ಇಂದು ಮಧ್ಯಾಹ್ನ ನಿಧನರಾದ ವೆಂಕಮ್ಮ ಹಾಗೂ ಹರಿಹರ ಗುಂಡೂರಾಯರ ಪುತ್ರ ಎಚ್.ಜಿ.ಸೋಮಶೇಖರ ರಾವ್ (86)ಕನ್ನಡ ರಂಗಭೂಮಿ, ಸಾಹಿತ್ಯ ಹಾಗೂ ಸಿನಿಮಾರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಲೆಕ್ಕ ಎಂದರೆ ಯಾವತ್ತೂ ಭಯ ಪಡುವ ವ್ಯಕ್ತಿ ಸೋಮಶೇಖರ ರಾವ್ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಲೆಕ್ಕದಲ್ಲಿ ಫೇಲು. ಆದರೆ ನಂತರ ಲೆಕ್ಕಗಳೇ ಬದುಕಾಗಿರುವ ಬ್ಯಾಂಕ್ ಸೇರಿದ್ದು ವಿಚಿತ್ರ. ಅದಕ್ಕೆ ಅವರು “ನನಗೆ ಲೆಕ್ಕ ಗೊತ್ತಿಲ್ಲ. ಆದರೆ ಲೆಕ್ಕಾಚಾರ ಗೊತ್ತು” ಎನ್ನುತ್ತಿದ್ದರು. ಅವರು ನೇರವಾಗಿ ಕೆನರಾ ಬ್ಯಾಂಕ್ ಆಫೀಸರ್ ಹುದ್ದೆಗೆ ಸೇರಿದ್ದರಿಂದ ನಿತ್ಯ ಲೆಕ್ಕ ಹಾಕುವ ಗೋಜು ಅವರಿಗೆ ಇರಲಿಲ್ಲ. ಲೆಕ್ಕ ಹಾಕುವವರನ್ನು ಮುನ್ನಡೆಸುವ ನಾಯಕತ್ವ ಅವರದಾಗಿತ್ತು.
ಗಡಿಯಾರ ರಿಪೇರಿ
ಸೋದರಮಾವನಿಂದ ಗಡಿಯಾರ ರಿಪೇರಿ ಮಾಡುವುದನ್ನು ಕಲಿತಿದ್ದರು. ಮೈಸೂರಿನಲ್ಲಿ ಗಡಿಯಾರ ರಿಪೇರಿ ಮಾಡುತ್ತಾ ಎಂ.ಎ. ಓದಿದರು. ಇವರು ವಾಸಿಸುತ್ತಿದ್ದ ಪಕ್ಕದ ಕೋಣೆಯಲ್ಲಿಯೇ ಪಿ.ಲಂಕೇಶ್ ಕೂಡಾ ವಾಸಿಸುತ್ತಿದ್ದರು. ಸಾಕಷ್ಟು ವರ್ಷಗಳ ಕಾಲ ಅವರು ಮೈಸೂರು ಅನಂತಸ್ವಾಮಿ ಅವರೊಂದಿಗೆ ಒಂದೇ ಕೋಣೆಯಲ್ಲಿದ್ದರು. ಅ.ರಾ.ಮಿತ್ರ, ಎಂ.ಎಚ್.ಕೃಷ್ಣಯ್ಯ, ಲಕ್ಷ್ಮೀನಾರಾಯಣ ಭಟ್ಟ ಎಲ್ಲರೂ ಇವರ ಜೊತೆಯಲ್ಲಿ ಓದಿದರು. ಅವರೆಲ್ಲರೂ ಕನ್ನಡ ಎಂ.ಎ. ಓದಿದರೆ ಸೋಮಶೇಖರರಾವ್ ಓದಿದ್ದು ಸಮಾಜಶಾಸ್ತ್ರ. ಆದರೆ ಎಲ್ಲರೂ ಕನ್ನಡದ ಕಟ್ಟಾಳುಗಳು.
ಡಿ.ಎಲ್.ಎನ್., ತೀ.ನಂ.ಶ್ರೀ, ಪರಮೇಶ್ವರ ಭಟ್ಟರು ಮುಂತಾದವರಿಗೆ ಸಾಹಿತ್ಯದ ವಿದ್ಯಾರ್ಥಿಗಳಿಗಿಂತ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ತ.ಸು.ಶಾಮರಾಯರ ಮನೆಯಲ್ಲಿ ವಾರಾನ್ನ ಮಾಡುತ್ತಿದ್ದರು.
