ಬೆಳಗ್ಗೆ ಇನ್ನೂ ಹಾಸಿಗೆಯಲ್ಲಿರುವಂತೆಯೇ ಅಡುಗೆ ಕೋಣೆಯಲ್ಲಿ ಉಕ್ಕುವ ಹಾಲಿಗೆ ಕಾಫಿ ಪುಡಿ ಹಾಕಿದಾಗ ಹೊರಸೂಸುತ್ತೆ ನೋಡಿ ಪರಿಮಳ .
ಹಾಸಿಗೆಯಿಂದ ಹಂಗೇ ಎದ್ದುಬಂದು ಹಾಲಲ್ಲಿ ಕೂತ್ಕೋಬೇಕು ಹಂಗ್ ಮಾಡುತ್ತೆ ಈ ದ್ರವರೂಪದ ಉಲ್ಲಾಸ . ಭಾಗಶಃ ಮನೆ ಮಂದಿಯ ದಿನದ ಮೊದಲ ಚಟುವಟಿಕೆ ಈ ಕಾಫಿ .
ಬಿಸಿ ಕಾಫಿಯ ಲೋಟವನ್ನ ತುಟಿಯ ಹತ್ತಿರ ತೆಗೆದು ಕೊಂಡು ಹೋಗುತ್ತಿದ್ದಂತೆ ಮೊದಲು ಮೂಗು ಆ ಪರಿಮಳವನ್ನು ಆಸ್ವಾದಿಸುತ್ತದೆ .
ಈ ಉಸಿರಿಂದಲೇ ಬಿಸಿ ಕಾಫಿಯನ್ನ ಉರುಬಿ ಮೊದಲ ಗುಟುಕನ್ನು ನೊರೆ ಸಮೇತ ನಿಧಾನವಾಗಿ ಹೀರಿದಾಗ, ಅದು ನಾಲಿಗೆಯಾದಿಯಾಗಿ ಗಂಟಲಿನಿಂದ ದೇಹ ಹೊಕ್ಕು ಒಂದು ತರಹದ ಸಿಹಿ ಒಗುರು ಮಿಶ್ರಿತ ಆಹ್ಲಾದಕರವಾದ ಅನುಭವ ಉಂಟಾಗುತ್ತದೆ .ಗಂಟೆಗಟ್ಟಲೇ ನಿದ್ದೆ ಮಂಪರಿಂದ ಮಂಕಾಗಿದ್ದ ದೇಹದ ನರ ನಾಡಿಗಳು ನವೀಕರಣಗೊಂಡಂತಾಗುತ್ತವೆ .
ಕಾಫೀ ಪ್ರಿಯರಲ್ಲಿ ಒಬ್ಬೊಬ್ಬರದು ಒಂದೊಂದು ವಿಧಾನವಿದೆ ಕೆಲವರು ನನಗೆ ಬಿಸಿ ಕುಡೀದಿದ್ರೆ ಕುಡದಂಗಾಗಲ್ಲ ಅಂತಾರೆ . ಕೆಲವರು ನಾನು ತಣ್ಣಗಾದ್ ಮೇಲೇನೆ ಕುಡಿಯೋದು ಅಂತಾರೆ . ಕೆಲವರು ಸೊರ್ರ್ ಅಂತ ಸೌಂಡ್ ಮಾಡ್ಕೊಂಡು ಕುಡೀತಾರೆ . ಕೆಲವರು ಸುಮಾರು ಹೊತ್ತು ಗ್ಲಾಸಲ್ಲಿ ಇಟ್ಕೊಂಡು ಸ್ವಲ್ಪ ಸ್ವಲ್ಪವೇ ಕುಡೀತಾರೆ .ಕಾಫಿ ಮಾಡ್ಕೊಂಡು ಕುಡಿಯೋದಕ್ಕಿಂತಾ ಯಾರಾದ್ರೂ ಮಾಡ್ಕೊಟ್ರೆ ಕುಡಿಯೋ ಮಜಾನೇ ಬೇರೆ .
ಕಾಫಿ ಪಾನೀಯ ಅನ್ನೋ ಪದಕ್ಕೂ ಮೀರಿದ್ದು . ಅದನ್ನ ಮಾಡೋದು ನಿಜವಾಗ್ಲೂ ಕಲೆ .ಇಷ್ಟು ಹಾಲಿಗೆ ಇಷ್ಟೇ ನೀರು ಇಂತಿಷ್ಟೇ ಕಾಫಿಪುಡಿ , ಸಕ್ಕರೆ, ಹೀಗೇ ಅದರದೇ ಆದ ಅನುಪಾತ ಗೊತ್ತಿರಬೇಕು ಆಗಷ್ಟೇ ಅತ್ಯುತ್ತಮ ಕಾಫಿ ತಯಾರಿಸಲು ಸಾಧ್ಯ . ಕೆಲವರು ಮಾಡೋ ಕಾಫಿ ಕುಡೀತಿದ್ರೆ ಸ್ವರ್ಗವೇ ಸ್ವಾದವಾಗಿದೆಯೇನೋ ಅನ್ನಿಸುತ್ತದೆ .
