ಭಾರತ ದೇಶಕ್ಕೆ ವಿಜ್ಞಾನದಲ್ಲಿ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಭೌತಶಾಸ್ತ್ರಜ್ಞ ಸರ್ ಸಿ. ವಿ ರಾಮನ್ ಹುಟ್ಟು ಹಬ್ಬ ಶನಿವಾರ (ನವೆಂಬರ್ 7)
ಶಾಲೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜ್ಞಾನ ಹೊಂದಿರುವ ನಾಗರಿಕರು, ಸಾಮಾನ್ಯವಾಗಿ ಸರ್ ಸಿ. ವಿ. ರಾಮನ್‍ರವರ ಹೆಸರನ್ನು ಕೇಳಿಯೇ ಇರುತ್ತಾರೆ. ನಮ್ಮ ದೇಶಕ್ಕೆ ಮಾತ್ರವಲ್ಲದೆ, ಏಷ್ಯಾ ಖಂಡಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಭೌತಶಾಸ್ತ್ರದ ವಿಜ್ಞಾನಿ ಸರ್ ಸಿ. ವಿ ರಾಮನ್. ಇವರ ಪೂರ್ಣ ಹೆಸರು ಚಂದ್ರಶೇಖರ್ ವೆಂಕಟರಾಮನ್. ನಾಳೆ ನವೆಂಬರ್ 7, 2020 ಅವರ 132 ನೇ ಜನ್ಮ ದಿನಾಚರಣೆ. ಅವರ ಜೀವನ ಚರಿತ್ರೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಳನ್ನು ಪುನರ್ ಮನನ ಮಾಡುವುದು ನಮ್ಮೆಲ್ಲರ ಕರ್ತವ್ಯ. ನನಗಂತೂ ಅವರು ಸ್ಥಾಪಿಸಿ, ಬೆಳಸಿದ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನೆ ಮಾಡಿ, ಪಿ. ಎಚ್‍ಡಿ ಪದವಿಯನ್ನ ಪಡೆದಿದ್ದು ನನ್ನ ಜೀವನದ ಮಹಾ ಭಾಗ್ಯವೆಂದು ತಿಳಿದಿದ್ದೇನೆ.
ವಿಜ್ಞಾನದಲ್ಲಿ ಒಂದು ಮಾತಿದೆ. Nature can only described but cannot be explained ( ಪ್ರಕೃತಿಯನ್ನು ವಿವರಿಸಬಹುದು ಆದರೆ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ ). ಅದೇ ರೀತಿ ರಾಮನ್ ಮತ್ತು ಅವರ ಸಾಧನೆಗಳನ್ನು ವಿವರಿಸಬಹುದು, ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ರಾಮನ್‍ರು ಪ್ರಾಮಾಣಿಕತೆ, ಪಾರದರ್ಶಕತೆ, ಸಂಶೋಧನಾಶಕ್ತಿ, ಕಾರ್ಯ ತತ್ಪರತೆಗಳ ಸ್ವರೂಪ. ಇಷ್ಟು ಗುಣಗಳನ್ನು ಒಬ್ಬ ವ್ಯಕ್ತಿಯಲ್ಲಿ ಕಾಣುವುದು ವಿರಳ.
ವೆಂಕಟರಾಮನ್‍ರವರು 1888 ನವೆಂಬರ್ ಏಳನೇ ತಾರೀಖು ತಿರುಚಿರಾಪಲ್ಲಿ ಸಮೀಪದಲ್ಲಿರುವ ತಿರುವೈಕ್ಕಾವಲ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಈ ಊರು ಈಗ ನಮ್ಮ ಪಕ್ಕದ ತಮಿಳುನಾಡು ರಾಜ್ಯದಲ್ಲಿದೆ. ಅವರ ತಂದೆ ಆರ್. ಚಂದ್ರಶೇಖರ್ ಅಯ್ಯರ್ ಮತ್ತು ತಾಯಿ ಪಾರ್ವತಿ ಅಮ್ಮಾಳ್. ಚಂದ್ರಶೇಖರ್ ಅಯ್ಯರ್ ಅವರು ಸ್ಥಳೀಯ ಶಾಲೆಯಲ್ಲಿ ಉಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಯ್ಯರ್ ದಂಪತಿಗಳಿಗೆ ಐದು ಪುತ್ರರು ಮತ್ತು ಮೂರು ಪುತ್ರಿಯರು. ರಾಮನ್ ಎರಡನೆಯ ಮಗುವಾಗಿ ಜನಿಸಿದರು.
