ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗುವುದು ನಿಶ್ಚಿತವಾಗಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗುವುದು ಸನ್ನಿಹಿತವಾಗಿದೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರನ್ನು ಕಾಡುತ್ತಿರುವ ಪ್ರಶ್ನೆ- ಬೈಡನ್ ಆಯ್ಕೆಯಿಂದ ಭಾರತಕ್ಕೆ ಆಗುವ ಲಾಭ ಏನು? ಮುಂದೆ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಹೇಗಿರಬಹುದು? ಬೈಡನ್ ಕೂಡ ಹಿಂದಿನ ರೀತಿಯಲ್ಲೇ ರಾಜತಾಂತ್ರಿಕ ಮತ್ತು ಸ್ನೇಹ ಸಂಬಂಧವನ್ನು ಮುಂದುವರಿಸುತ್ತಾರ?
ಭಾರತಕ್ಕೂ ಹಾಗೂ ಅಮೆರಿಕಕ್ಕೂ ವಿಶೇಷ ಸಂಬಂಧ. ಅದರಲ್ಲೂ ಐಟಿ ಉದ್ಯಮ ಬೆಳೆದಂತೆ ಈ ಸಂಬಂಧ ವಿಸ್ತರಿಸುತ್ತಾ ಹೋಯಿತು. ಅಮೆರಿಕಕ್ಕೆ ಹೋಗುವವರು ಬರುವವವರು ಹೆಚ್ಚಾಯಿತು. ಅನೇಕ ಕುಟುಂಬಗಳಿಗೆ ಅಮೆರಿಕ ಎನ್ನುವುದು ನಡುಮನೆ ಅಡುಗೆಮನೆಯಷ್ಟೆ ಹತ್ತಿರವಾಯಿತು. ಹೀಗಾಗಿ ಅಮೆರಿಕಾದಲ್ಲಿ ಏನಾಗುತ್ತದೆ ಎಂಬುದು ಭಾರತದ ಹಲವಾರು ಕುಟುಂಬಗಳಿಗೆ ಮುಖ್ಯವಾಗುತ್ತದೆ.
ಭಾರತ ಅಮೆರಿಕ ಸಂಬಂಧ
ಭಾರತದೊಡನೆ ಇಷ್ಟು ದಿನ ಇದ್ದ ಸಂಬಂಧವನ್ನು ಬೈಡನ್ ಏಕಾ ಏಕಿ ಬದಲಿಸಿ ಬಿಡ್ತಾರ ?- ನನಗೆ ಬದಲಿಸುತ್ತಾರೆ ಎನ್ನಲು ಯಾವ ಕಾರಣವೂ ಕಾಣಿಸುತ್ತಿಲ್ಲ. ಈಗಿನ ಭಾರತವನ್ನು ಡೆಮಕ್ರಾಟಿಗರೇ ಆಗಲಿ ರಿಪಬ್ಲಿಕನ್ನರೇ ಆಗಲಿ ಕಡೆಗಣಿಸುವಂತೆಯೇ ಇಲ್ಲ. ಅತಿ ದೊಡ್ಡ ಗ್ರಾಹಕ ಮಾರುಕಟ್ಟೆ ಆಗಿರುವ ಭಾರತವನ್ನು ದೂರ ಮಾಡಿಕೊಳ್ಳುವ ಸ್ಥಿತಿಯಲ್ಲಿ ಯಾವ ದೇಶವೂ ಇಲ್ಲ.
ಹಾಗಾದರೆ ಬೈಡನ್ ಅವರನ್ನು ಭಾರತದ ಫ್ರೆಂಡ್ ಎಂದು ಭಾವಿಸಬಹುದೆ?
