.
ಮೊನ್ನೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಭೀಮಸೇನಾ ನಳಮಹರಾಜ ಸಿನಿಮಾದಲ್ಲಿ ನಿರ್ದೇಶಕ ಕಾರ್ತಿಕ್ ಸರಗೂರು ಅಡುಗೆ ಮತ್ತು ಭಾವನೆಗಳನ್ನು ಹದವಾಗಿ ಬೆರೆಸುವಲ್ಲಿ ಸಫಲರಾಗಿದ್ದಾರೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅರವಿಂದ ಅಯ್ಯರ್, ಆರೋಹಿ ನಾರಾಯಣ್ , ಅಚ್ಯುತಕುಮಾರ್ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.
ಈ ಚಿತ್ರದ ಒಂದು ಪ್ರಮುಖ ಪಾತ್ರ ವೇದವಲ್ಲಿ. ಅದನ್ನು ಸಮರ್ಥವಾಗಿ ನಿಭಾಯಿಸಿದ್ದು ಆರೋಹಿ ನಾರಾಯಣ್. ವಯಸ್ಸಿಗೆ ಮೀರಿದ ಪಾತ್ರವಾದರು ಅದನ್ನು ಒಪ್ಪವಾಗಿ ಒಪ್ಪಿಸಿದ್ದಾರೆ. ಅವರೊಂದಿಗೆ ಕನ್ನಡಪ್ರೆಸ್.ಕಾಮ್ ನಡೆಸಿದ ಸಂದರ್ಶನದ ಆಯ್ದ ಭಾಗ.
ಭೀಮಸೇನ ನಳಮಹಾರಾಜ ಸಿನಿಮಾ ವೈಯಕ್ತಿಕವಾಗಿ ನಿಮಗೆ ಏನನ್ನಿಸಿತು ?
ನನಗಂತೂ ಇದೊಂದು ಮರೆಯಲಾಗದ ಅನುಭವ. ವೇದವಲ್ಲಿ ಪಾತ್ರಕ್ಕೇ ತುಂಬಾನೆ ಚೆನ್ನಾಗಿ ನಾನು ಕನೆಕ್ಟ್ ಆದೆ. ಪ್ರತಿಯೊಬ್ಬರು ತಮ್ಮ ಪ್ರೀತಿ ಪಾತ್ರರ ಬಗ್ಗೆ ವಹಿಸಿಬೇಕಾದ ಕಾಳಜಿ, ಅವರ ಅಗತ್ಯಗಳೇನು ಎಂಬುದನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆ . ಅದು ಆಗದಿದ್ದಾಗ ಆಗುವ ಅನಾಹುತಗಳೇನು ಎಂಬುದನ್ನು ಈ ಚಿತ್ರ ನವಿರಾಗಿ ಹೇಳುತ್ತದೆ. ನಾವು ಅಡುಗೆ ಮಾಡುವಾಗ ಅದಕ್ಕೆ ಸರಿಯಾದ ಮಸಾಲೆಗಳನ್ನು ಬೆರಸಿ ಅದನ್ನು ರುಚಿಕಟ್ಟಾದ ಡಿಶ್ ಆಗಿ ಮಾಡುತ್ತೇವೆ, ಇಲ್ಲೂ ಹಾಗೆ ವಿವಿಧ ಪಾತ್ರಗಳು, ನಾನು ಭಾವನೆಗಳು ಮಿಳಿತವಾಗಿ ಪರಿಪೂರ್ಣ ಕಥೆಯಾಗಿದೆ.
ಇದು ನಿಮ್ಮ ಮೂರನೇ ಸಿನಿಮಾ. ಚಿಕ್ಕ ವಯಸ್ಸಿನ ನೀವು ತಾಯಿ ಪಾತ್ರವನ್ನು ಹೇಗೆ ನಿಭಾಯಿಸಿದಿರಿ?
ನನಗೇನು ಕಷ್ಟ ಅಂಥ ಅನ್ನಿಸಲಿಲ್ಲ.ಈ ಪಾತ್ರದ ಬಗ್ಗೆ ನನಗೆ ಮೊದಲೆ ಹೇಳಿದ್ದರು.ಹೀಗಾಗಿ ಪಾತ್ರವನ್ನು ಅರ್ಥ ಮಾಡಿಕೊಂಡಿದ್ದೆ. ನಾನು ಸಿನಿಮಾದಲ್ಲಿ ಮಗುವೊಂದಿಗೆ ಮಗುವಾಗಿದ್ದೆ. ತಾಯಿ ಎನ್ನುವುದಕ್ಕಿಂತ ನಾವು ಸ್ನೇಹಿತರಂತೆ ಸಿನಮಾದಲ್ಲಿ ನಟಿಸಿದೆವು. ಸಿನಿಮಾ ನೋಡಿದ ಮೇಲೆ ನನಗೂ ಹಾಗೆ ಅನ್ನಿಸಿತು.
ವೇದಾ ಪಾತ್ರ ತುಂಬಾ ತೀವ್ರತೆ, ಖಿನ್ನತೆ ಮತ್ತು ಮಾನಸಿಕ ಗೊಂದಲಗಳ ಸಂಗಮ. ಇಂಥ ಪಾತ್ರಕ್ಕೆ ಹೇಗೆ ಸಜ್ಜಾದಿರಿ?
