ಸಂತೇಬೆನ್ನೂರು ಫೈಜ್ನಟ್ರಾಜ್
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು!
ಕಾಮನ ಬಿಲ್ಲನು ಕಾಣುವ ಕವಿಯೊಲು
ತೆಕ್ಕನೆ ಮನ ಮೈ ಮರೆಯುವುದು.
—ಕುವೆಂಪು
ಈ ಕವಿ ನುಡಿ ಕೇಳದ ಕನ್ನಡಿಗರಿಲ್ಲ.ಒಂದು ಭಾಷೆಯ ಬಗ್ಗೆ ಇದಕ್ಕಿಂತ ಅಭಿಮಾನದ ಬರಹ ಮತ್ತೊಂದಿರಲಾರದೆಂದು ನನ್ನ ಅನಿಸಿಕೆ.
ಕನ್ನಡ ಬಲು ಸುಂದರ ಭಾಷೆ. ಸಹೋದರ ಭಾಷೆಗಳಾದ ತೆಲಗು, ತಮಿಳು,ಮಲೆಯಾಳಂ ಮುಂತಾದ ಭಾಷೆಗಳಲ್ಲಿ ನಮ್ಮ ಕನ್ನಡ ನೋಡಲು,ಓದಲು,ಬರೆಯಲು,ಮಾತನಾಡಲು ಹಾಗೇ ಕಲಿಯಲು ಸೊಗಸಾದ ಭಾಷೆ.ಎರಡು ಸಾವಿರ ವರುಷಗಳ ಪರಂಪರೆ ಹೊಂದಿದ ಕನ್ನಡ ಅಂದಿನಿಂದ ಇಂದಿನವರೆಗೂ ಅದು ನಶಿಸುತ್ತದೆ ಎಂಬ ಹುಯಿಲಿದೆ. ಬಳಸದ ಭಾಷೆ ಸಾಯುತ್ತದೆ ಎಂಬ ಸತ್ಯ ಭಾಷಾ ಪಂಡಿತರಿಗೂ ಗೊತ್ತು. ಆದರೆ ಇಂದು ಕನ್ನಡದ ಸ್ವರೂಪ ಬದಲಾಗಿದೆ .ಶಿಷ್ಟಾಚಾರ,ಭಾಷಾ ಮಡಿವಂತಿಕೆ ಮಾಯವಾಗಿ ‘ಹೆಂಗಾದ್ರೂ ನಡಿತದೆ’ ಅನ್ನೋ ಮಟ್ಟಕ್ಕೆ ಬಂದು ನಿಂತು ಕನ್ನಡ ಭಾಷೆ ‘ಹೀಗೂ ಉಂಟೆ’ಅನ್ನುವಂತಾಗಿದೆ.ಇದಕ್ಕೆ ಮುಖ್ಯ ಕಾgಣಗಳು ಎರೆಡು;ಒಂದು- ಕಡಿಮೆ ಓದು,ಭಾಷಾ ಜ್ಞಾನ ಇಲ್ಲದಿರುವುದು,ಪದ ಭಂಡಾರದ ಕೊರತೆ,ಸಾಮಾಜಿಕವಾಗಿ ಬೆರೆಯದಿರುವುದು, ದೈನಂದಿನ, ನಿಯತಕಾಲಿಕಗಳನ್ನು ಓದದೇ ಇರುವುದು!