ಈ ಪ್ರಶ್ನೆಗ ಉತ್ತರ ಪಡೆಯಲು ನಾನು ಹಲವಾರು ಹಿಂದಿನ ಪತ್ರಿಕಾ ವರದಿಗಳು , ಘಟನೆಗಳನ್ನು ಅವಲೋಕಿಸಿದೆ. ನನ್ನ ಅಂದಾಜಿನ ಪ್ರಕಾರ ಆ ರೀತಿ ಭಾವಿಸಲು ತೊಂದರೆ ಇಲ್ಲ. ಟೈಮ್ಸ್ ನಿಯತಕಾಲಿಕ ಕೂಡ ಇದೇ ಅಭಿಪ್ರಾಯವನ್ನು ಹೇಳುತ್ತದೆ. ಬರಾಕ್ ಒಬಮಾ ಆಡಳಿತದಲ್ಲಿ ಉಪಾಧ್ಯಕ್ಷ ರಾಗುವುದಕ್ಕೂ ಮುನ್ನಾ ದಿನಗಳಿಂದಲೇ ಬೈಡನ್ ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಾ ಬಂದಿದ್ದಾರೆ.
ಉಪಾಧ್ಯಕ್ಷರಾಗಲು ಮೂರು ವರ್ಷಗಳ ಮುನ್ನವೇ ಅಂದರೆ 2006ರಲ್ಲಿ ರಿಡಿಫ್ ಇಂಡಿಯಾ ಕ್ಕೆ ನೀಡಿದ ಸಂದರ್ಶನದಲ್ಲಿ 2020 ರ ವೇಳೆಗೆ ವಿಶ್ವದಲ್ಲಿ ಅತ್ಯಂತ ಸ್ನೇಹ ಪ್ರೀತಿ ಹೊಂದಿರುವ ಎರಡು ರಾಷ್ಟ್ರಗಳೆಂದರೆ ಅದು ಭಾರತ ಮತ್ತು ಅಮೆರಿಕಾ ಆಗಿರಬೇಕು ಎಂಬುದು ತಮ್ಮ ಕನಸು ಎಂದು ಬೈಡನ್ ಅಭಿಪ್ರಾಯ ಪಟ್ಟಿದ್ದರು.
2008ರಲ್ಲಿ ಸೆನೆಟರ್ ಆಗಿದ್ದ ಒಬಮಾ ಭಾರತ -ಅಮೆರಿಕ ನ್ಯೂಕ್ಲಿಯರ್ ಒಪ್ಪಂದದ ಪರವಾಗಿಲ್ಲದೆ ಇದ್ದರೂ ರಿಪಬ್ಲಿಕನ್ ಮತ್ತು ಡೆಮಕ್ರಾಟಿಕ್ ಇಬ್ಬರ ಮನವೊಲಿಸಿ ಅಮೆರಿಕ ಕಾಂಗ್ರೆಸ್ (ನಮ್ಮ ಸಂಸತ್ತಿನ ರೀತಿ) ಒಪ್ಪಂದಕ್ಕೆ ಅಂಕಿತ ನೀಡುವಂತೆ ನೋಡಿಕೊಂಡಿದ್ದು ಬೈಡನ್.
ನಂತರ ಅವರು ಉಪಾಧ್ಯಕ್ಷರಾದ ಸಮಯದಲ್ಲಿ ಭಾರತ ಅಮೆರಿಕ ಸಂಬಂಧ ಬಲಗೊಳ್ಳಲು ತುಂಬಾನೆ ಶ್ರಮ ಹಾಕಿದ್ದರು. ವಿಶ್ವ ರಾಷ್ಟ್ರ ಸಂಸ್ಥೆಯ ಭದ್ರತಾ ಮಂಡಳಿ ಭಾರತಕ್ಕೆ ಸದಸ್ಯತ್ವ ನೀಡಬೇಕು ಎಂಬ ಬೇಡಿಕೆಗೆ ಅಮೆರಿಕದ ಅಧಿಕೃತ ಬೆಂಬಲವನ್ನು ಘೋಷಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು. ಒಬಮಾ – ಬೈಡನ್ ಜೋಡಿ ಭಾರತವನ್ನು ಪ್ರಮುಖ ಡಿಫೆನ್ಸ್ ಪಾರ್ಟನರ್ ಎಂದು ಅಮೆರಿಕ ಭಾವಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು.ಈ ಒಂದು ಸ್ಥಾನದಿಂದ ಭಾರತದೊಂದಿಗೆ ಅತ್ಯಂತ ರಕ್ಷಣಾ ಸೂಕ್ಷ್ಮ ತಂತ್ರಗಾರಿಕೆಯನ್ನು ಹಂಚಿಕೊಳ್ಳಲು ಸಹಾಯವಾಯಿತು. ತನ್ನ ಪಾರಂಪರಿಕ ಮಿತ್ರ ರಾಷ್ಟ್ರಗಳನ್ನು ಹೊರತು ಪಡಿಸಿ ಮತ್ತೊಂದು ರಾಷ್ಟ್ರಕ್ಕೆ ಅಂಥ ಸ್ಥಾನಮಾನವನ್ನು ಅಮೆರಿಕ ನೀಡಿದ್ದು ಅದೇ ಪ್ರಥಮ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಅಭಿಪ್ರಾಯ ಪಟ್ಟಿದೆ.
