26.3 C
Karnataka
Saturday, November 23, 2024

    ಬೆಂಗಳೂರು ಬಳಿಯೇ ಇದೆ ದಕ್ಷಿಣ ಭಾರತದ ಜಲಿಯನ್ ವಾಲ್ ಬಾಗ್

    Must read

    ಕರ್ನಾಟಕದ ನಾಗರಿಕರು ಸಾಮಾನ್ಯವಾಗಿ ವಿದುರಾಶ್ವತ್ಥದ ಹೆಸರನ್ನು ಕೇಳಿಯೇ ಇರುತ್ತಾರೆ. ಕಾರಣ ಇದು ಪುಣ್ಯಕ್ಷೇತ್ರವಾಗಿ ಬಹಳ ಪ್ರಸಿದ್ಧವಾದ ಸ್ಥಳ. ಚಾರಿತ್ರಿಕವಾಗಿಯೂ ಸಹ ಖ್ಯಾತಿಯನ್ನು ಪಡೆದ ಊರು. ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಪುಟಗಳಲ್ಲಿ ವಿದುರಾಶ್ವತ್ಥದ ಹೆಸರು ಚಿರಸ್ಮರಣೀಯ.

    ವಿದುರಾಶ್ವತ್ಥ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಪುಟ್ಟ ಹಳ್ಳಿ . ಗೌರಿಬಿದನೂರು ಪಟ್ಟಣದಿಂದ ಕೇವಲ ಆರು ಕಿ. ಮೀ ದೂರದಲ್ಲಿದೆ. ಊರು ಸಣ್ಣದಾದರೂ ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಖ್ಯಾತಿಯನ್ನು ಪಡೆದಿರುವ, ಉತ್ತರ ಪಿನಾಕಿನಿ ನದಿಯ ದಂಡೆಯ ಮೇಲಿರುವ ಕ್ಷೇತ್ರ.

    ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್

    ಐತಿಹಾಸಿಕವಾಗಿ ವಿದುರಾಶ್ವತ್ಥ ಬಹಳ ಮಹತ್ವವನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದು ಖ್ಯಾತಿಯನ್ನು ಪಡೆದಿದೆ. 1919 ರಲ್ಲಿ ಪಂಜಾಬಿನ ಅಮೃತಸರದಲ್ಲಿ ಸಾಮೂಹಿಕ ಹತ್ಯೆ ನಡೆದ ರೀತಿಯಲ್ಲಿಯೇ, ಏಪ್ರಿಲ್ 25, 1938 ರಂದು ವಿದುರಾಶ್ವತ್ಥದಲ್ಲಿ ಚಿಕ್ಕ ಪ್ರಮಾಣದಲ್ಲಿ ಸಾಮೂಹಿಕ ಹತ್ಯೆ ನಡೆಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಈ ಘೋರ ಘಟನೆ ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದೆ.