ಎರಡನೇ ಕಾರಣ ಶಿಕ್ಷಕರ ಅದರಲ್ಲೂ ಪ್ರಾಥಮಿಕ-ಪ್ರೌಢ ಶಾಲಾ ಕೆಲವು ಶಿಕ್ಷಕರ ಕಲಿಸುವ ಅವೈಜ್ಞಾನಿಕ ಕ್ರಮದಿಂದಾಗಿ ಮಕ್ಕಳು ಅಪೂರ್ಣ ಕಲಿತು ಅಪಭ್ರಂಶದಲ್ಲಿ ತೊಡಗುತ್ತಾರೆ. ಗ್ರಾಂಥಿಕ ಭಾಷೆ ಮತ್ತು ಗ್ರಾಮ್ಯ ಭಾಷೆಯ ವ್ಯತ್ಯಾಸ ತಿಳಿಸದಿರುವುದು, ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕಗಳ ಮಹತ್ವ ಹೇಳದೇ ಬರಿ ಉರುಹೊಡೆದಂತೆ ಪಾಠ ಮುಗಿಸಿದಾಗ ಮಗು ಭಾಷಾ ವೈಶಿಷ್ಟ್ಯತೆ ಗ್ರಹಿಸದೇ ಮುಂದೆ ತಾನು ಬೆಳೆದು ತಪ್ಪು ಪ್ರಯೋಗವೇ ಸರಿ ಪ್ರಯೋಗವೆಂದು ಭ್ರಮಿಸಿ ಭಾಷಾಹತ್ಯೆಯ ನಿರಂತರ ಕ್ರಿಯೆ ಯಾವ ಎಗ್ಗು-ಸಿಗ್ಗಿಲ್ಲದೇ ಮಾಡುತ್ತಾ ಹೋಗುತ್ತಾನೆ.
ಸಮೀಕ್ಷೆಯೊಂದರ ಪ್ರಕಾರ ಭಾಷೆಯ ಹದ ತಪ್ಪಿದ್ದು ಮೊಬೈಲ್ ಬಂದ ಮೇಲೆ.ಸಂದೇಶ ಟೈಪಿಸುವಾಗ ಆಗೋ ತಪ್ಪುಗಳು, ಅದನ್ನು ಸ್ವೀಕರಿಸಿದ ವ್ಯಕ್ತಿ ಇದರ ರೂಪವೇ ಹೀಗೆಯೇನೋ ಎಂದು ತಾನೂ ಅದೇ ಮಾದರಿಗೆ ಜೋತು ಬಿದ್ದು ಭಾಷಾ ಕೊಲೆಗೆ ಕೈ ಜೋಡಿಸುತ್ತಾನೆ!
ಸಿನಿಮಾ ಭಾಷೆ
ಇನ್ನು ಸಿನಿಮಾ ಭಾಷೆಗೆ ಬಂದರೆ ಇದು ನಮ್ಮ ಕನ್ನಡವಾ? ಅನ್ನುವ ಅನುಮಾನ ಕಾಡುತ್ತದೆ.ಆ ಸಂಭಾಷಣೆ,ಆ ಸಾಹಿತ್ಯ,ಅದನ್ನು ನಮ್ಮ(?) ಕೆಲವು ಕನ್ನಡದ ನಟರು ಒಪ್ಪಿಸುವ ಶೈಲಿ ಆಹಾ ದೇವರಿಗೇ ಪ್ರೀತಿ!ಅಮ್ಮನ್,ಅಕ್ಕನ್,ಮಚ್ಚಾ,ಶಿಷ್ಯ,ಡಗಾರ್,ಪೀಸು,ಡೌ,ಕುರುಪು,ಲಾಂಗು,ಮಂಚಾಲೋ, ಕೆಂಚಾಲೋ… . ಇಂಥಾ ಅಸಂಖ್ಯಾತ ಪದ ಪುಂಜಗಳು ಕನ್ನಡ ಸಿನಿಮಾಗಳಲ್ಲಿ ರಾರಾಜಿಸುತ್ತಿವೆ.ಅವುಗಳನ್ನು ಅನುಸರಿಸುವ ನಮ್ಮ ಮಕ್ಕಳಿಗೆ ‘ಹಾಗಲ್ಲ ಹೀಗೆ’ ಅಂದರೆ ನಮ್ಮನ್ನೇ‘ಗುಲ್ಡು’ಎಂಬಂತೆ ನೋಡುತ್ತಾರೆ.