ಚೀನಾ- ಭಾರತ ಗಡಿ ವಿವಾದ
ಟ್ರಂಪ್ ಆಡಳಿತ ಇತ್ತೀಚಿನ ಭಾರತ ಚೀನಾ ಗಡಿ ವಿವಾದದಲ್ಲಿ ಬಹಿರಂಗವಾಗಿಯೇ ಭಾರತದ ಬೆಂಬಲಕ್ಕೆ ಇತ್ತು. ಅದೇ ನೀತಿ ಮುಂದುವರಿಯುವ ನಿರೀಕ್ಷೆಯಲ್ಲಿ ಭಾರತ ಇದೆ. ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆಯನ್ನು ತರಲು ಭಾರತೊಂದಿಗೆ ಕೆಲಸಮಾಡಲಾಗುವುದು. ಚೀನಾ ಸೇರಿದಂತೆ ಯಾವುದೇ ದೇಶಗಳು ನೆರೆಯವರೊಂದಿಗೆ ಸುಖಾಸುಮ್ಮನೆ ಉದ್ವಿಗ್ನ ಸ್ಥಿತಿ ನಿರ್ಮಿಸಬಾರದು ಎಂಬ ಅಂಶ ಬೈಡನ್ ಪ್ರಚಾರ ಸಾಮಗ್ರಿಯಲ್ಲಿದೆ.
ವಲಸೆ ವೀಸಾ
ಟ್ರಂಪ್ ಆಡಳಿತದಲ್ಲಿ ಇದು ಭಾರತೀಯರನ್ನು ಆತಂಕಕ್ಕೆ ದೂಡಿದ ಸಂಗತಿ. ಇಮ್ಮಿಗ್ರೇಷನ್ ಬಗ್ಗೆ ರಿಪಬ್ಲಿಕ್ ರಿಗೆ ಹೋಲಿಸಿದರೆ ಡೆಮಾಕ್ರಾಟಿಕ್ ಗಳದು ಉದಾರ ನೀತಿ. ಅಧ್ಯಯನ, ಕೆಲಸ ಮತ್ತು ನೆಲೆಸಲು ಹೋಗುವ ಭಾರತೀಯರ ಬಗ್ಗೆ ಬೈಡನ್ ಮೃದು ಧೋರಣೆ ಅನುಸರಿಸುತ್ತಾರೆ ಎಂದು ಭಾವಿಸಲಾಗಿದೆ.
ಕುಟುಂಬ ಆಧಾರಿತ ವಲಸಗೆ ಬೆಂಬಲ ನೀಡುವ ಭರವಸೆಯನ್ನು ಬೈಡನ್ ನೀಡಿದ್ದಾರೆ. ಕಾಯಂ ವೀಸಾ ಗಳ ಸಂಖ್ಯೆ ಹೆಚ್ಚಿಸುವುದು, ಕುಶಲ ಕೆಲಸ ಕರ್ಮಿಗಳಗೆ ನೀಡುವ ತಾತ್ಕಾಲಿಕ ವೀಸಾ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಕೆಲಸ ಆಧಾರಿತ ಗ್ರೀನ್ ಕಾರ್ಡ್ ನೀಡುವಲ್ಲಿನ ನಿರ್ಬಂಧವನ್ನು ತೆರವು ಮಾಡುವ ಭರವಸೆ ನೀಡಿದ್ದಾರೆ.ಆದರೆ ಈಗಾಗಲೇ ಟ್ರಂಪ್ ಆಡಳಿತ ಹೇರಿರುವ ಕಠಿಣ ಕಾನೂನುಗಳನ್ನು ಸಡಿಲಿಸುವುದು ಸುಲಭದ ಕೆಲಸ ಅಲ್ಲ.
