆಗೆ ತುಂಬಿಸಿ ನಮನ್ನು ಸದೃಢಗೊಳಿಸಿ ಈ ಜಗತ್ತಿನಲ್ಲಿ ನಿಲ್ಲಿಸಿದ್ದವು .
ಕತೆಯ ರೂಪದಲ್ಲಿ ನಮ್ಮೊಳಗೆ ನೈತಿಕತೆಯನ್ನು ತುಂಬಿ ಬದುಕೆಂಬ ಸ್ಪರ್ಧೆಗೆ ಒಗ್ಗಿಸಿದ್ದ ಈ ಎಲ್ಲಾ ಕತೆಗಾರರಿಗೂ ಅನಂತಾನಂತ ವಂದನೆಗಳು.
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಬಾಲ್ಯಕ್ಕೆ ಮರಳಿ ಕರೆದೊಯ್ದ ಚೆಂದದ ಕಥಾ ಲೋಕ
ಬಾಲ್ಯದ ನೆನಪುಮರುಕಳಿಸಿದ ಲೇಖನ. ಕತೆಗಳು ನೆನಪಾದವು. ಚಿತ್ತ ಅದ್ಬುತವಾಗಿ ಮೂಡಿ ಬಂದಿದೆ
Very nice to read informative articles
ನೀವು ಲೇಖನದಲ್ಲಿ ತಿಳಿಸಿದ ಎಲ್ಲ ಕಥೆಗಳನ್ನೂ ಬಾಲ್ಯದಲ್ಲಿ ಕೇಳಿದ್ದು ನೆನಪಾಯಿತು. ಚಿತ್ರ, ಲೇಖನಕ್ಕೆ ಹೇಳಿಮಾಡಿಸಿದಂತಿದೆ.
ಬಾಲ್ಯದಲ್ಲಿ ಕೇಳಿದ, ಓದಿದೆ ಕಥೆಗಳು ಈಗಲೂ ನೆನಪಿನಂಗಳದಲ್ಲಿ ಹಸಿರಾಗಿದೆ. ಇದನ್ನು ಓದಿದ ಮೇಲೆ ಮತ್ತೆ ನೆನಪಿನಂಗಳದಲ್ಲಿ ಜಾರಿದೆ. ಚಂದ ಲೇಖನ