    1938 ರ ಏಪ್ರಿಲ್ 22 ರಿಂದ 25 ರ ವರೆಗೆ ಜಾತ್ರೆ ನಡೆದಿದ್ದ ಸಂದರ್ಭ. 1929 ರ ಪೂರ್ಣ ಸ್ವರಾಜ್ ಘೋಷಣೆ, 1934 ರಲ್ಲಿ ಸ್ಥಾಪನೆಗೊಂಡ ಮೈಸೂರು ಪ್ರಜಾಪಕ್ಷವು ಪೂರ್ಣ ಸ್ವರಾಜ್‍ಗೆ ಮಾಡಿದ ಬೇಡಿಕೆ ಹಾಗೂ ಗಾಂಧೀಜಿಯವರಿಂದ ಪ್ರೇರಿತಗೊಂಡ ಸಾವಿರಾರು ದೇಶ ಪ್ರೇಮಿಗಳು, ಸ್ವಾತಂತ್ರ್ಯ ಯೋಧರು ನೆರದಿದ್ದರು. ಎನ್. ಸಿ ತಿಮ್ಮಾರೆಡ್ಡಿ, ಎನ್. ಸಿ ನಾಗಯ್ಯರೆಡ್ಡಿ, ಟಿ. ರಾಮಾಚಾರ್, ಶ್ರೀನಿವಾಸ ರಾವ್ ಮುಂತಾದವರು ಮುಂದಾಳತ್ವವನ್ನು ವಹಿಸಿದ್ದರು. ಧ್ವಜ ಸತ್ಯಾಗ್ರಹ ( Flag satyagraha ) ವನ್ನು ಆಯೋಜಿಸಲಾಗಿತ್ತು. ಸುಮಾರು ಹತ್ತು ಸಾವಿರ ಜನರು, ಶಾಂತಿಯುತವಾಗಿ ಹೆಜ್ಜೆಹಾಕುತ್ತಾ, ಕಾಂಗ್ರೆಸ್ ನ ರಾಷ್ಟ್ರೀಯ ಧ್ವಜವನ್ನು ಆರೋಹಣ ಮಾಡಲು ಪ್ರಯತ್ನಿಸಿದರು. ಪಲಿಸರು ಲಾಠಿ ಚಾರ್ಜ್ ಮಾಡಿದಾಗ, ಪ್ರತಿಭಟನೆ ತೀವ್ರವಾಯಿತು. ಪೊಲೀಸರು ಕಾರಣವಿಲ್ಲದೆ, ಗುಂಡುಗಳನ್ನು ಹಾರಿಸಿದಾಗ, ಹತ್ತು ಜನರು ಮೃತಪಟ್ಟರು ಮತ್ತು ಮೂವತ್ತೈದು ಜನರು ಗಾಯಗೊಂಡರು. ಇದು ಸತ್ಯಾಗ್ರಹಿಗಳ ಮೇಲೆ ನಡೆದ ಹೇಯ ಕೃತ್ಯ.

    ಮಹಾತ್ಮ ಗಾಂಧೀಜಿಯವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾರವರಿಗೆ ಪತ್ರ ಬರೆದು, ಸರ್ಕಾರವು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಆಚಾರ್ಯ ಕೃಪಲಾಣಿಯವರನ್ನು ಸರ್ಕಾರದೊಂದಿಗೆ ಚರ್ಚಿಸಲು ಹಾಗೂ ಮಿರ್ಜಾರವರನ್ನು ಭೇಟಿಮಾಡಲು ಕಳುಹಿಸಿಕೊಟ್ಟರು. ವಿಶಿಷ್ಟವಾಗಿ, ಈ ಪ್ರಕರಣ ಬಿಬಿಸಿ ಹಾಗೂ ಇತರ ಬ್ರಿಟಿಷ್ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಇದರ ಫಲವಾಗಿ 1939 ರ ಮೇ ತಿಂಗಳಿನಲ್ಲಿ ಪಟೇಲ್ – ಮಿರ್ಜಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಒಪ್ಪಂದದ ಪ್ರಕಾರ ಕಾಂಗ್ರೆಸ್ ರಾಷ್ಟ್ರೀಯ ಧ್ವಜವನ್ನು ಹಾರಿಸಲು ಇದ್ದಂತಹ ನಿರ್ಬಂಧವನ್ನು ತೆಗೆದು ಹಾಕಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಜಯದ ಪ್ರತೀಕವಾಗಿ, 1939 ರ ಮೇ ತಿಂಗಳಿನಲ್ಲಿ, ಎರಡನೇ ಕಾಂಗ್ರೆಸ್ ಅಧಿವೇಶನವನ್ನು ವಿದುರಾಶ್ವತ್ಥದಲ್ಲಿ ನಡೆಸಲಾಯಿತು. ಗಾಂಧೀಜಿಯವರು ನಂದಿ ಬೆಟ್ಟಕ್ಕೆ ಭೇಟಿ ನೀಡಿ, ಘಟನೆಯ ಬಗ್ಗೆ ಚರ್ಚಿಸಿ, ಸತ್ಯಾಗ್ರಹಿಗಳಿಗೆ ಉತ್ಸಾಹವನ್ನು ತುಂಬಿ, ಇನ್ನಷ್ಟು ಹುರಿದುಂಬಿಸಿದರು.