ಬಾಲ್ಯದಲ್ಲೇ ಆಸಕ್ತಿ
ರಾಮನ್‍ರವರು ಮೂರು ವರ್ಷದ ಮಗುವಾಗಿದ್ದಾಗ, ಅವರ ತಂದೆಯವರಿಗೆ ವಿಶಾಖಪಟ್ಟಣದ ಎ.ವಿ. ನರಸಿಂಹರಾವ್ ಕಾಲೇಜಿನಲ್ಲಿ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಉಪನ್ಯಾಸಕರ ಹುದ್ದೆ ದೊರಕಿತು. ಇವರ ತಂದೆ ಉಪನ್ಯಾಸಕರಾದ ಕಾರಣ ಮನೆಯಲ್ಲಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರಕ್ಕೆ ಸಂಬಂಧಪಟ್ಟ ಹಲವಾರು ಪುಸ್ತಕಗಳಿದ್ದವು. ಇದರಿಂದ ರಾಮನ್‍ರವರಿಗೆ ವಿಜ್ಞಾನದಲ್ಲಿ ಆಸಕ್ತಿ ಬೆಳೆಯಲು ಸಾಧ್ಯವಾಯಿತು.
ರಾಮನ್ ಮೊದಲಿನಿಂದಲೂ ಬಹಳ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಹನ್ನೊಂದನೇ ವಯಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆ, ಹದಿಮೂರನೇ ವಯಸ್ಸಿನಲ್ಲಿ ಎಫ್. ಏ ( ಈಗಿನ ಪಿಯುಸಿ ) ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಪ್ರವೇಶ ಪಡೆದರು. ಹದಿನೈದನೇ ವಯಸ್ಸಿನಲ್ಲಿ ಬಿ. ಎ. ಪದವಿ, ಹದಿನೆಂಟನೇ ವಯಸ್ಸಿನಲ್ಲಿ ಎಂ. ಎ ಪದವಿಗಳನ್ನು ಗಳಿಸಿದರು. ಆಂಗ್ಲ ಭಾಷೆ ಮತ್ತು ಭೌತಶಾಸ್ತ್ರದಲ್ಲಿ ಬಂಗಾರದ ಪದಕಗಳನ್ನು ಪಡೆದರು. ರಾಮನ್‍ರ ಆಳವಾದ ಜ್ಞಾನವನ್ನು ಅರಿತಿದ್ದ ಪ್ರಾಧ್ಯಾಪಕರುಗಳು, ವಿಜ್ಞಾನ ವಿಷಯದ ತರಗತಿಗಳ ಹಾಜರಾತಿಯಿಂದ ರಾಮನ್‍ರವರಿಗೆ ವಿನಾಯಿತಿ ನೀಡಿದ್ದರು.
1906 ರಲ್ಲಿ ರಾಮನ್‍ರು ಹದಿನಾರನೇ ವಯಸ್ಸಿನಲ್ಲಿಯೇ ವಿದ್ಯಾರ್ಥಿಯಾಗಿದ್ದಾಗ, The Philosophical Magazine ಎಂಬ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕೆಯಲ್ಲಿ ತಮ್ಮ ಚೊಚ್ಚಲ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದರು. ಪ್ರಿಸ್ಮ್‍ನ ( prism ) ಕೋನವನ್ನು ಅಳೆಯುವಾಗ, ಬೆಳಕಿನ ವಿವರ್ತನೆ ಪಟ್ಟಿಗಳನ್ನು ಗಮನಿಸಿದರು. ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ಪ್ರಬಂಧವನ್ನು ಪ್ರಕಟಿಸಿ, ಎಲ್ಲರ ಗಮನ ಸೆಳೆದರು. ಅದೇ ವರ್ಷ ದ್ರವಗಳ ಮೇಲ್ಮೈ ಸೆಳೆತ ಕುರಿತಂತೆ ಎರಡನೇ ಪ್ರಬಂಧವನ್ನು ಪ್ರಕಟಿಸಿದರು.
1906 ರಲ್ಲಿ ಎಂ. ಎ. ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ( civil services ) ಮೊದಲ rank ಗಳಿಸಿ, 1907 ರಲ್ಲಿ Assistant Accountant General ಹುದ್ದೆಗೆ ನೇಮಕಗೊಂಡು, ಆಗಿನ ಕಲ್ಕತ್ತಾದಲ್ಲಿ ಹಣಕಾಸು ಇಲಾಖೆಯಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಕಲ್ಕತ್ತೆಗೆ ಹೋಗುವ ಮುಂಚೆ, ಲೋಕಸುಂದರಿ ಅಮ್ಮಾಳ್ ಅವರ ಜೊತೆ ರಾಮನ್‍ರು ವಿವಾಹವಾದರು.