ಇಂಥ ಪಾತ್ರಗಳು ಬಂದಾಗ ಅದನ್ನು ಕಲಾವಿದೆಯಾದವಳು ಅನುಭವಿಸಿ ನಟಿಸಬೇಕು. ಅದು ಸಾಧ್ಯವಾಗದಿದ್ದಾಗ ಪಾತ್ರಕ್ಕೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ನಿರ್ದೇಶಕರಿಂದ ಪಾತ್ರದ ಆಳ ಅಗಲಗಳ ಸಂಪೂರ್ಣ ವಿವರ ಪಡೆದು ಅದಕ್ಕೆ ತಕ್ಕಂತೆ ನನ್ನನ್ನು ನಾನು ಸಿದ್ಧ ಪಡಿಸಿಕೊಂಡೆ.
ನಿಮ್ಮ ಹಿಂದಿನ ಚಿತ್ರ ದೃಶ್ಯದಲ್ಲಿ ನಿಮ್ಮ ಪಾತ್ರಕ್ಕೆ ಅಂಥ ಹೆಚ್ಚಿನ ಸ್ಕೋಪ್ ಇರಲಿಲ್ಲ. ಅದಕ್ಕೆ ಹೋಲಿಸಿದರೆ ಇದು ಪೂರ್ಣ ಪ್ರಮಾಣದ, ಅಭಿನಯಕ್ಕೆ ಸಾಕಷ್ಟು ಸ್ಕೋಪ್ ಇದ್ದ ಪಾತ್ರ. ಇವೆರಡು ಪಾತ್ರವನ್ನು ಹೇಗೆ ನೋಡುತ್ತೀರಿ?
ದೃಶ್ಯದ ಮುಗ್ಧ ಕಾಲೇಜು ಹುಡುಗಿಯ ಪಾತ್ರವೇ ಆಗಲಿ, ಭೀಮಸೇನಾದ ಭಾವನೆಗಳು ತುಂಬಿದ ಗಟ್ಟಿಗಿತ್ತಿ ಹುಡುಗಿಯ ಪಾತ್ರವೆ ಆಗಲಿ ಎರಡನ್ನು ನಾನು ವೈಯಕ್ತಿಕ ನೆಲೆಯಲ್ಲೇ ಕನೆಕ್ಟ್ ಮಾಡಿಕೊಳ್ಳಬಲ್ಲೆ. ಆದರೆ ನನಗೆ ಎರಡನೆಯದೆ ತುಂಬಾ ಇಷ್ಟವಾಗುತ್ತದೆ. ಇಂಥ ಬೋಲ್ಡ್ ಪಾತ್ರಗಳನ್ನು ಮಾಡಲು ಅವಕಾಶಗಳು ಸಿಗುವುದು ಕಡಿಮೆ. ಎಲ್ಲರಿಗೂ ಸಿಗುವುದಿಲ್ಲ. ಸಾಮಾನ್ಯವಾಗಿ ಪಾತ್ರಗಳನ್ನು ಅಭಿನಯಿಸುವ ಕಲಾವಿದರಿಗೆ ಫಿಟ್ ಆಗುವಂತೆ ರೂಪಿಸಿರಲಾಗುತ್ತದೆ. ಆದರೆ ಈ ಪಾತ್ರ ತುಂಬಾನೆ ಭಿನ್ನ.
ಸಿನಿಮಾದಲ್ಲಿ ನಿಮ್ಮದು ಅತ್ಯಂತ ಪ್ರಮುಖ ಪಾತ್ರ.ಉತ್ತಮವಾದುದ್ದನ್ನೇ ಕೊಡಬೇಕೆಂಬ ನಿಟ್ಟಿನಲ್ಲಿ ಒತ್ತಡಗಳನ್ನು ಎದುರಿಸಿದಿರಾ?
ಹೀಗೇ ಅಭಿನಯಿಸಬೇಕೆಂಬ ಒತ್ತಡವೇನು ಇರಲಿಲ್ಲ. ಪಾತ್ರಕ್ಕೆ ತಕ್ಕಂತೆ ಅಭಿನಯಿಸುವ ಸ್ವಾತಂತ್ರ್ಯ ಇತ್ತು. ಮೊದಲೇ ಸ್ಕ್ರಿಪ್ಟ್ ಕೊಡದಿದ್ದರೂ ಪಾತ್ರದ ಬಗ್ಗೆ ನಿರ್ದೇಶಕರು ವಿವರಿಸಿದ್ದರು. ಹೀಗಾಗಿ ನಮ್ಮ ತನವನ್ನು ಅಳವಡಿಸಿಕೊಂಡು ಸೆಟ್ ನಲ್ಲೇ ಪಾತ್ರವನ್ನು ಅನುಭವಿಸಿ ಅಭಿನಯಿಸಲು ಸಲೀಸಾಯಿತು.
ಮುಂದೆ?
ಕತೆಗಳನ್ನು ಕೇಳುತ್ತಿರುವೆ. ನನಗೆ ಸೂಕ್ತವಾದ ಪಾತ್ರ ಸಿಗಬೇಕು. ಕಮರ್ಷಿಯಲ್ ಸಿನಿಮಗಳಲ್ಲೂ ಅಭಿನಯಿಸುವ ಯೋಚನೆ ಇದೆ. ನೋಡಬೇಕು.
ಅಮೆಜಾನ್ ಪ್ರೈಮ್ ಗೆ ಸೇರಬೇಕೆ ಹಾಗಾದರೆ ಈ ಕೆಳಗಿನ ಲಿಂಕ್ ಒತ್ತಿ.