    1973 ರಲ್ಲಿ ಈ ಘಟನೆ ನಡೆದ ಸ್ಥಳದಲ್ಲಿ ಮರಣ ಹೊಂದಿದ ಹುತಾತ್ಮರ ಗೌರವಾರ್ಥಕವಾಗಿ, ಸ್ಮಾರಕವನ್ನು ನಿರ್ಮಿಸಲಾಯಿತು. ಹುತಾತ್ಮರ ಹೆಸರುಗಳನ್ನು ಸಹ ಫಲಕದಲ್ಲಿ ಕೆತ್ತಿಸಲಾಗಿದೆ. 2004 ರಲ್ಲಿ ವೀರ ಸೌಧವನ್ನು ನಿರ್ಮಿಸಲಾಗಿದೆ. ಈ ವೀರ ಸೌಧದಲ್ಲಿ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದಂತೆ, ಅದ್ಭುತವಾದ ಫೋಟೋ ಗ್ಯಾಲರಿ ಮತ್ತು ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಪ್ರತಿಯೊಬ್ಬ ಭಾರತೀಯನು ಭೇಟಿ ಕೊಡಲೇ ಬೇಕಾದ ಸ್ಥಳ, ವಿಶೇಷವಾಗಿ ವಿದ್ಯಾರ್ಥಿ / ನಿಯರು.ವೀರಸೌಧದ ಸುತ್ತಲೂ, ಮಕ್ಕಳ ಉದ್ಯಾನವನ, ತೆರೆದ ಸಭಾಂಗಣ ಹಾಗೂ ಸ್ವಾತಂತ್ರ್ಯ ವೀರರ ಪುತ್ಥಳಿಗಳನ್ನಿಡಲಾಗಿದೆ.

    ಸತ್ಯಾಗ್ರಹದ ಜ್ಞಾಪಕಾರ್ಥವಾಗಿ, ಸ್ಥಳೀಯ ಫ್ರೌಡಶಾಲೆಗೆ Satyagraha Memorial High School ಎಂದು ನಾಮಕರಣ ಮಾಡಲಾಗಿದೆ.

    ಪುಣ್ಯಕ್ಷೇತ್ರವಾಗಿಯೂ ಸುಪ್ರಸಿದ್ಧ

    ವಿದುರಾಶ‍್ವತ್ಥ ಕ್ಷೇತ್ರ ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ. ಅಶ್ವತ್ಥ ನಾರಾಯಣ ಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದ ಪವಿತ್ರ ಭೂಮಿ. ವಿದುರಾಶ್ವತ್ಥ ಎನ್ನುವ ಹೆಸರು, ಊರಿನಲ್ಲಿರುವ ದೊಡ್ಡ ಅಶ್ವತ್ಥ ಮರದಿಂದ ಬಂದಿದೆ. ಈ ಅಶ್ವತ್ಥ ಮರವು ಧೃತರಾಷ್ಟ್ರ ರಾಜನ ಆಸ್ಥಾನಿಕ ವಿದುರನಿಂದ ನೆಡಲ್ಪಟ್ಟಿದ್ದರಿಂದ ಈ ಊರಿಗೆ ವಿದುರಾಶ್ವತ್ಥ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ.

    ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಈ ಸ್ಥಳವು ನಾಗರ ಪ್ರತಿಷ್ಠೆ ಮಾಡಲು ಬಹಳ ಹೆಸರುವಾಸಿಯಾಗಿದೆ. ಈ ಸ್ಥಳದಲ್ಲಿ ನಾಗರ ಪ್ರತಿಷ್ಠೆ ಮಾಡಿ ಪೂಜಿಸಿದರೆ, ಸರ್ಪ ದೋಷ ಅಥವಾ ನಾಗ ದೋಷ ನಿವಾರಣೆಯಾಗಿ, ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಅಪಾರ ನಂಬಿಕೆ. ಆದುದರಿಂದಲೆ, ವಿದುರಾಶ‍್ವತ್ಥದಲ್ಲಿ ಸಾವಿರಾರು ನಾಗರ ಪ್ರತಿಮೆಗಳನ್ನು ನಾವು ನೋಡಬಹುದು.

