21.7 C
Karnataka
Tuesday, December 3, 2024

    ಅಮೆರಿಕಾ ಚುನಾವಣೆ ಮತ್ತು ಫಲಿತಾಂಶ ಹೇಳುವುದೇನು?

    Must read

    ಕಳೆದ  25 ವರ್ಷಗಳಲ್ಲಿ ಎಂದೂ ಕಾಣದಂತೆ  ಇಬ್ಭಾಗವಾಗಿರುವ ಅಮೆರಿಕಾದಲ್ಲಿ ನಿನ್ನೆ ಮತ ಚಲಾಯಿಸುವ ಪ್ರಕ್ರಿಯೆ ಕೊನೆಗೊಂಡಿದೆ. ಒಂದಿಡೀ ಶತಮಾನದಲ್ಲಿ ಅಮೆರಿಕಾ ಕಂಡರಿಯದಷ್ಟು ಪ್ರಜೆಗಳು ತಮ್ಮ ನಾಯಕನನ್ನು ಆರಿಸಲು ಮತಚಲಾಯಿಸಿ ದಾಖಲೆ ಸ್ಥಾಪಿಸಿದ್ದಾರೆ.

    ನಿನ್ನೆ ಅಂತಿಮ ದಿನದ ವೋಟಿಂಗ್ ನಡೆಯಿತಾದರೂ 100 ಮಿಲಿಯನ್ ಜನರು ಅಂತರ್ಜಾಲದ ಮೂಲಕ, ಪೋಸ್ಟ್ ಮೂಲಕ ಮುಂಚಿತವಾಗಿಯೇ ಮತ ಚಲಾಯಿಸಿಬಿಟ್ಟಿದ್ದರು.ಮಿಕ್ಕವರಷ್ಟೇ ನಿನ್ನೆ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಿ ಬಂದಿದ್ದಾರೆ. ನಿನ್ನೆ ಬಹಳಷ್ಟು ರಾಜ್ಯಗಳಲ್ಲಿ ಇದ್ದ ಉತ್ತಮ ಹವಾಮಾನವೂ ಜನರ ಸಹಾಯಕ್ಕೆ ಬಂದಿತೆನ್ನಲಾಗಿದೆ.

    ಜನರ ನಂಬಿಕೆ ಮತ್ತು ಸಿದ್ದಾಂತಗಳು ಆಳವಾಗಿ ಬಿರುಕುಬಿಟ್ಟಿರುವ ಅಮೇರಿಕಾದಲ್ಲಿ ಸಾಮಾನ್ಯರು ತಮ್ಮ ತಮ್ಮ ಸಿದ್ಧಾಂತಗಳ ಪತನವಾಗುವುದನ್ನು ತಡೆಯಲು ಮತ ಚಲಾಯಿಸಿದ್ದಾರೆ. ಇತ್ತೀಚೆಗಿನ ರಾಜಕಾರಣದ ಹತಾಶೆಗಳು ಜನರಿಗೆ ತಮ್ಮ ಮತದ ಶಕ್ತಿಯ ಮೇಲೆ ದೇಶದ ಅತ್ಮದ ಉಳಿವು ನಿಂತಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದೆ. ಲಕ್ಷಾಂತರ ಜನರ ಕೋವಿಡ್ ಸಾವು, ಜನಾಂಗೀಯ ದ್ವೇಷ, ವಲಸೆ ನೀತಿಗಳು, ಆರ್ಥಿಕ ಮತ್ತು ನೈತಿಕ ಭ್ರಷ್ಟತೆಗಳು ಅಮೆರಿಕಾ ಛಿದ್ರವಾಗಲು ಕಾರಣವಾಗಿವೆ. ಶತಮಾನವೊಂದರಲ್ಲಿ ಕಂಡರಿಯದಷ್ಟು ಪ್ರಮಾಣದಲ್ಲಿ ಈ ವರ್ಷ ಮತಚಲಾಯಿಸುವಂತೆ ಜನರನ್ನು ಪ್ರೇರೇಪಿಸಿವೆ.