ಸಂಶೋಧನೆ ಪುನರಾರಂಭ
ಕಲ್ಕತ್ತಾದಲ್ಲಿ ರಾಮನ್‍ರ ವೃತ್ತಿಯ ದಾರಿಯೇ ಬದಲಾಯಿತು. ಒಂದು ದಿನ ಸಂಜೆ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ, ಬೌವ್ ಬಜಾರ್ ಸ್ಟ್ರೀಟ್‍ನಲ್ಲಿ “Indian Association for Cultivation of Science” ಎಂಬ ಫಲಕ ರಾಮನ್‍ರ ಕಣ್ಣಿಗೆ ಕಂಡಿತು. ರಾಮನ್‍ರು ಕದ ತಟ್ಟಿದಾಗ, ಅಸುತೋಷ್‍ಡೆ ಎಂಬ ನೌಕರ ಬಾಗಿಲನ್ನು ತೆರೆದು, ರಾಮನ್‍ರನ್ನು ಅಸೋಸಿಯೇಶನ್ ಕಾರ್ಯದರ್ಶಿಗಳಾದ ಅಮೃತ ಲಾಲ್ ಸರ್ಕಾರ್ ಬಳಿಗೆ ಕರೆದುಕೊಂಡು ಹೋಗಿ ಪರಿಚಯಿಸಿದರು. ರಾಮನ್‍ರು ಸಂಶೋಧನೆಯನ್ನು ಮುಂದುವರೆಸುವ ಇಂಗಿತವನ್ನು ವ್ಯಕ್ತಪಡಿಸಿದರು. ಅಮೃತ್ ಲಾಲ್ ಸರ್ಕಾರ್‍ರವರು ಬಹಳ ಸಂತೋಷದಿಂದ ಒಪ್ಪಿಕೊಂಡು, ಬೀಗದ ಕೈಗಳನ್ನು ರಾಮನ್‍ರವರಿಗೆ ನೀಡಿದರಂತೆ. ಅಂದಿನಿಂದ ರಾಮನ್‍ರ ಸಂಶೋಧನಾ ಕಾರ್ಯ ಪುನರಾರಂಭವಾಯಿತು.
ರಾಮನ್‍ರ ಕಾರ್ಯಶ್ರದ್ಧೆ ಅಪಾರ ಮತ್ತು ಅಸಮಾನಾಂತರ. ಹೊಸದಾಗಿ ವಿವಾಹವಾಗಿದ್ದರೂ ಸಹ, ಅವರು ಹೆಚ್ಚು ಕಾಲ ಸಂಶೋಧನೆ ಮತ್ತು ಕಚೇರಿ ಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದರು. ಬೆಳಿಗ್ಗೆ 5.30 ರಿಂದ 9.30 ರವರವಿಗೆ ಸಂಶೋಧನೆ, 10 ರಿಂದ 5 ಗಂಟೆಯವರೆಗೆ ಕಚೇರಿ ಕೆಲಸ, ಪುನಃ ಸಂಜೆ 10 ಗಂಟೆವರೆವಿಗೆ ಸಂಶೋಧನೆ, ಹೀಗೆ ನಡೆಯುತ್ತಿತ್ತು ಅವರ ದಿನಚರಿ.
