ಕಾರ್ಪೊರೇಟ್ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಅವುಗಳ ವೇಗ ಹೆಚ್ಚಾಗಿದೆ ಎಂದು ಬಹಳಷ್ಟು ಜನರಿಗೆ ಅನಿಸಿರಬಹುದು. ಅದಕ್ಕೆ ತಕ್ಕಂತೆ ಷೇರುಪೇಟೆಗಳು ಪ್ರದರ್ಶಿಸುತ್ತಿರುವ ಅಸ್ಥಿರತೆಯು ಪೂರಕವಾದಂತಿದೆ. ಆದರೆ ಇದರ ಹಿಂದೆ ಅಡಕವಾಗಿರುವ ಅಂಶವೆಂದರೆ ಪೇಟೆಯ ಈ ರೀತಿಯ ಸೂಚ್ಯಂಕಗಳ, ಷೇರಿನ ಏರಿಳಿತಗಳ ಹಿಂದೆ ಪೇಟೆಯೊಳಗೆ ಹರಿದುಬರುತ್ತಿರುವ ವಿದೇಶಿ ವಿತ್ತೀಯ ಸಂಸ್ಥೆಗಳಿಂದ, ಸ್ವದೇಶಿ ಹೂಡಿಕೆದಾರರಿಂದ ಹರಿದು ಬರುತ್ತಿರುವ ಹಣದ ಹೊಳೆಯಾಗಿದೆ. ಈ ಕಾರಣ ಪೇಟೆಯಲ್ಲಿ ಬೇಡಿಕೆ ಹೆಚ್ಚಾಗುವಂತೆ ಮಾಡಿ ಷೇರುಗಳ ಬೆಲೆಗಳು ಗಗನಕ್ಕೆ ಚಿಮ್ಮುವಂತಾಗಿದೆ. ಯಾವುದೇ ಏರಿಕೆ ಸ್ಥಿರತೆ ಕಾಣಬೇಕಾದಲ್ಲಿ ಅದಕ್ಕೆ ಆಂತರಿಕವಾದ ಸಾಧನೆಯ ಬೆಂಬಲವಿರಬೇಕು. ಜೊತೆಗೆ ಕಂಪನಿಗಳ ಕಾರ್ಪೊರೇಟ್ ನೀತಿಪಾಲನೆಯೂ ಸುಸ್ಥಿತಿಯಲ್ಲಿರಬೇಕು. ಸಾಮಾನ್ಯವಾಗಿ ಸಾರ್ವಜಿನಿಕ ವಲಯದ ಕಂಪನಿಗಳು ಹೆಚ್ಚಾಗಿ ರಭಸದ ಏರಿಳಿತಗಳನ್ನು ಪ್ರದರ್ಶಿಸಲಾರವು. ಕಾರಣ ಅವುಗಳಲ್ಲಿ ಕಾರ್ಪೊರೇಟ್ ನೀತಿಪಾಲನಾ ಮಟ್ಟ ಹೆಚ್ಚಾಗಿರುತ್ತದೆ.
ಕರೋನಾದ ಪ್ರಭಾವದಿಂದ ದೇಶದ ಆರ್ಥಿಕತೆ ಕುಂಟಿತವಾಗಿತ್ತು. ಸರ್ಕಾರಗಳು ತಮ್ಮ ಬೊಕ್ಕಸವನ್ನು ಕರಗಿಸಬೇಕಾಯಿತು. ಆ ಸಮಯದಲ್ಲಿ ಕಾರ್ಪೊರೇಟ್ ಗಳ ಆದಿಯಾಗಿ ಎಲ್ಲರೂ ಒತ್ತಡಗಳನ್ನೆದುರಿಸಬೇಕಾಯಿತು. ಕೆಲವರಿಗೆ ಆರ್ಥಿಕ ತೊಂದರೆಯಾದರೆ, ಕೆಲವರಿಗೆ ದವಸ ಧಾನ್ಯಗಳ ಚಿಂತೆ. ಆ ಸಂದರ್ಭದಲ್ಲಿ ದಶಕಗಳಿಂದಲೂ ಅಸ್ಥಿತ್ವವಿರುವ ಕಂಪನಿಗಳೂ ಸಹ ತನ್ನ ನೌಕರವೃಂದಕ್ಕೆ ಸಂಬಳ ನೀಡಲು ಆಗದೆ ಕಡಿತಗೊಳಿಸಿದ ನಿದರ್ಶನಗಳುಂಟು. ಅಂದರೆ ಕಾರ್ಪೊರೇಟ್ ಗಳು ಇಷ್ಟು ವರ್ಷ ಗಳಿಸಿದ ಹಣವೆಲ್ಲಿ. ಕೇವಲ ಅಲಂಕಾರಿಕಾ ಪ್ರಚಾರ ಮಾತ್ರವೇ?. ಈಗ ಕೆಲವು ತಿಂಗಳುಗಳಿಂದ ಕಾರ್ಪೊರೇಟ್ ಗಳು ಸಂಪನ್ಮೂಲ ಸಂಗ್ರಹಣೆಯೇ ಹೆಚ್ಚಿನ ಪ್ರಾಮುಖ್ಯತೆ ನೀಡಿವೆ. ಬ್ಯಾಂಕ್ ಬಡ್ಡಿದರ ಕಡಿತವಾಗಿರುವ ಈ ಸಂದರ್ಭದ ಪ್ರಯೋಜನ ಪಡೆಯಲು ಹೆಚ್ಚಿನ ಕಾರ್ಪೊರೇಟ್ ಗಳು ಪ್ರಯತ್ನಿಸುತ್ತಲೂ ಇರಬಹುದು. ತಮ್ಮ ಚಟುವಟಿಕೆಯನ್ನು ವಿಸ್ತರಿಸುವ ಯೋಜನೆಗಳಿಗಾಗಿ ಸಂಗ್ರಹಿಸಿದ ಹಣವನ್ನು ಪೋಲಾಗದಂತೆ, ಸರಿಯಾಗಿ ಬಳಕೆಯಾಗಬೇಕು. ಅಲಂಕಾರಿಕ ಪ್ರಚಾರದ ಈ ಸಮಯದಲ್ಲಿ ಕಾರ್ಪೊರೇಟ್ ಗಳು ಸುಸೂತ್ರವಾಗಿ, ನೀತಿಪಾಲನೆ್ಯಿಂದ ಚಟುವಟಿಕೆ ನಡೆಸಿ, ಸಂಗ್ರಹಿಸಿದ ಸಂಪನ್ಮೂಲ ಉದ್ದೇಶಿತ ಕಾರ್ಯಕ್ಕೆ ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸದಲ್ಲಿ ಅವು ಹೂಡಿಕೆದಾರರಲ್ಲಿ, ಜನಮನಗಳಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತವೆ.
ಎಸ್ ಸಿ ಸಿ ಬಿ ಗಳ ಗೊಂದಲ
ಕಾರ್ಪೊರೇ ಟ್ ಗಳ ದುರಾಸೆ ಹೇಗೆ ಅವುಗಳ ಏಳ್ಗೆಗೆ ಮಾರಕವಾಗುತ್ತದೆ ಎಂಬುದಕ್ಕೆ 2010 -11 ರ ಸಮಯದಲ್ಲಿ ಉತ್ತಮ ಕಂಪನಿಗಳು ಹೇಗೆ ಬಲಿಯಾದವು ಎಂಬುದರ ಬಗ್ಗೆ ಆಲೋಚಿಸುವುದು ಅಗತ್ಯ. ಅನೇಕ ಕಂಪನಿಗಳು ತಮ್ಮ ವಿವಿಧ ಯೋಜನೆಗಳಿಗಾಗಿ ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ಸ್ ಯೋಜನೆ ಮೂಲಕ ಸಂಪನ್ಮೂಲ ಸಂಗ್ರಹಣೆ ಮುಂದಾದವು. ಮುಂದೆ ಈ ಬಾಂಡ್ ಗಳನ್ನು ಪೂರ್ವ ನಿಗದಿತ ದರದಲ್ಲಿ ಷೇರುಗಳಾಗಿ ಪರಿವರ್ತಿಸುವ ಆಯ್ಕೆ ಇರುತ್ತದೆ.