    ತಮ್ಮ ನೆಲ ದೇವರುಗಳಿಂದ ಹರಸಲ್ಪಟ್ಟಿದೆ ಎನ್ನುವ ಅಮೆರಿಕಾದ ಭಾಗಗಳು ಕೂಡ ಇದೀಗ ಕೊರೋನಾ ಸಂಬಂಧಿತ ಸಾವುಗಳಿಂದ ಹೊಸ ಸ್ಮಶಾನಗಳನ್ನು ನಿರ್ಮಿಸಬೇಕಾಗಿದೆ. “ನಮ್ಮ ದೇಶವೀಗ ಶಾಪಗ್ರಸ್ಥ ಅಮೆರಿಕಾ ಆಗಿಬಿಟ್ಟಿದೆ “- ಎಂದು ಆಳುವವರಿಗೆ ಹಿಡಿ-ಹಿಡಿ ಶಾಪ ಹಾಕುವವರಿದ್ದಾರೆ. ಕೋವಿಡ್ ನಿರ್ಲಕ್ಷ್ಯ, ಜನಾಂಗೀಯ ತಾರತಮ್ಯ, ಪಾತಾಳ ಮುಟ್ಟಿರುವ ಆರ್ಥಿಕತೆ ಮತ್ತು ಹವಾಮಾನ ವೈಪರೀತ್ಯಗಳ ಪಾಲಿಸಿಗಳು, ಗರ್ಭಪಾತ, ವಲಸೆ ನೀತಿಗಳು ಹೀಗೆ ಹಲವು ಅಂಶಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಆಯ್ಕೆ ಆಗಿ ಬರದಿರುವಲ್ಲಿ ಕಾರಣಗಳಾಗಬಲ್ಲವು ಎಂಬ ವಿಚಾರ ಫಲಿತಾಂಶ ಬರುವ ಮುನ್ನಿನ ಸಮೀಕ್ಷೆಗಳಿಂದ ನಿಚ್ಚಳವಾಗಿವೆ. ಮುಂಚಿತವಾಗಿಯೇ ಮತಚಲಾಯಿಸಿದವರಲ್ಲಿ ಡೆಮೋಕ್ರಾಟ್ ಹಿಂಬಾಲಕರೇ ಅಧಿಕ ಎನ್ನಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಬಿಡೆನ್ ಅಧ್ಯಕ್ಷೀಯ ಓಟದಲ್ಲಿ ಮುಂದೆ ಇದ್ದಾರೆ. ಹೌಸ್ ನಲ್ಲಿ ರಿಪಬ್ಲಿಕ್ ನ್ನರು,ಸೆನೆಟ್ ನಲ್ಲಿ ಡೆಮಕ್ರಾಟಿಕರು ಮುಂದೆ ಇದ್ದಾರೆ.

    ಚುನಾವಣೆಯ ದೀರ್ಘಕಾಲದ ಚಡಪಡಿಕೆಗಳು, ಕಳೆದ ಕೆಲವು ದಿನಗಳ ಉದ್ವಿಗ್ನತೆಯ ಹಿಂದೆಯೇ ಇಡೀ ಅಮೇರಿಕಾ ಇದೀಗ ಆತಂಕದಲ್ಲಿದೆ. ಚುನಾವಣಾ ಫಲಿತಾಂಶಗಳು ಇಂದಿನಿಂದ ಹೊರಬೀಳುತ್ತ ಹೋಗುತ್ತವೆ. ಫಲಿತಾಂಶದ ನಂತರ ಹಿಂಸಾಚಾರ ನಡೆಯಬಹುದೆಂಬ ಭೀತಿಯಿಂದ ಅಂಗಡಿಗಳ ಕಿಟಕಿ, ಬಾಗಿಲುಗಳನ್ನು ಮಾಲೀಕರು ಭದ್ರಪಡಿಸಿಕೊಂಡಿದ್ದಾರೆ. ಗಾಜನ್ನು ಒಡೆದು ಲೂಟಿಮಾಡದಂತೆ ತಡೆಯಲು ಈಗಾಗಲೇ ಎಚ್ಚರಿಕೆ ತೆಗೆದುಕೊಂಡಿದ್ದಾರೆ.

