ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಪ್ರೇಕ್ಷಕರಿಗೂ ಮನೆಯಲ್ಲೇ ಕೂತು ಒಟಿಟಿಯಲ್ಲಿ ಸಿನಿಮಾ ನೋಡುವ ವೀಕ್ಷಕನಿಗೂ ವ್ಯತ್ಯಾಸವಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಪ್ರೇಕ್ಷಕ ಮನೆಯಲ್ಲಿ ನೋಡುವಾಗ ವೀಕ್ಷಕನಾಗಿ ಬದಲಾಗುತ್ತಾನೆ. ಅವನೂ ನೋಡುವ ವಿಧಾನವೂ ಬದಲಾಗುತ್ತದೆ. ಚಿತ್ರ ಮಂದಿರದಲ್ಲಿ ಒಂದಿಷ್ಟು ಅಡೆತಡೆ ಇಲ್ಲದೆ ಚಿತ್ರದಲ್ಲೇ ಧ್ಯಾನಸ್ಥನಾಗುವ ಪ್ರೇಕ್ಷಕ ಮನೆಯಲ್ಲಿ ನೋಡುವಾಗ ಒಂದಿಷ್ಟು ಡಿಸ್ಟರ್ಬನ್ಸ್ ಗೆ ಒಳಗಾಗುವುದು ಸಹಜ.
ಸಿನಿಮಾ ನೋಡುತ್ತಿರುವಾಗಲೇ ಲ್ಯಾಂಡ್ ಲೈನ್ ಬಡಿದುಕೊಳ್ಳುತ್ತದೆ. ಇದ್ದಕ್ಕಿದ್ದಂತೆ ಕುಕ್ಕರ್ ವಿಷಲ್ ಹಾಕುತ್ತದೆ. ವೈಫೈ ಸ್ಲೋ ಆಗುತ್ತದೆ. ಹೀಗಾಗಿ ಒಂದು ಸಿನಿಮಾವನ್ನು ಹಲವಾರು ಸಿಟ್ಟಿಂಗ್ ಗಳಲ್ಲಿ ನೋಡುವವರೆ ಅಧಿಕ. ಇಂಥ ಸಂದರ್ಭದಲ್ಲಿ ಒಟಿಟಿಗಾಗಿ ಸಿನಿಮಾ ಮಾಡುವ ನಿರ್ದೇಶಕನ ಮುಂದೆ ದೊಡ್ಡ ಸವಾಲಿರುತ್ತದೆ. ವೀಕ್ಷಕ ಒಂದೇ ಸಿಟ್ಟಿಂಗ್ ನಲ್ಲಿ ನೋಡುವ ಹಾಗೆ ಚಿತ್ರವನ್ನು ನಿರೂಪಿಸಬೇಕಾಗುತ್ತದೆ.
ಚಿತ್ರಮಂದಿರದಲ್ಲಿ ಪ್ರೇಕ್ಷಕ ಅಸಹಾಯಕ. ಇಷ್ಟವಿಲ್ಲದ ದೃಶ್ಯಗಳನ್ನು ಮುಂದಕ್ಕೆ ಹಾಕುವ ಸ್ವಾತಂತ್ರ್ಯವಿಲ್ಲ. ಕಷ್ಟವೋ ಸುಖವೋ ನೋಡಲೇ ಬೇಕು. ಇಲ್ಲಿ ಹಾಗಲ್ಲ. ವೀಕ್ಷಕನ ಕೈಯಲ್ಲಿ ರಿಮೋಟ್ ಇರುತ್ತದೆ. ಸಿನಿಮಾ ಕೂತೂಹಲ ಮೂಡಿಸದಿದ್ದರೆ ಅವನ ಮುಂದೆ ನೂರಾರು ಸಿನಿಮಾಗಳು, ವೆಬ್ ಸೀರೀಸ್ ಗಳು ಸಾಲು ಗಟ್ಟಿರುತ್ತವೆ.
ಇಂದು ಬಿಡುಗಡೆಯಾದ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಭೀಮಸೇನ ನಳಮಹಾರಾಜ ಸಿನಿಮಾವನ್ನು ವೀಕ್ಷಿಸಿದ ನಂತರ ಇಷ್ಟು ಬರೆಯಬೇಕಾಯಿತು. ದೊಡ್ಡ ಹೆಸರುಗಳಿದ್ದ ಈ ಸಿನಿಮಾ ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ , ಹೇಮಂತ ಕುಮಾರ್ ಎಂಬ ನಿರ್ಮಾಪಕರು , ಜೀರಂಬೆಯಂಥ ಚಿತ್ರ ನಿರ್ದೇಶಿಸಿದ ಕಾರ್ತಿಕ್ ಸರಗೂರಂಥ ನಿರ್ದೇಶಕರು, ಅಚ್ಯುತಕುಮಾರರಂಥ ಕಲಾವಿದರು ತುಂಬಿದ್ದರಿಂದ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿತ್ತು. ಆದರೆ ಒಟಿಟಿಯಲ್ಲಿ ಸ್ಯೂಟಬಲ್ ಬಾಯ್, ಮಿರ್ಜಾಪುರ್ ಸೀಸನ್2 ನಂಥ ವೇಗದ ಓಟಕ್ಕೆ ಒಗ್ಗಿಕೊಂಡ ವೀಕ್ಷಕ ಈ ಚಿತ್ರದ ಕೊನೆಯಲ್ಲಿ ತೆರೆದುಕೊಳ್ಳುವ ಸೀಕ್ರೇಟ್ ಗಾಗಿ ಸಮಯ ವ್ಯಯಿಸುವಷ್ಟು ಉದಾರಿಯಾಗಿರುತ್ತಾನೆಯೇ ಎಂಬುದು ಪ್ರಶ್ನೆ.