ಭಯೋತ್ಪಾದನೆ ಬಗ್ಗೆ ಬೈಡನ್ ನಿಲುವು
ಈ ಹಿಂದೆ ಒಬಮಾ ಮತ್ತು ಬೈಡನ್ ಜೋಡಿ ಭಯೋತ್ಪಾದನೆ ವಿರುದ್ಧ ಸಮರ ಸಾರಲು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಾಚೆಗಿನ ಭಯೋತ್ಪಾದನೆಯ ಪ್ರಶ್ನೆ ಬಂದಾಗ ಇದುವರೆಗೆ ಅಮೆರಿಕಾ ಅನುಸರಿಸಕೊಂಡು ಬಂದಿರುವ ನೀತಿಯನ್ನೇ ಬೈಡನ್ ಕೂಡ ಮುಂದುವರಿಸುತ್ತಾರೆ ಎಂಬ ಆಶಯವನ್ನು ಭಾರತ ಹೊಂದಿದೆ.
ಜಮ್ಮು ಕಾಶ್ಮೀರದ ಬಗ್ಗೆ
ಜಮ್ಮು ಕಾಶ್ಮೀರದ ಇತ್ತೀಚನ ಬೆಳವಣಿಗೆಗಳ ಬಗ್ಗೆ ಟ್ರಂಪ್ ಆಡಳಿತ ಪರೋಕ್ಷವಾಗಿ ಭಾರತಕ್ಕೆ ಬೆಂಬಲವನ್ನೇ ನೀಡಿತ್ತು. ಒಂದೆರಡು ಹೇಳಿಕೆಗಳನ್ನು ನೀಡಿದ್ದು ಬಿಟ್ಟರೆ ಹೆಚ್ಚೂ ಕಡಿಮೆ ತಟಸ್ಥವಾಗಿಯೇ ಇತ್ತು. ಆದರೆ ಈ ಬಗ್ಗೆ ಡೆಮಾಕ್ರಾಟ್ ಪಕ್ಷಕ್ಕೆ ಸೇರಿದ ಬೈಡನ್ ತೀಕ್ಣವಾಗಿ ಪ್ರತಿಕ್ರಿಯಿಸಬಹುದು ಎಂದು ಭಾರತ ಭಾವಿಸಿದೆ.
ಮೋದಿ ಟ್ರಂಪ್ ನಡುವಿನ ಸಂಬಂಧ ಮಧುರವಾಗಿತ್ತು. ಅದೇ ಸಂಬಂಧ ಬೈಡನ್ ಜೊತೆಯೂ ಮುಂದುವರಿಯಬಹುದೆ?
ಬೈಡನ್ ಆಯ್ಕೆಯನ್ನು ಭಾರತದ ಪ್ರಧಾನಿಗಳು ಸಹಜವಾಗಿಯೇ ಸ್ವಾಗತಿಸಿದ್ದಾರೆ. ರಾಜಕೀಯ ಸಂಬಂಧಗಳು ಬೇರೆ ರಾಜತಾಂತ್ರಿಕ ಸಂಬಂಧಗಳು ಬೇರೆ. ಮೋದಿಯ ಟೆಕ್ಸಾಸ್ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿದ್ದರು ಎಂಬ ಮಾತ್ರಕ್ಕೆ ಬೈಡನ್ ಜೊತೆ ಸಂಬಂಧ ಮಧುರವಾಗಿರುವುದಿಲ್ಲ ಎಂದು ಈಗಲೇ ಭಾವಿಸಬೇಕಿಲ್ಲ.
ಹಾಗಾದರೆ ಭಾರತದ ಪಾಲಿಗೆ ಬೈಡನ್ ಅವರು ಸಿಹಿಯೋ ಕಹಿಯೋ?