ಸಣ್ಣವರಿದ್ದಾಗಿಂದಲೂ ನಮ್ಮೆಷ್ಟೋ ಮುಂಜಾನೆಗಳ ಅದೆಷ್ಟೂ ಸಂಜೆಗಳ ತಿಂಡಿ ಈ ಕಾಫಿ ಬಿಸ್ಕೆಟ್ , ಕಾಫಿ ಬನ್ನು . ಶನಿವಾರ ಬೆಳ್ಬೆಳಿಗ್ಗೆ ಬಿಳಿ ಅಂಗಿ ಖಾಕಿ ಚಡ್ಡಿ ಯೂನಿಫಾಮ್ ಧರಿಸಿ ಹಾಲ್ನಲ್ಲಿ ಕೆಳಗೆ ಚಪ್ಪಂಕಾಲ್ ಹಾಕ್ಕೊಂಡು ಅಮ್ಮಕೊಟ್ಟ ಗ್ಲೂಕೋಸ್ ಬಿಸ್ಕೆಟ್ಟನ್ನು ಬಿಸಿ ಕಾಫಿಯೊಂದಿಗೆ ಮೆಲ್ಲುತ್ತಿದ್ದರೇ ಅಬ್ಬಾ ಸುಖಾನುಭವ .
ಅದರದೊಂದು ಪ್ರೋಸಸ್ ಇದೆ ಬಿಸ್ಕೆಟ್ನ ಕಾಫೀಲಿ ಜಾಸ್ತೀನು ನೆನಸಬಾರದು ಕಡಿಮೇನೂ ನೆನೆಸಬಾರದು , ಜಾಸ್ತಿ ನೆನೆಸಿದ್ರೆ ಪುಟುಕ್ ಅಂತ ಮುರಿದು ಕಾಫಿಗ್ಲಾಸಿನಲ್ಲಿ ಬಿದ್ದುಬಿಡುತ್ತದೆ .
ಕಾಫಿ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆಯೇ …..ಹೊಟೆಲ್ಗಳಿಗೆ , ಕಾಫಿ ಕಾರ್ನರ್ಗಳಿಗೆ, ಕಾಂಡಿಮೆಂಟ್ಸ್ಗಳಿಗೆ ಇದು ವ್ಯಾಪಾರ .ಕಾಫಿ ಬೆಳೆಗಾರರಿಗೆ ವ್ಯವಸಾಯ .ಕಾಫಿ ಮಾರಾಟಗಾರರಿಗೆ ವ್ಯವಹಾರ .ಯಾವಾಗ್ ಕಾಫಿ ಕುಡೀತೀವೋ ಅನ್ನೊವ್ರಿಗೆ ಜಪ ,ಕಾಫಿಗೋಗಿದಾರೆ ಅನ್ನೋವ್ರಿಗೆ ನೆಪ .
ಕಾಫಿ ಕಾಸ್ ಕೊಡೀ ಅನ್ನೋವ್ರಿಗೆ ಲಂಚ .
ಹುಡುಗಿ ಕೈಯಲ್ಲಿ ಕಾಫಿ ಕಳಿಸಿ ಅನ್ನೊವ್ರಿಗೆ ಸಂಬಂಧ .
ಕಾಫಿ ಕುಡ್ಕೊಂಡ್ ಹೋಗೀ ಅನ್ನೋವ್ರಿಗೆ ಉಪಚಾರ .
ಒಂದು ಗ್ಲಾಸ್ ಕಾಫಿ ಮಾಡ್ಕೊಟ್ಬಿಡು ಅನ್ನೋವ್ರಿಗೆ ಉಪಕಾರ .
ಅವರ ಯೋಗ್ಯತೇಗೆ ಒಂದು ಗ್ಲಾಸ್ ಕಾಫೀನೂ ಕೊಡ್ಲಿಲ್ಲ ಅನ್ನೋವ್ರಿಗೆ ಅವಮಾನ .
ಬರ್ತೀನಿ ಕಾಫಿ ಕೊಡುಸ್ತೀಯ ಅನ್ನೋವ್ರಿಗೆ ಬಹುಮಾನ.