ಭಾರತೀಯ ತಂತಿ ವಾದ್ಯಗಳು, ಕಂಪನಗಳು, ಹಾಡುವ ಜ್ವಾಲೆಗಳು ( Singing flames ), ಸಂಗೀತ ಶಬ್ಧಗಳ ಭೌತಶಾಸ್ತ್ರ, ಪಿಟೀಲಿನ ಅಕೌಸ್ಟಿಕ್ಸ್, ಮೃದಂಗ, ತಬಲ ಮತ್ತು ಪಾಶ್ಚಿಮಾತ್ಯ ಡ್ರಮ್ಸ್, ಇವುಗಳಿಗಿರುವ ವ್ಯತ್ಯಾಸ ಹೀಗೆ ಹಲವಾರು ವಿಷಯಗಳ ಬಗ್ಗೆ ಸಂಶೋಧನೆ ನಡೆಸಿ, ಅವರೇ ಪ್ರಾರಂಭಿಸಿದ Bulletin of Indian Association ನಿಯತಕಾಲಿಕೆಯಲ್ಲಿ ಪ್ರಕಟಿಸಿದರು. ರಾಮನ್‍ರ ಪಾಂಡಿತ್ಯವನ್ನು ಗಮನಿಸಿದ ಕಲ್ಕತ್ತಾ ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದ ಸರ್ ಅಶುತೋಷ್ ಮುಖರ್ಜಿಯವರು, ರಾಮನ್‍ರವರಿಗೆ ವಿಶ್ವ ವಿದ್ಯಾಲಯದಲ್ಲಿ ಪ್ರತಿಷ್ಠಿತ ಪಾಲಿತ್ ಚೇರ್ ಆಫ್ ಫಿಸಿಕ್ಸ್‍ಗೆ ನೇಮಿಸಿ, ಭೌತಶಾಸ್ತ್ರದ ಪ್ರಾಧ್ಯಾಪಕ ಹುದ್ದೆಯನ್ನು ನೀಡಿದರು. ಸಂಬಳ ಅರ್ಧದಷ್ಟು ಕಡಿಮೆಯಾದರೂ ಸಹ, ರಾಮನ್‍ರು Assistant Accountant General ಹುದ್ದೆಗೆ ರಾಜೀನಾಮೆ ನೀಡಿ, ಪ್ರಾಧ್ಯಾಪಕ ಹುದ್ಧೆಯನ್ನು ಒಪ್ಪಿಕೊಂಡರು.
1921 ರಲ್ಲಿ ಬಹಳ ಮುಖ್ಯವಾದ ಘಟನೆ ನಡೆಯಿತು. ಸರ್ ಅಶುತೋಷ್ ಮುಖರ್ಜಿಯವರ ಒತ್ತಡಕ್ಕೆ ಮಣಿದು ರಾಮನ್‍ರು ಆಕ್ಸ್ಪರ್ಡ್‍ನಲ್ಲಿ ನಡೆದ ಯೂನಿವರ್ಸಿಟೀಸ್ ಕಾಂಗ್ರೆಸ್‍ನಲ್ಲಿ ಭಾಗವಹಿಸಲು ಇಂಗ್ಲೆಂಡಿಗೆ ಪ್ರಯಾಣಿಸಿದರು. ಅಲ್ಲಿ ವಿಶ್ವ ಪ್ರಖ್ಯಾತ ವಿಜ್ಞಾನಿಗಳಾದ ಜೆ. ಜೆ ಥಾಮ್‍ಸನ್, ರುದರ್ ಪೋರ್ಡ್, ಬ್ರ್ಯಾಗ್ ಮುಂತಾದವರನ್ನು ಭೇಟಿಮಾಡಿ ವಿಚಾರ ವಿನಿಮಯ ಮಾಡಲು ಅವಕಾಶ ದೊರೆಯಿತು. ಇಂಗ್ಲೆಂಡಿನಲ್ಲಿ ವಾಸವಾಗಿದ್ದ ಕೆಲವೇ ದಿನಗಳಲ್ಲಿ ಸೆಂಟ್ ಪಾಲ್ಸ್ ಕ್ಯಾಥೆಡರಲ್‍ನ “Whispering Gallery” ಕುರಿತಂತೆ ಸಂಶೋಧನೆಯನ್ನು ನಡೆಸಿ, ಎರಡು ಪ್ರಬಂಧಗಳನ್ನು ಪ್ರಕಟಿಸಿದರು.
ರಾಮನ್‍ರು ತಾಯಿನಾಡಿಗೆ ವಾಪಸ್ಸು ಬರಬೇಕಾದರೆ, ಹಡಗಿನಲ್ಲಿ ಪ್ರಯಾಣಿಸುತ್ತಾ ಮೆಡಿಟರೇನಿಯನ್ ಸಮುದ್ರದ ಭವ್ಯತೆಯನ್ನು ಆನಂದಿಸಿ, ಮುಖ್ಯವಾಗಿ ಅದರ ನೀಲಿ ಬಣ್ಣದ ಬಗ್ಗೆ ಚಿಂತನೆ ಮಾಡಿದರು. Rayleigh ಎಂಬ ವಿಜ್ಞಾನಿ ನೀಲಿ ಬಣ್ಣದ ಆಕಾಶ ನೀರಿನ ಮೇಲ್ಮ್ಯೆನಲ್ಲಿ ಪ್ರತಿಫಲಿಸುವುದರಿಂದ, ಸಮುದ್ರದ ನೀರು ನೀಲಿ ಬಣ್ಣವಾಗಿ ಕಾಣುತ್ತದೆ ಎಂಬುವುದಾಗಿ ಪ್ರತಿಪಾದಿಸಿದ್ದರು. ರಾಮನ್‍ರು ಬಹಳ ಸರಳವಾಗಿ ನಿಕಾಲ್ ಪ್ರಿಸ್ಮನ ಸಹಾಯದಿಂದ Rayleigh ಯವರ ವಾದ ಸರಿಯಿಲ್ಲ ಎಂದು ತೋರಿಸಿ ಕೊಟ್ಟರು. ನೀರಿನ ಅಣುಗಳು ಬೆಳಕನ್ನು ಚದುರಿಸುವುದರ ಪರಿಣಾಮವಾಗಿ ಸಮುದ್ರದ ನೀರು ನೀಲಿ ಬಣ್ಣವಾಗಿ ಕಾಣುತ್ತದೆ ಎಂದು ವಾದಿಸಿದರು.