ಎಫ್ ಸಿ ಸಿ ಬಿ ವಿತರಣೆಯಲ್ಲಿ ಸಾಮಾನ್ಯವಾಗಿ ಅಂದಿನ ಷೇರಿನ ಬೆಲೆಗೆ ಶೇ.20 ರಿಂದ 30 ರಷ್ಟು ಪ್ರೀಮಿಯಂ ನಲ್ಲಿ ಪರಿವರ್ತನಾ ಬೆಲೆಯಾಗಿ ನಿಗದಿಪಡಿಸುವರು. ಆ ಸಮಯದಲ್ಲಿ ಕಂಪನಿಗಳಾದ ಗ್ಲೆನ್ ಮಾರ್ಕ್ ಫಾರ್ಮ, ಭಾರತಿ ಏರ್ ಟೆಲ್, ಸನ್ ಫಾರ್ಮ, ಎನ್ ಐ ಐ ಟಿ ಯಂತಹ ಕಂಪನಿಗಳು ಸುಲಭವಾಗಿ ಪರಿವರ್ತನೆಗಳನ್ನು ನಿರ್ವಹಿಸಿದವು. ಹೂಡಿಕೆದಾರರು ಆಕರ್ಷಕ ಲಾಭ ಗಳಿಸಿಕೊಂಡರು. ಆದರೆ ಕಂಪನಿಗಳಾದ ಆಂಟೆಕ್ ಆಟೋ, ಆಂಟೆಕ್ ಇಂಡಿಯಾ, ಅಬ್ಬಾನ್ ಆಫ್ ಶೋರ್, ಭಾರತಿ ಶಿಪ್ ಯಾರ್ಡ್, ಬಜಾಜ್ ಹಿಂದೂಸ್ಥಾನ್, ಹೆಚ್ ಸಿ ಸಿ, ಪುಂಜ್ ಲಾಯ್ಡ್, ವೀಡಿಯೋಕಾನ್, ಜಿ ಟಿ ಎಲ್ ಇನ್ಫ್ರಾ, ರೋಲ್ಟಾ , ಆರ್ಚಿಡ್ ಕೆಂ, ರಿಲಯನ್ಸ್ ಕಮ್ಯುನಿಕೇಷನ್, ಜೆ ಪಿ ಅಸೋಸಿಯೇಟ್ಸ್, ಮುಂತಾದ ಕಂಪನಿಗಳು ಪರಿವರ್ತನಾ ಬೆಲೆಗಳನ್ನು ಅಂದಿನ ಬೆಲೆಗಿಂತ ಅತಿ ಹೆಚ್ಚಿನ ಬೆಲೆಗಳಲ್ಲಿ ನಿಗದಿಪಡಿಸಿದ ಕಾರಣ ಆಪತ್ತಿಗೊಳಗಾದವು. ಈ ಎಫ್ ಸಿ ಸಿ ಬಿ ಗಳ ಪರಿವರ್ತನಾ ಬೆಲೆಗಳು ಇಂತಿವೆ.
ಆಂಟೆಕ್ ಇಂಡಿಯಾ ( ಈಗಿನ ಕ್ಯಾಸ್ಟೆಕ್ಸ್ ಟೆಕ್ನಾಲಜೀಸ್ ) ಷೇರಿನ ಬೆಲೆ ಸುಮಾರು ರೂ.60 ರಲ್ಲಿದ್ದಾಗ FCCBs ಪರಿವರ್ತನಾ ಬೆಲೆಯನ್ನು ರೂ.120.ಅಬ್ಬಾನ್ ಆಫ್ ಶೋರ್ ಷೇರಿನ ಬೆಲೆ ರೂ.800 ರ ಸಮೀಪದಲ್ಲಿದ್ದಾಗ ಪರಿವರ್ತನಾ ಬೆಲೆ ರೂ. 2,789 ಎಂದು ನಿಗದಿಪಡಿಸಿತ್ತು.ಭಾರತಿ ಶಿಪ್ ಯಾರ್ಡ್ ಷೇರಿನ ಬೆಲೆ ರೂ.250 ರ ಸಮೀಪವಿದ್ದಾಗ ಪರಿವರ್ತನಾ ಬೆಲೆ ರೂ.498 ಎಂದು ನಿಗದಿಪಡಿಸಿತ್ತು.
ಹೆಚ್ ಸಿ ಸಿ ಕಂಪನಿಯು ತನ್ನ ಷೇರಿನ ಬೆಲೆ ರೂ.60 ರ ಸಮೀಪವಿದ್ದಾಗ ರೂ.248 ರಂತೆ ಪರಿವರ್ತಿಸುವ ದರವಾಗಿ ನಿಗದಿಪಡಿಸಿತ್ತು.
ಇಂಡಿಯಾ ಸೀಮೆಂಟ್ ಷೇರಿನ ಬೆಲೆ ರೂ.115 ರಲ್ಲಿದ್ದಾಗ ರೂ.306 ರಂತೆ ಪರಿವರ್ತಿಸುವುದಾಗಿ ಪ್ರಕಟಿಸಿತ್ತು.
ವೀಡಿಯೋಕಾನ್ ಕಂಪನಿ ಷೇರಿನ ಬೆಲೆ ರೂ.260 ರ ಸಮೀಪವಿತ್ತು ಆ ಕಂಪನಿ ಪರಿವರ್ತನಾ ಬೆಲೆಯನ್ನು ರೂ.449 ಎಂದು ನಿಗದಿಪಡಿಸಿತು.