ಒಳ್ಳೇ ಕಡೆ ಕಾಫೀ ಕುಡಿಯೋಣ ಅನ್ನೋವ್ರ್ದು ಹುಡುಕಾಟ ……
ಇಷ್ಟೆಲ್ಲಾ ಗುಡ್ ವಿಲ್ ಇರೋ ಅಂತ ಕಾಫಿ ನ ಯಾರಾದ್ರೂ ಕೆಡಸಿದ್ರೆ ಕಾಫಿಪ್ರಿಯರಿಗೆ ತುಂಬಾನೇ ಸಿಟ್ಟು ಬರುತ್ತೆ ಕಲಗಚ್ಚು ಮಾಡಿಟ್ಟಿದ್ದ . ಡಬ್ಬಾ ಥರ ಇತ್ತು . ಒಂದು ಬಂಡಿ ಸಕ್ಕರೆ ಹಾಕಿ ಪಾನಕ ಮಾಡಿಟ್ಟಿದ್ದ . ಕಾಫೀಗೆ ಹಾಲೇ ತೋರ್ಸಿಲ್ಲ ಹಿಂಗೆಲ್ಲಾ ಬಯ್ಕೋತಾರೆ .
ಜಗತ್ತಲ್ಲಿ ಅಪ್ಪನಿಗೆ ಮಾಡಲು ತುಂಬಾನೇ ಚಟಗಳಿವೆ ಆದರೆ ಅಮ್ಮನಿಗೆ ಇರುವ ಏಕೈಕ ಚಟವೆಂದರೆ ಅದು ಒಂದು ಲೋಟ ಕಾಫಿ ಮಾತ್ರ .
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಉಕ್ಕುವ ಹಾಲಿಗೆ ಕಾಫಿ ಪುಡಿ ಹಾಕೋದು ಜಾಹೀರಾತುಗಳಲ್ಲಿ ಮಾತ್ರ. ಹದವಾಗಿ ಹುರಿದು ಪುಡಿ ಮಾಡಿದ ಕಾಫಿ ಪುಡಿಗೆ ಶೇಕಡಾ ಹತ್ತರಿಂದ ಇಪ್ಪತ್ತರಷ್ಟು ಚಿಕೋರಿ ಸೇರಿಸಿರುತ್ತಾರೆ.
ಹಾಲು ಬೇರೆ ಕಾಯಿಸಬೇಕು ಮೂರು ಸಲ ಕುದಿ ಬರಬೇಕು. ಕುದಿಯುವ ನೀರಿಗೆ ಕಾಫೀ ಪುಡಿ ಪ್ರತ್ಯೇಕವಾಗಿ ಹಾಕಿ ಮೂರು ಸಲ ಕುದಿ ಬರಬೇಕು.
ನಂತರ ಸೋಸಿ ಹಾಲು ಬೆರೆಸುವಾಗ ಸಕ್ಕರೆ ಸೇರಿಸಬೇಕು. ತಣ್ಣಗೆ ಆದರೆ ಮತ್ತೊಂದು ಕುದಿಸಿ ಆರಿಸಿ ಕುಡಿದು ನೋಡಿ.
ಬಾಬಾ ಬುಡನಗಿರಿ ಕಾಫೀ
ಹಾಸನ ಸಕಲೇಶಪುರ ಕಾಫೀ
ಕೊಡಗಿನ ಕಾಫೀ ಪುಡಿಗಳು ಬೇರೆ ಬೇರೆ ರುಚಿ ಕೊಡುತ್ತವೆ
Wat an explanation 👌👌👌👌👌
ಕುದಿಯುವ ಹಾಲಿಗೆ ಬೇಕಾದರೆ ನೆಸ್ ಕೆಫ ಮತ್ತು ಸಕ್ಕರೆ ಹಾಕಬಹುದು.
ಅತ್ಯಂತ ರುಚಿಯಾದ ಕಾಫಿ ಎಂದರೆ ಫಿಲ್ಟರ್ ಕಾಫಿ.
ನೀವು ಹೇಳಿದ ಅಚ್ಚುಮೆಚ್ಚಿನ ಕಾಫಿಯ ಕಥೆಯನ್ನು ಕೇಳುತ್ತಾ ಕಾಫಿಯ ಸುವಾಸನೆಯೇ ಬಂದಂತೆ ಆಯಿತು.
ತುಂಬಾ ಚೆನ್ನಾ ಗಿ ಬರೆದಿದ್ದೀರಿ.
ಕಾಫಿ ಎಲ್ಲರಿಗೂ ಪ್ರಿಯ ನೇ ಅದನ್ನು ಆಸ್ವಾದಿಸುವ ಪರಿಯನ್ನು ಲೇಖಕರು ಚೆನ್ನಾಗಿ ಪರಿಚಯಿಸಿದ್ದಾರೆ.ಅವರಿಗೆ ಧನ್ಯವಾದಗಳು