    ಡೆಮೋಕ್ರಾಟ್ ಗಳು ಗೆದ್ದರೆ ಆ ಫಲಿತಾಂಶವನ್ನು ಸುಮಾರು 40 ಬಗೆಯ ಕಾನೂನಿನ ಅಡಚಣೆಗಳನ್ನು ತರುವ ಮೂಲಕ ವಿರೋಧಿಸುತ್ತೇನೆಂದು ಟ್ರಂಪ್  ಈಗಾಗಲೇ ಹೇಳಿಕೆ ನೀಡಿದ್ದಾರೆ. ಅವುಗಳಲ್ಲಿ ಪೋಸ್ಟ್ ನಲ್ಲಿ ಬಂದಿರುವ ಮತಗಳನ್ನು ’ಊರ್ಜಿತ ಕ್ರಮ’ ಅಲ್ಲವೆಂದು ವಿರೋಧಿಸುವ ನೀತಿಯೂ ಒಂದು. ಪೋಸ್ಟ್ ನಲ್ಲಿ ಮತ್ತು ಅಂತರ್ಜಾಲದ ಮತಗಳಲ್ಲಿ ಮೋಸ ನಡೆಯುತ್ತದೆ ಎಂದು ಚುನಾವಣೆಯ ಮುನ್ನಾ ದಿನಗಳಲ್ಲಿಯೂ ರಿಪಬ್ಲಿಕನ್ನರು ಕೋರ್ಟು ಕಟ್ಟೆಯನ್ನು ಹತ್ತಿ ಈ ವಿಧಾನದ ಮತಚಲಾವಣೆಗೆ ತಡೆತರಲು ಯತ್ನಿಸಿದ್ದರು. ಆದರೆ ಅವರ ಆಪಾದನೆಗಳಿಗೆ ಯಾವುದೇ ಸಾಕ್ಷಿ ಆಧಾರಗಳಿಲ್ಲದ ಕಾರಣ ನ್ಯಾಯಾಲಯ ತಡೆಯನ್ನು ಹಾಕಲು ಒಪ್ಪಲಿಲ್ಲ. ಅದರಲ್ಲೂ ಕೋವಿಡ್ ಸೋಂಕಿನ ಕಾರಣ ಈ ವಿಧಾನಗಳು ಎಲ್ಲರಿಗೂ ಒಳ್ಳೆಯದು ಮತ್ತು ನೂಕು ನುಗ್ಗಲನ್ನು ತಡೆಯಬಲ್ಲದು ಎಂದು ಹೇಳಿತು.

    ಹೀಗಾಗಿ ಚುನಾವಣೆಯ ನಂತರ ತನ್ನ ವಕೀಲರ ಮೂಲಕ ಮತ್ತೆ ಕೆಲವು ರಾಜ್ಯಗಳ ಫಲಿತಾಂಶವನ್ನು ತಮ್ಮ ಕಡೆ ತಿರುಗಿಸಿಕೊಳ್ಳುವ ಹಣಾಹಣಿ ನಡೆಸಿಯೇ ತೀರುವೆನೆಂದು ಟ್ರಂಪ್ ಹೇಳಿಕೆ ನೀಡಿರುವ ಕಾರಣ ಚುನಾವಣೆಯ ಒಟ್ಟು ಫಲಿತಾಂಶ ದೊರಕುವುದರಲ್ಲಿ ವಿಳಂಬವಾಗುವ ಸಾಧ್ಯತೆಗಳಿವೆ.ಹಿಂದೆಂದೂ ಆಗಿರದಷ್ಟು ಮತಗಳು ದಾಖಲಾಗಿರುವ ಕಾರಣ ಎಣಿಕೆಯಲ್ಲಿಯೂ ಅಲ್ಪ ವಿಳಂಬವಾಗಬಹುದು ಎನ್ನಲಾಗಿದೆ.

    2016 ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗಿಂತ ಟ್ರಂಪ್ ಸುಮಾರು ಮೂರು ಲಕ್ಷ ಮತಗಳಿಗೂ ಕಡಿಮೆ ಮತಗಳಿಸಿದ್ದರು. ಆದರೆ ಒಟ್ಟಾರೆ 270 ಕ್ಷೇತ್ರಗಳಿಂದ ಆಯ್ಕೆಯಾಗುವ ಮೂಲಕ ಅತಿ ಕಡಿಮೆ ವ್ಯತ್ಯಾಸದಲ್ಲಿ ಟ್ರಂಪ್ ಚುನಾವಣೆಯಲ್ಲಿ ಗೆದ್ದಿದ್ದರು. ಈ ಬಾರಿ ಕೂಡ ಫ್ಲೋರಿಡ, ಪೆನಿನ್ಸಲ್ವೇನಿಯ ಮತ್ತು ಕ್ಯಾಲಿಫೋರ್ನಿಯ ಕ್ಷೇತ್ರಗಳಲ್ಲಿ ಗೆಲ್ಲುವುದು ಅಭ್ಯರ್ಥಿಗಳಿಗೆ ಅತ್ಯಂತ ಮುಖ್ಯವಾಗುತ್ತದೆ ಮತ್ತು ನಿರ್ಣಾಯಕ ಪಾತ್ರಗಳನ್ನೂ ವಹಿಸಲಿವೆ.