ಕನ್ನಡ ಕಥೆಗಳು, ಕಾವ್ಯಗಳು, ಮಹಾಕಾವ್ಯಗಳು, ರಾಮಾಯಣ, ಮಹಾಭಾರತ, ವೇದ ಉಪನಿಷತ್ ಗಳ ಅಲ್ಪ-ಸ್ವಲ್ಪ ಗಂಧಗಾಳಿಯೂ ಇಲ್ಲದೇ ಗಲ್ಲಿಗಳಲ್ಲಾಡುವ ತಳಬುಡವಿಲ್ಲದ ಭಾಷೆಯೇ ನಿಜವಾದ ಕನ್ನಡ ಎಂಬಂತೆ ನೀಡುತ್ತಾ ಹೋದರೆ ಮುಂದಿನ ಪೀಳಿಗೆ ಇದೇ ನಮ್ಮ ಕನ್ನಡ ಅಂತ ಬೀಗುವುದಿಲ್ಲವೇ? ಹಾಗಾದರೆ ನಾವೇನು ಮಾಡಬೇಕು? ಪಾಲಕರು ಸಾಮಾನ್ಯವಾಗಿ ಈಗ ಸಾಕ್ಷರರೇ ಆಗಿರುತ್ತಾರೆ.ಅವರು ಬಾಲ್ಯದಿಂದಲೇ ಮಗುವಿಗೆ ಓದುವ ಹವ್ಯಾಸಕ್ಕೆ ಹಚ್ಚಬೇಕು.ಹೊಸ ಹೊಸ ಪದಗಳ ಪರಿಚಯ ಮಾಡಿಸಬೇಕು.ಸಿಕ್ಕ-ಸಿಕ್ಕಿದ್ದನ್ನು ಓದುವ ಅಭಿರುಚಿ ಬೆಳೆಸಬೇಕು.ಹಾಡುಗಾರಿಕೆಗೆ ತೊಡಗಿಸಿದರೆ ಭಾವ ಶುದ್ಧಿ,ಕಂಠಶುದ್ಧಿ,ಸಾಹಿತ್ಯ ಶುದ್ಧಿಯಾಗುತ್ತದೆ. ದಿನ ಪತ್ರಿಕೆಗಳನ್ನು ಗಟ್ಟಿಯಾಗಿ ಓದಿಸುವ ರೂಢಿ ಮಾಡಬೇಕು.ಕನ್ನಡದ ಸಾಹಿತಿಗಳನ್ನು, ಪಂಡಿತರನ್ನು,ವಾಗ್ಮಿಗಳನ್ನು,ಹಿರಿಯರನ್ನು ಕರೆಸಿ ಮಾತನಾಡಿಸಬೇಕು. ಅವರ ಮಾತುಗಳನ್ನು ಆಲಿಸಬೇಕು.ಆ ಭಾಷಾ ಏರಿಳಿತ ಅರ್ಥ ಮಾಡಿಸಬೇಕು. ಶಿಕ್ಷಕರೂ ಸಹಾ ಈ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಾ ಹೋದಾಗ ಮಾತ್ರ ಕನ್ನಡ ಶುದ್ಧವಾಗಿ ಉಳಿದೀತೇನೋ.. ..!
ನುಡಿ ಹಬ್ಬ
ಕನ್ನಡ ರಾಜ್ಯೋತ್ಸವ ನಾಡಿನ ಹಬ್ಬ ಹೌದು, ಆದರೆ ಎಷ್ಟು ಮಂದಿ ಆಚರಿಸುತ್ತಾರೆ? ಯುಗಾದಿ ದೀಪಾವಳಿ ಹಿಂದೂಗಳಿಗೆ, ರಂಜಾನ್,ಬಕ್ರೀದ್ ಮುಸಲ್ಮಾನರಿಗೆ, ಕ್ರಿಸ್ ಮಸ್ ಕ್ರೈಸ್ತರಿಗೆ ಮೀಸಲಾದ ಹಬ್ಬಗಳು. ಆದರೆ ಕನ್ನಡ ರಾಜ್ಯೋತ್ಸವ ಅವರೆಲ್ಲರನ್ನು ಒಳಗೊಂಡ ನುಡಿ ಹಬ್ಬ. ಅವರೆಲ್ಲರೂ ಒಳಗೊಂಡು ಆಚರಿಸುತ್ತಿದ್ದೇವಾ? ನಮ್ಮ ನಾಡು, ನಮ್ಮ ನುಡಿ ಜಲ, ನೆಲಗಳೆಂಬ ಅಭಿಮಾನ ಇಲ್ಲಿ ವಾಸಿಸುವವರಿಗಿದೆಯಾ? ಕನ್ನಡ ಕವಿಗಳ ಬಗ್ಗೆ, ಕನ್ನಡ ನಾಡಿನಲ್ಲಿರುವ ದೇವಾಲಯಗಳು, ಶಿಲ್ಪಗಳು, ಕನ್ನಡ ನಾಡಿನಲ್ಲಿ ಹರಿಯುವ ನದಿಗಳು, ಕನ್ನಡ ಸಾಧಕರು.. .. .. ಈ ಎಲ್ಲಾ ಮಾಹಿತಿ ನಮ್ಮ ಈಗಿನ ಮಕ್ಕಳಿಗಿದೆಯಾ?