    ವೈಯಕ್ತಿವಾಗಿ ನನಗೆ ಹೆಮ್ಮೆಯ ವಿಷಯವೇನೆಂದರೆ, ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಪುಟಗಳಲ್ಲಿ  ಖ್ಯಾತಿಗಳಿಸಿರುವ ಗೌರಿಬಿದನೂರು ತಾಲ್ಲೂಕು ನನ್ನ ಸ್ವಂತ ತಾಲ್ಲೂಕು.

    ವಿದುರಾಶ್ವತ್ಥಕ್ಕೆ, ಬಸ್ಸು, ರೈಲು ಅಥವಾ ವೈಯುಕ್ತಿಕ ವಾಹನ, ಇವುಗಳಲ್ಲಿ ಯಾವುದನ್ನಾದರೂ ಉಪಯೋಗಿಸಿ ಪ್ರಯಾಣಿಸ ಬಹುದು. ತಪ್ಪದೆ ಭೇಟಿ ನೀಡಿ. (ಚಿತ್ರಗಳು: ವಿ.ಎಲ್. ಪ್ರಕಾಶ್)

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ. ಸಧ್ಯ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
    spot_img

    More articles

    17 COMMENTS

    1. ಇದು ಪುಣ್ಯ ಭೂಮಿ ಅಂತ ಗೊತ್ತಿತ್ತು. ಸರ್ಪ ದೋಷ ಇರುವವರು ಇಲ್ಲಿ ಹೋಗಿ ನಾಗ ಪ್ರತಿಷ್ಠಾಪನೆ ಮಾಡಿಸುವುದು ವಾಡಿಕೆ. ಮತ್ತು ಸಂತಾನ ಇಲ್ಲದವರು ಕೂಡ ಹರಕೆ ಕಟ್ಟಿ ನಾಗಪ್ರತಿಷ್ಟ್ ಮಾಡಿಸುವುದು ಗೊತ್ತಿರುವ ಸಂಗತಿ . ಆದ್ರೆ ಇದು ಐತಿಹಾಸಿಕ ಭೂಮಿ ಅನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ ಇಂತ ವಿಷಯ ವನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸರ್. ಪ್ರತಿಯೊಬ್ಬರು ನೋಡಲೇಬೇಕಾದ ಸ್ಥಳ 🙏🙏

      • Well written article, we are very familiar with the place physically. This physics man has gone into the historical chemistry of the place. Very commendable indeed.

    2. ಒಳ್ಳೆಯ ಮಾಹಿತಿಗಳನ್ನೊಳಗೊಂಡ ಲೇಖನ. ಒಮ್ಮೆ ನೋಡುವ ಮನಸ್ಸಾಗುತ್ತಿದೆ.

    3. ಸರ್ ನಮ್ಮ ನಾಡು-ನುಡಿಯ ಚರಿತ್ರೆ ಬಗ್ಗೆ ಬಿಂಬಿಸುವ ಒಳ್ಳೆಯ ಲೇಖನವನ್ನು ಬರೆದಿರುವುದು ಸಂತೋಷ. Excellent Sir 👌

    4. ವಿದುರಾಶ್ವಥ ಇತಿಹಾಸ ಧಾರ್ಮಿಕ ಕ್ಷೇತ್ರ . ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಭಾಗವಹಿಸಿ ಹುತಾತ್ಮರಾದ ಮಹನೀಯರನ್ನ ನೆನಪಿಸುವ ಲೇಖನ ಉತ್ತಮವಾಗಿದೆ . ಹತಿರ ವಿರುವ ಈ ಕ್ಷೇತ್ರವನ್ನ ಒಮ್ಮೆ ನೋಡುವಂತೆ ಪ್ರೇರೇಪಿಸುವ ಬರವಣಿಗೆ .