ಕಳೆದ ಇಪ್ಪತ್ತು ವರುಷಗಳಿಂದ ಅಮೆರಿಕಾದ ಅಧ್ಯಕ್ಷರಾದವರವೆಲ್ಲಾ ಮಧುರ ಸಂಬಂಧವನ್ನೇ ಇಟ್ಟು ಕೊಂಡು ಬಂದಿದ್ದಾರೆ, ಬಿಲ್ ಕ್ಲಿಂಟನ್, ಬುಷ್, ಒಬಮಾ, ಟ್ರಂಪ್ ಒಬ್ಬರಿಗಿಂತ ಒಬ್ಬರು ಭಾರತದೊಂದಿಗೆ ಸ್ನೇಹವನ್ನು ವೃದ್ಧಿಸುತ್ತಲೇ ಬಂದಿದ್ದಾರೆ. ಹೀಗಾಗಿ ಬೈಡನ್ ಕೂಡ ಇದೇ ಮೇಲ್ಪಂಕ್ತಿಯಲ್ಲಿ ಸಾಗುತ್ತಾರೆ ಎಂದು ಭಾವಿಸಬಹುದಾಗಿದೆ.
ಬೈಡನ್ ಬಗ್ಗೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಹೇಳುವುದೇನು
ಬೈಡನ್ ತುಂಬಾ ಸಂಭಾವಿತ. ಭಾರತೊಂದಿಗೆ ಸಂಬಂಧ ತುಂಬಾ ಮಧುರವಾಗಿಯೇ ಇರುತ್ತದೆ ಎಂದು ನಾನಂತೂ ಭಾವಿಸುತ್ತೇನೆ ಎನ್ನುತ್ತಾರೆ ಜಯರಾಮ್ ನಾಡಿಗ್. ಕಳೆದ ನಲವತ್ತು ವರುಷಗಳಿಂದ ಅಮೆರಿಕದ ಟೆಕ್ಸಾಸ್ ನಲ್ಲಿ ನೆಲೆಸಿರುವ ಅವರು ಅಮೆರಿಕ ರಾಜಕೀಯವನ್ನು ಆಸಕ್ತಿಯಿಂದ ಗಮನಿಸುತ್ತಾ ಬಂದಿದ್ದಾರೆ.
ಬೈಡನ್ ಯಾವುದೇ ಒಂದು ಕಡೆ ವಾಲದ ವ್ಯಕ್ತಿ . ಆದರೆ ಭಾರತದ ವಿಷಯ ಬಂದಾಗ ಭಾರತದ ಪರವಾಗಿ ಇರುತ್ತಾರೆ ಎಂಬ ವಿಶ್ವಾಸ ಇದೆ ಎನುತ್ತಾರೆ. ಬೈಡನ್ ದೀಪಾವಳಿಯನ್ನು ಕೂಡ ಆಚರಿಸುತ್ತಾರೆ. ಕಳೆದ ವರ್ಷ ಅನೇಕ ಭಾರತೀಯರು ಅದರಲ್ಲಿ ಭಾಗವಹಿಸಿದ್ದರು ಎಂಬದನ್ನು ನೆನಪಿಸಿಕೊಳ್ಳುತ್ತಾರೆ.
ಅನೇಕ ಭಾರತೀಯ ಸಲಹೆಗಾರರು ಬೈಡನ್ ಗೆ ಇದ್ದಾರೆ. ಡಾ. ವಿವೇಕ ಮೂರ್ತಿ ಎಂಬ ಭಾರತೀಯ ಅವರ ಖಾಸಗಿ ವೈದ್ಯಕೀಯ ಪಡೆಯಲ್ಲಿದ್ದಾರೆ.
ಗೂಗಲ್ , ಅಮೆಜಾನ್, ಮೈಕ್ರೋಸಾಫ್ಟ್ ನಂಥ ಕಂಪೆನಿಗಳು ಬೈಡನ್ ಆಯ್ಕೆಯನ್ನು ಸ್ವಾಗತಿಸಿವೆ. ಇದು ಬೈಡನ್ ವಲಸೆ ನೀತಿ ಮೃದುವಾಗಿರುತ್ತದೆ ಎಂಬುದರ ದ್ಯೋತಕ ಎನ್ನುತ್ತಾರೆ.