1924 ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು. ನಂತರ ಮುಖರ್ಜಿಯವರು ರಾಮನ್‍ರ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ, ಸಹಜವಾಗಿ ನೊಬೆಲ್ ಪ್ರಶಸ್ತಿ ಎಂದು ಉತ್ತರಿಸಿದರಂತೆ. ಭಾರತಕ್ಕೆ ಹಿಂದಿರುಗಿದ ನಂತರ, ರಾಮನ್‍ರು ದ್ರವಗಳಿಂದ ಬೆಳಕಿನ ಚದುರುವಿಕೆ ( Scattering of Light by Liquids ) ವಿಷಯದ ಬಗ್ಗೆ ಆಳವಾದ ಸಂಶೋಧನೆಯನ್ನು ನಡೆಸಿದರು. ಇದರ ಫಲವಾಗಿ, 1928 ರ ಫೆಬ್ರವರಿ 28 ರಂದು “ರಾಮನ್ ಪರಿಣಾಮ” ( Raman Effect ) ದ ಆವಿಷ್ಕಾರವಾಯಿತು. ಸರಳವಾಗಿ ರಾಮನ್ ಪರಿಣಾಮವನ್ನು ವಿವರಿಸುವುದಾದರೆ, ಏಕವರ್ಣೀಯ ಬೆಳಕನ್ನು ( Monochromatic Light ) ಪಾರದರ್ಶಕ ಮಾಧ್ಯಮದಲ್ಲಿ ಹಾಯಿಸಿದಾಗ, ಚದುರಿದ ಬೆಳಕಿನ ಕಿರಣಗಳಲ್ಲಿ , ಆಪಾತ ಬೆಳಕಿನ ಆವೃತ್ತಿಯ ಜೊತೆಗೆ, ಅದಕ್ಕಿಂತ ಕಡಿಮೆ ಮತ್ತು ಹೆಚ್ಚು ಆವೃತ್ತಿಯುಳ್ಳ ಕಿರಣಗಳು ಉಂಟಾಗುತ್ತವೆ.
ಬೆಂಗಳೂರಲ್ಲಿ ಪ್ರಕಟಣೆ
ಬಹಳ ಸಂತೋಷಕರ ವಿಷಯವೆಂದರೆ, ಈ ಆವಿಷ್ಕಾರದ ಬಗ್ಗೆ ಮಾರ್ಚ್ 16 ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಈಗಿರುವ ಭೌತಶಾಸ್ತ್ರ ವಿಭಾಗದ ಕೊಠಡಿಯಲ್ಲಿ ಜರುಗಿದ ಸಮಾರಂಭದಲ್ಲಿ ರಾಮನ್ ಪ್ರಕಟಣೆ ಮಾಡಿದರು. ಆ ಕೊಠಡಿಗೆ ಈಗ ರಾಮನ್ ಹಾಲ್ ಎಂದು ಹೆಸರಿಡಲಾಗಿದೆ. ಈ ಆವಿಷ್ಕಾರವನ್ನು ರಾಮನ್‍ರೇ ಪ್ರಾರಂಭಿಸಿದ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್‍ನ ಎರಡನೇ ಸಂಪುಟದಲ್ಲಿ ಪ್ರಕಟಿಸಿದರು. ಆರ್ ಡಬ್ಲ್ಯೂ ವುಡ್‍್ರ ಪ್ರಕಾರ ರಾಮನ್ ಪರಿಣಾಮ ಬೆಳಕಿನ ಕ್ವಾಂಟಮ್ ಸಿದ್ಧಾಂತವನ್ನು ಮನಗಾಣಿಸುವ ಉತ್ತಮವಾದ ಸಾಕ್ಷಿಯಾಗಿದೆ. ಈ ಆವಿಷ್ಕಾರದ ರೂವಾರಿ ಸರ್ ಸಿ. ವಿ ರಾಮನ್‍ರಿಗೆ 1930 ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. ಭಾರತ ದೇಶಕ್ಕೆ ವಿಜ್ಞಾನ ಕ್ಷೇತ್ರದ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ದೊರೆಯಿತು. ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ. ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷ್ಯಾದ ವಿಜ್ಞಾನಿ ಎಂಬ ಕೀರ್ತಿಯು ಸಹ ರಾಮನ್‍ರಿಗೆ ಸಲ್ಲುತ್ತದೆ.