    5. ಉತ್ತಮ ಮಾಹಿತಿ, ಈ ಲೇಖನ ಓದಿದ ಮೇಲೆ ಅಲ್ಲಿಗೆ ಹೋಗಬೇಕು ಅನಿಸುತ್ತಿದೆ. ಇದರ ಬಗ್ಗೆ ಕೇಳಿದ್ದೆ ಅಷ್ಟೆ. ಇಂತಾ ಲೇಖನ ನಿಮ್ಮಿಂದ ಮತ್ತಷ್ಟು ಬರಲಿ

    6. ಪ್ರತಿಭೆಗೆ ಮುಖಗಳು ಹಲವಾರು.ಮಾನ್ಯ ಪ್ರಾಚಾರ್ಯರಾದ ಡಾ.ಬಿ.ಎಸ್ .ಶ್ರೀಕಂಠ ರವರ ಲೇಖನಿಯಿಂದ ಅನೇಕ ರೀತಿಯ ಲೇಖನಗಳು ನಿರಂತರವಾಗಿ ಹೊರಬರುತ್ತಿರಲಿ. ಕ್ಷೇತ್ರದ ಸರಳ ಸುಂದರ ಪರಿಚಯ ನಮಗಾಗಿದೆ.ಧನ್ಯವಾದಗಳು.

      • ವಿದುರಾಶ್ವತ್ಥ ಐತಿಹಾಸಿಕ, ಪೌರಾಣಿಕ ಮತ್ತು ಧಾರ್ಮಿಕ
        ಹಿನ್ನಲೆಯುಳ್ಳ ಪವಿತ್ರವಾದ ಭೂಮಿ ಎಂಬುದು ನಿಮ್ಮ ಲೇಖನ ಓದಿದ ಮೇಲೆ ಅರಿವಾಯಿತು. ಸರ್ ನಿಮ್ಮ ವಿಭಿನ್ನ ರೀತಿಯ ಲೇಖನಗಳು ಬರವಣಿಗೆಯಲ್ಲಿ ದಾಖಲಾಗುತ್ತಿರಲಿ ಎಂಬುದೆ ನಮ್ಮ ಆಶಯ. ಧನ್ಯವಾದಗಳು ಸರ್

    7. ಲೇಖನ ತುಂಬಾ ಇಷ್ಟವಾಯಿತು
      ಒಮ್ಮೆ ಕಣ್ಣು
      ತುಂಬಿ ಕೊಳ್ಳಬೇಕೆನಿಸಿತು

    8. ಡಾ.ಬಿ.ಎಸ್.ಶ್ರೀಕಂಠ ಅವರಿಗೆ ನಮಸ್ಕಾರಗಳು.
      ನಮ್ಮ ಗುರುಗಳಾದ ತಾವು ಕಾಲೇಜಿನಲ್ಲಿ ಎಷ್ಟು ಸರಳವಾಗಿ ನಮಗೆ ಪಾಠ ಮಾಡುತ್ತಿದ್ದರೋ ಅಷ್ಟೇ ಸರಳವಾಗಿ ನಮ್ಮ ವಿದುರಾಶ್ವತ್ಥದ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ನಮೋ ನಮಃ

    9. ನಾನು ಇಲ್ಲೇ ಹತ್ತಿರದಲ್ಲಿ ಇರುವ ಗುಡಿಬಂಡೆ ಯಲ್ಲಿ ವಾಸ ಮಾಡುವ ಕಾರಣ ಯಾರಾದರೂ ಊರಿಂದ ನೆಂಟರು ಬಂದರೆ ವಿದುರಾಶ್ವತ್ಥ ಕ್ಕೆ ಭೇಟಿ ನೀಡುತ್ತೇನೆ. ವಿದುರ ನೆಟ್ಟ ಅಶ್ವಥ್ ಮರದ ಜೊತೆ ಈ ಸ್ಥಳಕ್ಕೂ ಭೇಟಿ ನೀಡಿರುವೆ . ಈ ಲೇಖನ ಓದಿದಾಗ ಎಲ್ಲಾ ನೆನಪಾಯಿತು

    LEAVE A REPLY

    Please enter your comment!
    Please enter your name here

    Latest article

    error: Content is protected !!