ಕಮಲಾ ಹ್ಯಾರಿಸ್ ಬಹಿರಂಗವಾಗಿ ಭಾರತದ ಮೇಲಿನ ಪ್ರೀತಿಯನ್ನು ಸಾರದಿದ್ದರೂ ಅಂತರಂಗದೊಳಗೆ ಭಾರತದ ಮೇಲಿನ ಪ್ರೀತಿ ಇದ್ದೇ ಇರುತ್ತದೆ ಎಂದು ಅವರು ಹೇಳುತ್ತಾರೆ.
ಬೈಡನ್ ತುಂಬಾ ಸರಳ ವ್ಯಕ್ತಿ. ಸೆನೆಟರ್ ಆಗಿದ್ದಾಗಲು ತಮ್ಮ ಮಕ್ಕಳನ್ನು ಶಾಲೆಯಿಂದ ಅವರೇ ಪಿಕ್ ಮಾಡುತ್ತಿದ್ದರು. ಅವರ ಈಗಿನ ಪತ್ನಿ ಶಿಕ್ಷಕಿ. ಈಗಲೂ ಕೂಡ ಅದೇ ಕೆಲಸ ಮಾಡುತ್ತಾರೆ. ಅದಲ್ಲದೆ ಭಾರತವನ್ನು ಯಾರು ಅಲಕ್ಷಿಸುವ ಸ್ಥಿತಿಯಲ್ಲಿ ಇಲ್ಲ ಎಂದೂ ಜಯರಾಮ್ ಹೇಳುತ್ತಾರೆ.
ಭಾರತದ ಪ್ರಧಾನಮಂತ್ರಿಗಳು ಚುನಾವಣೆಯಲ್ಲಿ ನೇರವಾಗಿ ಬೇಡನ್ ಅವರ ವಿರುದ್ಧ ನಿಂತವರನ್ನು ಬೆಂಬಲಿಸಿದ ನಂತರವೂ… ಪರಿಸ್ಥಿತಿ ಸಹಜವಾಗಿ ಇರುತ್ತದೆ, ಅಮೆರಿಕಾ ಭಾರತದ ಬೆನ್ನಿಗೆ ನಿಲ್ಲುತ್ತದೆ ಎಂಬುದುದನ್ನು ನಂಬುವುದು ಕಷ್ಟ.. ಕಷ್ಟ..
ನಿಮ್ಮ ವರದಿ ಓದುಗರಿಗೆ ನೆಮ್ಮದಿ ಮತ್ತು ನಂಬಿಕೆ ಕೊಡುತ್ತಾದರೆ ಆದರೂ ಕಾದು ನೋಡಬೇಕಾದ ಸಂದರ್ಭ ನಮ್ಮದು, ಸಾಕಷ್ಟು NRI ಗಳು ನಮ್ಮವೇರಿಗಿದ್ರು ಕೊಡ ಅಮೇರಿಕ ಮೊದಲ ಅನ್ನುವ ಅವರ ಪ್ರೇಮ ಹುಟ್ಟೂರಿನ ಕಡೆಗೂ ಹರಿಯುತ್ತದೆಯೇ ಕಾದು ನೋಡಬೇಕು.
ಉತ್ತಮ ಲೇಖನ. ಎಷ್ಟು ಬೇಗ ದಶಕಗಳ ವಿಷಯಗಳನ್ನು ಸಾರಾಂಶಗಳಿಸಿ ಬರೆದಿದ್ದೀರಿ.
ಬೈಡನ್..ಬಗ್ಗೆ ಹೀಗೇ ಚರ್ಚಿಸುತ್ತಾ ಇರುವಾಗ ಆತ ಚೀನಾದ ಪರ ಇದ್ದಾರೆ.ಅಸ ಮಾರುಕಟ್ಟೆಗೆ ಬೆಂಬಲ ನೀಡುತ್ತಾರೆ. ಅಮೆರಿಕ ಚೀನಾಮಯ ಆಗುತ್ತೆ ಅಂತ ಆತಂಕ ವ್ಯಕ್ತಪಡಿಸಿದರು.ಈ ಬಗ್ಗೆ ಕಾದು ನೋಡಬೇಕು.
ನಿಮ್ಮ ಲೇಖನಕ್ಕೆ ಅಭಿನಂದನೆಗಳು.