ರಾಮನ್‍ರಿಗೆ ನೊಬೆಲ್ ಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎಂಬ ಅಪಾರ ಆತ್ಮ ವಿಶ್ವಾಸವಿತ್ತು. ಸಾಮಾನ್ಯವಾಗಿ ನೊಬೆಲ್ ಪ್ರಶಸ್ತಿಗಳನ್ನು ಅಕ್ಟೋಬರ್ ತಿಂಗಳಿನಲ್ಲಿ ಪ್ರಕಟಿಸಲಾಗುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತದೆ. 1930 ರ ಜುಲೈ ತಿಂಗಳಿನಲ್ಲಿಯೇ ಸ್ಟಾಕ್‍ಹೊಂಗೆ ಹೋಗಲು ಎರಡು ಟಿಕೆಟ್‍ಗಳನ್ನು ಬುಕ್ ಮಾಡಿದ್ದರಂತೆ. ಇದು ರಾಮನ್ ರ ಆತ್ಮ ವಿಶ್ವಾಸಕ್ಕೆ ಸಾಕ್ಷಿ. ರಾಮನ್‍ರು ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದರು.
1933 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ( Indian Institute of Science ) ನಿರ್ದೇಶಕರಾಗಿ ನೇಮಕಗೊಂಡು ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು. ರಾಮನ್‍ರು ಒಳ್ಳೆಯ ವಾಗ್ಮಿಯೂ ಆಗಿದ್ದರು. ಅವರ ಭಾಷಣವನ್ನು ಕೇಳಲು ಸಾವಿರಾರು ಜನರು ಸೇರುತ್ತಿದ್ದರಂತೆ. 1934 ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸನ್ನು ಸ್ಥಾಪಿಸಿದರು. ಈಗಲೂ ಸಹ ಈ ಸಂಸ್ಥೆಯು ಪ್ರತಿಷ್ಠಿತ ಸಂಸ್ಥೆಯಾಗಿ ಹೆಸರು ಉಳಿಸಿಕೊಂಡಿದೆ. 1948 ರಲ್ಲಿ ನಿವೃತ್ತಿ ಹೊಂದಿದ ಸರ್ ಸಿ. ವಿ ರಾಮನ್‍ರು ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ, ಸಂಶೋಧನೆಯನ್ನು ಮುಂದುವರಿಸ ಬೇಕೆಂಬ ಹಂಬಲವನ್ನು ಹೊಂದಿದ್ದರು. ಇದರ ಫಲವಾಗಿ 1948 ರಲ್ಲಿ ಬೆಂಗಳೂರಿನ ಮೇಕ್ರಿ ಸರ್ಕಲ್ ಬಳಿ ಮೈಸೂರು ಮಹಾರಾಜರು ನೀಡಿದ ಹತ್ತು ಎಕರೆ ಜಮೀನಿನಲ್ಲಿ ರಾಮನ್ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದರು. ಯಾರ ಹಂಗೂ ಇಲ್ಲದೆ, ಸ್ವತಂತ್ರವಾಗಿ ಅವರ ಜೀವನದ ಕೊನೆ ಘಳಿಗೆಯವರೆವಿಗೆ ವಿಜ್ಞಾನದ ಸೇವೆಯನ್ನು ಮಾಡಿದ ಮಹಾನ್ ವ್ಯಕ್ತಿ.