ಸಿಟ್ಟಿನ ಭರದಲ್ಲಿ ಆಗುವ ಅವಾಂತರಗಳು ಅದರ ನಡುವೆ ಅರಳುವ ಪ್ರೇಮಕತೆಯೇ ಚಿತ್ರದ ಕತೆ. ಈ ಕತೆ ಹೊಸದಂತೂ ಅಲ್ಲ. ಅದನ್ನು ಬೇರೆ ರೀತಿಯಲ್ಲಿ ಹೇಳುವ ಪ್ರಾಮಾಣಿಕ ಪ್ರಯತ್ನ ನಿರ್ದೇಶಕರಿಂದ ಆಗಿದೆ ಎಂಬುದು ಗೋಚರವಾಗುತ್ತದೆ. ಅದಕ್ಕೆ ಹೊಂದಾಣಿಕೆಯಾಗುವಂತೆ ಸುಂದರ ಪರಿಸರ ಚಿತ್ರವನ್ನು ಸಹನೀಯ ಮಾಡುತ್ತದೆ.
ಓಲ್ಡೇಜ್ ಹೋಮ್ ನ ಕೇರ್ ಟೇಕರ್ ಸಾರಾಳ ಪ್ರವೇಶದೊಂದಿಗೆ ಆರಂಭವಾಗುವ ಚಿತ್ರ ಆಕೆಯನ್ನು ರೆಸಾರ್ಟ್ ವೊಂದಕ್ಕೆ ಕರೆದೊಯ್ಯುವದರೊಂದಿಗೆ ಮುಂದುವರಿಯುತ್ತದೆ. ಅಲ್ಲಿ ಆಕೆ ಭೇಟಿಯಾಗುವ ಲತ್ತೇಶನೆಂಬ ಅಡುಗೆ ಭಟ್ಟನ ಮತ್ತು ವೇದವಲ್ಲಿ ನಡುವಿನ ಪ್ರೇಮ ಕಥೆಯೊಂದಿಗೆ ಸಾಗುತ್ತದೆ. ಮಧ್ಯ ಮಧ್ಯ ಸಿಗುವ ಕುತೂಹಲದ ತಿರುವುಗಳು ಊಟದ ನಡುವೆ ಬರುವ ಸರ್ ಪ್ರೈಸ್ ಡಿಷ್ ಗಳು. ಈ ರೆಸಾರ್ಟ್ನಲ್ಲಿ ಮೃಷ್ಟಾನ್ನ ಭೋಜನವೇನೋ ಸಿಗುತ್ತದೆ. ಆದರೆ ಆ ಭೋಜನ ಸವಿಯಲು ಅದೇ ರೆಸಾರ್ಟ್ ಗೆ ಮತ್ತೆ ಬರಬೇಕು ಎಂದು ಅನ್ನಿಸುವುದಿಲ್ಲ.
ಚಿತ್ರದ ದೃಶ್ಯಗಳು ಕಣ್ತುಂಬುತ್ತವೆ. ಲತ್ತೇಶನಾಗಿ ಅರವಿಂದ ಅಯ್ಯರ್, , ಅರೋಹಿಯಾಗಿ ಅರೋಹಿ ನಾರಾಯಣ್, ಸಾರಾಳಾಗಿ ಪ್ರಿಯಾಂಕ ತಿಮ್ಮೇಶ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಚ್ಯುತಕುಮಾರ ರಂಥ ಕಲಾವಿದರಿಂದ ಇನ್ನಷ್ಟು ಉತ್ತಮ ಕೆಲಸ ತೆಗೆಯುವಲ್ಲಿ ನಿರ್ದೇಶಕರು ಸೋತಿದ್ದಾರೆ. ಬಾಲ ಕಲಾವಿದೆ ಮನ ಗೆಲ್ಲುತ್ತಾಳೆ . ಹೇಮಂತಕುಮಾರರ ಎಲ್ಲಾ ಸಿನಿಮಾಗಳಲ್ಲೂ ಕೇಳುವ ಮಾದರಿಯ ಸಂಗೀತವೇ ಇಲ್ಲೂ ಧ್ವನಿಸುತ್ತದೆ.
ಮೊದಲರ್ಧವನ್ನು ಸಹಿಸಿಕೊಂಡರೆ ದ್ವಿತೀಯಾರ್ಧದಲ್ಲಿ ಒಳ್ಳೆಯ ಊಟ ಗ್ಯಾರಂಟಿ.ಓಟಿಟಿಗಾಗಿಯೇ ಸಿನಿಮಾ ಮಾಡುವವರು ಕತೆ ಹೇಳುವ ವ್ಯಾಕರಣವನ್ನು ಕೊಂಚ ಬದಲಿಸಿಕೊಂಡರೆ ವೀಕ್ಷಕ ಎಂಥ ಅಡೆತಡೆಗಳ ನಡುವೆಯೂ ಒಂದೇ ಸಿಟ್ಟಿಂಗ್ ನಲ್ಲಿ ಚಿತ್ರ ನೋಡಿ ಮುಗಿಸಬಹುದು.
ಅಮೆಜಾನ್ ಪ್ರೈಮ್ ಗೆ ಸೇರಬೇಕೆ ಹಾಗಾದರೆ ಈ ಕೆಳಗಿನ ಲಿಂಕ್ ಒತ್ತಿ.

Short and sweet information and interesting too.