    ಉದಾಹರಣೆಗೆ ಫ್ಲೋರಿಡಾದಲ್ಲಿ ಬಿಡೆನ್ ಪಕ್ಷ ಗೆದ್ದಿತೆಂಬ ಫಲಿತಾಂಶ ಇಂದು ಬಂದರೆ ಬಿಡೆನ್ ಬಹುತೇಕ ಅಧ್ಯಕ್ಷ ಸ್ಥಾನಕ್ಕೆ ಗಟ್ಟಿಯಾದಂತೆ ಎಂದು ಹೇಳಲಾಗಿದೆ. ಇಲ್ಲದಿದ್ದಲ್ಲಿ ಇತರೆ ಕ್ಷೇತ್ರಗಳ ಫಲಿತಾಂಶಗಳು ಅತ್ಯಂತ ಮುಖ್ಯವಾಗುತ್ತವೆ. ಭಾರತೀಯ, ಆಫ್ರಿಕಾ, ಮೆಕ್ಸಿಕೋನ ಮೂಲದ ಬಹುತೇಕರು ಬಿಡೆನ್ ಪಕ್ಷದ ಪರವಾಗಿ ನಿಂತಿರುವ ಚುನಾವಣೆಯಿದು.ಇತ್ತೀಚಿನ ವರದಿಗಳಲ್ಲಿ ಫ್ಲೋರಿಡಾದಲ್ಲಿ ಹಣಾ ಹಣಿ ಹೋರಾಟ ನಡೆದಿದ್ದು ಟ್ರಂಪ್ ಅಲ್ಪ ಮುನ್ನಡೆಯಲ್ಲಿ ಇದ್ದಾರೆ.

    ಅಧ್ಯಕ್ಷ ಟ್ರಂಪ್ ನ ನಿಷ್ಠಾವಂತ ಹಿಂಬಾಲಕರು ಕೊರೋನಾ ಟಾಸ್ಕ್ ಫೋರ್ಸ್ ನ ಮುಖ್ಯಸ್ಥ ಆಂಥೊನಿ ಫಾಶಿಯನ್ನು ವಜಾಗೊಳಿಸಿರೆಂದು ಒತ್ತಾಯಿಸಿದ್ದಾರೆ. ಅದಕ್ಕೆ ಉತ್ತರವಾಗಿ ಅಧ್ಯಕ್ಷ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಅದನ್ನು ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಡಾ.ಆಂಥೊನಿ  ಫಾಶಿ ಅತ್ಯಂತ ಗೌರವಾನ್ವಿತ ವೈದ್ಯರಾಗಿದ್ದು ಕೊರೋನಾ ವೈರಸ್ಸನ್ನು ತಡೆಯಲು ಮಾಸ್ಕ್, ಸಾಮಾಜಿಕ ಅಂತರ ಮತ್ತು ಶುಚಿತ್ವ ಬೇಕೆಂದು ಒತ್ತಾಯಿಸಿದ ವ್ಯಕ್ತಿ. ಟ್ರಂಪ್ ಪಕ್ಷದ ಚುನಾವಣಾ ಪ್ರಚಾರ ಸಭೆಗಳಿಂದಲೇ 30,000 ಹೊಸ ಪ್ರಕರಣಗಳು ಮತ್ತು 700 ಕೋವಿಡ್ ಸಾವುಗಳು ಸಂಭವಿಸಿವೆಯೆಂದು ಸಮೀಕ್ಷೆಯೊಂದು ವರದಿ ಮಾಡಿದೆ.