ರಾಮನ್ ಬೆಳಕಿನ ಚದುರುವಿಕೆಯ ಜೊತೆಗೆ, ಪಕ್ಷಿಗಳ ಗರಿಗಳ ಬಣ್ಣ, ಚಿಟ್ಟೆಗಳ ಬಣ್ಣ, ಚಿಪ್ಪುಗಳ ಬಣ್ಣ, ಶ್ರವಣಾತೀತ ತರಂಗಗಳಿಂದ ಬೆಳಕಿನ ವಿವರ್ತನೆ ( Diffraction of light by Ultrasonic Waves ), ಅಕೌಸ್ಟೊ – ಆಪ್ಟಿಕ್ ಪರಿಣಾಮ, ಘನ ವಸ್ತುಗಳ ಥರ್ಮಾ – ಆಪ್ಟಿಕ್, ಮಾಗ್ನಟೊ – ಆಫ್ಟಿಕ್ ಗುಣ ಲಕ್ಷಣಗಳು, ಖನಿಜ, ಸ್ಪಟಿಕ ಮತ್ತು ರತ್ನಗಳ ವರ್ಣ ವೈವಿಧ್ಯತೆ ಹೀಗೆ ಹಲವಾರು ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸಿದರು. ರಾಮನ್ ಸಂಶೋಧನಾ ಸಂಸ್ಥೆಯಲ್ಲಿ, ರಾಮನ್‍ರು ಪ್ರಪಂಚದ ಹಲವಾರು ದೇಶಗಳಿಂದ ಸಂಗ್ರಹಿಸಿದ ಖನಿಜ, ಸ್ಪಟಿಕ ಮತ್ತು ರತ್ನಗಳನ್ನು ಅದ್ಬುತವಾದಂತ ರಾಮನ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ರಾಮನ್‍ರವರಿಗೆ ಅನೇಕ ಗೌರವ ಡಾಕ್ಟರೇಟ್ ಮತ್ತು ವೈಜ್ಞಾನಿಕ ಸೊಸೈಟಿಯ ಸದಸ್ಯತ್ವಗಳನ್ನು ನೀಡಿ ಗೌರವವನ್ನು ಸೂಚಿಸಲಾಗಿದೆ. ಅವರ ಸದಸ್ಯತ್ವದಿಂದ, ಸಂಸ್ಥೆಗೆ ಗೌರವ ಎಂಬ ಮಾತನ್ನು ಹೇಳಲು ಬಯಸುತ್ತೇನೆ.
ರಾಮನ್‍ರವರಿಗೆ ವಿಜ್ಞಾನದ ಸೇವೆ ಆಂತರಿಕ ಅಗತ್ಯವಾಗಿತ್ತು. ವಿಜ್ಞಾನ ಅವರ ದೇಹ ಮತ್ತು ಮನಸ್ಸುಗಳ ಭಾಗವಾಗಿತ್ತು ಎಂದರೆ ಅತಿಶಯೋಕ್ತಿಯಾಗಲಾರದು. ವಿಜ್ಞಾನದ ಸೇವೆ ಅವರಿಗೆ ಸಂತೋಷದಾಯಕ ಅನುಭವವಾಗಿತ್ತು. ಇಂತಹ ಮೇರು ವಿಜ್ಞಾನಿ, ಭಾರತ ರತ್ನ ( 1954 ರಲ್ಲಿ ಭಾರತ ಸರ್ಕಾರ ಭಾರತ ರತ್ನ ಬಿರುದು ನೀಡಿದೆ ), ಸರಳ ಜೀವಿ, 21 ನವೆಂಬರ್ 1970 ರಂದು ಇಹ ಲೋಕವನ್ನು ತ್ಯಜಿಸಿದರು. ಭಾರತದ ವಿಜ್ಞಾನದಲ್ಲಿ ಅವರ ಹೆಸರು ಚಿರಸ್ಮರಣೀಯ.
ನಮ್ಮ ದೇಶದಲ್ಲಿ ರಾಮನ್ ಪರಿಣಾಮದ ಆವಿಷ್ಕಾರದ ಜ್ಞಾಪಕಾರ್ಥವಾಗಿ, ಪ್ರತಿ ವರ್ಷವು ಪೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.
ಅವರ ಜನ್ಮ ದಿನಾಚರಣೆಯ ದಿನ ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ವಿಶೇಷವಾಗಿ, ವಿಜ್ಞಾನದ ವಿದ್ಯಾರ್ಥಿಗಳು ಕಡ್ಡಾಯವಾಗಿ ನೆನೆಯ ಬೇಕಾಗಿದೆ.
ಮುಂದಿನ ವರ್ಷಗಳಲ್ಲಿ ರಾಮನ್‍ರ ಸ್ಪೂರ್ತಿದಾಯಕ ಕಾರ್ಯದಿಂದ ಉತ್ತೇಜನಗೊಂಡು, ಇನ್ನೊಬ್ಬ ರಾಮನ್ ಹುಟ್ಟಿ ಬರಲೆಂದು ಆಶಿಸೋಣ.