ಇಂಟರ್ ಫೇಲಾದರೂ ಬಿ.ಎ ಹಾಗೂ ಎಂ.ಎ.ಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದರು. ನಿರುದ್ಯೋಗದ ಬಾಧೆ ತಾಳಲಾಗದೆ ಮೈಸೂರ್ ಮೆಲೊಡಿ ಮೇಕರ್ಸ್ ಎಂಬ ಸಂಘ ಕಟ್ಟಿ ನಾಟಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
“ಸೋಮಣ್ಣನ ಸ್ಟಾಕ್ ನಿಂದ” ಅವರ ಆತ್ಮಕಥೆ ಮತ್ತು ವೈಚಾರಿಕ ಲೇಖನಗಳ ಸಂಗ್ರಹ. ಅವರು ನಿಯಮಿತವಾಗಿ ಸಮಾಜದ ಆಗುಹೋಗುಗಳ ಕುರಿತು ಪತ್ರಿಕೆಗಳಿಗೆ ಓದುಗರ ಪತ್ರಗಳನ್ನೂ ಬರೆಯುತ್ತಿದ್ದರು.ನಟಿಸಿದ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಸೋದರ ದತ್ತಣ್ಣನಂತೆಯೇ ಪ್ರಬುದ್ಧ ಅಭಿನಯ ನೀಡುತ್ತಿದ್ದರು. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕಾರರ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವ ತುಂಬಿದರು.
ಹೃದಯ ಸಂಗಮ ಮೂಲಕ ಚಿತ್ರರಂಗ ಪ್ರವೇಶ
ಇವರು ಕ್ಯಾಮರಾ ಎದುರಿಸಿದ ಮೊದಲ ಸಿನಿಮಾ ಹೃದಯ ಸಂಗಮ. ಟಿ.ಎಸ್.ರಂಗಾ ನಿರ್ದೇಶನದ ‘ಸಾವಿತ್ರಿ’ (1981) ಹೆಸರು ತಂದು ಕೊಟ್ಟ ಸಿನಿಮಾ. ಖ್ಯಾತ ನಟ ಅನಿಲ್ ಠಕ್ಕರ್ ಅವರ ಪ್ರತಿದ್ವಂದಿಯಾಗಿ ಇವರು ನೀಡಿದ ಅಭಿನಯ ಗಂಭೀರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಂತರ ರಾಯರು ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯಪ್ರಧಾನ ಪಾತ್ರಗಳನ್ನು ನಿರ್ವಹಿಸಿದರು. ರವೀ ನಿರ್ದೇಶನದ ‘ಮಿಥಿಲೆಯ ಸೀತೆಯರು’ ಇವರ ಅಭಿನಯ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸುವಂತೆ ಮಾಡಿತು. ರವೀಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾಯರು ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು.
ಕೆನರಾ ಬ್ಯಾಂಕ್ ನಲ್ಲಿ ಉನ್ನತ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ರಾಯರಿಗೆ ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ನಿಜವಾದ ಕಾಯಕವಾಯಿತು. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ರಾಯರು ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಇಂದು ನಮ್ಮನ್ನು ಅಗಲಿದ್ದಾರೆ. 2015ರಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರಕ್ಕೂ ಭಾಜನರಾಗಿದ್ದರು.
(ಚಿತ್ರ ಸೌಜನ್ಯ: ಪ್ರಗತಿ ಅಶ್ವತ್ಥ ನಾರಾಯಣ)
Om shanthi 🙏
ಓಂ ಶಾಂತಿ…
ಮಿಥಿಲೆಯ ಸೀತೆಯರು… ಮಾಸದ ನೆನಪು…
ನನ್ನಪ್ಪನ ಆತ್ಮೀಯ ಗೆಳೆಯರು. ಭೇಟಿಯಾದಾಗ ನಮ್ಮ ಚಿದಂಬರನ ಮಗಳು ನೀನು ಅನ್ನೋರು. ತಮ್ಮ ಶ್ರೀಧರ್ ಮೂರ್ತಿ ಮಗನ ಉಪನಯನಕ್ಕೆ ಬಂದಿದ್ದರು.ಆಗ ಮಾವ ಹೇಗಿದ್ದೀರಾ ನಾನು ನಿಮ್ಮ ಗೆಳೆಯನ ಮಗಳು ಅಂದಾಗ ಖುಷಿಯಿಂದ ನನ್ನ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ಚಿದಂಬರನ ನೋಡಿದಷ್ಟೇ ಖುಷಿಯಾಯಿತು ಅಂದಿದ್ದು ಇನ್ನೂ ನೆನಪಿದೆ. ಪ್ರೀತಿಸುವ ಹಿರಿಯ ಜೀವಗಳು ನಮ್ಮನ್ನು ಅಗಲಿ ಹೋದಾಗ ಏನು ಹೇಳೋದು ಅಂತಾನೇ ಅರ್ಥವಾಗಲ್ಲ.ಇನ್ನು ಅವರ ಸಿನಿಮಾದ ಮೂಲಕ ನಮ್ಮ ಜೊತೆ ಇರುವರು. ಮಾವ ನಿಮಗೆ ನನ್ನ ಗೌರವದ ಪ್ರೀತಿಯ ನಮನ.