    ಇದೀಗ ಕೋವಿಡ್ ಪ್ಯಾಂಡೆಮಿಕ್ ನ ಸುತ್ತಲೇ ನಡೆದ ನವೆಂಬರ್ 3 ರ ಅಮೆರಿಕಾದ  ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಜೋ ಬೈಡನ್ ಗೆದ್ದರೆ ಡೆಮೊಕ್ರಾಟ್ ಗಳಿಗಿಂತ ಹೆಚ್ಚಾಗಿ ವೈರಾಣುವೊಂದು ಆಳುವ ಪಕ್ಷವನ್ನು ಸೋಲಿಸಿತೆಂದೇ ಇತಿಹಾಸದಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ.ಕೋವಿಡ್ ನಿಂದ ತಮ್ಮ ಜನರನ್ನು ಉಳಿಸಿಕೊಳ್ಳಲು ನಾನಾ ಕಷ್ಟ ನಷ್ಟಗಳನ್ನೆದುರಿಸಿದ ಎಲ್ಲ ದೇಶಗಳನ್ನು ಅವಹೇಳನ ಮಾಡಿ ವೈರಸ್ಸನ್ನು ಯಕಃಚಿತ್ ಎಂದು ನಿರ್ಲ್ಯಕ್ಷಿಸಿದ ಮತ್ತು ಉಪೇಕ್ಷಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದೇ ವೈರಸ್ಸಿನ ಕಾರಣ ಸೋಲನ್ನೊಪ್ಪಿಕೊಳ್ಳಬೇಕಾಗುವ ವಿಪರ್ಯಾಸವನ್ನೂ ಈ ಚುನಾವಣೆ ಬಿಂಬಿಸಬಲ್ಲದು. ಈ ಚುನಾವಣೆಯಲ್ಲಿ ನ್ಯಾಯವಾಗಿ ಯಾರೇ ಗೆದ್ದರೂ ಅದು ಅತ್ಯಂತ ದೊಡ್ಡ ದೇಶದ ಪ್ರಜಾಪ್ರಭುತ್ವದ ನಿಲುವಿನ ಗೆಲುವಾಗಿ ಪ್ರಪಂಚದ ಹಲವು ಆಗು ಹೋಗುಗಳನ್ನು ಬದಲಾಯಿಸಬಲ್ಲದು.

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    6 COMMENTS

    1. ಭಾರತದ ಮೇಲೂ ಅಮೆರಿಕಾ ಅಧ್ಯಕ್ಷರ ಚುನಾವಣೆಯ ಫಲಿತಾಂಶ ಪರಿಣಾಮ ಬೀರುವುದರ ಹಿನ್ನಲೆಯಲ್ಲಿ ಲೇಖನ ಸಮಂಜಸ ಮತ್ತು ಸಂದರ್ಭ ಯೋಚಿತವಾಗಿದೆ.ಉದಾರವಾದದ ಅಡ್ಡಪರಿಣಾಮಗಳ ನೆರಳಲ್ಲಿ ಪ್ರಪಂಚ ತೆವಳುತ್ತಿರುವುದು ಕಳವಳಕಾರಿ ವಿಷಯ.

    2. ಚುನಾವಣೆ ವಿಶ್ಲೇಷಣೆ ವಸ್ತುನಿಷ್ಠ ವಾಗಿ ಮೂಡಿಬಂದಿದೆ ಮೇಡಂ

    3. ಅತ್ಯುತ್ತಮ ವಿಶ್ಲೇಷಣೆ. ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇವೆ.
      ವೈರಸ್ ಮುಗಿಸಿದ ಟ್ರಂಪ್ ಎನ್ನುವ ಹೊಸಮಾತೂ ಬರಬಹುದು.

    4. ವಿಶ್ಲೇಷಣೆ ಚೆನ್ನಾಗಿದೆ. ಅಲ್ಲಿ ಚುನಾವಣಾ ಕ್ರಮ ಅರ್ಥ ಮಾಡಿಕೊಳ್ಳುವುದು ತುಸು ಕಷ್ಟ.

    5. ನೀವು ವಿಶ್ಲೇಷಿಸಿದ ರೀತಿ ಚಂದ ಇದೆ. ನಾನು ಅಲ್ಲಿ ಹೋದಾಗ ನನ್ನ ಮಗಳು ಅಳಿಯ ಈ ಚುನಾವಣಾ ವಿಚಾರ ಮಾತಾಡಿದರೂ ಅರ್ಥವಾಗುತ್ತಿರಲಿಲ್ಲ. ಟಿ.ವಿ ಯಲ್ಲೂ ಅನೇಕ ಚುನಾವಣಾ ಪೂರ್ವ ಚರ್ಚೆ ಬರುತಿದ್ದರೂ ಅರ್ಥವಾಗುತ್ತಿರಲಿಲ್ಲ

    LEAVE A REPLY

    Please enter your comment!
    Please enter your name here

    Latest article

    error: Content is protected !!