An eye opener. Beautifully written with accurate information from a true science lover.
ಸರ್ ಸಿ.ವಿ ರಾಮನ್ ಭಾರತೀಯರ ಹೆಮ್ಮೆ. ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಮೊದಲೆ ಪ್ರಶಸ್ತಿ ಸ್ವೀಕರಿಸಲು ಎರಡು ಟಿಕೆಟ್ ಬುಕ್ ಮಾಡಿದ್ದದು ಅವರ ದೂರ ದೃಷ್ಟಿಗೆ ಹಿಡಿದ ಕನ್ನಡಿ. ಇಂತಹ ಮಹಾನ್ ಸಾಧಕರು ನಾವು ಓಡಾಡುವ ಸೆಂಟ್ರಲ್ ಕಾಲೇಜಿನಲ್ಲಿ ಪ್ರಯೋಗ ನಡೆಸಿದ್ದರು ಎಂಬುದು ಈ ಲೇಖನ ಓದಿದ ಮೇಲೆ ತಿಳಿಯಿತು. ಇಂತಹ ಮಹಾನ್ ಸಾಧಕರನ್ನು ಪರಿಚಯಿಸಿದ ಸಿಂಧಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್ ಶ್ರೀಕಂಠ ಸರ್ ರವರಿಗೆ ಧನ್ಯವಾದಗಳು. ಶ್ರೀಯುತರ ಲೇಖನಿಯಿಂದ ಇನ್ನಷ್ಟು ಈ ತರಹದ ಲೇಖನಗಳು ಮೂಡಿ ಬರಲಿ ಎಂಬುದು ನಮ್ಮ ಆಶಯ.
Nice one 👍
ಉಪಯುಕ್ತವಾದ ಲೇಖನ ಸರ್ ಮುಖ್ಯವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು
ಸೊಗಸಾಗಿದೆ. ನಿಮ್ಮ ಬರಹ ಮುಂದುವರಿಸಿ. ಭೌತಶಾಸ್ತ್ರದ ವಿದ್ಯಾರ್ಥಿಯಾಗಿ ನನಗೆ ಸಂತೋಷವಾಯಿತು .
Very nice information for all the science lovers
Very nice 👍 information
More and more articles shall be published. Sincere thanks to Dr Srikanta
Dr B S Srikanta’s article on Sir C V Raman is an eye opener to all science lovers including me.On behalf of all ,I convey my sincere thanks to him for having taken sooo much of interest to place this article before us. Any how, wonderful information by a great personality.Thank you sir.
Nice, well written.Very informative.Looking forward to see many more informative articles.Congratulations
ಗೊತ್ತಿಲ್ಲದ ಅನೇಕ ವಿಚಾರ ಗಳನ್ನು ತಿಳಿಸಿ ದ್ದೀರಿ. ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಬರುವ ಬಗ್ಗೆ ಅವರಿಗಿದ್ದ ಅಪಾರವಾದ ನಂಬಿಕೆ ಬಗ್ಗೆ ಓದಿ ಖಂಡಿತ ಸಂತೋಷ ವಾಯಿತು. ವಿಜ್ಞಾನ ಪದವಿ ಪಡೆದು ಹಣಕಾಸು ಇಲಾಖೆಯಲ್ಲಿ ಕೆಲಸ ಮಾಡಿದ ವಿಚಾರವೂ ಎಲ್ಲರಿಗೂ ಬಹುಶಃ ತಿಳಿದಿರುವುದಿಲ್ಲ. ಅವರು ಬೆಂಗಳೂರಿನಲ್ಲಿ ಸಂಶೋಧನೆ ಸಂಸ್ಥೆ ಸ್ಥಾಪನೆ ಮಾಡಿ ದ್ದೂ ಹೆಮ್ಮೆಯ ವಿಷಯ. ಸುದೀರ್ಘ ಲೇಖನ ಕ್ಕೆ ಅಭಿನಂದನೆಗಳು.
My sincere thanks to everyone for the encouraging words
ಬಹಳ ಉಪಯುಕ್ತ ಲೇಖನ.
Very nice information about great scientist of our country.
More over the present youngsters can get
Inspiration from this update.
ಬಹಳ ಉಪಯುಕ್ತ ಲೇಖನ.ವಿಜ್ಞಾನದ ವಿದ್ಯಾರ್ಥಿಗಳು ಓದಲೇ ಬೇಕಾದ್ದು.
ತುಂಬಾ ಚೆನ್ನಾಗಿದೆ ಸರ್ ಲೇಖನ . .