ಇದೇ ರೀತಿ ಜಿ ಟಿ ಎಲ್ ಇನ್ಫ್ರಾ ಕಂಪನಿಯ ಪರಿವರ್ತನಾ ಬೆಲೆಯನ್ನು ರೂ.53 ರಂತೆ, ರೋಲ್ಟಾ ಕಂಪನಿ ಷೇರಿನ ಪರಿವರ್ತನಾ ಬೆಲೆ ರೂ.368.50 ಯಂತೆ, ಆರ್ಚಿಡ್ ಫಾರ್ಮ ಕಂಪನಿ ಷೇರಿನ ಪರಿವರ್ತನಾ ಬೆಲೆ ರೂ.348 ಎಂದು ನಿಗದಿಪಡಿಸಿವೆ. ಇನ್ನು ರಿಲಯನ್ಸ್ ಕಮ್ಯುನಿಕೇಷನ್ ಷೇರು ರೂ.661 ರಂತೆ, ಜೆ ಪಿ ಅಸೋಸಿಯೇಟ್ಸ್ ರೂ.165 ರಂತೆ ಪರಿವರ್ತಿಸುವ ಬೆಲೆ ನಿಗದಿಪಡಿಸಿದವು.
ಈ ಪರಿವರ್ತನೆ ಮಾಡಿ ದರ ನಿಗದಿ ಮಾಡಿದ ಕಂಪೆನಿಗಳು ಕಳೆದ ಹತ್ತು ವರ್ಷಗಳಲ್ಲಿ ಯಾವ ರೀತಿಯಲ್ಲಿ ಬದಲಾವಣೆ ಕಂಡುಕೊಂಡಿವೆ ಎಂಬುದನ್ನು ಗಮನಿಸಬೇಕು. ಕ್ಯಾಸ್ಟೆಕ್ಸ್ ಟೆಕ್ನಾಲಜೀಸ್ ಪ್ರತಿ ಷೇರಿನ ಬೆಲೆ 36 ಪೈಸೆಗಳಲ್ಲಿ, ಅಬ್ಬಾನ್ ಆಫ್ ಶೋರ್ ಷೇರಿನ ಬೆಲೆ ರೂ.23 ರಲ್ಲಿ, ಹೆಚ್ ಸಿ ಸಿ ಷೇರಿನ ಬೆಲೆ ರೂ.5 ರ ಸಮೀಪ, ವಿಡಿಯೋಕಾನ್ ಷೇರಿನ ಬೆಲೆ ರೂ.4 ರ ಸಮೀಪ, ಜಿ ಟಿ ಎಲ್ ಇನ್ಫ್ರಾ ಷೇರಿನ ಬೆಲೆ 60 ಪೈಸೆಗಳಲ್ಲಿ, ರೋಲ್ಟಾ ಷೇರಿನ ಬೆಲೆ ರೂ.4.25 ರ ಸಮೀಪವಿದೆ.
ಕಂಪನಿಗಳ ಮೇನೇಜ್ಮೆಂಟ್ ಗಳ ಹಣದಾಹಕ್ಕೆ ವಿದೇಶಿ ಹೂಡಿಕೆದಾರರಲ್ಲದೆ ಅಂದಿನ ವರ್ಣರಂಜಿತ ವಿಶ್ಲೇಷಣೆಗಳಿಂದ ಪ್ರೇರಿತರಾದ ಬಹು ಸಂಖ್ಯಾತ ಸಣ್ಣ ಹೂಡಿಕೆದಾರರು ಬಲಿಯಾಗಿ ಸಾಕಷ್ಟು ಹಾನಿಗೊಳಗಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮಸಾಲಾ ಬಾಂಡ್ ಯೋಜನೆ ತೇಲಿಬರಲು ಕಾರಣವಾಯಿತು. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಕಂಪನಿಗಳ ವಿಜೃಂಭಣೆ ಹೂವಿನ ರೀತಿ ಅಲ್ಪಾಯು, ಲಾರ್ಜ್ ಕ್ಯಾಪ್ ಕಂಪನಿಗಳು ಡ್ರೈ ಫ್ರೂಟ್ಸ್ ರೀತಿ ದೀರ್ಘಾಯುವಾಗಿರುತ್ತವೆ. ಎಲ್ಲವಕ್ಕೂ exceptions ಇರುತ್ತದೆ ಆದರೆ exceptions are not examples ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ರಿಯಲ್ ಟೈಮ್ ನಿರ್ಧಾರಗಳು ಇಂದಿನ ಅಗತ್ಯವೆಂಬುದನ್ನು ನೆನಪಿನಲ್ಲಿಡಬೇಕು. ಹೂಡಿಕೆ ಮಾಡಿದ ಬಂಡವಾಳ ಸುರಕ್ಷಿತಗೊಳಿಸಿಕೊಳ್ಳಬೇಕು.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.