ಒಬ್ಬ ಕವಿಯ ಒಂದು ಪ್ರಸಿದ್ಧ ಕವನದ ಸಾಲನ್ನು ಉದ್ಧರಿಸಿ ಭಾಷಣ ಬಿಗಿದರೆ ಕನ್ನಡ ಕಂಪು ಸೂಸಿತಾ? ಕನ್ನಡ ಪುಸ್ತಕಗಳನ್ನು ನಮ್ಮ ಮಕ್ಕಳು ಎಷ್ಟು ಬಲ್ಲರು. ಎಷ್ಟು ಓದುತ್ತಾರೆ, ಕಡೆಗೆ ಕನ್ನಡ ಪತ್ರಿಕೆಗಳು ಯಾವುವು, ದಿನ, ವಾರ, ಪಾಕ್ಷಿಕ,ಮಾಸಿಕ, ದ್ವೈ ಮಾಸಿಕ, ತ್ರೈಮಾಸಿಕ, ವಾರ್ಷಿಕ,ಸ್ಮರಣ ಸಂಚಿಕೆ ಇತ್ಯಾದಿಗಳ ಸಣ್ಣ ಪರಿಚಯವಾದರೂ ನಮ್ಮ ಸುತ್ತಲಿನ ಕನ್ನಡಿಗರಿಗಿದೆಯಾ?
ಇವೆಲ್ಲವೂ ಪ್ರಶ್ನೆಗಳು ಕೇವಲ ಪ್ರಶ್ನೆಗಳಾಗಿ ಉಳಿಯುತ್ತವೆ ಅಷ್ಟೇ! ಕನ್ನಡ ಉಳಿಯವುದು ,ಅಳಿಯುವುದು ಇಲ್ಲಿನ ಪ್ರಶ್ನೆ ಅಲ್ಲ. ಈಗಿರುವ ಮಕ್ಕಳಿಗೆ ಕನ್ನಡ ಕಲಿಸುವ, ಕನ್ನಡ ಪರಿಚಯಿಸುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅದು ಕನ್ನಡ ಮೇಷ್ಟ್ರ ಕೆಲಸ ಅಂತ ಕನ್ನಡಿಗರು ಮೂಗು ಮುರಿಯುವಂತಿಲ್ಲ. ಕನ್ನಡ ನಾಡಿನ ಆಡೋ ಮಗುವಿಂದ ಹಿಡಿದು ಅಲ್ಲಾಡೋ ಮುದುಕನವರೆಗೂ ಕನ್ನಡ ಜೀರ್ಣಿಸಿಕೊಂಡು ಅದನ್ನೇ ಮುಂಬರುವ ಪೀಳಿಗೆಗಾಗಿ ಕಕ್ಕಬೇಕಿದೆ!?
ಸಾಮಾಜಿಕ ಜಾಲತಾಣದ ಕನ್ನಡವೇ ಮುಂದೆ ಅಧಿಕೃತ ಕನ್ನಡ ಭಾಷೆ ಎಂದು ನಮ್ಮ ಮಕ್ಕಳು ತಿಳಿಯುವ ಮುನ್ನ ನಾವು ಜಾಗೃತಗೊಳ್ಳಬೇಕಿದೆ.
ಕನ್ನಡ ಪದ್ಯ ಕೇಳಿಸುವ, ಕನ್ನಡ ಪುಸ್ತಕ ಓದಿಸುವ, ಕನ್ನಡ ಗುಡಿಗಳಿಗೆ ಕರೆದೊಯ್ಯುವ, ನದಿಗಳ ಪರಿಚಯ ಮಾಡಿಸುವ, ಕನ್ನಡ ಭಾಷೆಯ ಮಹತ್ವ ಅರ್ಥೈಸುವ, ಕೆಲಸಗಳು ಸಧ್ಯ ಆಗಬೇಕಿದೆ. ಸರ್ಕಾರ ಇದಕ್ಕೆ ಯಾವುದೇ ಅನುದಾನ ,ಹಣ,ಯೋಜನೆ ಎಂತದ್ದೂ ಇದಕ್ಕಾಗಿ ಮಾಡುವುದು ಕನಸಿನ ಮಾತು.
ನಮ್ಮ ನಡುವಿನ ಕನ್ನಡವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಜವಾಬುದಾರಿ ನಮ್ಮ ಮೇಲಿದೆ. ಕತೆ, ಕವಿತೆ, ಕಾದಂಬರಿ, ಲೇಖನ ಬರೆಯುವುದು ಬೇಕಿಲ್ಲ. ನಮ್ಮೊಳಗಿನ ಭಾವಬಂದುತ್ವ ದಾಟಿಸುವ ಸಣ್ಣ ಕೆಲಸವಾದರೂ ಮಾಡೋಣ.ಕನ್ನಡದ ಜೊತೆಗೇ ಬಾಳೋಣ!
ಸಂತೆಬೆನ್ನೂರು ಫೈಜ್ನಟ್ರಾಜ್ ವೃತ್ತಿಯಿಂದ ಶಿಕ್ಷಕ. ಪ್ರವೃತ್ತಿಯಿಂದ ಕವಿ, ಕಥೆಗಾರ , ಸಾಹಿತಿ.
ಉತ್ತಮ ಲೇಖನ
ಕನ್ನಡ ರಾಜ್ಯೋತ್ಸವ ದ ಹಾರ್ಧಿಕ ಶುಭಾಶಯಗಳು 🙏ಈ ಸಂದರ್ಭದಲ್ಲಿ, ನಮ್ಮೂರಿನ ಹೆಮ್ಮೆಯ ಕವಿ, ಲೇಖಕ ಶ್ರೀ ಫೈಜ್ನಟ್ರಾಜ್ ರವರು ಬರೆದ ಲೇಖನ ಪ್ರಸ್ತುತ ಸಮಯಕ್ಕೆ ಕನ್ನಡಿ ಹಿಡಿದಂತೆ ಆಗಿದೆ. ಬರಹದ ಮೂಲಕ ಕನ್ನಡಿಗರನ್ನು ಬಡಿದೆಬ್ಬೆಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿರುವರು. ಅವರಿಗೆ ನನ್ನ ಅಭಿನಂದನೆಗಳು 🙏🙏🙏
ಸರ್ವ ಕಾಲಕ್ಕೂ ಅಹುದಹುದೆನ್ನುವ ಸಮಗ್ರ ವಿಚಾರಧಾರೆ. ಕನ್ನಡ ಮನಸ್ಸುಗಳಿಗೆ ಸಂದೇಶ, ಕಿವಿಮಾತು. ಕನ್ನಡ ಕೊಲ್ಲುವವರಿಗೆ ಚಾಟಿಯೇಟು. ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಉಳಿಸಬೇಕಾದರೆ ಏನೇನು ಮಾಡಬಹುದು….ಎನ್ನುವ ಹಿತವಚನ…ಎಲ್ಲವೂ ನಿಮ್ಮ ಲೇಖನದಲ್ಲಿದೆ. ಅರ್ಥಪೂರ್ಣ ಲೇಖನ ಸರ್…👏👏👏🙏💐 ಧನ್ಯವಾದಗಳು..🙏
ನಿಜ ಮಕ್ಕಳಲ್ಲಿ ಓದುವ ಗೀಳು ಬೆಳೆಸಬೇಕು. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ನನ್ನ ಮಗಳು ಅಮೇರಿಕಾದಲ್ಲಿ ಇರೋದು ಆದರೂ ಅವಳು ಮಗುವಿನ ಜೊತೆ ಮಾತಾಡೋದು ಕನ್ನಡದಲ್ಲೇ. ಮುಖ್ಯವಾಗಿ ಅಲ್ಪ ಪ್ರಾಣ ಮಹಾ ಪ್ರಾಣದ ಉಚ್ಚಾರ ಸರಿಯಾಗಿ ಕಲಿಸಬೇಕು. ಲೇಖಕರ ಲೇಖನ ಚೆನ್ನಾಗಿದೆ.